ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ರಾಜಕೀಯ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದ ನಿರ್ಣಯವನ್ನು ಖಂಡಿಸುವುದು, ತಪ್ಪು ಮಾಡಿದಾಗ ತಿಳಿ ಹೇಳುವುದು ಪ್ರತಿಪಕ್ಷಗಳ
ಕೆಲಸ ಹಾಗೂ ಜವಾಬ್ದಾರಿ. ಆಡಳಿತ ಪಕ್ಷ ಜಾರಿಗೊಳಿಸುವ ಹಲವು ಯೋಜನೆಗಳಿಂದ ಭವಿಷ್ಯದಲ್ಲಾಗಬಹುದಾದ
ಸಮಸ್ಯೆ ಯನ್ನು ಗುರುತಿಸಿ, ಅದನ್ನು ಸರಿಪಡಿಸುವುಂತೆ ಹೇಳುವುದು ಪ್ರತಿಪಕ್ಷದ ಜವಾಬ್ದಾರಿ.
ಅಂದ ಮಾತ್ರಕ್ಕೆ, ಆಡಳಿತ ಪಕ್ಷ ಮಾಡಿದ್ದಕ್ಕೆಲ್ಲ ವಿರೋಧಿಸುತ್ತಾ ಕೂರುವುದು ಸಮಂಜಸವಲ್ಲ. ಆದರೆ ಇತ್ತೀಚಿಗೆ ದೇಶದಲ್ಲಿ ಈ ರೀತಿಯ ಮನಸ್ಥಿತಿ ಬೆಳೆಯುತ್ತಿದೆ. ಹೌದು, ಈ ಮಾತನ್ನು ಹೇಳುತ್ತಿರುವುದು ಕಾಂಗ್ರೆಸ್ ಅಥವಾ ಬಿಜೆಪಿ ಎಂದಲ್ಲ. ಎಲ್ಲ ಪಕ್ಷಗಳು ಆಡಳಿತ ಹಾಗೂ ಪ್ರತಿಪಕ್ಷ ಸ್ಥಾನದಲ್ಲಿ ಕೂತಾಗ ತಮ್ಮದೇಯಾದ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಈ ರೀತಿ ಪಡೆದ ಎಲ್ಲ
ನಿರ್ಣಯಗಳು ಸರಿ ಎಂದಲ್ಲ.
ಅನೇಕ ಬಾರಿ ತಮ್ಮ ಪಕ್ಷದ ಸೈದ್ಧಾಂತಿಕ ವಿಷಯವನ್ನು ಗಮನದಲ್ಲಿಸಿರಿಕೊಂಡೇ ಹಲವು ತೀರ್ಮಾನಗಳನ್ನು ತಗೆದು ಕೊಂಡಿರುತ್ತವೆ. ಈ ರೀತಿ ನಡೆಯಿಂದ ಭವಿಷ್ಯದಲ್ಲಿ ರಾಜ್ಯ ಅಥವಾ ದೇಶದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಗಳಿರುವುದನ್ನು ಅಲ್ಲಗಳೆಯುವಂತಿಲ್ಲ. ಈ ರೀತಿ ಕಾಯಿದೆ ಅಥವಾ ತಿದ್ದುಪಡಿಗಳನ್ನು ಗಟ್ಟಿ ಧ್ವನಿಯಲ್ಲಿ ವಿರೋಧಿಸುವುದು
ಪ್ರತಿಪಕ್ಷಗಳ ಕೆಲಸ ಎನ್ನುವುದರಲ್ಲಿ ಎರಡನೇ ಮಾತಿಲ್ಲ.
