ತಿಳಿರುತೋರಣ
srivathsajoshi@yahoo.com
‘ನಿಮಗೆ ಇಂಥ ನಂಬಿಕೆಗಳಲ್ಲಿ ನಂಬಿಕೆ ಇದೆಯೇ?’ ಎಂದು ನನ್ನನ್ನು ಕೇಳುತ್ತೀರಾದರೆ, ನಂಬಿಕೆ ಇದೆ ಅಥವಾ ಇಲ್ಲ ಎನ್ನುವುದಕ್ಕಿಂತಲೂ ಇಂಥ ನಂಬಿಕೆಗಳ ಬಗ್ಗೆ ನನಗೆ ಗೌರವ ಇದೆ, ಆಸಕ್ತಿ ಇದೆ, ಅವುಗಳ ಹಿನ್ನೆಲೆ ತಿಳಿದುಕೊಳ್ಳುವುದು ತುಂಬ ಖುಷಿಯೆನಿಸುತ್ತದೆ ಎನ್ನುತ್ತೇನೆ. ಅದಕ್ಕೆ ಮುಖ್ಯ ಕಾರಣವೆಂದರೆ, ಕೆಲವೊಂದು ಚಂದದ ನಂಬಿಕೆಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡದೇ ಇರಲಿಕ್ಕೆ ಸಾಧ್ಯವೇ ಇಲ್ಲ.
ಅನ್ಯರಿಗಾಗಲೀ ತನಗೇ ಆಗಲಿ ಯಾವುದೇ ರೀತಿಯಲ್ಲಿ ಹಾನಿ ಮಾಡದ, ಉಪಟಳ ಎನಿಸದ, ಮುಖ್ಯವಾಗಿ ಹೇರಲ್ಪಡದ, ಕೆಲವು ನಂಬಿಕೆಗಳು ಇರುತ್ತವೆ. ಅವು ನಮ್ಮ ಜೀವನ ಕ್ಕೊಂದಿಷ್ಟು ಸ್ವಾರಸ್ಯವನ್ನು ತಂದುಕೊಡುತ್ತವೆ; ಜೀವನವನ್ನು ಸ್ವಲ್ಪಮಟ್ಟಿಗೆ ರಹಸ್ಯಮಯ ಮತ್ತು ಕುತೂಹಲಕಾರಿ ಆಗಿಸುತ್ತವೆ. ಅದರಲ್ಲೂ, ಕೆಡುಕಾಗುತ್ತದೆ ಎಂದು ಹೆದರಿಸುವ ನಂಬಿಕೆಗಳಿಗಿಂತ, ಒಳ್ಳೆಯದಾಗುತ್ತದೆ ಎಂಬ ಆಶಾಭಾವವನ್ನು ಬಿತ್ತುವ ನಂಬಿಕೆಗಳು ಚಂದ.
ಉದಾಹರಣೆಗೆ- ರಾತ್ರಿ ಆಕಾಶ ದಲ್ಲಿ ಅಕಸ್ಮಾತ್ ನಕ್ಷತ್ರ ಬೀಳ್ತಾ ಇರೋದನ್ನು (ಉಲ್ಕಾಪಾತ) ನೋಡಿದರೆ ಆಗ ಮನಸ್ಸಿನಲ್ಲೇ ಏನನ್ನಾದ್ರೂ ಹಾರೈಸಿದರೆ ಅದು ನೆರವೇರುತ್ತದೆ ಎಂಬ ನಂಬಿಕೆ. ಹಾಲುಹಲ್ಲು ಬಿದ್ದಾಗ ಅದನ್ನು ತುಳಸಿದಳದಲ್ಲಿ ಮಡಚಿಟ್ಟು ಬಿಸಾಡಿದರೆ ಮುಂದೆ ಪ್ರಸಿದ್ಧ ವ್ಯಕ್ತಿಯಾಗುತ್ತೇವೆ ಎಂಬ ಮುಗ್ಧ ನಂಬಿಕೆ. ಪುಸ್ತಕದೊಳಗೆ ನವಿಲುಗರಿ ಇಟ್ಟರೆ ಮರಿ ಹಾಕುತ್ತದೆ ಎಂಬ ಅತಿಮುಗ್ಧ ನಂಬಿಕೆ. ನದಿ, ಕೆರೆ, ಜಲಾಶಯಗಳನ್ನು ಮೊದಲ ಬಾರಿ ಕಂಡಾಗ ನೀರಿನೊಳಗೆ ನಾಣ್ಯ ಎಸೆದರೆ ಬಯಸಿದ ಕಾರ್ಯ ಕೈಗೂಡುತ್ತದೆ ಎಂಬ ಜಲಶಕ್ತಿ ನಂಬಿಕೆ. ಎಲೆಅಡಕೆ ಜಗಿಯುವಾಗ ನಾಲಿಗೆ ಕಡು ಕೆಂಪಾದರೆ ಬಾಳಸಂಗಾತಿ ತುಂಬಾ ಪ್ರೀತಿಸುತ್ತಾನೆ/ಳೆ ಎಂಬ ಪ್ರೇಮಭರಿತ ನಂಬಿಕೆ. ಕಾರ್ತವೀರ್ಯಾರ್ಜುನನ ಶ್ಲೋಕ ಹೇಳಿ ಸ್ಮರಿಸಿದರೆ ಕಳೆದುಹೋದ ವಸ್ತು ಸುಲಭದಲ್ಲಿ ಸಿಕ್ಕಿಬಿಡುತ್ತದೆ ಎಂಬ ಪತ್ತೇದಾರಿ ನಂಬಿಕೆ… ಇಂಥವುಗಳ ಬಗ್ಗೆ ನಾನು ಹೇಳ್ತಿರೋದು.
