Thursday, 12th December 2024

ಮರೆಯಾದರೆ ಆಸ್ಕರ್‌ ಎಂಬ ಆಸರೆ ?

ಸ್ಮರಣೆ

ಜಿ.ಪ್ರತಾಪ್ ಕೊಡಂಚ

pratap.kodancha@gmail.com

ಕವಳಿ ಕಂಡ ಧೀಮಂತ ನಾಯಕ, ಉತ್ತಮ ಸಂಘಟಕನಾಗಿ ಹೊರಹೊಮ್ಮಿ ಬಹುದೊಡ್ಡ ರಾಷ್ಟ್ರ ಮಟ್ಟದ ಜವಾಬ್ದಾರಿಗಳನ್ನು ಹೊಂದಿದ್ದರೂ, ಕಾಂಗ್ರೆಸ್ ವರಿಷ್ಠ ವಲಯದಲ್ಲಿ ಪ್ರಭಾವಿಯಾಗಿದ್ದರೂ ಸ್ವಂತಕ್ಕಾಗಿ, ಸ್ವಪ್ರತಿಷ್ಠೆಗಾಗಿ ಯಾವುದನ್ನೂ ಬಳಸಿಕೊಳ್ಳದ ಸರಳ ಸಜ್ಜನ ಆಸ್ಕರ್ ಫೆರ್ನಾಂಡಿಸ್. ಅವಿಭಜಿತ ದಕ್ಷಿಣ ಕನ್ನಡದಾದ್ಯಂತ ಆಸ್ಕರ್‌ ಅಣ್ಣಾ ಎಂದೇ ಮನೆ ಮಾತಾಗಿದ್ದ ಹಸನ್ಮುಖಿ ಆಸ್ಕರ್ ಅವರ ಆಳವಾದ ಅಧ್ಯಯನ, ತಾಳ್ಮೆ, ಕಗ್ಗಂಟಾಗಿದ್ದ ಸಮಸ್ಯೆಗಳನ್ನೂ ತಾಳ್ಮೆಯಿಂದ ಬಗೆಹರಿಸುತ್ತಿದ್ದ ಪರಿ ಅವರ ನೈಜ ನಾಯಕತ್ವದ ಗುಣಕ್ಕೆ ಸಾಕ್ಷಿಯಾಗಿತ್ತು.

೮೦,೯೦ರ ದಶಕದಲ್ಲಿ ರಾಜಕೀಯ ಒಡನಾಟ ಹೊಂದಿದ್ದ ನಮ್ಮ ಮನೆಗೂ ಆಸ್ಕರ್ ಹಲವು ಭಾರಿ ಬಂದಿದ್ದರು. ಸುಮಾರು ನಾಲ್ಕೈದು ವರ್ಷ ಪ್ರಾಯದವನಾಗಿದ್ದ ನನ್ನ ತಮ್ಮನ ಬಳಿ ಆಗ ಬೈಂದೂರು ಶಾಸಕರಾಗಿದ್ದ ದಿವಂಗತ ಜಿ.ಎಸ್ ಆಚಾರ್ ಅವರ ನಡಿಗೆಯ ಶೈಲಿ ಅಣಕು ಮಾಡಲು ಹೇಳಿ, ನೋಡಿ ನಗುತಿದ್ದ ಅವರು ಕೊನೆಗೆ, ಅಪ್ಪಿ ತಪ್ಪಿ ಜಿ.ಎಸ್. ಆಚಾರ್ ಎದುರೇ ಮಾಡಬೇಡ ಮಹಾರಾಯ, ಅಂತ ಕಣ್ಣು ಮಿಟುಕಿಸಿ ಬುದ್ದಿ ಮಾತೂ ಹೇಳು  ತ್ತಿದ್ದರು! ಆಸ್ಕರ್ ಎಂದ ಕೂಡಲೇ ನೆನಪಾಗುವುದು ಅವರ ಸರಳತೆ. ನಾನು ಸುಮಾರು ಹತ್ತು, ಹದಿನೈದು ಪ್ರಾಯದವನಾಗಿದ್ದ ನೋಡಿದ ಘಟನೆ ನನಗಿಲ್ಲಿ ನೆನಪಾಗುತ್ತದೆ.

ಪ್ರಾಯಶಃ ಲೋಕಸಭಾ ಚುನಾವಣೆಯ ಸಮಯ ಅನಿಸುತ್ತೆ. ನಮ್ಮೂರಿನಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆ ಯೊಂದರಲ್ಲಿ ದಿಗ್ಗಜರು ವೇದಿಕೆಯ ಮೇಲೆ ಅವರ ಪರಿಚಯ, ಪ್ರಚಾರದ ಮಾತನಾಡುತ್ತಿದ್ದರೆ, ವೇದಿಕೆಯ ಮೇಲಿದ್ದ ಆಸ್ಕರ್ ಅಲ್ಲಿಂದ ಮಾಯವಾಗಿದ್ದರು. ಅವರೆಲ್ಲಿ ಎಂದು ಹಿರಿಯರೆಲ್ಲ ಹುಡುಕ ತೊಡಗಿದರೆ, ಸಭಿಕರೊಬ್ಬರ ಜತೆಗಿದ್ದ ಅಳುತಿದ್ದ ಮಗುವೊಂದನ್ನು ಸಮಾಧಾನಿಸಲು ತೆರಳಿದ್ದರು! ಮಗವನ್ನು ಸಮಾಧಾನಿಸಲು, ಮಕ್ಕಳನ್ನು ಖುಷಿಪಡಿಸಲು ಆಸ್ಕರ್ ಅವರ ಜೇಬಿನಲ್ಲಿ ಸಿದ್ಧೌಷಧವೊಂದು ಆ ಕಾಲದಲ್ಲಿ ಸದಾ ಇರುತಿತ್ತು! ನಗುತ್ತಾ ಮಕ್ಕಳನ್ನು ಮಾತನಾಡಿಸಿ, ಜುಬ್ಬದ ಜೇಬಿನಿಂದ ಕಡು ಹಸಿರು ಹೊದಿಕೆಯ ನ್ಯೂಟ್ರಿನ್ ಚಾಕೋಲೇಟ್ ಕೊಟ್ಟ ರೆಂದರೆ ಮಕ್ಕಳ ಅಳು ಮಾಯವಾಗಿ ಮುಖ ಅರಳುತಿತ್ತು.

ಸರಳ,ಸಜ್ಜನಿಕೆಯ ಜತೆಗೆ ಇತರರನ್ನು ಬೆಳೆಸುವ ನಾಯಕತ್ವದ ಹಿರಿಮೆ ಕೂಡ ಅನುಕರಣೀಯ. ತಾನು ಎಷ್ಟು ಎತ್ತರಕ್ಕೇರಿದರೂ ಗರ್ವ ಪಡದೆ, ತನ್ನ ಸುತ್ತ ಪದರ ಕಟ್ಟಿಕೊಳ್ಳದೇ, ಎಲ್ಲರಿಗೂ ದೊರಕಬಲ್ಲ, ಸಾಮಾನ್ಯನಾಗಿಯೇ ಬದುಕಿದ ಅಪರೂಪದ ವ್ಯಕ್ತಿತ್ವ, ನಾಯಕತ್ವ ಆಸ್ಕರ್ ಅವರದ್ದು. ಅದಕ್ಕೆ ಹೇಳಿದ್ದು ಮರೆಯಾದದ್ದು ಆಸ್ಕರ್ ಎಂಬ ಬಹುದೊಡ್ಡ ಆಸರೆ ಎಂದು. ಕರ್ನಾಟಕದ ಪಾಲಿಗೆ ದೆಹಲಿಯಲ್ಲಿ ಹಿಡಿತ ಹೊಂದಿ ಕರ್ನಾಟಕಕ್ಕೆ ಆಸರೆಯಾಗಿದ್ದ ಇಂತಹದ್ದೇ
ಇನ್ನೊಂದು ನಾಯಕರೆಂದರೆ ದಿವಂಗತ ಅನಂತ ಕುಮಾರ. ಇವರಿಬ್ಬರೂ ತಮಗಿದ್ದ ದೆಹಲಿಯ ಹಿಡಿತವನ್ನು ಪಕ್ಷಾತೀತವಾಗಿ ಕರ್ನಾಟಕ ಮತ್ತು ಕನ್ನಡಿಗರ ಹಿತಾಸಕ್ತಿಯ ಉನ್ನತಿಗಾಗಿ ನಿಸ್ವಾರ್ಥದಿಂದ ಬಳಸಿದ ಮಹಾನುಭಾವರು.

ಎಂಭತ್ತು, ತೊಂಭತ್ತರ ದಶಕದಲ್ಲಿ ರಾಜಕಾರಣಿಗಳೆಂದರೆ ಕೇವಲ ಬಿಳಿ ಖಾದಿಯ ಉಡುಪಿಗೆ ಸೀಮಿತವಾಗಿದ್ದ ಸಮಯದ, ತಿಳಿ ನೀಲಿ, ಕಡು ನೀಲಿ, ಕಡು ಕಂದು, ಬೂದಿ, ನೇರಳೆ ಬಣ್ಣದ ಆಕರ್ಷಕವಾದ ಅರ್ಧ ಕೈ ಜುಬ್ಬಗಳನ್ನು ತೊಡುವ ಮೂಲಕ ರಾಜಕೀಯ ವರ್ಗದಲ್ಲಿ ಒಂದು ರೀತಿಯ ಹೊಸ ಫ್ಯಾಶನ್‌ನ ಹರಿಕಾರರೂ ಆಗಿದ್ದವರು ಆಸ್ಕರ್. ಕ್ರೈಸ್ತರಾಗಿದ್ದರೂ ಎಲ್ಲ ಮತ, ಧರ್ಮದ ಕುರಿತು ಅಪಾರ ಗೌರವ ಹೊಂದಿದ್ದ ಆಸ್ಕರ್, ವಿವಿಧ ಮತ ಧರ್ಮಗಳ ಆಚರಣೆಯನ್ನೂ ಅರಿತಿದ್ದರು. ತನ್ನ ಇತಿ ಮಿತಿ ತಾನೇ ಅರಿತು ಇತರರನ್ನು ಬೆಳೆಸಿ, ತಾನು ಮಾರ್ಗದರ್ಶನಾಗಿ ತೊಡಗಿಸಿಕೊಂಡ ರೀತಿ ಕೂಡ ಅಭಿನಂದನೀಯವಾದದ್ದು. ಅಸ್ತಂಗತರಾದ ಆಸ್ಕರ್ ಬದುಕಿ ತೋರಿಸಿದ ನಾಯಕತ್ವದ ಆದರ್ಶಗಳು ಇಂದಿನ ರಾಜಕೀಯ ನೇತಾರರಿಗೂ ಮಾದರಿಯಾಗಬೇಕು, ಆಗಲೇ ಇಂತಹ ನಾಯಕರುಗಳಿಗೆ ನಿಜವಾದ ಗೌರವ ತಲುಪಿಸಿದಂತಾಗುವುದು.