Saturday, 27th July 2024

ಆಯ್ಕೆಯ ಸ್ವಾತಂತ್ರ‍್ಯಕ್ಕಿಂತ ಪಾಲಿಗೆ ಬಂದ ಪಂಚಾಮೃತವೇ ರುಚಿ !

ತಿಳಿರು ತೋರಣ

srivathsajoshi@yahoo.com

ತೃಪ್ತಿ-ಸಂತೋಷಗಳು ಹೆಚ್ಚುವುದು ಬಿಡಿ, ಮಾರುಕಟ್ಟೆಯಲ್ಲಿ ಆಯ್ಕೆಗಳು ಹೆಚ್ಚಾದಷ್ಟೂ ನಮ್ಮಲ್ಲಿ ಒಳಗೊಳಗೇ ಅತೃಪ್ತಿ ಅಸಮಾಧಾನ ಅಸೂಯೆಗಳು ಹೊಗೆ ಯಾಡುವುದೇ ಹೆಚ್ಚು. ಅಂಬಾಸೇಡರ್, ಫೀಯಟ್ ಇವೆರಡನ್ನು ಹೊರತುಪಡಿಸಿದರೆ ಜನಸಾಮಾನ್ಯರ ಕಾರು ಮಾರುತಿ-೮೦೦ ಮಾತ್ರ ಇದ್ದ ಕಾಲವೊಂದಿತ್ತು. ಬಹುಮಟ್ಟಿಗೆ ಸುಭಿಕ್ಷವಾಗಿಯೇ ಇತ್ತು. ಆಗ ಹೆಚ್ಚೆಂದರೆ ‘ಪಕ್ಕದ್ಮನೆಯವರತ್ರ ಕಾರು ಇದೆ, ನಾವಿನ್ನೂ ಬುಲಂದ್ ಭಾರತ್ ಕೀ ಬುಲಂದ್ ತಸ್ವೀರ್ ಹಮಾರಾ ಬಜಾಜ್ ಎನ್ನುತ್ತ ಸ್ಕೂಟರ್ ಮೇಲೆಯೇ ನಾಲ್ಕೂ ಜನ ಹೋಗುತ್ತಿದ್ದೇ.

ಅದೊಂದು ಎಳೆನೀರು ಮಾರುವವನು ತನ್ನ ಅಂಗಡಿಯಲ್ಲಿ ಇಟ್ಟುಕೊಂಡಿರುವ ಫಲಕ. ಬೆಂಗಳೂರು-ಮೈಸೂರು ಮಾರ್ಗದಲ್ಲಿ ಮದ್ದೂರಿನಲ್ಲಿ ಆತನ ಎಳೆನೀರು ಸ್ಟಾಲ್ ಅಥವಾ ತಳ್ಳುಗಾಡಿ ಇರುವುದಂತ ಕಾಣುತ್ತದೆ. ನಾನು ಪ್ರತ್ಯಕ್ಷ ನೋಡಿದ್ದಲ್ಲ, ಪರಿಚಿತ ಅಮೆರಿಕನ್ನಡಿತಿ ರಶ್ಮಿ ಕುಲಕರ್ಣಿ ಮೊನ್ನೆ ಕರ್ನಾಟಕಕ್ಕೆ ಹೋಗಿಬಂದವರು ನನಗದರ ಚಿತ್ರ ಕಳುಹಿಸಿದ್ದಾರೆ. ಸ್ವಾರಸ್ಯಕರ, ತುಸು ವಿಚಿತ್ರ ಎನಿಸುವಂಥ ಒಕ್ಕಣೆ ಆ ಫಲಕದಲ್ಲಿರುವುದರಿಂದಲೇ ಅವರು ಅದನ್ನು ನನ್ನ ಗಮನಕ್ಕೆ ತಂದಿದ್ದಾರೆ. ಏನು ಆ ಸ್ವಾರಸ್ಯ? ಫಲಕದಲ್ಲಿ ದೊಡ್ಡ ಅಕ್ಷರಗಳಲ್ಲಿ ಬರೆದಿರುವುದು ‘ಎಳೆ ನೀರು. ರೂ.೨೦/-’ ಎಂದು ಮಾತ್ರ. ಇದರಲ್ಲಿ ಸ್ವಾರಸ್ಯ ಏನಿಲ್ಲ. ಕೆಳಗೆ ಚಿಕ್ಕ ಅಕ್ಷರಗಳಲ್ಲಿ ಇನ್ನೊಂದು ಸಾಲು ಇದೆ: ‘ನಾವು ಕೊಟ್ಟರೆ ೨೦/- ನೀವು ಆರಿಸಿದರೆ ೩೦/-’ ಎಳೆನೀರು ಮಾರುವವನ ಈ ಚಾಣಾಕ್ಷ ನಿಲುವನ್ನು, ಚೌಕಾಶಿಗೆ ಜಗಳಕ್ಕೆ ಅವಕಾಶ ಕೊಡದ ನೇರ-ದಿಟ್ಟ ಧೋರಣೆಯನ್ನು ಮೆಚ್ಚಲೇಬೇಕು.

ಆತ ಯಾದೃಚ್ಛಿಕವಾಗಿ ಎತ್ತಿಕೊಡುವ ಯಾವುದೋ ಒಂದು ಎಳೆನೀರನ್ನು ಒಪ್ಪದೆ ‘ಹೋಅದು ದೊಡ್ಡ ಸೈಜಿನದು ಕೊಡಿ. ಹೆಚ್ಚು ನೀರು ಇರುವಂಥದ್ದು. ಸಿಹಿ ನೀರು ಇರುವಂಥದ್ದು. ಒಳಗೆ ತಿನ್ನಲಿಕ್ಕಾಗುವಷ್ಟು ತಿರುಳು ಇರುವಂಥದ್ದು ಕೊಡಿ…’ ಅಂತೆಲ್ಲ ನೂರಎಂಟು ಥರದ ಬೇಡಿಕೆಗಳನ್ನು ಮಂಡಿಸುವ ಗಿರಾಕಿಗಳಿಗೆ, ಅವರ ಆಯ್ಕೆಯ ಸ್ವಾತಂತ್ರ್ಯಕ್ಕೆ ಬೆಲೆ ಒಂದೂವರೆ ಪಟ್ಟು ಹೆಚ್ಚಾಗುತ್ತದೆಂದು ಖುಲ್ಲಂಖುಲ್ಲಾ ತಿಳಿಸುವ ಈ ಏರ್ಪಾಡು ಖಂಡಿತ ಚಾಲಾಕಿನದೇ.

