Saturday, 21st September 2024

ಹದವಾದ ವಜನ ಇರುವ ಹತ್ತು ಡಜನ ಪಂಚ್ ಪದಿಗಳು

ತಿಳಿರುತೋರಣ

ಶ್ರೀವತ್ಸ ಜೋಶಿ

srivathsajoshi@gmail.com

ಅಮ್ಜದ್ ಅಲಿ ಖಾನ್ ಸರೋದ್ ವಾದನ ಮತ್ತು ಲಾಲ್‌ಗುಡಿ ಜಿ ಜಯರಾಮನ್ ವಯಲಿನ್ ವಾದನದ ಜುಗಲ್‌ಬಂದಿ ನೀವು ಯಾವಾಗಾದರೂ ಸವಿದಿದ್ದೀರಾ? ಅವರದೊಂದು ‘ಸೌತ್ ಮೀಟ್ಸ್ ನಾರ್ತ್’ ಹೆಸರಿನ ಆಲ್ಬಮ್ ಇದೆ. ನನ್ನ ಫೇವರಿಟ್‌ಗಳಲ್ಲೊಂದು.

ಅದರ ಎ-ಸೈಡ್‌ನಲ್ಲಿ ಭೂಪಾಲಿ(ಮೋಹನ) ರಾಗ, ಬಿ-ಸೈಡ್‌ನಲ್ಲಿ ಮಾಲಕೌಂಸ್(ಹಿಂದೋಳ) ರಾಗ. ವಾಹ್! ನಾನಿಲ್ಲಿ ಅಕ್ಷರಗಳಲ್ಲಿ ಬಣ್ಣಿಸಲಾರೆ, ಆಲಿಸಿಯೇ ಅನುಭವಿಸಬೇಕು. ರಸೋತ್ತುಂಗದ ಅನುಭೂತಿ ಪಡೆಯಬೇಕು. ಅದೇ ರೀತಿ, ಹಾಡುಗಾರಿಕೆ ಇಷ್ಟವಾಗುವವರಿಗೆ ಪಂಡಿತ್ ಭೀಮಸೇನ ಜೋಶಿ ಮತ್ತು ಎಂ.ಬಾಲಮುರಳೀಕೃಷ್ಣ ಜುಗಲ್‌ಬಂದಿ. ವಾದ್ಯಸಂಗೀತ ಇಷ್ಟವಾಗುವವರಿಗೆ ಕದ್ರಿ ಗೋಪಾಲನಾಥ್ ಸ್ಯಾಕ್ಸೊಫೋನ್ ಮತ್ತು ಪ್ರವೀಣ ಗೋಡ್ಖಿಂಡಿ ಬಾನ್ಸುರಿ
ಜುಗಲ್‌ಬಂದಿ.

ಸಂಗೀತದ ಜುಗಲ್‌ಬಂದಿಗಳ ರೀತಿಯಲ್ಲೇ ಯಕ್ಷಗಾನದಲ್ಲಾದರೆ ಪ್ರಚಂಡ ಜೋಡಾಟ: ಅಕ್ಕಪಕ್ಕದಲ್ಲಿ ಎರಡು ರಂಗಸ್ಥಳಗಳು; ತೆಂಕು-ಬಡಗು ತಿಟ್ಟುಗಳ ಯಕ್ಷಸಂಗಮ. ಗಮನಿಸಬೇಕಾದ ಅಂಶವೆಂದರೆ ಸಂಗೀತದ ಜುಗಲ್ ಬಂದಿಯಿರಲಿ, ಯಕ್ಷಗಾನದ ಜೋಡಾಟವಿರಲಿ, ಇನ್ನ್ಯಾವುದೋ ಲಲಿತಕಲೆಯ ಅಂಥದ್ದೇ ಜೋಡಿ ಪ್ರದರ್ಶನವಿರಲಿ – ಅವು ನಮಗೆ ನೀಡುವ ಒಟ್ಟು ಮನೋರಂಜನೆ ೧ + ೧ = ೨ ಸಮೀಕರಣ ಅಲ್ಲ, ಅದಕ್ಕಿಂತ ಹೆಚ್ಚು! ಉದಾಹರಣೆಗೆ- ನಮಗೆ ಅಮ್ಜದ್ ಅಲಿ ಖಾನ್ ಸರೋದ್ ವಾದನವನ್ನು ಪ್ರತ್ಯೇಕವಾಗಿ ಕೇಳುವಾಗಿನ ಆನಂದ ಮತ್ತು ಲಾಲ್‌ಗುಡಿ ಜಿ ಜಯರಾಮನ್ ವಯಲಿನ್ ವಾದನವನ್ನು ಪ್ರತ್ಯೇಕವಾಗಿ ಕೇಳಿದಾಗಿನ ಆನಂದ-ಇವೆರಡನ್ನೂ ಕೂಡಿಸಿದರೆ ಮೊತ್ತ ಎಷ್ಟಾಗುತ್ತದೋ ಅದಕ್ಕಿಂತ ಹೆಚ್ಚಿನ ಆನಂದ ಅವರಿಬ್ಬರ ಜುಗಲ್ ಬಂದಿ ಯನ್ನು ಸವಿಯುವುದರಲ್ಲಿ ಸಿಗುತ್ತದೆ.

