Thursday, 12th December 2024

ಎಣ್ಣೆ ಕಂಪೆನಿಯಿಂದ ಕಲಿಯಬೇಕಾದ ಪಾಠ

ವಿದೇಶ ವಾಸಿ

ಕಿರಣ್ ಉಪಾಧ್ಯಾಯ, ಬಹ್ರೈನ್

dhyapaa@gmail.com

ಪ್ಯಾರಾಚೂಟ್ ಎಂದರೇ ನೀಲಿ ಡಬ್ಬಿಯಲ್ಲಿರುವ ಕೊಬ್ಬರಿ ಎಣ್ಣೆ ಎಂದು ಹೇಳುವವರು ಹೆಚ್ಚು. ಹಳ್ಳಿಯ ಸಂತೆಗಳಿಂದ ಹಿಡಿದು ಎಲ್ಲ ಕಡೆ ಪ್ಯಾರಾಚೂಟ್ ಎಣ್ಣೆಗೆ
ಆದ್ಯತೆ. ಹೊಸ ಉದ್ಯಮಗಳನ್ನು ಆರಂಭಿಸಲು ಯೋಜನೆ ಹಾಕಿರುವ ಯುವಕರಿಗೆ ಪ್ಯಾರಾಚೂಟ್ ಎಣ್ಣೆ ಕಂಪನಿಯ ಸಾಹಸಗಾಥೆ ಸ್ಫೂರ್ತಿಯಾಗಬಲ್ಲದು.

ಪ್ಯಾರಾಚೂಟ್ ಎಣ್ಣೆಯ ಹೆಸರು ಕೇಳದ ಭಾರತೀಯರು ವಿರಳ. ಪ್ಯಾರಾಚೂಟ್ ಎಂದರೇ ಆಕಾಶದಿಂದ ಜಿಗಿಯಲು ಬಳಸುವ ಸಾಧನ ಎನ್ನುವವರಿಗಿಂತ, ನೀಲಿ ಬಣ್ಣದ ಡಬ್ಬಿಯಲ್ಲಿ ಬರುವ ಕೊಬ್ಬರಿ ಎಣ್ಣೆ ಅಥವಾ ತೆಂಗಿನ ಎಣ್ಣೆ ಎಂದು ಹೇಳುವವರೇ ಹೆಚ್ಚು. ಇಂದು ಭಾರತದಲ್ಲಿ ತಲೆಗೆ ಹಾಕುವ ಎಣ್ಣೆ ಸಂತೆಯಲ್ಲಿ, ಪ್ಯಾರಾ ಚೂಟ್ ಕೊಬ್ಬರಿ ಎಣ್ಣೆಗೆ ಮಹತ್ವದ ಸ್ಥಾನ. ತಲೆಗೆ ಹಾಕುವ ಎಣ್ಣೆ ಎಂದರೆ ಕೂದಲು, ನೆತ್ತಿ ಅಥವಾ ಬುರುಡೆಯ ಸಂರಕ್ಷಣೆಗೆ ಬಳಸುವಂಥದ್ದು.

