Friday, 13th December 2024

ಪಾಕ್ ಸಂಬಂಧ ಸುಧಾರಣೆ ಲಕ್ಷಣಗಳಿಲ್ಲ

ಸಿದ್ಧಾರ್ಥ ಸಿಂಗ್

ಒಂದು ವರುಷದ ಹಿಂದೆ ಶೆಹಬಾಜ್ ಶರೀಫ್ ತಾನು ಪಾಕಿಸ್ತಾನದ ಪ್ರಧಾನಮಂತ್ರಿಯಾಗುವ ಬಗ್ಗೆ ಊಹೆ ಕೂಡ ಮಾಡಿರಲಿಲ್ಲ. ಪಾಕಿಸ್ತಾನದ ಪಂಜಾಬ್
ಪ್ರಾಂತ್ಯದ ಪೂರ್ವ ಮುಖ್ಯಮಂತ್ರಿಯಾಗಿದ್ದ ಇವರು ಹಣ ದುರುಪಯೋಗದ ಆರೋಪದ ಮೇಲೆ ಆರು ತಿಂಗಳು ಜೈಲುವಾಸ ಅನುಭವಿಸಿದ್ದರು.

ಪಾಕಿಸ್ತಾನದ ರಾಜಕೀಯವೆಂದರೆ ಅದು ಅತ್ಯಂತ ಅಸಹಜ, ಯಾವಾಗ, ಯಾರಿಗೆ, ಯಾವ ಹುದ್ದೆ  ಒಲಿಯುತ್ತ ದೆಂಬುದನ್ನು ಊಹೆ ಮಾಡಲಾಗದು. ಇಮ್ರಾನ್ ಖಾನ್ ತನ್ನ ಸ್ಥಾನ ಉಳಿಸಿಕೊಳ್ಳಲು ಶತಾಯಗತಾಯ ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿ ಸೋತ ನಂತರದಲ್ಲಿ, ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಗೆ ಕೊನೆಗೂ ಪಾಕಿಸ್ತಾನದ ರಾಜಕೀಯ ಕ್ಷಿತಿಜವೆಂಬ ಜಿಡ್ಡಿನ ಗೋಪುರದ ತುದಿ ತಲುಪುವ ಅವಕಾಶ ಸಿಕ್ಕಿದೆ.

ಪಾಕಿಸ್ತಾನದ ಪೂರ್ವಪ್ರಧಾನಿ ನವಾಜ್ ಶರೀಫರ ಸಹೋದರನಾಗಿರುವ ಈಗಿನ ಪ್ರಧಾನಿ ಶೆಹಬಾಜ್ ಶರೀಫ್, ತನ್ನ ಆಡಳಿತಾತ್ಮಕ ನಡೆಗಳಿಂದ ಸಾಕಷ್ಟು ಜನಪ್ರಿಯರು. ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಸುದೀರ್ಘಾವಧಿ ಅಧಿಕಾರ ನಡೆಸಿರುವ ಅನುಭವವಿರುವ ಇವರಿಗೆ ದೇಶವನ್ನು ಸಂಕಷ್ಟದ ಸಮಯದಲ್ಲಿ ಹೇಗೆ ಮುನ್ನಡೆಸುವುದೆಂದು ಚೆನ್ನಾಗಿ ಗೊತ್ತಿದೆ. ಆದರೆ ಸೋದರ ನೊಂದಿಗೆ ಇವರು ಯಾವಾಗಲೂ ಜತೆಯಾಗಿಯೇ ಮುನ್ನಡೆಯುತ್ತ ಬಂದರು. ಕಳೆದ ಹಲವಾರು ದಶಕಗಳಿಂದ ಇವರ ಬದುಕಿನ ಹಾದಿಯನ್ನು ಗಮನಿಸಿದರೆ, ಈಗ ಇವರಿಗೆ ಸಿಕ್ಕಿರುವ ಅವಕಾಶ ಆಕಸ್ಮಿಕವೆಂದೇ ಹೇಳಬಹುದು.

