ಅವಲೋಕನ
ಶಶಿಕುಮಾರ್ ಕೆ.
ಪಾಕಿಸ್ತಾನ ಮತ್ತು ಭಾರತ ಒಂದೇ ವರ್ಷ ಸ್ವಾತಂತ್ರ್ಯ ಪಡೆದ ದೇಶಗಳು. ಭಾರತವು ಆರ್ಥಿಕ ಬೆಳವಣಿಗೆಯ ನೆರವಿಂದ ಬಡತನವನ್ನು ನಿರ್ಮೂಲನೆ ಮಾಡುತ್ತಾ ಜಾಗತಿಕ ಮಟ್ಟದಲ್ಲಿ ಹೊಳೆಯುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನ ತೀವ್ರ ಬಡತನ, ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆಯೊಂದಿಗೆ ತತ್ತರಿಸುತ್ತಿದೆ.
ಪಾಕಿಸ್ತಾನದಲ್ಲಿ ಬಡತನದ ಪ್ರಮಾಣ ಹೆಚ್ಚುತ್ತಿದ್ದು ಸುಮಾರು ಶೇ.೪೦ರಷ್ಟು ಜನಸಂಖ್ಯೆ ಬಡತನ ರೇಖೆಗಿಂತ ಕೆಳಗಿದೆ ಎಂದು ವಿಶ್ವ ಬ್ಯಾಂಕ್ ವರದಿ ಮಾಡಿದೆ. ಮಿಲಿಟರಿ, ರಾಜಕೀಯ ಮತ್ತು ಉದ್ಯಮಿಗಳಂಥ ಪ್ರಭಾವಿ ಪಟ್ಟಭದ್ರ ಹಿತಾಸಕ್ತಿಗಳಿಂದ ನಡೆಸಲ್ಪಡುವ ತನ್ನ ನೀತಿ ನಿರ್ಧಾರಗಳನ್ನು ಪಾಕ್ ಈಗ ಅವಲೋಕಿಸ ಬೇಕಾಗಿದೆ ಎಂದು ಅದು ತನ್ನ ವರದಿಯಲ್ಲಿ ಎಚ್ಚರಿಸಿದೆ.
ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ೧೨.೫ ದಶಲಕ್ಷದಷ್ಟು ಹೆಚ್ಚುವರಿ ಜನರು ಬಡತನದ ವರ್ಗಕ್ಕೆ ಸೇರ್ಪಡೆಗೊಂಡಿದ್ದು ಈಗ ಪಾಕಿಸ್ತಾನದಲ್ಲಿ ಸುಮಾರು ೯೫ ದಶಲಕ್ಷ ಜನರು ಬಡತನದ ಬೇಗೆಯಲ್ಲಿ ದಿನದೂಡುತ್ತಿದ್ದಾರಂತೆ. ಕಡಿಮೆ ಮಾನವ ಸಂಪನ್ಮೂಲದ ಅಭಿವೃದ್ಧಿ, ಸಮರ್ಥ ನೀಯವಲ್ಲದ ಹಣಕಾಸಿನ ಪರಿಸ್ಥಿತಿ, ಅತಿನಿಯಂತ್ರಿತ ಖಾಸಗಿ ವಲಯ, ಕೃಷಿ ಮತ್ತು ಇಂಧನ ಕ್ಷೇತ್ರಗಳ ಸುಧಾ ರಣೆಗೆ ಮುಂದಿನ ಸರಕಾರ ಆದ್ಯತೆ ನೀಡಬೇಕಾಗಿದೆ ಎಂದು ವಿಶ್ವ ಬ್ಯಾಂಕ್ ಗುರುತಿಸಿದೆ.