ಇದೇನೂ ನನ್ನೊಬ್ಬನ ರಸಗ್ರಹಣ ಸೂಚ್ಯಂಕವಾಗಲೀ ಸಿದ್ಧಾಂತವಾಗಲೀ ಅಲ್ಲ. ಜುಗಲ್‌ಬಂದಿ- ಜೋಡಾಟ ಗಳಂ ಥವನ್ನು ಇಷ್ಟಪಡುವವರೆಲ್ಲ ಇದನ್ನು ಒಪ್ಪುತ್ತಾರೆ. ಯಾಕೀಗ ಜುಗಲ್ ಬಂದಿಗಳ ನೆನಪಾಯ್ತೆಂದರೆ ಕನ್ನಡ ಪುಸ್ತಕ ಪ್ರಪಂಚದಲ್ಲಿ ಒಂದು ವಿನೂತನ ಜುಗಲ್ ಬಂದಿ ನಮ್ಮೆಲ್ಲರ ರಸಾಸ್ವಾದನೆಗೆ ಇದೀಗ ಸಿದ್ಧವಾಗಿದೆ. ಕನ್ನಡದ ಇಬ್ಬರು ಪ್ರಸಿದ್ಧ ಹಾಸ್ಯಸಾಹಿತಿಗಳು – ಅದಕ್ಕಿಂತಲೂ ಸೂಕ್ತವಾಗಿ ಬಣ್ಣಿಸುವುದಾದರೆ ಪದಗಾರುಡಿಗ ‘ಪನ್‌ಡಿತರು’- ಸೇರಿ ಒಂದು ಜುಗಲ್‌ಬಂದಿ ಪುಸ್ತಕವನ್ನು ಬಿಡುಗಡೆ ಮಾಡುತ್ತಿದ್ದಾರೆ. ಅದರ ಹೆಸರು ‘ಡುಂಡಿರಾಮ್ಸ್ ಲಿಮರಿಕ್ಸ್’ ಎಂದು.

ಖಟ್ಟಾ- ಮೀಠಾ ಸಿಹಿ ಹುಳಿ ಖಾರ ಹದವಾಗಿ ಬೆರೆತ ‘ಹಲ್ದೀರಾಮ್ಸ್ ಮಿಕ್ಸ್’ ಇದ್ದಹಾಗೆ ಇದು ಡುಂಡಿರಾಮ್ಸ್ ಲಿಮರಿಕ್ಸ್. ಡುಂಡಿ ಅಂದರೆ ಎಚ್.ಡುಂಡಿರಾಜ್; ರಾಮ್ ಅಂದರೆ ಅಣಕು ರಾಮನಾಥ್. ಲಿಮರಿಕ್ಸ್ ಅಂದರೆ? ಡುಂಡಿರಾಜರ ಭಾಷೆಯಲ್ಲೇ ಹೇಳುವುದಾದರೆ ‘ಪಂಚ್ ’ಪದಿಗಳು. ನಿಜಾರ್ಥದಲ್ಲೂ ಇವು ಪಂಚಪದಿ ಗಳೇ. ಐದು ಸಾಲುಗಳ ಹನಿಗವನಗಳು. ಮಾಮೂಲಿ ಹನಿಗವನಗಳಲ್ಲ, ಇವುಗಳ ವೈಶಿಷ್ಟ್ಯವೇನೆಂದು ಆಮೇಲೆ ವಿವರಿಸುತ್ತೇನೆ. ಆದರೆ ಮೇಲೆ ಹೇಳಿದ ರಸಗ್ರಹಣ ಸೂಚ್ಯಂಕ ಈ ಪುಸ್ತಕಕ್ಕೂ ಬಿಲ್‌ಕುಲ್ ಅನ್ವಯ. ಡುಂಡಿರಾಜರ ಹನಿ ಖಜಾನೆಯಂಥ ಸಂಕಲನವನ್ನು ಓದುವಾಗ ನಿಮಗಾಗ ಬಹುದಾದ ಆನಂದ,
ರಾಮನಾಥರ ಅಣಕವಾಡುಗಳನ್ನು ಕಚಗುಳಿ ಲೇಖನಗಳನ್ನು ಓದುವಾಗ ಸಿಗುವ ಆನಂದ-ಇವೆರಡನ್ನು ಕೂಡಿದರೆ ಸಿಗುವ ಮೊತ್ತಕ್ಕಿಂತ ಹೆಚ್ಚು ಆನಂದ ಈ ಡಬಲ್ ಧಮಾಕಾದಲ್ಲಿದೆ.

ಅಂದ ಹಾಗೆ ಪುಸ್ತಕದ ವಿಧ್ಯುಕ್ತ ಬಿಡುಗಡೆ ಬೆಂಗಳೂರಿನಲ್ಲಿ ಮುಂದಿನ ಶನಿವಾರ ಅ.೯ರಂದು ನಡೆಯಲಿದೆಯಂತೆ. ಆದರೆ ಲೋಕಾರ್ಪಣೆಗೂ ಮೊದಲೇ ಪುಸ್ತಕದ ‘ಮೃದುಪ್ರತಿ’ಯ ಮೇಲೆ ಕಣ್ಣಾಡಿಸಿದ ಭಾಗ್ಯಶಾಲಿ ನಾನಾದ್ದರಿಂದ, ನನಗಾದ ಆನಂದವನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ‘ಡುಂಡಿರಾಮ್ಸ್ ಲಿಮರಿಕ್ಸ್’ ಒಟ್ಟು ಸುಮಾರು ೧೬೦ ಪುಟಗಳ ಪುಸ್ತಕ. ಅಂಥದೇನೂ ದಪ್ಪದ್ದಲ್ಲ, ತೂಕದ್ದೂ ಅಲ್ಲ. ಆದರೆ ಕೊಂಡು ಓದಿ ಆದಮೇಲೆ ‘ತೂಕಕ್ಕೆ ಹಾಕುವಂಥದ್ದು’
ಖಂಡಿತ ಅಲ್ಲ! ಮನಸ್ಸನ್ನು ಹಗುರಗೊಳಿಸಲು ನೀವು ಆಗೊಮ್ಮೆ ಈಗೊಮ್ಮೆ ಈ ಹಗುರ ಪುಸ್ತಕದ ಒಂದೆರಡು ಪುಟಗಳನ್ನು ತಿರುವಿದರೂ ಸಾಕು, ನಿಮಗೆ ಸಾಕಷ್ಟು ಪ್ರಯೋಜನವಾಗುತ್ತದೆ.