ಇದೇ ಅಂಗಡಿಯಿಂದ ಒಂದೊಮ್ಮೆ ನೀವು ಎಳೆನೀರು ಕೊಂಡುಕೊಳ್ಳುವ ಸಂದರ್ಭ ಬಂದರೆ ಏನು ಮಾಡುತ್ತೀರಿ? ೨೦ ರೂಪಾಯಿಗೆ ಆತ ಕೊಡುವ ಯಾವುದೋ ಒಂದು ಎಳೆನೀರಿಗೆ ಸೆಟ್ಲ್ ಆಗ್ತೀರಾ? ಅಥವಾ, ಎಳೆನೀರು ಯಾವುದು ಒಳ್ಳೆಯದು ಎಂದು ಹೊರಗಿಂದಲೇ ಅಂದಾಜಿಸುವ ನಿಮ್ಮ ಜ್ಞಾನಾನುಭವವನ್ನು ಬಳಸಿ
ಹೆಚ್ಚು ಬೆಲೆ ತೆತ್ತಾದರೂ ಸರಿ ರಾಶಿಯಲ್ಲಿ ಅತ್ಯಂತ ಒಳ್ಳೆಯದೇ ನನಗೆ ಸಿಗಲಿ ಎಂಬ ಮಹತ್ವಾಕಾಂಕ್ಷೆ ಉಳ್ಳವರಾಗುತ್ತೀರಿ? ಇದು ಕಂಜೂಸಿತನದ ಅಥವಾ ಶೋಕಿ ಆಡಂಬರದ ಪ್ರಶ್ನೆ ಅಲ್ಲ. ಬೇಕಿದ್ದರೆ ಬೆಲೆ ವ್ಯತ್ಯಾಸ ಇಲ್ಲವೆಂದೇ ಊಹಿಸಿ.

ಯಾವುದರಿಂದ ನಿಮಗೆ ಹೆಚ್ಚು ತೃಪ್ತಿ ಮನಸ್ಸಮಾಧಾನ ಸಿಗುತ್ತದೆ? ನಿಮಗೆ ಆಶ್ಚರ್ಯವಾಗಬಹುದು, ‘ಪ್ಯಾರಡಾಕ್ಸ್ ಆಫ್ ಚಾಯ್ಸ್’ ಎಂಬ ಒಂದು ಸಿದ್ಧಾಂತದ ಪ್ರಕಾರ ನಿಜವಾಗಿಯೂ ನಿಮ್ಮ ಮನಸ್ಸಿಗೆ ಹೆಚ್ಚಿನ ತೃಪ್ತಿ ಮತ್ತು ನಿರುಮ್ಮಳತೆ ಸಿಗುವುದು ಅಂಗಡಿಯವನು ತೆಗೆದುಕೊಟ್ಟ ಯಾದೃಚ್ಛಿಕ ಎಳೆನೀರಿನಿಂದಲೇ ಹೊರತು ಆಯ್ಕೆಯ ಸ್ವಾತಂತ್ರ್ಯವನ್ನು ಬಳಸಿ ನೀವು ಆರಿಸಿದ ಎಳೆನೀರಿನಿಂದಲ್ಲ! ಆ ಸಿದ್ಧಾಂತದ ಸಾರಾಂಶವೇನೆಂದರೆ ನಮ್ಮ ಮುಂದೆ ಅನೇಕ ಆಯ್ಕೆಗಳಿದ್ದಾಗ ಆಯ್ದುಕೊಳ್ಳುವ ಪ್ರಕ್ರಿಯೆ ನಮಗೆ ಕಷ್ಟವಾಗುತ್ತ ಹೋಗುತ್ತದೆ. ಸರಿಯಾದ್ದನ್ನೇ ಆಯ್ದುಕೊಳ್ಳುವುದು ಇನ್ನೂ ಕಷ್ಟ. ಆಯ್ಕೆಗಳು ಅಸಂಖ್ಯಾತ ಆದರಂತೂ ಮತ್ತಷ್ಟು ಕಷ್ಟ. ಅಂತಿಮಗೊಳಿಸಿದ ಆಯ್ಕೆಯಿಂದ ತೃಪ್ತಿ ಸಮಾಧಾನ ಸಿಗುತ್ತದೆಂಬ ಗ್ಯಾರಂಟಿಯಂತೂ ಇಲ್ಲವೇಇಲ್ಲ.

ಎಳೆನೀರಿನ ಅಂಗಡಿಯ ನಿದರ್ಶನವೊಂದರಿಂದಲೇ ಇದು ನಿಮಗೆ ಅಷ್ಟೇನೂ ಮನದಟ್ಟಾಗಲಿಕ್ಕಿಲ್ಲ, ಹಾಗೂ ಈ ಸಿದ್ಧಾಂತವನ್ನು ನೀವು ಒಪ್ಪಲಿಕ್ಕೂ ಇಲ್ಲ. ಆದರೆ ಈ ಬಗ್ಗೆ ನಡೆದಿರುವ ಅಧ್ಯಯನಗಳು ಮತ್ತು ಸಮೀಕ್ಷೆಗಳ ಫಲಿತಾಂಶವನ್ನು ತಿಳಿದುಕೊಂಡರೆ, ನಿತ್ಯಜೀವನದ ಉದಾಹರಣೆಗಳಿಂದಲೇ ವಿವರಿಸಿದರೆ, ಹೌದಲ್ಲ
ಇದು ಎಷ್ಟೋ ಸರ್ತಿ ನಮ್ಮ ಅನುಭವಕ್ಕೂ ಬಂದಿದೆ ಎನ್ನುತ್ತೀರಿ. ೧೯೮೦ರಿಂದ ೯೦ರ ದಶಕದ ಆರಂಭದವರೆಗಿನ ಟಿವಿಯನ್ನೊಮ್ಮೆ ನೆನಪಿಸಿಕೊಳ್ಳಿ. ದೂರದರ್ಶನ ಒಂದೇ ಚಾನೆಲ್. ರಂಗೋಲಿ, ಚಿತ್ರಹಾರ್, ರಾಮಾಯಣ, ಮಹಾಭಾರತ, ಮಾಲ್ಗುಡಿ ಡೇಸ್, ಸುರಭಿ, ಜಬಾನ್ ಸಂಭಾಲ್‌ಕೇ, ಫಟೀಚರ್, ಫ್ಲಾಪ್-ಶೋ, ವಾರಕ್ಕೊಂದು ಹಿಂದೀ ಸಿನೆಮಾ, ಭಾನುವಾರ ಮಧ್ಯಾಹ್ನ ಪ್ರಾದೇಶಿಕ ಭಾಷೆಯ ಸಿನೆಮಾ… ಎಂತಹ ಅಪ್ಪಟ ಮನೋರಂಜನೆ, ಎಷ್ಟು
ಒಳ್ಳೆಯ ದಿನಗಳು! ಈಗ? ಸಾವಿರದೆಂಟು ಚಾನೆಲ್‌ಗಳು.

