ಶ್ವೇತ ಪತ್ರ
shwethabc@gmail.com
ಸಹಜವಾಗಿ ನಮ್ಮೊಳಗೊಂದು ಬೆಚ್ಚಗಿನ ನಿಜ ಅನುಭವವನ್ನು ಕಟ್ಟಿಕೊಡುವುದೇ ನೋವು. ಅರ್ಥವಿಲ್ಲದ ಅಹಮ್ಮಿನ ಕೋಟೆ ಯಲ್ಲಿ ಕಳೆದು ಹೋಗಿ ರುವ ನಮ್ಮನ್ನು ಅಲುಗಾಡಿಸುವುದೇ ಈ ನೋವು. ಆಡಂಬರ, ಅಹಂಕಾರ, ಪ್ರತಿಷ್ಠೆಯ ಪರಾಕಾಷ್ಟವೆಂಬ ಖಾಲಿತನಕ್ಕೆ ಅಂಟಿಕೊಂಡಿರುವ ನಮ್ಮ ಜಾಢ್ಯದ ಪೊರೆ ಕಳಚ್ಚುವುದೇ ನೋವು. ಬೆಳಕಿನ ಕೆಳಗೆ ಕತ್ತಲೆಯ ತತ್ವಜ್ಞಾನವನ್ನು ಕಲಿಸಿಕೊಡುವುದು ಕೂಡ ಅದೇ ನೋವು.
ಈ ಪೊರೆ ಕಳಚಿದ ಅನುಭವ ನನಗಾಗಿದ್ದೇ ಸ್ನೇಹಿತೆಯ ಸಾವು ನನ್ನನ್ನು ಅಲಗಾಡಿಸಿದಾಗ. ಮಗಳ ಪೋಟೋ ಹಾಕಿ ನೀನೆ ನನ್ನ ಪ್ರಪಂಚವೆಂದು ಆಕೆ ಹಾಕುತ್ತಿದ್ದ ವಾಟ್ಸಪ್ ಸ್ಟೇಟಸ್‌ನ ಬರಹ ಅವಳ ಐಫೋನ್ ೧೩ರ ಒಳಗೆ ಹಾಗೆ ಇಣುಕುತ್ತಿದ್ದರೆ ಈ ಕಡೆ ಅನಾಥೆ ಯಾಗಿ ನಿಂತಿದ್ದು ಮಾತ್ರ ಅವಳ ಒಂಬತ್ತು ವರ್ಷದ ಹೆಣ್ಣು ಕೂಸು. ಆಸ್ಥೆಯಿಂದ ಅವಳು ಕೊಂಡಿದ್ದ ಸೀರೆ, ಡಿಸೈನ್ ಮಾಡಿ ಹೊಲಿಸಿದ ರವಿಕೆ, ಕೂಡಿಟ್ಟು ಮಾಡಿಸಿದ ಒಡವೆ ಎಷ್ಟೊಂದು ಜೋಪಾನವಾಗಿಡುತ್ತಿದ್ದಳು. ಈಗ ಅವೆಲ್ಲ ಅರ್ಥ ಕಳೆದುಕೊಂಡಿದ್ದವು.
ಯಾರೋ ಅವು ನಮಗೆ ಸೇರಬೇಕೆಂದು ಸಾವಿನ ಮನೆಯಲ್ಲಿ ಸದ್ದು ಮಾಡುತ್ತಿದ್ದರು. ಈ ನೋವಿನ ಘಟನೆ ನನ್ನನ್ನು ಆಲೋಚಿಸುವಂತೆ ಮಾಡಿತು. ನಂತರದಲ್ಲಿ ನನಗೆ ಸೇರಿದ ಅತ್ಯಮೂಲ್ಯ ವಸ್ತು ಗಳನ್ನು ಹೇಗೆ ನೋಡಬೇಕೆಂಬ ಹೊಸ ಪ್ರಜ್ಞೆ ಕೂಡ ಮೂಡಿಸಿತು. ಈಗ ನನ್ನ ಬಳಿ ಇರುವ ವಸ್ತುಗಳು ಅತ್ಯಮೂಲ್ಯವೂ ಅಲ್ಲ ಹಾಗಂತ ಬೆಲೆ ಇಲ್ಲದವು ಅಂತಲ್ಲ. ನಮ್ಮ ಜತೆಗೆ ನಾವು ಗುರುತಿಸಿಕೊಂಡಿ ರುವ ವಸ್ತುಗಳಷ್ಟೇ. ಅವುಗಳೆಡಗಿನ ನಮ್ಮ ದೃಷ್ಟಿಕೋನ ಮತ್ತು ಅಭಿಪ್ರಾಯ ಕೇವಲ ನಮ್ಮ ಆಯ್ಕೆಯಾಗಿ ಇರಬೇಕು ಹೊರತು ಮತ್ತೆನಲ್ಲ.