‘ನಿಮಗೆ ಇಂಥ ನಂಬಿಕೆಗಳಲ್ಲಿ ನಂಬಿಕೆ ಇದೆಯೇ?’ ಎಂದು ನನ್ನನ್ನು ಕೇಳುತ್ತೀರಾದರೆ, ನಂಬಿಕೆ ಇದೆ ಅಥವಾ ಇಲ್ಲ ಎನ್ನುವು ದಕ್ಕಿಂತಲೂ ಇಂಥ ನಂಬಿಕೆಗಳ ಬಗ್ಗೆ ನನಗೆ ಗೌರವ ಇದೆ, ಆಸಕ್ತಿ ಇದೆ, ಅವುಗಳ ಹಿನ್ನೆಲೆ ತಿಳಿದುಕೊಳ್ಳುವುದು ತುಂಬ ಖುಷಿಯೆನಿಸುತ್ತದೆ ಎನ್ನುತ್ತೇನೆ. ಅದಕ್ಕೆ ಮುಖ್ಯ ಕಾರಣವೆಂದರೆ, ಕೆಲವೊಂದು ಚಂದದ ನಂಬಿಕೆಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡದೇ ಇರಲಿಕ್ಕೆ ಸಾಧ್ಯವೇಇಲ್ಲ. ತೊಟ್ಟಿಲಲ್ಲಿ ಮಲಗಿರುವ ಪುಟ್ಟ ಮಗು ನಿದ್ದೆಯಲ್ಲೇ ನಕ್ಕರೆ(ಎಷ್ಟೋ ಸಲ ನಗುವುದೂ ಇದೆ!) ‘ದೇವರು ಬಂದು ಮಗುವನ್ನು ಮಾತನಾಡಿಸಿ ನಗಿಸುತ್ತಿದ್ದಾನೆ’ ಎಂಬ ನಂಬಿಕೆ ನಮ್ಮಲ್ಲಿದೆ.
ಪರಮನಾಸ್ತಿಕರಿಗೂ ಈ ನಂಬಿಕೆಯ ಮೇಲೆ ಪ್ರೀತಿ ಬರುವ ಹಾಗಿದೆ ಇದು. ನಮ್ಮ ಕರಾವಳಿಯಲ್ಲಿ ಕುಟುಂಬದೈವಗಳು(ಭೂತಗಳು) ರಾತ್ರಿಹೊತ್ತು ಮಗುವಿನ ತೊಟ್ಟಿಲು ತೂಗುತ್ತವೆ ಎಂದು ಕೂಡ ನಂಬುತ್ತಾರೆ. ಇವೆಲ್ಲ ಹಳ್ಳಿಗುಗ್ಗುಗಳ ಕಥೆ ಅಂತ ಮೂಗು ಮುರಿಯಬೇಡಿ! ನನ್ನ ನಿಲುವೇನೆಂದರೆ, ಎಲ್ಲಿಯವರೆಗೆ ಈ ನಂಬಿಕೆಗಳು ನಿರುಪದ್ರವಿಯಾಗಿ ವೈಯಕ್ತಿಕ ಮಟ್ಟದಲ್ಲಿ ಮಾತ್ರ ಇರುತ್ತವೋ ಅಲ್ಲಿಯವರೆಗೆ ಒಳ್ಳೆಯದೇ. ಯಾವಾಗ ಅಡ್ಡಕಸುಬಿ ಟಿವಿ-ಜ್ಯೋತಿಷಿಗಳು ಮಾಡುವಂತೆ ಮುಗ್ಧ ಜನರನ್ನು ಮೌಢ್ಯಕ್ಕೆ ದೂಡುತ್ತವೋ ಆಗ ನಂಬಿಕೆಗಳ ಮೇಲಿನ ಗೌರವ ಆಸಕ್ತಿಗಳು ಹೊರಟುಹೋಗುತ್ತವೆ. ಹಾಗಾಗದಂತೆ ಎಚ್ಚರ ವಹಿಸುವುದು ಬಹುಮಟ್ಟಿಗೆ ನಮ್ಮ ಕೈಯಲ್ಲೇ ಇದೆ ಎನ್ನುವುದೂ ನಿಜವೇ.
ಅಮೆರಿಕದ ಜನರಿಗೂ ನಂಬಿಕೆಗಳಲ್ಲಿ ನಂಬಿಕೆ ಇದೆಯೆಂದು ನಾನು ಮೊದಲಿಗೆ ಕಂಡುಕೊಂಡದ್ದು ಇಲ್ಲಿಯ ಬಹುವಿಖ್ಯಾತ ‘ಗ್ರೌಂಡ್‌ಹಾಗ್ ಡೇ’ ಆಚರಣೆಯಿಂದ. ಗ್ರೌಂಡ್‌ಹಾಗ್ ಎಂದರೆ ಅಳಿಲನ್ನು ಹೋಲುವ ಒಂದು ಪ್ರಾಣಿ. ಚಳಿಗಾಲದಲ್ಲಿ ತನ್ನ ಬಿಲದಲ್ಲಿ ಹಾಯಾಗಿ ನಿದ್ದೆ ಮಾಡುತ್ತ ಬೆಚ್ಚಗೆ ಮುದುಡಿಕೊಂಡಿರುತ್ತದೆ. ಪೆನ್ಸಿಲ್ವೇನಿಯಾ ಸಂಸ್ಥಾನದ ಪನ್‌ಕ್ಸುಟಾವ್ನಿ ಎಂಬ ಪಟ್ಟಣದಲ್ಲಿ ‘ಫಿಲ್’ ಎಂಬ ಹೆಸರಿನ ಗ್ರೌಂಡ್‌ಹಾಗ್ ಇದೆ.
