Sunday, 15th December 2024

ತಿಂಗಳನ ಅಂಗಳದಲ್ಲಿ ನಡೆಯಲಿರುವ ಪ್ರಜ್ಞಾನ್ !

ಶಶಾಂಕಣ

shashidhara.halady@gmail.com

ಚಂದ್ರನೆಂದರೆ ಮಾನವನಿಗೆ ಸದಾ ಬೆರಗು; ಅನಾದಿ ಕಾಲದಿಂದಲೂ ಚಂದ್ರನ ಕುರಿತು ಮನುಷ್ಯ ಚಿಂತನೆ ನಡೆಸಿದ್ದಾನೆ; ಹಲವು ಪೌರಾಣಿಕ ಕಥೆಗಳಲ್ಲಿ ಚಂದ್ರನನ್ನು ವರ್ಣಿಸಿ, ಆತನನ್ನು ರಕ್ತಮಾಂಸಗಳಿಂತ ತುಂಬಿದ ವ್ಯಕ್ತಿಯಂತೆ ಕಟ್ಟಿನಿಲ್ಲಿಸಿದ್ದಾನೆ; ಚಂದ್ರನು ಭೂಮಿಯ ಮೇಲೆ ಬೀರುವ ಪರಿಣಾಮಗಳ ಕುರಿತು ಪುರಾತನ ಕಾಲದಿಂದಲೇ ಅಧ್ಯಯನಗಳು, ವೀಕ್ಷಣೆಗಳು, ವಿಶ್ಲೇಷಣೆಗಳು, ಸಿದ್ಧಾಂತಗಳು ಬೆಳೆದಿವೆ; ಚಂದ್ರನ ಓಡಾಟದಿಂದ ಉಂಟಾಗುವ ಭರತ – ಇಳಿತಗಳು, ಅಮಾವಾಸ್ಯೆ – ಹುಣ್ಣಿಮೆಯ ಸಮಯದಲ್ಲಿ ಕೆಲವರಲ್ಲಿ ಉಂಟಾವುದು ಎಂದು ತಿಳಿಯಲಾದ ಮಾನಸಿಕ ಏರಿಳಿತಗಳು, ಬೆಳದಿಂಗನ ವೈಭವ, ಚಂದ್ರ ಗ್ರಹಣವೆಂಬ ಬಾನಿನ ಬೆರಗು – ಈ ರೀತಿ ಹಲವು ಆಯಾಮಗಳ ಚರ್ಚೆ, ಚಿಂತನೆ, ಬೆರಗು, ವಿಸ್ಮಯಗಳಿಗೆ ಈ ಆಕಾಶಕಾಯ ಹೇತುವಾಗಿದೆ.

ಆಧುನಿಕ ವಿಜ್ಞಾನವು ಚಂದ್ರನನ್ನು ಭೂಮಿಯ ಉಪಗ್ರಹವೆಂದು ಗುರುತಿಸಿದ ನಂತರ, ಆ ‘ನೆಲ’ದ ಜತೆ ನಮಗೆ ಇನ್ನೊಂದು ರೀತಿಯ ಬಾಂಧವ್ಯವೂ ಬೆಳೆಯಿತು; ಚಂದ್ರನು ‘ಭೂಮಿಯ ಚೂರು’ ಇರಬಹುದೆಂಬ ಪರಿಕಲ್ಪೆನೆಯಿಂದ ಹುಟ್ಟಿದ ಆತ್ಮೀಯತೆ ಇದು. ಚಂದ್ರನು ಹಿಂದೊಮ್ಮೆ ಭೂಮಿಯ ಭಾಗವಾಗಿದ್ದನೇ ಇಲ್ಲವೇ ಎಂಬುದು ಇಲ್ಲಿ ಮುಖ್ಯವಲ್ಲ, ಬದಲಿಗೆ, ರಾತ್ರಿಯ ಹೊತ್ತಿನಲ್ಲಿ ಬಾನಂಗಳದಲ್ಲಿ ಬೆಳಕು ಬೀರುತ್ತಾ, ಗಾತ್ರದಲ್ಲಿ ಏರಿಳಿತವನ್ನು ತೋರುತ್ತಾ, ಸದಾ ನಮ್ಮ ಜತೆ ಯಾಗಿರುವ ಚಂದ್ರನ ಕುರಿತು ಇದ್ದ ಬೆರಗಿನ ಇನ್ನೊಂದು ಭಾವವೇ ಈ ಆತ್ಮೀಯತೆ. ನಾವು ನೀವೆಲ್ಲರೂ, ಬಾಲ್ಯ ದಿಂದಲೇ ಚಂದ್ರನ ಬೆಳಕನ್ನು ಕಂಡು ವಿಸ್ಮಯಗೊಂಡು, ತಾಯಿಯಂದ ಕೈತುತ್ತು ತಿಂದವರಲ್ಲವೇ – ಆ ಒಡನಾಟದಿಂದ ಮೂಡಿದ ಆತ್ಮೀಯತೆ ಇದು.