ಕಳೆದ ಕೆಲವು ದಶಕಗಳಿಂದ ಭಾರತದ ನಂಬರ್ ಒನ್ ಕೊಬ್ಬರಿ ಎಣ್ಣೆ ಎಂದು ಕರೆಸಿಕೊಳ್ಳುವ ಪ್ಯಾರಾಚೂಟ್ ಸಾಕಷ್ಟು ಏರಿಳಿತ ಕಂಡಿದೆ. ಅದರ ನಡುವೆಯೂ ಇಂದು ಮೊದಲನೆಯ ಸ್ಥಾನದಲ್ಲಿರುವ ಈ ಎಣ್ಣೆಯಿಂದ ಸಾಕಷ್ಟು ವ್ಯಾಪಾರದ ಪಾಠಗಳನ್ನು ಕಲಿಯಬಹು ದಾಗಿದೆ. ಇಂದು ಮಾರುಕಟ್ಟೆಯ ಶೇಕಡಾ ಅರವತ್ತ ರಷ್ಟನ್ನು ಪ್ಯಾರಾಚೂಟ್ ಆವರಿಸಿಕೊಂಡಿದೆ. ಇದನ್ನು ತಯಾರಿಸುವ ಮಾರಿಕೊ ಇಂಡಸ್ಟ್ರೀಸ್ ಸಂಸ್ಥೆಯ ಆದಾಯ ಇಂದು ಒಂದು ಬಿಲಿಯನ್ ಡಾಲರ್ (ಸುಮಾರು 7500 ಕೋಟಿ ರೂಪಾಯಿ). ಸಂಸ್ಥೆ ಕಳೆದ ನಾಲ್ಕೈದು ವರ್ಷದಿಂದ ಕೇವಲ ಒಂದೂವರೆ ಸಾವಿರ ಉದ್ಯೋಗಿ ಗಳನ್ನು ಇಟ್ಟುಕೊಂಡು, ಪ್ರತಿ ವರ್ಷ ಸುಮಾರು ನೂರು ಕೋಟಿ ರುಪಾಯಿಯ ನಿವ್ವಳ ಲಾಭ ಮಾಡುತ್ತಿದ್ದು, ಸುಮಾರು ಐದು ಸಾವಿರ ಕೋಟಿ ರುಪಾಯಿಗಳ ಆಸ್ತಿ ಹೊಂದಿದೆ.

ಇದರ ಹಿಂದಿರುವ ಮಾಸ್ಟರ್ ಮೈಂಡ್, ಹರ್ಷ್ ಮಾರಿವಾಲಾ. ಸ್ವಾತಂತ್ರ್ಯಕ್ಕೂ ಪೂರ್ವದಲ್ಲಿ ಗುಜರಾತ್‌ನ ಕಛ್ ಪ್ರದೇಶದ ಕಾಂಜಿ ಮೊರಾರ್ಜಿ ಮುಂಬೈಗೆ ಬಂದು ಮಸಾಲೆ ಪದಾರ್ಥಗಳ ವ್ಯಾಪಾರ ಆರಂಭಿಸಿದರು. ತಮ್ಮ ವ್ಯಾಪಾರದಲ್ಲಿ ಸಹಕರಿಸಲು ಸೋದರಳಿಯ ವಲ್ಲಭದಾಸ ವಾಸಂಜಿಯನ್ನು ಕರೆತಂದರು. ಇಬ್ಬರೂ ಸೇರಿ ಯುರೋಪ್ ದೇಶಗಳಿಗೆ ಶುಂಠಿ ಮತ್ತು ಮೆಣಸು ರಫ್ತು ಮಾಡಲು ಆರಂಭಿಸಿದರು. ಕಾಲಕ್ರಮೇಣ, ತಮ್ಮ ವ್ಯಾಪ್ತಿಯನ್ನು ಕೊಬ್ಬರಿ, ತೆಂಗಿನ ಎಣ್ಣೆ, ಕಾಳು ಮೆಣಸು ಮತ್ತು ಇನ್ನಿತರ ಕೃಷಿ ಉತ್ಪನ್ನ ಗಳಿಗೆ ವಿಸ್ತರಿಸಿದರು.

ವಾಸಂಜಿ ಕೇರಳದಿಂದ ಕಾಳು ಮೆಣಸು ತಂದು ರಫ್ತು ಮಾಡುತ್ತಿದುದರಿಂದ, ಜನ ಅವರನ್ನು ಮಾರಿವಾಲಾ ಎಂದು ಕರೆಯಲಾರಂಭಿಸಿದರು. (ಗುಜರಾತಿ ಭಾಷೆಯಲ್ಲಿ ಮಾರಿ ಎಂದರೆ ಮೆಣಸು ಎಂಬ ಅರ್ಥ). ವಾಸಂಜಿ ಮಾರಿವಾಲ ಆಗಿ ಬದಲಾದರು. ವಲ್ಲಭದಾಸ 1947ರಲ್ಲಿ ಬಿಒಆಯ ಎಲ್ (Bombay Oil Industries Limited) ಸಂಸ್ಥೆ ಪ್ರಾರಂಭಿಸಿದರು. ವಲ್ಲಭದಾಸರ ನಾಲ್ಕು ಮಕ್ಕಳು ತಂದೆಯ ಉದ್ದಿಮೆಯನ್ನು ಸೇರಿಕೊಂಡರು. ಎರಡೂವರೆ ದಶಕದ ಅವಧಿಯಲ್ಲಿ ಸಂಸ್ಥೆ, ಮುಂಬೈನಲ್ಲಿ ಮೂರು, ಕೇರಳದಲ್ಲಿ ಒಂದು, ಒಟ್ಟೂ ನಾಲ್ಕು ಉತ್ಪಾದನಾ ಘಟಕಗಳನ್ನು ಸ್ಥಾಪಿಸಿತು.

