Monday, 16th September 2024

ಪಂಚಮಸಾಲಿ- ಮೀಸಲಾತಿ ಹೋರಾಟ: ಒಂದು ಅವಲೋಕನ

ಚರ್ಚಾವೇದಿಕೆ

ಸತೀಶ ಕೆ.ಪಾಟೀಲ

ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದ ಕಾವು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ರಾಜ್ಯದ ಲಿಂಗಾಯತರಲ್ಲಿಯೇ ಪ್ರಬಲ ಎನಿಸಿಕೊಂಡಿದ್ದು ಸುಮಾರು ೧ ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ರಾಜ್ಯದ ಸುಮಾರು ೭೫ ವಿಧಾನ ಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರವಹಿಸಬಲ್ಲ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟದ ಒಂದು ಅವಲೋಕನ ಅಗತ್ಯ ಮತ್ತು ಅನಿವಾರ್ಯ ಎನಿಸುತ್ತದೆ.

ಈ ಹೋರಾಟ ಅಗತ್ಯವಿದೆಯೇ? ಈ ಸಮುದಾಯ ನಿಜವಾಗಲೂ ಹಿಂದುಳಿದಿದೆಯೇ? ಪಂಚಮಸಾಲಿಗಳನ್ನು ‘೨ಎ’ ಪ್ರವರ್ಗಕ್ಕೆ ಸೇರಿಸಿದರೆ ಆಗುವ ಲಾಭಗಳೇನು? ಅವರ ಬೇಡಿಕೆ ನ್ಯಾಯಯುತವೇ ಮತ್ತು ಅವರಿಗೆ ಇಲ್ಲಿಯವರೆಗೆ ಅನ್ಯಾಯವಾಗಿದೆಯೇ? ಇದಕ್ಕೆ ಮೀಸಲಾತಿ ಪರಿಹಾರವೇ? ಇದರಲ್ಲಿ ಸರಕಾರದ ಪಾತ್ರವೇನು? ಈ ಹೋರಾಟ ಒಂದು ಹಂತಕ್ಕೆ ಸಫಲವಾಗಿದೆಯೇ? ಎಂಬ ಪ್ರಶ್ನೆಗಳು ಇಲ್ಲಿ ಹುಟ್ಟಿಕೊಳ್ಳುತ್ತವೆ.

ಇವಕ್ಕೆ ಉತ್ತರಿಸುವ ಮೊದಲು, ಮೀಸಲಾತಿಗೆ ಸಂಬಂಧಿಸಿ ಸಂವಿಧಾನದಲ್ಲಿರುವ ಅವಕಾಶಗಳು ಮತ್ತು ರಾಜ್ಯದಲ್ಲಿನ ಮೀಸಲಾತಿ ಇತಿಹಾಸವನ್ನು ಒಮ್ಮೆ ಅವಲೋಕಿಸ ಬೇಕು. ಮೀಸಲಾತಿಗೆ ಸಂಬಂಧಿಸಿ ಸಂವಿಧಾನದ ನಾಲ್ಕನೆಯ ಭಾಗದಲ್ಲಿನ ೪೬ನೇ ವಿಧಿ ಅನ್ವಯ, ಸಮಾಜದ ದುರ್ಬಲ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಬೇಕು ಎಂದು ಹೇಳಲಾಗಿದೆ. ಹಾಗೆಯೇ ವಿಧಿಯ 15(4)ನೇ ಉಪವಿಧಿಯ ಪ್ರಕಾರ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪ್ರಜೆಗಳಿಗೆ ರಾಜ್ಯವು ವಿಶೇಷ ನಿಯಮಗಳನ್ನು ರೂಪಿಸಬಹುದೆಂದು ಹೇಳಲಾಗಿದೆ.