ಪುಸ್ತಕದ ಬೆನ್ನುಡಿಯಲ್ಲಿ ಅಶೋಕ ಹಂದಿಗೋಳ (ಕ್ಯಾಲಿಫೋರ್ನಿಯಾನಿವಾಸಿ ಅಮೆರಿಕನ್ನಡಿಗ) ಬರೆದಿರುವಂತೆ ‘ಇಲ್ಲಿರುವ ಪಂಚಪದಿಗಳ ವಿಷಯಗಳ ಹರಹು ಬಲು ವಿಸ್ತಾರವಾದುದು. ದಿನನಿತ್ಯದ ಜನಜೀವನ, ನೋವು ನಲಿವು, ರಾಜಕೀಯ, ನೈತಿಕತೆ, ವಿಷಾದ, ಚಟ, ಪ್ರೇಮ, ಲೌಕಿಕ- ಪಾರಮಾರ್ಥಿಕ, ಪ್ರಸ್ತುತ ವಿದ್ಯಮಾನಗಳು… ಎಲ್ಲವೂ ಇವೆ. ಹೆಚ್ಚಾಗಿ ತಿಳಿಹಾಸ್ಯ, ವಿಡಂಬನೆ ಎದ್ದು ಕಂಡರೂ ಹಿತನುಡಿಗಳು, ಸರಿ-ತಪ್ಪುಗಳನ್ನು ಎತ್ತಿ ತೋರಿಸುವ, ನಮ್ಮ  ನಡವಳಿಕೆ ಯನ್ನು ತಿದ್ದಿಕೊಳ್ಳುವ ಕಿವಿಮಾತುಗಳೂ ಉಂಟು. ಒಟ್ಟಿನಲ್ಲಿ ಹೇಳುವುದಾದರೆ ನವಿರಾದ ಹಾಸ್ಯದ ಹೊನಲನ್ನು ಹರಿಸಬಲ್ಲ ಈ ಸಂಗ್ರಹ ಎಲ್ಲ ತರಹದ ಓದುಗ ರನ್ನು ಹಲವಾರು ಆಯಾಮಗಳಲ್ಲಿ ಹಿಡಿದಿಡಬಲ್ಲದು, ರಂಜಿಸಬಲ್ಲದು.’

ಈ ಪುಸ್ತಕಕ್ಕೆ ನಿಜಾರ್ಥದ ‘ತೂಕ’ ಬಂದಿದೆಯಾದರೆ ಅದು ಬಿ.ಜನಾರ್ದನ ಭಟ್ ಅವರು ಬರೆದ ಸುದೀರ್ಘ ಮುನ್ನುಡಿಯಿಂದ! ಏಕೆಂದರೆ ೧೬೦ ಪುಟಗಳ ಪುಸ್ತಕದಲ್ಲಿ ೨೦ ಪುಟಗಳಷ್ಟು ಮುನ್ನುಡಿಯೇ ಇದೆ! ಆದರೆ ಯಾವುದೇ ಕಾರಣಕ್ಕೂ ಮುನ್ನುಡಿ ಓದದೆ ಮುಂದಡಿಯಿಡಬೇಡಿ. ‘ಮುನ್ನುಡಿ ಅಂದರೆ ಹೀಗಿರಬೇಕು’ ಎಂದು ಯಾರೇ ಆದರೂ ಶಿಫಾರಸು ಮಾಡು ವಂತೆ ಅದ್ಭುತವಾಗಿ ಬರೆದಿದ್ದಾರೆ ಜನಾರ್ದನ ಭಟ್ಟರು. ‘ಹೊಸತೇ ಒಂದು ಪ್ರಕಾರದ ರಚನೆಗಳನ್ನು ಓದುವಾಗ ಅಥವಾ ನಮಗೆ ಹೊಸದಾಗಿದ್ದರೂ ವಿದೇಶದಲ್ಲಿ ಒಂದು ಪರಂಪರೆ ಯಿರುವ ಪ್ರಕಾರದ ರಚನೆಗಳನ್ನು ಓದುವಾಗ, ಅದರ ರೀತಿ, ನೀತಿ, ಚೌಕಟ್ಟು, ಚರಿತ್ರೆಗಳನ್ನು ಸಂಕ್ಷಿಪ್ತವಾಗಿಯಾದರೂ ಪರಿಚಯ ಮಾಡಿಕೊಂಡು ಓದಿದರೆ ಅದರಲ್ಲಿ ಸೊಗಸು ಹೆಚ್ಚು’ ಎಂದಿರುವುದು, ಅದಕ್ಕೆ ತಕ್ಕಂತೆ ‘ಲಿಮರಿಕ್ಸ್’ ಎಂಬ ಈ ಹೊಸತಾದ, ಕನ್ನಡದಲ್ಲಿ ಅಪರೂಪ ಎನ್ನಬಹುದಾದ, ಪ್ರಕಾರವನ್ನು ಎಳೆ ಎಳೆಯಾಗಿ ಬಿಡಿಸಿ ಸೋದಾಹರಣ ವಿವರಿಸಿ ಓದುಗರನ್ನು ಕನ್ನಡದ ಲಿಮರಿಕ್ಸ್ ಸವಿಯಲು ಅಣಿಗೊಳಿಸಿರುವುದು ನಿಜಕ್ಕೂ ಮೆಚ್ಚ ಬೇಕಾದ್ದು.

