Sunday, 15th December 2024

ನೆತ್ತಿಂಗ, ಗೂಬೆಗಳ ಲೋಕದಲ್ಲಿ ಒಂದು ಸುತ್ತು

ಶಶಾಂಕಣ

shashidhara.halady@gmail.com

ಕಾಲೇಜು ವಿದ್ಯಾಭ್ಯಾಸದ ನಂತರ, ಒಂದು ವರ್ಷಕ್ಕೂ ಮೀರಿದ ಅವಧಿಯನ್ನು ನಮ್ಮ ಹಳ್ಳಿಯಲ್ಲೇ ಕಳೆಯಬೇಕಾಗಿತ್ತು. ಆಗೆಲ್ಲಾ
ವಿದ್ಯಾಭ್ಯಾಸದ ನಂತರ, ಕೆಲಸ ಹುಡುಕುವುದೇ ಒಂದು ಸಾಹಸ. ಅಂಥ ಸಂದರ್ಭಗಳಲ್ಲಿ ಹವ್ಯಾಸಗಳು ಕೈಗೆ ಬರುತ್ತವೆ: ಒಳ್ಳೆಯ ಹವ್ಯಾಸದ ಜತೆ ಕೆಟ್ಟವೂ ಬಲಿಯಲು ಇದೂ ಒಂದು ಕಾಲ!

ಆ ಕಾಲದಲ್ಲಿ ಪಕ್ಷಿವೀಕ್ಷಣೆಯ ಹುಚ್ಚು ಹಚ್ಚಿಸಿಕೊಂಡು ಮನೆಯ ಹಿಂದಿನ ಹಕ್ಕಲು, ಹಾಡಿ, ಸೊಪ್ಪಿನ ಅಣೆ, ಬಳ್ಳಿಹರ, ಗುಡ್ಡದ ನಡುವಿನ ತೋಡು, ಹರನಗುಡ್ಡ ಈ ಫಸಲೆಯ ಕಾಡು, ಬೆಟ್ಟಗಳಲ್ಲಿ ಸುತ್ತಾಡುತ್ತಿದ್ದೆ. ಸಲೀಂ ಅಲಿಯವರ ‘ಬುಕ್ ಆಫ್ ಇಂಡಿಯನ್ ಬರ್ಡ್ಸ್’ ಪುಸ್ತಕವನ್ನು ಸಾರ್ವಜನಿಕ ಲೈಬ್ರರಿಯಿಂದ ತಂದು, ಅದರಲ್ಲಿದ್ದ ಹಕ್ಕಿಗಳಚಿತ್ರಗಳನ್ನು ನೋಡಿ, ಅದ್ಭುತ ವಾದ ಅರ್ಧಪುಟದ ವಿವರಣೆ ಓದಿ, ಆ ಹಕ್ಕಿಯನ್ನು ಮನೆಯ ಸುತ್ತಮುತ್ತ ಹುಡುಕುವುದು, ಅದು ಕಣ್ಣಿಗೆ ಬಿದ್ದರೆ ಸಂಭ್ರಮಿಸು ವುದು ನನ್ನ ಹವ್ಯಾಸವಾಗಿತ್ತು. ಹೀಗೆ ಒಂದೊಂದೇ ಹಕ್ಕಿಯನ್ನು ಗುರುತಿಸುತ್ತಾ ಬಂದಂತೆ, ಆ ಪುಸ್ತಕದ ಕೊನೆ ಯಲ್ಲಿದ್ದ ಸದಸ್ಯರ ಸಂಖ್ಯೆ ಗುರುತು ಮಾಡುವ ಪುಟ ನನ್ನ ಕ್ರಮಸಂಖ್ಯೆಯಿಂದ ತುಂಬಿಹೋಯಿತು!

