Saturday, 14th December 2024

’ಪದ್ಮಪತ್ರ ಮಿವಾಂಭಸಾ’ ತತ್ವಜ್ಞಾನ ಮತ್ತದರ ಹಿಂದಿನ ವಿಜ್ಞಾನ

ತಿಳಿರು ತೋರಣ

srivathsajoshi@yahoo.com

ಕಮಲದ ಎಲೆಯೆ ಮೇಲೇಕೆ ನೀರು ನಿಲ್ಲುವುದಿಲ್ಲ? ಕಮಲದ್ದಷ್ಟೇ ಅಲ್ಲ, ಪತ್ರೊಡೆಪ್ರಿಯರಾದ ನಮ್ಮಂಥ ಕರಾವಳಿ-ಮಲೆನಾಡಿ ಗರಿಗೆ ಗೊತ್ತಿರುತ್ತದೆ ಕೆಸುವಿನ ಎಲೆಗಳ ಮೇಲೂ ನೀರು ನಿಲ್ಲುವುದಿಲ್ಲ. ಇದರ ಹಿಂದೆ ವೈಜ್ಞಾನಿಕ ಕಾರಣವಿದೆ. ಆ ಎಲೆಗಳಿಗೆ ‘ಸ್ವಯಂಸ್ವಚ್ಛತೆ’ ಜನ್ಮಜಾತ ಗುಣವೇ ಆಗಿದೆ. ಪ್ರಕೃತಿಯ ಈ ವಶಿಷ್ಟ್ಯವನ್ನು ಗುರುತಿಸಿರುವ ವಿಜ್ಞಾನಿಗಳು ಅದನ್ನು ಮನುಷ್ಯನ ಉಪಯೋಗಕ್ಕಾಗುವ ವಸ್ತುಗಳ ನಿರ್ಮಾಣದಲ್ಲಿ ಬಳಸತೊಡಗಿದ್ದಾರೆ.

ಅಬ್ರಹಾಂ ಪಾಯ್ಸ್ ಎಂಬ ಡಚ್ ಭೌತಶಾಸ್ತ್ರಜ್ಞನು Einstein Lived Here ಪುಸ್ತಕದಲ್ಲಿ, ವಿಜ್ಞಾನಿ ಐನ್ ಸ್ಟೈನ್‌ನ ವ್ಯಕ್ತಿತ್ವವನ್ನು ‘Rarely lonely, mostly alone ಎಂದು ಬಣ್ಣಿಸಿದ್ದಾನೆ. ಕನ್ನಡದಲ್ಲಿ ವಿಜ್ಞಾನಲೇಖಕರಾಗಿದ್ದ ಜಿ.ಟಿ.ನಾರಾಯಣರಾಯರು ಇದನ್ನು ಒಂದುಕಡೆ ಐನ್‌ಸ್ಟೈನ್ ಗೆ ಸಂಬಂಧಿಸಿ ದಂತೆಯೇ ‘ವಿರಳವಾಗಿ ಏಕಾಕಿ; ಬಹುತೇಕ ಏಕಾಂಗಿ.

ಸದಾ ಜನಾವೃತ, ಆದರೂ ಒಬ್ಬಂಟಿಗ’ ಎಂದು ತರ್ಜುಮೆ ಮಾಡಿ ಬರೆದಿದ್ದಾರೆ. ಏಕಾಕಿ ಅಂದರೆ ಭೌತಿಕವಾಗಿ ಇತರರಿಂದ ಸುತ್ತುವರಿಯ ಲ್ಪಟ್ಟಿರದ, ಒಬ್ಬನೇ ಇರುವವ. ಏಕಾಂಗಿ ಅಂದರೆ ಮಾನಸಿಕವಾಗಿ ಅಥವಾ ಅಂತರಂಗದಲ್ಲಿ ಒಬ್ಬಂಟಿ ಯಾಗಿರುವವ. ಅದನ್ನೇ ಏಕಾಂತದಲ್ಲಿರುವುದು ಎಂದೂ ಹೇಳುವುದಿದೆ. ಸುತ್ತಮುತ್ತಲಿನ ಆಗುಹೋಗುಗಳಿಗೆ ಕಿವಿಗೊಡದೆ
ನಮ್ಮ ಅಂತರಂಗದೊಂದಿಗೆ, ಅದರ ಚಲನವಲನಗಳಿಗೆ ಸಾಕ್ಷಿಯಾಗಿ ಇರುವ ಮನಃಸ್ಥಿತಿ. ಐನ್‌ಸ್ಟೈನ್ ಇದ್ದದ್ದೇ ಹಾಗೆ.

ಆತ ಏಕಾಕಿಯೇನಲ್ಲ, ಆದರೆ ಏಕಾಂತಪ್ರಿಯ. ‘ತರಗತಿಯಲ್ಲಿ ಪಾಠಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ. ಪಿಎಚ್‌ಡಿಗಳನ್ನು ತಯಾರಿಸಿ
ದವರಲ್ಲ. ಸಹಕಾರ್ಯಕರ್ತರ ಜತೆಗಿರುತ್ತಿದ್ದರು. ಮೂವತ್ತಕ್ಕಿಂತಲೂ ಹೆಚ್ಚುಮಂದಿ ಭೌತವಿಜ್ಞಾನಿಗಳ ಜೊತೆ ಸಂಯುಕ್ತವಾಗಿ
ಸಂಶೋಧನಪ್ರಬಂಧಗಳನ್ನು ಪ್ರಕಟಿಸಿದರು. ಇಂತಿದ್ದರೂ ಅವರಿಗೆ ಉತ್ಕಟಾವಶ್ಯಕತೆ ಇದ್ದದ್ದು ವಿವಿಕ್ತವಾಗಿ ಅಥವಾ  ಒಬ್ಬಂಟಿಗನಾಗಿ ಚಿಂತಿಸುವುದರಲ್ಲೇ, ತಮ್ಮಷ್ಟಕ್ಕೆ ತಾವೇ ಇರುವುದರಲ್ಲೇ’ ಎಂದು ವಿವರಿಸುವ ಜಿ.ಟಿ.ಎನ್ ಕೊನೆಗೆ ಒಂದು ನುಡಿಗಟ್ಟನ್ನು ಸೇರಿಸುತ್ತಾರೆ- ‘ಪದ್ಮಪತ್ರಮಿವಾಂಭಸಾ’ ಎಂದು.

