ಗುಣಗಾನ
ಡಾ.ಅಮ್ಮಸಂದ್ರ ಸುರೇಶ್
ಆದಿವಾಸಿಗಳ ಪರ ಹೋರಾಟಗಾರ ಹೆಗ್ಗಡದೇವನ ಕೋಟೆಯ ಜೇನುಕುರುಬ ಬುಡಕಟ್ಟು ಸಮುದಾಯದ ಸೋಮಣ್ಣನವರು ಕೇಂದ್ರ ಸರಕಾರದ ಪ್ರತಿ ಷ್ಠಿತ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಾಗರಹೊಳೆ ಅರಣ್ಯ ಮತ್ತು ಅದರ ಅಂಚಿನಲ್ಲಿರುವ ಆದಿವಾಸಿಗಳ ಹಾಡಿಗಳಿಗೆ ಕುಡಿಯುವ ನೀರು, ಅಂಗನವಾಡಿ, ಆಶ್ರಮ ಶಾಲೆ, ಪಡಿತರ ವ್ಯವಸ್ಥೆ, ಮತದಾನದ ಹಕ್ಕು ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳು ದೊರೆಯುವಂತಾಗುವಲ್ಲಿ ತಮ್ಮ ನಿಸ್ವಾರ್ಥ ಹೋರಾಟದ ಮೂಲಕ ಶ್ರಮಿಸಿದ ಇವರು ಆದಿವಾಸಿಗಳಿಗೆ ಕೃಷಿ ಭೂಮಿ ಮಂಜೂರಾಗುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ.
ಸೋಮಣ್ಣನವರ ಹೋರಾಟ ಆರಂಭವಾಗಿದ್ದು ದಲಿತ ಸಂಘರ್ಷ ಸಮಿತಿಯ ಮೂಲಕ. ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಆದಿವಾಸಿಗಳ ಸಮಸ್ಯೆಯ ಕುರಿತು ಮೊದಲಿಗೆ ಈ ಸಮಿತಿ ದನಿಯೆತ್ತಿತ್ತು. ಅದಕ್ಕೆ ದನಿಗೂಡಿಸಿದ ಸೋಮಣ್ಣ ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟಕ್ಕೆ ಇಳಿದರು. ಹೆಗ್ಗಡ ದೇವನಕೋಟೆ ತಾಲೂಕಿನ ಆಲ್ತಾಳ್‌ಹುಂಡಿಯಲ್ಲಿ ಜನಿಸಿದ ಸೋಮಣ್ಣನವರಿಗೆ ಈಗ ೬೬ರ ಹರೆಯ. ಓದಿದ್ದು ನಾಲ್ಕನೇ ತರಗತಿವರೆಗೆ ಮಾತ್ರ. ೯ ಮಕ್ಕಳಲ್ಲಿ ಕೊನೆಯವರಾದ ಸೋಮಣ್ಣ, ಹುಟ್ಟಿದ ಎರಡು ವರ್ಷಕ್ಕೆ ತಂದೆಯನ್ನು ಕಳೆದುಕೊಂಡರು.
