Thursday, 12th December 2024

ನಮ್ಮವರ ನೋವಿಗೆ ಇವರೇಕೆ ಸ್ಪಂದಿಸುತ್ತಿಲ್ಲ?

ಚರ್ಚಾ ವೇದಿಕೆ

ಮಾರುತೀಶ್ ಅಗ್ರಾರ

ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವೆ ಯುದ್ಧ ಶುರುವಾಗಿ ಎಂಟು ತಿಂಗಳಾಗಿವೆ. ಈ ಯುದ್ಧದ ಪರಿಣಾಮ ಇದುವರೆಗೂ ಎರಡೂ ರಾಷ್ಟ್ರಗಳ ಸಾವಿರಾರು ನಾಗರಿಕರು ಸಾವನ್ನಪ್ಪಿದ್ದಾರೆ. ಕದನವಿರಾಮಕ್ಕೆ ಜಾಗತಿಕ ಮಟ್ಟದಲ್ಲಿ ಆಗ್ರಹ ಹೊಮ್ಮಿದ್ದರೂ ಉಭಯ ದೇಶಗಳು ಕದನ ವಿರಾಮ ಘೋಷಿಸಿಲ್ಲ. ಹೀಗಾಗಿ ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವೆ ಈಗಲೂ ಸಂಘರ್ಷದ ಜ್ವಾಲೆ ಧಗಧಗಿಸುತ್ತಲೇ ಇದೆ. ಅಲ್ಲಿನ ನಾಗರಿಕರು ಈಗಲೂ
ಭಯದಲ್ಲೇ ದಿನದೂಡುತ್ತಿದ್ದಾರೆ.

೨೦೨೩ರ ಅಕ್ಟೋಬರ್ ೭ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ಮಾಡಿದ ರಾಕೆಟ್ ದಾಳಿಯಿಂದ ಆರಂಭವಾದ ಈ ಯುದ್ಧ ಸದ್ಯಕ್ಕೆ ನಿಲ್ಲುವ ಯಾವ
ಲಕ್ಷಣಗಳೂ ಕಾಣುತ್ತಿಲ್ಲ. ‘ಹಮಾಸ್ ಉಗ್ರರ ಹೆಡೆಮುರಿ ಕಟ್ಟುವವರೆಗೂ ವಿರಮಿಸುವುದಿಲ್ಲ’ ಎಂದು ಇಸ್ರೇಲ್ ಒಂದೆಡೆ ಪ್ರತಿಜ್ಞೆ ಮಾಡಿದ್ದರೆ, ಅತ್ತ ಹಮಾಸ್ ಉಗ್ರರು ಕೂಡ ‘ಇಸ್ರೇಲ್ ಅನ್ನು ನಾಶಮಾಡಿಯೇ ತೀರುತ್ತೇವೆ’ ಎಂದು ಅಬ್ಬರಿಸುತ್ತಿದ್ದಾರೆ.

ಅಷ್ಟಕ್ಕೂ ಅಂದು ಆಗಿದ್ದೇನು? ಹಮಾಸ್ ಉಗ್ರರು ಪ್ಯಾಲೆಸ್ತೀನ್‌ನ ಗಾಜಾಪಟ್ಟಿ ಕಡೆಯಿಂದ ಸುಮಾರು ೫ ಸಾವಿರ ರಾಕೆಟ್‌ಗಳನ್ನು ಇಸ್ರೇಲ್ ಕಡೆಗೆ ಉಡಾಯಿಸಿದರು. ಇಂಥದೊಂದು ದಾಳಿಯನ್ನು ನಿರೀಕ್ಷಿಸಿರದ ಇಸ್ರೇಲ್‌ಗೆ ಅಂದು ಮರ್ಮಾಘಾತವಾಗಿತ್ತು. ಏಕೆಂದರೆ ಇಸ್ರೇಲ್‌ನ ಗುಪ್ತಚರ ಸಂಸ್ಥೆ ‘ಮೊಸಾದ್’ ಹಾಗೂ ಆಂತರಿಕ ಭದ್ರತಾ ಸಂಸ್ಥೆ ‘ಶಿನ್ ಬೆಟ್’ಗೆ ಸಣ್ಣದೊಂದು ಸುಳಿವನ್ನೂ ಕೊಡದೆ ಹಮಾಸ್‌ಗಳು ಈ ಭಯಾನಕ ರಾಕೆಟ್ ದಾಳಿ ನಡೆಸಿ ಷಾಕ್ ಕೊಟ್ಟಿದ್ದರು. ಈ ದಾಳಿಗೆ ಇಸ್ರೇಲ್‌ನ ಅನೇಕ ಕಟ್ಟಡಗಳು ಧ್ವಂಸಗೊಂಡು ಭೀಕರ ವಾತಾವರಣವನ್ನು ಸೃಷ್ಟಿಸಿತು.