ಭರ್ಖತ್ತಾಗಿ ಯಾವುದನ್ನು ನೋಡುತ್ತೀರಿ? ರಿಮೋಟ್ ಹಿಡಿದು ಚಾನೆಲ್ ಬದಲಾಯಿಸುತ್ತ ಇರುವ ಒಟ್ಟು ಕಾಲಾವಧಿಯು ಯಾವುದೇ ಒಂದು ಚಾನೆಲ್‌ನ ವೀಕ್ಷಣೆಯ ನಿವ್ವಳ ಕಾಲಾವಧಿಗಿಂತ ಹೆಚ್ಚಿರುತ್ತದೆ. ಅಂದರೆ ಇಷ್ಟೆಲ್ಲ ಚಾನೆಲ್‌ಗಳ ಆಯ್ಕೆ ಇದ್ದರೂ ಮನಸ್ಸಿಗೆ ಹೆಚ್ಚಿನ ತೃಪ್ತಿ ಸಮಾಧಾನಗಳೇನೂ ಸಿಗುವುದಿಲ್ಲ. ಮಾತ್ರವಲ್ಲ ದೂರದರ್ಶನ ಮಾತ್ರ ಇದ್ದಾಗಲೇ ಒಳ್ಳೆಯದಿತ್ತು ಎಂಬ ಅಭಿಮತದವರು ಅನೇಕರಿದ್ದಾರೆ. ಇನ್ನೊಂದು ಉದಾಹರಣೆ: ತಿಂಗಳ ಕಿರಾಣಿ ಸಾಮಾನು ಪಟ್ಟಿ ತೆಗೆದುಕೊಂಡು ಹೋಗಿ ಅಂಗಡಿಯವನೇ ಒಂದೊಂದಾಗಿ ತೆಗೆದು ನಿಮ್ಮ ಚೀಲಗಳಲ್ಲಿ ತುಂಬಿಸುತ್ತಿದ್ದ ಕಾಲದಲ್ಲಿ ನಿಮ್ಮ ಪಟ್ಟಿಯಲ್ಲಿ ‘ಟೂಥ್‌ಪೇಸ್ಟ್’ ಅಂತ ಇದ್ದರೆ ಅಂಗಡಿಯವನು ಕೋಲ್ಗೇಟ್‌ನ ದೊಡ್ಡದೊಂದು ಪ್ಯಾಕ್ ನಿಮ್ಮ ಚೀಲದೊಳಕ್ಕೆ ತೂರಿಸಿಬಿಡುತ್ತಿದ್ದ.

ಹೆಚ್ಚೆಂದರೆ ನೀವು ‘ಇದು ಬೇಡ. ಬಿನಾಕಾದಲ್ಲಾದರೆ ಪ್ರಾಣಿ ಗೊಂಬೆ ಬರುತ್ತದೆ. ಅದನ್ನು ಕೊಡಿ’ ಎನ್ನುತ್ತಿದ್ದಿರಿ. ಬೇರೆ ಆಯ್ಕೆಗಳಿರಲಿಲ್ಲ. ಜೀವನ ನೆಮ್ಮದಿಯದಿತ್ತು.
ಈಗಲೂ ಟೂಥ್‌ಪೇಸ್ಟುಗಳಿಂದಲೇ ಜೀವನದ ನೆಮ್ಮದಿಯೇನೂ ಹಾಳಾಗಿಲ್ಲವಾದರೂ ಕೋಲ್ಗೇಟ್, ಪೆಪ್ಸೊಡೆಂಡ್, ಕ್ಲೋಸ್‌ಅಪ್, ಕ್ರೆಸ್ಟ್, ಮೆಸ್ವಾಕ್, ಹಿಮಾಲಯ, ನೀಮ್, ವಜ್ರದಂತಿ, ದಂತಕಾಂತಿ, ಡಾಬರ್ ರೆಡ್, ಡಾಬರ್ ಹರ್ಬಲ್… ವಿದ್ ಫ್ಲೋರೈಡ್, ವಿದ್ ಚಾರ್ಕೋಲ್, ವಿದ್ ಬೇವಿನೆಲೆ, ವಿದ್ ತುಳಸಿ, ವಿದ್ ಕರ್ಪೂರ, ವಿದ್ ಪುದಿನಾ ಅಂತೆಲ್ಲ ಅದೆಷ್ಟು ವೆರೈಟಿ! ಯಾವುದನ್ನಂತ ಆಯ್ದುಕೊಳ್ಳುತ್ತೀರಿ? ನಿರ್ದಿಷ್ಟವಾದೊಂದನ್ನು ಆಯ್ದುಕೊಂಡರೂ ಹೆಚ್ಚಿನ ತೃಪ್ತಿ ಸಂತೋಷ ಇದೆಯೇ? ತೃಪ್ತಿ-ಸಂತೋಷಗಳು ಹೆಚ್ಚುವುದು ಬಿಡಿ, ಮಾರುಕಟ್ಟೆಯಲ್ಲಿ ಆಯ್ಕೆಗಳು ಹೆಚ್ಚಾದಷ್ಟೂ ನಮ್ಮಲ್ಲಿ ಒಳಗೊಳಗೇ ಅತೃಪ್ತಿ ಅಸಮಾ ಧಾನ ಅಸೂಯೆಗಳು ಹೊಗೆಯಾಡುವುದೇ ಹೆಚ್ಚು.

