Tuesday, 17th September 2024

ಮಾತು ಪ್ರತಿಪಕ್ಷಗಳ ಮನೆ ಕೆಡಿಸೀತು…ಜೋಕೆ !

ವಿದ್ಯಮಾನ

ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡ

ಈ ಸಲದ ಲೋಕ ಚುನಾವಣೆಯಲ್ಲಿ ಭಾರತದ ಮತದಾರನಿಗೆ ಸುಭಧ್ರ ಸರಕಾರವನ್ನು ಸ್ಥಾಪಿಸದಷ್ಟೇ ಸಂತೋಷ, ಸಧೃಢ ವಿರೋಧ ಪಕ್ಷ ರೂಪು ಗೊಂಡಿರುವುದಕ್ಕೂ ಆಗಿದೆ. ಹಾಗಾಗಿ ವಿರೋಧ ಪಕ್ಷಗಳಿಂದ ಮತ್ತು ಅದರ ನಾಯಕರುಗಳಿಂದ ಈ ಕಾಲಕ್ಕೆ ಒಪ್ಪುವ ರಚನಾತ್ಮಕವಾದ ನಡುವಳಿಕೆ ಯನ್ನು ಜನ ನಿರೀಕ್ಷಿಸುತ್ತಿದ್ದಾರೆ. ಲೋಕಸಭೆಯ ಸದನದಲ್ಲಿ ಸಭಾ ನಾಯಕನಾಗಿರುವ ಪ್ರಧಾನ ಮಂತ್ರಿಗಳದ್ದು ಒಂದು ತೂಕವಾದರೆ. ವಿರೋಧ ಪಕ್ಷದ ನಾಯಕನಿಗೂ ಒಂದು ಘನತೆ ಎನ್ನುವುದು ಇದ್ದೇ ಇದೆ. ಈ ಹಿಂದೆ ಆ ಸ್ಥಾನವನ್ನು ನಿರ್ವಹಿಸಿದ ಬಾಬು ಜಗಜೀವನ್ ರಾಂ, ವಾಜಪೇಯಿ, ಅಡ್ವಾಣಿ, ಸುಷ್ಮಾ ಸ್ವರಾಜ, ರಾಜೀವ್ ಗಾಂಧಿ ಮತ್ತು ನರಸಿಂಹ ರಾವ್ ಮುಂತಾದ ರಾಜಕಾರಣಿಗಳ ಧೋರಣೆ ಮತ್ತು ಸದನದಲ್ಲಿನ ಅವರ ವಕ್ತವ್ಯಗಳು ಆ ಸ್ಥಾನಕ್ಕೆ ಇನ್ನೂ ಹೆಚ್ಚಿನ ಗೌರವವನ್ನು ತಂದು ಕೊಟ್ಟಿವೆ.

ಯಾವುದೇ ಪಕ್ಷ ಹತ್ತು ಪ್ರತಿಶತ ಸ್ಥಾನಗಳನ್ನೂ ಗಳಿಸದಿದ್ದ ಕಾರಣಕ್ಕೆ ಕಳೆದ ಹತ್ತು ವರ್ಷಗಳಿಂದ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕನೇ ಇರಲಿಲ್ಲ. ಆದರೆ ಈ ಬಾರಿ, ೯೯ ಸ್ಥಾನವನ್ನು ಗೆದ್ದ ಕಾಂಗ್ರೆಸ್ಸಿನ ರಾಹುಲ್ ಗಾಂಧಿ ವಿರೋಧಪಕ್ಷದ ನಾಯಕನಾಗಿ ನೇಮಕಗೊಂಡಿದ್ದಾರೆ. ಸದನದಲ್ಲಿ ಅವರ ನಡುವಳಿಕೆ ಹೇಗಿರುತ್ತದೆ ಎನ್ನುವ ಕುತೂಹಲ ವಿರೋಧಪಕ್ಷಗಳನ್ನೂ ಸೇರಿ ದೇಶದ ಬಹುಜನರಿಗಿದೆ.

