Tuesday, 12th November 2024

ತಿನ್ನೋ ವಿಷ್ಯದಲ್ಲಿ ನಮ್ದು ಹೊಟ್ಟೆ ಪಕ್ಷ ಕಣ್ರೀ

ತುಂಟರಗಾಳಿ

ಹರಿ ಪರಾಕ್

ಲೂಸ್‌ ಟಾಕ್‌

ಸಿದ್ದರಾಮಯ್ಯ
– ಆಹಾ, ಏನ್ ಸಾರ್ ಮತ್ತೆ ಮತ್ತೆ ಮಾಂಸ ತಿಂದು ಜನಗಳ ಬಾಯಿಗೆ ಆಹಾರ ಆಗ್ತೀರಲ್ಲ, ಸರೀನಾ?
ಅಲ್ರೀ, ನಾವ್ ತಿನ್ನೋ ಆಹಾರದ ಬಗ್ಗೆನೂ ಏನ್ರೀ ನಿಮ್ದು ‘ಆಹಾಕಾರ’?
– ಹಾಗಲ್ಲ, ಸಾರ್, ನೀವು ರಾಜಕಾರಣಿಗಳು, ಜನ ನಿಮ್ಮನ್ನ ಪ್ರಶ್ನೆ ಮಾಡೋದೂ ತಪ್ಪಾ?
ಹಂಗಿದ್ರೆ, ರಾಜಕಾರಣಿಗಳು ಲಂಚ ತಿನ್ನೋದನ್ನ ಪ್ರಶ್ನೆ ಮಾಡ್ಬೇಕು ನೀವು, ಕೂತ್ಕೊಂಡ್ ತಿನ್ನುವಷ್ಟು
ಅಸ್ತಿ ಮಾಡಿದಾಗ ಕೇಳಲ್ಲ, ಕೂತ್ಕೊಂಡು ಮಾಂಸ ತಿಂದ್ರೆ ಕೇಳ್ತಿರಾ.
– ಅದೂ ಸರಿನೇ, ಆದ್ರೆ, ನೀವು ಹಿಂದೂ ಧರ್ಮದ ಒಂದು ಪ್ರಮುಖ ಜನಾಂಗಕ್ಕೆ ಸೇರಿದವರು, ನೀವು
ಸಮಾಜಕ್ಕೆ ತಪ್ಪು ಸಂದೇಶ ಕೊಡಬಾರದು ಅಲ್ವಾ?
ಹೌದ್ರೀ, ನಾನು ಕುರುಬಾನೇ. ಹಾಗಂತ ಕುರಿ ಥರ ಬರೀ ಹುಲ್ಲು, ಸೊಪ್ಪು, ಸೆದೆ ಅಂತ ಕುರುಬರೂ ಅದನ್ನೇ
ತಿನ್ನಬೇಕು ಅಂದ್ರೆ ಹೆಂಗೆ. ನಂಗೆ ಕುರಿ ಕರಿ ಇಷ್ಟ ತಿಂತೀನಿ ಅಷ್ಟೇ.
– ಕುರಿ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ ಸರ್, ಜನ ಕೇಳ್ತಾ ಇರೋದು ದನಗಳ ಬಗ್ಗೆ.
ರೀ, ಇನ್ನೊಬ್ರು ತಿನ್ನೋ ವಿಷಯದಲ್ಲೂ ಬಾಯಿ ಹಾಕ್ತಿರಲ್ರಿ, ಹೊಟ್ಟೆಗೇನ್ ತಿಂತೀರಾ? ಹೋಗ್ರೀ, ಸುಮ್ನೆ ತಲೆ
ತಿನ್ಬೇಡಿ, ಏ, ಯಾರಪ್ಪಾ ಅಲ್ಲಿ, ಒಂದ್ ತಲೆ ಮಾಂಸ ತಗೊಂಬಾರ್ಲಾ.
– ಹೋಗ್ಲಿ, ನಿಮ್ಮ ಕಾಂಗ್ರೆಸ್ ಪಕ್ಷ ಹಿಂದೂಗಳ ವಿಷಯದಲ್ಲಿ ಯಾವಾಗ್ಲೂ ಹಿಂಗೇ ಕಿರಿಕ್ ಮಾಡುತ್ತೆ ಅಂತ ಜನ
ಅಂತಿದಾರೆ. ನೀವೇನಂತೀರಾ?
ನೋಡ್ರಿ, ಇಲ್ಲಿ ಪಕ್ಷ ಎಲ್ಲ ಲೆಕ್ಕಕ್ಕೆ ಬರಲ್ಲ ಕಣ್ರೀ, ತಿನ್ನೋ ವಿಷ್ಯದಲ್ಲಿ ನಮ್ದೇನಿದ್ರೂ ಬರೀ ಹೊಟ್ಟೆ ಪಕ್ಷ.