ತಾಯಿಯ ಕೂಲಿಯೇ ಕುಟುಂಬಕ್ಕೆ ಆಸರೆಯಾಗಿತ್ತು. ಒಮ್ಮೆ ಅವರು ಹುಲ್ಲಿನ ದೊಡ್ಡ ಹೊರೆಯನ್ನು ಹೊತ್ತು ಬರುವಾಗ ಜಾರಿ ಬಿದ್ದುದನ್ನು ಕಂಡ ಸೋಮಣ್ಣ (ಆಗ ೪ನೇ ತರಗತಿಯಲ್ಲಿ ಓದುತ್ತಿದ್ದರಂತೆ) ಶಾಲೆ ತೊರೆದರು. ‘ನೀನು ಕೂಲಿಗೆ ಹೋಗಬೇಡ’ ಎಂದು ಹೇಳಿ ತಾಯಿಯನ್ನು ಕೂಲಿಯಿಂದ ಬಿಡಿಸಿ ತಮ್ಮೂರಿನ ಜಮೀನ್ದಾರರೊಬ್ಬರ ಬಳಿ ವರ್ಷಕ್ಕೆ ಕೇವಲ ಹದಿನಾರೂವರೆ ರುಪಾಯಿಗೆ ಜೀತಕ್ಕೆ ಸೇರಿಕೊಂಡರು. ಆ ಹಣದಲ್ಲಿ ಆರೂವರೆ ರುಪಾಯಿ ಕೊಟ್ಟು ಸಂತೆಯಲ್ಲಿ ತಮ್ಮ ತಾಯಿಗೆಂದು ಕರಡಿ ಮಾರ್ಕಿನ ಸೀರೆ ಖರೀದಿಸಿ ಕೊಟ್ಟಿದ್ದನ್ನು ನೆನಪಿಸಿಕೊಳ್ಳುತ್ತಾರೆ ಸೋಮಣ್ಣ. ೧೬ ವರ್ಷಗಳ ಕಾಲ ಜೀತಮಾಡಿದ ನಂತರ ಆದಿವಾಸಿಗಳಿಗೆ ಏನಾದರೂ ಮಾಡಬೇಕೆಂಬ ಇಚ್ಛೆಯಿಂದ ಜೀತ ಬಿಟ್ಟು ಆದಿವಾಸಿಗಳ ಪರ ಹೋರಾಟಕ್ಕೆ ಇಳಿದರು.
ಕೆಲ ವರ್ಷಗಳ ಕಾಲ ಸಮಾನ ಮನಸ್ಕರೊಡನೆ ಸೇರಿ ದಲಿತ ಸಂಘರ್ಷ ಸಮಿತಿಯ ಅಡಿಯಲ್ಲೇ ಈ ಹೋರಾಟ ನಡೆಸಿದ ಸೋಮಣ್ಣ, ತಮ್ಮದೇ ಆದ ಸಂಘಟನೆಯಿದ್ದರೆ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದೆಂದು ನಿರ್ಧರಿಸಿದರು. ಈ ವೇಳೆಗಾಗಲೇ ಡಾ.ಜರಿಪಯಾಸ್ ಅವರು ಹುಣಸೂ ರಿನಲ್ಲಿ ಡೀಡ್ ಸ್ವಯಂಸೇವಾ ಸಂಸ್ಥೆಯನ್ನು ಆರಂಭಿಸಿದ್ದರು. ಆದಿವಾಸಿಗಳೊಂದಿಗೆ ಅವರನ್ನು ಭೇಟಿ ಮಾಡಿದ ಸೋಮಣ್ಣ, ತಮ್ಮದೇ ಆದ ಸಂಘಟನೆ ಕಟ್ಟಿಕೊಳ್ಳಲು ನೆರವಾಗಬೇಕೆಂದು ಕೇಳಿಕೊಂಡರು. ಆಗ ಅವರು, ‘ನೀನೇನು ಮಾಡ್ತೀಯ? ನಾವಿಲ್ವಾ?’ ಎಂದರು.
ಅದಕ್ಕೆ ಸೋಮಣ್ಣ, ‘ನಮ್ಮ ಸಮುದಾಯದ ಬೇಡಿಕೆಗಳನ್ನು ನಾವೇ ಈಡೇರಿಸಿಕೊಳ್ಳಬೇಕು, ಅದಕ್ಕಾಗಿ ನಮ್ಮದೇ ಆದ ಸಂಘಟನೆ ಬೇಕು’ ಎಂದು ದೃಢವಾಗಿ ಉತ್ತರಿಸಿದರು. ಒಂದು ವರ್ಷ ಕಾಲ ಸೋಮಣ್ಣನವರ ಚಟುವಟಿಕೆಗಳನ್ನು ಗಮನಿಸಿದ ಅವರು ೪೦೦ ರುಪಾಯಿಗಳನ್ನು ನೀಡಿ, ಹೆಗ್ಗಡ ದೇವನಕೋಟೆ ತಾಲೂಕಿನಲ್ಲಿರುವ ಆದಿವಾಸಿಗಳ ಸಂಪೂರ್ಣ ವಿವರಗಳನ್ನು ಕಲೆಹಾಕುವ ಜವಾಬ್ದಾರಿಯನ್ನು ಸೋಮಣ್ಣರಿಗೆ ವಹಿಸಿದರು.