1990 ರಲ್ಲಿ ಸಂಸ್ಥೆಯನ್ನು ನಾಲ್ಕು ಭಾಗವನ್ನಾಗಿ ವಿಂಗಡಿಸಿ, ಒಬ್ಬೊಬ್ಬರಿಗೆ ಒಂದೊಂದರ ಉಸ್ತುವಾರಿ ನೀಡಲಾಯಿತು. ಗ್ರಾಹಕರ ಉತ್ಪನ್ನಗಳ ವಿಭಾಗ
ಮಾರಿಕೊ ಲಿಮಿಟೆಡ್ ಎಂದು ಹೆಸರು ಪಡೆಯಿತು. ಹರ್ಷ ಮಾರಿವಾಲಾ ಅದರ ಉಸ್ತುವಾರಿಯಾದರು. ಅವರು ಸಂಸ್ಥೆಯ ಹೆಸರನ್ನು ಮಾರಿಕೊ ಇಂಡಸ್ಟ್ರೀಸ್
ಎಂದು ಬದಲಾಯಿಸಿ, ಹೊಸ ಸಾಹಸಗಳಿಗೆ ಕೈ ಹಾಕಿದರು. ಪ್ಯಾರಾಚೂಟ್ ಮತ್ತು ಸಫಲಾ ಬ್ರ್ಯಾಂಡ್ಗಳು ಬಿಒಐಎಲ್ ಸ್ವಾಧೀನದ ಇದ್ದು, ಮಾರಿಕೊ ಅದನ್ನು ಗುತ್ತಿಗೆಗೆ ಪಡೆದಿತ್ತು. ಹತ್ತು ವರ್ಷದ ನಂತರ, ಮೂವತ್ತು ಕೋಟಿ ರೂಪಾಯಿ ಕೊಟ್ಟು ಹರ್ಷ್ ಮಾರಿವಾಲಾ ಅದನ್ನು ಖರೀದಿಸಿದರು.

ಗುತ್ತಿಗೆ ಅಥವಾ ಎರವಲು ಪಡೆ ಯುವುದಕ್ಕಿಂತ ಖರೀದಿಸಿ ಸ್ವಂತzಗಿಸಿಕೊಳ್ಳುವುದು ಒಳಿತು ಎಂಬುದನ್ನು ವ್ಯಾಪಾರದಲ್ಲಿರುವವರು ಅರ್ಥೈಸಿಕೊಳ್ಳಬೇಕಾದ ಮೊದಲ ಪಾಠ. ಹರ್ಷ್ ಮಾರಿಕೊ ಉಸ್ತುವಾರಿ ವಹಿಸಿಕೊಂಡಾಗ ಪ್ಯಾರಚೂಟ್ ಎಂದರೆ ಹದಿನೈದು ಕಿಲೋ ತೂಕದ ಟಿನ್‌ಗಳಲ್ಲಿ ಲಭ್ಯವಾಗುವ ಖಾದ್ಯ ತೈಲವಾಗಿತ್ತು. ಅದನ್ನು ಮನೆಯಲ್ಲಿ, ಹೊಟೆಲ್‌ಗಳಲ್ಲಿ ಅಡುಗೆಗೆ ಮಾತ್ರ ಉಪಯೋಗಿಸುತ್ತಿದ್ದರಿಂದ, ವ್ಯಾಪಾರವೂ ಅಷ್ಟಕ್ಕಷ್ಟೇ ಎಂಬಂತಿತ್ತು. ಆ ದಿನಗಳಲ್ಲಿ ಕಲ್ಕತ್ತಾದ ಶಾಲಿಮಾರ್ ಸಂಸ್ಥೆ ಮತ್ತು ಮಹಾರಾಷ್ಟ್ರದ ನಾಗಪುರದಲ್ಲಿ ಕೆಲವು ಸಣ್ಣ ಸಣ್ಣ ಎಣ್ಣೆ ಉತ್ಪಾದಿಸುವ ಕಾರ್ಖಾನೆಗಳು ಹೇರ್ ಆಯಿಲ್ ತಯಾರಿಸಿ,
ಖಾದ್ಯ ತೈಲಕ್ಕಿಂತ ಹೆಚ್ಚಿನ ಲಾಭ ಮಾಡುತ್ತಿದ್ದವು.

ಅದನ್ನು ತಿಳಿದ ಹರ್ಷ್, ಕಲ್ಕತ್ತಾ ಮತ್ತು ನಾಗಪುರದಲ್ಲಿರುವ ಕೂದಲಿನ ಎಣ್ಣೆ ತಯಾರಿಸುವ ಕಾರ್ಖಾನೆಗಳಿಗೆ ಭೇಟಿ ನೀಡಿ, ಅದರ ವಿಧಾನ ತಿಳಿದರು. ಕೆಲವೇ ದಿನಗಳಲ್ಲಿ ಪ್ಯಾರಾಚೂಟ್ ಹೇರ್ ಆಯಿಲ್ ಮಾರುಕಟ್ಟೆಯ ಬಾಗಿಲು ತಟ್ಟಿತು. ಒಂದು ಉದ್ದಿಮೆಯಲ್ಲಿ, ವ್ಯಾಪಾರದಲ್ಲಿ ಇರುವವರು ಗ್ರಾಹಕರ ಬೇಡಿಕೆ ಏನು ಎಂಬುದನ್ನು ಅರಿತುಕೊಳ್ಳಬೇಕು, ತಾವು ತಯಾರಿಸಿದ್ದನ್ನು ಗ್ರಾಹಕರ ಮೇಲೆ ಹೇರುವುದಕ್ಕಿಂತ ಅವರ ಬೇಡಿಕೆಯ ವಸ್ತು ತಯಾರಿಸಿ ಕೊಡಬೇಕು
ಎನ್ನುವುದು ಕಲಿಯಬಹುದಾದ ಇನ್ನೊಂದು ಪಾಠ.

ಲಾಭಾಂಶ ಹೆಚ್ಚಿಸಲು ಎಣ್ಣೆ ತುಂಬುವ ಡಬ್ಬಿಯನ್ನು ದುಬಾರಿಯಾದ ಟಿನ್‌ನಿಂದ ಕಡಿಮೆ ಬೆಲೆಯ ಪ್ಲಾಸ್ಟಿಕ್ ಬಾಟಲಿಗೆ ಬದಲಾಯಿಸಲು ಹರ್ಷ್ ನಿರ್ಧರಿಸಿದರು. ಅದಕ್ಕೆ ಬೇಕಾಗಿ, ಅಂಗಡಿಕಾರರನ್ನು ಭೇಟಿಯಾಗಿ ಅವರ ಅಭಿಪ್ರಾಯ ತಿಳಿಯುವಂತೆ ತಮ್ಮ ರಿಸರ್ಚ್ ತಂಡದವರಿಗೆ ತಿಳಿಸಿದರು. ಕೊಬ್ಬರಿಯ ಘಮಲನ್ನು ಇಷ್ಟಪಡುವ ಇಲಿಗಳು ಪ್ಲಾಸ್ಟಿಕ್ ಬಾಟಲಿಯನ್ನು ಸುಲಭಾವಾಗಿ ಕೆರೆಯಬಹುದು ಎಂಬ ಅಭಿಪ್ರಾಯ ನೀಡಿದ ವ್ಯಾಪರಸ್ಥರು ಅದಕ್ಕೆ ಹೆಚ್ಚಿನ ಉತ್ಸಾಹ ತೋರಿಸ ಲಿಲ್ಲ. ಇಲಿಗಳಿಗೆ ಕೆರೆಯಲು ಸುಲಭವಾಗದಂತೆ ಬಾಟಲಿಯನ್ನು ವಿನ್ಯಾಸಗೊಳಿಸುವಂತೆ ಹರ್ಷ ತಮ್ಮ ತಂಡಕ್ಕೆ ಸೂಚಿಸಿದರು.

