Thursday, 12th December 2024

ಅಯ್ಯೋ ಪಾಕಿಸ್ತಾನ, ಏನಿದು ನಿನ್ನ ನಾಯಿಪಾಡು ?

ಶಿಶಿರ ಕಾಲ

shishirh@gmail.com

ಕೆಲ ದಿನಗಳ ಹಿಂದೆ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯವಾಯಿತಲ್ಲ, ಅದೇಕೋ ಮೊದಲ ಬಾರಿ ಈ ಪಂದ್ಯ ಹಿಂದಿನಷ್ಟು ರುಚಿಸ ಲಿಲ್ಲ. ವಿಶ್ವಕಪ್ ಪಂದ್ಯವಾದರೂ ಮೊದಲಿನ ತುರುಸು ಉಳಿದಂತೆನಿಸಲಿಲ್ಲ. ಪಂದ್ಯ ವೀಕ್ಷಿಸಲಿಕ್ಕೆ ಅಷ್ಟೊಂದು ಉತ್ಸಾಹವೇ ಇರಲಿಲ್ಲ. ಆದರೂ ಅಭ್ಯಾಸ ತಪ್ಪಿಸಬಾರದಲ್ಲವೆಂಬ ಒಂದೇ ಕಾರಣಕ್ಕೆ, ಬೆಳಗಿನ ಜಾವ ೨:೩೦ ಗಂಟೆಗೆ ಸ್ನೇಹಿತರೆಲ್ಲ ಪಂದ್ಯ ನೋಡಲಿಕ್ಕೆಂದು ಮನೆಯಲ್ಲಿ ಸೇರಿದ್ದವು.

ಸ್ವಲ್ಪ ಹೊತ್ತಿನಲ್ಲೇ ನಿದ್ರೆ ಬಿಟ್ಟು ನೋಡುವಷ್ಟೆಲ್ಲ ಉತ್ಸಾಹ ನಮ್ಮಲ್ಲಿ ಯಾರಲ್ಲೂ ಇರಲಿಲ್ಲ. ಅರೆ ನಿದ್ರೆಯಲ್ಲಿ, ತೂಕಡಿಸುತ್ತ, ವಿಕೆಟ್ ಬಿದ್ದಾಗ ಥಟ್ಟನೆ ಪೂರ್ಣ ಎಚ್ಚರವಾಗುತ್ತ ನೋಡಿದ್ದಾಯಿತು. ಇದು ನನ್ನಲ್ಲಿ ಕುಂದಿದ ಕ್ರಿಕೆಟ್ ಆಸಕ್ತಿ, ವೈಯಕ್ತಿಕ ಎಂದೇ ಅಂದುಕೊಂಡಿದ್ದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿಯೂ ಆ ಪ್ರಮಾಣದಲ್ಲಿ ಈ ಪಂದ್ಯ ಚರ್ಚೆಯಾಗಲಿಲ್ಲವೆನಿಸಿತು. ಎಷ್ಟು ಜನ ನೋಡಿರಬಹುದು ಎಂಬ ಕುತೂಹಲ. ಆಅಇ ವರದಿ ನೋಡಿದಾಗ ಸುಮಾರು ೩೬ ಕೋಟಿ ಜನ ಈ ಪಂದ್ಯವನ್ನು ಟಿವಿ, ಅಥವಾ ಮೊಬೈಲ್ -ಇಂಟರ್ನೆಟ್‌ನಲ್ಲಿ ನೋಡಿದ್ದು ತಿಳಿಯಿತು. ಈ ಸಂಖ್ಯೆ ದೊಡ್ಡದೋ, ಚಿಕ್ಕದೋ ಎಂಬುದಕ್ಕೆ ಹೋಲಿಸಿ ನೋಡಬೇಕಲ್ಲ.

೨೦೧೧ರ ಪಾಕಿಸ್ತಾನ-ಭಾರತ ಪಂದ್ಯ ನೋಡಿದ್ದು ೪೯.೫ ಕೋಟಿ ಮಂದಿ. ೨೦೧೫ರಲ್ಲಿ ೩೧ ಕೋಟಿ. ಈಗ ಅದು ೩೬ ಕೋಟಿ. ೨೦೧೧-೧೫ರಲ್ಲಿ ಬಹುತೇಕರು ನೋಡುತ್ತಿದ್ದುದು ಟಿವಿಯಲ್ಲಿ. ಈಗ ಮೊಬೈಲ್‌ನಲ್ಲಿ ನೋಡುವವರ ಸಂಖ್ಯೆ ಬಹಳ ಹೆಚ್ಚಿದೆ. ಆದಾಗ್ಯೂ ಈ ಸಂಖ್ಯೆ ಅಂದಾಜಿಸಿದಷ್ಟು ಬೆಳೆದಿಲ್ಲ. ಇನ್ನು ಸರಾಸರಿ ವೀಕ್ಷಣೆಯ ಸಮಯದಲ್ಲಂತೂ ಗಣನೀಯ ಇಳಿಮುಖ ವಾಗಿದೆ. ಹಾಗಾದರೆ ಕ್ರಿಕೆಟ್‌ನ ಜನಪ್ರಿಯತೆ ಕಡಿಮೆಯಾಗುತ್ತಿದೆಯೇ? ಹಾಗೇನೂ ಇಲ್ಲ.

ಹಿಂದಿನ ವಿಶ್ವಕಪ್‌ಗೆ ಹೋಲಿಸಿದರೆ ನೋಡುವವರ ಸಂಖ್ಯೆ ಈ ಬಾರಿ ಶೇ.೪೩ರಷ್ಟು ಹೆಚ್ಚಾಗಿದೆಯಂತೆ. ಕ್ರಿಕೆಟ್ ಇಂದು ಅತ್ಯಂತ ವೇಗದಲ್ಲಿ ಹಿಂದಿಗಿಂತ ಜನಪ್ರಿಯವಾಗುತ್ತಿರುವ ಕ್ರೀಡೆ. ಯಾವುದೇ ವಿಶ್ವಕಪ್ ಇರಲಿ, ಭಾರತ-ಪಾಕಿಸ್ತಾನ ಪಂದ್ಯ ಯಾವಾಗಲೂ ಅತ್ಯಂತ ಹೆಚ್ಚು ವೀಕ್ಷಿಸಲ್ಪಡುವ ಪಂದ್ಯ. ಆದರೆ ಇಲ್ಲಿಯವರೆಗೆ ನಡೆದ ಪಂದ್ಯಗಳಲ್ಲಿ ಭಾರತ-ನ್ಯೂಜಿಲೆಂಡ್ ಪಂದ್ಯವನ್ನು ಪಾಕಿಸ್ತಾನ ಪಂದ್ಯಕ್ಕಿಂತ ಹೆಚ್ಚಿಗೆ ಜನರು ನೋಡಿದ್ದಾರೆ.