ಸ್ನೇಹಿತೆಯ ಸಾವು ನನ್ನೊಳಗೊಂದು ಖಾಲಿತನವನ್ನು ಮೂಡಿಸಿದೆ ಅದರ ನೋವು ನನ್ನನ್ನು ಕಾಡಿದಾಗಲೆಲ್ಲ ನಾವು ಬದುಕು ತ್ತಿರುವ ಪರಿಯನ್ನು ಮತ್ತೆ ಮತ್ತೆ ನೆನಪಿಸುತ್ತದೆ. ಪ್ರಪಂಚದ ಬಗ್ಗೆ ನಮ್ಮ ತೀರ್ಪುಗಳು, ಮೌಲ್ಯಗಳು, ಇಷ್ಟ – ಕಷ್ಟಗಳು ಇನ್ನೊಂದಿಷ್ಟು ಸಂಕಟವನ್ನು ಒಡ ಮೂಡಿಸುತ್ತವೆ. ನನಗೆ ನಾನೇ ಎಷ್ಟೋ ಸಲ ವಿವರಿಸಿಕೊಳ್ಳುವುದಿದೇ, ನನ್ನ ಹಾಗೆ ಈ ಪ್ರಪಂಚದಲ್ಲಿ ಅನೇಕರು ಬೇಡದ ನೋವನ್ನು ಸಡಗರವಾಗಿಸಿಕೊಂಡು ನರಳುತ್ತಿರುತ್ತಾರೆಂದು.
ಹೌದು, ಇತ್ತೀಚೆಗೆ ನಾನು ಅನುಭವಿಸಿದ ಆರ್ಥಿಕ ಒತ್ತಡವೊಂದು ನೋವಿನ ಹಸಿರುಚಿಯನ್ನು ನನಗೆ ತೋರಿಸಿದೆ. ಇಂತಹ ನೋವಿನ ಕ್ಷಣದಲ್ಲಿ ಆಧಾರರಹಿತವಾಗಿ ನಾನು ಕೆಲವೊಮ್ಮೆ ವ್ಯಕ್ತಪಡಿಸುತ್ತಿದ್ದ ಚಿಂತೆ ಜೊತೆಗೆ ನಾನು ಬಳಸಿದ ಎಲ್ಲಾ ರಕ್ಷಣಾ ತಂತ್ರಗಳು ಒಡೆದು ಚೂರಾಗು ತ್ತಿದ್ದವು ಇಲ್ಲಿ ನಾನು ಗಮನಿಸಿದ ಆಶ್ಚರ್ಯವೆಂದರೆ ಒಡೆದು ಚೂರಾಗಿದ್ದು ಕೇವಲ ರಕ್ಷಣಾ ತಂತ್ರಗಳೆಲ್ಲ ಜತೆಯ ನನ್ನ ನೋವುಗಳು. ಹೌದು ಇಂತಹ ಆರ್ಥಿಕ ಒತ್ತಡದಲ್ಲಿ ನಾನು ಎದುರುಗೊಂಡ ಅನೇಕರು ಮೃದು ಹೃದಯಗಳಾಗಿದ್ದಾರೆ.