ಸಿನಿಗನ್ನಡ

ಕನ್ನಡದ ಚಿತ್ರಸಾಹಿತಿ ಶ್ರೀರಂಗ ಅಲಿಯಾಸ್ ಭಂಗಿರಂಗ ಅವರ ಇಂದಿನ ಶೋಚನೀಯ ಪರಿಸ್ಥಿತಿಯ ಬಗ್ಗೆ ಈಗ ಸಾಕಷ್ಟು ಚರ್ಚೆ ಆಗುತ್ತಿದೆ. ಮೊನ್ನೆ -ಸ್ಬುಕ್‌ನಲ್ಲಿ ನಟ ಸಂಚಾರಿ ವಿಜಯ್ ಶ್ರೀರಂಗ ಅವರನ್ನು ಭೇಟಿ ಮಾಡಿ ಅವರ ಬಗ್ಗೆ ಒಂದು ಪೋಸ್ಟ್ ಹಾಕಿದ್ದರು. ಚಿತ್ರರಂಗದಲ್ಲಿ ಜೀವನ ಪೂರ್ತಿ ದುಡಿದು ಈಗ ಶೋಚನೀಯ ಪರಿಸ್ಥಿತಿಯಲ್ಲಿರುವ ಅನೇಕ ಜನರನ್ನು ನಾವು ನೋಡಿದ್ದೇವೆ.

ಈ ವಿಷಯದಲ್ಲಿ ಕೆಲವರದು ಸ್ವಯಂಕೃತ ಅಪರಾಧ ಆದ್ರೆ ಇನ್ನು ಕೆಲವರ ನೇರ ನುಡಿ, ನಿಷ್ಠುರ ವರ್ತನೆ ಅವರಿಗೆ ಹಣ ಮಾಡುವ ಅವಕಾಶ ಕೊಟ್ಟಿರುವುದಿಲ್ಲ. ಅಂಥವರ ಸಾಲಿನಲ್ಲಿ ಶ್ರೀರಂಗ ಅವರೂ ಇzರೆ. ಅದಕ್ಕೊಂದು ಉದಾಹರಣೆ ಇಲ್ಲಿದೆ. ಶ್ರೀರಂಗ ಅವರು ತಾವೇ ಒಂದು ಚಿತ್ರ ಬರೆದು ನಿರ್ದೇಶನ ಮಾಡುವ ಆಸೆ ಇಟ್ಟುಕೊಂಡಿದ್ದರು. ಆದರೆ ಅವರ ಸ್ಕ್ರಿಪ್ಟ್ ನೋಡಿದ ಕನ್ನಡದ ಖ್ಯಾತ ನಟ ನಿರ್ದೇಶಕರೊಬ್ಬರು, ನಿಮ್ಮ ಕೈಲಿ ನಿರ್ದೇಶನ ಎಲ್ಲ ಮಾಡೋಕಾಗಲ್ಲ, ನಂಗೆ ಕೊಡಿ ಇದನ್ನ ಹೆಂಗೆ ತೆರೆ ಮೇಲೆ ತರ್ತೀನಿ ನೋಡಿ ಅಂತ ಬಲವಂತ ಮಾಡಿ ಸ್ಕ್ರಿಪ್ಟ್ ಇಸ್ಕೊಂಡ್ರಂತೆ.

