Saturday, 14th December 2024

ಮತಾಂತರ ರೀತಿಯಲ್ಲಿಯೇ ಇಂಗ್ಲಿಷಿನ ಪದಾಂತರ !

ನೂರೆಂಟು ವಿಶ್ವ

vbhat@me.com

ಇಂಗ್ಲಿಷಿಗೆ ಯಾವುದೂ ವರ್ಜ್ಯವಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಭಾಷಾ ಪಂಡಿತರೇ ಹೊಸ ಪದವನ್ನು ಟಂಕಿಸಬೇಕೆಂದಿಲ್ಲ ಅಥವಾ ಅವರೇ ಠಸ್ಸೆ ಹೊಡೆಯಬೇಕು ಎಂದಿಲ್ಲ. ಹೊಸ ಪದ ಯಾವುದೇ ಮೂಲದಿಂದ ಬಂದರೂ ಇಂಗ್ಲಿಷ್ ಅದನ್ನು ತನ್ನತ್ತ ಸೆಳೆದುಕೊಂಡು ತನ್ನದನ್ನಾ ಗಿಸಿಕೊಳ್ಳುತ್ತದೆ. ಯಾವುದು ಚೆಂದ ಕಾಣುತ್ತೋ, ಅದನ್ನು ಹಿಡಿದು ತಂದು, ತನ್ನದು ಮಾಡಿಕೊಳ್ಳುವ ಕಸುಬುದಾರಿಕೆಯನ್ನೇ ಇಂಗ್ಲಿಷ್ ಕರಗತ ಮಾಡಿಕೊಂಡಿದೆ.

೨೦೫೦ ರ ಹೊತ್ತಿಗೆ, ಆಕ್ಸ್ ಫರ್ಡ್ ಇಂಗ್ಲಿಷ್ ಪದಕೋಶ (ಡಿಕ್ಷನರಿ)ದಲ್ಲಿ ಎಂಟು ಸಾವಿರ ಹಿಂದಿ ಪದಗಳು ಮತ್ತು ಭಾರತದ ಇತರ ಭಾಷೆಗಳ ಮೂರು ಸಾವಿರ ಪದಗಳು ಸೇರಿಕೊಳ್ಳಲಿವೆಯಂತೆ! ಅಂದರೆ ಇನ್ನು ಮೂವತ್ತು ವರ್ಷಗಳಲ್ಲಿ ಭಾರತೀಯ ಭಾಷೆಗಳ ಹನ್ನೊಂದು ಸಾವಿರ ಪದಗಳು ಆಂಗ್ಲಮಯ ವಾಗಲಿವೆ. ಈ ಪದಗಳನ್ನು ಅವರು ತಮ್ಮ ಪದಗಳನ್ನಾಗಿ ಒಪ್ಪಿಕೊಳ್ಳಲಿದ್ದಾರೆ ಮತ್ತು ಬಳಕೆಗೆ ಯೋಗ್ಯವೆಂದು ಮಾನ್ಯ ಮಾಡಿಕೊಳ್ಳಲಿದ್ದಾರೆ.

ಮೂಲತಃ ಅವು ಭಾರತೀಯ ಭಾಷೆಗಳ ಪದಗಳೇ ಆಗಿರಬಹುದು, ಆದರೆ ಆನಂತರ ಅವು ಇಂಗ್ಲಿಷ್ ಪದಗಳೆಂದೇ ಸರ್ವಮಾನ್ಯತೆ ಪಡೆಯಲಿವೆ. ಇದು ಒಂಥರಾ ಮತಾಂತರದಂತೆ, ಪದಾಂತರ ! ಇದು ಇಂಗ್ಲಿಷಿನ ತಾಕತ್ತು. ಆ ಭಾಷೆಯ ಒಂದು ಅದ್ಭುತ ಗುಣವೆಂದರೆ ಒಳಗೊಳ್ಳುವಿಕೆ. ಎಲ್ಲವನ್ನೂ ಹೀರಿಕೊಳ್ಳುವಿಕೆ. ಎಲ್ಲರೊಳಗೊಂದಾಗು ಮಂಕುತಿಮ್ಮ ಭಾವ. ಇಂಗ್ಲಿಷಿಗೆ ಮಡಿ, ಮೈಲಿಗೆ, ಅಸ್ಪೃಶ್ಯತೆ, ಮೇಲು – ಕೀಳು, ಬಡವ – ಶ್ರೀಮಂತ, ನಾನು – ನೀನು ಎಂಬ ಭೇದ – ಭಾವವೇ ಇಲ್ಲ. ಬಿತ್ತಿದಲ್ಲಿ ಬೆಳೆಯಬೇಕು, ಬೆಳೆದಲ್ಲಿ ತಲೆ ಎತ್ತಬೇಕು, ತಲೆ ಎತ್ತಿದಲ್ಲ ತಲೆ ಮೇಲೆ ನಿಲ್ಲಬೇಕು ಎಂಬ ಶಿಖರಪ್ರಾಯ
ಗುಣವೇ ಅದನ್ನು ಇಂದಿನ ಸರ್ವಮಾನ್ಯತೆಗೆ, ಸರ್ವತ್ರ ಹರಡುವಿಕೆಗೆ ಕಾರಣವಾಗಿದೆ. ಸಕಾರಾತ್ಮಕ ಕಾರಣಗಳಿಂದ, ಅದನ್ನು ಪಾರ್ಥೇನಿಯಮ್‌ಗೆ ಹೋಲಿಸಬಹುದು.