ಪ್ರತಿವರ್ಷ ಫೆಬ್ರವರಿ ೨ರಂದು ಅದು ಬಿಲದಿಂದ ಹೊರಗೆ ಬರುತ್ತದೆ (ಕರಾರುವಾಕ್ಕಾಗಿ ಆವತ್ತೇ ಹೊರಬರುವುದಕ್ಕೆ ಅದೇನು ತನ್ನ ಬಿಲದಲ್ಲಿ ಕ್ಯಾಲೆಂಡರ್ ಇಟ್ಕೊಂಡಿರ್ತದಾ ಅಂತ ಕೇಳ ಬೇಡಿ). ಹಾಗೆ ಹೊರಗೆ ಬಂದಾಗ ಅದು ತನ್ನ ನೆರಳನ್ನು ಕಂಡರೆ ಚಳಿಗಾಲ ಇನ್ನೂ ಮುಗಿದಿಲ್ಲ, ಕನಿಷ್ಠ ಆರು ವಾರಗಳವರೆಗಾದರೂ ತೀವ್ರವಾದ ಚಳಿ/ಹಿಮಪಾತ ಮುಂದುವರಿಯುತ್ತದೆ ಎಂದು ಘೋಷಿಸಿ ಮತ್ತೆ ತನ್ನ ಬಿಲವನ್ನು ಸೇರುತ್ತದೆ. ಒಂದುವೇಳೆ ಅದಕ್ಕೆ ತನ್ನ ನೆರಳು ಕಂಡುಬರದಿದ್ದರೆ ಇನ್ನೇನು ಚಳಿಗಾಲ ಮುಗಿಯಿತು ಎಂದು ತನ್ನ ನಿಶ್ಚೇಷ್ಟತೆಗೆ ಮಂಗಳ ಹಾಡುತ್ತದೆ, ವಸಂತ ಋತುವನ್ನು ಸ್ವಾಗತಿಸುತ್ತದೆ. ಗ್ರೌಂಡ್‌ಹಾಗ್ ಘೋಷಿಸಿದ ಭವಿಷ್ಯವು ರಾಷ್ಟ್ರೀಯ ಟಿವಿ ಜಾಲದಲ್ಲಿ ಸುದ್ದಿಯಾಗುತ್ತದೆ. ಅದನ್ನು
ಇಲ್ಲಿಯ ರೈತಾಪಿ ಜನರೂ ನಂಬುತ್ತಾರೆ. ಇನ್ನೂ ಆರು ವಾರಗಳ ಕಾಲ ಚಳಿ ಜೋರಿರುತ್ತದೆಯೆಂದು ತಿಳಿದುಬಂದರೆ ಹಿಡಿಶಾಪ ಹಾಕುತ್ತಾರಾದರೂ, ಬೇರೆ ದಾರಿಯಿಲ್ಲದೆ ಚಳಿ ಸಹಿಸಿಕೊಳ್ಳುವುದಕ್ಕೆ ಮಾನಸಿಕ ಮತ್ತು ದೈಹಿಕ ಶಕ್ತಿ ಹೆಚ್ಚಿಸಿಕೊಳ್ಳುತ್ತಾರೆ. ಈ ವರ್ಷ ಫಿಲ್ ಬಿಲದಿಂದ ಹೊರಬಂದಾಗ ನೆರಳು ಕಂಡಿದೆ. ಅದರ ಪ್ರಕಾರವೇ ತೀವ್ರ ಚಳಿಗಾಲ/ಹಿಮಪಾತ ಮುಂದುವರಿದಿದೆ, ಯಾವಾಗಲೂ ಚಳಿಯಿಂದ ನಡುಗುವ ಅಮೆರಿಕದ ಈಶಾನ್ಯ ಪ್ರದೇಶಗಳಲ್ಲಲ್ಲ, ಎಂದೂ ಹಿಮಪಾತ ಕಾಣದ ಪಶ್ಚಿಮದ ಕ್ಯಾಲಿಫೋರ್ನಿಯಾದಲ್ಲಿ! ಫಿಲ್‌ನ ಲೆಕ್ಕಾಚಾರ ಎಲ್ಲಿ ತಪ್ಪಿತೋ ಗೊತ್ತಿಲ್ಲ.
ಪಾಶ್ಚಾತ್ಯ ಜಗತ್ತಿನಲ್ಲಿ ಚಾಲ್ತಿಯಿರುವ ನಂಬಿಕೆಗಳಿಗೆ ಇನ್ನೊಂದು ಒಳ್ಳೆಯ ಉದಾಹರಣೆ ನಾನೋದಿದ್ದು ಗ್ವಾಟೆಮಾಲ ದೇಶದ ‘ಚಿಂತೆಗೊಂಬೆ’ಗಳ ಬಗೆಗಿನದು. ಆ ದೇಶದಲ್ಲಿ ಒಂದು ವಿಶಿಷ್ಟ ಸಂಪ್ರದಾಯವಿದೆ. ಅಲ್ಲಿ ಚಿಕ್ಕಚಿಕ್ಕ ಕಡ್ಡಿಚೂರುಗಳಿಗೆ ಚಿಂದಿಬಟ್ಟೆ ತೊಡಿಸಿ ಬಣ್ಣಬಣ್ಣದ ಗೊಂಬೆಗಳನ್ನು ಮಾಡುತ್ತಾರೆ. ನಮ್ಮ ಕೈಬೆರಳುಗಳಷ್ಟೇ ಪುಟ್ಟ ಗಾತ್ರದ ಗೊಂಬೆಗಳು. ತಲಾ ಆರು ಗೊಂಬೆಗಳನ್ನು ಪುಟ್ಟ ಚೀಲದಲ್ಲಿ ಅಥವಾ ಮರದ ಪೆಟ್ಟಿಗೆಯಲ್ಲಿಟ್ಟು ಮಾರುತ್ತಾರೆ. ಆ ಗೊಂಬೆಗಳಿಗೆ ವಿಶೇಷವಾದ ಮಾಂತ್ರಿಕ ಶಕ್ತಿ ಇರುತ್ತದೆ ಎಂದು ಅಲ್ಲಿನ ಜನರು ನಂಬುತ್ತಾರೆ. ಅವುಗಳನ್ನು ‘ವರಿ ಡಾಲ್ಸ್’ (ಚಿಂತೆ ಗೊಂಬೆಗಳು) ಎಂದು ಕರೆಯುತ್ತಾರೆ. ಚಿಕ್ಕ ಮಕ್ಕಳು ಭಯಭೀತರಾದರೆ, ಯಾವುದೇ ಕಾರಣದಿಂದಿರಲಿ ಆತಂಕಕ್ಕೊಳಗಾದರೆ ಮತ್ತು ನಿದ್ದೆ ಮಾಡದಂತಾದರೆ, ಆರು ಗೊಂಬೆಗಳಿರುವ ಚೀಲ ಅಥವಾ ಪೆಟ್ಟಿಗೆಯನ್ನು ಮಗುವಿಗೆ ಕೊಡುತ್ತಾರೆ.