ದಟ್ಟ ಕಾಡಿನ ಹಕ್ಕಿಗಳನ್ನು ಗುರುತಿಸಲು ಅವರೇ ಬರೆದಿದ್ದ ‘ಇಂಡಿಯನ್ ಹಿಲ್ ಬರ್ಡ್ಸ್’ ಎಂಬ ಪುಸ್ತಕ ನಮ್ಮ ಕಾಲೇಜು ಲೈಬ್ರರಿಯಲ್ಲಿ ಸಿಕ್ಕಿತು. ಇಂಗ್ಲೆಂಡ್‌ನಲ್ಲಿ ಮುದ್ರಣಗೊಂಡಿದ್ದ, ಸುಂದರ ವರ್ಣಚಿತ್ರಗಳಿದ್ದ ಅಂಥ ಇನ್ನೊಂದು ಪುಸ್ತಕವನ್ನು ಆಗಿನ ಕಾಲದಲ್ಲಿ ನಾನು ನೋಡಿರಲಿಲ್ಲ. ನಮ್ಮ ಮನೆಯ ಹಿಂಭಾಗದಲ್ಲಿ, ಮರ-ಗಿಡ-ಬಳ್ಳಿಗಳೇ ತುಂಬಿದ್ದ ಹಕ್ಕಲಿನ ಪುಟ್ಟ ಮರವೊಂದನ್ನು ಏರಿ, ಅಲ್ಲಿನ ಕೊಂಬೆಗಳನ್ನೇ ನೋಡುತ್ತಾ ಕುಳಿತಿದ್ದ ನನ್ನನ್ನು ಕಂಡು, ಆ ಜಾಗಕ್ಕೆ ಸೊಪ್ಪು, ಸೌದೆ ತರಲು ಬರುತ್ತಿದ್ದ ಆಚೀಚೆಗಿನ ಮನೆಯವರು ಈ ಹುಡುಗನಿಗೆ ಏನಾಗಿದೆ ಎಂದು ತಲೆಕೆರೆದುಕೊಂಡದ್ದೂ ಉಂಟು!

ನಮ್ಮ ಹಳ್ಳಿ ಹಾಲಾಡಿಯ ಸುತ್ತಮುತ್ತಲೂ ಇದ್ದ ವಿವಿಧ ಪ್ರಭೇದಗಳ ಗೂಬೆಗಳನ್ನು ನಾನು ಗುರುತಿಸಿದ್ದು ಒಂದು ಕುತೂಹಲ ಕಾರಿ ಕಥೆ. ಬೆಳದಿಂಗಳ ರಾತ್ರಿಗಳಲ್ಲಿ, ಕತ್ತಲಿನ ಲೋಕದಲ್ಲಿ ನಿಗೂಢವಾಗಿ ಕೂಗುತ್ತಿದ್ದ ಗೂಬೆಗಳೆಂದರೆ, ನಮ್ಮ ಹಳ್ಳಿಯವರಿಗೆ
ಒಂಥರಾ ದಿಗಿಲು. ಮಕ್ಕಳು ಹಠ ಮಾಡಿದರೆ, ಗುಮ್ಮನನ್ನು ಕರೆಯುತ್ತೇನೆ ಎಂದು ತಾಯಂದಿರು ಹೆದರಿಸುತ್ತಿದ್ದರು. ಎಲ್ಲರಲ್ಲೂ ಸಣ್ಣಗೆ ಭಯ ಹುಟ್ಟಿಸುತ್ತಾ, ಕಗ್ಗತ್ತಲಿನಲ್ಲೇ ಹಾರಾಡುತ್ತಾ, ತಮ್ಮ ಪ್ರಮುಖ ಬೇಟೆ ಎನಿಸಿರುವ ಇಲಿ, ಹೆಗ್ಗಣಗಳನ್ನು ಹಿಡಿಯು ತ್ತಿದ್ದ ಗೂಬೆಗಳೆಂದರೆ ‘ಅಪಶಕುನ’ ಎಂಬ ಅಭಿಪ್ರಾಯ. ಜತೆಗೆ, ಅವುಗಳ ಮುಖವೋ ಮನುಷ್ಯನ ಮುಖವನ್ನೇ ಹೋಲುತ್ತಿತ್ತಲ್ಲ! ‘ಊ ಹೂಂ ಊ’ ಎಂದು ೩ ಕೂಗು ಕೂಗುವ ಮಾಮೂಲಿ ಗೂಬೆಗಳದ್ದು (ಬ್ರೌನ್ ಫಿಶ್ ಔಲ್, ಮೀನು ಗೂಬೆ) ಒಂದು ಪಟ್ಟಾದರೆ, ‘ಉ ಹೂಂ’ ಎಂದು ಎರಡೇ ಬಾರಿ ಆಳವಾಗಿ ಕೂಗುವ ಕೊಂಬಿನ ಗೂಬೆಗಳು ಮೂಡಿಸುತ್ತಿದ್ದ ಭಯದ ಪಟ್ಟು ಇನ್ನೊಂದು ಆಯಾಮದ್ದು. ಮಕ್ಕಳನ್ನು ಹೆದರಿಸಲು ಗೂಬೆಯ ಕೂಗನ್ನು ಅನುಕರಿಸುತ್ತಿದ್ದುದು ನಮ್ಮೂರಿನಲ್ಲಿ ಮಾಮೂಲು. ದಾಸರ ಗೀತೆಗಳಲ್ಲೇ ‘ಗುಮ್ಮನ ಕರೆಯದಿರೇ ಅಮ್ಮಾ ನೀನು’ ಎಂದು ಮಗುವೊಂದು ವಿನಂತಿ ಮಾಡಿತ್ತಲ್ಲವೆ!