ಸಾಲದೆಂಬಂತೆ ಇಸ್ರೇಲ್‌ನ ಒಳನುಗಿದ್ದ ಹಮಾಸ್ ಉಗ್ರರು ಕೈಗೆ ಸಿಕ್ಕಿದವರ ರುಂಡ ಕಡಿದರು, ಮಕ್ಕಳನ್ನು ಕೊಂದರು, ಹೆಣ್ಣು ಮಕ್ಕಳ ಮೇಲೆ ಹಲ್ಲೆ, ಅತ್ಯಾಚಾರದಂಥ ಪೈಶಾಚಿಕ ಕೃತ್ಯ ಎಸಗಿದರು. ಜತೆಗೆ ನೂರಾರು ಮಂದಿ ಇಸ್ರೇಲಿಗರನ್ನು ಅಪಹರಿಸಿ ಒತ್ತೆಯಾಳಾಗಿ ಇಟ್ಟುಕೊಂಡರು. ಇವರಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದ್ದರು. ಇದರಿಂದ ಕುಪಿತಗೊಂಡ ಇಸ್ರೇಲ್ ತಕ್ಷಣವೇ ಪ್ಯಾಲೆಸ್ತೀನ್ ಮೇಲೆ ಯುದ್ಧ ಘೋಷಿಸಿತು. ಈ ಪ್ರತೀ
ಕಾರದ ದಾಳಿಗೆ ಹಮಾಸ್ ಉಗ್ರರು ಸಾಕಷ್ಟು ಬೆಲೆ ತೆರ ಬೇಕಾಗಿ ಬಂತು.

ವರದಿಗಳ ಪ್ರಕಾರ, ಇಸ್ರೇಲ್ -ಹಮಾಸ್ ನಡುವಿನ ಯುದ್ಧದ ಮುಂದೆ ರಷ್ಯಾ- ಉಕ್ರೇನ್ ಯುದ್ಧ ಏನೇನೂ ಅಲ್ಲ ಎನ್ನುವಷ್ಟು ಭೀಕರವಾಗಿತ್ತು. ಯುದ್ಧದ ಆರಂಭಿಕ ದಿನಗಳಲ್ಲಿ, ಹಮಾಸ್ ಉಗ್ರರು ಮಕ್ಕಳನ್ನು ಒತ್ತೆಯಾಗಿರಿಸಿಕೊಂಡಿದ್ದ ವಿಡಿಯೋ ಒಂದನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿತ್ತು. ಒಂದು ಕೈಯಲ್ಲಿ ಹಸುಗೂಸು, ಮತ್ತೊಂದು ಕೈಯಲ್ಲಿ ಎಕೆ-೪೭ ಬಂದೂಕು ಹಿಡಿದಿದ್ದ ಹಮಾಸ್ ಉಗ್ರನೊಬ್ಬ ಆ ಹಸುಗೂಸಿನೊಂದಿಗೆ ಪೈಶಾಚಿಕ ವಾಗಿ
ವರ್ತಿಸಿದ್ದನ್ನು ಆ ವಿಡಿಯೋ ತೋರಿಸಿತ್ತು. ಬಾಯಾರಿದ ಒತ್ತೆಯಾಳು ಮಗುವಿಗೆ ಕುಡಿಯಲು ನೀರು ಕೊಡುವ ಮುನ್ನ ಹಮಾಸ್ ಉಗ್ರನೊಬ್ಬ ‘ಬಿಸ್ಮಿಲ್ಲಾ’ ಎಂದು ಹೇಳುವಂತೆ ಆಗ್ರಹಿಸುವ ದೃಶ್ಯ ಮತ್ತೊಂದು ವಿಡಿಯೋ ದಲ್ಲಿತ್ತು.