ಇಷ್ಟವಿಲ್ಲದಿದ್ದರೂ ತಮ್ಮ ಸ್ಕ್ರಿಪ್ಟ್ ಅನ್ನು ಬಿಟ್ಟು ಕೊಟ್ಟ ಶ್ರೀರಂಗ ಅವರ ಬಳಿ ಆ ನಿರ್ದೇಶಕರು ಸಿನಿಮಾ ಮುಗಿಸಿದ್ದೀನಿ, ಬನ್ನಿ ನೋಡಿ ಅಂತ ಕರೆದು ತೋರಿಸಿ, ನೋಡಿ ಹೆಂಗಿದೆ, ನಿಮ್ಮ ಕೈಲಿ ಹಿಂಗೇ ಮಾಡೋಕಾಗ್ತಿತ್ತಾ ಅಂತ ಬಿಲ್ಡ ಅಪ್ ಕೊಟ್ರಂತೆ. ಅದಕ್ಕೆ ಶ್ರೀರಂಗ ಅವರು ಹೇಳಿದ್ದು ಒಂದೇ ಮಾತು ‘ನೋಡಪ್ಪಾ ಮೂಗಿನ್ ಕೆಳಗೆ ಬಂದ್ರೆ ಮಾತ್ರ ಅದನ್ನ ಮೀಸೆ ಅನ್ನೋದು’. ಆಮೇಲೆ ಆ ಸಿನಿಮಾ ಫ್ಲಾಪ್ ಆಯ್ತು. ಅದು ಬೇರೆ ವಿಷಯ ಬಿಡಿ.

ಅಂದಹಾಗೆ ನಮ್ಮ ಶ್ರೀರಂಗ ಅವರು ಕೇವಲ ಚಿತ್ರರಂಗಕ್ಕೆ ಮಣ್ಣು ಹೊತ್ತಿಲ್ಲ, ನಮ್ಮೆಲ್ಲರ ಹೆಮ್ಮೆ ಎನಿಸಿಕೊಂಡಿರುವ ಬೆಂಗಳೂರಿನ ವಿಧಾನ ಸೌಧ ಕಟ್ಟೋಕೆ ಕಲ್ಲು ಕೂಡಾ ಹೊತ್ತಿದ್ರು ಅನ್ನೋದು ತುಂಬಾ ಜನಕ್ಕೆ ಗೊತ್ತಿಲ್ಲ. ಅಂಥವರಿಗೆ ಒಳ್ಳೆಯದಾಗಲಿ.