ರೋಡಿನ, ಪಾರ್ಕಿನ, ದಿನಸಿ ಅಂಗಡಿಯ ಸಿಕ್ಕ ಜನರೊಳಗೆ ನಾನು ಗುರುತಿಸಿದ ಜೀವಂತಿಕೆ ಅರ್ಥಪೂರ್ಣತೆ ಮುಗ್ಗರಿಸಿ ಬಿದ್ದಿದ್ದ ನನ್ನನ್ನು ಮತ್ತೆ ಪುಟಿದು ಎದ್ದು ನಿಲ್ಲುವಂತೆ ಮಾಡಿದೆ. ಅಪರಿಚಿತರ ಜತೆಗಿನ ಆತ್ಮೀಯತೆಯನ್ನು ಅಲ್ಲಿಯವರೆಗೂ ನನಗೆ ಗುರುತಿಸಲು ಸಾಧ್ಯವಾಗಿರಲಿಲ್ಲ ಪೋ ಆಫೀಸ್‌ನ ಕ್ಲರ್ಕ್, ಕಾರ್ ಮೆಕಾನಿಕ್, ಭಿಕ್ಷೆ ಬೇಡುವ ಮುದುಕ ಮತ್ತು ಮಕ್ಕಳು ಇವರೆಲ್ಲರ ಕಣ್ಣನ್ನು ಇಣುಕಿದಾಗ ನನ್ನ ನೋವಿನ ಪ್ರತಿಬಿಂಬವೇ ಕಾಣಿಸುತ್ತಿತ್ತು. ಆ ನೋವಿನ ಅನುಭವವೇ ನನ್ನೊಳಗೆ ಸಹಾನುಭೂತಿ ಹಾಗೂ ಗಟ್ಟಿತನವನ್ನು ಸಹಜವಾಗಿ ಅರಳುವಂತೆ ಮಾಡಿದ್ದು, ನ್ಯೂಯಾರ್ಕ್ ನಗರದ ಸೆಪ್ಟೆಂಬರ್ ೧೧ರ ಘಟನೆಯ ನಂತರ ಅವರ ಎದುರಿಗಿಂತ ಪ್ರಪಂಚವೇ ಕುಸಿದಾಗ ಇಡೀ ನಗರದ ಜನ ಮತ್ತೊಂದು ಜಾಗಕ್ಕೆ ತೆರಳಿದರು. ಒಬ್ಬರಿಗೊಬ್ಬರು ನೆರವಾದರೂ ಇನ್ನೊಬ್ಬರ ಕಣ್ಣುಗಳಲ್ಲಿ ತಮ್ಮ ಕಣ್ಣು ನೆಡುತ್ತಾ ನೋವು ಮರೆತರು. ಬದುಕೆಂದರೆ ಸವಿ ಭಾವ ಲಹರಿ ಅಷ್ಟೇ ಅಲ್ಲ, ನೋವಿನ ಕಣಜವು ಹೌದು!
ಕಳೆದುಕೊಳ್ಳುವ ನೋವು, ಬಿಟ್ಟು ಕೊಡುವ ನೋವು, ಪಡೆಯುವ ನೋವು, ಹೋರಾಡುವ ನೋವು, ಪ್ರಶ್ನೆ ಇಲ್ಲಿ ಈ ನೋವೆಂಬ ಅನಿಶ್ಚಿತ, ಅನಿರೀಕ್ಷಿತ ಸಂಗತಿಗೆ ತೆರೆದುಕೊಳ್ಳುವುದು ಒಪ್ಪಿಕೊಂಡು ಮುನ್ನಡೆಯುವುದು ಹೇಗೆ? ಎಂಬುದು ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಾಗ ಬುದ್ಧನನ್ನು ಓದತೊಡಗಿದೆ. ಬುದ್ಧ ನೋವಿನ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಾನೆ. ಬುದ್ಧ ಹೇಳುವ, ಗೀತೆ ಹೇಳುವ, ಓಶೋ ಹೇಳುವ, ಇನ್ಯಾರೋ ಅನುಭವದಿಂದ ಹೇಳುವ ಮಾತುಗಳನ್ನು, ತತ್ವಗಳನ್ನು ನಾವೆಲ್ಲ ಬಹಳ ಹಗುರವಾಗಿ ತೆಗೆದುಕೊಳ್ಳುತ್ತೇವೆ ನೋವೆಂಬ ನೋವು ನಮ್ಮನ್ನು ಕಾಡುವವರೆಗೂ.