ಇಷ್ಟೇ ಅಲ್ಲದೆ, ಹಮಾಸ್ ಉಗ್ರರು ಆಸ್ಪತ್ರೆಗಳಿಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ಮಾಡಿ ರಾಕ್ಷಸರಂತೆ ವರ್ತಿಸಿದ ವಿಡಿಯೋಗಳು ಅಂದು ಸಾಮಾ ಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡಿದ್ದವು. ಏತನ್ಮಧ್ಯೆ, ಇಸ್ರೇಲಿ ಪಡೆಗಳಿಗೆ ಸೆರೆಸಿಕ್ಕ ಮೊಹಮ್ಮದ್ ನಹಿದ್ ಅಹ್ಮದ್ ಎಲ್-ಅರ್ಷಾ ಎಂಬ ಹಮಾಸ್ ಉಗ್ರ ವಿಚಾರಣೆಯ ವೇಳೆ, ‘ನಾವು ಇಸ್ರೇಲ್ ಮೇಲೆ ದಾಳಿ ನಡೆಸಿದಾಗ ಕಂಡ ಕಂಡ ಯುವತಿಯರ ಮೇಲೆ ಅತ್ಯಾಚಾರ ಮಾಡಿದೆವು. ಮಕ್ಕಳು, ಮಹಿಳೆಯರು, ವೃದ್ಧರು ಹೀಗೆ ಸಿಕ್ಕವರನ್ನೆಲ್ಲ ಕೊಂದುಹಾಕಿದೆವು. ಕೆಲವರ ತಲೆ ಕತ್ತರಿಸಿ ನೆಲದ ಮೇಲೆ ಎಸೆದೆವು’ ಎಂದು ಹೇಳಿದ್ದ.

ಅಂದು ಹಮಾಸ್ ಉಗ್ರರು ಇಸ್ರೇಲಿಗರ ಮೇಲೆ ನಡೆಸಿದ ದಾಳಿಯು ನಿಜಕ್ಕೂ ಮಾನವಕುಲವೇ ತಲೆ ತಗ್ಗಿಸುವಂಥ ಘೋರಕೃತ್ಯವಾಗಿತ್ತು. ದುರ್ದೈವ ವೆಂದರೆ, ಅಂದು ಭಾರತದ ನಟ-ನಟಿಯರು, ಕ್ರೀಡಾಪಟುಗಳು ಇಸ್ರೇಲಿ ಗರ ನೋವಿಗೆ ಮರುಗಿದ್ದು ವಿರಳ. ಹೌದು, ಇಂದು ರಫಾ ನಗರದ ಮೇಲೆ ಕರುಣೆ ತೋರುತ್ತಿರುವ ಭಾರತದ ಕೆಲ ಸೆಲೆಬ್ರಿಟಿಗಳು ಅಂದು ಹಮಾಸ್ ಉಗ್ರರ ಪೈಶಾಚಿಕ ಕೃತ್ಯದ ವಿರುದ್ಧ ಸೊಲ್ಲೆತ್ತಲಿಲ್ಲ. ಆಗ ಸಂಭವಿಸಿದ ಸಾವುಗಳಾವುವೂ ಈಗ ರಫಾ ಮೇಲೆ ಕರುಣೆ ತೋರುತ್ತಿರು ವವರಿಗೆ ಅಂದು ಕಾಣಲಿಲ್ಲ. ಆ ಸಾವುಗಳಿಗೆ ಈ ಸೆಲೆಬ್ರಿಟಿಗಳ ಮನ ಮಿಡಿಯಲಿಲ್ಲ. ಆದರೆ, ಇಸ್ರೇಲ್ ಸೇನೆ ಹಮಾಸ್ ಉಗ್ರರ ಮೇಲೆ ದಾಳಿ ಮಾಡಿದಾಕ್ಷಣ ಇವರ ಮನ ಕರಗಿ, ‘ಎಲ್ಲರೂ ರಫಾ ನಗರದ ಕಡೆ ನೋಡಿ’ ಎಂದುಬಿಟ್ಟರು.