ಅಂಬಾಸೇಡರ್, ಫೀಯಟ್ ಇವೆರಡನ್ನು ಹೊರತುಪಡಿಸಿದರೆ ಜನಸಾಮನ್ಯರ ಕಾರು ಮಾರುತಿ-೮೦೦ ಮಾತ್ರ ಇದ್ದ ಕಾಲವೊಂದಿತ್ತು. ಬಹುಮಟ್ಟಿಗೆ ಸುಭಿಕ್ಷ ವಾಗಿಯೇ ಇತ್ತು. ಆಗ ಹೆಚ್ಚೆಂದರೆ ‘ಪಕ್ಕದ್ಮನೆಯವರತ್ರ ಕಾರು ಇದೆ, ನಾವಿನ್ನೂ ಬುಲಂದ್ ಭಾರತ್ ಕೀ ಬುಲಂದ್ ತಸ್ವೀರ್ ಹಮಾರಾ ಬಜಾಜ್ ಎನ್ನುತ್ತ ಸ್ಕೂಟರ್ ಮೇಲೆಯೇ ನಾಲ್ಕೂ ಜನ ಹೋಗುತ್ತಿದ್ದೇವೆ’ ಎಂಬಷ್ಟು ಮಾತ್ರ ಅಸೂಯೆ ಇರುತ್ತಿದ್ದದ್ದು. ಈಗ ಲಕ್ಷಗಟ್ಟಲೆ ಬೆಲೆಯ ಎರಡೆರಡು ಕಾರುಗಳಿದ್ದರೂ ಇನ್ನೊಬ್ಬರ ಕಾರಿನ ಮೇಕ್, ಮಾಡೆಲ್, ಫೀಚರುಗಳ ತುಲನೆಯಿಂದಾಗುವ ತಳಮಳ ಅಷ್ಟಿಷ್ಟಲ್ಲ.

ಕಾರು, ಮೊಬೈಲ್ ಫೋನು, ಕಂಪ್ಯೂಟರ್, ಟಿವಿ, ಫ್ರಿಜ್, ವಾಷಿಂಗ್‌ಮೆಷಿನ್ ಮತ್ತಿತರ ಐಷಾರಾಮಿ ವಸ್ತುಗಳ ವಿಷಯದಲ್ಲಿ ಮಾತ್ರ ಅಂದುಕೊಳ್ಳಬೇಡಿ. ಇಡ್ಲಿ, ವಡೆ, ಚೌಚೌಭಾತ್ ಮೂರೇಮೂರು ಐಟಮ್ ಗಳು ಸಿಗುವ ದರ್ಶಿನಿ ಅಥವಾ ಖಾನಾವಳಿಯಲ್ಲಿ ನೀವು ತಿಂಡಿ ತಿನ್ನುವಾಗ ನಿಮಗೆ ಸಿಗುವ ತೃಪ್ತಿ ನಿರುಮ್ಮಳತೆ, ೮ ಪುಟಗಳ ಮೆನು ಪುಸ್ತಕದಲ್ಲಿ ಎಪಟೈಜರ್‌ಗಳದೇ ಪ್ರತ್ಯೇಕ ಪಟ್ಟಿ, ದೋಸೆಯಲ್ಲೇ ಹದಿನೆಂಟು ಪ್ರಕಾರಗಳು, ಮಸಾಲೆದೋಸೆಯಲ್ಲೇ ಐದಾರು ನಮೂನೆ ಇತ್ಯಾದಿ ಇರುವ ರೆಸ್ಟೊರೆಂಟ್‌ನಲ್ಲಿ ಯಾವುದನ್ನು ಆರ್ಡರ್ ಮಾಡಲಿ ಎಂದು ತಲೆಕೆಡಿಸಿಕೊಂಡು ಕೊನೆಗೂ ಸಾದಾ ದೋಸೆಗೇ ಸೆಟ್ಲ್ ಆದರೂ ಅಕ್ಕಪಕ್ಕದ ಟೇಬಲ್‌ನವರ ತಟ್ಟೆಗಳಲ್ಲಿ ತರಹೇವಾರಿ ಖಾದ್ಯಗಳು ರಾರಾಜಿಸಿದಾಗ- ದೇವರಾಣೆಗೂ ಸಿಗಲಾರದು!

ದುಡ್ಡಿನ ಪ್ರಶ್ನೆಯಲ್ಲ. ಅಷ್ಟೊಂದು ಆಯ್ಕೆಗಳಿರುವಾಗ ಸರಿಯಾದ್ದನ್ನು ಆಯ್ದುಕೊಳ್ಳಲಾರದ, ಆಯ್ದುಕೊಂಡಿದ್ದರಲ್ಲಿ ಸಮಾಧಾನ ಇಲ್ಲದ, ತೊಳಲಾಟ. ರೇಡಿಯೊ ಕೇಳುವುದು ಏಕೆ ಹೆಚ್ಚು ಉಲ್ಲಾಸಮಯವಾಗಿರುತ್ತದೆ ಮತ್ತು ಕ್ಯಾಸೆಟ್ ಪ್ಲೇಯರ್‌ನಿಂದ (ಬೇಡ, ಈಗ ಯುಟ್ಯೂಬ್‌ನಲ್ಲಿ ಜೂಕ್‌ಬಾಕ್ಸ್‌ಗಳಿಂದ, ಅಥವಾ ಥಂಬ್ ಡ್ರೈವ್‌ನಲ್ಲಿ ನಾವೇ ಶೇಖರಿಸಿಟ್ಟ ಎಂಪಿ೩ ಟ್ರ್ಯಾಕ್‌ಗಳಿಂದ ಅಂತಲೇ ಇಟ್ಟುಕೊಳ್ಳೋಣ) ಮ್ಯೂಸಿಕ್ ಕೇಳುವುದು ಏಕೆ ಬೇಗನೇ ಬೋರ್ ಎನಿಸಿಬಿಡುತ್ತದೆ ಎನ್ನುವುದಕ್ಕೂ ಈ ಪ್ಯಾರಡಾಕ್ಸ್ ಆಫ್ ಚಾಯ್ಸ್ ಕಾರಣ. ಇದು ನನ್ನದೇ ಅನುಭವ ಕೂಡ. ನನ್ನ ಅತ್ಯಂತ ಇಷ್ಟದ್ದು ಎಂದು ಸುಮಾರು ನೂರಕ್ಕೂ ಹೆಚ್ಚಿನ ಫೋಲ್ಡರ್‌ಗಳಲ್ಲಿ ಒಟ್ಟು ೨೦೦೦ ಗಂಟೆಗಳಿಗಿಂತಲೂ ಹೆಚ್ಚು ಅವಽಯ ಸಂಗೀತ ರಸದೌತಣ ಇರುವ ಥಂಬ್ ಡ್ರೈವ್ ಒಂದು ನನ್ನ ಕಾರಲ್ಲಿದೆ. ಅಷ್ಟೊಂದು ಆಯ್ಕೆಗಳಿವೆ.