ಅನೇಕ ರಾಜಕೀಯ ಘಟನಾವಳಿಗಳು ಇವರಿಗೆ ಪೂರಕವಾಗಿದ್ದವು. ೨೦೧೬ರಲ್ಲಿ ಪನಾಮಾ ಪೇಪರ್ಸ್ ಬಹಿರಂಗವಾದಾಗ, ಹಿರಿಯಣ್ಣ ಶರೀಫರ ರಾಜಕೀಯ ಅಲುಗಾಡಿ ಅವರು ಜೈಲುಪಾಲಾಗುವಂತಾಯಿತು. ಆಗ ತಮ್ಮ ಶರೀಫರಿಗೆ ಅವಕಾಶ ಸಿಗಲಿಲ್ಲ. ಮಿಲಿಟರಿ ಆಡಳಿತಗಾರರು ಖಾನ್‌ರ ಬೆಂಬಲಕ್ಕೆ ನಿಂತರು. ಆಗ ಈ ಶರೀಫರು ಒಬ್ಬಂಟಿಯಾಗಿದ್ದರು. ಇಮ್ರಾನ್ ಖಾನ್ ಒಂದಾದ ಮೇಲೊಂದರಂತೆ ತಪ್ಪುಗಳನ್ನು ಮಾಡುತ್ತ ಬಂದ ನಂತರದಲ್ಲಿ ಇದೀಗ ಅಂತಿಮವಾಗಿ ಶೆಹಬಾಜ್‌ಗೆ ಅದೃಷ್ಟ ಒಲಿದಿದೆ.

ಪಾಕಿಸ್ತಾನದ ರಾಜಕೀಯ ಕ್ಷೇತ್ರದಲ್ಲಿ ಮುಂಚೂಣಿ ನಾಯಕರಾಗಿರುವ ಶೆಹಬಾಜ್ ಶರೀಫರಂದು ವಿಶೇಷ ಗುಣವಿದೆ. ಅವರು ಮಿಲಿಟರಿಯೊಂದಿಗೂ
ಸೌಹಾರ್ದವಿದೆ. ಖಾನರಂತೆ ಆಡಳಿತದ ವಿರುದ್ಧ ತಿರುಗಿಬೀಳುವ ಮನಃಸ್ಥಿತಿಯಾಗಲೀ, ತಾನು ಪ್ರಯಾಣಿಸುವ ದೋಣಿಯ ಬುಡಕ್ಕೇ ತೂತು ಕೊರೆಯುವ ಗುಣವಾಗಲೀ ಇವರಿಗಿಲ್ಲ. ಶೆಹಬಾಜರ ಈ ಗುಣ ಮಿಲಿಟರಿ ಆಡಳಿತಗಾರರಿಗೂ ಆಪ್ಯಾಯಮಾನ. ಇವರಣ್ಣ ಹಿರಿಯ ಶರೀಫ ಖಾಕಿಗಳನ್ನು ಎದುರು ಹಾಕಿಕೊಳ್ಳುವುದರಲ್ಲಿ ನಿಸ್ಸೀಮ. ಆದರೆ ಈ ಕಿರಿಯ ಶರೀಫ ವ್ಯವಹಾರ ಚತುರ.

ಪಾಕಿಸ್ತಾನದ ಆಡಳಿತ ಚುಕ್ಕಾಣಿ ಹಿಡಿಯುವ ಯಾರಿಗೂ ಇದು ಸುಲಭದ ಕಾಲವಲ್ಲ. ದೇಶ ವಿಪರೀತ ಆರ್ಥಿಕ ಸಂಕಷ್ಟದಲ್ಲಿದೆ. ಅಲ್ಲದೇ ಖಾನ್‌ರ ಆಡಳಿತಾತ್ಮಕ ವೈಫಲ್ಯ ಆರ್ಥಿಕವಾಗಿ ದೊಡ್ಡ ಹೊಂಡವನ್ನೇ ತೋಡಿಟ್ಟಿದೆ. ಐಎಂಎ-ನವರ ಸುಧಾರಣಾ ಉಪಕ್ರಮಕ್ಕೆ ಸ್ಪಂದಿಸುವಲ್ಲಿ ನಿರಂತರ ವೈಫಲ್ಯವನ್ನು ತೋರಿದ ನಂತರದಲ್ಲಿ ಪಾಕಿಸ್ತಾನ ಬಹುತೇಕ ದಾರಿಯಿಲ್ಲದ ಕೊನೆ ತಲುಪಿದೆ. ಈಗ ಶೆಹಬಾಜ್ ಶರೀಫರು ಮೊದಲಿಗೆ ಮಾಡ
ಬೇಕಾಗಿರುವುದು ಜಾಗತಿಕ ಆರ್ಥಿಕ ಸಂಸ್ಥೆಗಳ ವಿಶ್ವಾಸವನ್ನು ಮತ್ತೆ ಗಳಿಸುವುದು. ಇದು ಅಷ್ಟು ಸುಲಭದ ವಿಚಾರವಲ್ಲ.