‘ಭೂತಹಕ್ಕಿ ಅದು, ಮನೆ ಹತ್ತಿರ ಬಂದು ಮರದ ಮೇಲೆ ಕುಳಿತು ಕೂಗಿದರೆ ಅಪಶಕುನ. ಆ ಸುತ್ತಲಿನ ಯಾರದ್ದಾದರೂ ಮನೆ ಯಲ್ಲಿ ಸಾವು ಸಂಭವಿಸಬಹುದು’ ಎಂಬ ಮೂಢನಂಬಿಕೆ ನಮ್ಮೂರಿನಲ್ಲಿತ್ತು. ಆಳವಾದ ನಿಗೂಢದನಿಯಲ್ಲಿ ಉ ಹೂಂ ಎಂದು ಕೂಗುವ ಗ್ರೇಟ್ ಹಾರ್ನ್ಡ್ ಔಲ್ ಅಥವಾ ಕೊಂಬಿನ ಗೂಬೆ, ಆ ಭಯಕ್ಕೆ ಕಾರಣ. ಬೆಳದಿಂಗಳ ನಡುರಾತ್ರಿಯಲ್ಲಿ ಈ ಗೂಬೆಗಳು ನಮ್ಮ ಮನೆಯ ಸುತ್ತಮುತ್ತ ಆಗಾಗ ಕೂಗುತ್ತಿದ್ದವು. ಸಾಮಾನ್ಯ ಎನಿಸಿದ್ದ ಮೀನುಗೂಬೆಗಳ ಕೂಗು ಆಗಾಗ ಕೇಳುತ್ತಿದ್ದರೂ, ಕೊಂಬಿನ ಗೂಬೆಗಳ ಕೂಗು ತುಸು ಅಪರೂಪ.

ವರ್ಷಕ್ಕೆ ನಾಲ್ಕಾರು ಬಾರಿ ಮಾತ್ರ ಕೇಳಿಸುತ್ತಿತ್ತು. ರಾತ್ರಿಯಲ್ಲಿ ಅದು ಕೂಗಿದ್ದನ್ನು ಕೇಳಿದರೆ, ಮರುದಿನ ನಮ್ಮ ಅಮ್ಮಮ್ಮ ತುಸು ದಿಗಿಲಿನಿಂದ ‘ನಿನ್ನೆ ರಾತ್ರಿ ಭೂತಹಕ್ಕಿ ಕೂಗುತ್ತಿತ್ತು’ ಎಂದು ಪಿಸುನುಡಿಯುತ್ತಾ, ಕಣ್ಣುಗಳನ್ನು ಭಯದ ಛಾಯೆಯಲ್ಲಿ ಹೊರಳಿ ಸುತ್ತಾ, ಇನ್ನಷ್ಟು ದಿಗಿಲು ಹುಟ್ಟಿಸುತ್ತಿದ್ದರು. ಭೂತದ ಸ್ವರೂಪದ, ಭೂತದ ಶಕ್ತಿ ಹೊಂದಿದ ಹಕ್ಕಿ ಎಂಬ ಅವರ ಆ ತಿಳಿವಳಿಕೆ, ಮೂಢನಂಬಿಕೆ, ಪುರಾತನ ಕಾಲದ್ದು, ಅವರ ಬಾಲ್ಯದಲ್ಲಿ ಗಳಿಸಿಕೊಂಡಿದ್ದು.