ಗಾಳಿಯಲ್ಲಿ ಹಾರಿಬಂದು, ನೀರು, ಗೊಬ್ಬರ ಹಾಕದಿದ್ದರೂ ಅಲ್ಲಿಯೇ ಬೇರು ಬಿಡುವ ಪಾರ್ಥೇನಿಯಮ್ ಬೇರೆ ಅಲ್ಲ, ಇಂಗ್ಲಿಷ್ ಬೇರೆ ಅಲ್ಲ. ‘ಶೆಟ್ಟಿ ಬಿಟ್ಟ ಪಟ್ಟಣ’ ಎಂಬಂತೆ, ಕುಂಡೆ ಊರಲು ಜಾಗ ಸಿಕ್ಕರೆ ಸಾಕು, ಇಂಗ್ಲಿಷ್ ಅಲ್ಲಿಯೇ ತನ್ನ ಸಂಸಾರ ಶುರು ಮಾಡಿ ಸಾಮ್ರಾಜ್ಯ ಸ್ಥಾಪನೆ ಮಾಡಿಬಿಡುತ್ತದೆ. ಅದಕ್ಕೆ ಯಾರ ಹಂಗೂ ಇಲ್ಲ. ಬಡಿವಾರವೂ ಇಲ್ಲ. ಅದಕ್ಕೆ ಯಾವ ಕೊಮ್ಮಣೆಯೂ ಇಲ್ಲ. ಅಂದೊಂಥರಾ ಬೇರಿಲ್ಲದ ಬಂದಳಿಕೆ! ಬೀಜ ಹಾಕಿದರೂ ಸಸಿಯಾ ಗುತ್ತದೆ. ಬೇರಿಗೆ ನೀರೆರೆದರೂ ಸಸಿಯಾಗುತ್ತದೆ. ಕಾಂಡವನ್ನು ನೆಟ್ಟರೂ ಸಸಿಯಾಗಿ ಅರಳುತ್ತದೆ. ಕೊನೆಗೆ ಹಸಿ ಎಲೆಯನ್ನು ನೆಟ್ಟರೂ ಗಿಡವಾಗುತ್ತದೆ.

ಫ್ರೆಂಚ್ ಭಾಷಿಕರಿಗೆ ಇಂಗ್ಲಿಷ್ ಕಂಡರೆ ಆಗೊಲ್ಲ. ಲಂಡನ್ ನಿಂದ ಐವತ್ತೈದು ನಿಮಿಷ ವಿಮಾನದಲ್ಲಿ ಹಾರಿದರೆ ಪ್ಯಾರಿಸ್. ವೈಮಾನಿಕವಾಗಿ ಅಷ್ಟು ಹತ್ತಿರದಲ್ಲಿದೆ. ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ಎಲ್ಲಿ ನೋಡಿದರೂ ಒಂದು ಇಂಗ್ಲಿಷ್ ಬೋರ್ಡ್ ಕಾಣಿಸುವುದಿಲ್ಲ. ಪ್ಯಾರಿಸ್‌ನಲ್ಲಿ ಯಾರೂ ಇಂಗ್ಲಿಷ್
ಮಾತಾಡಲು ಅಷ್ಟು ಇಷ್ಟಪಡುವುದಿಲ್ಲ. ಅಂಥ ಪ್ರಸಂಗ ಬಂದರೆ ಒಲ್ಲದ ಮನಸ್ಸಿನಿಂದಲೇ ಮಾತಿಗೆ ಮುಂದಾಗುತ್ತಾರೆ. ನೀವು ಇಂಗ್ಲಿಷಿನಲ್ಲಿ  ಮಾತಾಡಿ ದರೂ, ಅವರು ಫ್ರೆಂಚ್‌ನಲ್ಲಿ ಉತ್ತರಿಸುತ್ತಾರೆ. ಅಂದರೆ ತನಗೆ ಇಂಗ್ಲಿಷ್ ಭಾಷೆ ಮಾತಾಡಲು ಮನಸ್ಸಿಲ್ಲ ಎಂದು ಸೂಚ್ಯವಾಗಿ ತಿಳಿಸುತ್ತಾರೆ. ಇನ್ನು ಕೆಲವರು ತಮಗೆ ಇಂಗ್ಲಿಷ್ ಬಂದರೂ, ಬರೊಲ್ಲ ಎಂದು ಖಡಾಖಡಿ ಹೇಳುತ್ತಾರೆ.