ಆದರೆ ನಾನೇ ಗಮನಿಸಿದಂತೆ ಅವುಗಳಲ್ಲಿ ನಾಲ್ಕೈದು ಫೋಲ್ಡರ್ ಗಳಲ್ಲಿರುವುದನ್ನಷ್ಟೇ ನಾನು ಮತ್ತೆಮತ್ತೆ ಕೇಳುತ್ತಿರುತ್ತೇನೆ. ಎಲ್ಲ ಫೋಲ್ಡರ್‌ಗಳ ಪಟ್ಟಿ ಕಾಣಿಸಿ ಕೊಂಡರೂ ಇದು ಬೇಡ ಇದು ಬೇಡ ಎನ್ನುತ್ತ ಕೊನೆಗೆ ಡಾ.ರಾಜಕುಮಾರ್ ಹಾಡಿದ ರಾಘವೇಂದ್ರ ಸ್ವಾಮಿ ಭಕ್ತಿಗೀತೆಗಳ ಫೋಲ್ಡರ್‌ಗೇ ಸೆಟ್ಲ್ ಆಗುತ್ತೇನೆ. ಹಿಂದೀ ಹಾಡುಗಳ ಫೋಲ್ಡರ್ ಆಯ್ದುಕೊಂಡರೂ ರಫಿ-ಕಿಶೋರ್ -ಮುಖೇಶ್ ಧ್ವನಿಯ ಹಳೇಹಾಡುಗಳಷ್ಟೇ ಮೊಳಗುತ್ತವೆ. ರೇಡಿಯೊದಲ್ಲಾದರೆ ಹಾಗಲ್ಲ. ಮುಂದಿನ ಹಾಡು ಯಾವುದಿರಬಹುದೆಂಬ ನಿರೀಕ್ಷೆ, ಯಾವುದೋ ಒಂದು ಅಪರೂಪದ ಹಾಡು ಬಂದಾಗಿನ ಸಂತೋಷ, ಆ ಹಾಡು ಹೊತ್ತು ತರುವ ನೊಸ್ಟಾಲ್ಜಿಯಾ ದಿಂದಾಗುವ ರೋಮಾಂಚನ… ಇದನ್ನು ಅನುಭವಿಸಿಯೇ ತೀರಬೇಕು.

ಆಯ್ಕೆಯ ಸ್ವಾತಂತ್ರ್ಯ ರೇಡಿಯೊ ಆಲಿಸುವಿಕೆಯನ್ನೂ ಹೇಗೆ ಕೆಡಿಸಬಲ್ಲುದು ಎಂಬುದನ್ನೂ ನಾನು ವಿವರಿಸಬಲ್ಲೆ. ೧೯೭೦ರ ದಶಕದ ಕೊನೆಯಲ್ಲಿ ಮಂಗಳೂರು ಆಕಾಶವಾಣಿಯಿಂದ ಪ್ರಸಾರ ಆರಂಭವಾದಾಗ ನಮ್ಮಲ್ಲಿ ಹಗಲುಹೊತ್ತಿನಲ್ಲಿ ಟ್ರಾನ್ಸಿಸ್ಟರ್ ಡಯಲ್‌ನ ಮುಳ್ಳು ಮಂಗಳೂರು ಸ್ಟೇಷನ್ ಬಿಟ್ಟು ಕದಲಲಿಕ್ಕೇ ಇಲ್ಲ. ಅದೇ ಸಂಜೆಯಾಯಿತೆಂದರೆ ಮೀಡಿಯಂ ವೇವ್‌ನಲ್ಲಿ ಭದ್ರಾವತಿ, ಧಾರವಾಡ-ಎ ಮತ್ತು ಬಿ(ವಿವಿಧಭಾರತಿ), ಕಲ್ಬುರ್ಗಿ, ಬೆಂಗಳೂರು ನಿಲಯಗಳೂ ಕೇಳಿಸ ತೊಡಗಿದವೆಂದರೆ ಅಲ್ಲೇನು ಇದೆ ಇಲ್ಲೇನು ಇದೆ ಎಂದು ಟ್ರಾನ್ಸಿಸ್ಟರ್‌ನ ಕಿವಿ ಹಿಂಡುತ್ತಲೇ ಇರುವುದು.

ಭರ್ಖತ್ ಆಗಿ ಒಂದನ್ನೂ ಕೇಳಲಿಕ್ಕೆ ಬಿಡುವುದಿಲ್ಲ ಹಾಗೇಕೆ ಕಿವಿ ಹಿಂಡುತ್ತಿರುತ್ತೀ ಎಂದು ಹಿರಿಯರಿಂದ ಬೈಸಿಕೊಳ್ಳುತ್ತಿದ್ದದ್ದೂ ನೆನಪಿದೆ ನನಗೆ. ಈಗ ಇಲ್ಲಿ
ನನಗೆ ಇಂಟರ್‌ನೆಟ್ ಟಿವಿಯಿಂದಾಗಿ ಕನ್ನಡದವೂ ಸೇರಿದಂತೆ ಪ್ರಪಂಚದ ಸಾವಿರಾರು ಚಾನೆಲ್‌ಗಳ ವೀಕ್ಷಣೆ ಸಾಧ್ಯವಿದ್ದರೂ ನಾನು ಹತ್ತಿಪ್ಪತ್ತನ್ನು ಮಾತ್ರ ಫೇವರಿಟ್ ಲಿಸ್ಟಲ್ಲಿ ಹಾಕಿಟ್ಟಿದ್ದೇನೆ. ಅದರಲ್ಲಿ ಐದಾರರ ವೀಕ್ಷಣೆಗೆ ಮಾತ್ರ ದಿನದ ಒಂದೆರಡು ಗಂಟೆಗಳನ್ನು ಮೀಸಲಿರಿಸಿದ್ದೇನೆ. ಪ್ಯಾರಡಾಕ್ಸ್ ಆಫ್ ಚಾಯ್ಸ್ ಸಿದ್ಧಾಂತವನ್ನು ಮೊತ್ತಮೊದಲ ಬಾರಿಗೆ ವ್ಯಾಖ್ಯಾನಿಸಿದ್ದು ಬೆರ್ರಿ ಸ್ಕ್ವಾರ್ಟ್ಜ್ ಎಂಬೊಬ್ಬ ಅಮೆರಿಕನ್ ಮನಃಶಾಸ್ತ್ರಜ್ಞ, ೨೦೦೪ರಲ್ಲಿ ಆತ ಬರೆದ ‘ದ ಪ್ಯಾರಡಾಕ್ಸ್ ಆಫ್ ಚಾಯ್ಸ್ – ವ್ಹೈ ಮೋರ್ ಇಸ್ ಲೆಸ್’ ಎಂಬ ಪುಸ್ತಕದಲ್ಲಿ.