ಇಪ್ಪತ್ತನೆಯ ಶತಮಾನದಲ್ಲಿ, ಅದರಲ್ಲೂ ಮುಖ್ಯವಾಗಿ, ಎರಡನೆಯ ಮಹಾಯುದ್ಧದ ನಂತರ, ಚಂದ್ರನನ್ನು ಭೌತಿಕವಾಗಿ ಪರಿಶೋಧಿಸುವ ಅಭಿಯಾನಕ್ಕೆ ವೇಗೋತ್ಕರ್ಷವಾಯಿತು. ಎರಡನೆಯ ಮಹಾಯುದ್ಧದ ನಂತರ ಪ್ರಬಲ ಶಕ್ತಿಗಳಾಗಿ ಬೆಳೆದ ಯುಎಸ್ (ಅಮೆರಿಕ) ಮತ್ತು ಯುಎಸ್ ಎಸ್‌ಆರ್ (ರಷ್ಯಾದ ಮೂಲ ದೇಶ)ಗಳು ಪೈಪೋಟಿ ಗಿಳಿದವರಂತೆ, ಬಾಹ್ಯಾಕಾಶದಲ್ಲಿ ಹೊಸ ಹೊಸ ಸಾಹಸಗಳನ್ನು ನಡೆಸತೊಡಗಿದವು. ರಾಕೆಟ್ ಉಡಾವಣೆ, ಬಾಹ್ಯಾಕಾಶ ಸಂಶೋಧನೆ, ಬಾಹ್ಯಾಕಾಶಯಾನ ಮೊದಲಾದ ಕ್ಷೇತ್ರಗಳಲ್ಲಿ ಆ ಎರಡು ದೇಶಗಳು ನಡೆಸಿದ ತುರುಸಿನ ಪೈಪೋಟಿಯ ಸ್ವರೂಪವೇ ವಿಸ್ಮಯ ಹುಟ್ಟಿಸುವಂತಹದ್ದು, ಇಪ್ಪತ್ತನೆಯ ಶತಮಾನದ ವಿಸ್ಮಯ ಸ್ವರೂಪಿ ಸ್ಪರ್ಧೆ ಅದು.

ಇದನ್ನು ಸ್ಪರ್ಧೆ ಎಂದೆ ಗುರುತಿಸಲಾಗಿದ್ದರೂ, ವಾಸ್ತವವಾಗಿ ಈಗ ನೋಡಿದರೆ, ಮನುಷ್ಯನ ಅಸೀಮ ಸಾಹಸ ಮನೋಭಾವದ ಪ್ರತೀಕವೇ ಈ ಸಾಹಸಗಳು ಎಂದೂ ಹೇಳಬಹುದು. ಬಾಹ್ಯಾಕಾಶ ಯಾನದಲ್ಲಿ ಆರಂಭಿಕ ಯಶಸ್ಸನ್ನು ಪಡೆದದ್ದು ರಷ್ಯಾ; ಮೊದಲ ಕೃತಕ ಉಪಗ್ರಹವನ್ನು ನಭಕ್ಕೆ ಏರಿಸಿದ ಖ್ಯಾತಿ ಅದ ರದ್ದು (೧೯೫೭). ಆದರೆ, ಬಹುಬೇಗನೆ ಅಮೆರಿಕವು ರಷ್ಯಾವನ್ನು ಹಿಂದಿಕ್ಕಿ, ಅಪೋಲೋ ಅಭಿಯಾನ ವನ್ನು ಆರಂಭಿಸಿ, ಚಂದ್ರನ ಮೇಲೆ ಮನುಷ್ಯನ್ನು ನಡೆದಾಡಿಸಿದ ಹಿರಿಮೆಯನ್ನು ಪಡೆಯಿತು. ೧೯೬೯ ರಲ್ಲಿ ಚಂದ್ರನ ಮೇಲೆ ಮಾನವ ನಡೆದಾಡಿದ ವಿದ್ಯಮಾನವು, ಆಧುನಿಕ ಮಾನವನ ಅಸಾಧಾರಣ ಸಾಧನೆಗಲ್ಲಿ ಒಂದು ಮತ್ತು ಹೊಸದನ್ನು ಹುಡುಕುತ್ತಲೇ ಇರುವ ಮನುಷ್ಯನ ಸಾಹಸೀ ಮನೋಭಾವದ ಅಸಾದಾರಣ ಯಶಸ್ಸುಗಳಲ್ಲಿ ಒಂದು.