ನೆಟ್ ಪಿಕ್ಸ್
ಕೆಲಸದ ಹೆಂಗಸು ಕಮಲ, ಯಜಮಾನಿ ಹತ್ರ ಬಂದು ಮುಂದಿನ ತಿಂಗಳಿಂದ ನನ್ನ ಸಂಬಳ ಜಾಸ್ತಿ ಮಾಡಿ ಅಂತ ಕೇಳಿದ್ಲು. ಅದಕ್ಕೆ ಯಜಮಾನಿ, ಅ, ನೀನೇನು ಮಹಾ ಕೆಲಸ ಮಾಡ್ತಿಯಾ ಅಂತ ನಿಂಗೆ ಸಂಬಳ ಜಾಸ್ತಿ ಮಾಡಬೇಕು ಅಂತ ಉಲ್ಟಾ ದಬಾಯಿಸಿದ್ಲು. ಅದಕ್ಕೆ ಕಮಲ ಹೇಳಿದ್ಲು ‘ನೋಡಿ, ಅಮ್ಮಾವ್ರೇ, ನನಗೆ ಯಾಕೆ ಸಂಬಳ ಜಾಸ್ತಿ ಮಾಡಬೇಕು ಅನ್ನೋದಕ್ಕೆ ನಾನು ಮೂರು ಕಾರಣ ಹೇಳ್ತಿನಿ’
‘ಸರಿ, ಹೇಳು’
‘ಮೊದಲನೆಯದು ನಾನು ಅಡುಗೆ ಮನೆಯಲ್ಲಿ ನಿಮಗಿಂತ ಚೆನ್ನಾಗಿ ಕೆಲಸ ಮಾಡ್ತೀನಿ’
‘ಯಾರು ಹೇಳಿದ್ದು?’
‘ನಿಮ್ಮ ಗಂಡ’
‘ಸರಿ, ಎರಡನೆಯದು?’
‘ನಾನು ಹಿತ್ತಲ ಕಡೆನೂ ನಿಮಗಿಂತ ಚೆನ್ನಾಗಿ ಕೆಲಸ ಮಾಡ್ತೀನಿ’
‘ಯಾರ್ ಹೇಳಿದ್ದು?’
‘ನಿಮ್ಮ ಗಂಡ’
‘ಸರಿ, ಮೂರನೆಯದು?’
‘ನಾನು ಬೆಡ್ ರೂಮಲ್ಲೂ ನಿಮಗಿಂತ ಬೆಟರ್’
‘ಇದನ್ನೂ ನನ್ ಗಂಡನೇ ಹೇಳಿದ್ದೆ?’
‘ಅಲ್ಲ, ನಮ್ಮನೆ ವಾಚ್ ಮ್ಯಾನ್’
‘ಸರಿ, ಸಂಬಳ ಎಷ್ಟು ಜಾಸ್ತಿ ಮಾಡ್ಬೇಕು’.

ಲೈನ್ ಮ್ಯಾನ್
ಚಿಲ್ಲಿ ಚಿಕನ್‌ನಲ್ಲಿ ಚಿಕನ್‌ನಂತೆ ಕಾಣುವ ಕ್ಯಾಪ್ಸಿಕಮ್ ತುಂಡು
-ಡಮ್ಮಿ ‘ಪೀಸ್’
ನಲ್ಲಿ ರಿಪೇರಿ ಮಾಡುವವನು
-‘ನಳ’ ಮಹಾರಾಜ
ಚರ್ಚ್ ಗಳಿರುವ ದಾರಿ
– ‘ಕ್ರಾಸ್’ ರೋಡ್
ಜನವರಿ ೧ನೆ ತಾರೀಖು, ಯೋಗಿ ಆದಿತ್ಯನಾಥ್ ೨೦೨೦ಕ್ಕೆ ಹೇಳಿದ್ದೇನು?
ಆಜ್ ಸೆ ತುಮಾರಾ ನಾಮ್ ೨೦೨೧
ಕೆಟ್ಟ ಕಂಠದವರಿಗೆ ಇರುವ ಸಾಮರ್ಥ್ಯ
– ರಾಗ ನಿರೋಧಕ ಶಕ್ತಿ
ಬಿಜೆಪಿಯವರಿಗೆ ಬೇಕಾಗಿರೋ ಸಾಮರ್ಥ್ಯ
– ‘ರಾಗಾ’ ನಿರೋಧಕ ಶಕ್ತಿ
ಅತಿ ಹೆಚ್ಚು ‘ಬ್ಲ್ಯಾಕ್’ ಮನಿ ಇರೋ ಜಾಗ
– ಆಫ್ರಿಕಾ
ಸಾಲ ಕೊಟ್ಟವರಿಂದ ತಪ್ಪಿಸಿಕೊಳ್ಳಲು ಮನೆಯ ಅಡಗಿ ಕೂತರೆ ಅದು
– ಹೋಮ್ ಅ ‘ಲೋನ್’