ಯಾರಾದರೂ ಹೇಳುವ ಬದುಕಿನ ಪಾಠಗಳು ನಮಗೆ ಜಸ್ಟ್ ಟೈಮ್‌ಪಾಸ್ ಆಗಿಯೋ ಅಥವಾ ರಿಲ್ಯಾಕ್ಸಿಂಗ್ ತಂತ್ರವಾಗಿ ಅಷ್ಟೇ ಕಾಣಿಸುತ್ತದವೆ. ನಮ್ಮ ಬದುಕೇ ಕವಲು ದಾರಿಯಾದರೆ ಇದೆ ಮಾತುಗಳು ತತ್ವಗಳು ನಮಗೆ ಔಷಧಿಯಾಗುತ್ತವೆ. ನೋವು ಹೃದಯಕ್ಕೆ ಹತ್ತಿರವಾದ ಸಹಜವಾದ ಬೆಚ್ಚಗಿನ ಗುಣಗಳಾದ ಪ್ರೀತಿ, ಅನುಭೂತ, ಕೃತಜ್ಞತೆ, ಧನ್ಯತಾಭಾವ, ಮೃದುತ್ವವನ್ನು ನಮ್ಮೊಳಗೆ ಅರಳಿಸುತ್ತದೆ. ಜತೆಯ ಒಂಟಿತನ, ದುಃಖ, ಭಯಗಳನ್ನು ಸೇರಿಸಿಕೊಂಡಿರುತ್ತದೆ.
ಈ ಭಾವಗಳೇ ನಮ್ಮನ್ನು ಬದಲಾಯಿಸುವುದು. ನೋವಿನ ಅನುಭವ ಕೆಲವೊಮ್ಮೆ ಹಿತ ಕೆಲವೊಮ್ಮೆ ಅಹಿತ. ಇಲ್ಲಿ ಮುಖ್ಯವಾ ಗುವುದು ನೋವನ್ನು ಎದುರಿಸುವ ನಮ್ಮೊಳಗಿನ ಶಕ್ತಿ ಸಮಯದ ಜತೆ ನೋವನ್ನು ಎದುರಿಸುವ ಗುಣವನ್ನು ನಾವೆಲ್ಲ ಮೈ ಗೂಡಿಸಿಕೊಳ್ಳಬಹುದು ಎಂಬ ಸಾರ್ವಕಾಲಿಕ ಸತ್ಯದ ಒಪ್ಪಿತ ಭಾವ. ಹತಾಶರಾಗುವ, ದಿಕ್ಕೆಡುವ, ಸೋತು ಹೋದವೆಂಬ ಭಾವ ಈ ಸಂದರ್ಭಗಳಲ್ಲಿ ನಮ್ಮನ್ನು ಕಾಡುವುದು ಸಹಜ ಧೃತಿಗೆಡ ಬೇಕಿಲ್ಲ. ನಮ್ಮೊಳಗಿನ ಅನುಭೂತಿಗಳೇ ನಮ್ಮನ್ನು ಕೈಹಿಡಿದು ನಡೆಸುತ್ತವೆ.
ಒಬ್ಬ ವ್ಯಕ್ತಿಯ ಜೀವನದಲ್ಲಿ ಅತ್ಯಂತ ನೋವು ತರುವಂತಹ ಘಟನೆಗಳು ನಡೆದಿರುತ್ತದೆ ಮುಂದೇನು ಈಗ ಆ ವ್ಯಕ್ತಿ ತನ್ನನ್ನು ನೋವಿನ ಆಚೆಗೆ ತೆರೆದುಕೊಳ್ಳಬೇಕಾ? ಇಲ್ಲವೇ ನೋವಿನೊಳಗೆ ಕಳೆದು ಹೋಗಬೇಕಾ? ಸಾಮಾನ್ಯವಾಗಿ ಇಂತಹ ನೋವಿನ ಸಂದರ್ಭಗಳಲ್ಲಿ ನಾವು ಗೊತ್ತಿಲ್ಲದೆಯೇ ಮುದುಡಿ ಹೋಗಿರುತ್ತೇವೆ ನಮ್ಮ ನೋವಿನ ಕಥೆಗಳನ್ನು ದಾಟಿ ಹೊರಬರಬೇಕು. ಇದಕ್ಕೆ ಸುಲಭದ ದಾರಿ ನಮ್ಮದೇ ಆಲೋಚನೆ, ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ನಮ್ಮದೇ ಕಥೆಗಳಿಂದ ನಮ್ಮನ್ನು ದಾಟು ವಂತೆ ಮಾಡುತ್ತವೆ.