Read E-Paper click here

೧೯೬೯ರಿಂದ ೧೯೭೨ರ ಅವಧಿಯಲ್ಲಿ ಅಮೆರಿಕದ ನಾಸಾ ಸಂಸ್ಥೆಯು ಒಂದರ ಹಿಂದೆ ಒಂದರಂತೆ ಅಪೋಲೋ ನೌಕೆಗಳನ್ನು ಚಂದ್ರನತ್ತ ಕಳಿಸಿ, ೧೨ ಜನ ಬಾಹ್ಯಾಕಾಶ ಯಾನಿಗಳನ್ನು ಚಂದ್ರನ ಮೇಲೆ ಇಳಿಸಿತು. ಚಂದ್ರನತ್ತ ಮಾನವನ ದೌಡಿನ ಈ ಅವಧಿಯ ಸಾಧನೆಯನ್ನು ಗಮನಿಸಿದರೆ, ಅದೇ ವೇಗದಲ್ಲಿ ಅಪೋಲೋ ಸರಣಿಯ ಇನ್ನಷ್ಟು ನೌಕೆಗಳು ಚಂದ್ರನ ಮೇಲೆ ಮನುಷ್ಯನನ್ನು ಇಳಿಸುತ್ತಾ ಮುಂದುವರಿದಿದ್ದರೆ, ಇಷ್ಟು ಹೊತ್ತಿಗೆ ಅಲ್ಲಿ ಮನುಷ್ಯನ ವಸಾಹತು ಅಥವಾ ಕಾಲೊನಿ ಸ್ಥಾಪನೆ ಯಾಗಬೇಕಿತ್ತು! ಆದರೆ, ಅದಾಗಲಿಲ್ಲ; ಅಂತಹ ಸಾಧ್ಯತೆಯನ್ನು ಇಂದಿಗೂ ನಾವು ಎದುರುನೋಡುತ್ತಿದ್ದೇವೆ! ಅದಾವುದೋ ನಿಗೂಢ ಎನ್ನಬಹುದಾದ ಕಾರಣದಿಂದ, ೧೯೭೨ರ ನಂತರ ಅಮೆರಿಕವು, ಚಂದ್ರನತ್ತ ಮನುಷ್ಯರನ್ನು ಕಳಿಸುವ ಕೆಲಸವನ್ನು ಸ್ಥಗಿತಗೊಳಿಸಿತು, ಅಪೋಲೋ ಯೋಜನೆಯೇ ಬರಖಾಸ್ತುಗೊಂಡಿತು.

ಆದರೆ ಚಂದ್ರನತ್ತ ಸಾಗುವ ಮನುಷ್ಯನ ಪ್ರಯತ್ನಗಳು ಕಡಿಮೆಯಾಗಲಿಲ್ಲ; ಈಗಾಗಲೇ ರಷ್ಯಾ ಮತ್ತು ಚೀನಾ ದೇಶಗಳು ಚಂದ್ರನ ಮೇಲೆ ತಮ್ಮ ನೌಕೆಗಳನ್ನು, ರೋವರ್‌ಗಳನ್ನು ಇಳಿಸಿವೆ; ಅಲ್ಲಿ ಸಾಕಷ್ಟು ಸಂಶೋಧನೆಗಳನ್ನು ನಡೆಸಿವೆ. ಜಗತ್ತಿನ ಬೇರೆ ಬೇರೆ ದೇಶಗಳು ಸಹ ‘ಚಂದ್ರಯಾನ’ಕ್ಕೆ ಕೈ ಹಾಕಿದ್ದುಂಟು. ಆದರೆ ಯಾರೂ ಯಶ ಗಳಿಸಲಿಲ್ಲ. ಇಪ್ಪತ್ತೊಂದನೆಯ ಶತಮಾನದಲ್ಲಿ ನಮ್ಮ ದೇಶವೂ ಚಂದ್ರಯಾನವನ್ನು ಕೈಗೊಂಡಿದೆ; ಮಾತ್ರವಲ್ಲ ಮಂಗಳಯಾನವನ್ನೂ ಯಶಸ್ವಿಯಾಗಿ ಮಾಡಿದೆ! ನಮ್ಮ ದೇಶದ ಈ ಯಾನಗಳು ಮಾನವರಹಿತ, ಸಂಶೋಧನಾ ಯಾನಗಳು.