ಐತಿಹಾಸಿಕ ಅಂಕಿ-ಅಂಶಗಳನ್ನು ಒಂದು ಕಡೆ ಗುಡ್ಡೆ ಹಾಕಿ ನೋಡಿದಾಗ ಕ್ರಿಕೆಟ್‌ನೆಡೆಗಿನ ಆಸಕ್ತಿ, ಬಹುಶಃ ಲಭ್ಯತೆಯ ಕಾರಣ ದಿಂದ ಹೆಚ್ಚಾಗಿರುವುದಂತೂ ಸ್ಪಷ್ಟ. ಆದರೆ ಇದೆಲ್ಲದಕ್ಕೆ ವ್ಯತಿರಿಕ್ತವಾಗಿ ಭಾರತ-ಪಾಕಿಸ್ತಾನ ಪಂದ್ಯದೆಡೆಗೆ ಆಸಕ್ತಿ ಕ್ರಮೇಣ ಕಡಿಮೆಯಾಗುತ್ತಿರುವುದು ಕೂಡ ಅಷ್ಟೇ ಸ್ಪಷ್ಟ. ಇದನ್ನು ಹೇಗೆ ಗ್ರಹಿಸಬೇಕು? ಭಾರತ ಬಲಿಷ್ಠವಾಗುತ್ತಿದ್ದಂತೆ, ಪಾಕಿಸ್ತಾನ ದೇಶ ದುರ್ಬಲವಾಗುತ್ತಿದ್ದಂತೆ ಜನಸಾಮಾನ್ಯರಲ್ಲಿ ಇದ್ದ ಈ ಸಾಂಪ್ರದಾಯಿಕ ವೈರತ್ವ ಕಡಿಮೆಯಾಗುತ್ತಿದೆ ಎಂದೇ ಅಲ್ಲವೇ? ಬಹುಶಃ ಆ ದೇಶದೆಡೆಗಿನ ವೈರತ್ವವನ್ನೂ ಮೀರಿದ ಅಸಡ್ಡೆಯೇ ಇಲ್ಲಿನ ಹೆಚ್ಚಿದ ನಿರುತ್ಸಾಹಕ್ಕೆ ಕಾರಣವೆನ್ನಿಸುತ್ತದೆ.

ದಶಕದ ಹಿಂದಿನವರೆಗೂ ಪಾಕಿಸ್ತಾನದ ಮಿತಿಮೀರಿದ ಭಯೋತ್ಪಾದನಾ ಉಪಟಳ ನಮ್ಮೆಲ್ಲರನ್ನು ನೇರವಾಗಿ ಅಥವಾ
ಮಾನಸಿಕವಾಗಿ ಬಾಧಿಸುತ್ತಿತ್ತು. ಆಗ ಆ ದೇಶವನ್ನು ಆರ್ಥಿಕವಾಗಿ ಮತ್ತು ಜಾಗತಿಕ ರಾಜಕಾರಣದಲ್ಲಿ ಬೆಂಬಲಿಸುವ ಬಲಿಷ್ಠ ದೇಶಗಳಿದ್ದವು. ಅಮೆರಿಕ ಅದರ ಬೆನ್ನಿಗಿತ್ತು. ಪಾಕಿಸ್ತಾನಕ್ಕೆ ಸಿಗುತ್ತಿದ್ದ ವಿದೇಶಿ ಭಿಕ್ಷೆಗಳು ಪರೋಕ್ಷವಾಗಿ ಭಾರತದ ಭಯೋತ್ಪಾ ದನೆಗೆ ಬಳಕೆಯಾಗುತ್ತಿದ್ದವು (ಇದನ್ನು ಖುದ್ದು ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎ ಇತ್ತೀಚೆಯಷ್ಟೇ ಹಲವು ಗೌಪ್ಯ ಮಾಹಿತಿಗಳನ್ನು ಬಹಿರಂಗಪಡಿಸುವಾಗ, ಈ ಹಣದ ಹರಿವನ್ನು ಸ್ಪಷ್ಟಪಡಿಸಿದೆ). ಅಮೆರಿಕಕ್ಕೆ ಪಾಕಿಸ್ತಾನ ಶಸ್ತ್ರಾಸ್ತ್ರ  ಖರೀದಿಸುವ ಗ್ರಾಹಕ ದೇಶವಾಗಿತ್ತು. ಈಗ ಅದೆಲ್ಲ ಸಂಪೂರ್ಣ ಬದಲಾಗಿಬಿಟ್ಟಿದೆ. ನರೇಂದ್ರ ಮೋದಿ ಸರಕಾರ, ಅತ್ತ ಅಮೆರಿಕ ದಲ್ಲಿ ಟ್ರಂಪ್ ಸರಕಾರ ಬಂದಾಗಿನಿಂದ ಈ ದೇಶಕ್ಕೆ ಸಿಗುತ್ತಿದ್ದ ಬೆಂಬಲ, ಸಹಾಯ ಎಲ್ಲವೂ ಬಹುತೇಕ ನಿಂತುಬಿಟ್ಟಿದೆ.