ಈ ಹಂತದಲ್ಲಿ ಮುದುಡಿ ಹೋಗುವ ನಾವು ನಮ್ಮೊಳಗೆ ಒಂದು ಜಾಗವನ್ನು ಸೃಷ್ಟಿಸಿಕೊಳ್ಳುತ್ತಾ ಬದಲಾವಣೆಗೆ ಅನುಭವ ಮಾಡಿಕೊಡಬೇಕು. ಜಿಲ್ ಬೋಟ್ ಟೇಲರ್‌ನ ಪುಸ್ತಕ My stroke of Insight ನಲ್ಲಿ ಟೇಲರ್ ನಮ್ಮೆಲ್ಲರ ಆ ಕ್ಷಣದ ಭಾವನೆಯ ಜೀವಿತಾವಧಿ ಕೇವಲ ಒಂದುವರೆ ನಿಮಿಷ ಎಂಬುದನ್ನು ವೈಜ್ಞಾನಿಕ ಪುರಾವೆಗಳೊಂದಿಗೆ ವಿವರಿಸುತ್ತಾಳೆ. ಈ ಒಂದೂವರೆ ನಿಮಿಷದ ನಂತರ ನಾವುಗಳು ನಮ್ಮ ನಮ್ಮ ಭಾವನೆಗಳನ್ನು ಪುನರುಜ್ಜೀವನಗೊಳಿಸಿ ಮುಂದೆ ಸಾಗಬೇಕು. ಸಾಮಾನ್ಯವಾಗಿ ಈ ಪ್ರಕ್ರಿಯೆಯನ್ನು ದಾಟಿ ನಾವೆಲ್ಲ ನಮ್ಮೊಳಗೆ ಮಾತಾಗುತ್ತೇವೆ ನಮ್ಮ ಈ ಸ್ಥಿತಿಗೆ ಯಾರನ್ನೋ ಕಾರಣವಾಗಿಸುತ್ತೇವೆ.
ಏಕೆಂದರೆ ಆ ಕ್ಷಣದ ಅಹಿತಕರ ಭಾವನೆಗೆ ನಾವೇ ಕಾರಣ ಎಂಬುದನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸು ತಯಾರಿರುವುದಿಲ್ಲ. ಇದೊಂದು ಮನುಷ್ಯನ ಪುರಾತನ ಅಭ್ಯಾಸ ಈ ಅಭ್ಯಾಸ ನಮ್ಮ ಅಸ್ಪಷ್ಟತೆಯ ಪ್ರತೀಕ ದುಃಖವನ್ನು ಮರುಗಟ್ಟಿಸಿ ಇನ್ನೊಬ್ಬ ರನ್ನು ದೂಷಿಸುವುದು ಅಪಾಯದ ಸಂಗತಿ. ಇದನ್ನು ಅರ್ಥ ಮಾಡಿಕೊಂಡು ಬೇರೆಯವರನ್ನು ನಮ್ಮ ನೋವಿಗೆ ಕಾರಣ ವಾಗಿಸುವುದಕ್ಕಿಂತ ಅದರ ವಿರುದ್ಧವಾದ ಭಾವವನ್ನು ಬೆಳೆಸಿಕೊಳ್ಳಬೇಕು. ನಮ್ಮ ನೋವುಗಳನ್ನು ಅದರ ಕಾರಣಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಹತ್ತಿರವಾಗಿಸಿಕೊಳ್ಳಬೇಕು.