ಅದು, ಭಗವದ್ಗೀತೆಯಲ್ಲಿ ಐದನೆಯ ಅಧ್ಯಾಯದ ಹತ್ತನೆಯ ಶ್ಲೋಕದಲ್ಲಿ ಕೃಷ್ಣಪರಮಾತ್ಮ ಹೇಳುವ ಮಾತು. ‘ಬ್ರಹ್ಮಣ್ಯಾ
ಧಾಯ ಕರ್ಮಾಣಿ ಸಂಗಂ ತ್ಯಕ್ತ್ವಾ ಕರೋತಿ ಯಃ| ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿವಾಂಭಸಾ||’ ಅರ್ಜುನನಿಗೆ ಕೃಷ್ಣ ಹೇಳುತ್ತಿರುವುದು ಕರ್ಮಸಂನ್ಯಾಸದ ಬಗ್ಗೆ. ಯಾವಾತನು ಎಲ್ಲ ಕರ್ಮಗಳನ್ನೂ ಪರಮಾತ್ಮನಿಗೆ ಅರ್ಪಿಸಿ, ಯಾವ ಫಲಾ ಸಕ್ತಿಯೂ ಇಲ್ಲದೆ ಕರ್ಮವನ್ನಾಚರಿಸುತ್ತಾನೋ ಆತನಿಗೆ, ಕಮಲದ ಎಲೆಗೆ ನೀರಿನ ಲೇಪವಾಗದಿರುವಂತೆ, ಪಾಪದ ಲೇಪ ವಾಗುವುದಿಲ್ಲ ಎಂದು.

ಮೈಮನಸ್ಸುಗಳನ್ನೆಲ್ಲ ಕೃಷ್ಣಪ್ರಜ್ಞೆಯಲ್ಲಿಯೇ ತೊಡಗಿಸಿಕೊಂಡರೆ ದೇಹವು ಪಾಪಫಲಗಳಿಂದ ಕಲುಷಿತವಾಗುವುದಿಲ್ಲ ಎನ್ನುವು ದಕ್ಕೆ ನೀರಿನಲ್ಲಿದ್ದೂ ಒದ್ದೆಯಾಗದ ಕಮಲದ ಎಲೆಯ ಹೋಲಿಕೆ. ಕಮಲದ ಎಲೆಯ ಮೇಲೆ ಬೀಳುವ ನೀರಿನ ಹನಿ ಎಲೆಯ ಮೇಲಿದ್ದರೂ ಎಲೆಗೆ ಅಂಟಿಕೊಳ್ಳುವುದಿಲ್ಲ. ಹಾಗೆಯೇ ಮನುಷ್ಯನು ಈ ಸಂಸಾರದಲ್ಲಿದ್ದೂ ಮೋಹಕ್ಕೆ ಒಳಗಾಗದೆ ತನ್ನ
ಕರ್ತವ್ಯಗಳನ್ನು ಮಾಡುತ್ತಾ ದೇವರನ್ನು ಆರಾಧಿಸಿ ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು. ವೇದಾಧ್ಯಯನದಲ್ಲಿ ತೊಡಗಿ
ಪ್ರಾಪಂಚಿಕ ಸುಖಭೋಗಗಳನ್ನು ತೊರೆಯಬೇಕು.

ಸತ್ತ್ವ- ರಜೋ-ತಮೋಗುಣಗಳನ್ನು ಅಂಟಿಸಿಕೊಳ್ಳದೆ ಜೀವಿಸಬೇಕು. ಮಹೋನ್ನತ ಆಶಯದ ಮಹೋನ್ನತ ಸಂದೇಶ.
ಕಮಲದ ಎಲೆಯನ್ನು ಹೋಲಿಕೆಯಾಗಿ ಬಳಸಿ ನೀತಿ ಬೋಧಿಸುವ ಬೇರೆ ಕೆಲವು ಶ್ಲೋಕಗಳೂ ಸಂಸ್ಕೃತದಲ್ಲಿವೆ. ಒಂದು ಸುಭಾಷಿತ ಹೀಗೆನ್ನುತ್ತದೆ: ‘ಅಪಿ ಸಹವಸತಾಮಸತಾಂ ಜಲರೂಹಜಲವದ್ಭವತ್ಯಸಂಶ್ಲೇಷಃ| ದೂರೇಧಿಪಿ ಸತಾಂ ವಸತಾಂ
ಪ್ರೀತಿಃ ಕುಮುದೇನ್ದುವದ್ಭವತಿ||’ ಅಂದರೆ, ಕೆಸರು ಮತ್ತು ನೀರಿನ ಅತಿ ಸಾಮೀಪ್ಯವಿದ್ದರೂ ಕಮಲದೆಲೆಯು ಅದರೊಡನೆ ಸ್ನೇಹ ಬೆಳೆಸಿಕೊಳ್ಳುವುದಿಲ್ಲ.

ಅಂತೆಯೇ ದುರ್ಜನರೊಡನೆ ಇರಬೇಕಾಗಿ ಬಂದರೂ ಅವರೊಡನೆ ಸ್ನೇಹ ಬೆಳೆಸಿಕೊಳ್ಳುವುದು ಸರಿಯಲ್ಲ. ಸಜ್ಜನರ ವಿಚಾರ ಹಾಗಲ್ಲ. ದೂರದಲ್ಲಿರುವ ಚಂದ್ರನನ್ನೂ ನದಿ ಲೆಯು ಹೇಗೆ ಪ್ರೀತಿಸಬಲ್ಲುದೋ ಹಾಗೆ ಸಜ್ಜನರು ಅತಿದೂರದಲ್ಲಿದ್ದರೂ ಅವರೊಡನೆ ಸ್ನೇಹಸಂಬಂಧ ಗಾಢವಾಗಿ ಬೆಳೆಯಬಲ್ಲುದಾಗುತ್ತದೆ. ಇನ್ನೊಂದು ಶ್ಲೋಕ ‘ಪದ್ಮಪರ್ಣಂ ಯಥಾ ಚವ ಜಲೇ ಜಾತಂ ಜಲೇ ಸ್ಥಿತಂ| ಉಪರಿಷ್ಟಾದಧಸ್ತಾದ್ವಾ ನ ಜಲೇಂದೋಪಲಿಪ್ಯತೇ|| ತದ್ವಲ್ಲೋಕೇ ಮುನಿರ್ಜಾತೋ ಲೋಕಸ್ಯಾ ನುಗ್ರಹಂ ಚರನ್| ಕೃತಿತ್ವಾನ್ನಿರ್ಮಲತ್ವಾಚ್ಚ ಲೋಕಧರ್ಮೈನ ಲಿಪ್ಯತೇ||’ ಅಂತ ಇದೆ. ನೀರಿನಲ್ಲೇ ಹುಟ್ಟಿ ನೀರಿನಲ್ಲೇ ಬೆಳೆಯುವ ಕಮಲದೆಲೆಯು ನೀರು ತನ್ನ ಮೇಲೆ ಇರುವುದಕ್ಕೆ ಬಿಡುವುದಿಲ್ಲ.

