ಶಶಾಂಕಣ
ಶಶಿಧರ ಹಾಲಾಡಿ
shashidhara.halady@gmail.com
ಅದೊಂದು ವಿಚಿತ್ರ ಜೀವಿ. ಆ ವಿಚಾರದಲ್ಲಿ ಎರಡು ಮಾತಿಲ್ಲ. ರೆಕ್ಕೆ ಇಲ್ಲದಿದ್ದರೂ, ಒಂದು ಮರದಿಂದ ಇನ್ನೊಂದು ಮರಕ್ಕೆ
ಹಾರುವುದೆಂದರೆ ಸಾಮಾನ್ಯವೆ? ಇಂಥದೊಂದು ಜೀವಿ ನಮ್ಮೂರಿನಲ್ಲಿ ಲಕ್ಷಾಂತರ ವರ್ಷಗಳಿಂದ ಜೀವಿಸಿದ್ದರೂ, ಹಳ್ಳಿ ಜನರ ದೃಷ್ಟಿಯಲ್ಲಿ ಅದೊಂದು ಯಕಶ್ಚಿತ್ ‘ಓಂತಿ’. ಅದನ್ನು ನಮ್ಮೂರಿನವರು ಕರೆಯುವುದು ಹಾಗೆಯೇ!
ನಾನು ಅದನ್ನು ಹತ್ತಿರದಿಂದ ನೋಡಿ, ಸಣ್ಣ ಮಟ್ಟಿಗಿನ ಅಧ್ಯಯನ ಮಾಡಿದ್ದು 2017ರಲ್ಲಿ. ಆ ಮುಂಚೆ, ಎರಡು ಮುರು
ಬಾರಿ ನಮ್ಮ ಮನೆಯ ಹಿಂದಿನ ತೋಟದಲ್ಲೋ, ಶಾಲೆಗೆ ಹೋಗುವ ದಾರಿಯಲ್ಲೋ ನೋಡಿದ್ದರೂ, ಕೆಲವೇ ಕ್ಷಣಗಳಲ್ಲಿ ಅದು ಹಾರಿ ಕಣ್ಮರೆಯಾಗುತ್ತಿತ್ತು, ಆದ್ದರಿಂದ ಅದರ ವಿವರವಾದ ನೋಟ ದಕ್ಕಿರಲಿಲ್ಲ. ಈಗ ನಾಲ್ಕು ವರ್ಷಗಳ ಹಿಂದೆ ಅದರ ಚಲನ ವಲನ, ಭಾವ ಭಂಗಿಯನ್ನು ಹತ್ತಿರದಿಂದ ನೋಡುವ ಅವಕಾಶ ದೊರಕಿತು.
ಮರದಿಂದ ಮರಕ್ಕೆ ಹಾರಬಲ್ಲ ಆ ಜೀವಿಯ ಗ್ರಾಂಥಿಕ ಹೆಸರು ‘ಹಾರುವ ಓತಿ’. ಮೇಲ್ನೋಟಕ್ಕೆ ಓತಿಕ್ಯಾತನನ್ನು ಹೋಲುವ
ಹಾರುವ ಓತಿ, ಅದೊಂದು ಮಧ್ಯಾಹ್ನ ನಮ್ಮೂರಿನ ಮನೆಯ ಎದುರಿರುವ ಸಿಟ್‌ಔಟ್‌ನ ಮೋಟು ಗೋಡೆಯ ಮೇಲೆ ಕುಳಿತು ಕೊಂಡಿತು! ಇದು ನಡೆದದ್ದು 2017ರಲ್ಲಿ. ಅದು ಯಾವ ದಿಕ್ಕಿನಿಂದ ಬಂತೋ ಗೊತ್ತಾಗಲಿಲ್ಲ. ಅದನ್ನು ಮೊದಲು ನೋಡಿದ್ದು ನಮ್ಮ ತಂದೆ; ಆಗ ಅವರಿಗೆ ಅನಾರೋಗ್ಯ.