ಡೀಡ್ ಸಂಸ್ಥೆಯಲ್ಲಿ ಅಂದಿಗೆ ರಾತ್ರಿ ಶಾಲೆಯ ಶಿಕ್ಷಕರಾಗಿದ್ದ ಫಿಡಿನಾ ವಿಕಾಸ ಸಂಸ್ಥೆಯ ನಂಜುಂಡಯ್ಯ ಮತ್ತು ಪಿಎಚ್‌ಡಿ ಸಂಶೋಧನೆ ನಡೆಸುತ್ತಿದ್ದ ಶ್ರೀಕಾಂತ್ ಅವರನ್ನು, ಸೋಮಣ್ಣ ನವರಿಗೆ ಸಹಾಯ ಮಾಡಲು ನೇಮಿಸಿದರು. ಈ ಕೆಲಸವನ್ನು ಸೋಮಣ್ಣ ಅಚ್ಚುಕಟ್ಟಾಗಿ ಮಾಡಿಕೊಟ್ಟರು.
ಡೀಡ್ ಸಂಸ್ಥೆಯಲ್ಲಿ ೪ ವರ್ಷ ಸ್ವಯಂಸೇವಕರಾಗಿ ಕೆಲಸ ಮಾಡಿದರು. ನಂತರ ಜರಿಪಯಾಸ್ ಅವರು ಫಿಡಿನಾ ವಿಕಾಸ ಸಂಸ್ಥೆಯ ಸ್ಥಾಪಕರಾದ ಸಿದ್ಧಾರ್ಥರವರಿಗೆ, ಹೆಗ್ಗಡದೇವನಕೋಟೆಯಲ್ಲಿ ಸಂಸ್ಥೆಯನ್ನು ಆರಂಭಿಸಲು ಸೂಚಿಸಿದರು. ಸೋಮಣ್ಣ, ಕ್ಷೀರಸಾಗರ ಮತ್ತು ನಂಜುಂಡಯ್ಯನವರು ಸೇರಿಕೊಂಡು ಸಿದ್ಧಾರ್ಥ ಅವರ ಸಹಕಾರದಿಂದ ಫಿಡಿನಾ ವಿಕಾಸ ಸಂಸ್ಥೆಯನ್ನು ಆರಂಭಿಸುವ ಮೂಲಕ ಆದಿವಾಸಿಗಳ ಹೋರಾಟಕ್ಕೆ ಮುಂದಾದರು. ಆದಿವಾಸಿಗಳ ಜ್ವಲಂತ ಸಮಸ್ಯೆಗಳನ್ನು ಕೇವಲ ಹೆಗ್ಗಡದೇವನಕೋಟೆಯಲ್ಲಿ ಅಧ್ಯಯನ ಮಾಡಿದರೆ ಸಾಲದು ಎಂಬ ಉದ್ದೇಶದಿಂದ ರಾಜ್ಯದಾದ್ಯಂತ ಆದಿವಾಸಿ ಗಳು ವಾಸವಿರುವ ಎಲ್ಲಾ ತಾಲೂಕುಗಳಲ್ಲಿ ರಾಜ್ಯ ಮೂಲ ನಿವಾಸಿಗಳ ವೇದಿಕೆಯನ್ನು ಆರಂಭಿಸಿ ಅದರ ರಾಜ್ಯ ಸಂಚಾಲಕರಾಗಿ ಕಾರ್ಯ ನಿರ್ವಹಿಸುವ ಮೂಲಕ ಆದಿವಾಸಿ ಗಳ ಹಕ್ಕುಗಳ ರಕ್ಷಣೆಗಾಗಿನ ಹೋರಾಟದ ಮಂಚೂಣಿ ನಾಯಕರಾಗಿ ಸೋಮಣ್ಣ ಹೊರಹೊಮ್ಮಿದರು.