ಬ್ರೌನ್‌ಫಿಶ್ ಔಲ್ ಅಥವಾ ಮೀನುಗೂಬೆ ನಮ್ಮೂರಿನಲ್ಲಿ ಬಹುಸಾಮಾನ್ಯ. ನಮ್ಮ ಮನೆಯೆದುರು ಉದ್ದಕ್ಕೂ ಹಾದುಹೋಗಿದ್ದ ಗದ್ದೆ ಬಯಲಿನ ತುದಿಯಲ್ಲಿ ನೀರು ಹರಿಯುವ ತೋಡು. ಅಲ್ಲೆಲ್ಲಾ ಅದಕ್ಕೆ ಬೇಕಾದ ಆಹಾರ ಹೇರಳ. ಮನೆಯ ಹಿಂದಿನ ಹಕ್ಕಲಿನಲ್ಲಿ ಹಗಲು ಹೊತ್ತಿನಲ್ಲಿ ಯಾವುದಾದರೂ ಮರದ ಮೇಲೆ ಅದು ಕುಳಿತು ನಮ್ಮತ್ತಲೇ ಮುಖ ತಿರುಗಿಸುತ್ತಾ ದಿಟ್ಟಿಸಿ ನೋಡುವ ನೋಟವೇ ಚಂದ. ತಲೆಯ ಮೇಲೆ ಕೊಂಬಿನ ರೀತಿ ಎರಡು ಗರಿಗಳು, ಹೊಳೆವ ದುಂಡಗಿನ ಕಣ್ಣುಗಳು, ದುಂಡು ಮುಖ, ಮನುಷ್ಯನ ಮೂಗನ್ನು ಹೋಲುವ ಕೊಕ್ಕು, ಗುಂಡುಗುಂಡು ದೇಹ ಎಲ್ಲಾ ಸೇರಿ ಗಂಭೀರಭಾವ ಮೂಡಿಸುವ ಹಕ್ಕಿ. ಹಕ್ಕಲಿನ ಪುಟ್ಟ ಮರವೊಂದರ ಕೊಂಬೆಯ ಮೇಲೆ ಸುಮ್ಮನೆ ಕುಳಿತಿದ್ದ ಆ ಗೂಬೆಯನ್ನು ಹಲವು ಬಾರಿ ನೋಡಿದ್ದೆ.

ಇಳಿಸಂಜೆಯ ಹೊತ್ತಿನಲ್ಲಿ ‘ಊ ಹೂಂ ಊ’ ಎಂಬ ೩ ಭಾಗದ ಕೂಗು ಕೇಳಿದರೆ, ಅದು ಮೀನುಗೂಬೆಯದ್ದೇ. ಒಂದು ಜೋಡಿ
ಗೂಬೆಗಳು ಹೀಗೆ ‘ಊ ಹೂಂ ಊ’ ಎಂದು ಪರಸ್ಪರ ಮಾತನಾಡುವ ರೀತಿ ಕೂಗುವ ಪರಿ ವಿಶಿಷ್ಟ. ಮೀನುಗೂಬೆ ಮತ್ತು ಕೊಂಬಿನ
ಗೂಬೆಗಳು (ಭೂತಹಕ್ಕಿ) ನೋಡಲು ಒಂದೇ ರೀತಿ ಇದ್ದು, ಕಾಲಿನ ಮೇಲಿನ ತುಪ್ಪಳದ ವಿನ್ಯಾಸ ಮತ್ತು ಅವು ಕೂಗುವ ಶೈಲಿ ಯಿಂದ ಮಾತ್ರ ಭಿನ್ನತೆಯನ್ನು ಗುರುತಿಸಬಹುದು ಎಂದು ಸಲೀಂ ಅಲಿ ಬರೆದಿದ್ದಾರೆ.

