Sunday, 15th December 2024

ಬದುಕಿನ ಮಂತ್ರ ಆಗಲಿ ಪಂಚತಂತ್ರ

ಶ್ವೇತಪತ್ರ

shwethabc@gmail.com

ಇದು ವಸಂತನ ಹೊತ್ತು ಮರಗಿಡಗಳೆಲ್ಲ ಹರಡಿ ನಿಂತು ಬಿಸಿಲನ್ನು ಬೆಳದಿಂಗಳಾಗಿಸುವಂತಿವೆ. ಪರೀಕ್ಷೆಗಳನ್ನು ಮುಗಿಸಿ ಮಕ್ಕಳು ಬೇಸಿಗೆ ರಜೆಯ ಸಂಭ್ರಮದಲ್ಲಿ ದ್ದಾರೆ. ಅಮ್ಮಂದಿರ ವಾಟ್ಸಾಪ್ ಗ್ರೂಪ್‌ಗಳಲ್ಲಿ ಇನ್ನಿಲ್ಲದ ಬೇಸಿಗೆ ಶಿಬಿರಗಳ ಹುಡುಕಾಟ. ಆಗಲೇ ನೆನಪಾದದ್ದು ಪಂಚತಂತ್ರ. ಅದು ಕಾಡಿನ ಲೋಕ ನಮ್ಮ ನಡುವೆಯೇ ಜೀವಿಸಿತ್ತೆನೋ ಅನಿಸುವಷ್ಟು ಹತ್ತಿರದ ಲೋಕ.

ನಮ್ಮೆಲ್ಲರ ವ್ಯಕ್ತಿತ್ವ, ಜೀವನ ಕೌಶಲ ಹಾಗೂ ಬದುಕಿನ ಸೊಗಸನ್ನು ಚೇತೋಹಾರಿಯಾಗಿ ನೇಯ್ದ ಕಥಾ ಸಂಗಮ. ಇತ್ತೀಚೆಗೆ ಬಿಬಿಸಿಯ ಸಾಹಿತ್ಯ ವಿಭಾಗದಲ್ಲಿ Stories that shaped the world ಎನ್ನುವ ಲೇಖನ ಓದಲು ಸಿಕ್ಕಿತು. ಲೇಖನ ಓದಿದ ಮೇಲೆ ಕಥೆಗಳೇ ಅಲ್ಲವೇ ನಮ್ಮ ಬದುಕನ್ನು ಚಂದಕ್ಕೆ ರೂಪಿಸಿದಂತವು ಎನಿಸದಿರಲಿಲ್ಲ. ಬಾಲ್ಯದ ನೆನಪಿನ ಮೆರವಣಿಗೆಯಲ್ಲಿ ಎದ್ದು ಕಾಣುವುದೇ ನಾವು ಕೇಳಿದ ಹೇಳಿದ ಕಥಾಲೋಕ. ಜಗತ್ತಿನ ಬೇರೆ ಬೇರೆ ಮೂಲದ ಕಥೆಗಳು ನಮ್ಮ ಬದುಕಲ್ಲಿ ಹಾಸು ಹೊಕ್ಕಾಗಿವೆ. ಕಥೆಗೆ ಮನಸ್ಸು ತೆರೆದು ಕೊಳ್ಳುತ್ತದೆ. ಮನಸ್ಸನ್ನು ಅರಳಿಸುವ, ಮನೋವಿಕಾಸಕ್ಕೆ ಕಾರಣ ವಾಗುವ ಎಲ್ಲಾ ಅರ್ಥಪೂರ್ಣ ಸಂಗತಿ ಗಳು ಕಥೆಗಳಲ್ಲಿ ಇರುತ್ತವೆ.

ಆ ಎಲ್ಲಾ ಸಂಗತಿಗಳು ಸದಾ ನಮಗೆ ಸಮೀಪವಾಗಲು ತವಕಿಸುತ್ತಿರುತ್ತವೆ. ಹೀಗೆ ನಮ್ಮ ಬದುಕಿನ ಹಾಗೂ ಭಾವಕೋಶದ ಭಾಗವೇ ಆಗಿ ಹೋಗಿರುವ ಪಂಚತಂತ್ರದ ಕಥೆಗಳು ಜಾನಪದ ಅತಿಗಮನದಿಂದ ಕೂಡಿದ ಕಥಾಗುಚ್ಛಗಳು. ಪರ್ಶಿಯಾ ದೇಶದ ವಿದ್ವಾಂಸ, ವೈದ್ಯ ಬೋರ್ ಜೂಯಾ ಬದುಕಿನ ಎಲ್ಲಾ ಕಾಯಿಲೆಗಳಿಗೂ ಬೇಕಿರುವ ಅಮೃತವನ್ನು, ಆಯುರ್ವೇದದ ಪಾಠಗ ಳನ್ನು ಹುಡುಕುತ್ತಾ ಭಾರತಕ್ಕೆ ಬರುತ್ತಾನೆ. ಆತನೇ ಹೇಳುವಂತೆ ಆತನಿಗೆ ಬರೀ ಅಮೃತವಷ್ಟೇ ಅಲ್ಲ ಬದುಕಿನ ಸಾರಾಂಶವನ್ನೇ ತಿಳಿಸುವ ಸಂಜೀವಿನಿಯಾಗಿ ಪಂಚತಂತ್ರ ಸಿಕ್ಕಿತಂತೆ.