ಸೌದಿ ಅರೇಬಿಯಾ ಮೊದಲಾದ ಆಪ್ತವೆನಿಸಿಕೊಂಡಿದ್ದ ದೇಶಗಳೂ ಭಾರತಕ್ಕೆ ಜಾಸ್ತಿ ಹತ್ತಿರವಾಗಿವೆ, ಪಾಕಿಸ್ತಾನವನ್ನು ಒಳಮನೆಗೆ ಬಿಟ್ಟುಕೊಳ್ಳುತ್ತಿಲ್ಲ. ಅಲ್ಪ ಪ್ರಮಾಣ ದಲ್ಲಿ ದೇಣಿಗೆ ನೀಡಿ ಬದುಕಿರುವಂತೆ ನೋಡಿಕೊಂಡಿವೆ, ಅಷ್ಟೆ. ಅಮೆರಿಕವಂತೂ ಪಾಕಿಸ್ತಾ ನದ ಪ್ರಧಾನಿ ಇಲ್ಲಿನ ನೆಲಕ್ಕೆ ಬಂದಿಳಿದರೆ ಕನಿಷ್ಠ ಸೌಜನ್ಯದ ಸ್ವಾಗತವನ್ನೂ ಕೊರಲಿಲ್ಲ. ನಾಲ್ಕನೇ ದರ್ಜೆಯ ಅಧಿಕಾರಿ ಗಳು ಇಮ್ರಾನ್ ಖಾನ್‌ರನ್ನು ಮನೆಯ ಬಾಗಿಲಲ್ಲಿ ನಿಂತ ಭಿಕ್ಷುಕನನ್ನು ನಡೆಸಿಕೊಂಡಂತೆ ಕಂಡು ಕೈಕುಲುಕಿದ್ದರು. ಟ್ರಂಪ್ ತನ್ನ ದೇಶಕ್ಕೆ ಬಂದ ಇಮ್ರಾನ್ ಖಾನ್‌ರನ್ನು ಭೆಟ್ಟಿಯಾಗಲು ಮರುಯೋಚಿಸಿದ್ದು ಸುದ್ದಿಯಾಗಿತ್ತು.

ಅದೇ ಭಾರತದ ಪ್ರಧಾನಿ ಬಂದರೆ ಅಮೆರಿಕ ವಿಶೇಷ ಸ್ಟೇಟ್ ವಿಸಿಟ್, ರತ್ನಗಂಬಳಿಯ ಸ್ವಾಗತ. ನೀವು ಒಪ್ಪಿಕೊಳ್ಳಿ ಅಥವಾ ಬಿಡಿ, ನರೇಂದ್ರ ಮೋದಿ ಬಂದ ನಂತರದಲ್ಲಿ ಪಾಕಿಸ್ತಾನವನ್ನು ಚೀನಾ ಹೊರತುಪಡಿಸಿ ಉಳಿದ ಯಾವುದೇ ದೇಶವೂ ಸೌಜನ್ಯಕ್ಕೂ ಬೆಂಬಲಿಸದ ಸ್ಥಿತಿ ನಿರ್ಮಾಣವಾಗಿದೆ. ತೀರಾ ಬಡತನ, ನಿರುದ್ಯೋಗ ಇವೆಲ್ಲ ಕಾರಣದಿಂದ ಜನರು ತಮ್ಮ ಮನೆ, ಊರು, ದೇಶವನ್ನು ಬಿಟ್ಟು ಅಕ್ರಮವಾಗಿ ಇನ್ನೊಂದು ದೇಶಕ್ಕೆ ವಲಸೆ ಹೋಗುವುದು ಕೆಲವು ದೇಶಗಳಲ್ಲಿ ಸಾಮಾನ್ಯ. ಮೆಕ್ಸಿಕೋ, ಕೋಸ್ಟರೀಕಾ, ಗ್ವಾಟೆಮಾಲಾ ಮೊದಲಾದ ದೇಶಗಳಿಂದ ಶ್ರೀಮಂತ ಅಮೆರಿಕಕ್ಕೆ ಜನರು ನೂರೆಂಟು ವಾಮಮಾರ್ಗದಲ್ಲಿ ಅಕ್ರಮ ವಲಸೆ ಬರುತ್ತಾರೆ, ಒಳನುಸುಳುತ್ತಾರೆ.

ಇನ್ನು ಸಿರಿಯಾ ಮೊದಲಾದ ದೇಶಗಳಿಂದ ಯುರೋಪಿಯನ್ ದೇಶಗಳಿಗೆ ಸಮುದ್ರದಲ್ಲಿ ಹಡಗು ಹತ್ತಿ ಹೋಗುವ, ಮಧ್ಯೆ ಅವಘಡವಾಗಿ ಸಾಯುವ ಸುದ್ದಿ ಕೇಳಿರುತ್ತೀರಿ. ಆದರೆ ಈಗೀಗ ಪಾಕಿಸ್ತಾನದಿಂದ ದೇಶಬಿಟ್ಟು ಈ ರೀತಿ ಅಕ್ರಮವಾಗಿ ಯುರೋಪ್, ಆಫ್ರಿಕಾ ದೇಶಗಳನ್ನು ಸೇರುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಒಂದು ಕಾಲದಲ್ಲಿ ಪಾಕಿಸ್ತಾನ ತಮ್ಮ ಹೆಮ್ಮೆಯೆಂದು ಬೀಗುತ್ತಿದ್ದ, ಕ್ರಿಕೆಟ್‌ನಲ್ಲಿ ಭಾರತ ಸೋತರೆ ತಾವು ಯುದ್ಧವನ್ನೇ ಗೆದ್ದಂತೆ ವರ್ತಿಸುತ್ತಿದ್ದ ಪಾಕಿಸ್ತಾನಿಗಳದ್ದು ಈಗ ದೇಶವನ್ನೇ ಬಿಟ್ಟು ಗುಳೆ ಹೋಗುವ ಸ್ಥಿತಿ.