ಇವತ್ತಿನ ಕಾಸ್ಮೋಪಾಲಿಟನ್ ಸಮಾಜ ಬದುಕಿನ ವ್ಯಾಖ್ಯಾನೆಯನ್ನು ನಾವೆಲ್ಲ ಅನಾರೋಗ್ಯಕರವಾಗಿ ಅರ್ಥೈಸಿಕೊಳ್ಳುವಂತೆ ಮಾಡಿದೆ ಒಳ್ಳೆಯ ಮಾರ್ಕ್ಸ್ ತೆಗೆಯಬೇಕು, ಬೇರೆಯವರ ನಿರೀಕ್ಷೆಗಳಿಗನುಗುಣವಾಗಿ ಬದುಕಬೇಕು, ಮನೆ ಆಸ್ತಿಪಾಸ್ತಿ ಮಾಡಿಡ ಬೇಕು, ಯಶಸ್ಸು ಪಡೆಯಬೇಕು. ಇದೇ ನಮ್ಮ ಇವತ್ತಿನ ಬದುಕಿನ ಡೆಫಿನೇಶನ್ ಗಳಾಗಿವೆ. ಹಾಗಾಗಿ ಈ ಹೊತ್ತು ನಾವು ಜೀವಿಸುತ್ತಿಲ್ಲ ಹತಾಶಯೊಟ್ಟಿಗೆ ಬದುಕನ್ನು ಸಾಗಿಸುತ್ತಿದ್ದಾವೇ ಅಷ್ಟೇ. ಹತಾಶೆಯ ಗೋಡೆಯನ್ನು ಹೊಡೆದುರುಳಿಸಿ ಹೊರ ಬರಬೇಕು. ಕುಗ್ಗುವುದು ಸಹಜ ಕತ್ತಲೆಯಲ್ಲಿ ಮುಳುಗುವುದು ಸಹಜ ನೋವಿನಿಂದ ಅಳುವುದು ಸಹಜ ಈ ಸಹಜತೆಯನ್ನು ಅರಿಯಬೇಕಷ್ಟೇ. ಈ ಅರಿವು ನಮ್ಮದಾಗಲೂ ಭ್ರಮೆಯ ಪೊರೆ ಕಳಚಬೇಕು.
ನಾವೆಲ್ಲ ನಮ್ಮ ನಮ್ಮ ಬದುಕುಗಳಲ್ಲಿ ಒಂದಲ್ಲ ಒಂದು ನೋವಿನಿಂದ ಬಳಲುವವರೇ. ನಮ್ಮೆಲ್ಲರ ಸಮಸ್ಯೆಗಳು ಬೇರೆಯವಿರ ಬಹುದು ಆದರೆ ಸಮಾನ ಅಂಶವೊಂದೇ ಅದು ನೋವು. ‘ನಾವು ನೋವನ್ನು ಸ್ವಲ್ಪ ಬಿಡುಗಡೆಗೊಳಿಸಿದರೆ ಸ್ವಲ್ಪವೇ ಶಾಂತಿ ನಮ್ಮದಾಗುತ್ತದೆ. ಪೂರ್ತಿ ಬಿಡುಗಡೆ ಗೊಳಿಸಿದರೆ ಪೂರ್ತಿ ಶಾಂತಿ ಸಮಾಧಾನ ನಮ್ಮದಾಗುತ್ತದೆ’ ಹೀಗೆಂದು ಬುದ್ಧ ಹೇಳುತ್ತಾನೆ.