ನಮ್ಮ ದೇಶದದ ಚಂದ್ರಯಾನ-೧ ನಡೆದದ್ದು ೨೦೦೮ರಲ್ಲಿ. ಚಂದ್ರಯಾನ -೨ ನಡೆದದ್ದು ೨೦೧೯ರಲ್ಲಿ. ಈಗ, ಅಂದರೆ, ಈ ಲೇಖನವನ್ನು ನೀವು ಓದುತ್ತಿರುವ ಸಮಯದಲ್ಲಿ, ಈ ದಿನ, ಚಂದ್ರಯಾನ -೩ ನಡೆಯಲಿದೆ. ಭೂಮಿಗೆ ಅತಿ ಸಮೀಪದ ಆಕಾಶಕಾಯವಾದ ಚಂದ್ರನ ಮೇಲ್ಮೈಯನ್ನು ಶೋಧಿಸಲು, ರಾಕೆಟ್ ಮೂಲಕ ಲ್ಯಾಂಡರ್ ಮತ್ತು ರೋವರ್‌ನ್ನು ಚಂದ್ರನತ್ತ ಕಳಿಸುತ್ತಿದ್ದೇವೆ. ಚಂದ್ರಯಾನ – ೩ ಯೋಜನೆಗೆ ನಿನ್ನೆ ಮಧ್ಯಾಹ್ನ ಕೌಂಟ್‌ಡೌನ್ ಆರಂಭವಾಗಿದೆ. ಇಂದು, ಅಂದರೆ, ೧೪.೭.೨೦೨೩ರಂದು ಮಧ್ಯಾಹ್ನ ೨.೩೫ಕ್ಕೆ ಶ್ರೀಹರಿ ಕೋಟಾದಿಂದ, ರೋವರ್, ಲ್ಯಾಂಡರ್ ಮತ್ತು ಇತರ ವೈಜ್ಞಾನಿಕ ಉಪಕರಣ ಗಳನ್ನು ಹೊತ್ತ ಎಲ್ ವಿಎಂಎಎಂ೪ ಹೆಸರಿನ ರಾಕೆಟ್ ನಭಕ್ಕೆ ನೆಗೆಯಲಿದೆ.

ನಾನಾ ರೀತಿಯ ಸಂಕೀರ್ಣ ಲೆಕ್ಕಾಚಾರದ ಪಯಣದ ನಂತರ, ಭೂಮಿಯ ಗುರುತ್ವಾಕರ್ಷಣ ವಲಯವನ್ನು ದಾಟಿ, ಅದರಿಂದ ತಪ್ಪಿಸಿಕೊಂಡು ಚಂದ್ರನತ್ತ ಸಾಗುವ ಈ ಗಗನ ನೌಕೆಯು, ಚಂದ್ರನ ಗುರುತ್ವಾಕರ್ಷಣ ವಲಯವನ್ನು ಪ್ರವೇಶಿಸಲಿದೆ. ಆ ವಲಯದ ಶಕ್ತಿಯನ್ನೇ ಬಳಸಿಕೊಂಡು, ನಿಧಾನವಾಗಿ, ನಿಯಂತ್ರಿತವಾಗಿ ಚಂದ್ರನ ಮೇಲ್ಮೈಗೆ ಸುಮಾರು ೧೦೦ ಕಿ.ಮೀ. ಎತ್ತರದಲ್ಲಿ ಸ್ಥಿರಗೊಳ್ಳುತ್ತದೆ. ಈ ಸಂಕೀರ್ಣ, ಸೂಕ್ಷ್ಮ ಪ್ರಕ್ರಿಯೆಗೆ ಸುಮಾರು ೪೨ ದಿನಗಳ ಕಾಲಾವಕಾಶ ಬೇಕು! ಆಗಸ್ಟ್ ತಿಂಗಳ ೨೩-೨೪ರ ಸಮಯದಲ್ಲಿ, ಆ ನೌಕೆಯ ಒಳಗಿರುವ ಲ್ಯಾಂಡರ್‌ನ್ನು ಚಂದ್ರನ ಮೇಲ್ಮೈಗೆ ಇಳಿಬಿಡಲಾಗುವುದು. ಚಂದ್ರನ ಮೇಲೆ ಇಳಿದ ಲ್ಯಾಂಡರ್ ಒಳಗಿನಿಂದ, ರೋವರ್ (ಚಲಿಸುವ ವಾಹನ) ಹೊರಬಂದು, ಅಲ್ಲಿನ ಮಣ್ಣು, ಕಲ್ಲುಗಳ ಪರಿಶೀಲನೆ ನಡೆಸುವುದು. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಚಲಿಸಲಿರುವ ಆ ರೋವರ್, ಅಲ್ಲಿ ನೀರು ಇರುವ ಸಾಧ್ಯತೆಯನ್ನೂ ಪರಿಶೀಲಿಸಲಿದೆ, ಇತರ ಹಲವು ಸಂಶೋಧನಾ ಕೆಲಸಗಳನ್ನೂ ನಡೆಸಲಿದೆ.