ಫ್ರಾನ್ಸ್‌ನಲ್ಲಿ ಎಲ್ಲಿಯೇ ಓಡಾಡಿದರೂ, ಅಂದು, ಇಂದು ಇಂಗ್ಲಿಷ್ ಬೋರ್ಡ್ ಕಾಣಿಸಬಹುದು. ಅಷ್ಟರಮಟ್ಟಿಗೆ ಫ್ರೆಂಚರು ಇಂಗ್ಲಿಷನ್ನು ಎಲ್ಲಿಡಬೇಕೋ ಅಲ್ಲಿ ಇಟ್ಟಿದ್ದಾರೆ. ಬ್ರಿಟನ್‌ನಿಂದ ಅಷ್ಟು ದೂರದಲ್ಲಿರುವ ಬೆಂಗಳೂರು ಇಂಗ್ಲಿಷ್ ಮಯವಾಗಿ ಇಲ್ಲಿ ಕನ್ನಡ ಮಾಯ ಆಗುತ್ತಿದ್ದರೂ, ಮಗ್ಗುಲ ದೇಶವಾಗಿರುವ ಫ್ರಾನ್ಸ್‌ನಲ್ಲಿ ಮಾತ್ರ, ಇಂಗ್ಲಿಷ್ ನಾಯಿಯನ್ನು ಮನೆಯೊಳಗೆ ಬಿಟ್ಟುಕೊಳ್ಳದೇ, ಹೊರಗೇ ಕಟ್ಟಿದ್ದಾರೆ. ಆದರೆ ನಮ್ಮ ಮನೆಯಲ್ಲಿ ಅದು ಜಗುಲಿ ದಾಟಿ ಗರ್ಭಗುಡಿ ಸೇರಿಬಿಟ್ಟಿದೆ. ಈ ಮಾತು ಬ್ರಿಟನ್‌ನ ಭಾಗವೇ ಆಗಿರುವ, ಮಲತಾಯಿ ಮಕ್ಕಳಂತಿರುವ ವೇಲ್ಸ್ ಮತ್ತು ಸ್ಕಾಟ್ಲೆಂಡ್‌ಗೂ ಅನ್ವಯ.

ವೇಲ್ಸ್ ಮತ್ತು ಸ್ಕಾಟಿಷ್ ಮಂದಿಗೆ ಇಂಗ್ಲಿಷ್ ಕಂಡರೆ ಆಗುವುದಿಲ್ಲ. ತಮಾಷೆ ಏನು ಗೊತ್ತಾ? ಅವರು ತನ್ನನ್ನು ತಿರಸ್ಕಾರ ಮಾಡಲಿ, ಕೆಟ್ಟದಾಗಿ ನೋಡಲಿ, ಇಂಗ್ಲಿಷ್‌ಗೆ ಡೋಂಟ್ ಕೇರ್! ಇಂಗ್ಲಿಷಿನ ಬಹುತೇಕ ಪದಗಳ ಮೂಲ ಫ್ರೆಂಚ್. ಫ್ರೆಂಚ್ ಅದೆಷ್ಟೇ ತನ್ನನ್ನು ತಿರಸ್ಕರಿಸಲಿ, ಇಂಗ್ಲಿಷ್ ಅದರಿಂದ ಬೇಸರ
ಮಾಡಿಕೊಂಡಿಲ್ಲ. ಹಾಗಂತ ಫ್ರೆಂಚ್ ತನ್ನ ಮೈಲಿಗೆ ಬಿಟ್ಟಿಲ್ಲ. ತನ್ನ ಭಾಷೆಯಲ್ಲಿ ಇಂಗ್ಲಿಷ್ ನುಸುಳುವುದನ್ನು ಈಗಲೂ ಸಹಿಸುವುದಿಲ್ಲ. ತನ್ನ ಭಾಷೆಯ ಸೊಗಡು ಸ್ವಲ್ಪವೂ ಮುಕ್ಕಾಗುವುದನ್ನು ಇಷ್ಟಪಡುವುದಿಲ್ಲ. ಆದರೆ ಇಂಗ್ಲಿಷ್ ಮಾತ್ರ ತನ್ನನ್ನು ದ್ವೇಷಿಸುವವರನ್ನು ಪ್ರೀತಿಸುತ್ತದೆ. ಆ ಮತ್ತು ಸ್ಕಾಟಿಷ್ ಮಂದಿ ಎಷ್ಟರಮಟ್ಟಿಗೆ ಇಂಗ್ಲಿಷ್ ವಿರೋಧಿಗಳೆಂದರೆ, ಇಂಗ್ಲೆಂಡ್ ಮತ್ತು ಫ್ರಾನ್ಸ್ ಮಧ್ಯೆ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದರೆ, ಫ್ರಾನ್ಸ್ ಪರ. ಭಾರತ ಮತ್ತು ಇಂಗ್ಲೆಂಡ್ ನಡುವೆ ಕ್ರಿಕೆಟ್ ಪಂದ್ಯ ನಡೆಯುವಾಗ ಭಾರತದ ಪರ.