ಅದೇರೀತಿ ಒಬ್ಬ ಮುನಿ ಎನಿಸಿಕೊಂಡವನು ಈ ಲೋಕದಲ್ಲಿ ಹುಟ್ಟಿ ಈ ಲೋಕದಲ್ಲೇ ಬದುಕುತ್ತಿದ್ದರೂ ತನ್ನ ಪುಣ್ಯಕಾರ್ಯ ಗಳಿಂದ ಅದನ್ನು ಪಾವನಗೊಳಿಸುತ್ತಾನೆಯೇ ವಿನಾ ಲೋಕಧರ್ಮದಿಂದ, ಲೋಕದಲ್ಲಿ ಹರಡಿರುವ ನೇತ್ಯಾತ್ಮಕ ಗುಣಗಳಿಂದ ಬಾಽತನಾಗುವುದಿಲ್ಲ. ಶಂಕರಾಚಾರ್ಯರು ರಚಿಸಿದ ಭಜಗೋವಿಂದಂನಲ್ಲೂ ಕಮಲದ ಎಲೆಯ ಪ್ರಸ್ತಾವವಿದೆ: ‘ನಲಿನೀದಲ ಗತ ಜಲಮತಿತರಲಂ| ತದ್ವಜ್ಜೀವಿತಮತಿಶಯಚಪಲಂ| ವಿದ್ಧಿ ವ್ಯಾಧ್ಯಭಿಮಾನಗ್ರಸ್ತಂ| ಲೋಕಂ ಶೋಕಹತಂ ಚ
ಸಮಸ್ತಂ||’ ಕಮಲದ ಎಲೆಯ ಮೇಲಿನ ನೀರನ್ನು ಸಮೀಪದಿಂದ ನೋಡಿದರೆ ಅದರ ಅಸ್ಥಿರತೆ ತಿಳಿಯುತ್ತದೆ.

ಹಾಗೆಯೇ ಜೀವನವು ಚಂಚಲವಾದದ್ದು. ದೇಹಾಭಿಮಾನ ಹೊಂದಿದವನನ್ನು ಜಗತ್ತಿನ ಸಮಸ್ತ ದುಃಖಗಳು ಕಾಡುತ್ತವೆ.
ಕಮಲದ ಎಲೆಯು ನೀರಿನ ಹನಿಗೆ ಆಧಾರ ನೀಡುತ್ತದೆಯೇ ಹೊರತು ಅದನ್ನು ಎಳೆದು ಹಿಡಿದಿಡುವದಿಲ್ಲ. ಅಂತೆಯೇ ಈ
ಪ್ರಪಂಚವು ಜೀವಿಗಳಿಗೆ ಆಧಾರ ನೀಡುತ್ತದೆ. ತನ್ನನ್ನು ಕಾಪಾಡಿಕೊಳ್ಳುವುದು ಜೀವಿಯದೇ ಕೆಲಸ. ಪ್ರಕೃತಿನಿಯಮ ತಪ್ಪುವುದು ದುಃಖವನ್ನು ಆಹ್ವಾನಿಸಿದಂತೆ.

ನಮ್ಮನಿಮ್ಮಂಥ ಜನಸಾಮಾನ್ಯರಿಗೆ ಇದೆಲ್ಲ ಓದಲಿಕ್ಕೆ ಕೇಳಲಿಕ್ಕೆ ಸುಲಭ, ಅಳವಡಿಸಿಕೊಳ್ಳುವುದಕ್ಕೆ ತುಂಬ ಕಷ್ಟವಿದೆ ಅಂತನಿಸುತ್ತದೆ. ನಾವೇನು ಮನೆ-ಸಂಸಾರ ಎಲ್ಲವನ್ನೂ ತ್ಯಜಿಸಿ ಕಾಡಿಗೆ ಹೋಗಿ ಬದುಕಲು ಆಗುತ್ತದೆಯೇ? ಬಹುಶಃ ಸಂಸ್ಕೃತ ಶ್ಲೋಕಗಳಿಗಿಂತ, ಸ್ವಾರಸ್ಯಕರ ದೃಷ್ಟಾಂತ ಕಥೆಗಳನ್ನು ಸರಳವಾದ ಕನ್ನಡಲ್ಲಿ ಹೇಳಿದರೆ ಈ ‘ಪದ್ಮಪತ್ರ ಮಿವಾಂಭಸಾ’ ಚೆನ್ನಾಗಿ ಮನವರಿಕೆ ಆಗಬಹುದು. ಇಬ್ಬರು ಸಂನ್ಯಾಸಿಗಳದೊಂದು ಕಥೆಯಿದೆ. ಒಬ್ಬ ವೃದ್ಧ ಸಂನ್ಯಾಸಿ ಹಾಗೂ ಮತ್ತೊಬ್ಬ ಯುವ ಸಂನ್ಯಾಸಿ.