ಪಾಕಿಸ್ತಾನದಿಂದ ಹಡಗಿನಲ್ಲಿ ಗ್ರೀಸ್, ಟರ್ಕಿ ಮೊದಲಾದ ದೇಶಗಳಿಗೆ ಹೋಗುವುದು, ಅಲ್ಲಿಂದ ಯುರೋಪ್‌ನ ಉಳಿದ ದೇಶ
ದೊಳಕ್ಕೆ ನುಸುಳುವುದು. ಇದು ಇಂದಿನ ಮಧ್ಯಮ ವರ್ಗದ ಪಾಕಿಸ್ತಾನಿಗಳ ಏಳಿಗೆಯ ಕನಸಾಗಿ ಬದಲಾಗಿದೆ. ಬದುಕಿಗಾಗಿ ದೇಶ ಬಿಡುವ ಪಾಕಿಸ್ತಾನಿಗಳ ಸಂಖ್ಯೆ ಲೆಕ್ಕ ಮೀರುತ್ತಿದೆ. ಪಾಕಿಸ್ತಾನದಿಂದ ಈಜಿಪ್ಟ್, ಅಲ್ಲಿಂದ ಲಿಬಿಯಾ, ಅಲ್ಲಿಂದ ಹಡಗಿನ ಮೂಲಕ ಗ್ರೀಸ್‌ಗೆ ತಲುಪುವುದು, ನಂತರದಲ್ಲಿ ಅಕ್ರಮವಾಗಿ ಯುರೋಪಿಯನ್ ದೇಶಗಳೊಳಕ್ಕೆ ನುಸುಳುವುದು.

ಇದು ಕಲಶೋಪಾದಿಯಾಗಿ ನಡೆಯಲಿಕ್ಕೆ ಶುರುವಾಗಿ ೩-೪ ವರ್ಷವಾಗಿದೆ. ಈ ವರ್ಷವಂತೂ ಈ ರೀತಿ ಅಕ್ರಮವಾಗಿ ದೇಶಬಿಟ್ಟು
ಯುರೋಪ್ ಸೇರುವವರ ಸಂಖ್ಯೆ ೬೦೦ ಪಟ್ಟು ಹೆಚ್ಚಿದೆಯಂತೆ. ೨೦೨೩ರ ಜೂನ್‌ನಲ್ಲಿ ಸುಮಾರು ೫೦೦-೭೦೦ ಪಾಕಿಸ್ತಾನಿ ಗಳಿಂದ (ಈ ಸಂಖ್ಯೆಯಲ್ಲಿ ಗೊಂದಲವಿದೆ) ಕಿಕ್ಕಿರಿದು ತುಂಬಿದ್ದ ಹಡಗು ಲಿಬಿಯಾದಿಂದ ಗ್ರೀಸ್‌ಗೆ ಹೋಗುವಾಗ ಮೆಡಿಟರೇನಿ ಯನ್ ಸಮುದ್ರದಲ್ಲಿ ಮುಳುಗಿದ್ದು ಸುದ್ದಿಯಾಗಿತ್ತು.

ಪಾಕಿಸ್ತಾನ ಬೇಡಿಕೊಂಡರೂ ಮುಳುU ತ್ತಿದ್ದವರನ್ನು ರಕ್ಷಿಸಲು ಗ್ರೀಸ್ ಮುಂದಾಗಲೇ ಇಲ್ಲ. ಬಹುತೇಕರು ಸಮುದ್ರಪಾಲಾದರು, ಕಥೆಯನ್ನು ಹೇಳಲು ಕೆಲವರಷ್ಟೇ ಬದುಕುಳಿದುಕೊಂಡರು. ಹಾಗಾದರೆ ಅಷ್ಟೊಂದು ಕಷ್ಟಪಟ್ಟು, ಅಕ್ರಮವಾಗಿ, ಜೀವದ ಹಂಗು ಬಿಟ್ಟು, ಬದುಕಿಗೋಸ್ಕರ ದೇಶ ಬಿಡಬೇಕಾದ ಪರಿಸ್ಥಿತಿ ಪಾಕಿಸ್ತಾನದಲ್ಲಿ ಇರುವುದು ಹೌದಾ? ಹಾಗಿದ್ದಲ್ಲಿ ಪಾಕಿಸ್ತಾನ ಅಷ್ಟು ಹದಗೆಟ್ಟದ್ದು ಹೇಗೆ? ಏಕೆ? ಪಾಕಿಸ್ತಾನದ ರಾಜಕೀಯ ದೊಂಬರಾಟ, ಅಸ್ಥಿರತೆ ಇವೆಲ್ಲ ನಿಮಗೆ ಗೊತ್ತಿಲ್ಲದ ವಿಷಯವೇನಲ್ಲ. ಆ ದೇಶ ಹುಟ್ಟಿದಾಗಿನಿಂದ ಪೂರ್ಣಾವಽ ಆಡಳಿತ ನಡೆಸಿದ ಒಬ್ಬನೇ ಪ್ರಧಾನಿಯಿಲ್ಲ. ಸೈನ್ಯದ್ದೇ ಪಾರುಪತ್ಯ.

ಹೇಳಲಿಕ್ಕೆ ಪ್ರಜಾಪ್ರಭುತ್ವವಾದರೂ, ಅಲ್ಲಿರುವುದು ಸೈನ್ಯಾಧಿಕಾರ ಎಂಬುದು ಜಗತ್ತಿಗೇ ಗೊತ್ತು. ಅಲ್ಲಿ ಸೈನ್ಯವೇ ಸರಕಾರವನ್ನು
ಉರುಳಿಸುವುದು, ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅವರಲ್ಲಿ ಯಾರು ಪ್ರಧಾನಿಯಾಗಬೇಕೆಂದು ನಿರ್ಧರಿಸುವುದು. ಅದೇ ಸೈನ್ಯ ತನ್ನ ಪ್ರಧಾನಿಯನ್ನು ಐಎಂಎಫ್ ಎದುರು ಹಣ ಬೇಡಲಿಕ್ಕೆ ಕಳುಹಿಸುವುದು. ಪಾಕಿಸ್ತಾನ ಮೊದಲಿನಿಂದಲೂ ಬೇಡಿಕೊಂಡೇ ಬದುಕಿದ ರಾಷ್ಟ್ರ, ಇದು ಉತ್ಪ್ರೇಕ್ಷೆಯಲ್ಲ. ಅಲ್ಲಿನ ಯಾವುದೇ ಸರಕಾರವು ದೇಶವನ್ನು ಬಲಿಷ್ಠವಾಗಿಸಲು ಎಂದೂ ಪ್ರಯತ್ನಿಸಿಯೇ ಇಲ್ಲ.