ಅದರ ಪ್ರತಿಫಲವೆಂಬಂತೆ, ಇಲಿಗಳಿಗೆ ಕಡಿಯಲು ಹಿಡಿತ ಸಿಗದ ವಕ್ರ ಮೇಲ್ಮೈನ ಬಾಟಲಿಗಳು ವಿನ್ಯಾಸಗೊಂಡವು. ಆದರೂ ಮೊದಮೊದಲು ಅಂಗಡಿಯವರು ಇದನ್ನು ಕೊಳ್ಳಲು ಉತ್ಸುಕತೆ ತೋರಿಸಲಿಲ್ಲ. ಅವರಿಗೆ ಮನವರಿಕೆಯಾಗಿ ಭರವಸೆ ಮೂಡಲು ಹತ್ತಿರ ಹತ್ತಿರ ಒಂದು ದಶಕವೇ ಹಿಡಿಯಿತು. ಈ ನಡುವೆ ಪರಿ ಶುದ್ಧತೆ ಮತ್ತು ಪರಿಮಳದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಇದ್ದದ್ದು ಪ್ಯಾರಚೂಟ್‌ಗೆ ವರವಾಯಿತು. ಇಂದು ದೊಡ್ಡ ದೊಡ್ಡ ನಗರದಲ್ಲಿರುವ ಮಳಿಗೆಗಳಿಂದ ಹಿಡಿದು ದೇಶದ ಮೂಲೆ ಮೂಲೆಯಲ್ಲಿರುವ ಸಣ್ಣ ಹಳ್ಳಿಯಲ್ಲಿಯೂ ಪ್ಯಾರಾಚೂಟ್ ಕಾಣಿಸಿಕೊಳ್ಳುತ್ತದೆ. ಮಾರಿಕೊ ಇಂಡಸ್ಟ್ರೀಸ್ ಇಂದು ಸಫಲಾ ಅಡುಗೆ ಎಣ್ಣೆ, ಮಸಾಲಾ ಓಟ್ಸ್, ತ್ವಚೆಯನ್ನು ರಕ್ಷಿಸುವ ಲೋಶನ್, ಹೇರ್ ಕ್ರೀಂ ಇತ್ಯಾದಿಗಳನ್ನು ತಯಾರಿಸುತ್ತಿದ್ದರೂ, ಆದಾಯದಲ್ಲಿ ಶೇಕಡಾ ಇಪ್ಪತ್ತೈದು ರಷ್ಟನ್ನು ಪ್ಯಾರಾ ಚೂಟ್ ತಂದು ಕೊಡುತ್ತಿದೆ. ಗುಣಮಟ್ಟ ಕಾಯ್ದುಕೊಳ್ಳುವುದರೊಂದಿಗೆ, ತಾಳ್ಮೆಯಿಂದ ಇರಬೇಕು, ಹೊಸ ಸಂಶೋಧನೆಗಳತ್ತ ಗಮನ ಕೊಡಬೇಕು ಎನ್ನುವುದು, ಕಲಿಯಬಹುದಾದ ಇನ್ನೂ ಒಂದು ಪಾಠ.

1997ರಲ್ಲಿ ಮಾರಿಕೊ ಗೋವಾದಲ್ಲಿ ಕೋಟಿಗಟ್ಟಲೆ ಖರ್ಚುಮಾಡಿ ಪ್ಯಾರಾಚೂಟ್ ಎಣ್ಣೆ ಉತ್ಪಾದಿಸುವ ಘಟಕವನ್ನುಆರಂಭಿಸಿತು. ಸುಮಾರು ಹದಿನೈದು ವರ್ಷಗಳ ನಂತರ, 2013 ರಲ್ಲಿ ಆ ಘಟಕವನ್ನು ಮುಚ್ಚಿತು. ಹಾಗೆ ನೋಡಿದರೆ ಕೇರಳಕ್ಕೂ, ಗೋವಾಕ್ಕೂ ಭೌಗೋಳಿಕವಾಗಿ ಹೆಚ್ಚಿನ ವ್ಯತ್ಯಾಸವಿಲ್ಲ. ಎರಡೂ ಕಡಲ ತೀರದ ರಾಜ್ಯಗಳು. ಎರಡೂ ಕಡೆಗಳಲ್ಲಿ ತೆಂಗು ಪ್ರಧಾನ ಬೆಳೆಗಳಲ್ಲಿ ಒಂದು. ಕೇರಳದಲ್ಲಿ ದೊರೆತಂತೆ ಗೋವಾ ಮತ್ತು ಅಕ್ಕ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ತೆಂಗು ತಂದು ಎಣ್ಣೆ ತಯಾರಿಸಬಹುದು ಎಂದು ಸಂಸ್ಥೆ ನಂಬಿತ್ತು. ಆದರೆ ನಂಬಿಕೆ ಹುಸಿಯಾಯಿತು.

ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ತಯಾರಾದ ಘಟಕಕ್ಕೆ ತೆಂಗಿನ ಕೊರತೆ ಯಾಯಿತು. ಸಂಸ್ಥೆ ವರ್ಷದಿಂದ ವರ್ಷಕ್ಕೆ ನಷ್ಟ ಅನುಭವಿಸುವಂತಾಯಿತು.ಆ
ಸಂದರ್ಭದಲ್ಲಿ ಬೇರೆ ಎಂಟು ಘಟಕಗಳಿಂದ ಸಾಕಷ್ಟು ಲಾಭ ಬರುತ್ತಿದ್ದು, ಪ್ರತಿಷ್ಠೆಗಾದರೂ ಗೋವಾ ಘಟಕವನ್ನು ಮುಂದುವರಿಸಿಕೊಂಡು ಹೋಗಬಹುದಿತ್ತು.
ಆದರೂ ಸಂಸ್ಥೆ ಗೋವಾ ಘಟಕದ ಗೇಟಿಗೆ ಬೀಗ ಹಾಕಿತು. ಎಷ್ಟೇ ಆದಯವಿದ್ದರೂ, ಯಾವುದಾದರೂ ಒಂದು ಕಡೆ ನಷ್ಟವಾಗುತ್ತಿದ್ದರೆ ಅದನ್ನು ನಿಲ್ಲಿಸಬೇಕು. ವ್ಯಾಪಾರದಲ್ಲಿ ಹೊಸ ಪ್ರಯತ್ನಕ್ಕೆ ಅಣಿಯಾಗಬೇಕು ಆದರೆ ಒಣ ಪ್ರತಿಷ್ಟೆಗೆ ಸ್ಥಾನವಿಲ್ಲ ಎಂಬುದು ಪ್ಯಾರಾಚೂಟ್ ಕಲಿಸುವ ಮತ್ತೊಂದು ಪಾಠ. ಪ್ಯಾರಾಚೂಟ್ ಮತ್ತು ಸರಕಾರದ ನಡುವೆ ನಡೆದ ತೆರಿಗೆ ಯುದ್ಧದ ವಿಷಯ ಬಹುಶಃ ಎಲ್ಲರಿಗೂ ತಿಳಿದದ್ದೇ.

ಪ್ಯಾರಾಚೂಟ್ ಎಂದಾಕ್ಷಣ ಎಲ್ಲರೂ ಎಣಿಸುವುದು ತಲೆಗೆ ಹಾಕುವ ಹೇರ್ ಆಯಿಲ್ ಎಂದೇ ವಿನಃ ಖಾದ್ಯದ ಎಣ್ಣೆ ಎಂದೆಣಿಸುವವರು ತೀರಾ ಕಮ್ಮಿ. ಸರಕಾರದ ನಿಯಮದ ಪ್ರಕಾರ ಖ್ಯಾದ್ಯದ ಎಣ್ಣೆಗೆ ಯಾವುದೇ ತೆರಿಗೆ ಇಲ್ಲ. ಆದರೆ ತಲೆಗೆ ಹಾಕುವ ಎಣ್ಣೆ ಎಂದರೆ ಕೇಶವರ್ಧನೆ ಅಥವಾ ಕೂದಲಿನ ರಕ್ಷಣೆಗೆ ಸಂಬಂಧಿಸಿದ್ದ ರಿಂದ, ಅದು ಸೌಂದರ್ಯವರ್ಧಕವಾಗುತ್ತದೆ. ಯಾವುದೇ ಸೌಂದರ್ಯವರ್ಧಕ ಉತ್ಪನ್ನಗಳಿದ್ದರೂ ಅದಕ್ಕೆ ಶೇಕಡಾ ಎಂಟು ಪ್ರತಿಶತ ತೆರಿಗೆ ಕಟ್ಟಬೇಕು ಎನ್ನುವುದು ಸರಕಾರದ ನಿಯಮ.