ಇಬ್ಬರೂ ನದೀ ತೀರದಲ್ಲಿ ಧ್ಯಾನದಲ್ಲಿ ಮಗ್ನರಾಗಿರುತ್ತಾರೆ. ಅದೇ ಹೊತ್ತಿಗೆ ತರುಣಿಯೊಬ್ಬಳು ಕಾಲು ಜಾರಿ ನದಿನೀರಿನಲ್ಲಿ ಬೀಳುತ್ತಾಳೆ. ಈಜು ಬಾರದ ಆಕೆ ರಕ್ಷಣೆಗಾಗಿ ಕೂಗುತ್ತಾಳೆ. ಅದು ಸಂನ್ಯಾಸಿಗಳಿಗೂ ಕೇಳಿಸುತ್ತದೆ. ಬಿದ್ದವಳು ಒಬ್ಬ ಸ್ತ್ರೀ ಎಂದು ತಿಳಿದೊಡನೆಯೇ ವೃದ್ಧ ಸಂನ್ಯಾಸಿಯು ಸ್ತ್ರೀಸ್ಪರ್ಶ ಮಾಡಿದರೆ ತನ್ನ ವ್ರತಭಂಗ ಆಗುತ್ತದೆಂದು ಸುಮ್ಮನಿದ್ದು ಬಿಡುತ್ತಾನೆ. ಆದರೆ ಯುವ ಸಂನ್ಯಾಸಿಯು ಅಸಹಾಯಕ ಸ್ತ್ರೀಯ ಕೂಗಿಗೆ ಓಗೊಡುತ್ತಾನೆ. ನೀರಿಗೆ ಹಾರಿ ಆಕೆಯನ್ನು
ಹೊತ್ತು ಸುರಕ್ಷಿತ ತಾಣಕ್ಕೆ ಬಿಟ್ಟು ಮತ್ತೆ ಧ್ಯಾನದಲ್ಲಿ ಮಗ್ನನಾಗುತ್ತಾನೆ. ಇದನ್ನು ದೂರದಿಂದಲೇ ನೋಡುತ್ತಿದ್ದ ವೃದ್ಧ ಸನ್ಯಾಸಿಗೆ ಯುವಸಂನ್ಯಾಸಿಯ ವರ್ತನೆ ಹಿಡಿಸುವುದಿಲ್ಲ. ಆದರೂ ತುಟಿಪಿಟಿಕ್ಕೆನ್ನದೆ ಸುಮ್ಮನಿರುತ್ತಾನೆ.

ಕೆಲ ದಿನಗಳು ಕಳೆದಮೇಲೆ ವೃದ್ಧ ಸನ್ಯಾಸಿಯ ಮೌನದ ಕಟ್ಟೆಯೊಡೆಯುತ್ತದೆ. ‘ಆದರೂ ನೀನು ಆ ಯುವತಿಯನ್ನು ಹೊತ್ತೊಯ್ಯಬಾರದಿತ್ತು’ ಎಂದು ಕ್ರೋಧದಿಂದ ಹೇಳಿಯೇಬಿಡುತ್ತಾನೆ. ತರುಣ ಸಂನ್ಯಾಸಿ ಅವನನ್ನು ದಿಟ್ಟಿಸಿ ನೋಡಿ ‘ಯಾರು ಆಕೆಯನ್ನು ಹೊತ್ತಿರುವುದು? ಅವಳನ್ನು ನಾನು ಅಂದೇ ಕೆಳಗಿಳಿಸಿಯಾಯ್ತಲ್ಲ?’ ಎನ್ನುತ್ತಾನೆ. ವೃದ್ಧ ಸಂನ್ಯಾಸಿಗೆ ಅರಿವಾಗು ತ್ತದೆ- ಇಷ್ಟು ದಿನವೂ ಮಾನಸಿಕವಾಗಿ ಆ ತರುಣಿಯನ್ನು ಹೊತ್ತಿರುವುದು ತಾನೇ ಎಂದು ಅರ್ಥವಾಗುತ್ತದೆ. ಇಲ್ಲಿ ಯುವ ಸಂನ್ಯಾಸಿಯದು ನಿಜಕ್ಕೂ ಆದರ್ಶ ನಡೆ.

ಜಗದ ವ್ಯವಹಾರದಲ್ಲಿ- ಅದೂ ಒಬ್ಬ ಸ್ತ್ರೀಯನ್ನು ಎತ್ತಿಕೊಳ್ಳುವುದರಲ್ಲಿ- ತೊಡಗಿಸಿಕೊಂಡರೂ ಮಾನಸಿಕವಾಗಿ ಅಂಟದಂತಿ ರುವುದು ಆತನಿಗೆ ಸಾಧ್ಯವಾಗಿದೆ. ಪದ್ಮಪತ್ರಮಿವಾಂಭಸಾ ಅಂದರೆ ಇದೇ. ಇನ್ನೊಂದು, ಇಬ್ರಾಹಿಂ ಆಧಂ ಎಂಬ ಸೂಫಿ ಸಂತನ ಕಥೆ. ಆತ ಮೊದಲು ಸುಲ್ತಾನನಾಗಿದ್ದವನು, ಭಾರೀ ಶ್ರೀಮಂತಿಕೆಯಲ್ಲಿ ಬದುಕಿದವನು. ಯಾವುದೋ ಒಂದು ದೈವೀ ಕ್ಷಣದಲ್ಲಿ ಜ್ಞಾನೋದಯವಾಗಿ ಸಂತನಾದವನು.

ಸಂತನಾಗಿಯೂ ಶ್ರೀಮಂತಿಕೆಯಲ್ಲಿಯೇ ಇದ್ದವನು. ಇಬ್ರಾಹಿಂ ಹೋದಲ್ಲೆಲ್ಲ ನೂರಾರು ಸೇವಕರು ಅವನನ್ನು ಹಿಂಬಾಲಿಸು ವರು. ಅವನಿಗೆ ವಿಶೇಷವಾದ ಚಪ್ಪರವನ್ನು ನಿರ್ಮಿಸುವರು. ಚಪ್ಪರ ನಿರ್ಮಿಸುವಾಗ ಹಗ್ಗಕ್ಕೆ ಕಟ್ಟಿ ನೆಲಕ್ಕೆ ಹೊಡೆಯುವ ಗೂಟ ಕೂಡ ಬಂಗಾರದ್ದಾಗಿರುತ್ತಿತ್ತು! ಇಬ್ರಾಹಿಂ ಯಾವುದಾದರೂ ವಸ್ತುವನ್ನು ಅಪೇಕ್ಷಿಸುವ ಮೊದಲೇ ಅದು ಸಿದ್ಧವಾಗಿ ಅವನ ಮುಂದಿರುತ್ತಿತ್ತು. ಒಮ್ಮೆ ಇಬ್ರಾಹಿಂ ತನ್ನ ಪರಿವಾರದೊಂದಿಗೆ ಪ್ರವಾಸ ಮಾಡುತ್ತ, ಒಂದೆಡೆ ವಾಸ್ತವ್ಯ ಹೂಡಿದ್ದನು.

