Thursday, 19th September 2024

ಪಾಕ್-ಸೌದಿ ಘರ್ಷಣೆ; ಭಾರತಕ್ಕೆ ಲಾಭ

 ಪ್ರಾಸ್ತಾವಿಕ
ಧನಂಜಯ ತ್ರಿಪಾಠಿ, ಅಂತಾರಾಷ್ಟ್ರೀಯ ವ್ಯವಹಾರಗಳ ತಜ್ಞ

ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಐತಿಹಾಸಿಕವಾಗಿ ಬಹಳ ಹತ್ತಿರದ ಸ್ನೇಹಿತರು. 1947ರ ನಂತರ ಪಾಕಿಸ್ತಾನವು ರಾಷ್ಟ್ರ ನಿರ್ಮಾಣಕ್ಕಾಗಿ ತೈಲಸಮೃದ್ಧ ರಾಷ್ಟ್ರ ಸೌದಿ ಅರೇಬಿಯಾ ಬಳಿ ನೆರವು ಕೇಳಿಕೊಂಡು ಹೋಗಿತ್ತು. ನಂತರ ಪಾಕಿಸ್ತಾನಕ್ಕೆೆ ಯಾವಾಗ ಆರ್ಥಿಕ ಸಂಕಷ್ಟಗಳು ಎದುರಾದರೂ ಅದು ಸೌದಿ ಅರೇಬಿಯಾದಿಂದಲೇ ಉದಾರ ನೆರವು ಪಡೆದಿದೆ.

ಇತ್ತೀಚಿನ ಉದಾಹರಣೆಯನ್ನೇ ನೋಡುವುದಾದರೆ, ಪಾಕಿಸ್ತಾನದ ಆರ್ಥಿಕತೆ ಕಳೆದ ಕೆಲ ವರ್ಷಗಳಿಂದ ಬಹಳ ಸಂಕಷ್ಟದಲ್ಲಿದೆ. ಹೀಗಾಗಿ ಪಾಕಿಸ್ತಾನ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಬಳಿ ನೆರವು ಕೇಳಿತ್ತು. 2019ರಲ್ಲಿ ಸಾಲದಲ್ಲಿ ಮುಳುಗಿದ್ದ ಪಾಕಿಸ್ತಾನದ ಆರ್ಥಿಕತೆಯನ್ನು ರಕ್ಷಿಸಲು ಐಎಂಎಫ್ 6 ಬಿಲಿಯನ್ ಡಾಲರ್ ನೆರವಿನ ಆರ್ಥಿಕ ಪ್ಯಾಕೇಜ್‌ಗೆ ಅನುಮತಿ ನೀಡಿತ್ತು. ಈ ವೇಳೆ ತನ್ನ ಅಧಿಕೃತ ಸಂದೇಶದಲ್ಲಿ ಐಎಂಎಫ್ ‘ಪಾಕಿಸ್ತಾನದ ಆರ್ಥಿಕತೆಯನ್ನು ಸುಸ್ಥಿರ ಹಾಗೂ ಸಮತೋಲನದ
ಅಭಿವೃದ್ಧಿಯ ತಕ್ಕಡಿಯಲ್ಲಿ ಇರಿಸಲು ಮತ್ತು ಅಭಿವೃದ್ಧಿಯ ದರವನ್ನು ಹೆಚ್ಚಿಸುವ ಮೂಲಕ ತಲಾದಾಯವನ್ನು ಹೆಚ್ಚಿಸಲು
ಈ ನೆರವು ನೀಡುತ್ತಿದ್ದೇವೆ’ ಎಂದು ಹೇಳಿತ್ತು.

ಅಂತಾರಾಷ್ಟ್ರೀಯ ರಾಜಕೀಯ ವಿದ್ಯಮಾನಗಳನ್ನು ಗಮನಿಸುವವರಿಗೆ ಐಎಂಎಫ್ ನೀಡುವ ಯಾವುದೇ ಆರ್ಥಿಕ
ಪ್ಯಾಕೇಜ್‌ಗಳು ಷರತ್ತುಗಳಿಲ್ಲದೆ ಬರುವುದಿಲ್ಲ ಎಂಬುದು ಗೊತ್ತಿರುತ್ತದೆ. ಸಾಲದಲ್ಲಿ ಮುಳುಗಿದ ಪಾಕಿಸ್ತಾನದಂತಹ ದೇಶಗಳಿಗೆ ಹಣಕಾಸಿನ ನೆರವು ನೀಡುವಾಗ ಐಎಂಎಫ್ ಯಾವಾಗಲೂ ಒಂದಷ್ಟು ಕಠಿಣ ಷರತ್ತುಗಳನ್ನು ವಿಧಿಸುತ್ತದೆ. ಹೀಗಾಗಿ, ಐಎಂಎಫ್ ‌ನಿಂದ ಪಡೆದ ಸಾಲಕ್ಕೆ ಪಾಕಿಸ್ತಾನದಲ್ಲೇ ವಿರೋಧ ವ್ಯಕ್ತವಾಗಿತ್ತು. ಪಾಕಿಸ್ತಾನದ ಸಾರ್ವಭೌಮತೆಯ ಜೊತೆಗೆ ರಾಜಿ ಮಾಡಿ ಕೊಂಡು ಈ ನೆರವು ಪಡೆಯಲಾಗುತ್ತಿದೆ ಎಂಬ ಟೀಕೆ ಕೇಳಿಬಂತಿತ್ತು.