ನಂತರ ಪಕ್ಕದ ರಾಜ್ಯಗಳಾದ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ದೂರದ ರಾಜ್ಯಗಳಾದ ಮಧ್ಯಪ್ರದೇಶ, ಒಡಿಶಾಗಳಲ್ಲಿಯೂ ಆದಿವಾಸಿಗಳ ಸಂಘಟನೆ ಮಾಡಿದರು. ನರ್ಮದಾ ಬಚಾವೋ ಆಂದೋಲನದಲ್ಲಿ ಮೇಧಾ ಪಾಟ್ಕರ್ ಅವರ ಜತೆಗೂಡಿ ಹೋರಾಟ ಮಾಡಿದ್ದಾರು.
‘ನಮಗೆ ಬೇರೇನೂ ಬೇಡ, ಅರಣ್ಯದ ಹಕ್ಕು ನೀಡಬೇಕು. ಆದಿವಾಸಿಗಳು ವಾಸಿಸುತ್ತಿರುವ ಹಾಡಿಗಳಲ್ಲಿ ಮಕ್ಕಳಿಗೊಂದು ಅಂಗನವಾಡಿ, ಓದೋಕ್ಕೊಂದು ಶಾಲೆ, ಇರೋಕೊಂದು ಮನೆ, ಕುಡಿಯುವ ನೀರು ಕೊಡಬೇಕು’ ಎಂದು ಒತ್ತಾಯಿಸಿ ಹೆಗ್ಗಡದೇವನಕೋಟೆ ತಾಲೂಕಿನಲ್ಲಿ ಗಮನಾರ್ಹವಾದ ಹೋರಾಟ ಮಾಡಿದರು. ಆನಘಟ್ಟಿ ಹಾಡಿಯಲ್ಲಿ ೧೯೮೬ರಲ್ಲಿ ಕುಡಿಯುವ ನೀರಿಲ್ಲದೆ ಆದಿವಾಸಿ ತರುಣಿಯೊಬ್ಬಳು ಸಾವೀಗೀಡದ ಸಂದರ್ಭದಲ್ಲಿ ಸೋಮಣ್ಣ ಎಲ್ಲಾ ಹಾಡಿಗಳಿಗೂ ಕುಡಿಯುವ ನೀರು ಒದಗಿಸಬೇಕೆಂದು ಹೋರಾಟ ನಡೆಸಿದರು.
ಈ ಸಂದರ್ಭದಲ್ಲಿ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ವಿ.ಪಿ.ಬಳಿಗಾರ್ ಸೋಮಣ್ಣನವರ ಜತೆಗೂಡಿ ಎಲ್ಲಾ ಹಾಡಿಗಳಿಗೂ ಭೇಟಿ ನೀಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ನಂತರ ಜಿಲ್ಲಾಧಿಕಾರಿಗಳಾಗಿ ಬಂದ ವಿಜಯಭಾಸ್ಕರ್, ಆಚಾರ್ಯ, ಉಮೇಶ್, ಮದನ್ ಗೋಪಾಲ್, ಮಣಿವಣ್ಣನ್ ಹಾಗೂ ಇತರರು ಆದಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಹಕರಿಸಿದರು ಎಂದು ಸೋಮಣ್ಣ ನೆನಪಿಸಿಕೊಳ್ಳುತ್ತಾರೆ.
ಆದಿವಾಸಿಗಳು ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಮುಖ್ಯವಾಹಿನಿಗೆ ಬರಬೇಕು. ಹೀಗೆ ಬರಬೇಕಾದರೆ ಆದಿವಾಸಿಗಳಿಗೆ ಕುರಿ, ಕೋಳಿ ಉಚಿತವಾಗಿ ಸಾಕಲು ಕೊಟ್ಟರೆ ಸಾಲದು, ಬದಲು ಕೃಷಿ ಭೂಮಿ ಮಂಜೂರು ಮಾಡಬೇಕೆಂದು ಹೋರಾಟ ಮಾಡಿದರು. ಸೋಮಣ್ಣನವರ ಅಹವಾಲುಗಳನ್ನು ಆಲಿಸಿದ, ಅಂದಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮುಖ್ಯಸ್ಥರಾಗಿದ್ದ ಸುಭಾಷ್ ಭರಣಿಯವರು ಪ್ರತಿ ಆದಿವಾಸಿ ಕುಟುಂಬಕ್ಕೆ ಎರಡು ಎಕರೆ
ಜಮೀನು ಮಂಜೂರು ಮಾಡುವಂತೆ ಸುತ್ತೋಲೆ ಹೊರಡಿಸಿ ದರು, ಆದಿವಾಸಿಗಳಿಗೆ ಸುಮಾರು ೧೨ ಸಾವಿರ ಎಕರೆ ಜಮೀನು ಮಂಜೂರು ಮಾಡಿಸುವಲ್ಲಿ ಸಫಲರಾದರು.