ಪರಿವಾರದವರು, ಜೊತೆಗೆ ಬಂದ ಒಂಟೆ, ಕುದುರೆಗಳೆಲ್ಲ ಸೇರಿ ಅದೊಂದು ದೊಡ್ಡ ಶಿಬಿರದಂತೆ ಕಾಣುತ್ತಿತ್ತು. ಅಲ್ಲಿಗೆ ಒಬ್ಬ ಭಿಕ್ಷುಕ ಬಂದನು. ಮಹಲುಗಳಂತೆ ಕಾಣುವ ದೊಡ್ಡದೊಡ್ಡ ಡೇರೆಗಳನ್ನು ನೋಡಿ ಯಾರೋ ಮಹಾರಾಜ ಬಂದಿದ್ದಾನೆ, ತನಗೇನಾದರೂ ದಾನ ಸಿಕ್ಕೀತು, ಹೆಚ್ಚಿನ ಭಿಕ್ಷೆ ದೊರಕೀತು ಎಂಬ ಆಸೆಯಿಂದ ಇಬ್ರಾಹಿಂ ಇದ್ದ ಡೇರೆಯ ಬಳಿಗೆ ಬಂದನು.
ದ್ವಾರಪಾಲಕರಿಂದಾಗಿ ಅವನಿಗೆ ಗೊತ್ತಾಯಿತು, ಬಂದವನು ಮಹಾರಾಜನಲ್ಲ, ಒಬ್ಬ ಸೂಫಿ ಸಂತ ಎಂದು.

ಅವನಿಗೆ ಒಟ್ಟೊಟ್ಟಿಗೇ ಆಶ್ಚರ್ಯವೂ ದುಃಖವೂ ಆಯ್ತು. ಸಂತನೊಬ್ಬ ಇಷ್ಟೆಲ್ಲ ವಭವದಲ್ಲಿ ಇರುವುದು ಸಾಧ್ಯವೇ? ಸರಿಯೇ? ಅಪ್ಪಣೆ ಪಡೆದು ಆತ ಇಬ್ರಾಹಿಂನ ಡೇರೆಯೊಳಕ್ಕೆ ಬಂದನು. ಒಳಗಡೆ ಅದೊಂದು ಅರಮನೆಯೇ ಆಗಿತ್ತು. ಪರದೆಗಳು,
ಮೆತ್ತನೆ ಹಾಸುಗಳು, ವಜ್ರಖಚಿತ ಆಸನಗಳು, ಹೊನ್ನಿನ ಹೂವಿನ ಕರಂಡಗಳು… ಒಂದು ಹಂಸತೂಲಿಕಾತಲ್ಪದ ಮೇಲೆ ಇಬ್ರಾಹಿಂ ಒರಗಿಕೊಂಡು ಕುಳಿತಿದ್ದನು.

ಅವನ ಪೋಷಾಕುಗಳಿಂದ, ಮೈಮೇಲಿರುವ ವಜ್ರದ ಆಭರಣಗಳ ಮಿಂಚು ಕಣ್ಣು ಕೋರೈಸುತ್ತಿತ್ತು. ಮುಖದ ಮೇಲೆ ಪ್ರಖರ ಕಾಂತಿ ಇತ್ತು. ಭಿಕ್ಷುಕ ಇಬ್ರಾಹಿಂನನ್ನು ಕೇಳಿಯೇಬಿಟ್ಟನು: ‘ನೀವೇನು ಸಂತರೋ, ರಾಜರೋ? ಸಂತರಾಗಿದ್ದರೆ ಈ ವಭವವೇಕೆ ಬೇಕು?’ ಆಗ ಇಬ್ರಾಹಿಂ ಶಾಂತವಾಗಿ ಉತ್ತರಿಸಿದನು, ‘ಹೌದು, ಇದೆಲ್ಲ ಬೇಕಿಲ್ಲ. ಆದರೆ ಇದ್ದರೆ ತೊಂದರೆಯೂ
ಇಲ್ಲ!’ ಅದಕ್ಕೆ ಭಿಕ್ಷುಕನು ‘ಹೌದೇ? ಹಾಗಾದರೆ ಇದನ್ನೆಲ್ಲ ಬಿಟ್ಟು ನನ್ನೊಡನೆ ಭಿಕ್ಷಾಟನೆಗೆ ಬನ್ನಿ ನೋಡೋಣ?’ ಎಂದನು.

‘ಸರಿ, ಹಾಗಾದರೆ ನಡೆ’ ಎಂದು ಇಬ್ರಾಹಿಂ ತನ್ನ ಆಭರಣಗಳನ್ನು, ಬೆಲೆಬಾಳುವ ಪೋಷಾಕನ್ನು ತೆಗೆದಿರಿಸಿ ಯಾರಿಗೂ ಹೇಳದೆ ಹಿಂದಿನ ಬಾಗಿಲಿನಿಂದ ಭಿಕ್ಷುಕನನ್ನು ಕರೆದುಕೊಂಡು ಹೊರಟೇ ಬಿಟ್ಟನು. ಇಬ್ಬರೂ ಮರುಭೂಮಿಯಲ್ಲಿ ನಡೆಯುತ್ತಾ ಸ್ವಲ್ಪ ದೂರ ಸಾಗಿದರು. ಭಿಕ್ಷುಕನಿಗೆ ಹಠಾತ್ತನೇ ಏನೋ ನೆನಪಾಯಿತು. ‘ಇಬ್ರಾಹಿಂ, ನಾನು ನನ್ನ ಭಿಕ್ಷಾಪಾತ್ರೆಯನ್ನು ಅಲ್ಲಿ ಡೇರೆಯಲ್ಲೇ ಬಿಟ್ಟು ಬಂದಿದ್ದೇನೆ. ಹೋಗಿ ತೆಗೆದುಕೊಂಡು ಬರೋಣ ಬಾ.