ಇನ್ ಫ್ಯಾಕ್ಟ್ ಈ ನೋವುಗಳು ನಮಗೊಂದು ಅಸ್ಮಿತೆಯ ಸಂವೇದನೆಯನ್ನು ಉಂಟುಮಾಡುತ್ತವೆ. ಹಾಗಾಗಿ ನಾವು ಸಮಸ್ಯೆ ಗಳನ್ನು ಸೃಷ್ಟಿಸಿ ನಿರಂತರವಾಗಿಸುತ್ತೇವೆ. ಹಳೆಯ ತಪ್ಪುಗಳನ್ನು ಮತ್ತೆ ಮತ್ತೆ ರಿಪ್ಲೇ ಮಾಡುತ್ತಾ ನಾಚಿಕೆ ಮತ್ತು ತಪ್ಪಿತಸ್ಥ ಭಾವನೆಗಳಿಂದ ನರಳುತ್ತೇವೆ. ಈ ನರಳುವಿಕೆ ಇಂದಿನ ಈ ಕ್ಷಣದ ನಮ್ಮ ಬದುಕು ರೂಪುಗೊಳ್ಳುವಿಕೆಯ ಮೇಲೆ ಪ್ರಭಾವ ಬೀರುತ್ತದೆ. ನೋವನ್ನು ಮನಸ್ಸಿನಲ್ಲಿ ಹೊತ್ತು ತಿರುಗುವ ನಾವುಗಳು ಒಬ್ಬರಿಗೊಬ್ಬರು ಕನೆಕ್ಟ್ ಆಗುತ್ತಾ ಬದುಕುವುದನ್ನು ಕಲಿಯಬೇಕು. ಏಕೆ ಗೊತ್ತೇ ನಾವು ನಮ್ಮವೇ ಆದ ದುಃಖವನ್ನು ಭಯವನ್ನು ಕೋಪವನ್ನು ಹೊಟ್ಟೆ ಕಿಚ್ಚನ್ನು ತಟ್ಟಿಕೊಂಡರೆ ಎದುರುಗಿನ ವ್ಯಕ್ತಿಯ ಅದೇ ಭಾವನೆಗಳನ್ನು ತಟ್ಟಿದಂತೆ.
ನಮ್ಮೆಲ್ಲರ ಕಥೆಗಳು ವಿಭಿನ್ನವಾಗಿರಬಹುದು ಕಾರಣಗಳು ಬೇರೆ ಇರಬಹುದು ಆದರೆ ಅವುಗಳ ಅನುಭವ ಮಾತ್ರ ಒಂದೇ. ಒಂದು ಸಾವಿರ ಬೇರೆ ಬೇರೆ ಬಟ್ಟಲುಗಳಲ್ಲಿ ಉಪ್ಪನ್ನು ಹಾಕಿಟ್ಟಿದ್ದರೂ ಎಲ್ಲಾ ಬಟ್ಟಲಿನ ಉಪ್ಪಿನ ರುಚಿಯೂ ಒಂದೇ. ಮನುಷ್ಯನ ಆತ್ಮ ಧೈರ್ಯದ ಒಂದು ದೊಡ್ಡಕ ಖಜಾನೆ ಅದು ಸದಾ ಲಭ್ಯವಿರುವಂತಹುದು, ನಾವು ಅನ್ವೇಷಿಸಬೇಕಷ್ಟೇ ನಾವೆಲ್ಲ ಕೇಳೇ ಇರುವ ಕಲ್ಲಿನ ಕಥೆಯನ್ನು ಇಲ್ಲಿ ಪ್ರಸ್ತಾಪಿಸಲು ಇಚ್ಚಿಸುತ್ತೇನೆ. ಉಳಿಪೆಟ್ಟು ತಿಂದು ಶಿಲೆಯಾದ ಕಲ್ಲು ಒಂದೆಡೆಯಾದರೆ ಪೆಟ್ಟು ತಿನ್ನದೇ ಕಲ್ಲಿನ ಹಾಸಾದ ಮತ್ತೊಂದು ಕಲ್ಲು. ವಿಕ್ಟರ್ ಫ್ರಾಂಕಲ್ ಹೇಳುವಂತೆ ನೋವು – ನರಳುವಿಕೆ ನಮ್ಮೆಲ್ಲರ ಬದುಕಿನ ಭಾಗ ಆ ನೋವಿಗೆ ಅರ್ಥ ಕೊಡುವ ಪ್ರಯತ್ನವನ್ನು ನಾವು ಮಾಡಿದರೆ ಲೈಫ್ ಈಸ್ ಸ್ಟಿಲ್ ಬ್ಯೂಟಿಫುಲ್!