ವಿಶೇಷವೆಂದರೆ, ಚಂದ್ರನ ಮೇಲೆ ‘ವಿಕ್ರಮ’ ಎಂಬ ಹೆಸರಿನ ಲ್ಯಾಂಡರ್ ಇಳಿಸುವ ‘ಪ್ರಜ್ಞಾನ’ ಎಂಬ ಹೆಸರಿನ ರೋವರ್, ತನ್ನ ಸಂಶೋಧನೆಗಳನ್ನು ಕೇವಲ ೧೪ ದಿನಗಳ ಅವಽಯಲ್ಲಿ ಮುಗಿಸಬೇಕು. ಅಂದರೆ, ಚಂದ್ರನ ಒಂದು ‘ದಿನ’ದಲ್ಲಿ ಅದರ ಕೆಲಸ ಮುಗಿಯಬೇಕಾಗಿದೆ. ಚಂದ್ರನ ಒಂದು ದಿನ ಎಂದರೆ, ಭೂಮಿಯ ೧೪ ದಿನಗಳು. ಆ ನಂತರ ಚಂದ್ರನ ರಾತ್ರಿ ಆವರಿಸಿದರೆ, ಅದೂ ಸಹ ಎರಡು ವಾರಗಳ ಕಾಲ ಇರಲಿದೆ; ಚಂದ್ರನ ಮೇಲ್ಮೈಯ ಆ ರಾತ್ರಿಯ ಅತಿ ಶೀತಲ ವಾತಾವರಣನವನ್ನು ಪ್ರಜ್ಞಾನ್ ರೋವರ್ ತಡೆದುಕೊಳ್ಳಲಾರದು. ಅದು ಅಲ್ಲಿನ ಹಗಲಿನಲ್ಲಿ ಮಾತ್ರ ಕೆಲಸ ಮಾಡಬಲ್ಲದು!

ಆದ್ದರಿಂದಲೇ ಅದರ ಸಂಶೋಧನೆಯೆಲ್ಲವೂ ಹದಿನಾಲ್ಕೇ ದಿನಗಳಲ್ಲಿ ಮುಗಿಯುತ್ತದೆ, ಮುಗಿಯ ಬೇಕು. ಇವೆಲ್ಲವೂ ಬಹಳ ಬಹಳ ಸಂಕೀರ್ಣ ಕಾರ್ಯಗಳು, ಜನಸಾಮಾನ್ಯರಿಗೆ (ಲೇ ಮ್ಯಾನ್) ಸುಲಭವಾಗಿ ಅರ್ಥವಾಗದ ಬಾಹ್ಯಾಕಾಶ ಲೆಕ್ಕಾಚಾರಗಳು. ಚಂದ್ರಯಾನ -೩ ರ ಕುರಿತು ನಮ್ಮ ದೇಶದವರೆಲ್ಲರೂ ಗುರುತಿಸಬೇಕಾದ, ಗಮನಿಸಬೇಕಾದ, ಹೆಮ್ಮೆ ಪಡಬೇಕಾದ ಒಂದು ವಿಚಾರವಿದೆ. ಈ ಅಭಿಯಾನವು ಯಶಸ್ವಿಯಾದರೆ, ನಮ್ಮ ದೇಶವು ಒಂದು ಹೊಸ ದಾಖಲೆಯನ್ನು ಬರೆಯುತ್ತಿದೆ.