ಅಥವಾ ನೀನು ಇಲ್ಲಿಯೇ ಕುಳಿತಿರು, ನಾನು ಹೋಗಿ ಬೇಗ ತಂದುಬಿಡುತ್ತೇನೆ’ ಎಂದು ಹೊರಟನು. ಇಬ್ರಾಹಿಂ ಅವನನ್ನು
ತಡೆದು ನಕ್ಕು ಹೇಳಿದನು: ‘ವ್ಯತ್ಯಾಸ ಗೊತ್ತಾಯಿತೇ ಗೆಳೆಯಾ? ನಿನ್ನಲ್ಲಿದ್ದದ್ದು ಏನೇನೂ ಬೆಲೆಬಾಳದ ಭಿಕ್ಷಾಪಾತ್ರೆ. ಅದಕ್ಕೆ ನೀನು ಅಂಟಿಕೊಂಡಿದ್ದೀಯ. ಅದಿಲ್ಲದೇ ಇರುವುದು ನಿನಗೆ ಕಷ್ಟವಾಗುತ್ತಿದೆ. ನಾನು ನನ್ನ ಸುತ್ತಮುತ್ತ ಏನೆಲ್ಲ ಇದ್ದರೂ ಅವು
ನನಗೆ ಬೇಕಿಲ್ಲ. ಅವುಗಳನ್ನು ಹಾಗೆಯೇ ಬಿಟ್ಟು ಬಂದುಬಿಡಬಲ್ಲೆ!’ ಭಿಕ್ಷುಕ ಇಬ್ರಾಹಿಂನ ಕಾಲಿಗೆ ಬಿದ್ದು ಕ್ಷಮೆ ಕೇಳಿದನು. ‘ತಾವು
ನಿಜವಾಗಿಯೂ ಸಂತರೇ!’ ಎಂದು ಒಪ್ಪಿದನು. ಇಲ್ಲಿ ಇಬ್ರಾಹಿಂ ಏನು ಆಚರಿಸಿ ತೋರಿಸಿದನೋ ಅದೇ ‘ಪದ್ಮಪತ್ರ ಮಿವಾಂಭಸಾ’. ಜೊತೆಗಿದ್ದರೂ ಅಂಟಿಸಿಕೊಳ್ಳದಿರುವ ಈ ಜೀವನವಿಧಾನವನ್ನೇ Detached attachment ಎಂದು ತತ್ತ್ವಜ್ಞಾನಿಗಳು ವ್ಯಾಖ್ಯಾನಿಸುತ್ತಾರೆ.

ಸತತ ಅಭ್ಯಾಸದಿಂದ ಇದು ಸಾಧ್ಯ ಎನ್ನುತ್ತಾರೆ. ಐನ್ ಸ್ಟೈನ್ ಸಾಧಿಸಿದ ಏಕಾಂಗಿತನವನ್ನು ನಾವೂ ಸಾಧಿ ಸಬಹುದು.
ಏಕೆಂದರೆ ಹುಟ್ಟು-ಸಾವುಗಳಲ್ಲಿ ನಾವು ಏಕಾಂಗಿಗಳೇ. ನಡುವಿನ ಬದುಕಿನಲ್ಲಿ ನಮ್ಮ ಕುಟುಂಬ, ಸ್ನೇಹಿತರು, ಸಹೋದ್ಯೋಗಿ ಗಳು ಎಂದೆಲ್ಲ ಜನರಿಂದ ಸುತ್ತುವರಿದಿರುತ್ತೇವೆ. ಆದರೆ ಹೊರಗಿನ ಈ ಜನರ ಬಾಂಧವ್ಯವನ್ನು ನಾವು ಒಳಗೆ ಬಿಟ್ಟುಕೊಳ್ಳ ಬಾರದು. ಅವರ ಬದುಕನ್ನು ಬದುಕಲು ಹೋಗಬಾರದು. ಯಾವುದಕ್ಕೂ ಅಂಟಿಕೊಳ್ಳಬಾರದು. ನಮ್ಮೊಳಗೆ ನಾವು ಏಕಾಂತದ ದಿವ್ಯ ಅವಕಾಶವನ್ನು ಉಳಿಸಿಕೊಳ್ಳಬೇಕು.

ಇದು ಸಾಧ್ಯವಾದಾಗ ಮಾತ್ರ ನಿರ್ಲಿಪ್ತತೆ ಸಾಧ್ಯ. ಅರಿಷಡ್ವರ್ಗವನ್ನು ಗೆಲ್ಲುವುದು ಸಾಧ್ಯ. ಈ ಗೆಲುವು ನಮ್ಮನ್ನು ನಮ್ಮ ಸಹಜೀವಿಗಳೊಂದಿಗೆ ಪ್ರೇಮದಿಂದ, ಸ್ನೇಹದಿಂದ ಹಾಗೂ ನಿಷ್ಪಕ್ಷಪಾತವಾಗಿ ವ್ಯವಹರಿಸುವಂತೆ ಮಾಡುವುದು. ‘ಮನಸ್ಸಿನ ಹೊರ-ಒಳ ಎರಡು ಪ್ರತ್ಯೇಕ ಕೋಣೆಗಳು’ ಎಂದು ಡಿವಿಜಿ ಹೇಳಿದ್ದೂ ಇದನ್ನೇ. ಅದೆಲ್ಲ ಸರಿ, ಆದರೆ ಕಮಲದ ಎಲೆಯೆ ಮೇಲೇಕೆ ನೀರು ನಿಲ್ಲುವುದಿಲ್ಲ? ಕಮಲದ್ದಷ್ಟೇ ಅಲ್ಲ, ಪತ್ರೊಡೆಪ್ರಿಯರಾದ ನಮ್ಮಂಥ ಕರಾವಳಿ-ಮಲೆನಾಡಿಗರಿಗೆ ಗೊತ್ತಿರು ತ್ತದೆ ಕೆಸುವಿನ ಎಲೆಗಳ ಮೇಲೂ ನೀರು ನಿಲ್ಲುವುದಿಲ್ಲ.