ಇದಕ್ಕೆ ಪೂರಕವಾಗಿ 16ನೇ ವಿಧಿಯಲ್ಲಿರುವ ೧ ಮತ್ತು ೨ನೆಯ ಉಪವಿಧಿಗಳು ಕೂಡ ರಾಜ್ಯಕ್ಕೆ ಈ ವಿಷಯದಲ್ಲಿ ಅಧಿಕಾರ ನೀಡಿವೆ. ಸಂವಿಧಾನದ ಈ ಆಶಯದಂತೆ ಪಂಚಮಸಾಲಿ ಜನಾಂಗಕ್ಕೆ ನ್ಯಾಯ ಸಿಗಬೇಕಿದೆ. ಈ ನಿಟ್ಟಿನಲ್ಲಿ ‘೨ಎ’ ಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರಕಾರಕ್ಕೆ ಇರುವುದರಿಂದ, ತಮ್ಮ ಬಹುದಿನಗಳ ಬೇಡಿಕೆಗೆ ಅದು ಸ್ಪಂದಿಸಬೇಕು ಎಂಬುದು
ಬಹು ಸಂಖ್ಯಾತ ಪಂಚಮಸಾಲಿಗಳ ಆಗ್ರಹವಾಗಿದೆ.

ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಸಮಾಜಗಳಿಗೆ ನ್ಯಾಯ ಒದಗಿಸಲು ರಾಜ್ಯ ಸರಕಾರವು ಕಾಲಕಾಲಕ್ಕೆ ಅನೇಕ ಆಯೋಗಗಳನ್ನು ನೇಮಿಸಿದೆ. 1960ರ ನಾಗನಗೌಡ ಸಮಿತಿ, 1975ರ ಹಾವನೂರ ಆಯೋಗ, 1983ರ ಟಿ. ವೆಂಕಟಸ್ವಾಮಿ ಆಯೋಗ, 1988ರ ಒ. ಚಿನ್ನಪ್ಪರೆಡ್ಡಿ ಆಯೋಗಗಳು ಇದಕ್ಕೆ ಉದಾಹರಣೆಗಳು. ಹಾವನೂರ ಆಯೋಗವು ಲಿಂಗಾಯತರನ್ನು
ಹಿಂದುಳಿದ ವರ್ಗವೆಂದು ಪರಿಗಣಿಸಲಿಲ್ಲ, ವೆಂಕಟಸ್ವಾಮಿ ಆಯೋಗವೂ ಲಿಂಗಾಯತರನ್ನು ಹಿಂದುಳಿದವರ ಪಟ್ಟಿಗೆ ಸೇರಿಸ ಲಿಲ್ಲ. ಆಗ ಹೊಮ್ಮಿದ ಜನರ ತೀವ್ರ ಪ್ರತಿಭಟನೆಯಿಂದಾಗಿ ಸರಕಾರವು ೧೯೮೮ರ ಅಕ್ಟೋಬರ್‌ನಲ್ಲಿ ಒಕ್ಕಲಿಗರು ಮತ್ತು ಲಿಂಗಾಯತರನ್ನು ಮೀಸಲಾತಿ ಪಟ್ಟಿಗೆ ಸೇರಿಸಿತು.

ಆಗಲೂ ಪಂಚಮಸಾಲಿಗಳನ್ನು ಹಿಂದುಳಿದ ಜನಾಂಗವೆಂದು ಗುರುತಿಸಲಿಲ್ಲ. ನಂತರದ ಚಿನ್ನಪ್ಪರೆಡ್ಡಿ ಆಯೋಗ, ೧೯೯೪ರಲ್ಲಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಸಚಿವ ಎಂ.ಪಿ. ಪ್ರಕಾಶರ ನೇತೃತ್ವದಲ್ಲಿ ರೂಪುಗೊಂಡ ಸಂಪುಟ ಉಪಸಮಿತಿಯೂ ಇಂಥದೊಂದು ಪರಿಗಣನೆ ನೀಡದಿದ್ದುದು ದುರಂತ. ಹೀಗೆ ಪಂಚಮಸಾಲಿಗಳನ್ನು ಐತಿಹಾಸಿಕವಾಗಿ ನಿರ್ಲಕ್ಷಿಸಿದ್ದು ಸ್ಪಷ್ಟ.