ಸಾಮಾನ್ಯವಾಗಿ ಒಂದೆಡೆ ಕುಳಿತಿರುತ್ತಿದ್ದರು. ಅವರ ದೃಷ್ಟಿಗೆ ಅದು ಬಿದ್ದ ಕೂಡಲೇ, ನಿಶ್ಶಕ್ತಿ ಇದ್ದರೂ, ತಾವು ಕುಳಿತ ಜಾಗದಿಂದ ಎದ್ದು ಬಂದು, ಅದರತ್ತ ಕೈತೋರಿ ‘ನೋಡಲ್ಲಿ, ಅದನ್ನು ಓಡಿಸು’ ಎಂದು ನನ್ನತ್ತ ನೋಡುತ್ತಾ ಸನ್ನೆ ಮಾಡಿದರು. ಅವರು
ಕೈತೋರಿದ ದಿಕ್ಕಿನಲ್ಲಿ ನೋಡಿದರೆ, ಒರಟು ದೇಹದ ಓತಿಕ್ಯಾತವೊಂದು ಕುಳಿತಿತ್ತು. ತನ್ನ ವಿಚಿತ್ರ ಶೈಲಿಯಲ್ಲಿ ಕತ್ತನ್ನು ತಿರುಗಿ ಸುತ್ತಾ ಭಾವಭಂಗಿಗಳನ್ನು ಪ್ರದರ್ಶಿಸುತ್ತಿತ್ತು! ತಲೆಯನ್ನು ಅತ್ತಿತ್ತ ಅಲ್ಲಾಡಿಸುತ್ತಾ, ಕಣ್ಣನ್ನು ಹೊಳೆಯಿಸುತ್ತಿತ್ತು. ನಮ್ಮಪ್ಪ ಇನ್ನೊಮ್ಮೆ ಅದರತ್ತ ಕೈಮಾಡಿ, ತುಸು ಗಾಬರಿಯನ್ನು ಮುಖದಲ್ಲಿ ವ್ಯಕ್ತಪಡಿಸಿ, ‘ಅದನ್ನು ಓಡಿಸು’ ಎಂದು ಸೂಚಿಸಿದರು.
ಅದಕ್ಕೊಂದು ಕಾರಣವೂ ಇದೆ. ಓತಿಕ್ಯಾತ, ಜೇಡ ಮತ್ತಿತರ ಜೀವಿಗಳನ್ನು ಕಂಡರೆ ಅವರಿಗೆ ಅಷ್ಟಕ್ಕಷ್ಟೆ. ಕಂಡ ಕೂಡಲೆ ಮೊದಲು ಓಡಿಸುತ್ತಿದ್ದರು. ಈಗ ಅನಾರೋಗ್ಯದಿಂದಾಗಿ ಮೆಟ್ಟಿಲಿಳಿಯುವಂತಿಲ್ಲವಾಗಿ, ನನಗೆ ಸೂಚಿಸಿದರು. ಆದರೆ ಅವರು ಕೈಸನ್ನೆ ಮಾಡಿ ತೋರಿಸಿದ್ದ ಆ ಓತಿಕ್ಯಾತವು ಸಾಮಾನ್ಯ ಓತಿಕ್ಯಾತವಲ್ಲ! ನಮ್ಮ ಓಡಾಟವನ್ನು ಕಂಡು, ಎರಡಡಿ ದೂರವಿದ್ದ ಬಾವಿಯ ಮೋಟುಗೋಡೆಯತ್ತ ಅದು ಹಾರಿತು. ಹೌದೋ ಅಲ್ಲವೋ ಎಂಬಂತೆ, ಅದರ ಎರಡೂ ಬಗಲಿನಲ್ಲಿದ್ದ ಚರ್ಮದ ಹಾಳೆ ಬಿಡಿಸಿಕೊಂಡಿತು.
ತಕ್ಷಣ ನನಗೆ ಗೊತ್ತಾಯಿತು, ಅದು ಸಾಮಾನ್ಯ ಓತಿಕ್ಯಾತ ಅಲ್ಲ, ಅದೊಂದು ಹಾರುವ ಓತಿ ಎಂದು! ‘ಅದನ್ನು ನಾನು ನೋಡಿ ಕೊಳ್ಳುತ್ತೇನೆ, ಅದರ ಫೋಟೋ ತೆಗೆಯಬೇಕು’ ಎಂದು ನಮ್ಮಪ್ಪನ ಬಳಿ ಹೇಳಿದ ನಂತರ, ಅವರು ವಿಶ್ರಾಂತಿ ತೆಗೆದುಕೊಳ್ಳಲು
ಕೊಠಡಿಗೆ ಹೋದರು. ನಾನು ಕ್ಯಾಮೆರಾ ಹಿಡಿದು ಆ ಹಾರುವ ಓತಿಯ ಹಿಂದೆ ಹೊರಟೆ. ಮುಂದಿನ ಒಂದೆರಡು ಗಂಟೆಗಳ ಕಾಲ ಹಾರುವ ಓತಿಯ ಓಡಾಟವನ್ನು ನೋಡುವುದು, ಅದನ್ನು ಕ್ಲಿಕ್ಕಿಸುವುದು, ನನ್ನ ಪರಿಮಿತಿಯಲ್ಲಿ ಅದರ ಶೈಲಿ, ನೋಟವನ್ನು
ಅಧ್ಯಯನ ಮಾಡುವುದೇ ನನ್ನ ಕೆಲಸವಾಯಿತು.