ವಾಣಿಜ್ಯಶಾಸ್ತ್ರ ಮತ್ತು ಮನೋವಿeನದ ಪರಸ್ಪರ ಪರಿಣಾಮಗಳನ್ನು ಬಹುಕಾಲದಿಂದ ಅಭ್ಯಸಿಸುತ್ತಿದ್ದ ಬೆರ್ರಿ ಸ್ಕ್ವಾರ್ಟ್ಜ್, ಮನುಷ್ಯನಿಗೆ ಆಯ್ಕೆಗಳು ಹೆಚ್ಚಿದಂತೆಲ್ಲ ಸಂತೋಷ-ಸಮಾಧಾನಗಳ ಮೇಲೆ ನೇತ್ಯಾತ್ಮಕ ಪರಿಣಾಮ ಉಂಟಾಗುತ್ತದೆಂದು ಪ್ರತಿಪಾದಿಸಿದನು. ಇದನ್ನು ಅವನು ಪಾಶ್ಚಾತ್ಯ ದೇಶಗಳ ಜನರ ಜೀವನಶೈಲಿಯನ್ನು ಆಧರಿಸಿ ಬರೆದದ್ದು. ಈಗಿನ ಕಾಲದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಆಯ್ಕೆಗಳು ಹೇರಳವಾಗಿವೆ, ಆದರೆ ಗ್ರಾಹಕ ಸಂತೃಪ್ತಿಯ ಮಟ್ಟ ದಶಕಗಳ ಹಿಂದೆ ಇದ್ದುದಕ್ಕಿಂತ ಹೆಚ್ಚೇನೂ ಆಗಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಕಡಿಮೆಯೇ ಆಗಿದೆ. ಅಮೆರಿಕದಂಥ ದೇಶದಲ್ಲಿ ಜನರು ಬದುಕಿನ ಹೆಜ್ಜೆಹೆಜ್ಜೆಯಲ್ಲೂ ಸ್ವಾತಂತ್ರ್ಯವನ್ನು ಬಯಸುತ್ತಾರೆ.

ಪುಷ್ಕಳ ಆಯ್ಕೆಗಳು ಅವರಿಗೆ ಈ ಸ್ವಾತಂತ್ರ್ಯದ ಭ್ರಮೆಯನ್ನೇ ತರುತ್ತವೆ. ಕಂಪನಿಗಳು, ಉದ್ಯಮಗಳೂ ಮತ್ತಷ್ಟು ಮಗ ದಷ್ಟು ಆಯ್ಕೆಗಳನ್ನು ಸುರಿದು ಈ ಭ್ರಮೆಯನ್ನು ಪೋಷಿಸುತ್ತವೆ. ಇದರಿಂದ ಜನಸಾಮಾನ್ಯರ ಸಂತೋಷ ಸೂಚ್ಯಂಕ ಹೆಚ್ಚಬೇಕಿತ್ತು. ಆದರೆ ಆಗಿರುವುದು ಉಲ್ಟಾ! ಆಯ್ಕೆಗಳ ರಾಶಿಯಿಂದ ಸರಿಯಾ
ದ್ದನ್ನು ಆಯ್ದುಕೊಳ್ಳಲು ಹೆಣಗುವವರು ಮತ್ತು ಆಯ್ದುಕೊಂಡ ಮೇಲೂ ಸಮಾಧಾನ ಇಲ್ಲದವರು ಇಂಥವರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ವಿಜ್ಞಾನ-ತಂತ್ರಜ್ಞಾನ ಬೆಳೆದಂತೆಲ್ಲ, ಸಾಮಾಜಿಕ ಸ್ಥಿತಿಗತಿಗಳು ಸುಧಾರಿಸಿದಂತೆಲ್ಲ ಪ್ರತಿಯೊಂದು ವಿಷಯದಲ್ಲೂ ಆಯ್ಕೆಗಳೇನೋ ಹೆಚ್ಚುತ್ತಲೇ ಇವೆ. ಆದರೆ ಅದೇ ಒಂದು ಹೊರೆ ಎಂದೆನಿಸುವಂತೆಯೂ ಆಗಿದೆ.

ಇಂಟರ್‌ನೆಟ್ ಮತ್ತು ಸೋಷಿಯಲ್ ಮೀಡಿಯಾ, ಅಲ್ಲಿ ವಕ್ಕರಿಸುವ ಇನ್‌ಫ್ಲುಯೆನ್ಸರ್‌ಗಳು ಮತ್ತು ಅರೆಬೆಂದ ತಜ್ಞರ ಗಡಣ ಈ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಸುತ್ತವೆ. ಈಗ ಅಂಗಡಿಯೊಳಕ್ಕೆ ಕಾಲಿಡಬೇಕಂತಲೂ ಇಲ್ಲ, ಮನೆಯಲ್ಲಿ ಕುಳಿತು ಕಂಪ್ಯೂಟರ್/ಮೊಬೈಲ್‌ಫೋನ್ ಪರದೆಯ ಮೇಲೆ ಆಯ್ಕೆಗಳ ಅಬ್ಬರದ ಅಲೆಗಳಲ್ಲಿ ಕೊಚ್ಚಿಹೋಗುವಂತಾಗುತ್ತದೆ. ಹಾಗಂತ ಆಯ್ಕೆಗಳು ಇರಲೇಬಾರದೆಂದಲ್ಲ. ಏಕಸ್ವಾಮ್ಯತೆ, ಏಕಚಕ್ರಾಧಿಪತ್ಯ ಯಾವುದಕ್ಕೂ ಯಾವತ್ತಿಗೂ ಒಳ್ಳೆಯದಲ್ಲ.