ಅದಕ್ಕೂ ಮುನ್ನ 2017ರಿಂದಲೇ ಪಾಕಿಸ್ತಾನದ ಆರ್ಥಿಕತೆ ಕುಸಿಯಲು ಆರಂಭವಾಗಿತ್ತು. ಆಗ ಐಎಂಎಫ್‌ಗಿಂತ ಹೆಚ್ಚಾಗಿ ಸೌದಿ ಅರೇಬಿಯಾದ ನೆರವು ಪಡೆಯಲು ಪಾಕ್ ಯತ್ನಿಸಿತ್ತು. ಏಕೆಂದರೆ ಸೌದಿ ಅರೇಬಿಯಾ ಪಾಕಿಸ್ತಾನಕ್ಕೆೆ ನೆರವು ನೀಡುವಾಗ
ವಿಧಿಸುವ ಷರತ್ತುಗಳು ಸಾಮಾನ್ಯವಾಗಿ ಸರಳವಾಗಿರುತ್ತವೆ.

*ಪಾಕ್‌ನ ಸಂಕಷ್ಟ ಪರಿಹಾರ ಯತ್ನ ಐಎಂಎಫ್ ನೆರವಿಗೆ ಬರುವುದಕ್ಕಿಿಂತಲೂ ಮೊದಲು ಪಾಕಿಸ್ತಾನದ ನೆರವಿಗೆ ಬಂದಿದ್ದು ಸೌದಿ ಅರೇಬಿಯಾ. 2018ರ ಅಕ್ಟೋಬರ್‌ನಲ್ಲಿ ಸೌದಿ ಅರೇಬಿಯಾ ಪಾಕಿಸ್ತಾನಕ್ಕೆೆ 6.2 ಬಿಲಿಯನ್ ಡಾಲರ್ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಿತ್ತು. ಅದರಲ್ಲಿ ಅರ್ಧದಷ್ಟು ಹಣ ವಿದೇಶಿ ಕರೆನ್ಸಿ ನೆರವು (3 ಬಿಲಿಯನ್ ಡಾಲರ್) ಹಾಗೂ ಇನ್ನರ್ಧ ನೆರವು (3.2 ಬಿಲಿಯನ್ ಡಾಲರ್) ತೈಲ ಆಮದಿಗೆ ತಡವಾಗಿ ಹಣ ನೀಡುವುದಕ್ಕೆೆ ಸಾಲದ ರೂಪದಲ್ಲಿತ್ತು. 2019ರ ಆರಂಭದಲ್ಲಿ ಪಾಕಿಸ್ತಾನದ ಬಳಿ ಕೇವಲ 8 ಬಿಲಿಯನ್ ಡಾಲರ್ ವಿದೇಶಿ ಮೀಸಲು ಹಣ ಉಳಿದಾಗ ಸೌದಿ ಅರೇಬಿಯಾ ಪಾಕಿಸ್ತಾನದಲ್ಲಿ 20 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡುವ ಒಪ್ಪಂದ ಮಾಡಿಕೊಂಡಿತು.

ತನ್ಮೂಲಕ ಪಾಕಿಸ್ತಾನದ ಆರ್ಥಿಕತೆಗೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ನೀಡಿತು. ಸೌದಿಯ ದೊರೆ ಮೊಹಮ್ಮದ್ ಬಿನ್
ಸಲ್ಮಾನ್ (ಎಂಬಿಎಸ್) ತಮ್ಮ ಪಾಕಿಸ್ತಾನದ ಭೇಟಿಯ ವೇಳೆ ಈ ಒಪ್ಪಂದಕ್ಕೆೆ ಸಹಿ ಹಾಕಿದ್ದರು. ಆ ವೇಳೆ ಮಾತನಾಡಿದ್ದ ಅವರು,
‘ನಾವು ಸೌದಿ ಅರೇಬಿಯಾ ಮತ್ತು ಪಾಕಿಸ್ತಾನಕ್ಕೆೆ ಉಜ್ವಲ ಭವಿಷ್ಯ ನಿರ್ಮಾಣ ಮಾಡುತ್ತಿದ್ದೇವೆ’ ಎಂದು ಹೇಳಿದ್ದರು. ಅದಕ್ಕೂ ಮೊದಲು ಕೂಡ ಸೌದಿ ಅರೇಬಿಯಾ ಪಾಕಿಸ್ತಾನಕ್ಕೆೆ ಮದ್ರಸಾ ಶಿಕ್ಷಣ ವ್ಯವಸ್ಥೆೆಯನ್ನು ಬೆಂಬಲಿಸಲು ಸಾಕಷ್ಟು ನೆರವು ನೀಡಿತ್ತು. ಅಷ್ಟೇಕೆ, ಪಾಕಿಸ್ತಾನ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ ಅಂತಾರಾಷ್ಟ್ರೀಯ ಸಮುದಾಯಗಳು ಪಾಕ್ ಮೇಲೆ ನಿಷೇಧ ವಿಧಿಸಿದಾಗ ಕೂಡ ಸೌದಿ ಅರೇಬಿಯಾ ನೆರವಿಗೆ ಬಂದಿತ್ತು.

2014ರಲ್ಲಿ ಪಾಕಿಸ್ತಾನದ ರೂಪಾಯಿ ಕುಸಿತ ಕಂಡಾಗ ಕೂಡ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಆಗಲೂ ಸೌದಿ ಅರೇಬಿಯಾ 1.5 ಬಿಲಿಯನ್ ಡಾಲರ್ ನೆರವನ್ನು ಪಾಕಿಸ್ತಾನಕ್ಕೆೆ ನೀಡಿತ್ತು. ಈ ನೇರ ಸಹಾಯಗಳ ಹೊರತಾಗಿ, ಪಾಕಿ ಸ್ತಾನಕ್ಕೆೆ ಪ್ರತಿ ವರ್ಷ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಪಾಕಿಸ್ತಾನೀಯರಿಂದ ದೊಡ್ಡ ಪ್ರಮಾಣದಲ್ಲಿ ಹಣ ಹರಿದುಬರುತ್ತದೆ. ವರದಿಗಳ ಪ್ರಕಾರ, 2020ರ ಜುಲೈನಲ್ಲಿ ಪಾಕಿಸ್ತಾನಕ್ಕೆೆ ಸೌದಿ ಅರೇಬಿಯಾದ ಪಾಕಿಗಳಿಂದ 821 ಮಿಲಿಯನ್ ಡಾಲರ್ ಹಣ ಬಂದಿದೆ. ಇದಕ್ಕೆೆ ಕಾರಣ, ಸುಮಾರು 10 ಲಕ್ಷ ಪಾಕಿಸ್ತಾನಿಗಳು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ.

*ಆರ್ಥಿಕತೆಯ ಆಚೆಗೆ ಪಾಕಿಸ್ತಾನ ಹಾಗೂ ಸೌದಿ ಅರೇಬಿಯಾದ ನಡುವಿನ ಸಂಬಂಧ ಕೇವಲ ಆರ್ಥಿಕ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಪಾಕಿಸ್ತಾನ ಹುಟ್ಟಿದ ನಾಲ್ಕು ವರ್ಷಗಳ ನಂತರ ಅದು ಸೌದಿ ಅರೇಬಿಯಾದ ಜೊತೆಗೆ ಸ್ನೇಹ ಒಪ್ಪಂದಕ್ಕೆೆ ಸಹಿ ಹಾಕಿತ್ತು. ಆ ಒಪ್ಪಂದ ಕಾಲಾಂತರದಲ್ಲಿ ಸಾಕಷ್ಟು ಬೆಳೆಯುತ್ತಾ ಹೋಗಿ ಎರಡೂ ದೇಶಗಳು ವ್ಯೂಹಾತ್ಮಕವಾಗಿ ಸಾಕಷ್ಟು ಹತ್ತಿರವಾಗಿವೆ.

1965ರಲ್ಲಿ ಹಾಗೂ 1971ರಲ್ಲಿ ಭಾರತದ ಜೊತೆಗೆ ಪಾಕಿಸ್ತಾನ ಯುದ್ಧ ಮಾಡಿದಾಗ ಪಾಕಿಸ್ತಾನಕ್ಕೆೆ ದೊಡ್ಡ ಬೆಂಬಲ ನೀಡಿದ್ದು ಸೌದಿ ಅರೇಬಿಯಾ. ಎರಡೂ ಯುದ್ಧಗಳಲ್ಲಿ ಪಾಕಿಸ್ತಾನ ಸೋತಿತ್ತು. ಆದರೆ, 1971ರಲ್ಲಿ ಅದರ ಆರ್ಥಿಕತೆ ಹಾಗೂ ವಿಶ್ವಾಸಾ ರ್ಹತೆಗೆ ಬಹುದೊಡ್ಡ ಪೆಟ್ಟು ಬಿದ್ದಿತ್ತು. ಆ ಸಂಕಷ್ಟದ ಸಮಯದಲ್ಲಿ ಮತ್ತೆ ಸೌದಿ ಅರೇಬಿಯಾವೇ ಪಾಕಿಸ್ತಾನಕ್ಕೆೆ ಆರ್ಥಿಕವಾಗಿ ಸಾಕಷ್ಟು ನೆರವು ನೀಡಿತ್ತು. ಪಾಕಿಸ್ತಾನಿ ಸೈನಿಕರು ಸೌದಿ ಅರೇಬಿಯಾದಲ್ಲಿ ದೊಡ್ಡ ಸಂಖ್ಯೆೆಯಲ್ಲಿ ನಿಯೋಜಿತರಾಗಿದ್ದಾರೆ ಎಂಬುದು ಕೂಡ ಇನ್ನೊೊಂದು ಗಮನಾರ್ಹ ಸಂಗತಿ.

1982ರಲ್ಲಿ ಎರಡೂ ದೇಶಗಳು ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಒಪ್ಪಂದಕ್ಕೆೆ ಸಹಿ ಹಾಕಿವೆ. ಆ ಒಪ್ಪಂದದ ಭಾಗವಾಗಿ
ಸೌದಿ ಅರೇಬಿಯಾದ ಸೈನಿಕರಿಗೆ ಪಾಕಿಸ್ತಾನಿ ಸೇನೆ ತರಬೇತಿ ನೀಡುತ್ತದೆ. ಅಷ್ಟೇ ಅಲ್ಲ, ಎರಡೂ ದೇಶಗಳು ಜಂಟಿಯಾಗಿ
ಮಿಲಿಟರಿ ಸಲಕರಣೆಗಳನ್ನು ಕೂಡ ಉತ್ಪಾದಿಸುತ್ತವೆ. ಮೊದಲನೇ ಗಲ್‌ಫ್‌ ಯುದ್ಧದ ವೇಳೆ 15,000 ಪಾಕಿಸ್ತಾನಿ ಯೋಧರು
ಸೌದಿ ಅರೇಬಿಯಾದಲ್ಲಿ ನಿಯೋಜಿತರಾಗಿದ್ದರು. ಅದಕ್ಕೆ ಹೋಲಿಸಿದರೆ ಈಗ ಸೌದಿ ಅರೇಬಿಯಾದಲ್ಲಿರುವ ಪಾಕಿಸ್ತಾನಿ
ಸೈನಿಕರ ಸಂಖ್ಯೆೆ ಕಡಿಮೆಯಿದೆ. ಆದರೂ ಸೌದಿ ಅರೇಬಿಯಾದ ಸೇನೆಗೆ ಈಗಲೂ ಪಾಕಿಸ್ತಾನ ಸಾಕಷ್ಟು ನೆರವು ನೀಡುತ್ತಿದೆ.

*ಬದಲಾಗುತ್ತಿರುವ ಜಗತ್ತು ಅಂತಾರಾಷ್ಟ್ರೀಯ ಸಂಬಂಧಗಳು ಬಹಳ ಸಂಕೀರ್ಣ. ಅವು ಬದಲಾಗುತ್ತಲೇ ಇರುತ್ತವೆ. ಶೀತಲ ಸಮರದ ವೇಳೆ ಜಗತ್ತು ಎರಡು ಬಣವಾಗಿತ್ತು. 1991ರಲ್ಲಿ ಸೋವಿಯತ್ ಒಕ್ಕೂಟ ಒಡೆದಾಗ ಜಗತ್ತು ಒಂದೇ ಬಣವಾಯಿತು. ಈಗ ನಾವು ಬಹು ಬಣಗಳ ಜಗತ್ತಿನತ್ತ ಮುಖ ಮಾಡುತ್ತಿದ್ದೇವೆ. ಈ ಬದಲಾವಣೆಗಳು ಒಂದು ದೇಶದ ವಿದೇಶಾಂಗ ನೀತಿಯ
ಮೇಲೂ ಸಾಕಷ್ಟು ಪರಿಣಾಮ ಬೀರುತ್ತವೆ.

ಶೀತಲ ಸಮರದ ವೇಳೆ ಭಾರತ ಪಾಶ್ಚಾತ್ಯ ಜಗತ್ತಿಗೆ ಅಷ್ಟಾಗಿ ತೆರೆದುಕೊಂಡಿರಲಿಲ್ಲ. ಆದರೆ ಈಗ ಅಮೆರಿಕ ಹಾಗೂ ಯುರೋ ಪಿಯನ್ ಒಕ್ಕೂಟಗಳ ಜೊತೆಗೆ ಭಾರತಕ್ಕೆ ವ್ಯೂಹಾತ್ಮಕ ಪಾಲುದಾರಿಕೆ ದೊಡ್ಡ ಪ್ರಮಾಣದಲ್ಲೇ ಇದೆ. ಅದೇ ರೀತಿ, ದ್ವಿಪಕ್ಷೀಯ ಒಪ್ಪಂದಗಳೂ ಬದಲಾಗುತ್ತವೆ. ಆದರೆ, ಅದಕ್ಕೆ ಕೆಲ ಅಪವಾದಗಳಿರುತ್ತವೆ. ಪಾಕಿಸ್ತಾನ ಮತ್ತು ಸೌದಿಅರೇಬಿಯಾದ ವಿಷಯದಲ್ಲಿ ನೋಡುವುದಾದರೆ ಅದು ಸರ್ವಋತು ಸ್ನೇಹ. ಆ ದೇಶಗಳ ನಡುವಿನ ಸ್ನೇಹದಲ್ಲಿ ಈಗ ಬಿಟ್ಟಿರುವ ಬಿರುಕನ್ನು ಈ ಹಿನ್ನೆಲೆಯಲ್ಲೇ ನೋಡಬೇಕು.

ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದ ನಡುವಿನ ಸಂಬಂಧದಲ್ಲಿ ಮೂಡಿರುವ ಬಿರುಕುಗಳಿಗೆ ಕಾರಣವಾದ ಒಂದಷ್ಟು ಮುಖ್ಯ ಸಂಗತಿಗಳನ್ನು ನೋಡೋಣ.

*ಭಾರತ-ಸೌದಿ ನಡುವೆ ಸ್ನೇಹ 2019ರಲ್ಲಿ ಈ ಬದಲಾವಣೆಗಳು ಆರಂಭವಾದವು. ಮುಖ್ಯವಾಗಿ, ಸೌದಿ ದೊರೆ ಎಂಬಿಎಸ್ ಪಾಕಿಸ್ತಾನಕ್ಕೆೆ ಭೇಟಿ ನೀಡಿದ ನಂತರ ಭಾರತಕ್ಕೂ ಆಗಮಿಸಿದ್ದರು. ಆ ಉನ್ನತ ಮಟ್ಟದ ಭೇಟಿಯ ವೇಳೆ ಸೌದಿ ದೊರೆ ಭಾರತದಲ್ಲಿ 100 ಬಿಲಿಯನ್ ಡಾಲರ್ ಮೊತ್ತದ ಬಂಡವಾಳ ಹೂಡಿಕೆ ಮಾಡುವ ಘೋಷಣೆ ಮಾಡಿದರು. ಇಂಧನ, ತೈಲ ಸಂಸ್ಕರಣೆ, ಪೆಟ್ರೋಕೆಮಿಕಲ್‌ಸ್‌, ಮೂಲಸೌಕರ್ಯ, ಕೃಷಿ, ಖನಿಜ ಹಾಗೂ ಗಣಿಗಾರಿಕೆ ಕ್ಷೇತ್ರದಲ್ಲಿ ಸೌದಿ ಈ ಹೂಡಿಕೆ ಮಾಡುವುದಾಗಿ ಹೇಳಿದರು. ದೊಡ್ಡ ಪ್ರಮಾಣದ ಈ ಹೂಡಿಕೆಯೇ ಭಾರತ-ಸೌದಿ ನಡುವೆ ಬೆಳೆಯುತ್ತಿರುವ ಸ್ನೇಹಕ್ಕೆ ಸಾಕ್ಷಿ. ಇದನ್ನು ಉಭಯ ದೇಶಗಳ ನಡುವಿನ ವಿಶ್ವಾಸ ವೃದ್ಧಿಯ ಕ್ರಮ ಎಂದೂ ಹೇಳಬಹುದು.

ಕುತೂಹಲಕರ ಸಂಗತಿಯೆಂದರೆ, ಸೌದಿ ದೊರೆ ಭಾರತದಲ್ಲಿ ಈ ಹೂಡಿಕೆ ಮಾಡುವುದಾಗಿ ಘೋಷಿಸುವ ಮುನ್ನ ಪಾಕಿಸ್ತಾನದಲ್ಲಿ 20 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿ ಬಂದಿದ್ದರು. ಈ ಅಂಕಿಅಂಶಗಳನ್ನು ಗಮನಿಸಿ. ಪಾಕಿಸ್ತಾನದಲ್ಲಿ
ಮಾಡುವ ಹೂಡಿಕೆಯ ಐದು ಪಟ್ಟು ಹೆಚ್ಚು ಬಂಡವಾಳವನ್ನು ಭಾರತದಲ್ಲಿ ತೊಡಗಿಸಲು ಸೌದಿ ಮುಂದಾಗಿತ್ತು. ಇದನ್ನು
ಗಮನಿಸಿದರೆ, ಭಾರತ ಹಾಗೂ ಸೌದಿ ಅರೇಬಿಯಾ ನಡುವೆ ಬೆಳೆಯುತ್ತಿರುವ ಈ ಹೊಸ ಸ್ನೇಹಕ್ಕೆ ಕಾರಣವಾದರೂ ಏನು
ಎಂಬ ಪ್ರಶ್ನೆೆ ಮೂಡುತ್ತದೆ.

ಇದಕ್ಕೆೆ ಉತ್ತರ ಕಂಡುಕೊಳ್ಳಲು ನಾವು ನವದೆಹಲಿಯ ಇತ್ತೀಚಿನ ವರ್ಷಗಳ ರಾಜತಾಂತ್ರಿಕ ನಡೆಗಳನ್ನು ಗಮನಿಸಬೇಕು. 2014ರಲ್ಲಿ ಸೌದಿ ಜೊತೆಗೆ ಭಾರತ ರಕ್ಷಣಾ ಕ್ಷೇತ್ರದಲ್ಲಿ ಸಹಕಾರ ಒಪ್ಪಂದಕ್ಕೆೆ ಸಹಿ ಹಾಕಿದೆ. ಉಭಯ ದೇಶಗಳ ನಡುವೆ ವ್ಯೂಹಾತ್ಮಕ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಇದು ಮೊದಲ ಗಮನಾರ್ಹ ಒಪ್ಪಂದ. ಪ್ರಧಾನಿ ನರೇಂದ್ರ ಮೋದಿ 2016ರಲ್ಲಿ ಸೌದಿಗೆ ಭೇಟಿ ನೀಡಿದ್ದರು. ಆ ಭೇಟಿಯ ವೇಳೆ ಎರಡೂ ದೇಶಗಳು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುವ, ಅಪರಾಧ ಮತ್ತು ಭಯೋತ್ಪಾದನೆಗೆ ಸಂಬಂಧಿಸಿದ ಹಣಕಾಸು ವರ್ಗಾವಣೆಯ ಕುರಿತು ಮಾಹಿತಿ ಹಂಚಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದ್ದವು. ನಂತರ ಮತ್ತೆ 2019ರ ಅಕ್ಟೋಬರ್‌ನಲ್ಲಿ ಮೋದಿ ಸೌದಿ ಅರೇಬಿಯಾದ ಅಧಿಕೃತ ಆಹ್ವಾನದ ಮೇಲೆ ಆ ದೇಶಕ್ಕೆೆ ಹೋಗಿದ್ದರು. ಆ ಭೇಟಿಯಲ್ಲಿನ ಗಮನಾರ್ಹ ಫಲಶ್ರುತಿಯೆಂದರೆ ಭಾರತ ಮತ್ತು ಸೌದಿ ಅರೇಬಿಯಾ ನಡುವೆ ವ್ಯೂೆಹಾತ್ಮಕ ಪಾಲುದಾರಿಕೆ ಮಂಡಳಿಯ ಸ್ಥಾಪನೆ. ಅದಕ್ಕಿಿಂತ ಹೆಚ್ಚಾಗಿ, ಭಾರತದಲ್ಲಿನ ತನ್ನ ಆರ್ಥಿಕ ಚಟುವಟಿಕೆಗಳನ್ನು ಇನ್ನಷ್ಟು ಹೆಚ್ಚಿಸಲು ಸೌದಿ ಆಸಕ್ತಿ ಹೊಂದಿದೆ. ವ್ಯಾಪಾರಕ್ಕೆೆ ಭಾರತ ಪ್ರಶಸ್ತ ಸ್ಥಳ ಎಂಬ ವಿಶ್ವಾಸ
ಸೌದಿಗೆ ಮೂಡಿದೆ.

*ಕಾಶ್ಮೀರ ವಿಷಯದಲ್ಲಿ ಬೆಂಬಲವಿಲ್ಲ ಕಾಶ್ಮೀರಕ್ಕೆೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂಪಡೆಯಲು ಭಾರತವು ಸಂವಿಧಾನದ 370ನೇ ವಿಧಿ ರದ್ದುಪಡಿಸಿದಾಗ ಸೌದಿ ಅರೇಬಿಯಾ ಬಲವಾಗಿ ತನ್ನ ನೆರವಿಗೆ ನಿಲ್ಲುತ್ತದೆ ಎಂದು ಪಾಕಿಸ್ತಾನ ನಿರೀಕ್ಷಿಸಿತ್ತು. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಸೌದಿ ಈ ವಿಷಯವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಿ ಎಂದು ಹೇಳಿಬಿಟ್ಟಿತು. ಹೀಗೆ ಮಾಡಿದ್ದು ಸೌದಿ ಮಾತ್ರವಲ್ಲ.

ಇತರ ಪಶ್ಚಿಮ ಏಷ್ಯಾ ರಾಷ್ಟ್ರಗಳಾದ ಕುವೈತ್, ಒಮಾನ್ ಹಾಗೂ ಬಹರೇನ್ ಕೂಡ ಈ ವಿಷಯದಲ್ಲಿ ಪಾಕಿಸ್ತಾನದ ಪರ
ನಿಲ್ಲಲು ನಿರಾಕರಿಸಿದವು. ಯುಎಇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದು ಭಾರತದ ಆಂತರಿಕ ವಿಚಾರ ಎಂದು
ಬಿಟ್ಟಿತು. ಇಸ್ಲಾಮಿಕ್ ಸಹಕಾರ ಸಂಸ್ಥೆ (ಒಐಸಿ) ಭಾರತದ ಈ ನಿರ್ಧಾರವನ್ನು ಬಲವಾಗಿ ಖಂಡಿಸಿ ನವದೆಹಲಿಯ ಮೇಲೆ
ಒತ್ತಡ ಹೇರುತ್ತದೆ ಎಂದು ಪಾಕಿಸ್ತಾನ ನಿರೀಕ್ಷಿಸಿತ್ತು. ಆದರೆ ಆಗಿದ್ದೇ ಬೇರೆ. ವಾಸ್ತವವಾಗಿ ಭಾರತ ಮತ್ತು ಸೌದಿ ಅರೇಬಿಯಾ ಸೇರಿದಂತೆ ಪಶ್ಚಿಮ ಏಷ್ಯಾ ರಾಷ್ಟ್ರಗಳ ನಡುವೆ ಬೆಳೆಯುತ್ತಿದ್ದ ಆರ್ಥಿಕ ಮತ್ತು ವ್ಯೂಹಾತ್ಮಕ ಸಂಬಂಧವನ್ನು ಪಾಕಿಸ್ತಾನ ಕಡೆಗಣಿಸಿತ್ತು. ಸೌದಿ ನೇತೃತ್ವದ ಒಐಸಿ ಇಸ್ಲಾಮಿಕ್ ದೇಶಗಳ ಅತ್ಯಂತ ಪ್ರಬಲ ಸಂಘಟನೆ. ಕಾಶ್ಮೀರದ ವಿಷಯದಲ್ಲಿ ಈ ಸಂಘಟನೆಯನ್ನು ಭಾರತದ ವಿರುದ್ಧ ಬಳಸಲು ಪಾಕಿಸ್ತಾನ ಬಯಸುತ್ತಿತ್ತು.

ಆರಂಭದಲ್ಲಿ 370ನೇ ವಿಧಿ ರದ್ದುಪಡಿಸಿದ ವಿಷಯದಲ್ಲಿ ಒಐಸಿಯನ್ನು ಎಳೆದು ತರುವ ಪಾಕಿಸ್ತಾನದ ರಾಜತಾಂತ್ರಿಕ
ಪ್ರಯತ್ನಕ್ಕೆೆ ಯಾವುದೇ ಫಲ ಸಿಗಲಿಲ್ಲ. ಆಗ ಬೇಸರಗೊಂಡ ಪಾಕಿಸ್ತಾನ ಪ್ರಭಾವಿ ಮುಸ್ಲಿಿಂ ರಾಷ್ಟ್ರಗಳಾದ ಮಲೇಷ್ಯಾ,
ಟರ್ಕಿ ಹಾಗೂ ಇರಾನ್ ಜೊತೆ ಕೈಜೋಡಿಸುವ ಸುಳಿವು ನೀಡಿತು. ಆಸಕ್ತಿಕರ ಸಂಗತಿಯೆಂದರೆ ಈ ಮೂರೂ ದೇಶಗಳು
ಇಸ್ಲಾಮಿಕ್ ರಾಷ್ಟ್ರಗಳಿಗೆ ಸೌದಿ ಅರೇಬಿಯಾ ನಾಯಕನಾಗಿರುವುದನ್ನು ವಿರೋಧಿಸುತ್ತವೆ.

ಒಐಸಿಯಿಂದ ಯಾವುದೇ ನಿರ್ಣಯ ಹೊರಬೀಳುವಂತೆ ಮಾಡಲು ಸಾಧ್ಯವಾಗದ್ದರಿಂದ ಪಾಕಿಸ್ತಾನಕ್ಕೆೆ ಚಡಪಡಿಕೆ
ಶುರುವಾಯಿತು. ಹೀಗಾಗಿ ಇಸ್ಲಾಮಿಕ್ ರಾಷ್ಟ್ರಗಳ ಶೃಂಗದಲ್ಲಿ  ಪಾಲ್ಗೊಳ್ಳುವಂತೆ ಮಲೇಷ್ಯಾ ಕಳೆದ ವರ್ಷ ನೀಡಿದ ಆಹ್ವಾನವನ್ನು ಪಾಕಿಸ್ತಾನ ಒಪ್ಪಿಕೊಂಡಿತು. ಸೌದಿ ಜೊತೆಗೆ ಸ್ಪರ್ಧೆಗೆ ಬೀಳುವುದಕ್ಕೇ ಮಲೇಷ್ಯಾ ಹೀಗೆ ಮಾಡಿದೆ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ, ಆಹ್ವಾನ ಒಪ್ಪಿಕೊಂಡ ನಂತರವೂ ಮಲೇಷ್ಯಾದಲ್ಲಿ ನಡೆದ ಆ ಶೃಂಗಸಭೆಯಲ್ಲಿ ಪಾಕಿಸ್ತಾನ
ಪಾಲ್ಗೊಳ್ಳಲಿಲ್ಲ. ಏಕೆಂದರೆ ಸೌದಿಯಿಂದ ಪಾಕ್ ಮೇಲೆ ಒತ್ತಡವಿತ್ತು.

ಚುಟುಕಾಗಿ ಹೇಳಬೇಕೆಂದರೆ ಜಗತ್ತಿನಲ್ಲಿ ಹೆಚ್ಚಿನವರಾರೂ ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನದ ದೂರುಗಳ ಪರ
ನಿಲ್ಲಲಿಲ್ಲ. ಅದರ ಬದಲಿಗೆ, ಅಂತಾರಾಷ್ಟ್ರೀಯ ಸಮುದಾಯ ಪಾಕಿಸ್ತಾನಕ್ಕೆೆ ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ
ನಡೆಸುವುದನ್ನು ನಿಲ್ಲಿಸಬೇಕು ಎಂದೇ ಉಪದೇಶ ಮಾಡುತ್ತಾ ಬಂದಿದೆ. ಇದು ಪಾಕಿಸ್ತಾನಕ್ಕೆೆ ಕಿರಿಕಿರಿ ಉಂಟುಮಾಡಿದೆ.

ಕಳೆದ ತಿಂಗಳು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ನೇರವಾಗಿ ಒಐಸಿ ವಿರುದ್ಧ ವಾಗ್ದಾಳಿ ನಡೆಸಿ
ದರು. ಕಾಶ್ಮೀರದ ವಿಷಯದಲ್ಲಿ ಒಐಸಿ ರಾಷ್ಟ್ರಗಳ ವಿದೇಶಾಂಗ ಸಚಿವರ ಮಂಡಳಿ ಸಭೆ ನಡೆಸಬೇಕೆಂದು ಖುರೇಷಿ ಕೋರಿ
ದ್ದರು. ಅದಕ್ಕೆೆ ಯಾರೂ ಓಗೊಡಲಿಲ್ಲ. ಹೀಗಾಗಿ ಅವರು ಪಾಕಿಸ್ತಾನವೇ ಇಸ್ಲಾಮಿಕ್ ರಾಷ್ಟ್ರಗಳ ಸಭೆ ಕರೆದು ಕಾಶ್ಮೀರದ
ಬಗ್ಗೆೆ ಚರ್ಚಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿದರು.

ಖುರೇಷಿಯ ಮಾತು ಸೌದಿ ಅರೇಬಿಯಾವನ್ನು ಗುರಿಯಾಗಿಸಿಕೊಂಡು ಹೇಳಿದ್ದಾಗಿತ್ತು. ಪಾಕಿಸ್ತಾನದ ಕಡೆಯಿಂದ ನಡೆದ
ದಾಳಿ ತೀಕ್ಷ್ಣವಾಗಿದ್ದ ಹಿನ್ನೆೆಲೆಯಲ್ಲಿ ಸೌದಿ ಅರೇಬಿಯಾ ಪಾಕಿಸ್ತಾನಕ್ಕೆೆ ನೀಡಿದ್ದ 1 ಬಿಲಿಯನ್ ಡಾಲರ್ ಸಾಲ ಹಿಂಪಡೆ
ದುಕೊಳ್ಳುವ ಮೂಲಕ ತಿರುಗೇಟು ನೀಡಿತು. ಹೀಗಾಗಿ, ಚೀನಾದ ನೆರವಿನಿಂದ ಪಾಕಿಸ್ತಾನ ಈ ಸಾಲ ಮರುಪಾವತಿ ಮಾಡಿತು. ಅದರ ಜೊತೆಗೆ, ಪಾಕಿಸ್ತಾನಕ್ಕೆೆ ನೀಡಿದ್ದ ತೈಲ ಸಾಲವನ್ನು ಕೂಡ ಸೌದಿ ಅರೇಬಿಯಾ ನವೀಕರಿಸಲಿಲ್ಲ.

*ಚೀನಾದ ಮಧ್ಯಪ್ರವೇಶ ಇತಿಹಾಸದಲ್ಲಿ ಎದುರಾದ ಸಂಕಷ್ಟಕರ ಸನ್ನಿವೇಶಗಳಲ್ಲಿ ಪಾಕಿಸ್ತಾನಕ್ಕೆೆ ಚೀನಾಕ್ಕಿಿಂತ ಹೆಚ್ಚು ನೆರವು ನೀಡಿರುವುದು ಸೌದಿ ಅರೇಬಿಯಾ. ಆದರೆ ಈಗ ಚೀನಾದ ಕಡೆಗೇ ಪಾಕಿಸ್ತಾನ ಹೆಚ್ಚು ವಾಲುತ್ತಿದೆ. ಇದಕ್ಕೆ ಕಾರಣ ಚೀನಾದ ಭಾರತ
ವಿರೋಧಿ ನಿಲುವು. ಆದರೆ, ಪಾಕಿಸ್ತಾನದಲ್ಲೇ ಒಂದು ವರ್ಗಕ್ಕೆ ಈ ಬೆಳವಣಿಗೆಗಳ ಬಗ್ಗೆೆ ವಿರೋಧವಿದೆ. ಎಲ್ಲಾ ಮೊಟ್ಟೆೆಗಳನ್ನೂ
ಒಂದೇ ಬುಟ್ಟಿಯಲ್ಲಿ ಇರಿಸುವುದಕ್ಕೆ ಅವರಿಗೆ ಇಷ್ಟವಿಲ್ಲ.

ಹೀಗಾಗಿ ಅವರು ವಿದೇಶಾಂಗ ಸಚಿವ ಖುರೇಷಿಯನ್ನು ಬೇಕಾದರೆ ಬದಲಿಸಿ ಸೌದಿ ಅರೇಬಿಯಾ ಜೊತೆಗೆ ಸಂಬಂಧ ಸುಧಾರಿಸಿಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ವಿಷಯದಲ್ಲಿ ಇಮ್ರಾನ್ ಖಾನ್ ಸರ್ಕಾರದ ಮೇಲೆ ಬಹುದೊಡ್ಡ ಆಂತರಿಕ ಒತ್ತಡವಿದೆ. ತನ್ನ ಆರ್ಥಿಕತೆ ಭಾರಿ ಸಂಕಷ್ಟದಲ್ಲಿರುವ ಇಂತಹ ಸನ್ನಿವೇಶದಲ್ಲಿ ಸೌದಿ ಅರೇಬಿಯಾದಂತಹ ಸ್ನೇಹಿತನನ್ನು ಕಳೆದುಕೊಳ್ಳುವುದು ಪಾಕ್‌ಗೆ ದುಬಾರಿಯಾದೀತು. ಇನ್ನೊೊಂದೆಡೆ, ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಸಂಬಂಧಗಳು ಭವಿಷ್ಯದಲ್ಲಿ ಇನ್ನಷ್ಟು ಬೆಳೆಯುವ ಸೂಚನೆಗಳಿವೆ. ಅದರಿಂದ ಭಾರತ ಮತ್ತು ಸೌದಿ ಎರಡೂ ದೇಶಗಳಿಗೆ ಲಾಭವಿದೆ. ಈ ಹೊಸ ವಾಸ್ತವವನ್ನು ಪಾಕಿಸ್ತಾನ ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತದೆಯೋ ಕಾದು ನೋಡೋಣ.

Leave a Reply

Your email address will not be published. Required fields are marked *