1935 ರಲ್ಲಿ ಅಮೆರಿಕದಲ್ಲಿ ಲೇಖಕ ಆರ್ತೋರ್ ರೈಡರ್ ಪಂಚತಂತ್ರವನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸುತ್ತಾ ತನ್ನ ಮುನ್ನುಡಿ ಯಲ್ಲಿ ಹೀಗೆ ಬರೆಯುತ್ತಾನೆ- ಒಬ್ಬ ವಿಷ್ಣು ಶರ್ಮ ಇಡೀ ಪ್ರಪಂಚದ ವಿವೇಕವನ್ನು, ಆಳವಾದ ಬದುಕಿನ ಅರ್ಥವನ್ನು ಪಂಚ ತಂತ್ರ ಎಂಬ ಜಾಣತನದ ಕೊಯ್ಲಿನಲ್ಲಿ ಕಟ್ಟಿಕೊಟ್ಟಿದ್ದಾನೆ. ಪಂಚತಂತ್ರವು ಜಗತ್ತಿನ ಎಲ್ಲಾ ಮೋಡಿಯನ್ನು ತನ್ನೊಳಗೆ ಒಳಗೊಂಡಿದೆ ಎಂದು ಅಚ್ಚರಿಯನ್ನು ವ್ಯಕ್ತಪಡಿಸುತ್ತಾನೆ.

ಸಾವಿರದ ಐನೂರ ವರುಷಗಳ ಹಿಂದೆ ಒಂದು ಜೊತೆ ನರಿಗಳು ಪ್ರಪಂಚವನ್ನೇ ಸುತ್ತಾಡಲು ಶುರು ಮಾಡಿದವು. ಆ ನರಿಗಳು ಭಾರತದ ಕರ್ನಾಟಕ ಭಾಗದವಾಗಿದ್ದು ಅದ್ಭುತವಾದ ಪ್ರಾಣಿ ಪ್ರಪಂಚದ ಕಥಾಗುಚ್ಛದ ನಕ್ಷತ್ರಗಳೇ ಆಗಿದ್ದವು. ಈ ನಕ್ಷತ್ರಗಳನ್ನು ಪರ್ಷಿಯಾ ದೇಶದ ವೈದ್ಯ ಬೋರ್ ಜುಯಾ ಇರಾನ್‌ಗೆ ಕೊಂಡೊಯ್ಯುತ್ತಾನೆ. ಕನ್ನಡದ ನರಿಗಳು ಕಲಿಲಾಗ್ ಹಾಗೂ ದಿಮ್ ನಾಗ್ ಆಗಿ ರೂಪಾಂತರಗೊಳ್ಳುತ್ತವೆ. ಅಲ್ಲಿಂದ ಮುಂದಕ್ಕೆ ನರಿಗಳನ್ನು ಅಪ್ಪಿಕೊಂಡು-ಒಪ್ಪಿಕೊಂಡದ್ದು ಅರಬರು. ಅಲ್ಲಿಂದ ಮುಂದೆ
ಸಿರಿಯ ಶತಮಾನಗಳ ತರುವಾಯ ಜರ್ಮನಿ. ಮುಂದೆ ಇವೇ ಕುತಂತ್ರ ನರಿಯಾಗಿ ಕ್ಯಾಲಿಲಾ ಉದಾತ್ತ ನರಿಯಾಗಿ ದಿಮ್‌ನ
ಯುರೋಪಿನ ಜನರ ಮನಸ್ಸನ್ನು ಮುತ್ತುತ್ತವೆ.