ಎಲ್ಲಿಯವರೆಗೆಂದರೆ ಲಿಮರಿಕ್ಸ್ ಎಂಬ ಪದ್ಯ ಪ್ರಕಾರದ ಬಗೆಗೆ ನಿಮಗೀಗ ಒಂದು ಸ್ಥೂಲ ಇಂಟ್ರೊ ಕೊಡಲಿಕ್ಕೂ ನಾನಿಲ್ಲಿ ಜನಾರ್ದನ ಭಟ್ಟರ ಮುನ್ನುಡಿಯಿಂದಲೇ ಕೆಲವು ಅಂಶಗಳನ್ನು ಎತ್ತಿಕೊಂಡಿದ್ದೇನೆ. ಲಿಮರಿಕ್ ಅಂದರೆ ಪದ್ಯರಚನೆಯ ಒಂದು ವಿಧ. ಐದು ಸಾಲಿನ ಹಾಸ್ಯ ಕವಿತೆ- ಪಂಚಪದಿ. ಬಹುಮಟ್ಟಿಗೆ ಅಸಂಗತವೇ
ಆಗಿರುವ ಲಿಮರಿಕ್‌ಗಳು ಓದುಗನ ಕಲ್ಪನೆಯನ್ನು ವಿಸ್ತರಿಸಿ ಮನಸ್ಸನ್ನು ಮುದಗೊಳಿಸಿ ನಗು ಉಕ್ಕಿಸುತ್ತವೆ. ಅವುಗಳಿಗೆ ನಾನ್‌ಸೆನ್ಸ್ ಹಾಸ್ಯಪ್ರಕಾರ ಎಂಬ ಹೆಸರಿದೆ. ಒಂಥರದಲ್ಲಿ ಲೇವಡಿಗೆ, ಸಮಾಜ ವಿಮರ್ಶೆಗೆ ಒದಗಿಬರುವ ಅಕ್ಷರ ವ್ಯಂಗ್ಯ ಚಿತ್ರಗಳು. ಇಂಗ್ಲಿಷಿನವರಿಗೆ ಅವುಗಳಲ್ಲಿ ರುಚಿ ಜಾಸ್ತಿ.

ನಾವು ಸುಭಾಷಿತಗಳನ್ನು ಬಳಸುವಂತೆ ಇಂಗ್ಲಿಷರು ಲಿಮರಿಕ್‌ಗಳನ್ನು ಬಳಸುತ್ತಾರೆ. ಭಾಷಣಗಳಿಗೆ, ಉಪನ್ಯಾಸಗಳಿಗೆ ಮೆರುಗು ತಂದುಕೊಳ್ಳುತ್ತಾರೆ. ಹಾಗಂತ ಯಾವೊಂದೂ ಘನಗಂಭೀರ ಅಲ್ಲವೇ ಅಲ್ಲ. ಸಭ್ಯತೆಯ ಎಲ್ಲೆ ದಾಟಿ ಪೋಲಿ ಅಶ್ಲೀಲ ಎನಿಸುವಂಥವೂ ಬೇಕಷ್ಟಿವೆ. ಶೇಕ್ಸ್‌ಪಿಯರ್‌ನ ನಾಟಕಗಳಲ್ಲೂ ಕೆಲ ಪಾತ್ರ ಗಳು ಲಿಮರಿಕ್‌ಗಳನ್ನಾಡಿದ್ದಿದೆ. ಅಷ್ಟಾದರೂ ೧೯ನೆಯ ಶತಮಾನದ ಕೊನೆಯವರೆಗೂ ಈ ಪದ್ಯಪ್ರಕಾರಕ್ಕೆ ಲಿಮರಿಕ್ ಎಂಬ ಹೆಸರೇನೂ ಇರಲಿಲ್ಲ. ಲಿಮರಿಕ್ ಎಂದರೆ ಐರ್‌ಲ್ಯಾಂಡ್ ದೇಶದ ಒಂದು ಪಟ್ಟಣ. ‘ವೋಂಟ್ ಯೂಕಮ್ ಟು ಲಿಮರಿಕ್…’ (ಲಿಮರಿಕ್‌ಗೆ ಬರೋಲ್ವೇನೇ…) ಅಂತ ಹೈದನೊಬ್ಬ ಹೆಣ್ಣನ್ನು ಕರೆಯುವ ಪ್ರಖ್ಯಾತ ಇಂಗ್ಲಿಷ್ ಪದ್ಯ, ಅದಕ್ಕೊಂದು ಜನಪ್ರಿಯ ಟ್ಯೂನ್ ಇತ್ತಂತೆ.

ಒಮ್ಮೆ ಇಂಗ್ಲಿಷ್ ಪತ್ರಿಕೆಯೊಂದು ಪಂಚಪದಿಗಳನ್ನು ಪ್ರಕಟಿಸುವಾಗ ಇವುಗಳನ್ನು ‘ವೋಂಟ್ ಯೂಕಮ್ ಟು ಲಿಮರಿಕ್’ ಧಾಟಿಯಲ್ಲಿ ಗುನುಗ ಬಹುದು ಎಂದು ಓದುಗರಿಗೆ ಸೂಚನೆ ಕೊಟ್ಟಿತ್ತು. ಆಮೇಲೆ ಅಂಥ ಪಂಚಪದಿ ಪದ್ಯ ಪ್ರಕಾರಕ್ಕೇ ಲಿಮರಿಕ್ ಎಂಬ ಹೆಸರಾಯ್ತು! ಲಿಮರಿಕ್ ಪದ್ಯದಲ್ಲಿ ಒಟ್ಟು ಐದುಸಾಲುಗಳು. ೧ನೆಯ, ೨ನೆಯ, ಮತ್ತು ೫ನೆಯ ಸಾಲುಗಳದು ಒಂದು ಪ್ರಾಸ. ಈ ಮೂರು ಸಾಲುಗಳು ಸುಮಾರು ಏಳರಿಂದ ಹತ್ತು ಸಿಲೆಬಲ್ ಗಳಷ್ಟು ಉದ್ದ. (ಇಂಗ್ಲಿಷ್‌ನಲ್ಲಿ ನಮ್ಮಂತೆ ಅಕ್ಷರ ಗಣ ಮಾತ್ರಾಗಣಗಳೆಲ್ಲ ಇಲ್ಲ. ಉಚ್ಚಾರದ ಯುನಿಟ್ ಲೆಕ್ಕದಲ್ಲಿ ಸಿಲೆಬಲ್ ಎಂಬ ಪ್ರಮಾಣ).