ಅದು ಬಾವಿಕಟ್ಟೆಯ ಮೆಲೆ ಅತ್ತಿತ್ತ ಓಡಾಡುತ್ತಾ, ಸುತ್ತಲಿದ್ದ ನರಮನುಷ್ಯರನ್ನು ಸಂಪೂರ್ಣ ಅಲಕ್ಷ್ಯ ಮಾಡಿ ತನ್ನ ಪಾಡಿಗೆ ಅದರದೇ ಲೋಕದಲ್ಲಿತ್ತು! ನಾವು ಹತ್ತಿರ ಸುಳಿದರೂ ಅದಕ್ಕೆ ಭಯವಿಲ್ಲ. ಪಕ್ಕದ ಮರವೊಂದನ್ನು ಏರಿ, ಅಲ್ಲಿಂದ ಇನ್ನೊಂದು ಮರಕ್ಕೆ ಹಾರುವಾಗ ಅದರ ‘ರೆಕ್ಕೆ’ ಸ್ವಲ್ಪ ಬಿಚ್ಚಿದ್ದು ಕಾಣಿಸಿತು. ಭುಜ ಮತ್ತು ಪಕ್ಕೆಲುಬಿನ ನಡುವೆ ಇರುವ ಚರ್ಮವನ್ನೇ ರೆಕ್ಕೆಯ ರೂಪಕ್ಕೆ ಬದಲಿಸಿಕೊಂಡು, ಒಂದು ಮರದಿಂದ ಇನ್ನೊಂದು ಮರಕ್ಕೆ ‘ಗ್ಲೈಡ್’ ಮಾಡುತ್ತಾ (ತೇಲುತ್ತಾ) ಸಾಗುವ ಆ ಹಾರುವ
ಓತಿಯ ಹಾರಾಟವನ್ನು ನೋಡುವ ಅನುಭವ ಅನನ್ಯ.
ಅದೃಶ್ಯವಾಗಿರುವ ರೆಕ್ಕೆಯಂತಹ ರಚನೆಯನ್ನು ತಕ್ಷಣ ಹೊರಕ್ಕೆ ತೆಗೆದು, ಗ್ಲೈಡ್ ಮಾಡುತ್ತಾ ಹಾರುವ ಅದರ ನೋಟ ಒಂದು
ರೂಪಕ. ಅದಕ್ಕೇ ಇರಬೇಕು, ಪೂರ್ಣ ಚಂದ್ರ ತೇಜಸ್ವಿಯವರು ತಮ್ಮ ‘ಕರ್ವಾಲೋ’ ಕಾದಂಬರಿಯ ಕೊನೆಯಲ್ಲಿ, ಹಾರುವ ಓತಿಯು ಕೋಡುಗಲ್ಲಿನ ತುದಿಯಿಂದ ನೆಗೆದು ತೇಲುತ್ತಾ, ಎರಡು ಸಾವಿರ ಅಡಿ ಆಳದಲ್ಲಿರುವ ಕಾಡಿನತ್ತ ಸಾಗುವ ಹಾರಾಟ ವನ್ನು ಒಂದು ಅಪರೂಪದ ರೂಪಕದಂತೆ ಚಿತ್ರಿಸಿದ್ದಾರೆ.
ಆ ಹಾರುವ ಓತಿಯ ಆ ದಿನದ ಕೊನೆಯ ಹಾರಾಟ ಅಥವಾ ‘ಲಾಸ್ಟ್ ಫೋಟ್’, ಇಡೀ ಕಾದಂಬರಿಯ ಚೌಕಟ್ಟಿಗೊಂದು ಹೊಸ ಅರ್ಥವನ್ನು ನೀಡುವುದರ ಮೂಲಕ, ಕನ್ನಡ ಸಾಹಿತ್ಯದ ಆ ಅಪರೂಪದ ಕಾದಂಬರಿಗೆ ಅನನ್ಯ ಸ್ಥಾನವನ್ನು ಒದಗಿಸಿಕೊಟ್ಟಿದೆ.