ಪ್ರಸ್ತಾವಿತ ಕ್ರಮಗಳು ಸಮರ್ಥನೀಯ ವಲ್ಲದ ಆರ್ಥಿಕತೆಯನ್ನು, ವಿವೇಕಯುತವಾದ ಹಣಕಾಸಿನ ಪಥದಲ್ಲಿ ಮತ್ತೆ ಇರಿಸುವ ಗುರಿಯನ್ನು ಹೊಂದಿದ್ದು ತೆರಿಗೆ-ಜಿಡಿಪಿ ಅನುಪಾತವನ್ನು ತಕ್ಷಣವೇ ಶೇ.೫ರಷ್ಟು ಹೆಚ್ಚಿಸುವ ಮತ್ತು ಜಿಡಿಪಿಯ ಸುಮಾರು ಶೇ.೨೫ರಷ್ಟು ವೆಚ್ಚವನ್ನು ಕಡಿತಗೊಳಿಸುವ ಕ್ರಮಗಳನ್ನು ವಿಶ್ವಬ್ಯಾಂಕ್ ಪ್ರಸ್ತಾಪಿ ಸಿದೆ. ಇದೇ ಸಂದರ್ಭದಲ್ಲಿ ಕಳೆದ ಜುಲೈ ತಿಂಗಳಲ್ಲಿ ಭಾರತದ ಬಡತನದ ಸ್ಥಿತಿಗತಿ ಕುರಿತು ವಿಶ್ವಸಂಸ್ಥೆ ಮತ್ತು ನೀತಿ ಆಯೋಗಗಳು ಬಿಡುಗಡೆ ಗೊಳಿಸಿದ ಅಂಕಿ-ಅಂಶಗಳಲ್ಲಿ ದೇಶದಲ್ಲಿ ಬಡತನವು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿರುವುದು ತಿಳಿದುಬಂದಿದೆ.
ಕೇವಲ ೧೫ ವರ್ಷಗಳಲ್ಲಿ ಭಾರತದಲ್ಲಿ ೪೧.೫ ಕೋಟಿ ಮಂದಿ ಬಡತನದಿಂದ ಹೊರಗೆ ಬಂದಿದ್ದಾರೆ. ಬಡತನ ನಿರ್ಮೂಲನೆ ವಿಚಾರದಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿ ಮೆಚ್ಚುಗೆ ವ್ಯಕ್ತಪಡಿಸಿದೆ. ೧೫ ವರ್ಷದೊಳಗೆ ಜಾಗತಿಕ ಬಹುಕೋನದ ಬಡತನ ಸೂಚ್ಯಂಕವನ್ನು (ಎಂಪಿಎಂ) ಅರ್ಧಕ್ಕೆ ಇಳಿಸಿದ ೨೫ ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತದಲ್ಲಿ ೨೦೦೫ -೦೬ರಲ್ಲಿ ೬೪.೫ ಕೋಟಿ ಮಂದಿ ಬಡತನದ ತೆಕ್ಕೆಯಲ್ಲಿದ್ದರು. ಇದು ೨೦೧೫-೧೬ರ ವೇಳೆಗೆ ೩೭ ಕೋಟಿಗೆ ಇಳಿಕೆಯಾಗಿತ್ತು.
ಇದು ೨೦೧೯-೨೧ರ ವೇಳೆಗೆ ಮತ್ತಷ್ಟು ತಗ್ಗಿ ೨೩ ಕೋಟಿಗೆ ಇಳಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಈ ವರದಿ ಬಿಡುಗಡೆಯಾದ ಕೆಲ ದಿನಗಳಲ್ಲೇ ನೀತಿ ಆಯೋಗವು ‘ರಾಷ್ಟ್ರೀಯ ಬಹುಸ್ತರದ ಬಡತನ ಸೂಚ್ಯಂಕ- ೨೦೨೩’ರ ವರದಿ ಬಿಡುಗಡೆಗೊಳಿಸಿತು. ಈ ವರದಿಯ ಪ್ರಕಾರ ೨೦೧೫- ೨೦ರ ನಡುವೆ ೧೩.೫ ಕೋಟಿ ಭಾರತೀಯರು ಬಡತನ ದಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಒಡಿಶಾ ಮತ್ತು ರಾಜ ಸ್ಥಾನದಲ್ಲಿ ಬಡತನ ನಿರ್ಮೂಲನೆ ಅತಿಹೆಚ್ಚು ವೇಗದಿಂದ ಆಗಿದೆ. ಈ ವರದಿ ಪ್ರಕಾರ ೨೦೧೫ರಲ್ಲಿ ಭಾರತದಲ್ಲಿ ೨೪.೮೫ ಕೋಟಿಯಷ್ಟು ಬಹುಸ್ತರದ ಬಡವರಿದ್ದರು. ಈ ಸಂಖ್ಯೆ ೨೦೨೦ರ ವೇಳೆಗೆ ೧೪.೯೬ ಕೋಟಿಗೆ ಇಳಿಕೆಯಾಗಿದೆ. ಅಂದರೆ ಈ ಅವಧಿಯಲ್ಲಿ ಬಡವರ ಸಂಖ್ಯೆ ೯.೮೯ ಕೋಟಿಯಷ್ಟು ತಗ್ಗಿದೆ.