೩ನೆಯ ಮತ್ತು ೪ನೆಯ ಸಾಲುಗಳದು ಇನ್ನೊಂದು ಪ್ರಾಸ. ಇವು ಸುಮಾರು ಐದರಿಂದ ಏಳು ಸಿಲೆಬಲ್‌ಗಳಷ್ಟೇ ಉದ್ದ. ಕನ್ನಡದ ಸಂದರ್ಭದಲ್ಲಾದರೆ, ಪಂಚಪದಿಯ ೧ನೆಯ, ೨ನೆಯ, ಮತ್ತು ೫ನೆಯ ಸಾಲುಗಳು ಮೂರು ಮಾತ್ರೆಯ ಮೂರು ಗಣಗಳಿರುವ ದೊಡ್ಡ ಸಾಲುಗಳು. ೩ನೆಯ ಮತ್ತು ೪ನೆಯ ಸಾಲುಗಳು ಮೂರು ಮಾತ್ರೆಯ ಎರಡೇ ಗಣಗಳಿರುವ ಚಿಕ್ಕಸಾಲುಗಳು. ಈ ಲೆಕ್ಕಾಚಾರ ಒಂದು ಥೋರ ಮಟ್ಟಿನ ಅಂದಾಜು ಅಷ್ಟೇ. ಗುರು-ಲಘು ಪ್ರಸ್ತಾರ ಹಾಕಿದಾಗ ಇರಲೇ ಬೇಕಾದ ಮಾತ್ರೆಗಳ ಸಂಖ್ಯೆ ಅಥವಾ ಅಕ್ಷರಗಳ ಸಂಖ್ಯೆಯ ಕಟ್ಟುನಿಟ್ಟು ಲಿಮರಿಕ್ ಗಳಿಗಿಲ್ಲ. ಎಷ್ಟೆಂದರೂ ಅವು ಹಾಸ್ಯದ ಸರಕು. ಸಲೀಸಾಗಿ
ಉಚ್ಚರಿಸಲಿಕ್ಕೆ ಬರಬೇಕು, ಹಿತವಾದೊಂದು ಲಯ ಇರಬೇಕು ಅಷ್ಟೇ.

ಲಿಮರಿಕ್‌ನ ಇನ್ನೊಂದು ಮುಖ್ಯ ಲಕ್ಷಣವೆಂದರೆ ಕಥೆ ಹೇಳಿದಂತೆ ಇರಬೇಕು- ಪ್ರಾರಂಭದ ಎರಡು ಸಾಲುಗಳಲ್ಲಿ ಹಾಸ್ಯ ಕಥಾನಕದ ನಾಯಕ/ಕಿ ಯಾವ ಊರಿನವನು/ಳು ಎನ್ನುವುದನ್ನೂ, ಅವರ ಹೆಸರನ್ನೂ, ಸಂಕ್ಷಿಪ್ತ ಪರಿಚಯ (ಗುಣ ವಿಶೇಷಣ)ವನ್ನೂ ಮಾಡಿಕೊಡಬೇಕು. ಮೂರು ಮತ್ತು ನಾಲ್ಕನೆಯ ಸಾಲುಗಳಲ್ಲಿ ಒಂದು ಆಸಕ್ತಿಕರ ಘಟನೆಯನ್ನು ಸ್ವಾರಸ್ಯಕರವಾಗಿ ಹೇಳಬೇಕು. ಕೊನೆಯ ಸಾಲಿನಲ್ಲಿ ಅದರ ಪರಿಣಾಮವನ್ನು ಹೇಳಿ ನಗು ಉಕ್ಕುವಂತೆ ಮಾಡಬೇಕು.

ಅಸಂಗತವಿರಲಿ ಆಶ್ಚರ್ಯ ಹುಟ್ಟಿಸುವ ರೀತಿಯಲ್ಲಿರಲಿ ಅಂತೂ ಪಂಚಮ ಸಾಲಿನಲ್ಲಿ ಪಂಚ್ ಇರಲೇಬೇಕು. ಐದೇ ಐದು ಸಾಲುಗಳಲ್ಲಿ ಒಂದಿಡೀ ಹಾಸ್ಯ ಪ್ರಸಂಗವನ್ನು ರಸವತ್ತಾಗಿ, ಪ್ರಾಸ ಬದ್ಧವಾಗಿ, ಲಯಬದ್ಧವಾಗಿ ಬಣ್ಣಿಸುವುದು ಲಿಮರಿಕ್‌ನ ತಾಕತ್ತು. ಇಂಗ್ಲಿಷ್‌ನಲ್ಲಿ ಲಿಮರಿಕ್‌ಗಳೆಲ್ಲ ‘ದೆರ್ ವಾಸ್ ಎನ್ ಓಲ್ಡ್
ಮ್ಯಾನ್…’ ಅಂತಲೋ, ‘ದೆರ್ ವಾಸ್ ಎ ಯಂಗ್ ಲೇಡಿ…’ ಅಂತಲೋ, ಕನ್ನಡದಲ್ಲಿ ನಾವು ಕಥೆ ಹೇಳುವಾಗ ‘ಒಂದಾನೊಂದು ಊರಿನಲ್ಲಿ ಒಬ್ಬ ಧನಿಕನಿದ್ದ…’ ಎಂದು ಶುರು ಮಾಡುತ್ತೇವಲ್ಲ, ಆ ರೀತಿಯಲ್ಲೇ ಶುರುವಾಗುತ್ತವೆ. ಇಂಗ್ಲಿಷ್‌ನಲ್ಲಿ ಲಿಮರಿಕ್ಕುಗಳಿಗೆ ಪ್ರಖ್ಯಾತಿ ತಂದುಕೊಟ್ಟ ಎಡ್ವರ್ಡ್ ಲಿಯರ್ ಸೇರಿದಂತೆ ರುಡ್ಯಾರ್ಡ್ ಕಿಪ್ಲಿಂಗ್, ಲೂಯಿಸ್ ಕಾರ್ರೆಲ್, ಜಾರ್ಜ್ ಬರ್ನಾರ್ಡ್ ಷಾ ಮುಂತಾಗಿ ಘಟಾನುಘಟಿಗಳೆಲ್ಲ ಬರೆದ ಲಿಮರಿಕ್ಸ್ ಈ ಚೌಕಟ್ಟಿನವೇ.