ಆ ಹಾರುವ ಓತಿಯನ್ನು ನಾನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಉತ್ಸಾಹದಲ್ಲಿ ನೂರಾರು ಬಾರಿ ಕ್ಲಿಕ್ ಮಾಡಿದೆ. ನನ್ನನ್ನು ಕಂಡು ಆ ಹಾರುವ ಓತಿಗೆ ರೇಜಿಗೆಯಾಗಿರಲೇಬೇಕು. ಇದೇಕೆ ಈ ಮಾನವ ಒಂದು ಗಂಟೆಯಿಂದಲೂ ತನ್ನ ಹಿಂದೆ ಸುತ್ತುತ್ತಿದ್ದಾನೆ
ಎಂದು! ಆದರೆ ಅದಕ್ಕೆ ಭಯವಿರಲಿಲ್ಲ, ಹತ್ತಿರ ಹೋದರೂ ನೋಡುತ್ತಾ ಕುಳಿತಿರುತ್ತಿತ್ತು. ಅದರ ಮುಖ್ಯ ಗಮನ ಆ ದಿನದ ಆಹಾರದ ಕುರಿತು.
ನಮ್ಮ ಹಳ್ಳಿ ಮನೆಯ ಕಾಂಪೌಂಡ್ ಗೋಡೆಯ ಮೇಲೆ ಕುಳಿತು, ಅಲ್ಲಿ ಸಾಲುಗಟ್ಟಿ ಓಡಾಡುತ್ತಿದ್ದ ಕೆಂಜಿರುವೆಗಳನ್ನು ಸ್ವಾಹಾ ಮಾಡುವುದರಲ್ಲಿ ಮಗ್ನವಾಗಿತ್ತು. ನಾಲಗೆಯನ್ನು ಛಕ್ ಎಂದು ಒಮ್ಮೊಮ್ಮೆ ಝಳಪಿಸಿ, ಇರುವೆಗಳನ್ನು ಅದು ತಿನ್ನುವ ಶೈಲಿ ಯನ್ನು ಗಮನಿಸುವುದೇ ಒಂದು ಬೆರಗು. ಹಾರುವ ಓತಿಗಳು ಇರುವೆಗಳನ್ನು ತಿನ್ನುತ್ತವೆ ಎಂದು ಕಣ್ಣಾರೆ ಕಂಡು, ತಿಳಿದು ಕೊಳ್ಳುವ ಅಪೂರ್ವ ಅವಕಾಶ. ತುಸು ಹೊತ್ತಿನ ನಂತರ, ಅದು ಪಕ್ಕದ ಮರವೊಂದನ್ನು ಹತ್ತಿಹೋಯಿತು. ಆ ದಿನದ ಮಟ್ಟಿಗೆ
ಅದು ಬಹಳ ದೂರ ಹಾರಾಡುವ ನೋಟ ಸಿಗಲಿಲ್ಲ.
ಒಂದೆರಡು ವಾರ ಕಳೆದಿರಬೇಕು; ಅನತಿ ದೂರದ ತೆಂಗಿನ ಮರವೊಂದರಲ್ಲಿ ಹಾರುವ ಓತಿಯ ದರ್ಶನವಾಯಿತು. ಅದೂ ಒಂದಲ್ಲ, ಎರಡು! ಆ ಭಾಗದಲ್ಲಿ ಮೂರು ತೆಂಗಿನ ಮರಗಳು ಇಪ್ಪತ್ತು ಅಡಿ ಅಂತರದಲ್ಲಿ ಸಾಲಾಗಿ ಬೆಳೆದಿದ್ದವು. ಒಂದು
ಮರದಿಂದ ತೇಲುತ್ತಾ ಇನ್ನೊಂದು ಮರಕ್ಕೆ ಹಾರಿಬಂದ ಹಾರುವ ಓತಿಯನ್ನು ಹಿಂಬಾಲಿಸಿಕೊಂಡು ಇನ್ನೊಂದು ಹಾರುವ ಓತಿ
ಬಂತು! ಮಕ್ಕಳು ಒಬ್ಬರನ್ನೊಬ್ಬರು ಅಟ್ಟಿಸಿಕೊಂಡು ಆಡುವ ರೀತಿ ಇತ್ತು ಅವುಗಳ ಆ ದಿನದ ಹಾರಾಟ. ಹಾರುವ ಓತಿಯು ಪ್ರತಿ ಹಾರಾಟದಲ್ಲೂ ತನ್ನ ಎತ್ತರವನ್ನು ಕಳೆದುಕೊಳ್ಳುತ್ತದೆ, ಕಳೆದುಕೊಳ್ಳಲೇಬೇಕು. ಅದು ಅನಿವಾರ್ಯ, ಮಿತಿ.