ಇನ್ನೂರಕ್ಕಿಂತ ಹೆಚ್ಚು ಬಾರಿ ಭಾರತದಲ್ಲದ ಐವತ್ತಕ್ಕಿಂತ ಹೆಚ್ಚಿನ ಭಾಷೆಗಳಲ್ಲಿ ಮತ್ತೆ ಮತ್ತೆ ಹೇಳಲ್ಪಟ್ಟಿವೆ. ಪಂಚತಂತ್ರದ ಕಥೆಗಳು ರಾಜ್ಯ ಕಾರ್ಯತಂತ್ರಗಾರಿಕೆ, ಸಂತೋಷ, ಸ್ನೇಹದೊಳಗಿನ ಅಪಾಯಗಳು, ನೈತಿಕ ನಡವಳಿಕೆ, ಅಧಿಕಾರದ ಪಾಠಗಳು ಹೀಗೆ ಅನೇಕ ಬದುಕಿನ ಪಾಠಗಳನ್ನು ವಿವರಿಸುತ್ತವೆ. ಇವತ್ತಿನ ನಮ್ಮ ಜನರೇಶನ್‌ನ ವೈರಲ್ ಮೀಮ್ಸ್ ಗಳು ಏನಿದ್ದಾವಲ್ಲ ಪಂಚತಂತ್ರ ಬಹುಶಃ ಪ್ರಾಚೀನ ಕಾಲದ ಮೀಮ್ಸ್ ಗಳಾಗಿದ್ದಿರಬಹುದು ಎಂಬುದು ನನ್ನ ನಂಬಿಕೆ. ಪಂಚತಂತ್ರದ ಕಥೆ ಹೆಣೆಯುವ ಕುಶಲಗಾರಿಕೆ ಇದೆಯಲ್ಲ ಅದು ಜಿಯೋ- ತರಹದ ಕಥೆಗಾರರಿಂದ ಹಿಡಿದು ಬುಕಾಚಿಯೋವರೆಗಿನ ತಲೆಮಾರಿ ನವರೆಗೂ ದೊಡ್ಡ ಪ್ರಮಾಣದಲ್ಲಿ ಪ್ರಪಂಚದಾದ್ಯಂತ ಅನೇಕ ಲೇಖಕರನ್ನು ಮೋಡಿ ಮಾಡಿದೆ.

ಪಂಚತಂತ್ರದ ಮುಖ್ಯವಾದ ಆಲೋಚನೆ ಪ್ರತಿಬಿಂಬಿತ ಗೊಳ್ಳುವುದೇ ಕಥೆಗಳಲ್ಲಿ ಬರುವ ಮಾತನಾಡುವ ಕಾಡಿನ ಪ್ರಾಣಿಗಳ ಮೂಲಕ. ಈ ಮಾತನಾಡುವ ಅಂಶ ಮನುಷ್ಯರ ಅಧಿಕಾರದ ವ್ಯಾಮೋಹ, ನ್ಯಾಯ ಮತ್ತು ಬದುಕುಳಿಯುವಿಕೆ ಇಂತಹ ಆಶಯಗಳನ್ನೇ ಪ್ರತಿಪಾದಿಸುತ್ತವೆ. ಇವತ್ತಿನ ವಾಟ್ಸಾಪ್, ಫೇಸ್ ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್ ತರಹದ ಸಾಮಾಜಿಕ ಮಾಧ್ಯಮಗಳ ನೆಟ್‌ವರ್ಕ್‌ನಂತೆ ಅಂದಿನ ಪ್ರವಾಸಿ ಸ್ಥಳಗಳ, ರಾಯಭಾರಿಗಳ, ಸನ್ಯಾಸಿಗಳ, ವಿದ್ವಾಂಸರ, ಸೈನಿಕರ, ವರ್ತಕರ, ಪ್ರತ್ಯೇಕಿಸಲ್ಪಟ್ಟ ಪ್ರವಾಸಿಗರ ಹೀಗೆ ವರ್ಣರಂಜಿತವಾದ ನೆಟ್‌ವರ್ಕ್ ಮೂಲಕ ಪಂಚತಂತ್ರದ ಕಥೆಗಳು ಜಗತ್ತಿನೆಲ್ಲೆಡೆ ತಮ್ಮದೇ ಶೈಲಿಯಲ್ಲಿ, ಭಾಷೆಯಲ್ಲಿ, ಭಾವದಲ್ಲಿ, ಪ್ರಚುರಗೊಂಡವು.

ಪಂಚತಂತ್ರದಿಂದ ಹೊರತೆಗೆಯಲಾದ ಅಮೃತವು ನಮ್ಮ ಸತ್ತ ಬುದ್ಧಿ ಶಕ್ತಿಯನ್ನು ಪುನರುಜ್ಜೀವನಗೊಳಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ನ ವಕೀಲೆ ಡಾ. ಚಂದ್ರಾ ರಾಜನ್ ಅಭಿಪ್ರಾಯಿಸುತ್ತಾರೆ. ಈ ಹೊತ್ತಿನ ಫೇಸ್ ಬುಕ್ ಹಾಗೂ ಟ್ವಿಟರ್ ಯುಗ ದಲ್ಲಿ ಎರಡು ನಿಮಿಷಗಳಿಗಿಂತ ಹೆಚ್ಚು ಒಂದು ವಿಷಯದ ಬಗ್ಗೆ ಓದಲು ಸಾಮಾನ್ಯವಾಗಿ ಯಾರಿಗೂ ಮನಸ್ಸು ಬರುವುದಿಲ್ಲ. ಹಾಗಾಗಿ ಏನಾದರೂ ಹೇಳುವುದಿದ್ದರೆ ಅದನ್ನು ಎರಡು ನಿಮಿಷಗಳ ಒಳಗೆ ಅಥವಾ ಒಂದು ಮೊಬೈಲ್ ಸ್ಕ್ರೀನ್ ಮೀರದಂತೆ ಹೇಳಿ ಮುಗಿಸಬೇಕು. ಹಾಗಿದ್ದರೆ ಮಾತ್ರ ಓದುಗರನ್ನು ತಲುಪಬಹುದು.