ಆದರೆ ಪ್ಯಾರಾಚೂಟ್ ಶುದ್ಧ ತೆಂಗಿನ ಎಣ್ಣೆ ಬಳಸುವ ಎಷ್ಟೋ ಜನ, ಬಾಟಲಿಯ ಮೇಲೆ ಖಾದ್ಯ ವಸ್ತುಗಳನ್ನು ಮಾರಲು ಬೇಕಾದ ಎ-ಎಸ್ ಎಸ್‌ಎಐ ಗುರುತು ಇರುವುದನ್ನು ಗಮನಿಸಿರಲಿಕ್ಕಿಲ್ಲ. ಅಷ್ಟೇ ಅಲ್ಲ, ಶುದ್ಧ ಶಾಖಾಹಾರ ಪದಾರ್ಥಗಳನ್ನು ಗುರುತಿಸಲು ಬಳಸುವ ಹಸಿರು ಬಣ್ಣದ ಎಗ್ಮಾರ್ಕ್ (ಹಸಿರು ಬಣ್ಣದ ಚೌಕದಲ್ಲಿ ಹಸಿರು ಬಿಂದು) ಕೂಡ ಇದೆ. ಗಮನಿಸಬೇಕಾದ ಇನ್ನೂ ಒಂದು ಸಂಗತಿ ಎಂದರೆ, ಪ್ಯಾರಾಚೂಟ್ ಪ್ಯಾಕೆಟ್ ಮೇಲೆ ಎಲ್ಲಿಯೂ ಹೇರ್ ಆಯಿಲ್ ಅಥವಾ ಕೂದಲಿಗೆ, ತಲೆಗೆ ಬಳಸುವ ಎಣ್ಣೆ ಎಂದು ಬರೆದಿಲ್ಲ (ಇತ್ತೀಚಿನ ವರ್ಷಗಳಲ್ಲಿ ಬಂದ ಅಡ್ವಾನ್ಡ್ ಹಾಟ್ ಆಯಿಲ್ ಇತ್ಯಾದಿಗಳ ಹೊರತಾಗಿ).

ಸರಕಾರ ಎಂಟು ಪ್ರತಿಶತ ತೆರಿಗೆ ಕಟ್ಟಬೇಕು ಎಂದು ಕೇಳಿದಾಗ ಸಂಸ್ಥೆ ಇದೇ ಅಂಶಗಳನ್ನು ಉತ್ತರದ ರೂಪದಲ್ಲಿ ಕಳುಹಿಸಿತ್ತು. ಸರಕಾರವೂ ಸುಮ್ಮನೆ
ಕುಳಿತುಕೊಳ್ಳಲಿಲ್ಲ. ಇದು ಖಾದ್ಯದ ಎಣ್ಣೆಯೇ ಆದರೆ, ಶಾಂಪೂನಂತೆ ತೀರಾ ಸಣ್ಣ ಸಣ್ಣ ಪ್ಯಾಕೆಟ್ ಮಾಡಿ ಏಕೆ ಮಾರಾಟ ಮಾಡುತ್ತಿದ್ದೀರಿ ಎಂದು ಮರು ಪ್ರಶ್ನೆ ಹಾಕಿತು. ಅದಕ್ಕೆ ಸಂಸ್ಥೆ, ಮದುವೆಯಾಗದ ಯುವಕರಿಗೆ, ಆಗೊಮ್ಮೆ ಈಗೊಮ್ಮೆ ಅಡುಗೆ ಮಾಡುವವರಿಗೆ, ಖರೀದಿಸಿ ಇಟ್ಟುಕೊಳ್ಳುವಷ್ಟು ಹಣ ಇಲ್ಲದವರಿಗೆ ಮತ್ತು ದಾಸ್ತಾನು ಮಾಡಿಟ್ಟುಕೊಳ್ಳುವಷ್ಟು ಸ್ಥಳ ಇಲ್ಲದವರಿಗಾಗಿ ಸಣ್ಣ ಪ್ಯಾಕೆಟ್ ಮಾಡುತ್ತಿದ್ದೇವೆ, ಎಂದು ಉತ್ತರ ನೀಡಿತು.