ಆದರೆ ಇಂಗ್ಲಿಷರು ಇದಕ್ಕೆಲ್ಲ ತಲೆಕೆಡಿಸಿಕೊಂಡಿಲ್ಲ. ಇವರಿಗೆ ಸಾಥ್ ಕೊಡುವವರು ಪಕ್ಕದ ಐರಿಷ್ ಮಂದಿ. ಅವರಿಗೂ ಇಂಗ್ಲಿಷರನ್ನು ಕಂಡರೆ ಅಷ್ಟಕ್ಕಷ್ಟೇ. ಮತ್ತು ಸ್ಕಾಟಿಷ್ ಮಂದಿ ತನ್ನನ್ನು ಕ್ಯಾಕರಿಸಿ ನೋಡಿದರೂ ಇಂಗ್ಲಿಷ್ ಪಿತ್ತ ಕೆಣಕಿಲ್ಲ. ಅವರಿಬ್ಬರನ್ನೂ ಇಂಗ್ಲಿಷ್ ಇಂದು ಪ್ರೀತಿಯಿಂದಲೇ
ಅಪೋಷಣೆ ಮಾಡಿದೆ. ಇಂಗ್ಲೀಷಿನಲ್ಲಿ ಮತ್ತು ಸ್ಕಾಟಿಷ್ ಮೂಲದ ಹತ್ತು ಸಾವಿರಕ್ಕೂ ಹೆಚ್ಚು ಪದಗಳಿವೆ. ಹಾಗೆಂದು ಆ ಎರಡು ಭಾಷೆಗಳು ( ಮತ್ತು ಸ್ಕಾಟಿಷ್) ಇಂದಿಗೂ ತಮ್ಮ ಭಾಷೆಗಳಲ್ಲಿ ಇಂಗ್ಲಿಷ್ ಪದ ನುಸುಳಿ ಬರುವುದನ್ನು ಇಷ್ಟಪಡುವುದಿಲ್ಲ.

ಇಂಗ್ಲಿಷ್ ಪದ ಕಂಡರೆ ಜಿರಳೆ ಅಥವಾ ಸೊಳ್ಳೆ ಕಂಡಂತೆ ಆಡುತ್ತಾರೆ. ಸಂಪ್ರದಾಯವಾದಿ, ಕಟ್ಟರ್ ಬ್ರಾಹ್ಮಣರ ಪೂಜೆ ಮಧ್ಯೆ ಮುಟ್ಟಾದ ಹೆಂಗಸರು ಬಂದಂತೆ ಬಡಬಡಿಸುತ್ತಾರೆ. ಆದರೆ ಇಂಗ್ಲಿಷ್ ಮಾತ್ರ ಕೂಲ್ ಕೂಲ್! ಅದರ ಈ ಗುಣವೇ ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿದೆ. ಜಗತ್ತಿನ ಸುಮಾರು ಎಪ್ಪತ್ತು ದೇಶಗಳಲ್ಲಿ ಇಂಗ್ಲಿಷ್ ಅಧಿಕೃತ ಭಾಷೆಯಾಗಿ ಗೌರವ ಪಡೆದಿದೆ.

ಒಂದು ಭಾಷೆಯಲ್ಲಿ ಇನ್ನೊಂದು ಭಾಷೆಯ ಪ್ರವೇಶವನ್ನು ಯಾರೂ ಸಹಿಸಿಕೊಳ್ಳುವುದಿಲ್ಲ. ಇಂದಿಗೂ ನಾವು ಮರಾಠಿ ಅಥವಾ ಉರ್ದು ಪದ ಬಳಸಿದರೆ, ಕೆಲವರ ಪಿತ್ತ ನೆತ್ತಿಗೇರುತ್ತದೆ. ಕನ್ನಡ ಪದ ಇರಲಿಲ್ಲವಾ, ಯಾಕೆ ಆ ಭಾಷೆಗಳ ಮೇಲೆ ಮೋಹ, ಕನ್ನಡ ಪದಗಳನ್ನೇ ಬಳಸಿ ಎಂದು ಸಣ್ಣ ಬೌದ್ಧಿಕ್
ಕೊಡುತ್ತಾರೆ. ಅಷ್ಟೇ ಅಲ್ಲ, ಕನ್ನಡ ಭಾಷೆಯಲ್ಲಿ ಸಂಸ್ಕೃತ ಹಾಸುಹೊಕ್ಕಾಗಿದೆ. ಯಾವುದು ಕನ್ನಡ, ಯಾವುದು ಸಂಸ್ಕೃತ ಎಂದು ಬೇರ್ಪಡಿಸಲು ಆಗದಷ್ಟು ಒಂದರೊಳಗೆ ಮತ್ತೊಂದು ಮಿಳಿತವಾಗಿದೆ. ಆದರೂ ಸಂಸ್ಕೃತ ಪದಗಳನ್ನು ಬಳಸಿದಾಗ ಸಂಸ್ಕೃತವೇಕೆ, ಕನ್ನಡ ಪದ ಇರಲಿಲ್ಲವಾ ಎಂದು ಕೆಂಗಣ್ಣು ಬೀರುತ್ತಾರೆ. ಮಾಸಾಂತ್ಯ ಎಂದು ಯಾಕೆ ಬರೆಯುತ್ತೀರಿ, ‘ತಿಂಗಳ ಕೊನೆ’ ಎಂದು ಹೇಳಬಹುದಲ್ಲ ಎಂದು ತಿದ್ದುತ್ತಾರೆ.