ಒಂದೊಂದು ರಾತ್ರಿಗೆ ಒಂದೊಂದು ಗೊಂಬೆಯಂತೆ ಆರು ರಾತ್ರಿಗಳೂ ಮಗು ಮಲಗುವ ಮುನ್ನ ಗೊಂಬೆಯ ಬಳಿ ತನ್ನೆಲ್ಲ ವ್ಯಥೆ ನೋವು ಆತಂಕಗಳನ್ನು ಹೇಳಿಕೊಳ್ಳಬೇಕು. ಆಮೇಲೆ ಆ ಗೊಂಬೆಯನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು. ಮಾರನೆ ದಿನ ಎದ್ದಾಗ ಗೊಂಬೆಯೂ ಇರುವುದಿಲ್ಲ, ಚಿಂತೆಯೂ ಇರುವುದಿಲ್ಲ! ಮಗು ಮಲಗಿದ ಮೇಲೆ ಹೆತ್ತವರೇ ಗೊಂಬೆಯನ್ನು ದಿಂಬಿನ ಕೆಳಗಿಂದ ತೆಗೆದು ಬೇರೆಡೆ ಇಡುವುದು ಹೌದಾದರೂ, ಒಂದೊಮ್ಮೆಗೆ ತನ್ನೆಲ್ಲ ಹೆದರಿಕೆ-ನೋವು-ಚಿಂತೆಗಳೂ ಗೊಂಬೆಗೆ ವರ್ಗಾವಣೆ
ಯಾಗಿವೆ ತಾನಿನ್ನು ಆರಾಮಾಗಿ ಮಲಗಬಹುದು ಎಂದು ಮಗುವಿನ ಮನಸ್ಸಿನ ಮೇಲೆ ಅದ್ಭುತ ಪರಿಣಾಮ ಬೀರುತ್ತದೆ ಈ ನಂಬಿಕೆ. ಮನೆಯಲ್ಲಿ ರಚ್ಚೆಹಿಡಿಯುವ ಮಗುವಿಗಷ್ಟೇ ಅಲ್ಲ, ಆಸ್ಪತ್ರೆಗಳಲ್ಲಿ ನರಳಾಡುವ ಮುದ್ದುಕಂದಮ್ಮಗಳಿಗೂ ಚಿಂತೆಗೊಂಬೆಗಳನ್ನು ಕೊಡುವ ಪರಿಪಾಟ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿದೆಯಂತೆ.
ಶಸ್ತ್ರಚಿಕಿತ್ಸೆ ಆಗಬೇಕಿರುವ ಮಕ್ಕಳು, ಕ್ಯಾನ್ಸರ್‌ನಂಥ ದೀರ್ಘಕಾಲಿಕ ಚಿಕಿತ್ಸೆ ಪಡೆಯುವ ಮಕ್ಕಳು ನೋವನ್ನು ಚಿಂತೆಗೊಂಬೆಗಳಿಗೆ ವರ್ಗಾಯಿಸಿ ಸುಖನಿದ್ರೆ ಹೋಗುವುದನ್ನು
ಆಸ್ಪತ್ರೆಯ ದಾದಿಯರು ಮತ್ತು ವೈದ್ಯರೂ ಗಮನಿಸಿದ್ದಾರಂತೆ. ಇದು ಎಷ್ಟು ಪ್ರಭಾವಶಾಲಿಯೆಂದರೆ ನಿದ್ರಾಹೀನತೆ ಅಥವಾ ಖಿನ್ನತೆಯಿಂದ ಬಳಲುವ ವಯಸ್ಕರು ಕೂಡ ಚಿಂತೆಗೊಂಬೆಗಳಿಗೆ ಶರಣು ಹೋದದ್ದಿದೆ; ಅದರಿಂದ ಒಳ್ಳೆಯ ಪರಿಣಾಮ ಪಡೆದದ್ದೂ ಇದೆಯಂತೆ.
ಆದ್ದರಿಂದ, ನಮ್ಮಲ್ಲಿರುವ ಕೆಲವು ಚಂದದ ನಂಬಿಕೆಗಳನ್ನು ಅಪಹಾಸ್ಯ ಮಾಡಬಾರದು. ಅವು ಇಲ್ಲದಿದ್ದರೆ ಜೀವನ ಎಷ್ಟು ನೀರಸವಾಗುತ್ತಿತ್ತು ಎಂದು ಊಹಿಸಿಯಾದರೂ ಅವುಗಳ ಬಗ್ಗೆ ಗೌರವವಿಟ್ಟುಕೊಳ್ಳಬೇಕು. ಅಷ್ಟಾಗಿ, ಸೂಕ್ಷ್ಮವಾಗಿ ಗಮನಿಸಿದರೆ, ನಾವು ಈ ಲೋಕದಲ್ಲಿ ಜನ್ಮತಾಳುವುದಕ್ಕಿಂತಲೂ ಮೊದಲೇ ನಂಬಿಕೆಗಳ ನಂಟು ಬೆಳೆಸಿಕೊಳ್ಳುತ್ತೇವೆ. ಬಸುರಿಗೆ ಮಾಡುವ ಸೀಮಂತ ಸಂಸ್ಕಾರದ ವಿಧಿವಿಧಾನಗಳಲ್ಲಿ ಮುಂದೆ ಹುಟ್ಟಲಿರುವ ಮಗು ಹೆಣ್ಣೋ ಗಂಡೋ ಎಂಬ ಕುತೂಹಲ ಗರಿಗೆದರಲಿಕ್ಕಾಗಿಯೇ ನಂಬಿಕೆಗಳಿವೆ.