ಸಾವಿರಾರು ವರ್ಷಗಳ ಹಿಂದೆಯೇ ಇಂತಹ ಪರಿಸ್ಥಿತಿಯು ಪಂಚತಂತ್ರವನ್ನು ರಚಿಸಿದ ಪಂಡಿತ ವಿಷ್ಣುಶರ್ಮನಿಗೂ ಬಂದೊ ದಗಿತ್ತು ಎಂದರೆ ನಂಬಲು ಸ್ವಲ್ಪ ಕಷ್ಟವೇ ಸರಿ. ಪಂಚತಂತ್ರದೊಳಗಿನ ಕಥೆಗಳು ನಮಗೆ ಗೊತ್ತು. ಆದರೆ ಪಂಚತಂತ್ರದ ಕಥೆ ಗೊತ್ತೇ? ಅಮರ ಶಕ್ತಿ ಎಂಬ ರಾಜ ತನ್ನ ಮೂವರು ಮೂರ್ಖ ಮಕ್ಕಳನ್ನು ಹೇಗೆ ವಿದ್ಯಾವಂತರನ್ನಾಗಿ ಮಾಡುವುದೆಂದು ಮಂತ್ರಿಗಳೊಡನೆ ಸಮಾಲೋಚಿಸುತ್ತಾನೆ.

ಪಾಣಿನಿಯ ವ್ಯಾಕರಣ, ಮನುಸ್ಮೃತಿ, ಚಾಣಕ್ಯನ ಅರ್ಥಶಾಸ್ತ್ರ, ವಾತ್ಸಾಯನ ಕಾಮಶಾಸ ಮುಂತಾದವುಗಳನ್ನು ಸಾಂಪ್ರದಾ ಯಿಕವಾಗಿ ಕಲಿಯಲು ಹತ್ತಾರು ವರ್ಷಗಳೇ ಬೇಕಿರುವಾಗ ಶೀಘ್ರವಾಗಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಸಕಲ ಶಾಸ ಕೋವಿದನಾದ ೮೦ ವರ್ಷದ ವಿಷ್ಣುಶರ್ಮನೆಂಬ ಬ್ರಾಹ್ಮಣನಲ್ಲಿ ಬಿಡಬೇಕೆಂದು ನಿರ್ಧಾರವಾಗುತ್ತದೆ. ಶಾಸಗಳಲ್ಲಿ ಸತ್ವವಿಲ್ಲ ದನ್ನು ಬಿಟ್ಟು ಸಾರವನ್ನು ಮಾತ್ರ ಬೋಧಿಸಿ ವಿಷ್ಣುಶರ್ಮನು ಆರು ತಿಂಗಳುಗಳಲ್ಲಿ ಅವರನ್ನು ನೀತಿ ಶಾಸ್ತ್ರದಲ್ಲಿ ಕೌಶಲರನ್ನಾಗಿ ಮಾಡುತ್ತೇನೆಂದು ಅವರಿಗಾಗಿ ಪಂಚತಂತ್ರವೆಂಬ ಗ್ರಂಥವನ್ನು ರಚಿಸಿ ಬೋಧಿಸುತ್ತಾನೆ.

ಎಲ್ಲದರಲ್ಲೂ ಸಾರ ಮಾತ್ರವನ್ನು ಬೇಗನೆ ತಿಳಿದುಕೊಳ್ಳುವ ಹಂಬಲವಿರುವ ಇಂದಿನ ಯುವ ಜನಾಂಗಕ್ಕೆ ವಿವಿಧ ಶಾಸಗಳ ಸಾರವನ್ನು ಶೋಽಸಿ ಇಟ್ಟಿರುವ ಪಂಚತಂತ್ರದ ರಚನೆ ಸಹಜವಾಗಿಯೇ ಆಕರ್ಷಣೀಯ. ಪಂಚತಂತ್ರದ ಕಥಾ ಮುಖದಲ್ಲಿ ವಿಷ್ಣುಶರ್ಮನು ಇದನ್ನು ಬಾಲ ಬೋಧನೆಗಾಗಿ ರಚಿಸಿದನೆಂದು ಹೇಳಿಕೊಂಡಿದ್ದಾನೆ. ಆ ಕಾಲದ ಬಾಲಕರಿಗೆ ಇಂದಿನವರಿಗಿಂತ ಹೆಚ್ಚು ಪ್ರೌಢಿಮೆ ಇತ್ತೋ, ತಿಳಿಯದು!? ಆದರೆ ಇದರಲ್ಲಿರುವ ವಿಷಯಗಳು ನಮ್ಮ ಈ ಕಾಲದ ಮಕ್ಕಳಿಗಷ್ಟೇ ಸೀಮಿತವಾಗಿರದೆ ದೊಡ್ಡವ ರಿಗೂ ಸಾಕಷ್ಟು ಗ್ರಹಿಕೆಗೆ ಹಾಗೂ ಕಲಿಕೆಗೆ ವಿಷಯಗಳನ್ನು ಒದಗಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಹೆಸರೇ
ಹೇಳುವಂತೆ ಪಂಚತಂತ್ರದಲ್ಲಿ ಒಟ್ಟು ಐದು ತಂತ್ರಗಳಿವೆ. ಈ ಐದು ತಂತ್ರಗಳಲ್ಲಿ ಒಂದೊಂದು ಪ್ರಧಾನ ಸೂತ್ರ ಕಥೆಗಳಲ್ಲಿ
ಇತರ ಉಪಕಥೆಗಳು ಸಾಂದರ್ಭಿಕವಾಗಿ ಬರುತ್ತವೆ.

ಪಂಚತಂತ್ರ ಐದು ತಂತ್ರಗಳ ಸ್ಥೂಲ ಪರಿಚಯ ಹೀಗಿದೆ: ೧) ಮೊದಲನೆಯ ತಂತ್ರ ಮಿತ್ರ ಭೇದ: ಕಾಡಿನ ರಾಜನಾದ ಸಿಂಹ ಹಾಗೂ ನಾಡಿನಿಂದ ಬಂದ ಎತ್ತಿನ ಮಧ್ಯೆ ಉಂಟಾದ ಅಸಹಜ ಮೈತ್ರಿಯ ಮೋಹದಲ್ಲಿ ಸಿಂಹವು ಕರ್ತವ್ಯ ಭ್ರಷ್ಟನಾಗಿ, ಅದರ ಪ್ರಜೆಗಳು ತೊಂದರೆಗೆ ಸಿಲುಕಿದಾಗ ಸಿಂಹದ ಮಂತ್ರಿಯಾಗಿದ್ದ ನರಿಯು ಈ ಮೈತ್ರಿಯನ್ನು ಹೇಗೆ ಹೊಡೆಯಿತು ಎಂಬುದನ್ನು ಇಲ್ಲಿ ತೋರಿಸಲಾಗಿದೆ. ಈ ತಂತ್ರದಲ್ಲಿ ಒಟ್ಟು ಇಪ್ಪತ್ತೆರೆಡು ಉಪಕಥೆಗಳಿವೆ.

೨) ಎರಡನೆಯ ತಂತ್ರ ಮಿತ್ರ ಸಂತ್ರ ಸಂಪ್ರಾಪ್ತಿ: ಒಳ್ಳೆಯ ಮಿತ್ರರನ್ನು ಗಳಿಸುವುದರಿಂದ ಯಾವ ವಿಶೇಷವಾದ ಸ್ಥಳಕರಣೆ ಗಳಿಲ್ಲದೆಯೇ ಆಪತ್ತಿನಿಂದ ಹೇಗೆ ದೂರವಾಗಬಹುದೆಂದು ಕಾಗೆ, ಇಲಿ, ಆಮೆ ಮತ್ತು ಜಿಂಕೆಯ ಸೂತ್ರ ಕಥೆಯ ಮೂಲಕ ತೋರಿಸಲಾಗಿದೆ. ಇಲ್ಲಿ ಉತ್ತಮ ಮಿತ್ರನ ಲಕ್ಷಣಗಳನ್ನು ವಿವರಿಸಲಾಗಿದೆ. ಈ ತಂತ್ರದಲ್ಲಿ ಒಟ್ಟು ಆರು ಉಪಕಥೆಗಳು ಬರುತ್ತವೆ.
೩) ಮೂರನೆಯ ತಂತ್ರ: ಕಾಕೋಲುಕಿಯ ಕಾಗೆ ಹಾಗೂ ಗೂಬೆಗಳ ಮಧ್ಯ ಇರುವ ಸಹಜ ವೈರತ್ವದ ಬಗ್ಗೆ ಸೂತ್ರ ಕಥೆಯನ್ನುಳ್ಳ ಈ ತಂತ್ರದಲ್ಲಿ ಸಂಧಿ, ವಿಗ್ರಹ, ಯಾನ, ಆಸನ, ಸಂಶ್ರಯ ಮತ್ತು ಶತ್ರುವನ್ನು ಗೆಲ್ಲಲು ಬಳಸುವ ವಿಧಾನಗಳನ್ನು ಯಾವ ಸಂದರ್ಭದಲ್ಲಿ ಹೇಗೆ ಬಳಸಬೇಕೆಂದು ಹದಿನೇಳು ಉಪಕಥೆಗಳ ಮೂಲಕ ವಿವರಿಸಲಾಗಿದೆ.

೪) ನಾಲ್ಕನೆಯ ತಂತ್ರ ಲಬ್ಧ ಪ್ರಣಾಶ : ಈ ತಂತ್ರದಲ್ಲಿ ಮಂಗ ಹಾಗೂ ಮೊಸಳೆಯ ಸೂತ್ರ, ಕಥೆಯ ಮೂಲಕ ಪಡೆದು ಕೊಂಡದ್ದನ್ನು ಮೂರ್ಖತನದಿಂದ ಕಳೆದುಕೊಳ್ಳುವುದರ ಬಗ್ಗೆ ವಿವರಿಸಲಾಗಿದೆ. ಇದರಲ್ಲಿ ಹನ್ನೊಂದು ಉಪಕಥೆಗಳಿವೆ.

ಕೊನೆಯ ಮತ್ತು ಐದನೆಯ ತಂತ್ರ ಅಪರೀಕ್ಷಿತಕಾರಕ ಸರಿಯಾಗಿ ವಿಚಾರ ಮಾಡದೆ ಕೈಗೊಂಡ ಕಾರ್ಯಗಳಿಂದ ಆಗುವ ಅನಾಹುತಗಳನ್ನು ವಿವಿಧ ಕಥೆಗಳ ಮೂಲಕ ತೋರಿಸಲಾಗಿದೆ. ಈ ಭಾಗದಲ್ಲಿ ಒಟ್ಟು ಹದಿನಾಲ್ಕು ಉಪಕಥೆಗಳಿವೆ. ಈ ಹೊತ್ತಿನ ಮ್ಯಾನೇಜ್ಮೆಂಟ್ ಸಿಲಬಸ್‌ಗೆ ಹೆಚ್ಚು ಹತ್ತಿರವಾಗಿರುವ ಪಂಚತಂತ್ರ ಕಥೆಗಳು ವಾಸ್ತವಕ್ಕೆ ಹತ್ತಿರವಾಗಿವೆ. ವಿವಿಧ ಸಂದರ್ಭಗಳನ್ನು
ಹೇಗೆ ಎದುರಿಸಬೇಕು, ಸ್ವಧರ್ಮ ಯಾವಾಗ ಪಾಲಿಸಬೇಕು, ಆಪತ್ತು ಧರ್ಮ ಯಾವಾಗ ಅನ್ವಯಿಸುತ್ತದೆ, ದೂರ್ತರನ್ನು,
ನೀಚರನ್ನು, ಸಮಬಲರನ್ನು, ಬಲಶಾಲಿಗಳನ್ನು ಹೇಗೆ ಎದುರಿಸಬೇಕು.

ಮೂರ್ಖರೊಂದಿಗೆ ಹಾಗೂ ಬುದ್ಧಿವಂತರೊಂದಿಗೆ ವ್ಯವಹಾರ ಹೇಗಿರಬೇಕು? ಪರಂಪರೆಯ ಮಹತ್ವವೇನು? ಸ್ವದೇಶದಲ್ಲಿ ಎಲ್ಲಿಯವರೆಗೂ ನೆಲೆ ನಿಲ್ಲಬೇಕು? ವಿದೇಶವನ್ನು ಯಾವಾಗ ಆಶ್ರಯಿಸಬೇಕು? ಗುರಿ ಮುಟ್ಟಲು ಕಪಟ ತಂತ್ರವನ್ನು ಎಲ್ಲಿ ಮತ್ತು ಹೇಗೆ ಬಳಸಿಕೊಳ್ಳಬೇಕು? ಕಾರ್ಯಾಲಯದ ರಾಜಕೀಯಕ್ಕೆ ಹೇಗೆ ಸ್ಪಂದಿಸಬೇಕು ಮುಂತಾದ ಹತ್ತು ಹಲವು ವಿಷಯಗಳನ್ನು ನಮ್ಮ ವೃತ್ತಿ, ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಅಳವಡಿಸಿಕೊಳ್ಳಬಹುದೆಂದು ಪಂಚತಂತ್ರ ತಿಳಿಸಿಕೊಡುತ್ತದೆ.

ನಮ್ಮೆಲ್ಲರ ಸುತ್ತಮುತ್ತಲೇ ಇರುವ ಪ್ರಾಣಿ, ಪಕ್ಷಿ, ಸನ್ಯಾಸಿ, ಮಂತ್ರಿ, ಮುದುಕಿ, ಆನೆ, ಗುಬ್ಬಚ್ಚಿ, ಹಂಸ, ಭಿಕ್ಷುಕ, ಆಮೆ, ಜಿಂಕೆ
ಮೊದಲಾದ ಪಾತ್ರಗಳೇ ಪಂಚತಂತ್ರದಲ್ಲಿ ವಿಜೃಂಭಿಸುವ ಕಾರಣ ಈ ಕಥೆಗಳು ತುಂಬಾ ಆಪ್ತವಾಗುತ್ತವೆ. ನಾವು ಬಾಲ್ಯದಲ್ಲಿ ಕೇಳಿದ ಕಾಗೆಯೂ ಬಾಯಾರಿದ ಕಥೆ, ನರಿಯು ಮೋಸ ಮಾಡಿದ ಕಥೆ, ವೃದ್ಧ ಬ್ರಾಹ್ಮಣನ ಕಥೆ, ಮೃಗರಾಜ ಸಿಂಹನ ಕಥೆ, ಕೋತಿಯ ಕಥೆ, ಮೊಲದ ಕಥೆ, ಕರಡಿ ಜೇನು ಸವಿದ ಕಥೆ, ಇಲಿ ಮತ್ತು ಸನ್ಯಾಸಿಯ ಕಥೆ, ಇಲಿ ಮತ್ತು ಸಿಂಹದ ಕಥೆ, ವಾಚಾಳಿ ಯಾದ ಆಮೆಯ ಕಥೆ, ನರಿಯು ದ್ರಾಕ್ಷಿ ಹುಳಿ ಎಂದು ಹೇಳಿದ ಕಥೆ, ಜಿಂಕೆ ತನ್ನ ಸೌಂದರ್ಯದ ಬಗ್ಗೆ ಹೆಮ್ಮೆ ಪಟ್ಟ ಕಥೆ, ಇವೆಲ್ಲವೂ ಪಂಚತಂತ್ರದಲ್ಲಿ ಮೆರೆದ ಕಥೆಗಳು.

ಇಲ್ಲಿ ಪ್ರಾಣಿ ಪಕ್ಷಿಗಳು ನಮ್ಮ ಹಾಗೆ ಮಾತನಾಡುತ್ತವೆ ಮತ್ತು ಈ ಕಥೆಗಳಲ್ಲಿ ಬದುಕಿಗೆ ಬೇಕಾದ ಶ್ರೇಷ್ಠವಾದ ಸಂದೇಶಗಳು ಇವೆ. ಆದ್ದರಿಂದ ಈ ಕಥೆಗಳು ಬಹಳ ಬೇಗ ಲೋಕದ ಗಮನ ಸೆಳೆದವು. ೧೧ನೆಯ ಶತಮಾನದಲ್ಲಿ ಈ ಕಥೆಗಳು ಯುರೋಪ್ ಖಂಡ ದಲ್ಲಿ ಬಾರಿ ಜನಪ್ರಿಯವಾದವು. ಇಂಗ್ಲೆಂಡ್, ಜರ್ಮನಿ, ಇಟಲಿ, ಫ್ರಾನ್ಸ್ , ಪೋರ್ಚುಗಲ್, ಸ್ಪೇನ್, ದೇಶಗಳು ಈ ಕಥೆಗಳನ್ನು ತಮ್ಮ ಪ್ರಾಥಮಿಕ ಶಾಲೆಗಳ ಪಠ್ಯದಲ್ಲಿ ಮುಂದುವರಿಸಿದವು. ಮುಂದೆ ಅದರ ಆಕರ್ಷಕ ವಿಡಿಯೋಗಳು ಶಾಲಾ ಮಕ್ಕಳ ತರಗತಿಗ ಳಲ್ಲಿ ಮಕ್ಕಳ ಮನಸ್ಸನ್ನು ತಣಿಸಿದವು. ಮನೋವೈಜ್ಞಾನಿಕವಾಗಿ ಕೂಡ ಈ ಕಥೆಗಳು ನಮ್ಮೆಲ್ಲರ ಮೇಲೆ ಇಂಪ್ಯಾಕ್ಟ್ ಮಾಡುವ ಬಹಳ ದೊಡ್ಡ ಸಾಮರ್ಥ್ಯವನ್ನು ಹೊಂದಿವೆ.

ಸಂಜೆ ಹೊತ್ತು ಕಥೆಗಳನ್ನು ಧ್ವನಿಸುವ ವೈವಿಧ್ಯದ ಜೊತೆಗೆ ಮಕ್ಕಳು ಕೇಳಲು ಸಾಧ್ಯವಾದರೆ ಮಕ್ಕಳಲ್ಲಿ ತಾರ್ಕಿಕ ಆಲೋಚನೆ, ವಿವೇಚನೆ ಬಲಗೊಳ್ಳುತ್ತದೆ ಎನ್ನುತ್ತಾರೆ ಮನೋವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು. ಮನೋವಿಕಾಸಕ್ಕೆ ಈ ಕಥೆಗಳು ಪೂರಕವೇ ಆಗಿವೆ. ಈ ಕಥೆಗಳು ಮಕ್ಕಳಲ್ಲಿ ಆರೋಗ್ಯ ಪೂರ್ಣವಾದ ಕನಸುಗಳನ್ನು ಕೂಡ ಕಟ್ಟುತ್ತವೆ ಮತ್ತು ಮಾನಸಿಕ ಆರೋಗ್ಯವನ್ನು ಖಾತರಿಪಡಿಸುತ್ತವೆ. ಕಥೆಗಳಲ್ಲಿ ಅಡಗಿರುವ ಜೀವನ ಮೌಲ್ಯಗಳು ಮತ್ತು ಸಂದೇಶಗಳು ಖಂಡಿತವಾಗಿಯೂ ನಮಗೆಲ್ಲ ಸಿಗುವ ಬೋನಸ್ಸುಗಳು ಕೇವಲ ಮಕ್ಕಳಿಗೆ ಮಾತ್ರವಲ್ಲದೆ ಎಲ್ಲ ವಯಸ್ಸಿನವರೆಗೂ ಈ ಕಥೆಗಳು ಅಷ್ಟೇ ಖುಷಿ ಕೊಡುತ್ತವೆ. ಲಂಡನಿನ್ನ ಯಶಸ್ವಿ ಬಿಸಿನೆಸ್‌ಮನ್ ಒಬ್ಬನನ್ನು ಪತ್ರಕರ್ತನೊಬ್ಬ ನಿಮ್ಮ ಯಶಸ್ಸಿಗೆ ಕಾರಣವೇನು ತಿಳಿಸಿ ಎಂದು ಕೇಳಿದಾಗ ಆತ ಮುಗುಳ್ನಕ್ಕು ತನ್ನ ಮುಂದಿದ್ದ ಟೀಪಾಯ್ ಮೇಲೆ ಹರಡಿದ್ದ ಪಂಚತಂತ್ರ ಬುಕ್‌ಗಳನ್ನು ತೋರಿಸುತ್ತಾನಂತೆ-ಹೀಗೆಂದು ವಿಶ್ವೇಶ್ವರ ಭಟ್ಟರು ಬಹಳ ಹಿಂದೆ ತಮ್ಮ ಅಂಕಣದಲ್ಲಿ ಬರೆದಿದ್ದರು.

ಹೀಗೆ ಪಂಚತಂತ್ರ ಇಡೀ ಪ್ರಪಂಚಕ್ಕೆ ಮ್ಯಾನೇಜ್‌ಮೆಂಟ್ ಪಾಠಗಳನ್ನು ಹೇಳಿಕೊಟ್ಟಿದೆ. ಬೆಂಗಳೂರಿನ ಪಿಇಎಸ್ ವಿಶ್ವ ವಿದ್ಯಾ ನಿಲಯದ ಮನೋವಿಜ್ಞಾನ ವಿಭಾಗದ ಪ್ರೊ. ವಿಜಯೇಂದ್ರ ಕುಮಾರ್ ಎಸ್.ಕೆ. ಹಾಗೂ ಕುವೆಂಪು ವಿಶ್ವವಿದ್ಯಾನಿಲಯದ ಮನೋವಿಜ್ಞಾನ ವಿಭಾಗದ ಹಿರಿಯ ಪ್ರೊ. ಎ.ಆರ್. ಕೃಷ್ಣಮೂರ್ತಿರವರು Panchatantra: A treatise on Lifeskills
education & training ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದಾರೆ. ಪಂಚತಂತ್ರ ಕಥೆಗಳು ಮನುಷ್ಯರ ಭಾವನೆ ಮೌಲ್ಯ ಹಾಗೂ ಸಾಮಾಜಿಕ ನ್ಯಾಯಗಳ ಬಗೆಗೆ ಆಳವಾದ ಜ್ಞಾನವನ್ನು ನಮಗೆ ನೀಡುತ್ತವೆ.

ಮನುಷ್ಯರ ವರ್ತನೆಯನ್ನು ಬದಲಾಯಿಸುವ ಸಲುವಾಗಿಯೇ ಪಂಚತಂತ್ರ ಕಥೆಗಳನ್ನು ರಚಿಸಲ್ಪಟ್ಟಿವೆ ಎಂದರೆ ತಪ್ಪಾಗ ಲಾರದು. ಬದುಕಿನ ಪ್ರಯಾಣದಲ್ಲಿ ಬಂದೆರಗುವ ಕಷ್ಟಗಳನ್ನು, ಸವಾಲುಗಳನ್ನು, ಸೂಕ್ಷ್ಮ ವ್ಯತ್ಯಾಸಗಳನ್ನು, ಜಟಿಲತೆಗಳನ್ನು ಬಹಳ ಆಹ್ಲಾದಕರವಾಗಿ ಸಂತೋಷದಾಯಕವಾಗಿ ಒಪ್ಪಿಕೊಂಡು ನಿಭಾಯಿಸಿಕೊಂಡು ಹೋಗುವ ಚತುರತೆಯನ್ನು ನಮಗೆ
ಕಲಿಸಿಕೊಡುತ್ತದೆ. ಪಂಚತಂತ್ರವನ್ನು ‘Art of Intelligent living’  ಎಂದರೆ ತಪ್ಪಾಗಲಾರದಲ್ಲವೇ?