ಸಂಸ್ಕೃತವೇ ಕನ್ನಡಕ್ಕೆ ಮೂಲಾಧಾರವಾಗಿದ್ದರೂ, ಸಂಸ್ಕೃತ ಬಳಕೆಯನ್ನು ಇಷ್ಟಪಡದ ಕನ್ನಡಿಗರಿದ್ದಾರೆ. ಅದಕ್ಕಿಂತ ಹೆಚ್ಚಾಗಿ, ಸಂಸ್ಕೃತವನ್ನು ದ್ವೇಷಿಸುವವರಿದ್ದಾರೆ. ಸಂಸ್ಕೃತ ಕಲಿಯದೇ, ಒಳ್ಳೆಯ ಕನ್ನಡವನ್ನು ಕಲಿಯುವುದು ಸಾಧ್ಯವಿಲ್ಲ ಎಂಬುದು ಗೊತ್ತಿದ್ದೂ ಸಂಸ್ಕೃತವನ್ನು  ದ್ವೇಷಿಸು ವವರಿದ್ದಾರೆ. ಅದು ಪುರೋಹಿತಶಾಹಿಗಳ ಭಾಷೆ, ಮೇಲ್ವರ್ಗದವರ ಭಾಷೆ, ದೇವಭಾಷೆ ಎಂದು ದೂರ ತಳ್ಳುತ್ತಾರೆ. ಮೃತಭಾಷೆ ಎಂದು ಗೇಲಿ ಮಾಡು ತ್ತಾರೆ. ಆದರೆ ಇಂಗ್ಲಿಷ್‌ಗೆ ಸಂಸ್ಕೃತದ ಬಗ್ಗೆ ಈ ಬೇಸರವಿಲ್ಲ. ಅಲ್ಲಿ ಹೀರಿಕೊಳ್ಳಲು ಏನಾದರೂ ಸಿಕ್ಕರೆ ಅದನ್ನು ಹೀರದೇ ಬಿಡುವುದಿಲ್ಲ. ಸಿಕ್ಕಷ್ಟು ಬಾಚಿಕೊಳ್ಳದೇ ಬಿಡುವುದಿಲ್ಲ.

ಆದರೆ ಸಂಸ್ಕೃತ ಅಪ್ಪಿತಪ್ಪಿಯೂ ತನ್ನ ಸನಿಹ ಇಂಗ್ಲೀಷನ್ನು ಬಿಟ್ಟುಕೊಳ್ಳಲಿಕ್ಕಿಲ್ಲ. ಯಾಗ ಶಾಲೆಗೆ ಕಜ್ಜಿನಾಯಿ ಬಂದಂತೆ ಓಡಿಸುತ್ತದೆ. ಸಂಸ್ಕೃತ ಅಂದ್ರೆ ಸಂಸ್ಕೃತ ಮಾತ್ರ. ಬೇರೆ ಭಾಷೆಗಳ ಬೆರಕೆ ಮತ್ತು ಕಲಬೆರಕೆಯನ್ನು ಅದು ಸಹಿಸುವು ದಿಲ್ಲ. ಅಲ್ಲಿ ಸಂಸ್ಕೃತವೇ ಪಿಂಡಪ್ರಧಾನ! ಅದೇ ದೇವಭಾಷೆ ಯಾದ್ದರಿಂದ, ದೇವರು ಇಂಗ್ಲಿಷ್ ಬಳಸುತ್ತಿದ್ದಾನಾ ಎಂದು ಸಂಸ್ಕೃತದಲ್ಲಿ ಇಂಗ್ಲಿಷ್ ಭಾಷೆಯ ಪ್ರಯೋಗವನ್ನು ವಿರೋಧಿಸುತ್ತಾರೆ. ಸಂಸ್ಕೃತದಲ್ಲಿ ಎಲ್ಲಾ ಪದಗಳೂ ಇರುವುದರಿಂದ, ಬೇರೆ ಭಾಷೆಗಳ ಭುಜದ ಮೇಲೆ ತಲೆಯೂರಬೇಕಿಲ್ಲ ಎಂದು ವಾದಿಸುತ್ತಾರೆ.