ಚಂದ್ರನ ಮೇಲೆ ‘ಸಾಫ್ಟ್ ಲ್ಯಾಂಡ್’ ಅಂದರೆ ಸುರಕ್ಷಿತವಾಗಿ ಉಪಕರಣಗಳನ್ನು ಇಳಿಸಿದ ನಾಲ್ಕನೆಯ ದೇಶವಾಗಿ ನಮ್ಮ ದೇಶ ಗುರುತಿಸಲ್ಪಡುತ್ತದೆ. ಇದುವರೆಗೆ ಚಂದ್ರನ ಮೇಲೆ ಸಾಫ್ಟ್  ಲ್ಯಾಂಡಿಂಗ್ ಮಾಡಿದ, ಉಪಕರಣಗಳನ್ನು ಅಥವಾ ಮನುಷ್ಯರನ್ನು ಸುರಕ್ಷಿತವಾಗಿ ಇಳಿಸಿದ ದೇಶಗಳೆಂದರೆ ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ. ೨೦೧೯ರಲ್ಲಿ ನಡೆದ ಚಂದ್ರಯಾನ -೨ರ ಮೂಲಕ, ಅಂತಹದೊಂದು ಸಾಧನೆಯನ್ನು ಮಾಡಲು ನಮ್ಮ ದೇಶವು ಪ್ರಯತ್ನಿಸಿತ್ತು. ಆದರೆ, ಎಲ್ಲವೂ ಸುಸೂತ್ರವಾಗಿ ನಡೆದು, ಚಂದ್ರನ ಅತಿ ಹತ್ತಿರದ ಕಕ್ಷೆಗೆ ತಲುಪಿದ ನಂತರ, ರೋವರ್‌ನ್ನು ಸಾಫ್ಟ್  ಲ್ಯಾಂಡಿಂಗ್ ವಿಫಲಗೊಂಡು, ಕ್ರ್ಯಾಶ್ ಲ್ಯಾಂಡ್ ಆಯಿತು.

ಉಪಕರಣಗಳು ಚಂದ್ರನ ನೆಲವನ್ನು ತಲುಪಿದರೂ, ಅವು ಬಿದ್ದು ಹೋದವು, ಉದ್ದೇಶಿತ ಕೆಲಸ ಮಾಡಲಿಲ್ಲ. ಈಗ ಚಂದ್ರಯಾನ -೩ರ ವಿಕ್ರಮ್ ಲ್ಯಾಂಡರ್ ಅಲ್ಲಿ ಸಾಫ್ಟ್  ಲ್ಯಾಂಡ್ ಆದರೆ, ಈ ರೀತಿ ಮಾಡಿದ ನಾಲ್ಕನೇ ದೇಶ ನಮ್ಮದಾಗಲಿದೆ. ೨೦೧೯ರಲ್ಲಿ ನಮ್ಮ ಚಂದ್ರಯಾನ-೨ ವಿಫಲಗೊಂಡ ನಂತರ, ಇಸ್ರೇಲ್ ಇಂತಹದ್ದೇ ಪ್ರಯತ್ನವನ್ನು ಮಾಡಿ ಸೋತಿತ್ತು. ೨೦೨೨ರಲ್ಲಿ ಜಪಾನ್ ಮತ್ತು ಯುಎಇ ದೇಶಗಳು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಪ್ರಯತ್ನ ನಡೆಸಿ, ವಿಫಲವಾಗಿದ್ದವು. ಈ ಎಲ್ಲಾ ಹಿನ್ನೆಲೆಯಲ್ಲಿ, ಚಂದ್ರಯಾನ – ೩ ಒಂದು ಪ್ರಮುಖ ಅಭಿಯಾನ ಮತ್ತು ದಾಖಲೆ ನಿರ್ಮಿಸಲಿರುವ ಸಾಧನೆ.

ನಮ್ಮ ದೇಶದ ಈ ಸಾಧನೆಯನ್ನು ಬೇರೆಯದೇ ದೃಷ್ಟಿಕೋನದಲ್ಲಿ ನೋಡುವ ಅವಶ್ಯಕತೆಯೂ ಇದೆ. ಚಂದ್ರಯಾನ – ೩ ಯಶ ಕಂಡರೆ, ಈ ಕ್ಷೇತ್ರದಲ್ಲಿ ನಾವು ಇತರ ಹಲವು ಅಭಿವೃದ್ಧಿಹೊಂದಿದ ದೇಶಗಳನ್ನು ಹಿಂದಿಕ್ಕಿದಂತೆ! ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಜಪಾನ್, ಯುರೋಪಿನ ಹಲವು ದೇಶಗಳು, ಆಸ್ಟ್ರೇಲಿಯಾ ಮೊದಲಾದ ಹಲವು ಶ್ರೀಮಂತ ದೇಶಗಳಿಂದ ಸಾಧ್ಯವಾಗದೇ ಇರುವ ‘ಚಂದ್ರನ ಮೇಲಿನ ಸಾಫ್ಟ್  ಲ್ಯಾಂಡಿಂಗ್’ನ್ನು ನಾವು ಮಾಡುತ್ತಿದ್ದೇವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅದೊಂದು ವಿಕ್ರಮ. ಜಗತ್ತಿನ ಮುಂದುವರಿದ ದೇಶಗಳು ಹಲವು ಬಾರಿ ನಮ್ಮ ದೇಶವನ್ನು ತುಸು ಕೀಳಾಗಿ ನೋಡಿದ ಸಂದರ್ಭಗಳಿವೆ. ಕಳೆದ ಶತಮಾನದಲ್ಲಿ ಸೂಪರ್ ಕಂಪ್ಯೂಟರ್ ತಂತ್ರಜ್ಞಾನ ವನ್ನು ನಮ್ಮ ದೇಶಕ್ಕೆ ಕೊಡಲಾಗದು ಎಂದು ಅಮೆರಿಕ ಹೇಳಿತ್ತು. ಆ ನಂತರ ನಮ್ಮ ವಿಜ್ಞಾನಿಗಳೇ ಅಂತಹದೊಂದು ಕಂಪ್ಯೂಟರ್‌ನ್ನು ತಯಾರಿಸಿದರು.