ವಿರೋಧ ಪಕ್ಷದ ನಾಯಕನಾಗಿ ಸದನದಲ್ಲಿ ಅವರ ಚೊಚ್ಚಲ ಭಾಷಣ ದೇಶದಲ್ಲಿ ಅಬ್ಬರದ ಚರ್ಚೆಯನ್ನೆನೋ ಹುಟ್ಟು ಹಾಕಿತು ಆದರೆ ದೇಶದ ಜನರ ನಿರೀಕ್ಷೆಗಳನ್ನು ಬಹುಮಟ್ಟಿಗೆ ಅದು ಹುಸಿಗೊಳಿಸಿತು ಎಂತಲೇ ಹೇಳಬೇಕು. ಸುಮಾರು ವಿಷಯಗಳನ್ನು ತಮ್ಮ ಸುದೀರ್ಘ ಭಾಷಣದಲ್ಲಿ
ಪ್ರಸ್ತಾಪಿಸಿದ ರಾಹುಲ್ ಪ್ರದರ್ಶನ, ಪ್ರಾರಂಭದಲ್ಲಿ ಸ್ವಲ್ಪ ನಾಟಕೀಯ ಎನಿಸಿದ್ದಂತೂ ಸತ್ಯ. ವಿವಿಧ ಧರ್ಮಗಳ ದೆವರುಗಳ ಮತ್ತು ಮಹಪುರುಷರ ಭಾವ ಚಿತ್ರವನ್ನು ಪ್ರದರ್ಶನ ಮಾಡಿದ್ದು, ಹಿಂದುಗಳನ್ನು ಹಳಿಯುವ ಧಾಟಿಯಲ್ಲಿ ಮಾತನಾಡಿದ್ದು, ಎಲ್ಲ ದೇವರುಗಳೂ ಕಾಂಗ್ರೆಸ್ಸಿನ ಚಿನ್ಹೆಯಾದ ಹಸ್ತವನ್ನು ಅಭಯ ಮುದ್ರೆಯಾಗಿ ಹೊಂದಿದ್ದಾರೆ ಎಂದೆಲ್ಲ ಹೇಳಿದ್ದು ನೋಡುವಾಗ ಆ ಸ್ಥಾನಕ್ಕೆ ಅಗತ್ಯವಾದ ಪ್ರೌಢಿಮೆಯ ಕೊರತೆ ಅವರಲ್ಲಿ ಎದ್ದು
ಕಾಣುತ್ತಿತ್ತು. ಅಧ್ಯಯನದ ಆಧಾರದಲ್ಲಿ ವಿಷಯಗಳನ್ನು ರಾಹುಲ್ ಪ್ರೌಢ ಮತ್ತು ಗಂಭೀರವಾಗಿ ಇನ್ನುಮುಂದೆ ಸದನದಲ್ಲಿ ಮಂಡಿಸದಿದೇ ಹೋದರೆ, ನಮಗೆ ಅವರು ಬಿಸಿತುಪ್ಪವಾಗಿ ಪರಿಣಮಿಸಬಹುದು ಎನ್ನುವ ಆತಂಕ ಉಳಿದ ಮಿತ್ರಪಕ್ಷಗಳಿಗೆ ಈಗ ಶುರುವಾಗಿರಲೂ ಬಹುದು.