ಆವತ್ತಿನ ಸಮಾರಂಭಕ್ಕೆ ಹೋಳಿಗೆ ತಯಾರಿಸುವಾಗ ಕಣಕ ಹೆಚ್ಚು ಉಳಿದರೆ ಮಗು ಹೆಣ್ಣು ಅಂತಲೂ, ಹೂರಣ ಹೆಚ್ಚು ಉಳಿದರೆ ಮಗು ಗಂಡು ಅಂತಲೂ ನಂಬಿಕೆ (ಪ್ರಾದೇಶಿಕವಾಗಿ ಇದರಲ್ಲಿ ವ್ಯತ್ಯಾಸವೂ ಇರಬಹುದು). ದೇವರ ಪ್ರಸಾದವೆಂದು ಎರಡು ಚಿಕ್ಕ ಪಾತ್ರೆಗಳಲ್ಲಿ- ಒಂದರಲ್ಲಿ ಮೊಸರನ್ನ ಇನ್ನೊಂದರಲ್ಲಿ ಪಾಯಸ ತುಂಬಿಸಿ ಮುಚ್ಚಿಟ್ಟಿದ್ದರಲ್ಲಿ- ಒಂದನ್ನು ಎತ್ತಿಕೊಳ್ಳುವಂತೆ ಬಸುರಿಗೆ ಹೇಳಿ ಆಕೆ ಎತ್ತಿದ್ದು ಮೊಸರನ್ನವಾದರೆ ಮಗು ಗಂಡು; ಪಾಯಸವಾದರೆ ಹೆಣ್ಣು. ಅದರಂತೆಯೇ ಆಗುತ್ತದೆಂದೇ ನಿಲ್ಲವಾದರೂ ಆ ಸಂದರ್ಭಕ್ಕೊಂದು ಸ್ವಾರಸ್ಯ ಕುತೂಹಲ ಮತ್ತು ನಿರೀಕ್ಷೆಗಳ ಪದರವನ್ನು ಆ ನಂಬಿಕೆ ಕೊಡುತ್ತದೆ. ಸಂಭ್ರಮೋಲ್ಲಾಸಕ್ಕೆ ಕಾರಣವಾಗುತ್ತದೆ.
ಇನ್ನೊಂದು ಇಂಟೆರೆಸ್ಟಿಂಗ್ ನಂಬಿಕೆ- ಮಗು ಹುಟ್ಟುವಾಗ ತಲೆ ಮೊದಲು ಹೊರಬಂತೋ ಅಥವಾ ಅಪರೂಪವೆಂಬಂತೆ ಕಾಲುಗಳು ಮೊದಲು ಹೊರಬಂದು ಸ್ವಲ್ಪ ಅಸಹಜಪ್ರಸವವೋ ಎಂಬು ದನ್ನವಲಂಬಿಸಿ. ತಾಯಿಯ ಬಸಿರಿನಿಂದ ಕಾಲು ಮುಂದಾಗಿ ಜನಿಸಿದ ಮಗು ಬೆಳೆದು ದೊಡ್ಡವನಾದಾಗ ವಿಶೇಷವಾದೊಂದು ಚಿಕಿತ್ಸಕ ಶಕ್ತಿಯನ್ನು ಮೈಗೂಡಿಸಿರುತ್ತದೆ ಎಂದು ಒಂದು ನಂಬಿಕೆ. ಯಾರಿಗಾದರೂ ಕೈ-ಕಾಲು ಉಳುಕಿದರೆ ಪರಿಹಾರಕ್ಕೆ ಅಂಥ ವ್ಯಕ್ತಿಯ ಕಾಲನ್ನು ಉಳುಕು ಉಂಟಾದ ಜಾಗಕ್ಕೆ ನೀವುವುದು. ಓಡಾಡಲು, ಮೈಕೈ ಅಲ್ಲಾಡಿಸಲೂ ಆಗದೆ ನೋವಿನಿಂದ ನರಳುವವರು ಒಮ್ಮೆ ಅಂಥ ವ್ಯಕ್ತಿಯ ಕಾಲುಗಳಿಂದ ನೀವಿಸಿಕೊಂಡರೆ ಗುಣಮುಖರಾಗುತ್ತಾರಂತೆ. ಎರಡು-ಮೂರು ಬಾರಿ ಮಾಡಿದರೆ ಉಳುಕು/ಊತ ಮಾಯವಾಗುತ್ತದಂತೆ!
ಮಗುವಿನ ಲಾಲನೆಪಾಲನೆಗೂ ನಂಬಿಕೆಗಳಿಗೂ ಗಾಢ ಸಂಬಂಧ. ದೃಷ್ಟಿ ಬೀಳದಿರಲೆಂದು ಹಣೆಗೆ/ಗಲ್ಲಕ್ಕೆ ಕಪ್ಪು ಬೊಟ್ಟು ಇಡುವುದರಿಂದ ಅದು ಆರಂಭವಾಗುತ್ತದೆ. ಹುಟ್ಟಿದ ಏಳನೇ ದಿನ ಬ್ರಹ್ಮ ಮಗುವಿನ ಹಣೆಬರಹ ಬರೆಯುತ್ತಾನೆ ಅಂತ ಮಗುವಿನ ಹಾಸಿಗೆ ಪಕ್ಕ ಒಂದು ಪುಸ್ತಕ-ಪೆನ್ನು ಅಥವಾ ಸ್ಲೇಟ್-ಬಳಪ ಇಡುವ, ಬ್ರಹ್ಮನ ಹತ್ತಿರ ಮಗುವಿಗೆ ಆಯುರಾರೋಗ್ಯ ವಿದ್ಯೆ-ಬುದ್ಧಿ ಕೊಡುವ ಹಣೆಬರಹ ಬರೆಯುವಂತೆ ಬೇಡಿಕೊಳ್ಳುವ ಕ್ರಮ ಕೆಲವೆಡೆ ಇದೆಯಂತೆ. ಮಕ್ಕಳು ಕಿರಿಕಿರಿಯಿಂದ ರಂಪ ಮಾಡುವುದನ್ನು ನಿಲ್ಲಿಸಲು ‘ಅರಿಶಿನ ನೀರು ತೆಗೆಯುವ’ ಕ್ರಮ, ದೃಷ್ಟಿ ನೀವಾಳಿಸುವ ಬೇರೆಬೇರೆ ಕ್ರಮಗಳು ಇವೆ. ಒಳ್ಳೆಯ ನಡತೆ ಕಲಿಸಿಕೊಡುವುದಕ್ಕೂ ನಂಬಿಕೆಗಳ ಬಳಕೆ. ಓದುತ್ತಿರುವ ಪುಸ್ತಕವನ್ನು ತೆರೆದಿಟ್ಟು ಹಾಗೇ ನಿದ್ದೆಮಾಡಿದ್ರೆ ಓದಿದ್ದೆಲ್ಲಾ ಮರೆತುಹೋಗುತ್ತೆ ಎನ್ನುವುದರಲ್ಲಿ ನಂಬಿಕೆಯ ಭಾಗ ಮುಖ್ಯವಲ್ಲ, ಪುಸ್ತಕವನ್ನು ಓದಿದಮೇಲೆ ಅಚ್ಚುಕಟ್ಟಾಗಿ ಮುಚ್ಚಿಡಬೇಕು ಎಂಬ ಪಾಠ ಮುಖ್ಯ. ಮನೆಯಲ್ಲಿ ಮಕ್ಕಳು ತುಂಬಾ ಗಲಾಟೆ ಮಾಡುತ್ತಲೇ ಇದ್ದರೆ ಇಡ್ಲಿ/ದೋಸೆಗೆ ರುಬ್ಬಿಟ್ಟ ಹಿಟ್ಟು ಉಬ್ಬುವುದೇ ಇಲ್ಲ ಎಂಬ ನಂಬಿಕೆ; ರುಚಿರುಚಿಯಾದ ಇಡ್ಲಿ ದೋಸೆ ಬೇಕು ಅಂತಾದ್ರೆ ಗಲಾಟೆ ಮಾಡಬೇಡಿ ಎಂದು ಮಕ್ಕಳನ್ನು ದಬಾಯಿಸುವುದಕ್ಕೆ ಅದೊಂದು ದಾರಿ! ಕಾಯಿ ತುರಿಯುವಾಗ, ಅಥವಾ ಒರಳಿನಲ್ಲಿ ರುಬ್ಬುವಾಗ ನಡುವೆ ತಿಂದರೆ ಮುಂದೆ ಮದುವೆಯ ದಿನ ಮಳೆ ಬಂದು ಅಡ್ಡಿಪಡಿಸುತ್ತದೆ ಎನ್ನುವುದರಲ್ಲೂ ಮದುವೆದಿನದ ಮಳೆ ಮುಖ್ಯವಲ್ಲ, ಅಡುಗೆ ಮಾಡುತ್ತಿರುವಾಗ ಹಾಗೆಲ್ಲ ತಿನ್ನುವ ಅಭ್ಯಾಸ ಒಳ್ಳೆಯದಲ್ಲ ಎಂಬ ಕಿವಿಮಾತು ಮುಖ್ಯ.
ಬಿಕ್ಕಳಿಕೆ ಬಂದಾಗ ‘ಏನನ್ನೋ ಕದ್ದುತಿಂದಿದ್ದಿ, ಅದಕ್ಕೇ ಬಿಕ್ಕುತ್ತಿದ್ದೀ’ ಎನ್ನುವುದು ಬಿಕ್ಕಳಿಕೆಯಿಂದ ಗಮನವನ್ನು ಬೇರೆಡೆ ಸೆಳೆಯುವುದಕ್ಕೆ, ತನ್ಮೂಲಕ ಬಿಕ್ಕಳಿಕೆ ನಿಲ್ಲಿಸುವುದಕ್ಕೆ.
ಮನೆಯೊಳಗಡೆ ಶಿಳ್ಳೆ(ವಿಸಲ್) ಹಾಕಬಾರದು, ರಾತ್ರಿಹೊತ್ತು ಉಗುರು ಕತ್ತರಿಸಬಾರದು, ಮಂಗಳವಾರ ಕ್ಷೌರ ಮಾಡಿಸಬಾರದು ಮುಂತಾದುವು ಕೂಡ ಒಂದು ನಮೂನೆಯಲ್ಲಿ
ಶಿಸ್ತು, ಸ್ವಚ್ಛತೆ, ಸಭ್ಯತೆಗಳು ಮೈಗೂಡುವಂತೆ ಮಾಡುವ ಉದ್ದೇಶವುಳ್ಳವು.
ದೈನಂದಿನ ಜೀವನದಲ್ಲಿ ಇನ್ನೂ ಕೆಲವು ಸ್ವಾರಸ್ಯಕರ ನಂಬಿಕೆಗಳು, ಹಿಂದಿನ ಕಾಲದಲ್ಲಿದ್ದವು. ಬದಲಾದ ಜೀವನಶೈಲಿಯಿಂದಾಗಿ ಬಹುಶಃ ಅವು ಊರ್ಜಿತದಲ್ಲಿಲ್ಲ. ಒಲೆ ಕೂಗಿದ್ರೆ
ಆದಿನ ಯಾರೋ ನೆಂಟರು ಬರ್ತಾರೆ ಅಂತೊಂದು ನಂಬಿಕೆ. ಒಲೆ ಕೂಗೋದು ಅಂದ್ರೇನು? ಇನ್ನೇನಿಲ್ಲ, ಉರಿಯುತ್ತಿರುವ ಸೌದೆ ಬುರ್ರ್‌ಬುರ್ರ್ ಎಂದು ಶಬ್ದ ಮಾಡುವುದು. ಯಾವಾಗಲೂ ಈ ಶಬ್ದ ಆಗುವುದಿಲ್ಲ. ಯಾವತ್ತಾದ್ರೂ ಅಪರೂಪಕ್ಕೆ ಬರುತ್ತದೆ. ಆಗಿನ ಕಾಲದಲ್ಲಿ ‘ನೆಂಟರು ಬರುವುದು’ ಎನ್ನುವುದೂ ಅಪರೂಪದ ಅನಿರೀಕ್ಷಿತ ಆನಂದದಾಯಕ ಪ್ರಕ್ರಿಯೆ. ಈಗ ನೆಂಟರು ಬರುವುದಿದ್ದರೂ ವಾಟ್ಸ್ಯಾಪ್‌ನಲ್ಲಿ ತಿಳಿಸಿ ಎಪಾಯಿಂಟ್‌ಮೆಂಟ್ ತೆಗೆದುಕೊಂಡೇ ಬರಬೇಕು. ಅಲ್ಲದೇ ಈಗ ಹಳ್ಳಿಗಳಲ್ಲೂ ಗ್ಯಾಸ್ ಒಲೆಗಳು ಇರುವುದರಿಂದ ಸೌದೆ ಉರಿಸುವ, ಅದು ಬುರ್ರ್ ಬುರ್ರ್ ಎನ್ನುವ ಪ್ರಮೇಯವೇ ಇಲ್ಲವಲ್ಲ! ಕಾಗೆಯು ಅಕ್ಕಿ ತೊಳೆದು ಅನ್ನಕ್ಕಿಡುತ್ತಿದೆ ಅಂದ್ರೆ ಇವತ್ತು ಯಾರೋ ನೆಂಟರು
ಬರ್ತಾರೆ ಎಂಬ ಇನ್ನೊಂದು ನಂಬಿಕೆ ಇದೆ.