ಆದರೆ ಮತ್ತೊಂದು ಅಂಶವನ್ನು ಇಲ್ಲಿ ಪ್ರಸ್ತಾಪಿಸಲೇಬೇಕಿದೆ. ಅದೇನೆಂದರೆ, ಕೆಲವೊಮ್ಮೆ ಆಡಳಿತ ಪಕ್ಷದಲ್ಲಿರುವಾಗ ಕೈಗೊಂಡ ನಿರ್ಣಯಗಳು ತಮ್ಮ ಅವಧಿಯಲ್ಲಿ ಸಾಧ್ಯವಾಗದೇ, ಮುಂದಿನ ಸರಕಾರಗಳು ಈ ಯೋಜನೆಗಳನ್ನು ಜಾರಿಗೊಳಿಸಲು ಮುಂದಾದರೆ, ಅದನ್ನು ವಿರೋಧಿಸಲು ಶುರು ಮಾಡುವುದು. ಈ ರೀತಿ ವಿರೋಧಿಸುವುದು ‘ರಾಜಕೀಯ ಮೈಲೇಜ್’ ಪಡೆಯು
ವುದಕ್ಕೆ ಅಲ್ಲದೇ ಬೇರೆ ಯಾವ ಕಾರಣವೂ ಇರುವುದಿಲ್ಲ. ಈ ರೀತಿ ಮೈಲೇಜ್ ಪಡೆಯುವುದಕ್ಕೆ ವಿರೋಧಿಸುವಾಗ ಕಾಯಿದೆ, ವಿಧೇಯಕದ ಕೆಲವು ಅಂಶಗಳನ್ನು ಪ್ರಸ್ತಾಪಿಸದೇ, ವಿವಾದಾತ್ಮಕ ಅಥವಾ ನಕಾರಾತ್ಮಕ ಅಂಶಗಳ ಮೇಲೆ ಮಾತ್ರ ಹೆಚ್ಚು ಪ್ರಚಾರ ನೀಡುವ ಕೆಲಸವನ್ನು ಮಾಡಲಾಗುತ್ತದೆ.
ಇತ್ತೀಚಿಗೆ ಕೇಂದ್ರ ಸರಕಾರ ಜಾರಿಗೊಳಿಸಿರುವ ಕೃಷಿ ಕಾಯಿದೆಗಳನ್ನು, ಕರ್ನಾಟಕ ಸರಕಾರ ಜಾರಿಗೊಳಿಸಿರುವ ಭೂ ಸುಧಾರಣಾ ಕಾಯಿದೆ, ಗೋಹತ್ಯೆ ನಿಷೇಧ ಕಾಯಿದೆಗಳನ್ನು ವಿರೋಧಿಸಿ ಕಾಂಗ್ರೆಸ್ ಭಾರಿ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಕೃಷಿ ಕಾಯಿದೆಯನ್ನು ವಿರೋಧಿಸಿ, ಸುಮಾರು 2 ಕೋಟಿ ಸಹಿ ಸಂಗ್ರಹ ಚಳವಳಿ ಮಾಡಿ, ರಾಷ್ಟ್ರಪತಿ ಭವನದವರೆಗೆ ತಗೆದು ಕೊಂಡು ಹೋಗಿ ಸರಕಾರದ ನಿರ್ಧಾರವನ್ನು ಹಿಂಪಡೆಯಬೇಕು ಎನ್ನುವ ಒತ್ತಡವನ್ನು ಹೇರುವ ಕೆಲಸವಾಗುತ್ತಿದೆ.
ಇದೇ ರೀತಿ ಕರ್ನಾಟಕದಲ್ಲಿಯೂ ಭೂ ಸುಧಾರಣಾ ತಿದ್ದುಪಡಿ ಕಾಯಿದೆ, ಕೇಂದ್ರ ಜಾರಿಗೊಳಿಸಿರುವ ಎಪಿಎಂಸಿ ಕಾಯಿದೆ
ಯನ್ನು ಯಥಾವತ್ತಾಗಿ ಜಾರಿಗೊಳಿಸುವ ವಿಧೇಯಕವನ್ನು ಮಂಡಿಸಿ ಅಂಗೀಕರಿಸಲಾಗಿದೆ. ಕಾಂಗ್ರೆಸ್ ನಾಯಕರು ಈ ಕಾಯಿದೆ ಗಳನ್ನು ವಿರೋಧಿಸುತ್ತಿದ್ದಾರೆ. ಆದರಿಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಹಾಗೂ ಸಂಗತಿಯೊಂದಿದೆ. ಅದೇನೆಂದರೆ ಈ ಹಿಂದೆ ಕೇಂದ್ರ ಅಥವಾ ರಾಜ್ಯದಲ್ಲಿ ಕಾಂಗ್ರೆಸ್ ಅಥವಾ ಕಾಂಗ್ರೆಸ್ ಮೈತ್ರಿ ಸರಕಾರಗಳು ಅಧಿಕಾರದಲ್ಲಿದ್ದಾಗ, ಈ ವಿಧೇಯಕಗಳನ್ನೇ
ಮಂಡಿಸಬೇಕು. ಈ ತಿದ್ದುಪಡಿಗಳಿಂದ ರಾಜ್ಯ ಜನರಿಗೆ ಹಾಗೂ ರೈತರಿಗೆ ಅನುಕೂಲವಾಗಲಿದೆ ಎನ್ನುವ ಮಾತನ್ನು ಹೇಳಿದ್ದರು.