ಇದೇ ಘಟ್ಟದಲ್ಲಿ ಲಿಂಗಾಯತರ ಕೆಲ ಪಂಗಡಗಳನ್ನು ಹಿಂದುಳಿದ ವರ್ಗಗಳು ಎಂದು ಗುರುತಿಸಿ ಎಂ.ಪಿ. ಪ್ರಕಾಶರು ಶಿಫಾರಸು ಮಾಡಿದಾಗ, ಯಾವ ಪಂಚಮಸಾಲಿ ಜನಪ್ರತಿನಿಧಿಗಳೂ ಒತ್ತಡ ಹಾಕದಿದ್ದುದು ಈಗಿನ ಪರಿಸ್ಥಿತಿಗೆ ಕಾರಣವೆನ್ನಬಹುದು. ನಂತರ, 2008ರಲ್ಲಿ ಪಂಚಮಸಾಲಿಗಳನ್ನು ಹಿಂದುಳಿದ ವರ್ಗಗಳ ‘೩ಬಿ’ ಪಟ್ಟಿಗೆ ಸೇರಿಸಲಾಯಿತು. ನಂತರ ಬಂದ ಸಿ.ಎಂ. ಉದಾಸಿ ಸಮಿತಿ ವರದಿ ಸೇರಿ ಇಲ್ಲಿಯವರೆಗೆ ಪಂಚಮಸಾಲಿಗಳನ್ನು ಈ ವಿಷಯದಲ್ಲಿ ಕಡೆಗಣಿಸಿದ್ದು ಎದ್ದು ಕಾಣುತ್ತದೆ. ಈಗಲೂ
ಹಿಂದುಳಿದ ‘೩ಬಿ’ ಪಟ್ಟಿಯಲ್ಲಿರುವ ಪಂಚಮಸಾಲಿ ಜನಾಂಗದ ಕುಲಶಾಸೀಯ ಅಧ್ಯಯನ ಅಗತ್ಯವಿಲ್ಲ; ನೇರವಾಗಿ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಿ ರಾಜ್ಯಪತ್ರದಲ್ಲಿ ಆದೇಶ ಹೊರಡಿಸಿದರೆ ಸಾಕು. ಆದರೆ ಇತರೆ ವ್ಯಕ್ತಿಗಳು ಕೋರ್ಟಿಗೆ  ಹೋಗಬಾ ರದು ಎನ್ನುವ ಕಾರಣವಿದ್ದರೆ, ಹಿಂದುಳಿದ ವರ್ಗದ ಆಯೋಗವು ಅಧ್ಯಯನ ಮಾಡಿ ವರದಿ ಕೊಟ್ಟ ನಂತರ ಈ ಪಂಚಮಸಾಲಿ ಗಳಿಗೆ ಮೀಸಲಾತಿ ಘೋಷಿಸಬೇಕು.

ಆದರೆ ಇದೇ ಕಾರಣವಿಟ್ಟುಕೊಂಡು ವಿಳಂಬಮಾಡುವುದು ಸರಿಯಲ್ಲ. ಮೀಸಲಾತಿ ಕುರಿತಾದ ಪಂಚಮಸಾಲಿಗಳ ಕೂಗು
ಇಂದು ನಿನ್ನೆಯದಲ್ಲ, ಸುಮಾರು ವರ್ಷಗಳದ್ದು. ಆದರೀಗ ಅದು ಪ್ರಬಲ ದನಿಯಾಗಿ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಪಂಚಮಸಾಲಿಗಳ ಸಂಘಟನೆಗೆ ರಾಜ್ಯದಲ್ಲಿ ಜೀವ ತುಂಬಿದವರು ಹನುಮನಾಳ ಗುರುಗಳು. 1992ರಲ್ಲಿ ಅಂದಿನ ಸಿಎಂ ವೀರಪ್ಪ ಮೊಯ್ಲಿ ಅವರನ್ನು ಕೊಪ್ಪಳಕ್ಕೆ ಕರೆಸಿ ಸಂಘಟನೆಗೆ ಅವರು ಚಾಲನೆ ಕೊಟ್ಟರು.

ನಂತರ ಅನೇಕರು ಹೀಗೆ ಸಂಘಟನೆಗೆ ಶ್ರಮಿಸಿದ್ದಾರೆ. ೨೦೦೮ರಲ್ಲಿ, ಕೂಡಲಸಂಗಮ ಮತ್ತು ಹರಿಹರದಲ್ಲಿ ಪಂಚಮಸಾಲಿ ಜಗದ್ಗುರು ಪೀಠಗಳು ಸ್ಥಾಪನೆಯಾದವು. ರಾಜ್ಯದ ಲಿಂಗಾಯತರಲ್ಲಿಯೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಈ ಸಮಾಜವು ಮೊದಲಿನಿಂದಲೂ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದು, ಇದರ ಬಾಂಧವರು ಕೃಷಿಯನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ.