ಮಾನವ ಸಂಪನ್ಮೂಲವನ್ನು ಬೆಳೆಸಲೇ ಇಲ್ಲ. ಭಯೋತ್ಪಾದನೆಯೇ ಸಂಪನ್ಮೂಲ. ದುಡ್ಡಿನ ಕೊರತೆಯು ಪಾಕಿಸ್ತಾನದ ಜತೆ
ಯಲ್ಲೇ ಮರುಹುಟ್ಟಿದ ನಮ್ಮ ದೇಶದಲ್ಲೂ ಇತ್ತು. ನಾವೂ ಐಎಂಎಫ್ ಸಾಲಗಾರರೇ. ಆದರೆ ನಮ್ಮ ದೇಶದಲ್ಲಿ ಅಭಿವೃದ್ಧಿ ಯಾಯಿತು. ನಾವು ದೇಶಕ್ಕಾಗಿ ದುಡಿದೆವು. ಕಟ್ಟಿ ನಿಲ್ಲಿಸಿಕೊಂಡೆವು. ಜೇಬು ಖಾಲಿಯಾದಾಗಲೆಲ್ಲ ಅಂಗಲಾಚುವ ಬದಲು ಜೇಬು ತುಂಬುವಂತೆ ನಾವೇ ಬೆಳೆದು ನಿಂತೆವು. ಆದರೆ ಪಾಕಿಸ್ತಾನ ಹಾಗೆ ಮಾಡಲಿಲ್ಲ. ಅಲ್ಲಿನ ಸೈನ್ಯಾಧಿಕಾರಿಗಳು ಮಾತ್ರ ಅಲ್ಲಿ ಇಷ್ಟು ಕಾಲ ಉದ್ಧಾರವಾದದ್ದು.

ಪಾಕಿಸ್ತಾನ ಕಳೆದ ೭೫ ವರ್ಷಗಳಲ್ಲಿ ಐಎಂಎಫ್ ಮುಂದೆ ಬೇಡಲು ಹೋದದ್ದು ಎಷ್ಟು ಸಲ ಗೊತ್ತೇ? ೨೪ ಬಾರಿ. ಸರಾಸರಿ ಪ್ರತಿ ೩ ವರ್ಷಕ್ಕೊಮ್ಮೆ. ಐಎಂಎಫ್ ಎಂದರೆ ಆರ್ಥಿಕ ತುರ್ತುನಿಗಾ ಘಟಕ ಎಂದು ಕರೆಯುವುದುಂಟು. ಪಾಕಿಸ್ತಾನ ಹುಟ್ಟಿದಾಗಿನಿಂದ ಆ ತುರ್ತುನಿಗಾ ಘಟಕದಲ್ಲಿಯೇ ಇದೆ. ಅಲ್ಲಿ ಪ್ರಧಾನಿಯ ಸಾಮರ್ಥ್ಯವನ್ನು ಅಳೆಯುವುದೇ ಆತ ಎಷ್ಟು ಸಾಲ ತಂದ ಎಂಬುದರ ಮೇಲೆ. ನೀವೇ ಅಂದಾಜಿಸಿಕೊಳ್ಳಿ, ಆ ದೇಶದ ಮನಸ್ಥಿತಿಯನ್ನು.

ಅಲ್ಲಿನ ‘Dawn’ ಮೊದಲಾದ ಪತ್ರಿಕೆಗಳ ವರದಿಯನ್ನು ನಾನೇ ಎಷ್ಟೋ ಬಾರಿ ನೋಡಿದ್ದೇನೆ. ಐಎಂಎಫ್ ನಲ್ಲಿ ಸಾಲ ಪಡೆಯಲು ಪ್ರಧಾನಿ ಅಮೆರಿಕಕ್ಕೆ ಹೋಗುತ್ತಾನೆ ಎಂದರೆ ಜನರು, ಪತ್ರಿಕೆಗಳು ಅದನ್ನು ಪುಟಗಟ್ಟಲೆ ಬರೆದು ಸಂಭ್ರಮಿಸುತ್ತವೆ, ಈ ಸಾಲದಿಂದ ಏನೇನು ಕಷ್ಟ ಪರಿಹಾರವಾಗುತ್ತದೆ ಎಂದು ಲೆಕ್ಕಾಚಾರ ಹೇಳುತ್ತವೆ. ಇದೆಲ್ಲವೂ ಉಲ್ಬಣಿಸಿದ್ದು ೨೦೦೮ರ ನಂತರ. ೨೦೦೮ರಲ್ಲಿ ಜಾಗತಿಕ ಆರ್ಥಿಕ ಮುಗ್ಗಟ್ಟು ಸಂಭವಿಸಿತಲ್ಲ, ಆ ಸಮಯದಲ್ಲಿ ಬಡ್ಡಿ ದರ ಗಣನೀಯವಾಗಿ ಇಳಿದಿತ್ತು.

ಐಎಂಎಫ್ ಎಂದರೆ ಅಮೆರಿಕ. ಅದು ಬಡದೇಶಗಳಿಗೆ ಯಥೇಚ್ಛ ಸಾಲಕೊಡಲು ಮುಂದಾಯಿತು. ಸಾಲಕ್ಕೆ ಬಾಯಿ ಕಳೆದು ಕಾಯುತ್ತಿದ್ದ ಪಾಕಿಸ್ತಾನಕ್ಕೆ ಜ್ಯಾಕ್‌ಪಾಟ್. ಹೇರಳ ಸಾಲ ಪಡೆಯುವುದು, ಅದನ್ನು ಜನರ ಹೊಟ್ಟೆ ಹೊರೆಯುವಿಕೆಗೆ, ಮೂಲ ಸೌಕರ್ಯಕ್ಕೆ, ಭಯೋತ್ಪಾದನೆಗೆ ಬಳಸಿಕೊಳ್ಳುವುದು ೧೨ ವರ್ಷ ನಿರಂತರ ನಡೆಯಿತು. ೨೦೨೧ರಲ್ಲಿ ಈ ಸಾಲ ಎಷ್ಟಾಯಿತೆಂದರೆ ಇಡೀ ಪಾಕಿಸ್ತಾನದ ಆದಾಯ ತೆರಿಗೆಯ ಅಷ್ಟೂ ಹಣ ಸಾಲದ ಬಡ್ಡಿ ಕಟ್ಟಲಿಕ್ಕೆ ಸರಿಯಾಗುತ್ತಿತ್ತು. ಅಂದರೆ ಇಡೀ ದೇಶದ ಆದಾಯ ತೆರಿಗೆಯು ಸೊನ್ನೆಯಾದಂತೆ. ಐಎಂಎಫ್, ಅಮೆರಿಕ ಪುಕ್ಸಟ್ಟೆಸಾಲ ಕೊಡುವುದಿಲ್ಲ. ಬದಲಿಗೆ ಅಲ್ಲಿನ ಆರ್ಥಿಕ ನೀತಿಯನ್ನು ಕೂಡ ನಿರ್ದೇಶಿಸುತ್ತವೆ.

ಹಿಂದಿನ ವರ್ಷ ೩ ಬಿಲಿಯನ್ ಡಾಲರ್ (ಕೇವಲ) ಸಾಲ ಕೊಟ್ಟು ಪಾಕಿಸ್ತಾನ ಪೂರ್ಣ ದಿವಾಳಿ ಘೋಷಿಸುವುದನ್ನು ಐಎಂಎಫ್ ಸ್ವಲ್ಪದರಲ್ಲಿಯೇ ತಪ್ಪಿಸಿತು (ಇದು ಹೋಲಿಕೆಗಷ್ಟೇ- ಬೆಂಗಳೂರಿನ ಇನೋಸಿಸ್ ಸಂಸ್ಥೆಯ ಕಳೆದ ವರ್ಷದ ಆದಾಯ ೧೮ ಬಿಲಿಯನ್ ಡಾಲರ್, ಪಾಕಿಸ್ತಾನವು ಆರು ವರ್ಷ ಬದುಕುವಷ್ಟು!). ಅದರ ಜತೆಗೆ ಐಎಂಎಫ್ ಅಲ್ಲಿನ ಆರ್ಥಿಕತೆ ಸುಧಾರಿಸಲಿ ಎಂದು ಬಡ್ಡಿದರ ಹೆಚ್ಚಿಸುವಂತೆ ಆದೇಶಿಸಿತು. ಅದರ ಹೊಡೆತ ನೇರವಾಗಿ ಬಿದ್ದದ್ದು ಅಲ್ಲಿನ ಕೈಗಾರಿಕೆಗಳ ಮೇಲೆ. ೨೦೨೧ರಲ್ಲಿ ಶೇ.೮.೬ರಷ್ಟಿದ್ದ ಬಡ್ಡಿದರ, ಇಂದು, ವರ್ಷದೊಳಗೆ ಶೇ.೨೩ಕ್ಕೆ ತಲುಪಿದೆ.

ಇದೆಲ್ಲದರಿಂದ ಈಗ ಹಣದುಬ್ಬರ ಆಕಾಶಕ್ಕೇರಿದೆ. ಗ್ರಾಹಕ ಬೆಲೆ ಸೂಚ್ಯಂಕ (CPI) ಶೇ.೩೦ರಷ್ಟು ಜಾಸ್ತಿಯಾಗಿದೆ. ಇದು ನಮ್ಮಲ್ಲಿ ವಾರ್ಷಿಕ ಶೇ.೫ರಷ್ಟು ಇದೆ. ಅಷ್ಟಕ್ಕೇ ಬೆಲೆಯೇರಿಕೆಯ ಬಿಸಿಯನ್ನು ಜನಸಾಮಾನ್ಯರು ಅನುಭವಿಸುತ್ತಿದ್ದಾರೆ. ಹೀಗಿರುವಾಗ ಅಲ್ಲಿನ ಕಥೆ ಏನಾಗಿರಬೇಡ? ಸ್ವಲ್ಪ ಊಹಿಸಿಕೊಳ್ಳಿ. ಅಕ್ಕಿಯ ಬೆಲೆ ನಾಲ್ಕು ಪಟ್ಟು ಏರಿದರೆ ಬೇಳೆ ಆರು ಪಟ್ಟು ತುಟ್ಟಿಯಾಗಿದೆ. ಇದೆಲ್ಲದರ ಜತೆ ಪೆಟ್ರೋಲ್, ವಿದ್ಯುತ್ ಮೊದಲಾದ ಇಂಧನದ ಬೆಲೆಯಂತೂ ಗಗನಕ್ಕೇರಿ ಸುಮಾರು ತಿಂಗಳಾದವು.

ಹಣದುಬ್ಬರ, ನೆಲಕ್ಕೆ ಕಚ್ಚಿದ ಅಲ್ಲಿನ ರುಪಾಯಿ ಮೌಲ್ಯ, ಇವೆಲ್ಲದರಿಂದ ಆದ ವಸ್ತುಗಳ ಆಮದಿಗೆ ಅಪಮೌಲ್ಯ. ಹೀಗಾಗಿ ಹೆಚ್ಚಿನ ಪಾಕಿಸ್ತಾನ್ ರುಪಾಯಿಯನ್ನು ವ್ಯಯಿಸುವಂತಾಗಿದೆ. ೨೦೨೧ರಲ್ಲಿ ಡಾಲರ್ ಬೆಲೆ ೧೬೦ ಪಾಕಿ ರುಪಾಯಿ ಇದ್ದುದು ಈಗ ೩೦೦ ಪಾಕಿ ರುಪಾಯಿಯ ಆಸುಪಾಸು. ಆ ಕಾರಣಕ್ಕೆ ಇಂದಿನ ಪ್ರಧಾನಿ ಅವಶ್ಯಕವಲ್ಲದ ಯಾವುದೇ ವಸ್ತುಗಳನ್ನು ಆಮದು ಮಾಡಿಕೊಳ್ಳುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ವಿದ್ಯುತ್ ಬೆಲೆ ಏರಿಕೆಯಿಂದ ಶೇ.೫೦ರಷ್ಟು ಕೈಗಾರಿಕೆಗಳು ಬಾಗಿಲು ಮುಚ್ಚಿವೆ, ಇಲ್ಲವೇ ಅರ್ಧ ಸಾಮರ್ಥ್ಯದಲ್ಲಿ ಕೆಲಸಮಾಡುತ್ತಿವೆ.