ಹೀಗಾಗಿ ಸಂಸ್ಕೃತ ಇಷ್ಟು ಶ್ರೀಮಂತ, ವೈಶಿಷ್ಟ್ಯಪೂರ್ಣ, ಸತ್ವಭರಿತ ಭಾಷೆಯಾಗಿದ್ದರೂ, ಇಂದಿಗೂ ಒಳಮನೆ ದಾಟಿ ಅಂಗಳಕ್ಕೆ ಬಂದಿಲ್ಲ. ಆದರೆ ಇಂಗ್ಲಿಷ್ ಆಗಲೇ ವಿಶ್ವದಾದ್ಯಂತ ಸುತ್ತು ಹೊಡೆಯುತ್ತಲೇ ಇದೆ. ಸಂಸ್ಕೃತದ ಮನಸ್ಸು ಪರಕೀಯವಾದುದನ್ನು ಸ್ವೀಕರಿಸುವುದಿಲ್ಲ. ಇದು ಕೆಟ್ಟದ್ದು ಎಂಬುದು ವಾದವಲ್ಲ. ಬೇರೆ ಭಾಷೆಯ ಪ್ರವೇಶಕ್ಕೆ ಅನುವು ಮಾಡಿಕೊಟ್ಟರೆ, ಮೂಲಭಾಷೆ ವಿರೂಪವಾಗುತ್ತದೆ, ಮೂಲ ಸಂಕರ ಕೆಟ್ಟುಹೋಗುತ್ತದೆ ಎಂಬ ಒಂದು ವಾದವಿದೆ. ಅದನ್ನು ಸುಲಭಕ್ಕೆ ತಳ್ಳಿ ಹಾಕಲು ಆಗುವುದಿಲ್ಲ. ಆದರೆ ವಸ್ತುಸ್ಥಿತಿ ಏನೆಂದರೆ, ಈ ಕಣ್ಣುಕಾಪು ಕಟ್ಟಿಕೊಂಡು ನಡೆಯುವು ದರಿಂದ, ನಮ್ಮ ಭಾಷೆ ನಮ್ಮ ಪ್ರದೇಶವನ್ನು ಮೀರಿ ವಿಸ್ತರಿಸುವುದಿಲ್ಲ ಎಂಬುದೂ ಅಷ್ಟೇ ಸತ್ಯ. ಒಂದು ತಮಿಳು ಪದವನ್ನು ಸಹಿಸಿಕೊಳ್ಳುವಷ್ಟು ನಾವು ಭಾಷಾ ಉದಾರಿಗಳಲ್ಲ.

ಈ ಹಿನ್ನೆಲೆಯಲ್ಲಿ ಇಂಗ್ಲೀಷನ್ನು ನೋಡಬೇಕು. ಫ್ರೆಂಚ್, ಡಚ್, ಸ್ಕಾಟಿಷ್, ಐರಿಷ್ ಮಂದಿ ತಮ್ಮನ್ನು ದ್ವೇಷ ಮಾಡಿದರೂ, ಅವರ ಭಾಷೆಗಳಲ್ಲಿರುವ ಮಕರಂದವನ್ನು ಹೀರಲು ಅವರಿಗೆ ಯಾವ ಸಂಕೋಚವೂ ಇಲ್ಲ. ಇಂಗ್ಲಿಷಿನ ಈ ಒಳಗೊಳ್ಳುವ, ತನ್ನೊಟ್ಟಿಗೆ ಕರೆದುಕೊಂಡು ಹೋಗುವ, ಜತೆಜತೆಯಾಗಿ ಹೆಜ್ಜೆ ಹಾಕುವ ಮನಸ್ಸು ಅದಕ್ಕೆ ವಿಶ್ವವ್ಯಾಪಿ ಸ್ವರೂಪವನ್ನು ಕೊಟ್ಟಿದೆ. ಇಂಗ್ಲಿಷಿನ ಗಾಳಿಯೇ ಬೀಸದ ಚೀನಾ ಕೂಡ, ಎರಡೂ ಕೈಗಳಿಂದ ಆ ಭಾಷೆ ಯನ್ನೂ ಆಲಂಗಿಸಿಕೊಳ್ಳುತ್ತಿದೆ. ವಿಮಾನ ಹಾರಿ ಹೋಗಲು ಸಾಧ್ಯವಿರುವ ಇಂಗ್ಲಿಷ್ ಸಹ ಹಾರಿ ಹೋಗಿ, ಕುಳಿತುಕೊಳ್ಳುತ್ತದೆ ಎಂಬ ಮಾತಿದೆ. (ಅದಕ್ಕೇ English is the language of the air ಎಂದು ಹೇಳುತ್ತಾರೆ. ಪೈಲಟ್ ಯಾವುದೇ ದೇಶದವನಾಗಿರಲಿ, ವಿಮಾನದಲ್ಲಿ ಕುಳಿತಾಗ ಇಂಗ್ಲಿಷಿನಲ್ಲಿಯೇ ಮಾತಾಡ ಬೇಕು, ಏರ್ ಟ್ರಾಫಿಕ್ ಕಂಟ್ರೋಲರ್ ಜತೆ ಇಂಗ್ಲಿಷಿನಲ್ಲಿಯೇ ವ್ಯವಹರಿಸಬೇಕು.)