ಇದರ ಹಿಂದೆ ವೈಜ್ಞಾನಿಕ ಕಾರಣವಿದೆ. ಆ ಎಲೆಗಳಿಗೆ ‘ಸ್ವಯಂಸ್ವಚ್ಛತೆ’ ಜನ್ಮಜಾತ ಗುಣವೇ ಆಗಿದೆ. ಮಾತ್ರವಲ್ಲ, ಪ್ರಕೃತಿಯ ಈ ವಶಿಷ್ಟ್ಯವನ್ನು ಗಮನಿಸಿ ಗುರುತಿಸಿರುವ ವಿeನಿಗಳು ಅದನ್ನು ಮನುಷ್ಯನ ಉಪಯೋಗಕ್ಕಾಗುವ ವಸ್ತುಗಳ ನಿರ್ಮಾಣದಲ್ಲಿ ಬಳಸತೊಡಗಿದ್ದಾರೆ. ಔಟಠ್ಠಿo ಉಛ್ಚಿಠಿ ಎಂದೇ ಇದು ಪ್ರಖ್ಯಾತವಾಗಿದೆ. ‘ಬಯೋಮಿಮಿಕ್ರಿ: ಪ್ರಕೃತಿ, ವಿಸ್ಮಯ. ಕಲಿಕೆ’ ಎಂಬ ಪುಸ್ತಕದಲ್ಲಿ ಬೆಂಗಳೂರಿನ ವದ್ಯಲೇಖಕ ಡಾ.ಕಿರಣ್ ವಿ. ಸೂರ್ಯ ಇದನ್ನು ಸರಳಗನ್ನಡದಲ್ಲಿ ತುಂಬ ಚೆನ್ನಾಗಿ ವಿವರಿಸಿದ್ದಾರೆ. ಪುಸ್ತಕದಲ್ಲಿ ಒಂದು ಅಧ್ಯಾಯದ ಶೀರ್ಷಿಕೆಯನ್ನು ‘ಪದ್ಮಪತ್ರಮಿವಾಂಭಸಾ’ ಎಂದೇ ಇಟ್ಟಿದ್ದಾರೆ.

ಜರ್ಮನಿಯ ಹೀಡಲ್‌ಬರ್ಗ್ ಎಂಬ ಪುರಾತನ ವಿಶ್ವವಿದ್ಯಾಲಯ, ಅಲ್ಲಿ 1970ರ ದಶಕದಲ್ಲಿ ವಿಲ್ಹೆಮ್ ಬಾರ್ತ್ಲೊಟ್ ಎಂಬ ಮೇಧಾವಿಯು ಪಿಎಚ್‌ಡಿ ಪದವಿಗಾಗಿ ನಡೆಸಿದ ಅಧ್ಯಯನ, ಪಾಪಾಸುಕಳ್ಳಿಯಿಂದ ಆರಂಭಿಸಿ ಬೇರೆ ಬೇರೆ ಸಸ್ಯಪ್ರಭೇದಗಳ ಎಲೆಗಳು ನೀರನ್ನು ಅಂಟಸಿಕೊಳ್ಳುವ ಅಥವಾ ಅಂಟಿಸಿಕೊಳ್ಳದ ಗುಣವನ್ನು ತೋರುವುದು, ನೀರನ್ನು ಅಂಟಿಸಿಕೊಳ್ಳದ ಎಲೆಗಳು ಸದಾ ಶುಚಿಯಾಗಿಯೇ ಇರುವುದು, ಇದರ ಬಗ್ಗೆ ಬಾರ್ತ್ಲೊಟ್ ವeನಿಕ ಲೇಖನ ಬರೆದದ್ದು… ಮುಂತಾದ್ದನ್ನೆಲ್ಲ ಚಂದವಾಗಿ ವಿವರಿಸಿದ್ದಾರೆ.

‘ಬಾರ್ತ್ಲೊಟ್ ಸಂಶೋಧನೆಯನ್ನು ನಾವು ಸರಳವಾಗಿ ಅರ್ಥ ಮಾಡಿಕೊಳ್ಳಬಹುದು. ಮೂರಡಿ ವ್ಯಾಸದ ಒಂದು ದೊಡ್ಡ ಬಲೂನನ್ನು ಕೆಲಕಾಲ ಹಿಡಿದಿರಬೇಕು ಎಂದು ಭಾವಿಸೋಣ. ಅದನ್ನು ಕೆಲವರು ಕೈಯನ್ನು ಅಗಲಿಸಿ ಎದೆಯ ಸಹಾಯದಿಂದ ಹಿಡಿಯುತ್ತಾರೆ. ಇನ್ನು ಕೆಲವರು ಕೈಗಳನ್ನು ಮೇಲೆ ಎತ್ತಿ ತಮ್ಮ ಅಂಗೈಗಳ ಆಸರೆಯನ್ನು ಮಾತ್ರ ಬಳಸಿ ಹಿಡಿಯುತ್ತಾರೆ. ಹೀಗೆ ಹಿಡಿದಿರುವ ಬಲೂನುಗಳ ಮೇಲ್ಮೈ ಬಹಳ ಕೊಳಕಾಗಿದೆ ಎಂದುಕೊಳ್ಳೋಣ.

ಕೈಗಳನ್ನು ಅಗಲಿಸಿ ಹಿಡಿದಿರುವವರ ಮೈಕೈ ಬಟ್ಟೆಗಳೆಲ್ಲ ಕೊಳಕಾಗುತ್ತವೆ. ಕೈಗಳನ್ನು ಮೇಲೆತ್ತಿ ಕೇವಲ ಅಂಗೈಗಳನ್ನು
ಮಾತ್ರ ಬಳಸಿರುವವರ ಮೈಕೊಳಕಾಗಿರುವುದಿಲ್ಲ. ಹೆಚ್ಚೆಂದರೆ ಅವರ ಅಂಗೈ ಕೊಳಕಾಗುತ್ತದೆ. ಒಂದುವೇಳೆ ಯಾರಾದರೂ
ಇಡೀ ಬಲೂನನ್ನು ಬೆರಳ ತುದಿಯಲ್ಲಿ ಹಿಡಿದು ನಿಲ್ಲಿಸಿಕೊಂಡರೆ ಅವರ ಮೈಕೈಗಳು ಬಹುತೇಕ ಸ್ವಚ್ಛವಾಗಿಯೇ ಉಳಿಯುತ್ತವೆ.
ಅಂದರೆ, ಕೊಳಕು ಬಲೂನನ್ನು ಹಿಡಿದುಕೊಳ್ಳುವ ಕೆಲಸವನ್ನು ಮಾಡಿಯೂ ಅವರು ಬಲೂನಿನ ಕೊಳೆ ಅಂಟಿಸಿಕೊಳ್ಳಲಿಲ್ಲ! ಇದೇ ತತ್ತ್ವವನ್ನು ಎಲೆಗಳಿಗೂ ವಿಸ್ತರಿಸಬಹುದು. ಸಾಮಾನ್ಯ ಎಲೆಗಳು ನೀರು ಬಿದ್ದಾಗ, ಕೈಗಳನ್ನು ಅಗಲಿಸಿ ಬಲೂನು ಹಿಡಿದುಕೊಂಡವರಂತೆ ವರ್ತಿಸಿ, ನೀರಿನ ಹನಿಗಳನ್ನು ತಮ್ಮ ಇಡೀ ಮೇಲ್ಮೈಗೆ ಹರಡಿಕೊಳ್ಳುತ್ತವೆ.