ಹಾಲಾಡಿಯ ಸುತ್ತಮುತ್ತಲಿನ ಹಾಡಿ, ಹಕ್ಕಲುಗಳಲ್ಲಿ ನಿಜಕ್ಕೂ ಭಯ ಹುಟ್ಟಿಸುವ ಒಂದು ಪ್ರಭೇದದ ಗೂಬೆ ಇದೆ. ನಮ್ಮ ಅಮ್ಮಮ್ಮನ ಪುರಾತನ ಜ್ಞಾನದ ಪ್ರಕಾರ ಇದರ ಹೆಸರು ‘ಜಕಣಿ ಹಕ್ಕಿ’. ಈ ಗೂಬೆ ತುಸು ಅಪರೂಪದ್ದು. ನಮ್ಮ ಮನೆಯ ಹಿಂಭಾಗದ ಹಕ್ಕಲು ದಾಟಿ, ಒಂದೆರಡು ಕಿ.ಮೀ. ಕಾಡಿನಲ್ಲೇ ನಡೆದರೆ ಬಳ್ಳಿ ಹರ ಮತ್ತು ಹರನಗುಡ್ಡದ ಕಾಡು ಸಿಗುತ್ತದೆ. ಅಲ್ಲಿ ಕೆಲವು ಭಾರಿ ಗಾತ್ರದ ಮರಗಳಿದ್ದು, ದಟ್ಟಕಾಡಿನ ಸ್ವರೂಪ ಅಲ್ಲಿನ್ನೂ ಇದೆ. ಒಮ್ಮೆ ನಾನು ಮತ್ತು ಗಾಣದಡಿ ದ್ಯಾವಣ್ಣ ನಾಯಕ, ರಾತ್ರಿ ೭ ಗಂಟೆಯ ಸಮಯ ದಲ್ಲಿ ಆ ಕಾಡುದಾರಿಯಲ್ಲಿ ಸಿಕ್ಕಿಬಿದ್ದಿದ್ದೆವು. ೬ ಕಿ.ಮೀ. ದೂರದಲ್ಲಿರುವ ತಾರಿಕಟ್ಟೆಯ ನಮ್ಮ
ತ್ತೆಯ ಮನೆಯಲ್ಲಿ ಸಾಕಲು ಬಿಟ್ಟಿದ್ದ ದನವೊಂದನ್ನು ವಾಪಸು ನಮ್ಮ ಮನೆಗೆ ಕರೆತರಲು ಸಂಜೆ ಐದರ ನಂತರ ನಡೆದೇ ಹೊರಟಿದ್ದೆವು.

ಆ ಕಾಲದಲ್ಲಿ ಟಾರ್ಚ್ ಬೆಳಕಿಲ್ಲದೇ ಹೊರಡುವ ಹುಂಬತನ ದ್ಯಾವಣ್ಣನದು. ನಾನಿನ್ನೂ ಹುಡುಗ. ದನವನ್ನು ಕರೆದುಕೊಂಡು ಇನ್ನೇನು ಹರನಗುಡ್ಡದಿಂದ ಕಣಿವೆಯ ರೀತಿಯ ದಾರಿಯಲ್ಲಿ ಕೆಳಗಿಳಿದರೆ, ನಮ್ಮ ಮನೆಯ ಬೈಲು, ಜನವಸತಿ ಸಿಗುತ್ತಿತ್ತು.
ಅದಾಗಲೇ ೭ ಗಂಟೆಯ ಸಮಯ. ಒತ್ತೊತ್ತಾಗಿ ಬೆಳೆದಿದ್ದ ಮರಗಳ ನಡುವಿನ ಆ ದಾರಿಯಲ್ಲಿ ದಟ್ಟ ಕತ್ತಲು. ಹಸುವನ್ನು ಹಿಡಿದಿದ್ದ ದ್ಯಾವಣ್ಣ ಮುಂದೆ ನಡೆಯುತ್ತಿದ್ದ. ನಾನು ಹಿಂದಿನಿಂದ. ಆಗ ಒಮ್ಮೆಗೇ, ಕತ್ತಲು ತುಂಬಿದ ಮರಗಳ ಕೊಂಬೆಯಿಂದ ತೀಕ್ಷ್ಣವಾದ, ತಾರಕ ಸ್ವರದ ಒಂದು ಕೂಗು. ಮುದುಕಿಯೊಬ್ಬಳು ದೀರ್ಘವಾಗಿ ಆಕ್ರಂದನ ಮಾಡುವಂಥ ಕೆಟ್ಟದನಿಯ ಕೂಗು. ದ್ಯಾವಣ್ಣನನ್ನು ಕೇಳಿದೆ ‘ಅದು ಎಂತ ಕೂಗುತ್ತಿರುವುದು?’. ಅದಕ್ಕೆ ಅವನು ಇನ್ನಷ್ಟು ಲಗುಬಗೆಯಿಂದ ಕಾಲು ಹಾಕುತ್ತಾ,
‘ಬೇಗ ಬನ್ನಿ, ಮನೆಗೆ ಹೋಪ’ ಎಂದು ಪಿಸುನುಡಿದು ಸರಸರನೆ ನಡೆಯತೊಡಗಿದ.