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ All Eyes on Rafah (ಎಲ್ಲ ಕಣ್ಣುಗಳೂ ರಫಾ ನಗರ ದೆಡೆಗೆ) ಎಂಬ ಹ್ಯಾಷ್ ಟ್ಯಾಗ್‌ನ ಕೃತಕ ಬುದ್ಧಿಮತ್ತೆಯ (ಎಐ) ಚಿತ್ರವನ್ನು ಜಿದ್ದಿಗೆ ಬಿದ್ದವ ರಂತೆ ಇವರು ಹಂಚಿ ಕೊಂಡರು. ಇದಕ್ಕೆ ಕಾರಣ, ಇಸ್ರೇಲ್‌ನ ಸೇನಾಪಡೆಗಳು ಗಾಜಾಪಟ್ಟಿಯ ರಫಾ ಗಡಿ ಮೇಲೆ ಇತ್ತೀಚೆಗೆ ವೈಮಾನಿಕ ದಾಳಿ ನಡೆಸಿದಾಗ, ಉಗ್ರರು ಸೇರಿದಂತೆ ರಫಾದ ೪೬ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಇದಾದ ಬಳಿಕ All Eyes on Rafah
ಎಂಬ ಟ್ರೆಂಡ್ ಶುರುವಾಯಿತು. ಕರೀನಾ ಕಪೂರ್, ಸ್ವರಾ ಭಾಸ್ಕರ್, ವರುಣ್ ಧವನ್, ಸೋನಮ್ ಕಪೂರ್, ತೃಪ್ತಿ ಡಿಮ್ರಿ, ಭೂಮಿ ಪಡ್ನೇಕರ್, ದುಲ್ಕರ್ ಸಲ್ಮಾನ್, ಕಾಮಿಡಿಯನ್ ವೀರ್ ದಾಸ್, ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಗಾಯಕಿ ಶಿಲ್ಪಾ ರಾವ್ ಹೀಗೆ ಬಾಲಿವುಡ್-ಟಾಲಿವುಡ್‌ನ ಅನೇಕ ಘಟಾನುಘಟಿಗಳು ರಫಾ (All Eyes on Rafah) ಬಗ್ಗೆ ದನಿಯೆತ್ತಿದ್ದರು. ಇನ್ನು ಕೆಲವರು ರಫಾ ಪರವಾಗಿ ‘ಎಕ್ಸ್’ ಮಾಧ್ಯಮದಲ್ಲಿ ಬರೆದುಕೊಂಡು, ಅದಕ್ಕೆ ಟೀಕೆ ವ್ಯಕ್ತವಾದ ನಂತರ ಅದನ್ನು ಡಿಲೀಟ್ ಮಾಡಿದ್ದರು!