ಬಹುಸ್ತರದ ಬಡತನ ಸೂಚ್ಯಂಕ (ಎಂಪಿಐ) ಅಂದರೆ ಆರೋಗ್ಯ, ಶಿಕ್ಷಣ ಹಾಗೂ ಉತ್ತಮ ಜೀವನಮಟ್ಟ ಈ ಮೂರು ಸಂಗತಿಗಳಿಂದ ವಂಚಿತರಾದ ವರನ್ನು ಒಟ್ಟು ೧೨ ಮಾನದಂಡಗಳಿಂದ ಅಳೆಯುವ ವಿಧಾನ ಇದಾಗಿದೆ. ವರದಿಯ ಪ್ರಕಾರ ದೇಶದ ಗ್ರಾಮೀಣ ಭಾಗದಲ್ಲಿ ಬಡವರ ಪ್ರಮಾಣ ೩೫.೫೯ ಕೋಟಿಯಿಂದ ೧೯.೨೮ ಕೋಟಿಗೆ ಇಳಿಕೆ ಯಾಗಿದೆ. ನಗರ ಪ್ರದೇಶದಲ್ಲಿ ಬಡವರ ಪ್ರಮಾಣ ಶೇಕಡ ೮.೬೫ರಿಂದ ೫.೨೭ಕ್ಕೆ ಇಳಿಕೆಯಾಗಿದೆ. ದೇಶದ ಎಲ್ಲಾ ೩೬ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಹುಸ್ತರದ ಬಡತನ ಸೂಚ್ಯಂಕವನ್ನು ಅಳೆಯಲಾಗಿದೆ.
ಅತ್ಯಧಿಕವಾಗಿ ಉತ್ತರಪ್ರದೇಶದಲ್ಲಿ ೩.೩೪ ಕೋಟಿ ಜನ ಬಡತನದಿಂದ ಹೊರಬಂದಿದ್ದಾರೆ. ಆ ನಂತರದ ಸ್ಥಾನಗಳಲ್ಲಿ ಬಿಹಾರ, ಮಧ್ಯಪ್ರದೇಶ ರಾಜ್ಯಗಳು ಇವೆ. ನೈರ್ಮಲ್ಯ, ಪೌಷ್ಟಿಕಾಂಶ, ಅಡುಗೆ ಅನಿಲ, ಆರ್ಥಿಕ ಒಳಗೊಳ್ಳುವಿಕೆ, ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕದ ಮೇಲೆ ಸರಕಾರ ಅತಿಹೆಚ್ಚು ಗಮನ ನೀಡಿದ್ದರಿಂದ ಭಾರತದಲ್ಲಿ ಬಡತನ ಕಡಿಮೆಯಾಗಿದೆ ಎಂದು ನೀತಿ ಆಯೋಗದ ವರದಿ ತಿಳಿಸಿದೆ. ಇಷ್ಟು ಪ್ರಮಾಣದಲ್ಲಿ ಬಡತನ ಕಡಿಮೆ ಯಾದರೂ ರಾಜ್ಯವಾರು ಬಡತನದ ಪ್ರಮಾಣವನ್ನು ನೋಡುತ್ತಾ ಬಂದರೆ ಶೇ.೩೩.೭೫ರಷ್ಟು ಬಡವರೊಂದಿಗೆ ಬಿಹಾರ ಈಗಲೂ ಮೊದಲ ಸ್ಥಾನ ದಲ್ಲಿದೆ.