ಗ್ಲೈಡಿಂಗ್ ಮಾದರಿಯ ಹಾರಾಟವಾದ್ದರಿಂದ, ಎತ್ತರದಿಂದ ತುಸು ತಗ್ಗಿನ ಜಾಗಕ್ಕೆ ಅದು ಹಾರಬಲ್ಲದೇ ಹೊರತು, ಮೇಲ್ಬಾಗಕ್ಕೆ ಹಾರಲು ಅದರಿಂದ ಅಸಾಧ್ಯ. ಆದ್ದರಿಂದಲೇ ಇರಬೇಕು, ಹಾರಿಬಂದು ಕುಳಿತ ತೆಂಗಿನ ಮರದ ಕಾಂಡವನ್ನು ಅಪ್ಪಿಹಿಡಿದು,
ನಾಲ್ಕೆಂಟು ಅಡಿ ಮೇಲಕ್ಕೆ ಚಲಿಸಿ, ಮತ್ತೆ ಹಾರಲು ಅನುವಾಗುತ್ತಿತ್ತು! ಹಿಂಬಾಲಿಸಿಕೊಂಡು ಬಂದ ಎರಡನೆಯು ಹಾರುವ ಓತಿ ಸಹ, ಅದೇ ರೀತಿ ಮೇಲಕ್ಕೆ ಏರುತ್ತಿತ್ತು. ಅವು ಒಂದರ ಹಿಂದೆ ಒಂದು ಏಕೆ ಹಾರುತ್ತಿದ್ದವು? ಅವು ಆ ದಿನದ ಮಟ್ಟಿಗೆ ಲವರ್ಸ್ ಇರಬಹುದೆ? ಈ ರೀತಿಯ ಹಲವು ಪ್ರಶ್ನೆಗಳು ಮೂಡಿದ್ದು ಒಂದೆಡೆಯಾದರೆ, ಹಾರುವ ಓತಿಗಳಿಗೆ ಆ ರೀತಿ ರೆಕ್ಕೆ ಬಿಚ್ಚಿ ಹಾರಲು (ಗ್ಲೈಡಿಂಗ್) ಮಾಡಲು ಕಲಿಸಿದವರಾದರೂ ಯಾರು ಎಂಬ ಪ್ರಶ್ನೆ ಇನ್ನೊಂದೆಡೆ.
ಏಕೆಂದರೆ, ಈ ಪ್ರಶ್ನೆಗೆ ನಾನಾ ಆಯಾಮಗಳಿವೆ, ಅದರಲ್ಲೂ ಮುಖ್ಯವಾಗಿ ವಿಕಾಸವಾದದ ಹಿನ್ನೆಲೆಯಲ್ಲಿ. ಎಲ್ಲಾ ಓತಿಗಳೂ
ನೆಲದ ಮೇಲೆ, ಮರದ ಮೇಲೆ ಓಡಾಡುತ್ತಾ ಜೀವನ ನಡೆಸುತ್ತಿರಬೇಕಾದರೆ, ಹಾರುವ ಓತಿ ಮಾತ್ರ ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರಲು ಕಲಿತ ವಿಚಾರವೇ ಒಂದು ವಿಸ್ಮಯ ಎನಿಸುವುದಿಲ್ಲವೆ? ಬೇರೆ ಓತಿಕ್ಯಾತಗಳು, ಕೆಲವು ಅಡಿ ನೆಗೆಯಬಲ್ಲವು. ಆದರೆ ತನ್ನ ಬಗಲಿನಲ್ಲಿರುವ ಚರ್ಮದ ಪದರವನ್ನು ಬಳಸಿ ಹತ್ತಾರು ಅಡಿ ದೂರದ ತನಕ ಹಾರಬಹುದು ಎಂದು ಹಾರುವ ಓತಿಗೆ ಹೇಳಿ ಕೊಟ್ಟವರಾರು! ಈ ರೀತಿಯ ನಿಸರ್ಗ ಲೋಕದ ವಿಸ್ಮಯಗಳನ್ನು ಗುರುತಿಸುತ್ತಾ, ಯೋಚಿಸುತ್ತಾ ಹೋದರೆ ಬೇರೊಂದು ಅಚ್ಚರಿ ತುಂಬಿದ ಲೋಕವನ್ನೇ ಪ್ರವೇಶಿಸುತ್ತೇವೆ!
ನಮ್ಮೂರಿನ ಇಂತಹ ವಿಸ್ಮಯಗಳಲ್ಲಿ ಇನ್ನೊಂದು ಎಂದರೆ ‘ವಾಂಟರ್ಕ’ ನಡೆಸುವ ಉಳುಮೆ! ಹಳ್ಳಿಯಲ್ಲಿ ಹುಟ್ಟಿ, ಬೆಳೆದು, ನಗರವನ್ನು ಸೇರಿ ಹಲವು ವರ್ಷ ಗಳಾಗಿದ್ದರೂ, ಇಂದಿಗೂ ನಮ್ಮೂರಿನ ಇಂತಹ ಪರಿಸರ ವ್ಯಾಪಾರಗಳು ನನ್ನನ್ನು ಆಗಾಗ ಕಾಡುವುದುಂಟು. ಜೂನ್ ಒಂದು ಅಥವಾ ಎರಡರ ಸಮಯಕ್ಕೆ ತಪ್ಪದೇ ಮಳೆ ಬರುವ ಊರು ನಮ್ಮದು. ಈಚೆಗೆ ಪ್ರಕೃತಿಯ ಈ
ಕ್ಯಾಲೆಂಡರ್ ತುಸು ಬದಲಾಗಿದ್ದರೂ, ಬಹುಮಟ್ಟಿಗೆ ಕರಾವಳಿಯ ನಮ್ಮ ಹಳ್ಳಿಗೆ ಜೂನ್ ಮೊದಲ ವಾರ ಗುಡುಗು, ಮಿಂಚು ಗಳೊಡಗೂಡಿದ ಮಳೆ ಬಂದೇ ಬರುತ್ತದೆ.
ಕೃಷಿಕರಿಗೆ ಈ ರೀತಿ ಸಮಯಕ್ಕೆ ಸರಿಯಾಗಿ ಮಳೆ ಬಿದ್ದರೆ, ಅಪಾರ ಸಂತಸ. ಗದ್ದೆ, ಅಗೇಡಿಗಳನ್ನು ಹದಗೊಳಿಸಿ, ಬತ್ತದ ನಾಟಿಗೆ ತಯಾರು ಮಾಡತೊಡಗುತ್ತಾರೆ. ಅತ್ತ ಸಕಲೆಂಟು ಜೀವಿಗಳಿಗೂ ಮಳೆ ಬಂತೆಂದರೆ, ಎಲ್ಲಿಲ್ಲದ ಉತ್ಸಾಹ, ಸೂರ್ತಿ, ಜೀವನಾಸಕ್ತಿ. ರಾತ್ರಿಯಿಡೀ ಒಟಗುಟ್ಟುವ ಕಪ್ಪೆಗಳು ತಮ್ಮ ಉತ್ಸಾಹವನ್ನು ಶಬ್ದಮಾಡಿ ತೋರಿಸಿದರೆ, ಮರದ ತುಂಬಾ ಮುತ್ತಿ ಕುಳಿತು ನೂರಾರು ಬೆಳಕುಗಳನ್ನು ಬೀರುವ ಮೂಲಕ ಮರವನ್ನೇ ಬೆಳಗುವ ಮಿಣುಕು ಹುಳಗಳ ಝಗಮಗ ಇನ್ನೊಂದೆಡೆ.
ಹಾವುಗಳಿಗಂತೂ ಎಲ್ಲಿಲ್ಲದ ಉಮೇದು. ಗದ್ದೆ, ತೋಟ, ಬಾವಿ, ತೋಡು ಎಂದು ಓಡಾಡುತ್ತಿರುತ್ತವೆ! ನಗರದಲ್ಲೇ ಹುಟ್ಟಿ ಬೆಳೆದವರಿಗೆ ನಂಬಲು ಕಷ್ಟ ಎನಿಸಬಹುದು, ಮಳೆ ಬಿದ್ದು ಗದ್ದೆಯಲ್ಲಿ ನೀರು ನಿಂತು, ಸನಿಹದ ತೋಡಿನಲ್ಲಿ ಉಜರು (ಝರಿ) ನೀರು ಹರಿಯತೊಡಗಿದ ತಕ್ಷಣ ನಮ್ಮೂರಲ್ಲಿ ಹಾವುಗಳ ಮೆರವಣಿಗೆ! ಗದ್ದೆಯಿಂದ ಬಾವಿಗೆ, ಬಾವಿಯಿಂದ ಅಂಗಳಕ್ಕೆ, ಅಂಗಳದಿಂದ ತೋಟಕ್ಕೆ ಓಡಾಡುತ್ತಿರುತ್ತವೆ! ಹೆಚ್ಚಿನವು ಒಳ್ಳೆಯ ಹಾವು! ಅವು ಒಳ್ಳೆಯವೂ ಹೌದು, ಅವುಗಳ ಹೆಸರು ಸಹ ಒಳ್ಳೆ! ದುರ್ಗಸಿಂಹನ ಪಂಚತಂತ್ರದಲ್ಲಿ, ಪಂಪನ ಕಾವ್ಯದಲ್ಲೂ ಇವುಗಳನ್ನು ‘ಒಳ್ಳೆ’ ಎಂದೇ ಕರೆದಿದ್ದಾರೆ. ಹತ್ತಾರು ದಿನ ಮಳೆ ಬಂದು, ಗದ್ದೆತುಂಬಾ ನೀರು ತುಂಬಿದಾಗ, ಅಲ್ಲಿ ಓಡಾಡುವ ಮನುಷ್ಯರ ಕಾಲಿಗೂ ಒಳ್ಳೆ ಹಾವು ತಾಗುವುದುಂಟು!
ಅದು ಕಚ್ಚಿದರೂ ಭಯವಿಲ್ಲ ಎಂಬ ಮಾಹಿತಿ ಇರುವ ನಮ್ಮ ಹಳ್ಳಿಯ ಜನರು, ಅವುಗಳನ್ನು ನಿರ್ಲಕ್ಷಿಸಿಬಿಡುತ್ತಾರೆ. ಈ ರೀತಿಯ ಮಳೆಯ ದಿನಗಳಲ್ಲಿ, ವಾಂಟರ್ಕಗಳು ಗದ್ದೆ ಉಳುಮೆ ಮಾಡುವುದುಂಟು! ಹೊಳವಾದ ದಿನ ಮುಂಜಾನೆ ಎದ್ದು, ಮನೆ ಮುಂದಿನ ಅಗೇಡಿಯನ್ನು ಕಂಡರೆ, ಅಲ್ಲಿ ಬೆಳೆದಿದ್ದ ಬತ್ತದ ಸಸಿಯ ನಡುವೆ, ಒಂದಡಿ ಅಗಲದ ದಾರಿ ಕಾಣಿಸುವುದುಂಟು. ಮನುಷ್ಯರು ಉಳುಮೆ ಮಾಡಿ, ಬತ್ತ ಬಿತ್ತಿ, ಸಸಿಯಾಗಿ ನಾಲ್ಕಾರು ದಿನಗಳ ನಂತರ, ಈ ರೀತಿ ರಾತ್ರಿಯ ಹೊತ್ತಿನಲ್ಲಿ ಆ ಬತ್ತದ ಸಸಿಗಳ ನಡುವೆ ಚಲಿಸಿ, ಉಳುಮೆಯಂತಹ ಕೆಲಸವನ್ನು ಮಾಡಿ, ಅಲ್ಲಿನ ಬತ್ತದ ಸಸಿಗಳನ್ನು ಮಡಿಸಿ ದಾರಿ ಮಾಡಿದಂತೆ ಮಾಡಿದ ಭೂಪನಾದರೂ ಯಾರು? ‘ಅದಾ. ಅದು ವಾಂಟರ್ಕನ ಕೆಲಸ.
ಅಗೇಡಿಯ ಮಧ್ಯೆ ಹೂಟಿ ಮಾಡಿದಂತಿದೆ’ ಎನ್ನುತ್ತಿದ್ದರು ನಮ್ಮೂರಿನ ರೈತರು. ಇಲ್ಲಿ ‘ವಾಂಟರ್ಕ’ ಎಂದರೆ ಪುಟ್ಟ ಆಮೆ!