ಈ ಹಿಂದೆ ವಿರೋಧಪಕ್ಷದ ನಾಯಕರಾಗಿ ಕೆಲಸ ಮಾಡಿದವರ ಮೇಲ್ಮೆಯನ್ನು ರಾಹುಲ್ ಗಾಂಧಿಯವರು ಕಾಯ್ದುಕೊಂಡು ಒಟ್ಟಾರೆಯಾಗಿ ವಿರೋಧ ಪಕ್ಷಗಳ ಧ್ವನಿಯಾಗಿ ಸಂಸತ್ತಿನಲ್ಲಿ ತಮ್ಮ ವಕ್ತವ್ಯವನ್ನು ಇನ್ನುಮುಂದೆ ಗಾಂಭೀರ್ಯದಿಂದ ಮಂಡಿಸಬೇಕಾದ ಅನಿವಾರ್ಯತೆ ಇದೆ. ಎಲ್ಲ ಧರ್ಮಗಳು ಧೈರ್ಯವನ್ನು ಉತ್ತೇಜಿಸಿವೆ ಮತ್ತು ಭಯವನ್ನು ವಿರೋಧಿಸುತ್ತವೆ (ಡರೋ ಮತ್ – ಡರಾವೋ ಮತ್) ಎಂಬುದನ್ನು ಎತ್ತಿ ಹೇಳಲು ಹೊರಟ ಕಾಂಗ್ರೆಸ್
ನಾಯಕ, ಧಾರ್ಮಿಕ ಬೋಧನೆಗಳನ್ನು ತಮ್ಮದೇ ತಿಳುವಳಿಕೆಯ ಆಧಾರದಲ್ಲಿ ವ್ಯಾಖ್ಯಾನಿಸಿ, ಅದಕ್ಕೆ ದೇವರುಗಳ ಚಿತ್ರಗಳನ್ನು ಬಳಸಿಕೊಂಡರು.

ಬಿಜೆಪಿಯು ಹಿಂಸೆ ಮತ್ತು ದ್ವೇಷವನ್ನು ಹರಡಲು ಹಿಂದು ಧರ್ಮವನ್ನು ಬಳಸುತ್ತಿದೆ ಎಂದು ಟೀಕಿಸುವ ಭರದಲ್ಲಿ, ಪ್ರತಿನಿತ್ಯ ಹಿಂದು ಹಿಂದು ಎಂದು ಹೇಳುವ ಜನರು ಹಿಂಸೆಯನ್ನು ಮತ್ತು ಅಸತ್ಯವನ್ನೇ ಪಾಲನೆ ಮಾಡುತ್ತಾರೆ ಎಂದು ಬಿಟ್ಟರು. ಇದಕ್ಕೆ ಕೂಡಲೇ ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಎಲ್ಲ ಹಿಂದೂಗಳಿಗೂ ಹಿಂಸಾಪರರು ಎನ್ನುವ ಹಣೆಪಟ್ಟಿ ಕಟ್ಟುತ್ತಿದ್ದಾರೆ ಇದು ಗಂಭೀರವಾದ ವಿಷಯವಾಗಿದೆ ಎಂದು ತಕರಾರು ಎತ್ತಿದರು. ಹಿಂದು ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಕ್ಕಾಗಿ ಗಾಂಽ ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಒತ್ತಾಯಿಸಿದರು.