ಇವೆಲ್ಲ ಸಣ್ಣ ಸಂಖ್ಯೆಗಳಲ್ಲ. ಬಟ್ಟೆ, ಹಣ್ಣು, ಮಾಂಸ ಪಾಕಿಸ್ತಾನದ ರಫ್ತಾಗುವ ವಸ್ತುಗಳು. ಹಣ್ಣಿನ ದೊಡ್ಡ ಗ್ರಾಹಕನಾಗಿದ್ದ
ಭಾರತ ಈಗ ವ್ಯವಹಾರ ನಿಲ್ಲಿಸಿದೆ. ವಿದ್ಯುತ್ ಅಭಾವದಿಂದ ಕೈಗಾರಿಕೆಗಳು ಸಾಮರ್ಥ್ಯದ ಶೇ.೩೦ರಷ್ಟು ಉತ್ಪಾದಿಸುತ್ತಿದೆ. ಮಾಂಸೋತ್ಪಾದನೆಗೆ ಪಶುಗಳಿಗೆ ಆಹಾರ ಖರೀದಿಸಲಾಗುತ್ತಿಲ್ಲ. ಇಷ್ಟು ಸಾಲದೆಂಬಂತೆ ಚೀನಾದ ಜತೆಗಿನ ಸ್ನೇಹ. ಚೀನಾದ
‘ಬೆಲ್ಟ್ ಆಂಡ್ ರೋಡ್ ಇನಿಶಿಯೆಟಿವ್’ ಬಗ್ಗೆ ಕೇಳಿರಬಹುದು. ಪಾಕಿಸ್ತಾನದ ಮೂಲಕ ತನ್ನ ಸಾಮಗ್ರಿಗಳನ್ನು ಯುರೋಪಿಗೆ ಸಾಗಿಸಲು ಚೀನಾ ತನಗೆ ಬೇಕಾದ ರಸ್ತೆ ಮಾರ್ಗವನ್ನು ಪಾಕ್‌ಗೆ ಸಾಲ ಕೊಟ್ಟು ಮಾಡಿಸಿಕೊಳ್ಳುತ್ತಿದೆ. ಈ ಪ್ರಾಜೆಕ್ಟ್‌ನಿಂದ ಲಾಭಪಡೆಯಬೇಕಾಗಿದ್ದ ಪಾಕಿಸ್ತಾನ ಭ್ರಷ್ಟಾಚಾರದಿಂದಾಗಿ ಸೋಲುತ್ತಿದೆ.

ಇದೆಲ್ಲ ಇನ್ನಷ್ಟು ಸಾಲವನ್ನು ಹೆಚ್ಚಿಸುತ್ತಿದೆ. ಕ್ರಮೇಣ ಚೀನಾ ಸಾಲವಸೂಲಿಗೆ ಇಳಿದರೆ ಪಾಕಿಸ್ತಾನ ತನ್ನನ್ನು ತಾನೇ ಮಾರಿಕೊಳ್ಳಬೇಕಾದ ಸ್ಥಿತಿ. ಇದೆಲ್ಲದರ ಜತೆ ಗಾಯದ ಮೇಲೆ ಬರೆ ಎಳೆದಂತೆ, ಹಿಂದಿನ ವರ್ಷ ಅತಿವೃಷ್ಟಿಯಾಗಿ ಶೇ.೩೦ರಷ್ಟು ಪಾಕಿಸ್ತಾನ ಜಲಾವೃತವಾಗಿತ್ತು. ಇದರಿಂದ ಆದ ನಷ್ಟ ೧೫ ಬಿಲಿಯನ್ ಡಾಲರ್. ಪಾಕಿಸ್ತಾನ ೫ ವರ್ಷ ಬದುಕಿರಲು ಸಾಕಾಗುವಷ್ಟು ಮೊತ್ತವದು. ಪಾಕಿಸ್ತಾನ ಸದ್ಯದಲ್ಲಿಯೇ ದಿವಾಳಿಯೆಂದು ಘೋಷಿಸಿಕೊಳ್ಳುವುದು ಬಹುತೇಕ ಖಚಿತವಾದಂತಿದೆ.
ಅದಾದಲ್ಲಿ ಅಲ್ಲಿನ ಆಂತರಿಕ ದಂಗೆಗಳೇ ಆ ದೇಶವನ್ನು ಸರ್ವನಾಶ ಮಾಡುವುದು ಖಂಡಿತ. ಅದಕ್ಕೆ ಬೇಕಾದ ಎಲ್ಲ ವಾತಾವರಣ, ವೇದಿಕೆ ಅಲ್ಲಿ ಈಗಾಗಲೇ ಸಿದ್ಧವಾಗಿ ನಿಂತಿದೆ.