ನಿಮಗೆ ಸುಮಾರು ಮುನ್ನೂರು ಇಂಗ್ಲಿಷ್ ಪದಗಳ ಅರ್ಥ ಮತ್ತು ತಕ್ಕಮಟ್ಟಿಗಿನ ವ್ಯಾಕರಣ ಮತ್ತು ಬಳಕೆ ಗೊತ್ತಿದ್ದರೆ, ಆ ಭಾಷೆಯಲ್ಲಿ ಪತ್ರಕರ್ತ ರಾಗಬಹುದು. ಬ್ರಿಟನ್ನಿನ ಜನಪ್ರಿಯ ಟ್ಯಾಬ್ಲಾಯ್ಡ ‘ದಿ ಸನ್’ ಪತ್ರಿಕೆ ಕರಾರುವಾಕ್ಕಾಗಿ ೨೮೧ ಪದಗಳನ್ನು ಆಯ್ಕೆ ಮಾಡಿದೆ. ಅಷ್ಟು ಪದಗಳ ಅರ್ಥ ಮತ್ತು ಬಳಕೆ ಗೊತ್ತಿದ್ದವರು ಆ ಪತ್ರಿಕೆಯಲ್ಲಿ ಉತ್ತಮ ಪತ್ರಕರ್ತರಾಗಬಹುದು. ಇದು ಆ ಪತ್ರಿಕೆಯೇ ನಿರ್ಧರಿಸಿದ ಸಂಗತಿ. ಆದರೆ ಇಂಗ್ಲಿಷ್ ಭಾಷೆಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಪದಗಳಿವೆ. ಇವು ಪದಕೋಶಗಲ್ಲಿ ಇರುವ ಪದಗಳು. ಪದಕೋಶಗಳಲ್ಲಿ ಇರದ, ಆದರೆ ಬಳಕೆಯಲ್ಲಿರುವ ಅವೆಷ್ಟೋ ಪದ ಗಳಿವೆ.

ಅವುಗಳನ್ನು ಲೆಕ್ಕ ಹಾಕುವುದು ಕಷ್ಟವೇ. ಆ ಪೈಕಿ ಮೂಲ ಇಂಗ್ಲಿಷ್ ಪದಗಳ ಸಂಖ್ಯೆ ಕೇವಲ ಎಂಬತ್ತು ಸಾವಿರ. ಉಳಿದವುಗಳೆಲ್ಲ ಕದ್ದ ಮಾಲುಗಳೇ! ಎರವಲು ಪದಗಳೇ! ಅಂದರೆ ಬೇರೆ ಭಾಷೆಗಳ ಪದಗಳ ಸಂಖ್ಯೆಯೇ ಜಾಸ್ತಿ ಎಂದಂತಾಯಿತು. ಸ್ವಾರಸ್ಯವೆಂದರೆ, ಇಂಗ್ಲೀಷಿನಲ್ಲಿ ಪರಭಾಷಾ ಪದಗಳ ಪಾರಮ್ಯ, ಹಾರಾಟ, ಮೋಜು-ಮಸ್ತಿಯೇ ಜಾಸ್ತಿ. ಪ್ರತಿ ಎರಡು ಗಂಟೆಗೊಂದು ಪದ ಇಂಗ್ಲಿಷ್ ಭಾಷೆಯನ್ನು ಸೇರುತ್ತದೆ. ಅದು ಯಾವ ಭಾಷೆಯಿಂದ ಬೇಕಾದರೂ ಬಂದಿರಬಹುದು. ಯಾವುದೇ ಪದವನ್ನಾದರೂ ತನ್ನದನ್ನಾಗಿಸಿಕೊಳ್ಳುವ ಕಲೆಗಾರಿಕೆಯೇ ಇಂಗ್ಲಿಷಿನ ವೈಶಿಷ್ಟ್ಯ.

ಬೆಂಗಳೂರಿನಲ್ಲಿರುವ ಐಟಿ ಕ್ಷೇತ್ರದಲ್ಲಿರುವ ಸಿಬ್ಬಂದಿ ಏಕಾಏಕಿ ತಮ್ಮ ಉದ್ಯೋಗವನ್ನು ಕಳೆದುಕೊಳ್ಳಲಾರಂಭಿಸಿದಾಗ, Bangalored ಎಂಬ ಪದ ಇಂಗ್ಲಿಷ್ ಭಾಷೆಯನ್ನು ಸೇರಿಕೊಂಡಿತು. ಈ ಪದವನ್ನು ಹುಟ್ಟುಹಾಕಿದವರು ಅಮೆರಿಕದವರು. When an American says that he has been Bangalored, what he means is that he has lost his job. ಒಂದು ನಗರದ ಹೆಸರೇ ಕ್ರಿಯಾಪದವಾಗಿ ರೂಪು ಪಡೆಯಿತು. ಈಗಲೂ ಈ ಪದ ಪತ್ರಿಕೆಯ ಹೆಡ್‌ಲೈನ್ ಗಳಲ್ಲಿ ಬರೆಯುವಷ್ಟು ಜನಪ್ರಿಯವಾಗಿದೆ.