ಸಂಸತ್ತಿನ ಶಿಷ್ಟಾಚಾರದಂತೆ ಅಧಿಕೃತ ವಿರೋಧ ಪಕ್ಷದ ನಾಯಕರ ಪ್ರಥಮ ಭಾಷಣದಿಂದ ಕೆಲವು ಭಾಗಗಳನ್ನು ತೆಗೆದು ಹಾಕುವಂತಾಯಿತು. ಇದು ನಿಜಕ್ಕೂ ಅವರಿಗೆ ಮತ್ತು ಪಕ್ಷಕ್ಕೆ ಮುಜುಗರದ ಸಂಗತಿಯೇ. ಅವರ ಹೇಳಿಕೆಗಳು ಸ್ಪಷ್ಟವಾಗಿ ಬಿಜೆಪಿಯ ಕಡೆಗೆ ನಿರ್ದೇಶಿಸಲ್ಪಟ್ಟಿವೆಯೇ ಹೊರತು ಹಿಂದೂಗಳ ಕಡೆಗಲ್ಲ ಎಂದು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ’ಡ್ಯಾಮೇಜ್ ಕಂಟ್ರೋಲ್’ ಮಾಡುವ ಪ್ರಯತ್ನ ಮಾಡಿದರೆ, ರಾಹುಲ್ ಗಾಂಧಿಯವರ ಭಾಷಣ ಹಿಂದೂ ಧರ್ಮವನ್ನು ವಿರೋಧಿಸುವಂತೆ ಇರಲಿಲ್ಲ ಎಂದು ಆಶ್ಚರ್ಯಕರವಾಗಿ ಬದರೀ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದಜಿ ಅವರೂ ಹೇಳಿಕೆ ನೀಡಿದರು. ೫೦೦ ವರ್ಷಗಳ ಅಯೋಧ್ಯೆಯ ಹೋರಾಟಕ್ಕೆ ದೇಶದ ಪರಮೋಚ್ಚ ನ್ಯಾಯಾಲಯದಲ್ಲಿ ನಿರ್ಣಯಿಸಿದ ತೀರ್ಮಾನದ ಅನುಗುಣವಾಗಿ ದೊರೆತ ಜಯದ ಹೊರತಾಗಿಯೂ, ಅಯೋಧ್ಯೆಯನ್ನು ಕೇಂದ್ರವಾಗಿರಿಸಿಕೊಂಡು ಲಾಲ್ ಕೃಷ್ಣ ಅಡ್ವಾಣಿಯವರು ಪ್ರಾರಂಭಿಸಿದ ರಾಮಜನ್ಮ ಭೂಮಿಯ ಹೋರಾಟವನ್ನು ಐಎನ್‌ಡಿಐಎ ಒಕ್ಕೂಟ ಅಯೋಧ್ಯೆಯಲ್ಲಿಯೇ ಇಂದು ಸೋಲಿಸಿದೆ ಎಂದು ಸಾರ್ವಜನಿಕವಾಗಿ ಹೇಳುವ ಉದ್ಧಟತನವನ್ನು ರಾಹುಲ್ ಗಾಂಽ ತೋರುತ್ತಾರೆ.

ಇದಕ್ಕೆ ಮಾತ್ರ ಸ್ವಾಮಿ ಅವಿಮುಕ್ತೇಶ್ವರಾನಂದಜಿ ಅವರು ಏನೂ ಪ್ರತಿಕ್ರಿಯೆ ನೀಡದೇ ಮೌನ ವಹಿಸಿದಂತೆ ಕಾಣಿಸುತ್ತಿದೆ. ಅಯೋಧ್ಯೆಯ ಚುನಾವಣೆ ಯಲ್ಲಿ ಸೋಲಿಸಿರುವುದು ಬರೀ ಬಿಜೆಪಿಯ ಅಭ್ಯರ್ಥಿಯನ್ನು ಮಾತ್ರ, ಅಯೋಧ್ಯೆಯ ಹೋರಾಟವನ್ನಲ್ಲ ಎನ್ನುವ ತಿಳುವಳಿಕೆ ರಾಹುಲ್ ಗಾಂಧಿ ಯವರಿಗೂ ಇದೆ. ಆದರೆ, ಹೀಗೆ ಹೇಳುವ ಮೂಲಕ ಬಹುಸಂಖ್ಯಾತ ಹಿಂದುಗಳನ್ನು ನೋಯಿಸುವುದೇ ಅವರ ಉದ್ದೇಶದಂತೆ ಕಾಣುತ್ತಿದೆ ಎನ್ನುವುದು ಹಿಂದು ಸಂಘಟನೆಗಳ ಅಭಿಪ್ರಾಯ.