ಹಾಗಾದರೆ ಇದೆಲ್ಲದಕ್ಕೆ ಅಲ್ಲಿನ ಸೈನ್ಯವೇ ಕಾರಣವಾ, ಅಥವಾ ಅಲ್ಲಿನ ಜನಸಾಮಾನ್ಯರು ಕೂಡ ಕಾರಣವಾ? ಪಾಕಿಸ್ತಾನದ ರಾಜಕಾರಣದಲ್ಲಿ ಮೊದಲಿನಿಂದಲೂ ಒಂದೇ ಭಾವಾತಿರೇಕ ಕೆಲಸಮಾಡಿದೆ. ಅದೇ, ಭಾರತದೆಡೆಗಿನ ಶತ್ರುತ್ವ, ಹಿಂದುಗಳೆಡೆಗಿನ ಪರಮ ದ್ವೇಷ, ಕಾಶ್ಮೀರ ಪಡೆಯಬೇಕೆಂಬ ತಿರುಕನ ಹಂಬಲ. ಇದೇನೂ ಅಲ್ಲಿನ ಜಿಹಾದಿಗಳು, ಐಎಸ್ ಐಗಳಷ್ಟೇ ನಿಭಾಯಿಸಿ ಕೊಂಡು ಬಂದ ದ್ವೇಷವಲ್ಲ. ಅಲ್ಲಿನ ಜನರಲ್ಲಿ ಭಾರತದ ಬಗ್ಗೆ ಗೌರವವಿದೆ, ಪ್ರೀತಿಯಿದೆ ಎಂದೆಲ್ಲ ಆಗೀಗ ಸೋಷಿಯಲ್ ಮೀಡಿಯಾದಲ್ಲಿ ಬರುವುದಿದೆ. ಆದರೆ ಇಲ್ಲಿಯವರೆಗೆ ಅಲ್ಲಿನ ಎಲ್ಲ ಚುನಾವಣೆಗಳಲ್ಲಿಯೂ ಮತ ಪಡೆಯುವ ಮುಖ್ಯ ವಿಷಯವಾಗಿದ್ದು ಭಾರತ. ಯಾರು ಹೆಚ್ಚು ಭಾರತವನ್ನು ದ್ವೇಷಿಸುತ್ತಾರೋ ಅವರೇ ಅಲ್ಲಿನ ಚುನಾವಣೆಗಳನ್ನು ಗೆದ್ದದ್ದು. ಅಲ್ಲಿ ಬದಲಾವಣೆ, ಅಭಿವೃದ್ಧಿಗೆ ಜನರು ವೋಟ್ ಹಾಕಿದ್ದು ಇಲ್ಲವೇ ಇಲ್ಲ, ಅಥವಾ ಒಂದೇ ಬಾರಿ- ಇಮ್ರಾನ್ ಖಾನ್ ಸರಕಾರಕ್ಕೆ. ಅವರು ಮೊದಲಬಾರಿ ಭಾರತವನ್ನು ದ್ವೇಷಿಸುವ ಭಾಷಣಕ್ಕಿಂತ ಜಾಸ್ತಿ ಅಭಿವೃದ್ಧಿಯ ಬಗ್ಗೆ ಭಾಷಣ ಮಾಡಿದ್ದರು.

ಭಾರತದ ಜತೆ ಸ್ನೇಹ ಸಾಧಿಸುತ್ತೇನೆ ಎಂದು ಹೇಳಿ ಅಲ್ಲಿ ಚುನಾವಣೆ ಗೆದ್ದವರಿರಲಿಲ್ಲ, ಇಮ್ರಾನ್ ಮೊದಲನೆಯವರು. ಅದೇ ಅವರ ಉದ್ದೇಶವಾಗಿತ್ತೋ ಅಥವಾ ಅಲ್ಲಿನ ಜನರ ಅನಿವಾರ್ಯ ಭಾವನೆಯನ್ನು ತಮ್ಮ ಲಾಭಕ್ಕೆ ಬಳಸಿಕೊಂಡರೋ, ಗೊತ್ತಿಲ್ಲ. ಒಟ್ಟಾರೆ ಇಮ್ರಾನ್ ಆರಿಸಿಬಂದರು, ಆದರೆ ಸಂಬಂಧ ಮಾತ್ರ ಇನ್ನಷ್ಟು ಬಿಗಡಾಯಿಸಿತು. ಅವರು ಸೈನ್ಯದ ‘ಪಪೆಟ್’ ಆಗಿಬಿಟ್ಟರು.
ಒಂದು ಲೆಕ್ಕಾಚಾರದ ಪ್ರಕಾರ, ಪಾಕಿಸ್ತಾನ ಇಲ್ಲಿಯವರೆಗೆ ಭಾರತದ ವಿರುದ್ಧದ ಯುದ್ಧಕ್ಕೆ ಬಳಸಿದ ಹಣದಲ್ಲಿ ಇಂದಿನ ಸಾಲವನ್ನು ೫ ಬಾರಿ ತೀರಿಸಬಹುದಿತ್ತು.

ಇಂದು ವ್ಯಾವಹಾರಿಕವಾಗಿ ಪಾಕಿಸ್ತಾನವನ್ನು ಮೇಲೆತ್ತಲು ಸಾಮರ್ಥ್ಯವಿರುವ ಏಕೈಕ ದೇಶ ಭಾರತ. ಆದರೆ ಭಾರತಕ್ಕೆ, ಇಂದಿನ ಸರಕಾರಕ್ಕೆ ಆ ಯಾವ ಅವಶ್ಯಕತೆಯೂ ಉಳಿದಿಲ್ಲ. ನವಾಜ್ ಷರೀಫರ ಮಗಳ ಮದುವೆಗೆ ಪ್ರಧಾನಿ ಮೋದಿ ಹೋಗಿಬಂದು, ಎಲ್ಲವನ್ನು ಸರಿಮಾಡಿಕೊಳ್ಳಲಿಕ್ಕೆ ಯತ್ನಿಸಿದ್ದು ನೆನಪಿರಬಹುದು. ಆದರೆ ಮೋದಿಯವರು ಪಾಕಿಸ್ತಾನಕ್ಕೆ ಇನ್ನೊಂದು ಅವಕಾಶ ಕೊಡುವುದು ಅನುಮಾನ. ಇಷ್ಟು ಕಾಲ ದೇಶಬಿಟ್ಟು ಓಡಿಹೋಗಿದ್ದ ಅದೇ ನವಾಜ್ ಷರೀಫ್ ಈಗ ಪಾಕಿಸ್ತಾನಕ್ಕೆ ವಾಪಸಾಗಿ ದ್ದಾರೆ, ಮತ್ತೊಮ್ಮೆ ಸೈನ್ಯ ಅವರನ್ನು ಪ್ರಧಾನಿ ಮಾಡಲಿಕ್ಕಿದೆ. ಒಟ್ಟಾರೆ ಮೋದಿ ಮತ್ತು ಭಾರತವೆಂಬ ಅನಿವಾರ್ಯದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಯಾವುದೇ ಕಿಮ್ಮತ್ತು ಉಳಿದಿಲ್ಲ. ಸದ್ಯದಲ್ಲೇ ಅಲ್ಲಿ ಆಂತರಿಕ ಯುದ್ಧ ಶುರು ವಾದರೆ ಆಶ್ಚರ್ಯಪಡಬೇಕಾಗಿಲ್ಲ. ದ್ವೇಷಿಸಿದವರು, ಹಿಂಸಿಸಿದವರು ಕಣ್ಣೆದುರೇ ನಾಶವಾಗುವುದೇ ಕಲಿಯುಗದ ಲಕ್ಷಣವಲ್ಲವೇ?