ಆದರೆ ಕನ್ನಡದಲ್ಲಿ ಲಿಮರಿಕ್‌ನ ಸಮಾಂತರ ರಚನೆಗಳೆಂದು ಪಂಚಪದಿಗಳನ್ನು ಬರೆದ ಜಿ.ಪಿ.ರಾಜರತ್ನಂ, ವಿ.ಜಿ.ಭಟ್ಟ, ಅಕಬರ ಆಲಿ, ಶ್ರೀನಿವಾಸ ತೋಪಖಾನೆ, ಎಚ್.ಎಸ್.ಬಿಳಿಗಿರಿ, ವೈಎನ್‌ಕೆ ಮುಂತಾದವರು ಇಂಗ್ಲಿಷ್‌ನ ಚೌಕಟ್ಟನ್ನೇ ಪಾಲಿಸಿದ್ದಾರೆಂದೇನಿಲ್ಲ. ಛಂದಸ್ಸಿನಲ್ಲೂ ಇಂತಿಷ್ಟೇ ಮಾತ್ರೆಗಳು ಗಣಗಳು ಎಂಬ ಲೆಕ್ಕಾಚಾರಕ್ಕೆ ಜೋತು ಬಿದ್ದಿಲ್ಲ. ಆದರೆ ೧, ೨, ಮತ್ತು ೫ನೆಯ ಸಾಲುಗಳದು ಒಂದು ರೀತಿಯ ಪ್ರಾಸ ಮತ್ತು ಉದ್ದ; ೩ ಮತ್ತು ೪ ನೆಯ ಸಾಲುಗಳದು ಇನ್ನೊಂದು ರೀತಿಯ ಪ್ರಾಸ ಮತ್ತು ಉದ್ದ-ಇದನ್ನು ಇಂಗ್ಲಿಷ್ ನಲ್ಲಿದ್ದಂತೆಯೇ ಪಾಲಿಸಿದ್ದಾರೆ.

ವಿಭಿನ್ನ ಉದ್ದದ ಸಾಲುಗಳಿಂದಾಗಿ ಲಿಮರಿಕ್ ಅಚ್ಚಾದಾಗ ಮೊಂಡು ಕೊಂಡಿಯ ಚೇಳಿನಂತೆ ಕಾಣುತ್ತದೆ. ಚೇಳಿನಂತೆಯೇ ಕುಟುಕುತ್ತದೆ, ಆದರೆ ಕೊಂಡಿ ಮೊಂಡಾಗಿರುವುದರಿಂದ ಅಪಾಯವಿಲ್ಲ. ನನಗನಿಸು ತ್ತದೆ, ಲಿಮರಿಕ್‌ಅನ್ನು ಕಾಂಗರೂಗೂ ಹೋಲಿಸಬಹುದು! ಎರಡು ಹಿಂಗಾಲುಗಳು ಮತ್ತು ಅಷ್ಟೇ
ಬಲಶಾಲಿಯಾದ ಬಾಲ ಲಿಮರಿಕ್‌ನ ದೊಡ್ಡ ಮೂರುಸಾಲುಗಳಾದರೆ ಎರಡು ಪುಟ್ಟ ಮುಂಗಾಲುಗಳು ಲಿಮರಿಕ್‌ನ ಚಿಕ್ಕವೆರಡು ಸಾಲುಗಳು. ಡುಂಡಿರಾಜ್ ಮತ್ತು ರಾಮನಾಥ್ ಈ ಜುಗಲ್‌ಬಂದಿ ಕೂಸನ್ನು ಕನ್ಸೀವ್ ಮಾಡಿದ್ದು ‘ತಿಂಮಸೇನೆ’ ಹೆಸರಿನ ಒಂದು ವಾಟ್ಸಪ್ ಗ್ರೂಪ್ ನಲ್ಲಂತೆ.

ತಿಂಮಸೇನೆ ಎಂಬ ಹೆಸರೇ ತಮಾಷೆಯದು. ‘ತಿಂಗಳಿಗೊಂದು ಮನೆಯಲ್ಲಿ ಸೇರಲೊಂದು ನೆಪ’ ಅಂತ ಫುಲ್‌ಫಾರ್ಮು. ಲಘುಬಗೆ ಸಾಹಿತ್ಯಾಸಕ್ತರ ಗುಂಪು. ಅಲ್ಲಿ ಇದಕ್ಕೆ ವಿಶೇಷ ಕುಮ್ಮಕ್ಕು ಕೊಟ್ಟವರು ಜಿ.ಕೆ.ದೀಪಕ್ ಎಂಬ ಸದಸ್ಯ. ಆಮೇಲೆ ಡುಂಡಿ ಮತ್ತು ರಾಮ್ ಇಬ್ಬರೂ ಪಂಚ್ ಪದಿಗಳನ್ನು ‘ಬರ್ದು ಬರ್ದು ಬಿಸಾಡ್ಲಿಕ್ಕೆ’ (ಫ್ಯಾಕ್ಟರಿಯಲ್ಲಿ ಉತ್ಪಾದನೆಯ ಅಸೆಂಬ್ಲಿಲೈನ್ ಇದ್ದಂತೆ) ಶುರು ಮಾಡಿದರು. ಅಕ್ಷರಗಳೊಂದಿಗೆ ಸರಸವೆನ್ನುವುದು ಅಭಿಜಾತ ಕಲೆಯೇ ಆಗಿರುವ ಇವರಿಬ್ಬರಿಗೆ ಇದ್ಯಾವ ಸವಾಲು!