ಇಂಥವರನ್ನು ಅರೆಪುಕ್ಕಲು ಮಂದಿ ಎನ್ನಬಹುದು, ಇರಲಿ. ಅಂದಹಾಗೆ, ಒಂದೇ ರೀತಿಯ ಪೋಸ್ಟ್‌ಗಳು ಎಲ್ಲರ ಖಾತೆಗಳಲ್ಲಿ ಶೇರ್ ಆದಾಗ ಅಂಥವನ್ನು ‘ಪೇಯ್ಡ್ ಪ್ರಮೋಷನ್’ನ ಭಾಗ ಎಂದು ಕರೆಯಲಾಗುತ್ತದೆ. ರಫಾ ಪೋಸ್ಟ್ ಕೂಡ ‘ಪೇಯ್ಡ್’ ಆಗಿದೆಯೋ, ಏನಾಗಿದೆಯೋ ಯಾರಿಗೆ ಗೊತ್ತು! ಆದರೆ ಈ ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಖಾತೆಗಳ ವಾಲ್‌ನಲ್ಲಿ All Eyes on Rafah ಎಂಬ ಚಿತ್ರವಂತೂ ರಾರಾಜಿಸಿತ್ತು. ಅದೇನೇ ಇರಲಿ, ನೋವಿನಲ್ಲಿ ಇರುವ ಜನರ ಕಷ್ಟಕ್ಕೆ ನೆರವಾಗು ವುದು ಮನುಷ್ಯತ್ವ ಎನ್ನೋಣ. ಈ ಸೆಲೆಬ್ರಿಟಿಗಳೆಲ್ಲರೂ ಅದೇ ಮಾನವೀಯತೆಯ ಆಧಾರದ ಮೇಲೆ ರಫಾಜನರ ಪರವಾಗಿ ನಿಂತರು ಎಂದಾಗಿದ್ದರೆ, ಅಂದು ಹಮಾಸ್ ಉಗ್ರರ ಅಟ್ಟಹಾಸಕ್ಕೆ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಸಾವಿರಾರು ಜನರ ಮಾರಣ
ಹೋಮವಾದಾಗ ಇವರ‍್ಯಾರೂ All Eyes on Israe ಎನ್ನಲಿಲ್ಲ ಯಾಕೆ? ಅಷ್ಟೆಲ್ಲ ಯಾಕೆ, ಪಾಕಿಸ್ತಾನ, ಬಾಂಗ್ಲಾದೇಶದಂಥ ನಮ್ಮ ನೆರೆರಾಷ್ಟ್ರ ಗಳಲ್ಲಿ ದಿನಂಪ್ರತಿ ಹಿಂದೂ ಗಳ ಮೇಲೆ ಹಾಗೂ ಹಿಂದೂ ಧಾರ್ಮಿಕ ಸ್ಥಳಗಳ ಮೇಲೆ ದಾಳಿಗಳಾಗುತ್ತಿವೆ. ಮೇಲೆ ಉಲ್ಲೇಖಿಸಿರುವ ಸೆಲೆಬ್ರಿಟಿಗಳು ಇದನ್ನು ಖಂಡಿಸುತ್ತಿಲ್ಲವೇಕೆ? ಆ ದಾಳಿಗಳ ಸಂತ್ರಸ್ತರ ಕುರಿತು ಅವರ ಮನಸ್ಸು ಮಿಡಿಯುತ್ತಿಲ್ಲವೇಕೆ? ಹೋಗಲಿ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ
ಸಂಕಷ್ಟದಲ್ಲಿರುವ ಹಿಂದೂಗಳ ಪರವಾಗಿ ಇವರೆಲ್ಲ ಎಂದಾ ದರೂ ದನಿಯೆತ್ತಿದ್ದಾರೆಯೇ? ಹಿಂದೂಗಳ ಮೇಲೆ ಇವರಿಗೆ ಕರುಣೆ ಹುಟ್ಟುವುದಿಲ್ಲವೇಕೆ? ಅದು ಬಿಡಿ, ಕಾಶ್ಮೀರದಲ್ಲಿ ಹಿಂದೂ ಪಂಡಿತರಿಗಾದ ಅನ್ಯಾಯಕ್ಕೆ ಇವರುಗಳ ಮನಸ್ಸು ಎಂದಾದರೂ ಮರುಗಿತ್ತೇ? ಅಷ್ಟೇಕೆ, ಪಾಕಿಸ್ತಾನ ಕೊಡುತ್ತಿರುವ ಹಿಂಸೆಯನ್ನು ತಾಳಲಾರದೆ ಬಲೂಚಿಸ್ತಾನದ ಜನರು ಅನೇಕ ದಶಕಗಳಿಂದ ‘ಪಾಕಿಸ್ತಾನದಿಂದ ನಮಗೆ ಮುಕ್ತಿ ಬೇಕು’ ಎಂದು ಹೋರಾಡುತ್ತಿದ್ದಾರೆ. ಇವರ ಹೋರಾಟಕ್ಕೆ ಈ ಸೆಲೆಬ್ರಿಟಿಗಳು ಎಂದಾದರೂ ದನಿಗೂಡಿಸಿದ್ದಾರೆಯೇ? ಪಾಕ್ ಆಕ್ರಮಿತ ಕಾಶ್ಮೀರದ ಜನರು ಕೂಡ ‘ನಮಗೆ ಪಾಕಿಸ್ತಾನದ ಸಹವಾಸ ಸಾಕು, ನಾವು ಭಾರತದ ಜತೆ ಇರುತ್ತೇವೆ’ ಎನ್ನುತ್ತಿದ್ದಾರೆ. ಇವರ ಪರವಾಗಿ ಈ ಸೆಲೆಬ್ರಿಟಿಗಳು ಮಾತನಾಡುತ್ತಾರಾ, ಖಂಡಿತ ಇಲ್ಲ!

ಯಾಕೆಂದರೆ, ಇಂಥ ಕೆಲ ಸೆಲೆಬ್ರಿಟಿಗಳಲ್ಲಿ ಹಿಂದೂ – ವಿರೋಧಿ ಭಾವನೆ ಮನೆಮಾಡಿಬಿಟ್ಟಿದೆ. ಉದಾಹರಣೆಗೆ, ವೀರ್ ದಾಸ್ ಎನ್ನುವ ಕಾಮಿಡಿಯನ್ ಪರದೇಶವೊಂದ ರಲ್ಲಿ ಮಾತನಾಡುತ್ತಾ, ‘ನಾನು ಎರಡು ರೀತಿಯ ಭಾರತಕ್ಕೆ ಸೇರಿದವನು. ಭಾರತದಲ್ಲಿ ಹಗಲು ವೇಳೆ ಸೀಯರನ್ನು ಪೂಜಿಸಲಾಗುತ್ತದೆ, ರಾತ್ರಿ ವೇಳೆ ಗ್ಯಾಂಗ್ ರೇಪ್ ಮಾಡಲಾಗುತ್ತದೆ’ ಎನ್ನುವ ಮೂಲಕ ಭಾರತ ವನ್ನು ಅವಮಾನಿಸಿದ್ದರು. ಇಂಥವರಿಗೆ ರಫಾ ಮೇಲೆ ಪ್ರೀತಿ ಹುಟ್ಟುವುದು ಸಹಜವಲ್ಲವೇ! ಇನ್ನು, ನಟಿ ಸ್ವರಾ ಭಾಸ್ಕರ್ ಬಗ್ಗೆ ಹೇಳುವುದೇನಿದೆ? ಈಕೆಯ ಕಮ್ಯುನಿಸ್ಟ್ ಮಾನಸಿಕತೆ ಎಲ್ಲರಿಗೂ ಗೊತ್ತಿರುವಂಥದ್ದೇ.

ಅಯೋಧ್ಯೆಯ ರಾಮಮಂದಿರ ವಿಷಯ ವಾಗಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ವಿರೋಧಿ ಸಿದ್ದಲ್ಲದೆ, ಅವಹೇಳನಕಾರಿ ಹೇಳಿಕೆ ನೀಡಿ ಅಸಂಖ್ಯಾತ ಹಿಂದೂಗಳ ಕೆಂಗಣ್ಣಿಗೆ ಗುರಿಯಾದಾಕೆ ಈ ಸ್ವರಾ ಭಾಸ್ಕರ್. ಅಷ್ಟೇ ಅಲ್ಲ, ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವೆ ಯುದ್ಧ ಶುರುವಾದಾಗ, ಹಮಾಸ್ ಉಗ್ರರ ಪರ ಹೇಳಿಕೆ ಕೊಟ್ಟು ತನ್ನ ಮನಸ್ಥಿತಿ ಏನೆಂಬುದನ್ನು ತೋರಿಸಿ ಕೊಟ್ಟಿದ್ದ ನಟೀಮಣಿ ಈಕೆ! ಇವರೆಲ್ಲರ ಇಂಥ ಮನಸ್ಥಿತಿಯನ್ನು ನೋಡಿದಾಗ ಇವರೆಂಥ ಊಸರವಳ್ಳಿಗಳು ಎಂದು ನೋವಾಗುತ್ತದೆ.

ಏಕೆಂದರೆ, ತಮ್ಮ ನೆರೆ ಹೊರೆಯ ಜನರ ನೋವುಗಳಿಗೆ ಮರುಗದ ಇವರು ಇದ್ದಕ್ಕಿದ್ದಂತೆ All Eyes on Rafah ಎಂಬ ಸಂದೇಶವನ್ನು ಪುಂಖಾನುಪುಂಖ ವಾಗಿ ಹಂಚಿಕೊಳ್ಳುತ್ತಾರೆ. ಇಂಥ ವರ್ತನೆಯನ್ನು ನೋಡಿದಾಗ ಇದರ ಹಿಂದೆ ಜಾಗತಿಕ ಟೂಲ್‌ಕಿಟ್ ಗ್ಯಾಂಗ್‌ನ ಕೈವಾಡ ವೇನಾದರೂ ಇರ ಬಹುದಾ ಎಂಬ ಅನುಮಾನ ಹುಟ್ಟುತ್ತದೆ!

 (ಲೇಖಕರು ಹವ್ಯಾಸಿ ಬರಹಗಾರರು)