ಅಣು ಶಕ್ತಿಯನ್ನು ಬಳಸಿಕೊಳ್ಳುವ ವಿಚಾರ ದಲ್ಲಿ ಅಮೆರಿಕವೂ ಸೇರಿದಂತೆ ಶ್ರೀಮಂತ ದೇಶಗಳು ನಮ್ಮ ಮೇಲೆ ಸ್ಯಾಂಕ್ಷನ್‌ಗಳನ್ನು ಹೇರಿ, ಅವಮಾನಕ್ಕೆ ಒಳಪಡಿಸಿದ್ದವು. ಮೊನ್ನೆ ಮೊನ್ನೆ, ಅಮೆರಿಕದ ಒಬ್ಬ ಭೂಪನು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ನಾವು, ಅಂದರೆ ಭಾರತದವರು ಸಂಶೋಧನೆ ನಡೆಸುವ ಅವಶ್ಯಕತೆ ಇಲ್ಲ ಎಂದು ಹೇಳಿ, ಅವಮಾನ ಮಾಡಿದನು. ಜತೆಗೆ, ನಮ್ಮ ದೇಶ ದಲ್ಲಿ ಬಡತನ ಮತ್ತು ಸಾಮಾಜಿನ ಅಜ್ಞಾನ ಇನ್ನೂ ಮಾಯವಾಗಿಲ್ಲ, ಇಂತಹ ಸಂದರ್ಭದಲ್ಲಿ ಬಾಹ್ಯಾಕಾಶ ಕ್ಷೇತ್ರದ ದುಬಾರಿ ಸಾಧನೆಯ ಅಗತ್ಯ ಇದೆಯೇ ಎಂಬ ಪ್ರಶ್ನೆಯನ್ನೂ ಹಲವರು ಕೇಳುತ್ತಿದ್ದಾರೆ. (ಚಂದ್ರಯಾನ ೩ ರ ಅಂದಾಜು ವೆಚ್ಚ ರು.೬೧೫ ಕೋಟಿ) ಈ ಎಲ್ಲಾ ಸನ್ನಿವೇಶಗಳ ನಡುವೆ, ಚಂದ್ರನ ಮೇಲೆ ನಾವು ಈಗ ಸಾಫ್ಟ್ ಲ್ಯಾಂಡ್ ಮಾಡುತ್ತಿದ್ದೇವೆಂದರೆ, ಅದೊಂದು ಅಭೂತಪೂರ್ವ ಸಾಧನೆ.