ನೋಡನೋಡುತ್ತಿದ್ದಂತೆ ಇಬ್ಬರದೂ ತಲಾ ೬೦ ಲಿಮರಿಕ್ಸ್ ಜಮೆಯಾದುವು. ಹದವಾದ ವಜನ ಇರುವ ಹತ್ತು ಡಜನ ಪಂಚ್‌ಪದಿಗಳು. ಒಂದೊಂದಕ್ಕೂ ಅತ್ಯಾಕರ್ಷಕ ಚಿಕ್ಕ-ಚೊಕ್ಕ ಶೀರ್ಷಿಕೆ. ವ್ಯಂಗ್ಯ ಚಿತ್ರಕಾರ ರಘುಪತಿ ಶೃಂಗೇರಿ ಪ್ರತಿಯೊಂದಕ್ಕೂ ಒಂದೊಂದು ರೇಖಾಚಿತ್ರ ಬರೆದು ಕೊಟ್ಟರು. ಅಂತೆಯೇ ಪುಸ್ತಕಕ್ಕೆ ಒಪ್ಪವಾದೊಂದು ಮುಖಪುಟ. ಹ್ಯೂಮರದ ಕೆಳಗೆ ಪೆನ್-ಧಾರಿಗಳಾಗಿ ಕುಳಿತ, ವಿಶಾಲ ಹಣೆಯುಳ್ಳ, ಡುಂಡಿ ಮತ್ತು ರಾಮ್. ಡುಂಡಿರಾಜರದು ಯಥಾ ಪ್ರಕಾರ ಸಂಕ್ಷಿಪ್ತ, ಸೂಕ್ತವಾದ ಕಡಿಮೆ ಶಬ್ದಗಳನ್ನು ಬಳಸಿದ ಮೊನಚಾದ ಹಾಸ್ಯ.

‘ಹಬ್ಬದ ದಿವಸ ಸುಬ್ಬ| ಹಾಕ್ಕೊಂಡ್ ಹೊಸಾ ಜುಬ್ಬ| ಕರೆದರೂ ಸೀದಾ| ನೋಡದೆ ಹೋದ| ಅಬ್ಬಾ ಅಷ್ಟೊಂದ್ ಕೊಬ್ಬಾ?’ ಓದುಗರು ಥಟ್ಟನೆ ಗುರುತಿಸಬಹುದಾದ ಟಿಪಿಕಲ್ ಡುಂಡಿರಾಜ್ ಪಂಚ್.

‘ನೆರೆಮನೆ ಹುಡುಗಿ ಚಂದ್ರಿ| ನೋಡಲು ತುಂಬಾ ಸುಂದ್ರಿ| ಎರಡೂ ಕಿವಿಗಳಿಗೆ| ಇಯರ್‌ಫೋನ್ ನಳಿಗೆ| ಕರೆದರೆ-ಆಂ? ಏನಂದ್ರಿ?’ ಇಂಥವುಗಳಲ್ಲಿ ಅವರು ಬಹುಮಟ್ಟಿಗೆ ಇಂಗ್ಲಿಷ್ ಲಿಮರಿಕ್‌ಗಳ ಚೌಕಟ್ಟನ್ನೇ ಪಾಲಿಸಿದ್ದಾರೆ. ಆದರೆ ಬೇರೆ ರೀತಿಯವೂ ಇವೆ: ‘ಇಪ್ಪತ್ತನಾಲ್ಕು ಗುಣಿಸು ಅದೇ ಗೋಳು| ಹೇಳಿದ್ದನ್ನೇ ಹೇಳು ಕೇಳಿದ್ದನ್ನೇ ಕೇಳು| ಫೋನಲ್ಲಿ ಮಿತ್ರನ ಬಳಿ ಹೀಗೆ| ಬೈಯುತ್ತಿದ್ದೆ ಟಿವಿ ಚಾನೆಲಿಗೆ| ಕದ್ದುಕೇಳಿದ ಪತ್ನಿ ಕೋಪಗೊಂಡಳು!’ ನನಗೆ ತುಂಬ ಇಷ್ಟವಾದ  ಇನ್ನೊಂದೆರಡು: ‘ಬಾಯ್ ಫ್ರೆಂಡ್ಸ್ ಜತೆ ಚಕ್ಕರು| ವೀಕೆಂಡ್ ಪಾರ್ಟಿ ಲಿಕ್ಕರು| ಮದುವೆಯಾದ ಮೇಲೆ| ಉರಿಯೋದಿಲ್ಲ ಒಲೆ| ಕೂಗೋದು ಹೇಗೆ ಕುಕ್ಕರು?’ ಮತ್ತು, ಇದರ ಪರಿಣಾಮವೋ ಎಂಬಂತೆ, ‘ಗಂಡ ಹೆಂಡಿರ ಜಗಳ ಈಗ| ಬೇಗ ವಾಸಿಯಾಗದ ರೋಗ| ಆನ್‌ಲೈನ್ ಫುಡ್ಡುಕೊಂಡು| ಇಬ್ಬರೂ ಪ್ರತ್ಯೇಕ ಉಂಡು|
ಬ್ರೇಕ್ ಬಳಿಕ ಪುನಃ ಕಾಳಗ!’ ಇಂತಹ ಸಂಸಾರಗಳು ಈ ಕಾಲದಲ್ಲಿ ಅಪರೂಪವೇನಲ್ಲ.