ಇನ್ನು, ಕೇಂದ್ರ ಸರಕಾರದ ಮಹತ್ವಾಕಾಂಕ್ಷೀ ಯೋಜನೆಯಾದ ‘ಅಗ್ನಿವೀರ್’ ಬಗ್ಗೆ ಮಾತನಾಡುತ್ತಾ, ಒಬ್ಬ ಅಜಯ ಕುಮಾರ್ ಎಂಬ ‘ಅಗ್ನಿವೀರ್’ ಯೋಧ ಕಾಶ್ಮೀದಲ್ಲಿ ವೀರ ಮರಣವನ್ನಪ್ಪಿದಾಗ ಒಂದು ಕೋಟಿ ಪರಿಹಾರ ನೀಡಿದ್ದೇವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸುಳ್ಳು ಹೇಳುತ್ತಿದ್ದಾರೆ ವಾಸ್ತವದಲ್ಲಿ ಯಾವುದೇ ಪರಿಹಾರವನ್ನು ಸರಕಾರ ನೀಡಲಿಲ್ಲ ಎಂದು ರಾಹುಲ್ ಆಪಾದಿಸಿದರು.

ಸೇನಾಧಿಕಾರಿಗಳು ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ೯೮ ಲಕ್ಷಕ್ಕೂ ಹೆಚ್ಚು ಪರಿಹಾರದ ಹಣವನ್ನು ಈಗಾಗಲೇ ಪಾವತಿ ಮಾಡಿರುವ ಕುರಿತು ದಾಖಲೆಗಳ ಮೂಲಕ ಸಾಬೀತುಪಡಿಸಿದರು. ಸರಿಯಾದ ಪೂರ್ವ ತಯಾರಿ ಇಲ್ಲದೇ ಮೈಮೇಲೆ ಎಳೆದುಕೊಂಡ ಈ ಘಟನೆ ಕಾಂಗ್ರೆಸ್ ಪಕ್ಷ ಮತ್ತು ಸ್ವತಃ ರಾಹುಲ್ ಗಾಂಧಿಯವರಿಗೆ ಮಾತ್ರವಲ್ಲದೇ ಪೂರ್ತಿ ವಿರೋಧ ಪಕ್ಷದವರಿಗೆ ಇರುಸುಮುರುಸು ಉಂಟುಮಾಡಿತು. ಮುಂದುವರೆದು, ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ ನನ್ನ ಮೇಲೆ ೨೨ ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಮತ್ತು ಇ.ಡಿ ೫೫ ಘಂಟೆಗಳ ಕಾಲ ನನ್ನನ್ನು ವಿಚಾರಣೆ ಮಾಡಿತು ಮತ್ತು ನಮ್ಮ ಐಎನ್ ಡಿಐಎ ಒಕ್ಕೂಟದ ಇನ್ನೂ ಕೆಲವು ನಾಯಕರನ್ನು ಜೈಲಿಗೂ ಕಳುಹಿಸಲಾಯಿತು ಎಂದು ತಮ್ಮ ಭಾಷಣದಲ್ಲಿ ಹೇಳಿದರು.