ಇವರಲ್ಲಿ ಬಡವರೇ ಹೆಚ್ಚಾಗಿದ್ದು ಸರಕಾರಿ ಸೌಲಭ್ಯಗಳಿಂದ ವಂಚಿತವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಎಸ್. ನಿಜಲಿಂಗಪ್ಪ, ಜೆ.ಎಚ್. ಪಟೇಲ್, ಪಿ.ಎಂ. ನಾಡಗೌಡ, ಬಿ.ಕೆ. ಗುಡದಿನ್ನಿ, ಬಿ. ಎಸ್. ಪಾಟೀಲ ಮನಗೂಳಿ, ಎಸ್.ಆರ್. ಕಾಶಪ್ಪನವರ ಸೇರಿದಂತೆ ಈ ಸಮಾಜವು ಅನೇಕ ನಾಯಕರನ್ನು ಕಂಡಿದೆ. ಈ ಜನಾಂಗದ ಪ್ರಮುಖ ನಾಯಕರು ಇವತ್ತಿಗೂ ಎಲ್ಲಾ ಪಕ್ಷಗಳಲ್ಲಿದ್ದರೂ, ಇದರ ಬಾಂಧವರಿಗೆ ಸಿಗಬೇಕಾದ ಸೌಲಭ್ಯಗಳು ಮಾತ್ರ ಸಿಗದೇ ಹೋಗಿದ್ದು ಅಚ್ಚರಿದಾಯಕ ಸಂಗತಿ. ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ನಿರ್ಲಕ್ಷ್ಯವೇ ಇದಕ್ಕೆ ಕಾರಣವೆನ್ನಬಹುದು.

ಪಂಚಮಸಾಲಿಗಳ ‘೨ಎ’ ಮೀಸಲಾತಿಯ ಬೇಡಿಕೆ ನ್ಯಾಯಯುತವಾಗಿದೆ, ಏಕೆಂದರೆ ಲಿಂಗಾಯತರಲ್ಲಿಯೇ ಸುಮಾರು 32 ಉಪಪಂಗಡಗಳು (ಉದಾಹರಣೆಗೆ: ಗಾಣಿಗ, ಬಣಜಿಗ, ನೇಕಾರ, ಮಾಲಗಾರ, ಕುಂಬಾರ ಮತ್ತಿತರರು) ಈ ಮೀಸಲಾತಿ ಪಡೆದು ಸಾಕಷ್ಟು ಪ್ರಯೋಜನವನ್ನು ದಕ್ಕಿಸಿಕೊಂಡಿದ್ದಾರೆ. ‘೨ಎ’ ಪಟ್ಟಿಗೆ ಸೇರ್ಪಡೆಯಿಂದಾಗಿ ಶಿಕ್ಷಣ, ಉದ್ಯೋಗದಲ್ಲಿ ಶೇ. 15ರಷ್ಟು ಮೀಸಲಾತಿ ಸಿಗುವುದರಿಂದ, ಬಡವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಸಮುದಾಯವನ್ನು ಈ ಪಟ್ಟಿಗೆ ಸೇರಿಸಬೇಕು ಎನ್ನುವ ಕೂಗು ನ್ಯಾಯಸಮ್ಮತವಾದುದು.

ಇಂಥ ಮೀಸಲಾತಿಯಿಲ್ಲದೆ ಪಂಚಮಸಾಲಿಗಳು ಹಲವು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಉದಾಹರಣೆಗೆ, ಕೆಎಎಸ್, ಪಿಎಸ್‌ಐ, ಪಿಡಿಒ, ಎಸ್‌ಡಿಎ, ಎಫ್ಡಿಎ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಿದರೂ ಪ್ರತಿಭಾವಂತ ಪಂಚಮಸಾಲಿ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುತ್ತಿಲ್ಲ. ಈ ಪರೀಕ್ಷೆಗಳಲ್ಲಿ ‘೨ಎ’ ಮೀಸಲಾತಿಯಲ್ಲಿ ಬರುವ ಅಭ್ಯರ್ಥಿಗಳಿಗಿಂತ 10-15 ಅಂಕಗಳನ್ನು ಹೆಚ್ಚಿಗೆ ಪಡೆದರೂ ಇವರು ಆಯ್ಕೆಯಾಗುತ್ತಿಲ್ಲ.