ಪಾಕಿಸ್ತಾನವನ್ನು ನಾಶಗೊಳಿಸಲು ವಿದೇಶೀ ಪಿತೂರಿಗಾರರು ಸನ್ನದ್ಧರಾಗಿದ್ದಾರೆಂದು ಇಮ್ರಾನ್ ಖಾನ್ ಹೇಳುತ್ತಲೇ ಇದ್ದರು. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಐಎಂಎಫ್ ಜತೆ ವ್ಯವಹರಿಸುವುದು ಕೂಡ ಪ್ರಸಕ್ತ ಪ್ರಧಾನಮಂತ್ರಿಗೆ ಸವಾಲಿನ ಕೆಲಸ. ಯಾವುದೇ ಪ್ರಗತಿ ಶೀಲ ರಾಷ್ಟಕ್ಕೆ ಐಎಂಎಫ್ ಫ್ನಂತಹ ಸಂಸ್ಥೆಗಳು ತಮ್ಮ ಸಾರ್ವಭೌಮತ್ವವನ್ನು ಒಡ್ಡುವುದು ಸಹಜವಾದ ಪ್ರಕ್ರಿಯೆ. ಪಾಕಿಸ್ತಾನದ ಕಲುಷಿತ ರಾಜಕೀಯ ವಿದ್ಯಮಾನಗಳ ಸಂದರ್ಭದಲ್ಲಿ, ಐಎಂಎಫ್ ಅಥವಾ ಇನ್ನಾವುದೇ ಸಂಸ್ಥೆಗಳ ಹುನ್ನಾರಗಳಿಗೆ ಒಪ್ಪುವುದು ಅನಿವಾರ್ಯ ಪ್ರಸಂಗ.

ಇದು ತನಕ ಶೆಹಬಾಜ್‌ಗೆ ತನ್ನ ಆಡಳಿತ ನಿರ್ವಹಣೆಯಲ್ಲಿ ಮಿಲಿಟರಿ ಹಸ್ತಕ್ಷೇಪ ಆಗಿಲ್ಲ. ಆದರೆ ಈ ಹಾದಿಯಲ್ಲಿ ಅನೇಕ ತಿಕ್ಕಾಟಗಳು ಆಗುವುದು ಸಾಧ್ಯ ಎಂಬ ಅರಿವು ಅವರಿಗೂ ಇದೆ. ಆದರೆ ಆರ್ಥಿಕ ವಿಚಾರ, ರಕ್ಷಣೆ ಮತ್ತು ವಿದೇಶಿ ನೀತಿಗಳ ನಿರ್ವಹಣೆಯಲ್ಲಿ ಅನೇಕ ಸಂಕಷ್ಟಗಳು ಎದುರಾಗುವ ಎಲ್ಲ ಸಾಧ್ಯತೆಗಳೂ ಇವೆ. ಆರ್ಥಿಕ ವಿಚಾರಗಳ ಕುರಿತಾಗಿ ಚೀನಾ ಮೇಲೆ ಅತಿ ಹೆಚ್ಚು ಅವಲಂಬನೆಗೆ ಒಳಗಾಗುತ್ತ ಬಂದಿರುವ ಪಾಕಿಸ್ತಾನ ಮುಂದಿನ
ದಿನಗಳಲ್ಲಿ ಜೇಡರಬಲೆಯಲ್ಲಿ ಸಿಕ್ಕುಹಾಕಿಕೊಂಡ ಹುಳದಂತಾಗುವ ಸ್ಥಿತಿಯೂ ಇಲ್ಲದಿಲ್ಲ. ಪಾಕಿಸ್ತಾನವೀಗ ಫೈನಾನ್ಸಿಯಲ್ ಆಕ್ಷನ್ ಟಾಸ್ಕ್ ಫೋರ್ಸಿನ ಬೂದುಪಟ್ಟಿಯಲ್ಲಿದೆ.

ಉಗ್ರವಾದಕ್ಕೆ ಪ್ರಚೋದನೆ ಕೊಡುತ್ತ ಬಂದಿರುವ ಕಾರಣ ಆಡಳಿತಾತ್ಮಕವಾಗಿ ಸಾಕಷ್ಟು ಸಂಕಷ್ಟಗಳು ಎದುರಾಗಲಿವೆ ಎಂಬುದು ಕೂಡ ಒಪ್ಪಬೇಕಾದ ವಿಚಾರ. ಜಮ್ಮು ಕಾಶ್ಮೀರದ ವಿಚಾರದಲ್ಲಿ ಇನ್ನಾದರೂ ಅಲ್ಲಿನ ಆರ್ಮಿ ಹಸ್ತಕ್ಷೇಪ ಮಾಡಲಾರದು ಎಂಬ ಭಾವನೆಯಿದೆ. ಅದೇನೇ ಇದ್ದರೂ ಎಫ್ಎಟಿಎದ ಬೂದುಪಟ್ಟಿಯಿಂದ ಪಾಕಿಸ್ತಾನ ಹೊರಬರುವುದಂತೂ ಕಷ್ಟದ ಹಾದಿ.

ಪಾಕಿಸ್ತಾನದ ಅಸೆಂಬ್ಲಿಯಲ್ಲಿ ಮಾಡಿದ ತನ್ನ ಮೊದಲ ಭಾಷಣದಲ್ಲಿ ನೂತನ ಪ್ರಧಾನಿ ನಿಸ್ಸಂದಿಗ್ಧವಾದ ಸಂದೇಶವೊಂದನ್ನು ಕೊಟ್ಟಿದ್ದಾರೆ. ಕಾಶ್ಮೀರದ ವಿಚಾರ ಇತ್ಯರ್ಥವಾಗದೇ ಇದ್ದಲ್ಲಿ, ಭಾರತದೊಂದಿಗಿನ ಸಂಬಂಧ ಸುಧಾರಿಸುವುದು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಅಭಿನಂದನಾ ಸಂದೇಶದ ಟ್ವೀಟಿಗೆ ಉತ್ತರವಾಗಿ ಅವರು ಈ ಮಾತನ್ನು ಆಡಿದ್ದಾರೆ. ಇದೆಲ್ಲವೂ ಸ್ಥಳೀಯ ರಾಜಕೀಯದ ಕಾರಣಕ್ಕಾಗಿ ಆಡಿರುವ ಮಾತುಗಳಿರಬಹುದು, ಆದರೆ ಈ ವ್ಯಕ್ತಿಗೆ ಇಮ್ರಾನ್ ಖಾನರಂತೆ ಬೆಂಕಿಯುಗುಳುವ ವಾಕ್ಚಾತುರ್ಯ ಇದ್ದಂತಿಲ್ಲ. ಆದರೆ ಸಂದೇಶಗಳು ಸ್ಪಷ್ಟವಿವೆ. ಶರೀಫರು ಆಡಳಿತದ ಚುಕ್ಕಾಣಿ ಹಿಡಿದಿದ್ದಾಗಿದೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಸದ್ಯೋಭವಿಷ್ಯದಲ್ಲಿ ಸಾಮಾನ್ಯ ಸೌಹಾರ್ದ ಮೂಡುವ ಲಕ್ಷಣಗಳು ಕಾಣಿಸುತ್ತಿಲ್ಲ.