ಕಾಗೆಯ ವಿಚಿತ್ರವಾದೊಂದು ಕೂಗಿಗೆ ಆ ಅರ್ಥ. ಹಾಗೆಯೇ ‘ಕಾ ಕಾ…’ ಬದಲು ‘ಸಾ… ಸಾ…’ ಎಂದು ವಿಚಿತ್ರಧ್ವನಿ ಮಾಡಿದರೆ ಏನೋ ಸಾವಿನ ಸುದ್ದಿಯಿದೆಯೆಂದು ಅರ್ಥ! ಅಡಿಕೆ ತೋಟದಲ್ಲಿ ಕೆಂಬೂತ(ಸಾಂಬಾರಕಾಗೆ) ಕಂಡರೆ ಆವತ್ತು ಸಿಹಿ ತಿನ್ನಲು ಸಿಗುತ್ತದೆ, ಮುಸ್ಸಂಜೆಯಲ್ಲಿ ಗೂಬೆ ‘ಹೂಂ’ಗುಡುವುದು ಕೇಳಿದರೆ ಅಡಿಕೆಗೆ ಧಾರಣೆ ಏರುತ್ತದೆ, ಬೆಕ್ಕು ಎಡಕೈಯಿಂದ(ಮುಂಗಾಲಿನಿಂದ) ಮುಖ ಒರೆಸಿಕೊಂಡರೆ ಏನೋಒಂದು… ಪಾರಿವಾಳ ಮನೆಯೊಳಗೆ ಗೂಡು ಕಟ್ಟಿ ಮೊಟ್ಟೆಗಳನ್ನಿಟ್ಟರೆ ಇನ್ನೊಂದು… ನಮ್ಮ ಸುತ್ತಮುತ್ತಲಿನ ಜೀವಿಗಳ ಚಲನವಲನಗಳನ್ನಾಧರಿಸಿದ ಚಂದದ ನಂಬಿಕೆಗಳು.
ವಾರ್ಷಿಕ ಪರೀಕ್ಷೆಯ ರಿಸಲ್ಟ್ಸ್ ಹತ್ತಿರ ಬರ್ತಿದ್ದಂತೆ ಕಪ್ಪುಇರುವೆ ಗೂಡಿನ ಪಕ್ಕ ಕೈ ಇಡೋದು; ಇರುವೆಗಳು ಮೊಣಕೈತನಕ ಬಂದ್ರೆ ಫರ್ಸ್ಟ್‌ಕ್ಲಾಸ್ ಪಾಸ್, ಅದಕ್ಕಿಂತಲೂ ಮೇಲೆ ಬಂದ್ರೆ ಡಿಸ್ಟಿಂಕ್ಷನ್, ಇರುವೆ ಎಲ್ಲಿವರೆಗೆ ಹತ್ತುತ್ತೆ ಅನ್ನೋದ್ರ ಮೇಲೆ ಮಾರ್ಕ್ಸ್/ಗ್ರೇಡ್ ನಿರ್ಧಾರ. ಕೆಲವೊಮ್ಮೆ ಇರುವೆ ಮೇಲೆ ಹತ್ತುವುದೇ ಇಲ್ಲ ಜಾರಿ ಬೀಳುವುದು. ಈಗ ಒಂಬತ್ತನೆಯವರೆಗೆ ಯಾರೂ ಫೇಲ್ ಆಗುವ ಅವಕಾಶವೇ ಇಲ್ಲವಾದ್ದರಿಂದ ಇರುವೆ-ಭವಿಷ್ಯ ರೆಲವೆನ್ಸ್ ಕಳಕೊಂಡಿದೆ. ಈಗಿನವರು ‘ಔಟ್ ಆಫ್ ಔಟ್’ ಮಾರ್ಕ್ಸ್ ಬರುತ್ತೋಇಲ್ಲವೋ ಎಂದು ಶಕುನ ನೋಡಿಯಾರು.
ಬೆಕ್ಕು ಅಡ್ಡಬಂದರೆ ಅಪಶಕುನ, ಎಡಗಣ್ಣು ಉದುರಿದರೆ ಹಾಳು, ೧೩ನೆಯ ತಾರೀಕು ಶುಕ್ರವಾರ ಬಂದರೆ ಗೋಳು… ರೀತಿಯ ನೆಗೆಟಿವ್ ನಂಬಿಕೆಗಳು ನನಗೆ ಇಷ್ಟವಿಲ್ಲ. ಅದೇ
ಕಾರಣಕ್ಕೆ ಗೌಳೀಪತನ ಶಾಸ್ತ್ರ ಅರ್ಥಾತ್ ಹಲ್ಲಿ ಬಿದ್ದ ದೋಷ/ಪರಿಹಾರದ ನಂಬಿಕೆ ಕೂಡ. ಅದಕ್ಕೆ ಪ್ರತಿವರ್ಷದ ಪಂಚಾಂಗದಲ್ಲಿ ಸ್ಥಾನ ಬೇರೆ! ಬರಲಿರುವ ಶೋಭಕೃತ್
ಸಂವತ್ಸರದ ಒಂಟಿಕೊಪ್ಪಲ್ ಪಂಚಾಂಗ ತೆರೆದುನೋಡಿ: ‘ಹಲ್ಲಿ ಬಿದ್ದುದಕ್ಕೆ ಶುಭಾಶುಭ ಫಲಗಳು: ತಲೆಯ ಮೇಲೆ ಬಿದ್ದರೆ ಕಲಹ, ಮುಖದ ಮೇಲೆ ಧನಾಗಮ. ಕಣ್ಣುಗಳ ಮೇಲೆ ತೇಜಸ್ಸು, ಕಣ್ಣುಗಳ ಮಧ್ಯಭಾಗದಲ್ಲಿ ರಾಜಾನುಗ್ರಹ, ಮೂಗಿನ ಮೇಲೆ ಸುಗಂಧವಸ್ತು ಪ್ರಾಪ್ತಿ, ಮೇಲಿನ ತುಟಿಯ ಮೇಲೆ ಧನವ್ಯಯ, ಕೆಳಗಿನ ತುಟಿಯ ಮೇಲೆ ಧನಲಾಭ, ಮೂಗಿನ ಕೊನೆಯಲ್ಲಿ ವ್ಯಾಧಿ ಸಂಭವ, ಎಡಕಿವಿಯ ಮೇಲೆ ವ್ಯಾಪಾರಲಾಭ, ದವಡೆಯ ಮೇಲೆ ಸ್ತ್ರೀಸೌಖ್ಯ, ಎಡ ಭುಜದ ಮೇಲೆ ವ್ಯಥೆ, ಬಲತೋಳಿನ ಮೇಲೆ ಚೋರಭಯ, ಎಡತೋಳಿನ ಮೇಲೆ ಸುಖಪ್ರದ, ಬಲಗೈ ಮೇಲೆ ದ್ರವ್ಯಲಾಭ, ಬೆರಳುಗಳ ಮೇಲೆ ಶುಭ, ಎದೆಯ ಮೇಲೆ ಯಶಸ್ಸು, ಹೊಟ್ಟೆಯ ಮೇಲೆ ಧಾನ್ಯಲಾಭ, ಹೊಕ್ಕಳಿನ ಮೇಲೆ ಸೌಖ್ಯ, ಬಲಮೊಳಕಾಲಿನ ಮೇಲೆ ತೀರ್ಥಯಾತ್ರೆ, ಎಡಮೊಳಕಾಲಿನ ಮೇಲೆ ಕಾರ್ಯಸಿದ್ಧಿ, ಕಾಲುಗಳ ಮೇಲೆ ಪ್ರಯಾಣವು’ ಎಂದು ಇರುತ್ತದೆ!
ಹಲ್ಲಿ ಬಿದ್ದ ದೋಷಕ್ಕೆ ಪರಿಹಾರವೂ ಇದೆ: ಸಚೇಲ ಸ್ನಾನ ಮಾಡಿ ಇಷ್ಟದೇವರಿಗೆ ತುಪ್ಪದಿಂದ ದೀಪಹಚ್ಚಿ ಗಂಧಪುಷ್ಪದಿಂದ ಅರ್ಚನೆ ಮಾಡಿ ನಮಸ್ಕರಿಸಿ ಪೀಡಾಪರಿಹಾರ ಮಾಡಬೇಕೆಂದು ಪ್ರಾರ್ಥಿಸಬೇಕು; ಭಾನುವಾರ ಬಿದ್ದರೆ ಮೊಸರನ್ನ, ಸೋಮವಾರ ಕ್ಷೀರಾನ್ನ, ತೈಲಪದಾರ್ಥ, ಮಂಗಳವಾರ ಚಿತ್ರಾನ್ನ, ಬುಧವಾರ ಗೋಧಿ ಪದಾರ್ಥ, ಗುರುವಾರ ಪಾಯಸ, ಶುಕ್ರವಾರ ದೋಸೆ, ಶನಿವಾರ ತಿಲಾನ್ನವನ್ನು ದೇವರಿಗೆ ನೈವೇದ್ಯ ಮಾಡಿ ಭುಂಜಿಸಬೇಕಂತೆ. ಆಶ್ಚರ್ಯವೆಂದರೆ ಪ್ರತಿವರ್ಷದ ಪಂಚಾಂಗದಲ್ಲೂ ಇದು ಒಂದೇಥರ ಇರುತ್ತದೆ. ಹಾಗಾದರೆ ಹಲ್ಲಿ ಗ್ರಹ-ನಕ್ಷತ್ರಗಳ ಚಲನೆಯ ಪ್ರಭಾವದಿಂದ ಅತೀತವೇ? ನಮಗೇನೋ ಹಲ್ಲಿ ಬಿದ್ದರೆ ಶುಭಾಶುಭ ನೋಡಲು ಪಂಚಾಂಗವಿದೆ, ಆದರೆ
ಬಡಪಾಯಿ ಹಲ್ಲಿ ಎಷ್ಟು ಹೆದರಿರಲಿಕ್ಕಿಲ್ಲ!
ಅದಕ್ಕಾದ ಮಾನಸಿಕ, ದೈಹಿಕ ಆಘಾತವನ್ನು ನಾವು ಆಲೋಚಿಸಿದ್ದುಂಟೇ? ಮೊದಲೇ ಹಲ್ಲಿ ಮೈಮೇಲೆ ಬಿದ್ದರೆ ‘ಓ ನನ್ ಮೈಮೇಲೆ ಏನೋ ಬಿತ್ತು…’ ಎಂದು ಹೇಸಿಗೆ
ಭಯಗಳಿಂದ ಚೀರಿಡುತ್ತ ಮೈಕೊಡವಿಕೊಳ್ಳುತ್ತೇವೆಯೇ ಹೊರತು ಅದು ಯಾವ ಕೋನದಲ್ಲಿ ಎಷ್ಟು ವೆಲಾಸಿಟಿಯಿಂದ ಎಲ್ಲಿ ಹೇಗೆ ಬಿತ್ತು ಎಂದು ನೋಟ್ ಮಾಡುವ ವ್ಯವಧಾನ ನಮಗಿರುತ್ತದೆಯೇ? ದೋಷ ಪರಿಹಾರದ ನೆಪದಲ್ಲಿ ನಮಗೆ ಭಕ್ಷ್ಯಭೋಜ್ಯ. ಪಾಪ, ಆ ಹಲ್ಲಿ ಯಾವುದೋ ನೊಣವನ್ನೋ, ಹಾತೆಯನ್ನೋ ಹಿಡಿದು ತಿನ್ನಲು ಮುನ್ನುಗ್ಗಿದಾಗ
ಆಯತಪ್ಪಿ ಬಿದ್ದದ್ದಿರಬಹುದು. ಅದರ ಆಹಾರ ಹೇಗೂ ಹೋಯ್ತು; ದೇವರಿಗೆ ಮತ್ತು ನಮಗೆ ನೈವೇದ್ಯಸೇವೆ!