ಇನ್ನು ರಾಜಕೀಯ ಕ್ಷೇತ್ರಕ್ಕೆ ಬರುವುದಾದರೆ, ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ-ತಾಲೂಕು-ಜಿಲ್ಲಾ ಪಂಚಾಯತ್‌ಗಳಲ್ಲಿ ಹೆಚ್ಚಿನ ಅವಕಾಶ ಸಿಗದೆ ವಂಚಿತ ರಾಗುತ್ತಿರುವುದು ಕೂಡ ಪಂಚಮಸಾಲಿಗಳ ರಾಜಕೀಯ ಹಿನ್ನಡೆಗೆ ಕಾರಣವಾಗಿದೆ. ಈಗ ಶೇ. ೩ರಷ್ಟು ಮೀಸಲಾತಿ ಇರುವ ಪ್ರವರ್ಗ ‘೩ಬಿ’ಯಲ್ಲಿ ಪಂಚಮಸಾಲಿಗಳು ಇದ್ದು, ಶೇ. ೧೫ರಷ್ಟು ಮೀಸಲಾತಿ ಇರುವ ‘೨ಎ’ಗೆ ಸೇರುವಂತಾದರೆ ಅವರಿಗೆ ಹೆಚ್ಚಿನ ಅನುಕೂಲ ಸಿಗುತ್ತದೆ.

ಈ ಕಾರಣಕ್ಕಾಗಿಯೇ ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಬಸವ ಮೃತ್ಯುಂಜಯ ಸ್ವಾಮಿಗಳ ನೇತೃತ್ವ ದಲ್ಲಿ ಹೋರಾಟ ಪ್ರಾರಂಭವಾಗಿದ್ದು ಅದೀಗ ತೀವ್ರಸ್ವರೂಪವನ್ನು ಪಡೆದುಕೊಂಡಿದೆ. ಇತರೆ ಲಿಂಗಾಯತ ಸಮುದಾಯದ ಮಠಾಽಶರೂ ಬೆಂಬಲ ಕೊಟ್ಟಿದ್ದರಿಂದ ಈ ಹೋರಾಟಕ್ಕೆ ಆನೆಬಲ ಬಂದಂತಾಗಿದೆ. ಜತೆಗೆ ಜನಾಂಗದ ಉಭಯಪೀಠಗಳು ಈ ಹೋರಾಟದಲ್ಲಿ ಒಂದಾಗಿರುವುದು ಪಂಚಮಸಾಲಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಹರಿಹರ ಪೀಠದ ಇನ್ನೋರ್ವ ಜಗದ್ಗುರು ಶ್ರೀ ವಚನಾನಂದ ಶ್ರೀಗಳು ಈ ಹೋರಾಟಕ್ಕೆ ಕೈಜೋಡಿಸಿದ್ದರಿಂದಾಗಿ ಈ ಹೋರಾಟದಲ್ಲಿ ಒಮ್ಮತ ಮೂಡಿದೆ ಎಂಬ
ಸಂದೇಶ ರವಾನೆಯಾಗುವಂತಾಯಿತು.