ಆಗ ನೀರಿನ ಸಾಕಷ್ಟು ಅಂಶ ಅಲ್ಲೇ ಉಳಿದು ಧೂಳು ಅಂಟಲು ನೆರವಾಗುತ್ತದೆ. ಇಂತಹ ಎಲೆಗೆಳು ಸಾಮಾನ್ಯವಾಗಿ ಕೊಳಕಾಗಿಯೇ ಇರುತ್ತವೆ. ಆದರೆ ಕಮಲದ ಎಲೆಗಳು ಬೆರಳಿನ ತುದಿಯ ಮೇಲೆ ಬಲೂನು ಹಿಡಿದವರ ರೀತಿಯದ್ದು. ಅದು ನೀರಿನ ಹನಿಗಳನ್ನು ತನ್ನ ಮೇಲೆ ಹರಡಲು ಬಿಡುವುದೇ ಇಲ್ಲ. ಅದರ ಮೇಲ್ಮೈ ರಚನೆ ಸಾಧಾರಣ ಎಲೆಗಳಿಗಿಂತ ಭಿನ್ನ.

೧೯೯೦ರಲ್ಲಿ ಬಾರ್ತ್ಲೊಟ್‌ನ ಶಿಷ್ಯ ಕ್ರಿಸ್ಟೊಫ್ ನೀನ್ಹೌಸ್ ಸಹ ಈ ಸಂಶೋಧನೆಯಲ್ಲಿ ಸೇರಿಕೊಂಡನು. ಅತ್ಯಂತ ಉನ್ನತ
ಮಟ್ಟದ ಇಲೆಕ್ಟ್ರಾನ್ ಸೂಕ್ಷ್ಮದರ್ಶಕದ ಅಡಿಯಲ್ಲಿ ಪದ್ಮಪತ್ರಗಳ ವಿಶ್ಲೇಷಣೆ ನಡೆಯಿತು. ಕಮಲದ ಎಲೆಗಳ ಅತ್ಯಂತ
ಹೊರಪದರ ನಯವಾಗಿರಲಿಲ್ಲ. ಡೊಂಕಾದ ಮೇಲ್ಮೈ ಪದರವನ್ನು ಮೇಣದಂಥ ಸೂಕ್ಷ್ಮಹರಳುಗಳು ಆಕ್ರಮಿಸಿದ್ದವು. ನೀರಿನ ಬಿಂದು ಎಲೆಯ ಮೇಲೆ ಬಿದ್ದಾಗ ಡೊಂಕಿನ ಮೇಲ್ಮೈ ಕಾರಣದಿಂದ ಅದು ಎಲೆಯ ಮೇಲೆ ಹರಡದೆ ಗೋಲಿಯಾಕಾರದಲ್ಲಿ
ಉಳಿಯುತ್ತಿತ್ತು. ಮೇಣದ ರಚನೆ ಆ ನೀರಿನ ಗೋಲಿಯನ್ನು ಒಂದೆಡೆ ಉಳಿಸದೆ ಸೀದಾ ಅದನ್ನು ಉರುಳಿಸಿ ಎಲೆಯ ಇಳಿಭಾಗಕ್ಕೆ ಒಯ್ಯುತ್ತಿತ್ತು. ಹೀಗೆ ನೀರಿನ ಗೋಲಿಗಳು ಉರುಳುತ್ತಾ ಹೋಗುವಾಗ ಅವು ತಮ್ಮೊಡನೆ ಧೂಳಿನ ಕಣಗಳನ್ನು
ಹೊತ್ತೊಯ್ಯುತ್ತಿದ್ದವು.

ಕಮಲದ ಎಲೆಯ ಮೇಲ್ಮೈ ಮತ್ತು ನೀರಿನ ಬಿಂದುವಿನ ಕೋನ ಸಾಧಾರಣ ಗಿಡಗಳ ಎಲೆಗಳಿಗಿಂತ ಸದಾ ಭಿನ್ನವಾಗಿರುತ್ತವೆ. ಈ ಕೋನವನ್ನು ಸಾಧಿಸುವ ಸೂಕ್ಷ್ಮ ರಚನೆಯ ಪರಿಣಾಮವಾಗಿ ಕಮಲದ ಎಲೆ ಸದಾ ಶುಭ್ರ, ಸದಾ ಸ್ವಚ್ಛ!’… ಎಂಥವರಿಗೂ ಅರ್ಥವಾಗುವ ವಿವರಣೆ. ಕಮಲದ ಎಲೆಯ ಹಾಗೆ ಇರಬೇಕು; ಕೊಳಕನ್ನು ಅಂಟಿಸಿಕೊಳ್ಳದಿರಬೇಕು ಎಂದು ಕೃಷ್ಣ ಪರಮಾತ್ಮನು ಹೇಳಿದ್ದರಲ್ಲಿ ತತ್ತ್ವಜ್ಞಾನದಷ್ಟೇ ಸಮರ್ಥವಾದ ವಿಜ್ಞಾನವೂ ಇದೆಯೆಂದು ಈಗ ಗೊತ್ತಾಯ್ತಲ್ಲ?