ನಿಮ್ಮ ವಿರುದ್ಧ ಪ್ರಕರಣ ಏಕೆ ದಾಖಲಾಗಬಾರದು? ನಿಮ್ಮ ವಿರುದ್ಧ ಇ. ಡಿ ೫೫ ಘಂಟೆ ವಿಚಾರಣೆ ನಡೆಸಿದರೆ ತಪ್ಪೇನಾಯಿತು? ಆಪಾದಿತರೆಲ್ಲರನ್ನು ಹಾಗೆ ತಾನೆ ಇ. ಡಿ ವಿಚಾರಣೆ ಮಾಡುವುದು? ನೀವು ದೇಶದ ಕಾನೂನಿಗೆ ಹೊರತಾಗಿರುವವರೆನೂ ಅಲ್ಲ ಅಥವಾ ಕಾನೂನನ್ನು ಮೀರಿ ಇರುವವರೂ ಅಲ್ಲ, ಸದರಿ ಪ್ರಕರಣಗಳಲ್ಲಿ ನಿಮ್ಮ ತಪ್ಪಿಲ್ಲದಿದ್ದರೆ ಸಾಬೀತು ಪಡಿಸಲು ಕಾನೂನಿನ ಅಡಿಯಲ್ಲಿ ನಿಮಗೆ ಅವಕಾಶವಂತೂ ಇದ್ದೇಇದೆ. ಹಾಗಾಗಿ, ನನ್ನನ್ನೂ ವಿಚಾರಣೆ ಮಾಡಿದರು ಎಂದರೆ ಏನರ್ಥ? ಎಂದು ಯಾರಾದರೂ ಸಾಮಾನ್ಯ ಪ್ರಜೆಗಳು ಕೇಳಬಹುದಲ್ಲವೆ? ಇನ್ನು ಜೈಲಿನಲ್ಲಿರುವ ನಾಯಕರ ಬಗ್ಗೆ ಹೇಳುವುದಾದರೆ, ಯಾರನ್ನೂ ಸುಮ್ಮನೇ ಜೈಲಿಗೆ ಹಾಕಲಾಗುವುದಿಲ್ಲ, ಹಾಗೊಮ್ಮೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಜೈಲಿಗೆ ಹಾಕಿದರೂ ದೇಶದ ನ್ಯಾಯಾಲಯಗಳು ಸುಮ್ಮನೆಂತೂ ಇರುವುದಿಲ್ಲ ತಾನೆ? ಅರವಿಂದ ಕೇಜ್ರಿವಾಲರ ಜಾಮೀನು ಅರ್ಜಿಯನ್ನು ಪದೇಪದೇ ತಿರಸ್ಕಾರ ಮಾಡಿರುವುದು ಬಿಜೆಪಿ ಸರಕಾರ ಅಲ್ಲ, ಬದಲಿಗೆ ನ್ಯಾಯಾಲಯ.

ಹಾಗಾಗಿ, ಲೋಕ ಸಭೆಯ ಅವರ ಪ್ರಥಮ ಭಾಷಣದಲ್ಲಿ ಅನಾವಶ್ಯಕವಾಗಿ ಈ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ‘ದಾರಿಯ ಮೇಲೆ ಸಾಗುತ್ತಿರುವ ಮಾರಿಯನ್ನು ಮನೆಗೆ ಕರೆಯುವ ಕೆಲಸ’ ಯಾಕೆ ರಾಹುಲ್ ಮಾಡಿದರೋ ಎಂದು ಭಾಷಣ ಕೇಳಿದವರಿಗೆ ಅನಿಸಿದರೆ ತಪ್ಪಿಲ್ಲ. ಇನ್ನು ಕೈಗಾರಿಕೋ ದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿಗೆ ಸರಕಾರ ಮತ್ತು ಮೋದಿಯವರೊಂದಿಗಿನ ಸಾಮೀಪ್ಯದ ಕುರಿತಾಗಿ ಹೋದಲ್ಲಿ ಬಂದಲ್ಲಿ ಮಾತಾಡುವ ರಾಹುಲ್ ಗಾಂಧಿ, ಸಂಸತ್ತಿನಲ್ಲೂ ಮತ್ತೆ ಅದನ್ನೇ ಹೇಳಿದರು.

ಕೈಗಾರಿಕೋದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿಯವರ ಮೋದಿಯವರ ಜೊತೆಗಿನ ಸಂಭಂಧದಿಂದ ದೇಶಕ್ಕೋ ಅಥವಾ ಬೊಕ್ಕಸಕ್ಕೋ ಹಾನಿಯಾಗಿದ್ದರೆ ಅಥವಾ ಮೋದಿಯವರು ಈ ಸಂಬಂಧದ ದುರುಪಯೋಗ ಪಡಿಸಿಕೊಂಡಿದ್ದರೆ ದಾಖಲೆಗಳ ಸಮೇತ ಅದನ್ನು ರಾಹುಲ್ ಗಾಂಧಿಯವರು ಸದನದ ಒಳಗೆ ಬಯಲಿಗೆಳೆಯಬಹುದಾಗಿತ್ತು ಅಥವಾ ನ್ಯಾಯಾಲಯಗಳ ಮೊರೆ ಹೋಗಬಹುದಾಗಿತ್ತು ತಾನೆ? ಅದನ್ನು ಬಿಟ್ಟು, ವಿನಾ ಕಾರಣ ಕೈಗಾರಿಕೋದ್ಯಮಿಗಳ ತೇಜೋವಧೆ ಮಾಡಿ ಅವರನ್ನು ಖಳನಾಯಕರಂತೆ ಬಿಂಬಿಸುವುದು ಸರಿ ಕಾಣುವುದಿಲ್ಲ. ದೇಶದ ಆರ್ಥಿಕ
ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ಕೊಡುತ್ತಾ ಹೊಸ ಹೊಸ ಉದ್ದಿಮೆಗಳನ್ನು ಪ್ರಾರಂಭಿಸುವ ಮೂಲಕ ದೇಶದಲ್ಲಿ ಉದ್ಯೋಗ ಸೃಷ್ಟಿಮಾಡುತ್ತಿರುವ ಕೈಗಾರಿಕೋದ್ಯಮಿಗಳನ್ನು ಉತ್ತೇಜಿಸಬೇಕಾದ ಕೆಲಸವನ್ನು ಹಿಂದೆಯೂ ಎಲ್ಲ ಸರಕಾರಗಳೂ ಮಾಡಿವೆ ಮತ್ತು ಮುಂದೆಯೂ ಮಾಡಲೇ ಬೇಕಾಗುತ್ತದೆ ಎನ್ನುವ ತಿಳುವಳಿಕೆ ಅವರಿಗೆ ಇರಬೇಕಿತ್ತು.

ಚುನಾವಣಾ ಫಲಿತಾಂಶ ಬಂದ ದಿನದಿಂದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿಗರ ಅತ್ಯುತ್ಸಾಹವನ್ನು ನೋಡಿದರೆ, ಜನರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆದ್ದವರು ಎನ್‌ಡಿಎ ಒಕ್ಕೂಟವೋ ಅಥವಾ ಕಾಂಗ್ರೆಸ್ಸೋ ಎನ್ನುವ ಸಂಶಯ ಬರಲು ಪ್ರಾರಂಭವಾಗಿಬಿಟ್ಟಿದೆ. ಜನ ಮಾನಸದಿಂದ ಕಳೆದು ಹೋಗಿದ್ದ ಭಾರತದ ಅತ್ಯಂತ ಹಳೆಯ ಮತ್ತು ಸ್ವತಂತ್ರ ಭಾರತವನ್ನು ಬಹುಕಾಲ ಆಳಿದ ರಾಜಕೀಯ ಪಕ್ಷವೊಂದು ಹತ್ತು ವರ್ಷಗಳ ನಂತರ ೧೦೦ ಸ್ಥಾನಗಳ ಸಮೀಪ ಬಂದಿರುವುದು ದೊಡ್ಡ ಸಾಧನೆಯೇ! ಈ ಸಾಧನೆಗೆ ರಾಹುಲ್ ಗಾಂಧಿಯವರೇ ಪ್ರಮುಖವಾಗಿ ಕಾರಣೀಕರ್ತರು ಎನ್ನುವು ದರಲ್ಲಿ ಎರಡು ಮಾತಿ.