ಆಡಳಿತದಲ್ಲಿದ್ದಾಗ ವಿವಿಧ ಕಾರಣಕ್ಕೆ ಮಂಡಿಸಿ, ವಿಧೇಯಕ ಮಾಡಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ವಿಧೇಯಕಗಳನ್ನು ಕಾಯಿದೆ ರೂಪಕ್ಕೆ ತರುವುದಕ್ಕೆ ಸಾಧ್ಯವಾಗಿರಲಿಲ್ಲ. ಆದರೀಗ ಅದೇ ಕಾನೂನನ್ನು ಬಿಜೆಪಿ ಜಾರಿಗೊಳಿಸುತ್ತಿದ್ದಂತೆ, ‘ಇದೊಂದು ಜನವಿರೋಧಿ ಕಾಯಿದೆ’ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅಂದ ಮಾತ್ರಕ್ಕೆ, ಈ ರೀತಿ ವಿರೋಧವನ್ನು ಕೇವಲ ಕಾಂಗ್ರೆಸ್ ಮಾಡಿದೆ ಎಂದಲ್ಲ. ಈ ಹಿಂದೆ ಬಿಜೆಪಿ ಪ್ರತಿಪಕ್ಷ ಸ್ಥಾನದಲ್ಲಿ ಕೂತಿದ್ದಾಗಲೂ ಕಾಂಗ್ರೆಸ್ ಜಾರಿಗೊಳಿಸಲು ಮುಂದಾಗ ಯೋಜನೆ ಗಳನ್ನು ವಿರೋಧಿಸಿಕೊಂಡೇ ಬಂದಿದ್ದರು.
ಕೇಂದ್ರ ಹಾಗೂ ರಾಜ್ಯ ಎರಡರಲ್ಲಿಯೂ ಇದೇ ರೀತಿ ಬಿಜೆಪಿ ವರ್ತಿಸಿತ್ತು. ಅದರಲ್ಲಿಯೂ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳನ್ನೇ ಬಿಜೆಪಿ ನಾಯಕರು ವಿರೋಧಿಸಿಕೊಂಡು ಬಂದಿದ್ದರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ, ಜಿಎಸ್ಟಿ ಜಾರಿಗೊಂಡರೆ, ದೇಶದ ವಿಕೇಂದ್ರಿಕರಣ ವ್ಯವಸ್ಥೆಗೆ ಧಕ್ಕೆ ಬರಲಿದೆ ಎನ್ನುವ ರೀತಿಯಲ್ಲಿ ಭಾಷಣ ಮಾಡಿದ್ದರು. ಆದರೆ ನಂತರದ ದಿನಮಾನದಲ್ಲಿ ಜಿಎಸ್ಟಿಯನ್ನು ಐತಿಹಾಸಿಕ ನಿರ್ಧಾರ ಎನ್ನುವ ರೀತಿಯಲ್ಲಿ ಜಾರಿ ಗೊಳಿಸಿದ್ದೂ ಸಹ ಬಿಜೆಪಿ ಸರಕಾರ ಎನ್ನುವುದನ್ನು ಮರೆಯುವಂತಿಲ್ಲ.
ಇದೇ ರೀತಿಯಲ್ಲಿ ಯುಪಿಎ ಸರಕಾರ ಮತ್ತೊಂದು ಮಹತ್ವಾಕಾಂಕ್ಷೆ ಯೋಜನೆಯಾದ ಆಧಾರ್ ಕಾರ್ಡ್ ಜಾರಿಯನ್ನು ಬಿಜೆಪಿ ಈ ಹಿಂದೆ ವಿರೋಧಿಸಿತ್ತು. ಆಧಾರ್ ಕಡ್ಡಾಯ ಮಾಡುವುದು, ಜನರ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ರೀತಿಯಾಗುತ್ತದೆ ಎನ್ನುವ ಮಾತನ್ನು ಹೇಳಿದ್ದ ಬಿಜೆಪಿ ನಾಯಕರು, ಇದೇ ವಿಚಾರವಾಗಿ ಸುಪ್ರೀಂ ಕೋರ್ಟ್ ಮೊರೆಯನ್ನು ಹೋಗಿದ್ದರು. ಅಂತಿಮವಾಗಿ ವಾದ
ವಿವಾದಗಳ ಬಳಿಕ ‘ಆಧಾರ್ ಅನ್ನು ಮತ್ತೊಂದು ಐಡಿ ಕಾರ್ಡ್ ರೀತಿ ಬಳಸಬಹುದೇ ಹೊರತು, ಅದೇ ಅಂತಿಮವಲ್ಲ’ಎನ್ನುವ ತೀರ್ಪನ್ನು ನೀಡಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಆಧಾರ್ ಅನ್ನು ಹಂತ ಹಂತವಾಗಿ ಕಡ್ಡಾಯಗೊಳಿಸಿತ್ತು.
ಇದೇ ರೀತಿ ಅಣು ಒಪ್ಪಂದ, ಪೆಟ್ರೊಲ್, ಡಿಸೇಲ್ ದರ ನಿಗದಿ ಪರಿಷ್ಕರಣೆ ವಿಚಾರದಲ್ಲಿ ಕಾಂಗ್ರೆಸ್ ನಿರ್ಣಯಗಳನ್ನು ವಿರೋಧಿಸಿದ್ದ ಬಿಜೆಪಿ, ತಾನು ಅಧಿಕಾರಕ್ಕೆ ಬಂದಾಗ ಅಂತಿಮವಾಗಿ ಅದೇ ಕಾಯಿದೆ, ವಿಧೇಯಕ ಅಥವಾ ಯೋಜನೆಗಳನ್ನು ಜಾರಿಗೊಳಿಸಿದ್ದನ್ನು ನಾವು ನೋಡಿದ್ದೇವೆ. ಇದು ಕೇವಲ ಕೇಂದ್ರಕ್ಕೆ ಸೀಮಿತವಾಗಿಲ್ಲ. ಕರ್ನಾಟಕದಲ್ಲಿಯೂ ಇದೇ ರೀತಿ ಹಲವು ವಿರೋಧಗಳು ವ್ಯಕ್ತವಾಗಿವೆ.
ತಾಜಾ ಉದಾಹರಣೆ ನೀಡಬೇಕಾದರೆ, ಜಿಂದಾಲ್ಗೆ ಭೂಮಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅವಧಿಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಒಪ್ಪಂದದ ಪ್ರಕಾರ 10 ವರ್ಷ ಲೀಸ್ ಪೂರ್ಣಗೊಂಡ ಬಳಿಕ ಆ ಭೂಮಿ ಯನ್ನು ಜಿಂದಾಲ್ಗೆ ಹಸ್ತಾಂತರಿಸಬೇಕು ಎನ್ನುವ ಸ್ಪಷ್ಟ ಮಾತಿದೆ. ಅದಕ್ಕಾಗಿಯೇ ಜಿಂದಾಲ್ ಸಂಸ್ಥೆ ಸಹ ಸುಮಾರು 10 ಸಾವಿರ ಎಕರೆ ಜಾಗದಲ್ಲಿ ಕೋಟ್ಯಂತರ ರುಪಾಯಿ ವ್ಯಯಿಸಿ, ಕೈಗಾರಿಕೆಯನ್ನು ಸ್ಥಾಪಿಸಿದೆ.
ಸಂಸ್ಥೆಗೆ ಬೇಕಿರುವ ಕಟ್ಟಡ ನಿರ್ಮಾಣ, ಉಕ್ಕು ಸಂಸ್ಕರಣೆಗೆ ಬೇಕಿರುವ ಅಗತ್ಯ ಯಂತ್ರೋಪಕರಣಗಳ ಸ್ಥಾಪನೆ ಸೇರಿದಂತೆ ಕೋಟ್ಯಂತರ ರುಪಾಯಿ ವ್ಯಯಿಸಿ ಈಗಾಗಲೇ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದೆ. ಆದರೆ ಮೈತ್ರಿ ಸರಕಾರದ ಅವಧಿಯಲ್ಲಿ ಈ ಭೂಮಿ ಪರಾಭಾರೆಗೆ ಕ್ಯಾಬಿನೆಟ್ ಒಪ್ಪಿಗೆ
ನೀಡುತ್ತಿದ್ದಂತೆ ಬಿಜೆಪಿ ನಾಯಕರು ಕೋಲಾಹಲ ಸೃಷ್ಟಿಸಿದರು. ಯಾವುದೇ ಕಾರಣಕ್ಕೂ ಈ ಭೂಮಿ ಪರಾಭಾರೆಗೆ ಅವಕಾಶ ನೀಡ ಬಾರದು ಎನ್ನುವ ಒತ್ತಡವನ್ನು ತಂದಿತ್ತು. ಬಿಜೆಪಿಯ ಶುರು ಮಾಡಿದ ಅಭಿಯಾನಕ್ಕೆ ಭಾರಿ ಜನಬೆಂಬಲ ನೀಡುವ ರೀತಿ ‘ವ್ಯವಸ್ಥಿತ’ವಾಗಿ ಪಕ್ಷದ ಕಾರ್ಯಕರ್ತರು ನೋಡಿಕೊಂಡರು.
ಆದರೆ ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಈ ಒಪ್ಪಂದಕ್ಕೆ ಸಹಿ ಹಾಕಿದ್ದು ೨೦೦೮ರಲ್ಲಿ. ಆಗಿನ ಮುಖ್ಯಮಂತ್ರಿಗಳು, ಸಮ್ಮಿಶ್ರ ಸರಕಾರದ ಅವಧಿಯ ಪ್ರತಿಪಕ್ಷ ನಾಯಕರಾಗಿದ್ದ ಬಿ.ಎಸ್ ಯಡಿಯೂರಪ್ಪ ಅವರು !. ಒಪ್ಪಂದಕ್ಕೆ ಸಹಿಹಾಕುವಾಗಲೇ ದಶಕದ ಬಳಿಕ ಈ ಭೂಮಿ ಪರಾಭಾರೆ ಮಾಡಲೇಬೇಕು ಎನ್ನುವ ಮಾಹಿತಿ ಯಡಿಯೂರಪ್ಪ ಹಾಗೂ ಅವರ ಸಂಪುಟ ಸಹೋ ದ್ಯೋಗಿಗಳಿಗೆ ಇಲ್ಲವೆಂದಲ್ಲ. ಆದರೆ ಜೆಡಿಎಸ್ – ಕಾಂಗ್ರೆಸ್ ಸರಕಾರದ ವಿರುದ್ಧ ಜನ ತಿರುಗಿ ಬೀಳಬೇಕು ಎನ್ನುವ ಕಾರಣಕ್ಕೆ, ಈ ನಿರ್ಣಯವನ್ನು ವಿರೋಧಿಸಿದರು.
ಇದೀಗ ಬಿಜೆಪಿ ಸರಕಾರ ಅಧಿಕಾರದಲ್ಲಿದೆ, ಪರಾಭಾರೆಗೆ ಅವಕಾಶ ನೀಡದಿದ್ದರೆ, ಸರಕಾರಕ್ಕೆ ಸಮಸ್ಯೆಯಾಗುತ್ತದೆ. ಆದ್ದರಿಂದ
ನೀಡಲೇಬೇಕಾಗುತ್ತದೆ. ಈ ಹಂತದಲ್ಲಿ ಬಿಜೆಪಿ ಸರಕಾರ ಪರಾಭಾರೆಗೆ ಮುಂದಾದರೆ, ಕಾಂಗ್ರೆಸ್ – ಜೆಡಿಎಸ್ ವಿರೋಧಿಸುವುದರಲ್ಲಿ ಅನುಮಾನವೇ ಇಲ್ಲ! ಈಗ ಬಿಜೆಪಿ ಸರಕಾರದ ಅಧಿಕಾರದಲ್ಲಿದೆ. ಪ್ರತಿಪಕ್ಷ ಸ್ಥಾನದಲ್ಲಿ ಕಾಂಗ್ರೆಸ್ಯಿದೆ. ಇದೀಗ ಕಾಂಗ್ರೆಸ್
‘ವಿರೋಧಿಸಲೇಬೇಕು’ ಎನ್ನುವ ಕಾರಣಕ್ಕೆ ವಿರೋಧಿಸಲು ಶುರು ಮಾಡಿದ್ದಾರೆ. ಪ್ರಮುಖವಾಗಿ ಇತ್ತೀಚಿಗೆ ರಾಜ್ಯ ಸರಕಾರ ಜಾರಿ ಗೊಳಿಸಿದ ಎಪಿಎಂಪಿ ತಿದ್ದುಪಡಿ ಕಾಯಿದೆ, ಭೂ ಸುಧಾರಣಾ ಕಾಯಿದೆ ವಿಚಾರವನ್ನು ನೋಡಬೇಕಿದೆ.
ಈ ಎರಡು ಕಾಯಿದೆಗಳು ಜಾರಿಗೊಳಿಸಿದ ಪರಿಸ್ಥಿತಿಗೂ, ಇಂದಿನ ಪರಿಸ್ಥಿತಿಗೂ ಅಜಗಜಾಂತರವಿದೆ. ಆದ್ದರಿಂದ ಈ ಕಾಯಿದೆಗೆ ತಿದ್ದುಪಡಿ ತರುವುದು ಅನಿವಾರ್ಯ ಎನ್ನುವ ಮಾತನ್ನು ಈಗಾಗಲೇ ಸರಕಾರ ಸ್ಪಷ್ಟಪಡಿಸಿದೆ. ಹಾಗೇ ನೋಡಿದರೆ ಭೂ ಸುಧಾರಣಾ ಕಾಯಿದೆಗೆ ಸುಮಾರು 10 ರಿಂದ 15 ವರ್ಷಗಳ ಹಿಂದೆಯೇ ತಿದ್ದುಪಡಿ ತರಬೇಕು ಎನ್ನುವ ವಿಷಯವಾಗಿ ಚರ್ಚೆ ನಡೆದಿದ್ದವು ಎನ್ನುವುದಕ್ಕೆ ವಿಧಾನಸಭೆಯ ದಾಖಲೆಗಳಿವೆ.
ಆಡಳಿತ ಪಕ್ಷದಲ್ಲಿದ್ದ ಡಿ.ಕೆ. ಶಿವಕುಮಾರ್ ಅವರು ಅಂದು, ‘ಭೂ ಸುಧಾರಣಾ ಕಾಯಿದೆ ಅನಿವಾರ್ಯ. ಇಲ್ಲದಿದ್ದರೆ ಅಭಿವೃದ್ಧಿ
ಸಮಸ್ಯೆಯಾಗಲಿದೆ’ ಎನ್ನುವ ಮಾತನ್ನು ಆಡಿದ್ದರು. ಅದಕ್ಕೆ ದಾಖಲೆಗಳಿವೆ. ಅವರು ಪ್ರಸ್ತಾಪಿಸಿರುವ ಕೆಲವು ಅಂಶಗಳನ್ನೇ ಇದೀಗ ಸರಕಾರ ಜಾರಿಗೊಳಿಸಲು ಮುಂದಾಗಿರುವುದು. ಆದರೆ ಅಂದು ಒಪ್ಪಿತವಾಗಿದ್ದ ತಿದ್ದುಪಡಿ ಇಂದು ಕಾಂಗ್ರೆಸ್ ನಾಯಕರಿಗೆ ಸಹ್ಯವಾಗುತ್ತಿಲ್ಲ. ‘ಜನ ಸ್ನೇಹಿ ತಿದ್ದುಪಡಿ’ ಎಂದವರೇ, ಇಂದು ‘ಜನ ವಿರೋಧಿ ತಿದ್ದುಪಡಿ ಕಾಯಿದೆ’ ಎನ್ನುವ ಮಾತನ್ನಾಡಿದ್ದಾರೆ.
ಇದೇ ರೀತಿ ರಾಜ್ಯ ಸರಕಾರ ಉಭಯ ಸದನದಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿರುವ ಎಪಿಎಂಸಿ ತಿದ್ದುಪಡಿ ಕಾಯಿದೆಗೂ ಇದೇ ರೀತಿ ವಿರೋಧ ವ್ಯಕ್ತವಾಗುತ್ತಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಎಪಿಎಂಸಿ ತಿದ್ದುಪಡಿ ಕಾಯಿದೆ ಎನ್ನುವುದೇ ‘ರೈತ ವಿರೋಧಿ, ರೈತರ ಮರಣ ಶಾಸನ’ ಎನ್ನುವ ರೀತಿ ವಿಧಾನಸಭೆಯಲ್ಲಿ ಮಾತನಾಡಿದ್ದಾರೆ. ಆದರೆ ಇದೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ, ಎಪಿಎಂಸಿ ಹೊರತು ರೈತ ಬೆಳೆದ ಬೆಳೆಗೆ ಮುಕ್ತ ಮಾರುಕಟ್ಟೆಯನ್ನು ನೀಡುವ ನಿಟ್ಟಿನಲ್ಲಿ ಕೆಲಸವಾಗಬೇಕಿದೆ ಎಂದು ಅಽಕಾರಿಗಳಿಗೆ ಪತ್ರ ಬರೆದಿದ್ದರು.
ಅಧಿಕಾರದಲ್ಲಿದ್ದಾಗ ಸಮ್ಮತವಾಗಿದ್ದ ಈ ಕಾಯಿದೆ ಈಗೇಕೆ ಅಸಮ್ಮತ ಎನ್ನುವ ಪ್ರಶ್ನೆಗೆ ಅವರ ಬಳಿಯೇ ಉತ್ತರವಿಲ್ಲ. ಇಲ್ಲಿ ಆಡಳಿತದಿಂದ ಪ್ರತಿಪಕ್ಷ ಸ್ಥಾನದಲ್ಲಿ ಕೂರುತ್ತಿದ್ದಂತೆ, ನಾಯಕರಲ್ಲಿನ ಮನಸ್ಥಿತಿ ಯಾವ ರೀತಿ ಬದಲಾಗುತ್ತದೆ ಎನ್ನುವುದಕ್ಕೆ ಒಂದು ಉದಾಹರಣೆ ನೀಡಲೇಬೇಕು. ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರ ಪತನವಾಗಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸರಕಾರ ಬಂದಿತ್ತು. ಈ ವೇಳೆ ವಿಶ್ವಾಸಮತ ತೋರಿಸುವ ಜತೆಜತೆಗೆ ಹಣಕಾಸು ವಿಧೇಯಕಕ್ಕೂ ಅನುಮೋದನೆ
ಪಡೆಯಬೇಕಾದ ಒತ್ತಡದಲ್ಲಿ ಸರಕಾರವಿತ್ತು.
ಒಂದು ವೇಳೆ ಮೂರು ದಿನದ ಅವಽಯಲ್ಲಿ ಹಣಕಾಸು ವಿಧೇಯಕಕ್ಕೆ ಅನುಮೋದನೆ ಸಿಗದಿದ್ದರೆ, ಸರಕಾರವೇ ಬಿದ್ದು ಹೋಗುವ
ಆತಂಕವಿತ್ತು. ಆ ಸಮಯದಲ್ಲಿ ಯಡಿಯೂರಪ್ಪ ಅವರು ಮಾತ್ರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ಯಾವುದೇ ಸಚಿವರು ಪ್ರಮಾಣ ವಚನ ಸ್ವೀಕರಿಸಿರಲಿಲ್ಲ. ಅಂತಹ ಸಮಯದಲ್ಲಿ, ಯಡಿಯೂರಪ್ಪ ಅವರು ಹಿಂದಿನ ಕುಮಾರಸ್ವಾಮಿ ಅವರ ಸರಕಾರ ಸಿದ್ಧಪಡಿಸಿದ್ದ ಹೆಚ್ಚುವರಿ ಧನ ವಿಧೇಯಕವನ್ನು ಮಂಡಿಸಿದರು. ಆದರೆ ಈ ಹಂತದಲ್ಲಿ ಕಾಂಗ್ರೆಸ್ನ ಸಿದ್ದರಾ ಮಯ್ಯ, ಆರ್.ವಿ.ದೇಶಪಾಂಡೆ ಸೇರಿದಂತೆ ಹಲವು ನಾಯಕರು ಹಾಗೂ ಸ್ವತಃ ಕುಮಾರಸ್ವಾಮಿ ಅವರು ಹೆಚ್ಚುವರಿ ವಿಧೇಯಕ ವನ್ನು ಮಂಡಿಸುವುದಕ್ಕೆ ವಿರೋಧಿಸಿದರು.
ಕುಮಾರಸ್ವಾಮಿ ಸರಕಾರ ಸಿದ್ಧಪಡಿಸಿದ್ದ ಯಥಾವತ್ ಪ್ರತಿಯನ್ನು ಮಂಡಿಸುವುದಾಗಿ ಯಡಿಯೂರಪ್ಪ ಅವರು ಹೇಳಿದ್ದರೂ,
‘ಅದು ಸರಿಯಲ್ಲ’ ಎನ್ನುವ ಮೂಲಕ ವಿರೋಧಿಸಿದ್ದರು. ಯಾವುದೇ ಕಾಯಿದೆ ತಿದ್ದುಪಡಿ ಅಥವಾ ಒಂದು ಸರಕಾರದಿಂದ ಇನ್ನೊಂದು ಸರಕಾರ ಜಾರಿಗೊಳಿಸಲು ಮುಂದಾದ ಸಮಯದಲ್ಲಿ, ಕೆಲ ಮಾರ್ಪಾಟು ಇಲ್ಲದೇ ಯಥಾವತ್ತು ಮಂಡನೆಯಾಗು ತ್ತದೆ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ಆಡಳಿತ ಪಕ್ಷದ ಸೈದ್ಧಾಂತಿಕ ಹಿನ್ನಲೆಯ, ಚುನಾವಣೆ ವೇಳೆಯಲ್ಲಿನ ಭರವಸೆ ಸೇರಿ ದಂತೆ ವಿವಿಧ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಅಗತ್ಯ ಮಾರ್ಪಾಡುಗಳೊಂದಿಗೆ ಜಾರಿಗೊಳಿಸುವುದು ಸಹಜ.
ಆದರೆ ಇಲ್ಲಿರುವ ಪ್ರಶ್ನೆಯೆಂದರೆ, ವಿರೋಧಿಸುವುದಕ್ಕಾಗಿಯೇ ವಿರೋಧಿಸುವುದರಿಂದ ಜನರಲ್ಲಿ ಗೊಂದಲ ಸೃಷ್ಟಿಯಾಗುವು ದಿಲ್ಲವೇ? ಆಡಳಿತ ನಡೆಸುವ ಪಕ್ಷ ಒಂದು ವೇಳೆ, ಜನ ವಿರೋಧಿ ಕಾಯಿದೆಯನ್ನು ಜಾರಿಗೆ ತರುತ್ತಿದ್ದರೆ ಅದನ್ನು ವಿರೋಧಿಸುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸಿ, ಜನರ ಧ್ವನಿ ಎತ್ತಿ ಹಿಡಿಯುವ ಕೆಲಸವನ್ನು ಮಾಡಲಿ. ಆದರೆ ಈ ರೀತಿ ಮಾಡುವಾಗ ‘ಅರ್ಧ ಸತ್ಯ’ವನ್ನು ಮಾತ್ರ ಜನರ ಮುಂದೆ ಪ್ರದರ್ಶನ ಮಾಡಿ, ದಿಕ್ಕು ತಪ್ಪಿಸುವ ಕೆಲಸವನ್ನು ಯಾವುದೇ ಕಾರಣಕ್ಕೂ ಮಾಡಬಾರದು.
ಈ ರೀತಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಆಡಳಿತದಲ್ಲಿದ್ದಾಗ ಹಾಗೂ ಪ್ರತಿಪಕ್ಷ ಸ್ಥಾನದಲ್ಲಿರುವಾಗ ಮಾತುಗಳನ್ನು ಬದಲಾಯಿಸುತ್ತಿದ್ದರೆ ಕೆಲ ಸಮಯದಲ್ಲಿ ಜನರನ್ನು ಒಪ್ಪಿಸಬಹುದು.
ಆದರೆ ಪ್ರತಿಬಾರಿಯೂ ಇದೇ ರೀತಿಯ ಇಬ್ಬಗೆಯ ನೀತಿ ವರ್ಕ್ ಔಟ್ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ರಾಜಕಾರಣಿಗಳು, ಯಾವುದೇ ಒಂದು ವಿಷಯ, ಕಾನೂನು ಅಥವಾ ವಿಧೇಯಕವನ್ನು ವಿರೋಧಿಸುವ ಮೊದಲು ಅದರಿಂದ
ನಿಜಕ್ಕೂ ಜನರಿಗೆ ಸಮಸ್ಯೆಯಾಗಲಿದೆಯೇ ಎನ್ನುವುದನ್ನು ಆಲೋಚಿಸಿ ಮಾತನಾಡುವುದು ಸೂಕ್ತ. ಇದರೊಂದಿಗೆ ಪ್ರತಿಪಕ್ಷದ ನಾಯಕರು ಕೇವಲ ಆಡಳಿತ ನಡೆಸುವವರನ್ನು ವಿರೋಧಿಸುವ ಬದಲು, ಸರಕಾರಕ್ಕೆ ಕಾಲಕಾಲಕ್ಕೆ ಸಲಹೆ – ಸೂಚನೆ ನೀಡುವ ಕೆಲಸವನ್ನು ಮಾಡಬೇಕು.
ಅದಕ್ಕೆ ಅಲ್ಲವೇ ಪ್ರತಿಪಕ್ಷ ನಾಯಕರನ್ನು Shadow Chief minister ಎನ್ನುವುದು.