ಎರಡನೇ ಸ್ಥಾನದಲ್ಲಿ ಜಾಖಂಡ್ (ಶೇ.೨೮.೮೧), ಮೂರನೇ ಸ್ಥಾನದಲ್ಲಿ ಮೇಘಾಲಯ (ಶೇ. ೨೭.೭೯), ನಾಲ್ಕನೇ ಸ್ಥಾನದಲ್ಲಿ ಉತ್ತರ ಪ್ರದೇಶ (ಶೇ. ೨೨.೯೩), ಐದನೇ ಸ್ಥಾನದಲ್ಲಿ ಮಧ್ಯಪ್ರದೇಶ (ಶೇ. ೨೦.೬೩) ರಾಜ್ಯಗಳಿವೆ. ನಮ್ಮ ರಾಜ್ಯದಲ್ಲಿ ಶೇ.೧೩.೨ ರಷ್ಟು ಜನರು ಇನ್ನೂ ಬಡತನದಲ್ಲಿದ್ದಾರೆ. ಇನ್ನು ನೆರೆಯಆಂಧ್ರಪ್ರದೇಶವು ಶೇ.೧೨.೩ರಷ್ಟು ಬಡತನದೊಂದಿಗೆ ೨೦ನೆಯ ಸ್ಥಾನದಲ್ಲಿದೆ.
ಪಾಕಿಸ್ತಾನ ಮತ್ತು ಭಾರತಗಳೆರಡೂ ಒಂದೇ ವರ್ಷ ಸ್ವಾತಂತ್ರ್ಯ ಪಡೆದ ಹಾಗೂ ಪ್ರಜಾಪ್ರಭುತ್ವ ಅಳವಡಿಸಿಕೊಂಡ ದೇಶಗಳು. ಭಾರತವು ತೀವ್ರತರವಾದ ಆರ್ಥಿಕ ಬೆಳವಣಿಗೆ ಯೊಂದಿಗೆ ಬಡತನವನ್ನು ನಿರ್ಮೂಲನೆ ಮಾಡುತ್ತಾ ಜಾಗತಿಕ ಮಟ್ಟದಲ್ಲಿ ಉಜ್ವಲವಾಗಿ ಹೊಳೆಯುತ್ತಿದ್ದರೆ, ಮತ್ತೊಂದೆಡೆ
ಪಾಕಿಸ್ತಾನವು ತೀವ್ರತರವಾದ ಬಡತನ, ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆಯೊಂದಿಗೆ ತತ್ತರಿಸುತ್ತಿದೆ. ಪಾಕಿಸ್ತಾನದಲ್ಲಿ ಬದುಕಲು ಸಾಧ್ಯವಾಗದೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಅಲ್ಲಿನ ಒಂದು ಕೋಟಿ ಜನರು ಭಿಕ್ಷೆ ಬೇಡುತ್ತಿದ್ದಾರೆ ಎಂದು ಇತ್ತೀಚಿಗಿನ ಒಂದು ವರದಿ ತಿಳಿಸಿದೆ.
ಪಾಕಿಸ್ತಾನದ ಪರಿಸ್ಥಿತಿ ಎಷ್ಟು ದುರ್ಭರವಾಗಿದೆ ಎಂಬುದಕ್ಕೆ ಇದು ಸಾಕ್ಷಿ. ಯಾವ ದೇಶದ ಸರಕಾರ ಉತ್ತಮ ಆಡಳಿತ ನೀಡುವುದನ್ನು ಬಿಟ್ಟು ಸ್ವಜನ ಪಕ್ಷಪಾತ, ಭ್ರಷ್ಟಾಚಾರದಲ್ಲಿ ಮುಳುಗುತ್ತದೋ,ಅಲ್ಲಿನ ಪರಿಸ್ಥಿತಿ ಯಾವ ರೀತಿ ಇರುತ್ತದೆ ಎನ್ನುವುದಕ್ಕೆ ಪಾಕಿಸ್ತಾನವೇ ಉತ್ತಮ ಉದಾಹರಣೆ.
(ಲೇಖಕರು ಹವ್ಯಾಸಿ ಬರಹಗಾರರು)