ಆದರೆ, ತಮಗೆ ದೊರೆತ ೯೯ ಸ್ಥಾನಗಳಿಗೇ ಅಹಂಕಾರ ಪಡದೇ, ಹತ್ತು ವರ್ಷಗಳ ನಂತರವೂ ಜನಮನ ಗೆದ್ದು ಸರಕಾರ ರಚಿಸಲು ವಿಫಲವಾಗಿದ್ದೇವೆ, ದಾಖಲೆಯ ಸತತ ಮೂರನೇ ಬಾರಿಗೆ ಎನ್‌ಡಿಎ ಮೈತ್ರಿಕೂಟ ವನ್ನು ದೇಶದ ಜನ ಆಯ್ಕೆ ಮಾಡಿzರೆ ಎನ್ನುವ ವಾಸ್ತವದ ನೆಲೆಯಲ್ಲಿ ಸೋಲಿನ ಬಗ್ಗೆ ಆತ್ಮ ವಿಮರ್ಷೆ ಮಾಡಿಕೊಳ್ಳಬೇಕಾಗಿದೆ. ಇವೆಲ್ಲದರ ಜೊತೆಗೆ, ಈಸಲದ ಮೊದಲ ಅಧಿವೇಶನದಲ್ಲಿ ಸಭಾ ನಾಯಕನ ಭಾಷಣದ ವೇಳೆ ವಿರೋಧಪಕ್ಷದ ಸದಸ್ಯರು ನಡೆದುಕೊಂಡ ರೀತಿ ಅತ್ಯಂತ ಅವಮಾನ ಕಾರಕವಾಗಿತ್ತು. ಈ ಕಾಲದ ಭಾರತದ ಸಂಸತ್ ಸದ್ಯರಿಗೆ ಒಪ್ಪುವ ನಡುವಳಿಕೆ ಆಗಿರಲಿಲ್ಲ ಅದು. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಸುದೀರ್ಘ ಭಾಷಣವನ್ನು ಬಹುತೇಕ ಶಾಂತಿಯಿಂದ ಆಡಳಿತ ಪಕ್ಷ ಆಲಿಸಿತ್ತು.

ಮರುದಿನ, ಪ್ರಧಾನ ಮಂತ್ರಿಗಳು ಮಾತಾಡಲು ನಿಂತಾಗ ಪ್ರಾರಂಭದಿಂದ ಕೊನೆಯವರೆಗೆ ನಿರಂತರವಾಗಿ ಒಂದು ಅಕ್ಷರವೂ ಯಾರಿಗೂ ಕೇಳಬಾರದು, ಅಷ್ಟರ ಮಟ್ಟಿಗೆ ವಿರೋಧಪಕ್ಷಗಳು ಪೂರ್ವ ಯೋಜನೆಯಂತೆ ಗದ್ದಲ ಉಂಟು ಮಾಡಿದವು. ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು ಸದನದಲ್ಲಿ ಉಪಸ್ಥಿತರಿದ್ದೂ ತಮ್ಮ ಸದಸ್ಯರುಗಳನ್ನು ದಾರಿಗೆ ತಹಬಂದಿಗೆ ತರಲು ವಿಫಲರಾದರು. ಪ್ರಬಲ ವಿರೋಧಪಕ್ಷವಾಗಿ ಸದನದಲ್ಲಿ ಗದ್ದಲ ಮಾಡುವುದು ಮತ್ತು ಕಲಾಪವನ್ನು ಬಹಿಷ್ಕರಿಸಿ ಸಭಾತ್ಯಾಗ ಮಾಡುವುದು ಮುಂತಾದ ಹಳೆಕಾಲದ ಸವಕಲು ತಂತ್ರಗಳಿಗೆ ಮೊರೆಹೋಗದೇ ಸದನದಲ್ಲಿ ಇದ್ದು
ಹೋರಾಟ ಮಾಡಿ ಸರಕಾರ ದಾರಿ ತಪ್ಪಿದಾಗ ಕಿವಿ ಹಿಂಡಬೇಕಿರುವುದು ಇಂದಿನ ಅಗತ್ಯವಾಗಿದೆ. ಸದನದ ಕಲಾಪಗಳು ನೇರ ಪ್ರಸಾರವಾಗುತ್ತಿರು ಈ ಕಾಲದಲ್ಲಿ ಅಲ್ಲಿ ಜವಾಬ್ದಾರಿಯಿಂದ ನಡೆದುಕಳ್ಳಬೇಕಿರುವ ಅನಿವಾರ್ಯತೆಯನ್ನು ಎಲ್ಲ ಸದಸ್ಯರು ಮನಗಾಣಬೇಕಿದೆ.

(ಲೇಖಕರು: ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *