ಶಶಾಂಕಣ
shashidhara.halady@gmail.com
ಈಗ ಒಂದೆರಡು ವಾರಗಳಿಂದ ಎಲ್ಲಾ ಕಡೆ ಸೆಕೆ; ಕೆಲವು ಕಡೆ ಇನ್ನಷ್ಟು ಸೆಕೆ; ಇನ್ನೂ ಕೆಲವು ಕಡೆ ತಡೆಯಲಾಗದ ಸೆಕೆ. ಈ ‘ಸೆಕೆಗಾಲ’ದಲ್ಲಿ ನಮ್ಮೂರು ಹಾಲಾಡಿಗೆ ಹೋಗಿದ್ದೆವು. ಅಲ್ಲಿನ ಸೆಕೆಯನ್ನು ತಡೆಯಲಾಗದ ಸೆಕೆ ಎನ್ನಬಹುದು; ಏಕೆಂದರೆ, ಅಲ್ಲಿ ಸೂರ್ಯನ ಬಿಸಿಲಿನ ಜತೆಯಲ್ಲೇ, ಹ್ಯುಮಿಡಿಟಿಯಿಂದಾಗಿ, ಸೆಕೆಯ ಫೀಲ್ ಜಾಸ್ತಿ. ಉಷ್ಣತಾಮಾಪಕದ ಪ್ರಕಾರ 33 ಡಿಗ್ರಿ ಸೆಂಟಿಗ್ರೇಡ್ ಇದ್ದರೆ, ‘ಫೀಲ್’ 38 ಡಿಗ್ರಿ ಎನ್ನುತ್ತದೆ ಅಂತರ್ಜಾಲದ ಆಪ್.
ರಾತ್ರಿ ತುಸು ತಂಪು ಎನಿಸಿದರೂ, ಬೆಳಗಿನ ಒಂಬತ್ತು ಗಂಟೆಯಿಂದ ಸಂಜೆಯ ಐದು ಗಂಟೆಯ ತನಕ ಸೆಕೆಯದೇ ಕಾಲ. ಇಂತಹ ದಿನಗಳಲ್ಲಿ ಬಿಸಿಲಿನಿಂದಾಗಿ ಭೂಮಿಯೂ ಬಿಸಿಯಾಗುತ್ತದಂತೆ; ಆದ್ದರಿಂದ ಭೂಮಿಯೊಳಗೆ, ಬಿಲದಲ್ಲಿ ಇರುವಂತಹ ಜೀವಿಗಳು, ಬಿಸಿ ತಾಳಲಾರದೆ ಹೊರಗೆ ಬರುತ್ತವೆ ಎನ್ನುತ್ತಿದ್ದರು ನಮ್ಮ ಹಿರಿಯರು. ಅದನ್ನು ನಿಜ ಮಾಡಲೋ ಎಂಬಂತೆ, ನಮ್ಮೂರಿನ ಅಂಗಳದಲ್ಲೇ ನಿನ್ನ ಒಂದು ಚೇಳಿನ ದರ್ಶನ ಆಯಿತು; ರಾತ್ರಿಯ ಹೊತ್ತು, ಮನೆಯಿಂದ ಹೊರಗೆ ಕಾಲಿಡುವಲ್ಲೇ ಹರಡಿದ್ದ ಕೆಲವು ತೆಂಗಿನ ಕಾಯಿಗಳ ಅಡಿಯಲ್ಲಿ ತನ್ನ ಕಪ್ಪನೆಯ ಕೊಂಡಿಯನ್ನು ಆಡಿಸುತ್ತಾ, ಅತ್ತಿತ್ತ ಸ್ಕ್ಯಾನ್ ಮಾಡುತ್ತಿತ್ತು-ತನ್ನ ಹರಿವಿನ ವ್ಯಾಪ್ತಿಯಲ್ಲಿ ಯಾರು ಬಂದರೂ, ಆ ಕೊಂಡಿ ಯನ್ನು ಚುಚ್ಚೋಣ ಎಂಬ ಇರಾದೆ ಅದರದ್ದು!
ಪಾಪ, ಚೇಳಿನ ಧರ್ಮ ಕೊಂಡಿಯಿಂದ ಕುಟುಕುವುದು; ಅದರ ಧರ್ಮವನ್ನು ಪಾಲಿಸಿದರೆ ನಾವು ಯಾಕೆ ತಾನೆ ತಕರಾರು ಮಾಡಬೇಕು? ಆದರೆ, ಅದರ ಧರ್ಮ ಪಾಲಿಸುವಾಗ ಅಕಸ್ಮಾತ್ ನಮ್ಮ ಕಾಲು ಆ ಭಾಗದಲ್ಲಿದ್ದರೆ ಕುಟುಕಿಸಿಕೊಂಡು, ಉರಿ ಅನುಭವಿಸಬೇಕಷ್ಟೆ, ಅಲ್ಲವೆ! ಸದ್ಯ ನಮ್ಮ ಅಂಗಳದಲ್ಲಿ ನಿನ್ನೆ ರಾತ್ರಿ ಅಂತಹದ್ದೇನೂ ಆಗಲಿಲ್ಲ; ಆ ಚೇಳನ್ನು ಪರಕೆಯಿಂದ ಗುಡಿಸಿ, ನಾಲ್ಕಾರು ಮಾರು ದೂರವಿದ್ದ ತರಗಲೆಗಳ ಅದರ ಠಾವಿನತ್ತು ದೂಡಲಾಯಿತು.
ಬೆಳಗ್ಗೆ ಪಕ್ಕದ ಮನ ಮಾಬ್ಲಣ್ಣ ಎದುರಾದ. ಈ ರೀತಿ ಮನೆಯ ಎದುರಿನಲ್ಲೇ ಒಂದು ಚೇಳು ಇತ್ತು ಮಾರಾಯ ಎಂದೆ. ‘ಹೌದಾ, ಎಂತ ಮಾಡುಕಾತ್, ಭೂಮಿ ಬಿಸಿ ಆಯಿತ್. ಅದಕ್ಕೇ ಅದು ಹೊರಗೆ ಬಂದಿತ್’ ಎಂದನಾತ ಆರಾಮಾಗಿ. ಇಲ್ಲಿ ಇವೆಲ್ಲಾ ಮಾಮೂಲು ಎಂಬ ಉದಾಸೀನದ ಭಾವ; ನಮಗೋ, ನಗರದಲ್ಲಿ ವಾಸಿಸಿ, ಪ್ರಕೃತಿಯ ಒಡನಾಟವನ್ನೇ ದೂರ ಮಾಡಿಕೊಂಡಿದ್ದರಿಂದ, ಪುಟಾಣಿ ಚೇಳು ಸಹ ನಮ್ಮ ಜನ್ಮದಾತ ವೈರಿ ಎಂಬ ಭಾವ!
ಅದು ಆ ರೀತಿ ಆಗಬಾರದು ಅಲ್ಲವೆ? ಪಕ್ಕದ ಮಾಬ್ಲಣ್ಣ ಮುಂದುವರಿದು ಹೇಳಿದ ‘ಅಕಸ್ಮಾತ್ ಕಚ್ಚಿದರೆ, ನಾಳೆ ಅಷ್ಟು ಹೊತ್ತಿನ ತನಕ ಉರಿ. ಅಷ್ಟೇ ಮಾರಾಯ್ರೆ…’ ಎನ್ನುತ್ತಾ ತನ್ನ ಕೆಲಸ ಮಾಡತೊಡಗಿದ. ಹಾಲಾಡಿನ ನಮ್ಮ ಮನೆಯ ವಿಶೇಷತೆ ಎಂದರೆ, ಮನೆಯ ಸುತ್ತಲೂ ಇನ್ನೂ ಕೆಲವು ಕಾಡು ಗಿಡಗಳಿವೆ; ಎದುರಿನ ಜಾಗವನ್ನು ಹೆಚ್ಚು ಹಸನು ಮಾಡದೇ, ಆಗಿಂದಾಗ ಅಲ್ಲಿನ ಕುರುಚಲು ಗಿಡವನ್ನು ಕಡಿಸದೇ ಇದ್ದುದರಿಂದ, ಅಲ್ಲಿ ಸಣ್ಣ ಮಟ್ಟದ ‘ಕಾಡಿನ ಫೀಲ್’ ಇದೆ. ಆದ್ದರಿಂದಲೇ ಇರಬೇಕು, ಅಲ್ಲಿ ಹಾರುವ ಓತಿ, ಬಾವಲಿ ಮೊದಲಾದ ಜೀವಿಗಳು ವಾಸಿಸಿದ್ದವು.
ಹಿಂದಿನ ಬಾರಿ ಅಲ್ಲಿಗೆ ಹೋದಾಗಲೆಲ್ಲಾ, ಹಾರುವ ಓತಿ ದರ್ಶನ ನೀಡಿತ್ತು. ಮಾಬ್ಲಣ್ಣನನ್ನು ಕೇಳಿದೆ ‘ಇಲ್ಲಿ ಓಂತಿ ಬರುತ್ತಾ ಇರುತ್ತಾ?.’ ನಮ್ಮೂರಿನಲ್ಲಿ ಹಾರುವ ಓತಿಯನ್ನು ‘ಓಂತಿ’ ಎಂದೇ ಕರೆಯುವುದು. ‘ಈಗ ಸೆಕೆ ಅಲ್ದಾ, ಓಂತಿಗಳು ಈಗ ಬೇರೆಲ್ಲೋ ಹೋಗಿವೆ… ಮಳೆ ಬಿದ್ದ ನಂತರ ಇಲ್ಲೇ ತೆಂಗಿನ ಮರದಲ್ಲಿ ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರುತ್ತಾ ಇರುತ್ವೆ’ ಎಂದ. ಬೇಸಗೆಯಲ್ಲಿ ಹಾರುವ ಓತಿಗಳು ಬೇರೆ ಜಾಗಕ್ಕೆ ಹೋಗಿರುತ್ತವೆ ಎಂಬುದನ್ನು ಆತ ಅನುಭ ವದಿಂದ ಗುರುತಿಸಿದ್ದ.
ಕೆಲವು ವರ್ಷಗಳ ಹಿಂದೆ ಇದೇ ಜಾಗದಲ್ಲಿ, ಮನೆಯಲ್ಲೇ ಕುಳಿತು ಹಾರುವ ಓತಿಗಳ ಮರದಿಂದ ಮರದ ಹಾರಾಟವನ್ನು ನೋಡುವ ಅವಕಾಶ ದೊರ ಕಿತ್ತು. ಅದು ಅಕ್ಟೋಬರ್ ತಿಂಗಳಿನ ಸಮಯ. ಮಧ್ಯಾಹ್ನ ಮೂರು ಗಂಟೆಯ ಸಮಯ. ಒಳ್ಳೆಯ
ಬಿಸಿಲು. ಮನೆ ಮುಂಭಾಗದ ಸಿಟ್‌ಔಟ್‌ನಲ್ಲಿ, ಅದೇನನ್ನೋ ಬರೆಯುತ್ತಾ ಕುಳಿತಿದ್ದೆ. ನಮ್ಮ ಮನೆಯ ಎಡಭಾಗದಲ್ಲಿ ಕೆಲವು ಮರಗಳು, ಬಿಳಲುಗಳು ಇದ್ದವು. ಬಲಭಾಗದಲ್ಲಿ ಮಹಾಬಲಣ್ಣನ ಮನೆ. ಮನೆಯ ಎದುರು ನಾಲ್ಕು ತೆಂಗಿನ ಮರಗಳಿವೆ. ಹಾಗೆಯೆ ನೋಡುತ್ತಾ ಕುಳಿತಿದ್ದೆ; ಕೊನೆಯ ತೆಂಗಿನ ಮರದಿಂದ ಒಂದು ಹಾರುವ ಓತಿ ತೇಲುತ್ತಾ ಬಂದು ಮೂರನೆಯ ಮರದ ಕಾಂಡದ ಮೇಲೆ ಕುಳಿತಿತ್ತು.
ಅದರ ಮುಂದೆಯೇ ಇನ್ನೊಂದು ಹಾರುವ ಓತಿ ಹಾರುತ್ತಾ ಬಂದು ಅದೇ ಮರವನ್ನು ಅಪ್ಪಿತು. ನನಗೆ ಮರೆಯಾಗಿದ್ದ ಭಾಗದಲ್ಲಿ ತೆಂಗಿನ ಮರವನ್ನೇ ಸ್ವಲ್ಪ ಮೇಲೇರಿ, ಎರಡನೆಯ ಮರಕ್ಕೆ ಒಂದು ಓತಿ, ಅದರ ಹಿಂದೆಯೇ ಇನ್ನೊಂದು ಓತಿ
ತೇಲುತ್ತಾ ಬಂದವು. ನಾಲ್ಕಾರು ನಿಮಿಷಗಳಲ್ಲಿ, ಮೊದಲನೆಯ ಮರಕ್ಕೂ ಒಂದರ ಹಿಂದೆ ಒಂದರಂತೆ, ತೇಲುತ್ತಾ ಹಾರಿ, ಕೊನೆಗೆ ಎರಡೂ ಹಾರುವ ಓತಿಗಳು ಬಂದ ದಾರಿಯಲ್ಲೇ ಮರದಿಂದ ಮರಕ್ಕೆ ಹಾರುತ್ತಾ, ವಾಪಸಾದವು.
ನನಗೋ ವಿಸ್ಮಯ, ಹಾಗೆಯೇ ನೋಡುತ್ತಿರುವಂತೆ, ಕೊನೆಯ ತೆಂಗಿನ ಮರದಾಚೆ ಇರುವ ದಟ್ಟವಾದ ಹಲಸಿನ ಮರ ವನ್ನೇರಿ ಕಣ್ಮರೆಯಾದವು! ಒಂದರ ಹಿಂದೆ ಒಂದನ್ನು ಅನುಸರಿಸಿದ್ದರಿಂದಾಗಿ, ಅವುಗಳನ್ನು ’ದಂಪತಿ’ ಎಂದು ಕರೆದೆ. ಅವೆರಡೂ ಹಾರುವ ಓತಿಗಳು ದಂಪತಿಗಳಾಗಿರಲಿ, ಇಲ್ಲದಿರಲಿ, ಒಂದು ಜೋಡಿ ಹಾರುವ ಓತಿ ಈ ರೀತಿ ಮರದಿಂದ
ಮರಕ್ಕೆ ಹಾರಾಡುವ ದೃಶ್ಯ ನೋಡಲು ಸಿಕ್ಕಿದ್ದು ನಿಜಕ್ಕೂ ಅಪೂರ್ವ. ಆಗ ನನ್ನ ಬಳಿ ಇದ್ದ ಕ್ಯಾಮೆರಾದಲ್ಲಿ ಅಷ್ಟು ದೂರದ ದೃಶ್ಯ ಸೆರೆ ಹಿಡಿಯುವ ಜೂಂ ಲೆನ್ಸ್ ಇರಲಿಲ್ಲ.
ಆದ್ದರಿಂದ, ತೆಂಗಿನ ಮರದ ಎತ್ರವನ್ನು ಮನದಲ್ಲೇ ಅಳೆದು, ಫೋಟೋ ತೆಗೆಯುವ ಗೋಜಿಗೇ ಹೋಗಲಿಲ್ಲ. ಆ ಎರಡು
ಹಾರುವ ಓತಿಗಳು, ಒಂದರ ಹಿಂದೆ ಒಂದರೆಂತೆ ತೆಂಗಿನ ಮರಗಳಿಗೆ ಗ್ಲೈಡ್ ಮಾಡುವುದನ್ನೇ ನೋಡುತ್ತಾ, ಅವುಗಳ ಚಲನವಲನಗಳನ್ನು ಕಣ್ಣಿನ ಲೆನ್ಸ್‌ನಿಂದಲೇ ಗ್ರಹಿಸುತ್ತಾ, ಅವುಗಳ ಲೋಕದಲ್ಲಿ ಮುಳುಗಿಹೋದೆ. ಎರಡು ಹಾರುವ ಓತಿಗಳು
ಒಟ್ಟಿಗೇ ಇರುವ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಿ, ಬಿಡಲಿ, ಆ ಒಂದು ಜೋಡಿ ಹಾರುವ ಓತಿಗಳು ಒಂದು ತೆಂಗಿನ ಮರದಿಂದ ಇನ್ನೊಂದು ತೆಂಗಿನ ಮರಕ್ಕೆ ಒಂದರ ಹಿಂದೆ ಒಂದು ಹಾರುತ್ತಾ ಸಾಗಿದ್ದನ್ನು ಹಾಲಾಡಿಯ ನಮ್ಮ ಮನೆಯ ಪೋರ್ಟಿಕೋದಲ್ಲಿ ಕುಳಿತೇ ನೋಡಲು ನನಗೆ ಸಾಧ್ಯವಾಯಿತೆಂಬ ವಿಚಾರವೇ ನನ್ನಲ್ಲಿ ಇಂದಿಗೂ ಒಂದು ರೀತಿಯ ಸಂಭ್ರಮ ವನ್ನುಂಟು ಮಾಡುತ್ತಿದೆ.
ಹಾಗೆ ನೋಡಹೋದರೆ, ನಮ್ಮೂರಿನಲ್ಲಿ ಮತ್ತು ನಮ್ಮ ನಾಡಿನ ಕರಾವಳಿಯ ಕಾಡು ಮತ್ತು ಸಹ್ಯಾದ್ರಿ ಯುದ್ದಕ್ಕೂ ಹಾರುವ ಓತಿಗಳಿ ತೀರಾ ಅಪರೂ ಪವೇನಲ್ಲ. ಅವುಗಳ ಮೂಲ ಹ್ಯಾಬಿಟೆಟ್ ಅಥವಾ ವಾಸಸ್ಥಳದಲ್ಲಿ ಅವು ಸಾಕಷ್ಟು ಸಂಖ್ಯೆಯಲ್ಲಿ ಅಲ್ಲಲ್ಲಿ ಕಾಣಸಿಗುತ್ತವೆ. ಪೂರ್ಣಚಂದ್ರ ತೇಜಸ್ವಿಯವರು ತಮ್ಮ ‘ಕರ್ವಾಲೋ’ ಕಾದಂಬರಿಯಲ್ಲಿ ಅದನ್ನು ಒಂದು ಅಪ್ರತಿಮ ರೂಪಕದ ರೀತಿ ಬಳಸಿದ್ದರಿಂದಾಗಿ, ಹಾರುವ ಓತಿಯು ಕನ್ನಡ ಸಾಹಿತ್ಯದ ಓದುಗರಿಗೆಲ್ಲರಿಗೂ ಸಾಕಷ್ಟು ಪರಿಚಿತವೇ.
ಅವು ಸಹ್ಯಾದ್ರಿಯ ಕಾಡುಗಳಲ್ಲಿ ಮತ್ತು ಕರಾವಳಿಯ ಕಾಡುಗಳಲ್ಲಿ ಸಾಕಷ್ಟು ಪರಿಚಿತವೇ ಎನಿಸಿದರೂ, ಅಲ್ಲಿಂದಾಚೆ ಕಾಣ ಸಿಗವು; ತಮ್ಮ ಭುಜ ಮತ್ತು ಪಕ್ಕೆಲುಬಿನ ನಡುವಿನ ಚರ್ಮವನ್ನು ಅಗಲಿಸಿ ಗ್ಲೈಡ್ ಮಾಡುವುದರಿಂದ, ಅವುಗಳ ಈ ಒಂದು ಚರ್ಯೆಯು ಪ್ರಾಣಿಲೋಕದಲ್ಲೇ ಬಹು ವಿಶಿಷ್ಟ; ಜತೆಗೆ, ಅವುಗಳ ವಾಸಸ್ಥಳದಿಂದ ಹೊರಗಿನ ಭಾಗಗಳಲ್ಲಿ ಅವು ಅಪರೂಪ, ಕಾಣಸಿಗವು.
ನಮ್ಮೂರು ಹಾಲಾಡಿಯಲ್ಲಿ, ಅದಕ್ಕೂ ಮುಂಚೆಯೂ ನಾನು ಕೆಲವು ಬಾರಿ ಹಾರುವ ಓತಿಗಳನ್ನು ಕಂಡದ್ದುಂಟು. ಅವುಗಳು ತಮ್ಮ ಕುತ್ತಿಗೆಯ ಕೆಳಭಾಗದಲ್ಲಿರುವ ಹಳದಿಯ ನಾಲಗೆಯ ರೀತಿಯ gಕ್ಷಿಚನೆಯನ್ನು ಅಲ್ಲಾಡಿಸುತ್ತಾ ಇರುವುದನ್ನು
ನೋಡಿದ್ದುಂಟು; ಅವು ಹಳದಿ ನಾಲಗೆಯನ್ನು ಆಡಿಸುವುದನ್ನು ಕಂಡು, ಶಾಲಾ ಮಕ್ಕಳು, ತಮ್ಮನ್ನು ಈ ಓತಿ ಅಣಕಿಸುತ್ತದೆ ಎಂದು ಹೇಳುತ್ತಿದ್ದುದುಂಟು. ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿರುವ ದೃಶ್ಯವೆಂದರೆ, ಮಕ್ಕಳು ಒಬ್ಬರನ್ನೊಬ್ಬರು ಅಟ್ಟಿಸಿ ಕೊಂಡು ಜೂಟಾಟ ಆಡುವ ರೀತಿ ಇತ್ತು ಅವುಗಳ ಆ ದಿನದ ಹಾರಾಟ!
ಹಾರುವ ಓತಿಯು ಪ್ರತಿ ಹಾರಾಟದಲ್ಲೂ ತನ್ನ ಎತ್ತರವನ್ನು ಕಳೆದುಕೊಳ್ಳುತ್ತದೆ, ಕಳೆದುಕೊಳ್ಳಲೇಬೇಕು. ಅದು ಅನಿವಾರ್ಯ, ಮಿತಿ. ಗ್ಲೈಡಿಂಗ್ ಮಾದರಿಯ ಹಾರಾಟವಾದ್ದರಿಂದ, ಎತ್ತರದಿಂದ ತುಸು ತಗ್ಗಿನ ಜಾಗಕ್ಕೆ ಅದು ಹಾರಬಲ್ಲದೇ ಹೊರತು, ಮೇಲ್ಭಾಗಕ್ಕೆ ಹಾರಲು ಅದರಿಂದ ಅಸಾಧ್ಯ. ಆದ್ದರಿಂದಲೇ ಇರಬೇಕು, ಹಾರಿಬಂದು ಕುಳಿತ ತೆಂಗಿನ ಮರದ ಕಾಂಡವನ್ನು ಅಪ್ಪಿ ಹಿಡಿದು, ನಾಲ್ಕೆಂಟು ಅಡಿ ಮೇಲಕ್ಕೆ ಚಲಿಸಿ, ಮತ್ತೆ ಹಾರಲು ಅನುವಾಗುತ್ತಿತ್ತು! ಹಿಂಬಾಲಿಸಿಕೊಂಡು ಬಂದ
ಎರಡನೆಯು ಹಾರುವ ಓತಿ ಸಹ, ಅದೇ ರೀತಿ ಮೇಲಕ್ಕೆ ಏರುತ್ತಿತ್ತು. ಅವು ಒಂದರ ಹಿಂದೆ ಒಂದು ಏಕೆ ಹಾರುತ್ತಿದ್ದವು? ಜೀವ ವಿಜ್ಞಾನಿಗಳನ್ನು ಕೇಳಿದರೆ ಉತ್ತರ ದೊರೆತೀತು.
ನಮ್ಮ ನಾಡಿನ ಮತ್ತು ಜೀವಜಗತ್ತಿನ ಎಲ್ಲಾ ಓತಿಗಳೂ ನೆಲದ ಮೇಲೆ, ಮರದ ಮೇಲೆ ಓಡಾಡುತ್ತಾ ಜೀವನ ನಡೆಸುತ್ತಿರ ಬೇಕಾದರೆ, ಹಾರುವ ಓತಿ ಮಾತ್ರ ಭುಜದ ಬಳಿ ಅಗಲಿಸುವಂತಹ ಚರ್ಮವನ್ನು ಬೆಳೆಸಿಕೊಂಡು, ಒಂದು ಮರದಿಂದ
ಇನ್ನೊಂದು ಮರಕ್ಕೆ ಹಾರಲು ಕಲಿತ ವಿಚಾರವೇ ಒಂದು ವಿಸ್ಮಯ ಎನಿಸುವುದಿಲ್ಲವೆ? ಬೇರೆ ಓತಿಕ್ಯಾತಗಳು, ಕೆಲವು ಅಡಿ ನೆಗೆಯಬಲ್ಲವು.
ಆದರೆ ತನ್ನ ಬಗಲಿನಲ್ಲಿರುವ ಚರ್ಮದ ಪದರವನ್ನು ಬಳಸಿ ಹತ್ತಾರು ಅಡಿ ದೂರದ ತನಕ ಹಾರಬಹುದು ಎಂದು ಹಾರುವ ಓತಿಗೆ ಹೇಳಿಕೊಟ್ಟವರಾರು! ಇದನ್ನೇ ಡಾರ್ವಿನ್‌ನ ಜೀವ ವಿಕಾಸದ ತತ್ವದ ಅಡಿ ವಿಜ್ಞಾನಿಗಳು ವಿವರಿಸಬಲ್ಲರು. ಹಾರುತ್ತಾ
ಹಾರುತ್ತಾ, ಲಕ್ಷಾಂತರ ವರ್ಷಗಳ ಕಾಲದ ಜೀವ ವಿಕಾಸವೇ ಹಾರುವ ಓತಿಗಳಿಗೆ ಮರದಿಂದ ಮರಕ್ಕೆ ಹಾರುವ ಶಕ್ತಿಯನ್ನು ಕೊಟ್ಟಿರಬೇಕು. ಈ ರೀತಿಯ ನಿಸರ್ಗ ಲೋಕದ ವಿಸ್ಮಯಗಳನ್ನು ಗುರುತಿಸುತ್ತಾ, ಯೋಚಿಸುತ್ತಾ ಹೋದರೆ ಬೇರೊಂದು ಅಚ್ಚರಿ ತುಂಬಿದ ಲೋಕವನ್ನೇ ಪ್ರವೇಶಿಸುತ್ತೇವೆ!