ಇಲ್ಲಿ ಇನ್ನೂ ಒಂದು ವಿಚಾರ ನೆನಪಿಗೆ ಬರುತ್ತದೆ. ಇಂಗ್ಲೆಂಡ್, ಫ್ರಾನ್ಸ್, ಅಮೆರಿಕ ಮೊದಲಾದ ದೇಶಗಳು ಇಪ್ಪತ್ತನೆಯ ಶತಮಾನದ ಆದಿಭಾಗದಿಂದಲೇ ವಿಜ್ಞಾನ ಮತ್ತು ಬಾಹ್ಯಾಕಾಶ ವಿಜ್ಞಾನದಲ್ಲಿ ಸಂಶೋಧನೆ ನಡೆಸುತ್ತಾ ಬಂದಿದ್ದವು. ಆದರೆ ನಮ್ಮ ದೇಶವು ೧೯೪೭ರ ತನಕ ಬ್ರಿಟಿಷರ ವಸಾಹಾತಾಗಿತ್ತು; ಅವರು ನಮ್ಮ ದೇಶದಿಂದ ಸಂಪತ್ತನ್ನು ಸಾಗಿಸುವಲ್ಲಿ ನಿರತರಾಗಿದ್ದರೇ ಹೊರತು ಇಲ್ಲಿ ವಿಜ್ಞಾನ ಕ್ಷೇತ್ರದ ಅಭಿವೃದ್ಧಿಯ ಕುರಿತು ಗಮನ ಹರಿಸಿರಲಿಲ್ಲ; ಬ್ರಿಟಿಷರು ಅನುಮತಿ
ನೀಡಿದ ಕ್ಷೇತ್ರಗಳಲ್ಲಿ ಮಾತ್ರ ಇಲ್ಲಿ ಸಂಶೋಧನೆ ನಡೆಯಬೇಕಿತ್ತು; ೧೯೪೭ರ ತನಕ ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ಸಂಶೋಧನೆ ಶೂನ್ಯ. ಸ್ವಾತಂತ್ರ್ಯ ದೊರೆತ ನಂತರ, ೧೯೫೦ರ ದಶಕದಲ್ಲಿ ವಿಜ್ಞಾನ ಮತ್ತು ಬಾಹ್ಯಾಕಾಶ ವಿಜ್ಞಾನದಲ್ಲಿ ನಮ್ಮ ದೇಶವು ಹೊಸದಾಗಿ ಹೆಜ್ಜೆಯೂರಲು ಆರಂಭಿಸಿತು.

೧೯೬೯ರಲ್ಲಿ ಇಸ್ರೋ ಸ್ಥಾಪನೆಯಾಯಿತು. ೧೯೭೫ರಲ್ಲಿ ನಮ್ಮ ದೇಶದ ಮೊದಲ ಉಪಗ್ರಹ ಆರ್ಯಭಟವು ಬಾಹ್ಯಾಕಾಶವನ್ನು ತಲುಪಿತು; ಆದರೆ ಅದನ್ನು ಉಡಾವಣೆ ಮಾಡಿದ್ದು ರಷ್ಯಾದಲ್ಲಿ. ೧೯೮೦ರಲ್ಲಿ ಎಸ್‌ಎಲ್‌ವಿ ೩ ರಾಕೆಟ್‌ನ್ನು ಹಾರಿಸುವಲ್ಲಿ ಇಸ್ರೋ ಯಶಗಳಿಸಿತು. ಅದೊಂದು ಪ್ರಮುಖ ಬೆಳವಣಿಗೆ; ಅಂದು ಆರಂಭಗೊಂಡ ರಾಕೆಟ್ ತಂತ್ರಜ್ಞಾನದ ಅಭಿಯಾನವು, ಇಂದು ಚಂದ್ರಯಾನ-೩ಕ್ಕೆ ನಮ್ಮ ದೇಶವನ್ನು ತಂದು ನಿಲ್ಲಿಸಿದೆ. ಇಸ್ರೊದಂತಹ ದಕ್ಷ, ಹೆಮ್ಮೆಯ ಸಂಸ್ಥೆಯು ಚಂದ್ರನ ಮೇಲೆ ಸಾಪ್ಟ್‌ಲ್ಯಾಂಡಿಂಗ್‌ಗೆ ಈಗ ಕ್ಷಣಗಣನೆ ನಡೆಸುತ್ತಿದೆ. ಇಂದು ಮಧ್ಯಾಹ್ನ ಶ್ರೀಹರಿಕೋಟಾದಿಂದ ವಿಕ್ರಮ್ ಲ್ಯಾಂಡರ್ ಮತ್ತು
ಪ್ರಜ್ಞಾನ್ ರೋವರ್ ಹೊತ್ತ ರಾಕೆಟ್ ನಭಕ್ಕೆ ಏರಲಿದೆ; ಬಾಹ್ಯಾಕಾಶದ ಈ ಸಾಹಸದ ದೃಶ್ಯ ಗಳನ್ನು ನೇರಪ್ರಸಾರದಲ್ಲಿ ಸಹ ನೋಡಬಹುದು.

ಇಂದು ಮಧ್ಯಾಹ್ನ ೨.೩೫ಕ್ಕೆ ಈ ಅಭೂತಪೂರ್ವ ದೃಶ್ಯದ ನೇರ ಪ್ರಸಾರವನ್ನು ನಾನು ವೀಕ್ಷಿಸಲು ಕಾತುರನಾಗಿದ್ದೇನೆ. ಮತ್ತೆ, ನೀವು?