ಕಾಡುದಾರಿಯಲ್ಲಿ ಕೆಳಗಿಳಿದು, ಬೈಲು ಸೇರಿ, ಕಾಲುಗಂಟೆಯಲ್ಲಿ ಮನೆ ಮುಟ್ಟಿದೆವು. ಹರನಗುಡ್ಡೆಯ ಆ ಕಾಡಿನಲ್ಲಿ, ಆ ಕೆಟ್ಟ ಕೂಗನ್ನು ಕೇಳಿದ ನಂತರ, ಮೌನಕ್ಕೆ ಶರಣಾದ ದ್ಯಾವಣ್ಣ ನಾಯಕನು, ಬಾಯಿ ಬಿಟ್ಟದ್ದು ಮನೆಗೆ ಬಂದ ನಂತರವೇ! ನಡೆದ ಆಯಾಸವನ್ನು ಪರಿಹರಿಸಿಕೊಂಡ ನಂತರ, ಅಮ್ಮಮ್ಮನನ್ನು ಕೇಳಿದೆ. ಅವರು ತುಸು ಕಣ್ಣರಳಿಸಿ ‘ಈಗ ಸುಮ್ಮನೆ ಇರು, ಅದು ಜಕಣಿ ಹಕ್ಕಿ. ಹೆದರಿಕೆ ಆಯ್ತಾ? ಈಗ ಅದರ ಸುದ್ದಿ ಮಾತನಾಡಬೇಡ’ ಎಂದು, ಮಾತು ಮರೆಸಲು ಊಟಕ್ಕೆ ಕುಳ್ಳಿರಿಸಿದರು. ಆ ಹಕ್ಕಿಯ ವಿವರವನ್ನೂ, ಅದು ಕೂಗುವ ರೀತಿಯನ್ನೂ ಸಲೀಂ ಅಲಿಯವರು ತಮ್ಮ ‘ಇಂಡಿಯನ್ ಹಿಲ್ ಬರ್ಡ್ಸ್’ ಪುಸ್ತಕದಲ್ಲಿ
ವರ್ಣಿಸಿದ್ದಾರೆ. ರಾತ್ರಿ ಹೊತ್ತು ಮುದುಕಿಯೊಬ್ಬಳು ದೀರ್ಘವಾಗಿ ಕೀರಲುದನಿಯಲ್ಲಿ ಪ್ರಲಾಪಿಸುವಂತೆ ಅದು ಕೂಗುತ್ತದೆ ಎಂಬ ವರ್ಣನೆ ಅವರದ್ದೇ.

ಫಾರೆಸ್ಟ್ ಈಗಲ್ ಔಲ್ ಎಂಬ ಹೆಸರಿನ ಈ ಗೂಬೆ, ಕೊಂಬಿನ ಗೂಬೆಯ ರೀತಿಯೇ ಇದ್ದು, ಇನ್ನೂ ಬಲಿಷ್ಠ, ದಷ್ಟಪುಷ್ಟ. ಕೊಂಬಿನ ರೂಪದ ಗರಿ ಉದ್ದಕ್ಕಿದ್ದು, ತುಪ್ಪಳ ಬಿಳಿಮಿಶ್ರಿತವಾಗಿರುತ್ತದೆ. ನಮ್ಮ ಕಾಡುಗಳಲ್ಲಿ, ಪಶ್ಚಿಮ ಘಟ್ಟಗಳಲ್ಲಿ ಮತ್ತು ಹಿಮಾಲಯದ ಸೆರಗಿನ ಕಾಡುಗಳಲ್ಲಿ ಈ ಹಕ್ಕಿ ಇದೆ. ನಮ್ಮೂರಿನ ಗೂಬೆಗಳಲ್ಲಿ, ಮನೆಗಳ ಸುತ್ತಮುತ್ತ ಸಂಜೆ ಕೂಗುತ್ತಾ ಹಾರಾಡುವ ಚಿಟ್ಟಗೂಬೆಗಳು ಅಷ್ಟೊಂದು ಅಪರೂಪವಲ್ಲ, ಭಯ ಹುಟ್ಟಿಸುವುದೂ ಇಲ್ಲ. ಇವುಗಳ ಇನ್ನೊಂದು ಪ್ರಭೇದ ವನ್ನೇ ಬಯಲುಸೀಮೆಯಲ್ಲಿ ಹಾಲಕ್ಕಿ ಎನ್ನುವುದು.

ಮೈನಾ ಹಕ್ಕಿಗಿಂತ ತುಸು ದೊಡ್ಡ ಗಾತ್ರದ ಈ ಹಕ್ಕಿಗಳು ಕೂಗುವ ಶೈಲಿಯನ್ನು, ಸಮಯ, ಏರಿಳಿತವನ್ನು ಗುರುತಿಸಿ, ಹಾಲಕ್ಕಿ ಶಾಸ ಹೇಳುತ್ತಾರೆ! ಈ ಹಾಲಕ್ಕಿ ಎಷ್ಟು ಧೈರ್ಯಶಾಲಿ ಎಂದರೆ, ಒಂದು ಸಂಜೆ ನನ್ನ ತಲೆಯ ಮೇಲೆ ಬಂದು ಕುಳಿತುಕೊಳ್ಳುವ ಪ್ರಯತ್ನ ಮಾಡಿತ್ತು! ನನ್ನ ಪಾಡಿಗೆ ನಡೆದುಕೊಂಡು ಹೋಗುತ್ತಿದ್ದವನನ್ನು ಆ ಚಿಟ್ಟಗೂಬೆ ಏನೆಂದು ತಿಳಿಯಿತೋ ಗೊತ್ತಿಲ್ಲ, ಒಮ್ಮೆಗೇ ತಲೆಯ ಕೂದಲನ್ನು ತನ್ನ ಕಾಲಿನಿಂದ ಹಿಡಿಯುವಂತೆ ಮಾಡಿ, ಪರಚಿ, ತನ್ನ ಪಾಡಿಗೆ ತಾನು ಹಾರಿಹೋಯಿತು.

ನಮ್ಮ ನಾಡಿನ ಬಯಲುಸೀಮೆಗಳಲ್ಲಿ ಬೇರೆ ಬೇರೆ ಪ್ರಭೇದದ ಗೂಬೆಗಳಿವೆ. ಬೆಂಗಳೂರಿನಲ್ಲಿ ಕರ್ಕಶ ದನಿಯಿಂದ ಕೂಗುವ ಬಾರ್ನ್ ಔಲ್‌ಗಳೂ ಇವೆ. ಬೆಳದಿಂಗಳ ರಾತ್ರಿಯಲ್ಲಿ ಅಪರೂಪಕ್ಕೊಮ್ಮೊಮ್ಮೆ, ಚಿತ್ರವಿಚಿತ್ರ ಧ್ವನಿಯಲ್ಲಿ, ತುಸು ಭಯ ಹುಟ್ಟಿಸು ವಂತೆ ಕೂಗುವ ಕೆಲವು ಗೂಬೆಗಳ ಹೆಸರನ್ನು ಗುರುತಿಸುವುದು ತುಸು ಕಷ್ಟವೇ ಸರಿ. ಕತ್ತಲ ಲೋಕದ ಗೂಬೆಗಳು ಇಲಿಗಳನ್ನು
ಹಿಡಿಯುವುದರಿಂದಾಗಿ, ರೈತ-ಸ್ನೇಹಿ. ಗೂಬೆಗಳ ಲೋಕವನ್ನು ಹುಡುಕುತ್ತಾ ಹೋದರೆ, ಪುಟ್ಟ ಪುಸ್ತಕ ಬರೆಯುವಷ್ಟು ಮಾಹಿತಿ ದೊರಕೀತು! ಇವುಗಳ ಜತೆಯಲ್ಲೇ ರಾತ್ರಿಯಲ್ಲಿ ಕೀಟಗಳನ್ನು ಹಿಡಿಯುವ ನೆತ್ತಿಂಗ (ನೈಟ್‌ಜಾರ್) ಹಕ್ಕಿಗಳ ಲೋಕ ಇನ್ನಷ್ಟು ನಿಗೂಢ, ಇನ್ನಷ್ಟು ಅಪರಿಚಿತ. ಒಟ್ಟಿನಲ್ಲಿ, ಗೂಬೆಗಳು ಕುತೂಹಲಕಾರಿ ನಿಶಾಚರಿಗಳು.