ಸುಮಾರು 38 ದಿನಗಳವರೆಗೆ ನಡೆದ ೭೦೦ ಕಿ.ಮೀ.ಗೂ ಹೆಚ್ಚು ಅಂತರದ ಪಾದಯಾತ್ರೆ, ಅದಕ್ಕೆ ಸಿಕ್ಕ ಜನಬೆಂಬಲ  ಹೊಸ ದಾಖಲೆಗೆ ಕಾರಣವಾಯಿತು. ಬೆಂಗಳೂರಿನಲ್ಲಿ ನಡೆದ ಬೃಹತ್ ಐತಿಹಾಸಿಕ ಸಮಾವೇಶವೂ ಸರಕಾರದ ಕಣ್ಣು ತೆರೆಸುವಲ್ಲಿ
ಸಫಲವಾಗಿ, ಪಂಚಮಸಾಲಿಗಳು ಒಂದಾಗಿ ನಿಂತರೆ ಅವರಿಗೆ ಸರಕಾರವನ್ನೇ ಅಲುಗಾಡಿಸುವ ಶಕ್ತಿಯಿದೆ ಎಂಬ ಸಂದೇಶ ತನ್ಮೂಲಕ ಹೊಮ್ಮಿತು. ಪಂಚಮಸಾಲಿ ನಾಯಕರು ಈ ಸಮಾವೇಶದ ಮೂಲಕ ‘ಸಮಾಜಕ್ಕಾಗಿ ನಾವೆಲ್ಲರೂ ಒಂದೇ’ ಎನ್ನುವ ಘೋಷಣೆ ಮಾಡಿ ಜನರಲ್ಲಿ ಹುರುಪು ತುಂಬಿದರು; ಆದರೆ ಸಮಾವೇಶದ ನಂತರ ಭಿನ್ನಸ್ವರ ಕೇಳಿಬಂದಿದ್ದು ಮಾತ್ರ ಪಂಚಮ ಸಾಲಿಗಳ ನೋವಿಗೆ ಕಾರಣವಾಯಿತು.

ಬಹುದೊಡ್ಡ ಸಮಾಜವಾದ ಪಂಚಮಸಾಲಿಗಳು ‘೨ಎ’ ಪಟ್ಟಿಗೆ ಸೇರಿದರೆ ತಮಗೆ ಅವಕಾಶ ಕಡಿಮೆಯಾಗುತ್ತದೆ ಎಂಬುದು ಈ ಪಟ್ಟಿಯಲ್ಲಿರುವ ಇತರೆ ಸಮಾಜಗಳ ಆತಂಕವಾಗಿದೆ. ಹೀಗಾಗಿ ಬಹಿರಂಗವಾಗಿ ವಿರೋಧಿಸದಿದ್ದರೂ ಪಂಚಮಸಾಲಿಗಳಿಗೆ ೨ಎ ಮೀಸಲಾತಿ ಸಿಗದಂತೆ ಮಾಡುವ ಪ್ರಯತ್ನಗಳು ಸರಕಾರದ ಒಳಗೆ ವ್ಯವಸ್ಥಿತವಾಗಿ ನಡೆದಿವೆ. ಆದ್ದರಿಂದ, ಪಂಚಮಸಾಲಿ ಹೋರಾಟಗಾರರು ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇರಿಸಬೇಕಿದೆ.

ಒಟ್ಟಿನಲ್ಲಿ, ಪಂಚಮಸಾಲಿಗಳು ಈಗ ಎಚ್ಚೆತ್ತುಕೊಂಡಿದ್ದಾರೆ, ಸಂಘಟಿತರಾಗಿದ್ದಾರೆ. ಸರಕಾರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈಗಲಾದರೂ ಈ ಸಮಾಜದ ಬಹುದಿನಗಳ ಬೇಡಿಕೆಗೆ ಸ್ಪಂದಿಸಬೇಕು. ಏಕೆಂದರೆ, ಪಂಚಮಸಾಲಿಗಳ
ಬೆಂಬಲದಿಂದಾಗಿಯೇ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದ್ದು, ಜನಾಂಗದ 196 ಶಾಸಕರು ಆಡಳಿತ ಪಕ್ಷದಲ್ಲಿದ್ದಾರೆ. ರೈತರು, ಕೂಲಿಕಾರ್ಮಿಕರು ಮತ್ತು ಬಡವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ಪಂಚಮಸಾಲಿ ಸಮುದಾಯವು ಆರ್ಥಿಕ ವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವಂತಾಗಲು ಸರಕಾರವು ಶೀಘ್ರವಾಗಿ ಅದನ್ನು ‘2ಎ’ ಪ್ರವರ್ಗಕ್ಕೆ ಸೇರಿಸಬೇಕು ಎಂಬುದು ಒಂದು ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿರುವ ಪಂಚಮಸಾಲಿಗಳ ಆಶಯ ವಾಗಿದೆ.

Read E-Paper click here