ಸೀಮಿತ ಸಂಖ್ಯೆಯಲ್ಲಿ ಆಯ್ಕೆಗಳು ಬೇಕೇಬೇಕು. ವಿಮಾನದಲ್ಲಿ ಹತ್ತಾರು ಗಂಟೆಗಳ ಪ್ರಯಾಣ ಅಂತಾದಾಗ ನಮಗೆ ಬೇಕಾದ ವಿಂಡೋ ಸೀಟನ್ನೋ ಐಲ್ ಸೀಟನ್ನೋ ಆಯ್ದುಕೊಳ್ಳುವ ಸೌಕರ್ಯವಿದ್ದರೆ ನಮ್ಮ ಪ್ರಯಾಣ ಆಗಲೇ ಅರ್ಧದಷ್ಟು ಸುಗಮವಾಯ್ತೆಂದೇ ಲೆಕ್ಕ. ಈಗೀಗ ಏರ್‌ಲೈನ್‌ಗಳು ಅಂಥ ಸೌಕರ್ಯಕ್ಕೆ ಹೆಚ್ಚು ದುಡ್ಡು ಪೀಕುತ್ತವೆನ್ನುವುದು ಬೇರೆ ಮಾತು. ಸಂಜೆಯ ಹೊತ್ತು, ವಾರಾಂತ್ಯಗಳಂದು ತೆರೆದಿರುವ ಬ್ಯಾಂಕ್ ಶಾಖೆಗಳು- ರೀತಿಯ ಹೆಚ್ಚುವರಿ ಆಯ್ಕೆಗಳೂ ಸ್ವಾಗತಾರ್ಹವೇ. ವಿದೇಶೀ ರೆಸ್ಟೊರೆಂಟ್ ಗಳಲ್ಲಿ ತಿಂಡಿತಿನಸಿನ ಮಾಂಸರಹಿತ ಆವೃತ್ತಿಗಳೂ ಲಭ್ಯವಿವೆ ಎನ್ನುವಂಥ ಆಯ್ಕೆಗಳು ನಮ್ಮಂಥವರ ಪಡಿಪಾಟಲನ್ನು
ಕಡಿಮೆಗೊಳಿಸುತ್ತವೆ.

ಹಾಗೆ ನೋಡಿದರೆ ಸ್ಟಾರ್‌ಬಕ್ಸ್‌ನಲ್ಲಿ ಒಂದೆರಡು ಥರದ್ದಷ್ಟೇ ಕಾಫಿ ಸಿಗುವುದು ಅಂತಿದ್ದಿದ್ದರೆ ಸ್ಟಾರ್‌ಬಕ್ಸ್ ಖಂಡಿತ ಇಷ್ಟೊಂದು ಜನಪ್ರಿಯವಾಗುತ್ತಿರಲಿಲ್ಲ. ಅಲ್ಲಿ ಕ್ಯಾಪುಚಿನೊ, ಚಾಯ್-ಲಾಟೆ, ಐಸ್-ಟೀ ಮುಂತಾದ ಆಯ್ಕೆಗಳೇ ಪ್ರಧಾನ ಆಕರ್ಷಣೆ ಎನ್ನುವುದೂ ಒಪ್ಪತಕ್ಕ ಮಾತೇ. ೨೦೨೪ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೊಕ್ರಾಟಿಕ್ ಪಕ್ಷದಿಂದ ಜೋ ಬೈಡನ್ ಮತ್ತು ರಿಪಬ್ಲಿಕನ್ ಪಕ್ಷದಿಂದ ಟ್ರಂಪಣ್ಣನೇ ಏಕಮೇವ ಚಾಯ್ಸ್ ಅಂತಾದರೆ- ಅಯ್ಯೋ ಈ ಇಬ್ಬರು ಮುದುಕರ ಹೊರತಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಮೂರನೆಯವರಾರಾದರೂ ಇರಬಾರದಿತ್ತೇ ಎಂದು ಈಗ ಪ್ರತಿಯೊಬ್ಬ ಅಮೆರಿಕನ್ ಪ್ರಜೆಯೂ ಮನ ದೊಳಗೇ ಅಂದುಕೊಳ್ಳುತ್ತಿದ್ದಾನೆ ಎನ್ನುವುದಕ್ಕಿಂತ ಬೇರೆ ಒಳ್ಳೆಯ ಉದಾಹರಣೆ ಬೇಡ ಆಯ್ಕೆಗಳಿರಬೇಕು ಎಂದು ವಾದಿಸುವುದಕ್ಕೆ.

ಬೆರ್ರಿ ಸ್ಕ್ವಾರ್ಟ್ಜ್ ಪ್ರತಿಪಾದನೆ ಇಂತಹ ಸೀಮಿತ ಸಂಖ್ಯೆಯ ಆಯ್ಕೆಗಳ ಬಗ್ಗೆಯಲ್ಲ, ಅವುಗಳನ್ನು ವಿರೋಧಿಸಿಯೂ ಅಲ್ಲ. ಆತ ಹೇಳುತ್ತಿರುವುದು ಆಯ್ಕೆಗಳು ಹಿತಮಿತವಾಗಿದ್ದು ಒಂದು ಉದ್ಯಾನದಲ್ಲಿ ವಿಹರಿಸಿದ ಅನುಭವವನ್ನು ಕೊಡಬೇಕೇ ಹೊರತು ಗೊಂಡಾರಣ್ಯದಲ್ಲಿ ಸಿಲುಕಿ ದಾರಿಕಾಣದಂತೆ ಆಗಬಾರದು ಎಂದಷ್ಟೇ. ಶೀನ ಐಯಂಗಾರ್ (ಹೌದು, ತಮಿಳುನಾಡು ಮೂಲದ ಭಾರತೀಯ) ಮತ್ತು ಮಾರ್ಕ್ ಲೆಪ್ಪರ್ ಎಂಬಿಬ್ಬರು ಮನುಷ್ಯ ಸ್ವಭಾವಜ್ಞರು ೨೦೦೧ರಲ್ಲಿ ಅಮೆರಿಕದಲ್ಲಿ ಮಾಡಿದ್ದ ಒಂದು ಪ್ರಯೋಗವನ್ನೂ ಇಲ್ಲಿ ಉಲ್ಲೇಖಿಸಬೇಕು.