ಸಿಹಿನೀರಿನಲ್ಲಿ ವಾಸಿಸುವ ಈ ಆಮೆಗಳು, ರಾತ್ರಿ ಹೊತ್ತಿನಲ್ಲಿ ಅಗೇಡಿಯಲ್ಲಿ ಅತ್ತಿಂದಿತ್ತ ಓಡಾಡಿ ಮಾಡಿದ ಆ ದಾರಿಯನ್ನು ಬೆಳಗಿನ ಹೊತ್ತಿನಲ್ಲಿ ನೋಡುವ ಅನುಭವ ವಿಶಿಷ್ಟ. ಬತ್ತದ ಸಸಿ ತುಂಬಿರುವ ಅಗೇಡಿಯ ಹಸಿರು ಕ್ಯಾನ್‌ವಾಸಿನ ಮೇಲೆ ಅದಾರೋ ಪ್ರಕೃತಿ ಪ್ರೇಮಿ ರೇಖಾಚಿತ್ರ ಬರೆದಂತಿರುತ್ತದೆ. ಈ ವಾಂಟರ್ಕ ಎಂಬ ಆಮೆಗಳು ನಿಶಾಚರಿಗಳು.
ನಮ್ಮೂರಿನ ಕೆಲವು ರೈತರು ಅವುಗಳನ್ನು ಆಗಾಗ ಹಿಡಿಯುವುದುಂಟು, ಪದಾರ್ಥ ಮಾಡಲು. ಅರ್ಧದಿಂದ ಒಂದಡಿ ಉದ್ದದ, ಹಸಿರು ದೇಹದ ಆ ಆಮೆಗಳು, ತಮ್ಮ ಚಿಪ್ಪಿನಿಂದ ತಲೆಯನ್ನು ಹೊರಗೆ ಹಾಕಿ ನೋಡುವ ರೀತಿಯೇ ವಿಭಿನ್ನ. ಮಳೆಗಾಲ ಮುಗಿದ ನಂತರವೂ, ರಾತ್ರಿ ಹೊತ್ತಿನಲ್ಲಿ ವಾಂಟರ್ಕಗಳ ಓಡಾಟ ನಮಗೆ ಸಶಬ್ದವಾಗಿ ಕೇಳುವುದುಂಟು! ಅದು ಹೇಗೆಂದರೆ – ನಮ್ಮ
ಹಳ್ಳಿ ಮನೆಯ ಮುಂದೆ ಆಗಿನ ದಿನಗಳಲ್ಲಿ ಒಂದು ಬಗ್ಗುಬಾವಿ ಇತ್ತು. ಬಗ್ಗು ಬಾವಿ ಅಂದರೆ, ಬಾವಿಗೆ ಆವರಣ ಇಲ್ಲ, ನೆಲ ಮಟ್ಟದಲ್ಲೇ ಒಂದಡಿ ಎತ್ತರದ ಕಲ್ಲುಗಳ ರಕ್ಷಣಾಗೋಡೆ ಅಷ್ಟೆ.
ರಾತ್ರಿ ಒಮ್ಮೊಮ್ಮೆ ಆ ಬಾವಿಗೆ ದುಡುಂ ಎಂದು ಯಾರೋ ನೆಗೆದ ಸದ್ದು. ‘ಹಾಂ, ಕಾಣಿ, ವಾಂಟರ್ಕ ಬಾಮಿಗೆ ಹಾರಿತು’ ಎನ್ನು ತ್ತಿದ್ದರು ನಮ್ಮ ಅಮ್ಮಮ್ಮ. ಮನೆ ಮುಂದಿನ ಗದ್ದೆಯಿಂದಲೋ, ಬೇರೆಲ್ಲಿಂದಲೋ ನಡೆದು ಬರುವ ಆ ವಾಂಟರ್ಕಗಳು, ಅಂಗಳ ದಾಟಿ, ಬಗ್ಗುಬಾವಿಯ ಹತ್ತಿರ ಹೋಗಿ, ಮೇಲಿನಿಂದ ಬಾವಿಗೆ ನೆಗೆದಾಗ ಆಗುವ ‘ದುಡುಂ’ ಸದ್ದು ಅದು. ಗದ್ದೆಯಿಂದ ಬಾವಿಗೆ, ಬಾವಿಯಿಂದ ಗದ್ದೆಗೆ ರಾತ್ರಿ ಹೊತ್ತಿನಲ್ಲಿ ನಡೆಯುವ ಅವುಗಳ ಸರ್ಕೀಟಿನ ಉದ್ದೇಶವಾದರೂ ಏನು? ಅದೇ ಅವುಗಳ ದಿನಚರಿ!