ರಾಮನಾಥರದು ಕೊಂಚ ಭಿನ್ನ ಶೈಲಿ. ಶಬ್ದಭಂಡಾರದ ಶ್ರೀಮಂತಿಕೆ. ಕೈಲಾಸಂ ಅಥವಾ ರತ್ನನ್ ಪದ್ಗೋಳ್‌ಅನ್ನು ನೆನಪಿ ಸುವ ಭಾಷೆಯ ಪ್ರಯೋಗ. ನಡುನಡುವೆ ಪುರಾಣ ಕಥೆಗಳ ಪಾತ್ರ-ಪ್ರತಿಮೆಗಳು. ‘ಕಾಡು ಮೇಡು ಸೀತೆಪಾಡು ಊರ್ಮಿಳೆ ಪಾಡೇ ವಾಸಿ| ಅಂತೇನಾದ್ರ ಹೇಳ್ಗೀಳೀರಿ ಸೀತೆಯ ಲೈಫೇ ಕ್ಲ್ಯಾಸಿ| ರಕ್ಷಣೆಗಿದ್ದ ರಾಮ| ಚಾಕರಿಗವನ ತಮ್ಮ| ಮೂರತ್ತೆಯರ ಅರಮನೆಗಿಂತ ವನವಾಸಾನೇ ವಾಸಿ|’ ಅಂತ ಒಂದು; ‘ಬಿಲ್ಲು ಮುರಿದನೊಬ್ಬ ಯಂತ್ರ ಮುರಿದ
ನೊಬ್ಬ|ತಲೆಗೆ ರಕ್ತ ಶಾಂಪುವನ್ನು ತಂದು ಕೊಟ್ಟನೊಬ್ಬ|ಎಂಥ ವೈಪರೀತ್ಯ| ಏಕೆ ಇಂಥ ಪೈತ್ಯ| ಹೀಗೆ ಪುರುಷರಾಡ ಬೇಕು ಅಂಗನೆಗದೆ ಹಬ್ಬ|’ ಅಂತ ಇನ್ನೊಂದು. ಲಿಮರಿಕ್ ಬಗ್ಗೆ ಸ್ವ-ಪ್ರಸ್ತಾವ ರೀತಿಯ ದ್ದೊಂದು: ‘ಕುಂತಿಯ ಮಕ್ಕಳ ಖ್ಯಾತಿಯ ಹಾಗೆ ಮೂರು ಸಾಲ್ಗಳು ಉದ್ದನೆ| ಮಾದ್ರಿಯ ಮಕ್ಕಳ ಕೀರ್ತಿಯ ಹಾಗೆ ಎರಡು ಸಾಲ್ಗಳು ಗಿಡ್ಡನೆ| ಪಾಂಡವರಿದ್ದರು ಪಂಚ| ಅಂತೆಯೆ ಲಿಮರಿಕ್ ಪ್ರಪಂಚ| ದೊಡ್ಡಸಾಲಿಗೂ ಚಿಕ್ಕಸಾಲಿಗೂ ವಿವಿಧ ಪ್ರಾಸದ ಜೋಡಣೆ|’

ಕೆಲವು ಪ್ರಚಲಿತ ವಿದ್ಯಮಾನಗಳವು: ‘ಪೋಣಿ ಸ್ಕೊಂಡುಸುಳ್ಳು ಪಳ್ಳು| ಮೇಲಷ್ಟ್ ದ್ವೇಷ ಸಿಟ್ಟುಗೋಳು| ಶೂನ್ಯಕಥೆ| ಭರ್ತಿ ವ್ಯಥೆ| ರೆಡಿಯಾಗ್ಹೋಯ್ತು ಸೀರಿಯಲ್ಲು|’ ಟಿವಿ ಧಾರಾವಾಹಿಗಳಿಗೆ ತಿವಿತ. ‘ದೂರಕ್ಕಿಂತ ಎತ್ತರ ಕೇರಿತು ಆ ಬ್ಯಾಟ್ಸ್‌ಮನ್ನಿನ ಹೊಡೆತ| ಬೌಂಡ್ರಿ ಫೀಲ್ಡರ್ ಹಿಡಿದೇ ಹಿಡಿವ ಈ ಕ್ಯಾಚೆಂಬುದು ಖಚಿತ| ಅರರೇ ಬಿಟ್ಟೇಬಿಟ್ಟ| ಬೌಂಡರಿ ಕೂಡ ಕೊಟ್ಟ| ಐಪಿಎಲ್ಲಿನ ಪಂದ್ಯಗಳೆಷ್ಟೋ ಜೂಜೆಂದೆಲ್ಲೆಡೆ ಮೊರೆತ’ ಮ್ಯಾಚ್ ಫಿಕ್ಸಿಂಗ್‌ಗೆ ಟಾಂಟ್.

‘ಕೋವಿಡ್ ಬಂದ ಕಾಲದಿಂದ ಮನೆಯಲ್ಲಿಯೆ ವಾಸ| ಮೂರೂ ಹೊತ್ತು ತಿಂದುದಾಯ್ತು ಭೋಜನವು ಸುಗ್ರಾಸ| ಲಾಕ್‌ಡೌನ್ ಮುಗಿದು| ಪ್ಯಾಂಟನು ತೆಗೆದು| ತೊಡಲು ಯತ್ನಿಸಿದರೆ ಒಪ್ಪುತ್ತಿಲ್ಲ ನನ್ನೀ ಹೊಟ್ಟೆಯ ವ್ಯಾಸ|’- ನಮ್ಮೆಲ್ಲರ ಪರಿಸ್ಥಿತಿಯೇ!

ಇಲ್ಲಿರುವ ಪಂಚ್‌ಪದಿಗಳನ್ನು ಓದಿ ಮನಸಾರೆ ನಕ್ಕು ಆನಂದಿಸುವುದು ಒಂದು ಆಯಾಮವಾದರೆ, ನಾನೂ ಲಿಮರಿಕ್ ಬರೆಯಲು ಯತ್ನಿಸಬಹುದಲ್ಲ ಎಂದು
ಓದುಗರಿಗೂ ಉಮೇದು ಬರುವುದು ಇನ್ನೊಂದು ಆಯಾಮ. ನನಗೆ ಆ ಥರ ಬಂದ ಉಮೇದಿನಿಂದ ‘ಡುಂಡಿರಾಮ್ಸ್ ಲಿಮರಿಕ್ಸ್’ ಪುಸ್ತಕದ ವಿಮರ್ಶೆಯದೇ ಒಂದು ಪಂಚ್‌ಪದಿ ಆಯ್ತು, ಹೀಗೆ: ಪನ್‌ಡಿತರಿಬ್ರು ಬರೆದ್ರು ಹತ್ತು ಡಜನ್ ಲಿಮರಿಕ್ಕು ಖಂಡಿತ ಹತ್ತುವುದು ಓದೋರ್ ಮಂಡೆಗೆ ಕಿಕ್ಕು ಬಯಲಂತೆ ವಿಶಾಲ ಹಣೆ
ಪ್ರತಿಭೆಗಂತೂ ಇಲ್ಲ ಎಣೆ ಹೊಟ್ಟೆಹುಣ್ಣಾದೀತು ಜೋಕೇ ನಕ್ಕು ನಕ್ಕು