ಆದಿವಾಸಿಗಳ ಮಕ್ಕಳಿಗೆ ಒಂದು ಅಂಗನವಾಡಿ ಕಟ್ಟಲು ಅವಕಾಶವಿಲ್ಲದಿರುವಾಗ ನಾಗರಹೊಳೆ ಅಭಯಾರಣ್ಯದಲ್ಲಿ ತಾಜ್ ಗುಂಪಿನವರು ಹೋಟೆಲ್ ನಿರ್ಮಾಣ ಮಾಡುತ್ತಿದ್ದುದರ ವಿರುದ್ಧ ದೊಡ್ಡ ಹೋರಾಟವನ್ನು ಮಾಡಿ ಅದರ ವಿರುದ್ಧ ಹೈಕೋರ್ಟ್‌ನಲ್ಲಿ ದಾವೆ ಸಲ್ಲಿಸಿ ತಾಜ್ ಹೋಟೆಲ್ ನಿರ್ಮಾಣಕ್ಕೆ ತಡೆ ತರುವಲ್ಲಿ ಸೋಮಣ್ಣ ಯಶಸ್ವಿಯಾದರು. ದೇಶದಾದ್ಯಂತದ ಆದಿವಾಸಿಗಳ ಪರವಾದ ಹಲವು ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿರುವ ಸೋಮಣ್ಣ ದೇಶದ ಹಲವು ವಿಶ್ವವಿದ್ಯಾಲಯಗಳಲ್ಲಿ ಆದಿವಾಸಿಗಳ ಸಂಸ್ಕೃತಿ ಮತ್ತು ಸಮಸ್ಯೆಗಳ ಕುರಿತು ವಿಚಾರಗಳನ್ನು ಮಂಡಿಸಿ
ದ್ದಾರೆ. ಫಿಲಿಪೈನ್ಸ್‌ನಲ್ಲಿ ನಡೆದ ಆದಿವಾಸಿಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತಾಡಿದ್ದಾರೆ.
ಹೆಗ್ಗಡದೇವನಕೋಟೆ ತಾಲೂಕಿನ ಆದಿವಾಸಿಗಳ ಹಾಡಿಗಳಲ್ಲಿ ಅಂಗನವಾಡಿ, ಶಾಲೆ, ರೇಷನ್ ಅಂಗಡಿ, ಮತದಾನದ ಹಕ್ಕು ಸೇರಿದಂತೆ ಆದಿವಾಸಿಗಳಿಗೆ ಹಲವು ಸವಲತ್ತುಗಳು ದೊರೆ ಯುವಲ್ಲಿ ಸೋಮಣ್ಣನವರ ಹೋರಾಟ ಅವಿಸ್ಮರಣೀಯ. ಆದಿವಾಸಿ ಮಕ್ಕಳಿಗೆ ವಸತಿ-ಸಹಿತ ಶಾಲೆಗಳ ಅಗತ್ಯವಿದೆ
ಯೆಂದು ಹೋರಾಟ ಮಾಡಿ ಅಽಕಾರಿಗಳಿಗೆ ಮನವರಿಕೆ ಮಾಡಿಕೊಡುವ ಮೂಲಕ ರಾಜ್ಯಾದ್ಯಂತ ಸರಕಾರವು ಅವರಿಗಾಗಿ ಆಶ್ರಮ ಶಾಲೆಗಳ ಸ್ಥಾಪನೆಗೆ ಶ್ರಮಿಸುವಂತೆ ಮಾಡಿದ್ದು ಸೋಮಣ್ಣನವರೇ.
(ಲೇಖಕರು ಹವ್ಯಾಸಿ ಬರಹಗಾರರು)