ಇಂಗ್ಲಿಷಿಗೆ ಯಾವುದೂ ವರ್ಜ್ಯವಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಭಾಷಾ ಪಂಡಿತರೇ ಹೊಸ ಪದವನ್ನು ಟಂಕಿಸಬೇಕೆಂದಿಲ್ಲ ಅಥವಾ ಅವರೇ ಠಸ್ಸೆ ಹೊಡೆಯಬೇಕು ಎಂದಿಲ್ಲ. ಹೊಸ ಪದ ಯಾವುದೇ ಮೂಲದಿಂದ ಬಂದರೂ ಇಂಗ್ಲಿಷ್ ಅದನ್ನು ತನ್ನತ್ತ ಸೆಳೆದುಕೊಂಡು ತನ್ನದನ್ನಾಗಿಸಿಕೊಳ್ಳುತ್ತದೆ. ಅಷ್ಟಕ್ಕೂ ಇಂಗ್ಲಿಷ್ ಭಾಷೆಯ ಅಕ್ಷರಗಳು ಮೂಲದಲ್ಲಿ ಲ್ಯಾಟಿನ್ (ಇದನ್ನು ರೋಮನ್ ಸ್ಕ್ರಿಪ್ಟ್ ಅಂತಲೂ ಕರೆಯುತ್ತಾರೆ) ಭಾಷೆಯದ್ದು. ಯಾವುದು ಚೆಂದ ಕಾಣುತ್ತೋ, ಅದನ್ನು ಹಿಡಿದು ತಂದು, ತನ್ನದು ಮಾಡಿಕೊಳ್ಳುವ ಕಸುಬುದಾರಿಕೆಯನ್ನೇ ಇಂಗ್ಲಿಷ್ ಕರಗತ ಮಾಡಿಕೊಂಡಿದೆ.

ಇಂಗ್ಲಿಷ್ ಭಾಷೆಯೆಂದರೆ ಒಂದು ರೀತಿಯಲ್ಲಿ ಗಂಗಾ ನದಿಯಿದ್ದಂತೆ. ಅದು ಹರಿಯುತ್ತಲೇ ಹೋಗುತ್ತದೆ. ಅದರಲ್ಲೂ ಈ ನದಿಗೆ ಡೊಣ್ಣೆ ನಾಯಕನ ಅಪ್ಪಣೆಯಿಲ್ಲ. ಅದಕ್ಕೆ ಹರಿಯುವುದೊಂದೇ ಗೊತ್ತು. ತನ್ನ ಜತೆ ಸಿಗುವ ಎಲ್ಲಾ ಕಸ,ಕಡ್ಡಿ,ಹುಲ್ಲು, ದಿಮ್ಮಿ,ಜಲಚರ … ಹೀಗೆ ಎಲ್ಲವನ್ನೂ ಒಟ್ಟಿಗೆ ಕರೆದುಕೊಂಡು ಹರಿಯುತ್ತದೆ. ಯಾರು ಬೇಕಾದರೂ ಸೇರಿಕೊಳ್ಳಬಹುದು. ಉಪನದಿಗಳೆ ಜತೆಯಾಗಬಹುದು, ಪಾತಳಿ ಮಾಡಿಕೊಳ್ಳಬಹುದು. ಬದುವಿ ನೊಂದಿಗೆ ಬದಲಾವಣೆಯ ಮುಖಜಭೂಮಿಯಲ್ಲಿ ಮುಖ ಮಾಡಬಹುದು. ಒರತೆಯಾಗಿ, ಕಿರು ತೊರೆಯಾಗಿ, ಝರಿಯಾಗಿ, ಜಲಪಾತವಾಗಿ, ನದಿಯಾಗಿ, ಮಹಾನದಿಯಾಗಿ… ಹೀಗೆ ಎಲ್ಲರನ್ನೂ ಸೇರಿಸಿಕೊಂಡು ಹರಿಯುವುದೆಂದೇ ಗೊತ್ತು.

ಅದು ಬಂದವರನ್ನೆಲ್ಲ ಬರಸೆಳೆದು ಹಿಡಿದೆಳೆದು ಜತೆಗಾರ ನಾಗುವ ಲೋಕಲ್ ಟ್ರೇನೂ ಹೌದು. ಪದಕೋಶವೆಂಬ ಮಹಾಸಾಗರ ಸೇರುವ ತನಕ, ಇಂಗ್ಲಿಷ್‌ಗೆ ಅಡೆತಡೆ ಇಲ್ಲ, ಅಣೆಕಟ್ಟೂ ಇಲ್ಲ. ಅದೇ ಅದರ ವೈಶಿಷ್ಟ್ಯ. ಮುಂದೊಮ್ಮೆ ನಮ್ಮ ಕನ್ನಡ, ಹಿಂದಿ, ಭೋಜಪುರಿ, ಮರಾಠಿ, ಬಂಗಾಳಿ, ಅಸ್ಸಾಮಿ, ಕೊಂಕಣಿ, ತುಳು ಪದಗಳ ಅರ್ಥಕ್ಕಾಗಿ ಇಂಗ್ಲಿಷ್ ಪದಕೋಶವನ್ನು ನೋಡುವ ದಿನಗಳು ಬಂದರೆ ಅಚ್ಚರಿಪಡಬೇಕಿಲ್ಲ.