ಬೆರ್ರಿ ಸ್ಕ್ವಾರ್ಟ್ಜ್‌ನ ಸಿದ್ಧಾಂತಕ್ಕೆ ಮೂಲಕಾರಣ ಈ ಪ್ರಯೋಗವೇ. ಒಂದು ದೊಡ್ಡ ಗ್ರೋಸರಿ ಸ್ಟೋರ್‌ನಲ್ಲಿ ಒಂದುಕಡೆ ಒಂದು ಮೇಜಿನ ಮೇಲೆ ಆರು ಬೇರೆಬೇರೆ ಥರದ ಜಾಮ್ ಬಾಟಲ್‌ಗಳನ್ನಿಟ್ಟರು. ಅದೇ ಗ್ರೋಸರಿ ಸ್ಟೋರ್‌ನ ಮತ್ತೊಂದು ಕಡೆ ಒಂದು ಮೇಜಿನ ಮೇಲೆ ೨೪ ಬೇರೆಬೇರೆ ಥರದ ಜಾಮ್ ಬಾಟಲ್‌ಗಳನ್ನಿಟ್ಟರು. ಗ್ರೋಸರಿ ಸ್ಟೋರ್‌ಗೆ ಬಂದ ಗ್ರಾಹಕರು ಯಾವ ಮೇಜಿನ ಬಳಿಯ ಯಾವುದೇ ಮತ್ತು ಎಷ್ಟೇ ಬಾಟಲುಗಳಿಂದಾದರೂ ಒಂದು ಚಮಚ ಜಾಮ್ ತಿಂದು ರುಚಿನೋಡಬಹುದು. ಹಾಗೆ ರುಚಿ ನೋಡಿದವರಿಗೆ ಅಂಗಡಿಯಿಂದ ಜಾಮ್ ಕೊಳ್ಳಲಿಕ್ಕೆ ಒಂದು ಡಾಲರ್ ಡಿಸ್ಕೌಂಟ್ ಕೂಪನ್ ಕೊಡಲಾಗು ವುದು.

ಸಮೀಕ್ಷೆ ಮುಗಿದಾಗ ೨೪ ಜಾಮ್ ಬಾಟಲ್‌ಗಳ ಮೇಜಿನ ಬಳಿಗೆ ಹೆಚ್ಚು ಜನರು ಹೋಗಿದ್ದದ್ದು ಮತ್ತು ರುಚಿ ನೋಡಿದ್ದು ಹೌದಾದರೂ, ಡಿಸ್ಕೌಂಟ್ ಕೂಪನ್ ಬಳಸಿ
ಜಾಮ್ ಕೊಂಡವರ ಸಂಖ್ಯೆ ಆರು ಜಾಮ್ ಬಾಟಲ್ ಗಳಿದ್ದ ಮೇಜಿನ ಬಳಿ ರುಚಿ ನೋಡಿದವರದ್ದೇ ಹೆಚ್ಚು ಇತ್ತು. ಅಂದರೆ ಹೆಚ್ಚು ಆಯ್ಕೆಗಳು ಆರಂಭದಲ್ಲಿ
ಆಕರ್ಷಣೆಯಾಗಿ ಕಂಡರೂ ಕೊಳ್ಳುವಿಕೆಯ ಸರಿಯಾದ ನಿರ್ಧಾರ ಸಾಧ್ಯವಾದದ್ದು ಕಡಿಮೆ ಸಂಖ್ಯೆಯ ಆಯ್ಕೆಗಳಿದ್ದಲ್ಲೇ! ಈಗ ಮದ್ದೂರಿನ ಎಳೆನೀರು ಅಂಗಡಿಯೆ ದುರಿಗೆ ನಿಮ್ಮನ್ನು ಮತ್ತೊಮ್ಮೆ ಕಲ್ಪಿಸಿಕೊಳ್ಳಿ. ೨೦ ರೂಪಾಯಿಗೆ ನಿಮಗೆ ಅಂಗಡಿಯವನೇ ಒಂದು ಎಳೆನೀರನ್ನು ಯಾದೃಚ್ಛಿಕವಾಗಿ ತೆಗೆದುಕೊಟ್ಟರೆ ಆತ ಸರಿಸುಮಾರಾಗಿ ಒಳ್ಳೆಯದಿರುವುದನ್ನೇ ಕೊಡುತ್ತಾನೆ.

ಕೆಟ್ಟದನ್ನು ಕೊಟ್ಟು ಗ್ರಾಹಕರ ಕೆಂಗಣ್ಣಿಗೆ ಗುರಿಯಾಗುವುದನ್ನು ಅವನು ಬಯಸುವುದಿಲ್ಲ. ಒಳ್ಳೆಯದನ್ನು ಆರಿಸುವ ಅನುಭವವೂ ಅವನಿಗೆ ನಿಮಗಿಂತ ನೂರು
ಪಾಲು ಹೆಚ್ಚಿರುತ್ತದೆ. ಇಲ್ಲ, ೩೦ ರೂಪಾಯಿ ಕೊಟ್ಟು ನೀವೇ ಆರಿಸಲಿಕ್ಕೆ ಹೊರಟಿರೋ- ಮೊದಲನೆಯದಾಗಿ ನಿಮಗೆ ರಾಶಿಯಲ್ಲಿ ಯಾವುದನ್ನೆತ್ತಿಕೊಳ್ಳಲಿ ಎಂಬ ಗೊಂದಲವನ್ನು ಗೆಲ್ಲುವುದೇ ಕಷ್ಟವಾಗುತ್ತದೆ. ಗೆದ್ದರೂ ಅಯ್ಯೋ ಇದಕ್ಕಿಂತ ಆ ಇನ್ನೊಂದು ಎಳೆನೀರು ಹೆಚ್ಚು ರುಚಿಯಿತ್ತೇನೋ ಎಂಬ ಕೊರಗು ಅಸಮಾಧಾನ
ಇದ್ದೇಇರುತ್ತದೆ. ಒಂದೂವರೆ ಪಟ್ಟು ಬೆಲೆ ತೆತ್ತೂ ನೀವು ನಿಮ್ಮ ಹೊಟ್ಟೆಯೊಳಗೆ ಎಳೆನೀರಿಗಿಂತ ಆ ಅತೃಪ್ತಿ-ಅಸಮಾ ಧಾನಗಳನ್ನು ತುಂಬಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು.

Leave a Reply

Your email address will not be published. Required fields are marked *

error: Content is protected !!