ಅಷ್ಟಕ್ಕೂ ನಾವು ಎಲ್ಲಿಯೂ ಇದನ್ನು ಹೇರ್ ಆಯಿಲ್ ಎಂದು ನಮೂದಿಸಿಲ್ಲ, ಜನರು ಅದನ್ನು ಅನ್ಯ ಕಾರ್ಯಕ್ಕೆ ಬಳಸಿಕೊಂಡರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ವಾದಿಸಿತು. ಆದರೆ ಸರಕಾರವೂ ಜಿದ್ದಿಗೆ ಬಿದ್ದಿತ್ತು. ಸುಲಭವಾಗಿ ಸೋಲೊಪ್ಪಿಕೊಳ್ಳಲು ಸರಕಾರವೂ ಸಿದ್ಧವಿರಲಿಲ್ಲ. ಸರಕಾರ ಹೊಸ ಕಾನೂನನ್ನೇ ತಂದಿತು. ಹೊಸ ನೀತಿಯ ಅನ್ವಯ, ಎರಡುನೂರು ಮಿಲಿ ಲೀಟರ್ ಮತ್ತು ಅದಕ್ಕಿಂತ ಸಣ್ಣ ಪ್ಯಾಕೆಟ್‌ನಲ್ಲಿ ಮಾರಿದರೆ ಅದು ಸೌಂದರ್ಯವರ್ಧಕ ಎಂದು ಪರಿಗಣಿಸಲ್ಪಡುತ್ತದೆ, ಅದಕ್ಕೆ ತೆರಿಗೆ ಕಟ್ಟ ಬೇಕಾಗುತ್ತದೆ ಎಂಬ ನಿಯಮ ತಂದಿತು. ಇದನ್ನು ಒಪ್ಪದ ಸಂಸ್ಥೆ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲು ಏರಿತು. ದೊಡ್ಡ ಮೊತ್ತದ ಹಣವನ್ನು ತೆರಿಗೆಯ ರೂಪದಲ್ಲಿ ನೀಡಲು ಸಂಸ್ಥೆಗೂ ಮನಸ್ಸಿರಲಿಲ್ಲ. ಪ್ಯಾರಾಚೂಟ್ ಪರವಾಗಿ ನ್ಯಾಯಾಲಯ ತೀರ್ಪು ನೀಡಿತು. ಇದನ್ನು ಕೆಲವರು ತೆರಿಗೆ ಕಳ್ಳತನ ಎನ್ನಬಹುದು. ಆದರೆ ದೇಶದ ಶ್ರೇಷ್ಠ ನ್ಯಾಯಾಲಯವೇ ತೀರ್ಪು ನೀಡಿದಾಗ ಆ ಪ್ರಶ್ನೆ ಉದ್ಭವಿಸಲಾರದು, ಉದ್ಭವಿಸಬಾರದು. ಇದನ್ನು ಸಂಸ್ಥೆಯ ಚತುರ ನಡೆ ಎನ್ನಬಹುದೇ ವಿನಃ ಅನೈತಿಕ ನಡೆ ಎನ್ನಲಾಗದು.

ವ್ಯಾಪಾರದಲ್ಲಿರುವವರು ಎಲ್ಲಿ ಎಷ್ಟೆಷ್ಟು ಸಾಧ್ಯವೋ ಅಷ್ಟು ಹಣ ಉಳಿಸಲು ಪ್ರಯತ್ನಿಸಬೇಕು. ಚತುರ ನಡೆಯಿಂದ ಯಶಸ್ಸು ಸಾಧಿಸಬಹುದು ಎನ್ನುವುದು ಕಲಿಯಬೇಕಾದ ಮತ್ತೂ ಒಂದು ಪಾಠ. ಕೊನೆಯದಾಗಿ, ಕೆಲವು ವರ್ಷಗಳ ಹಿಂದೆ ಯುನಿಲಿವರ್ ಸಂಸ್ಥೆ ಪ್ಯಾರಾಚೂಟ್ ಬ್ರ್ಯಾಂಡ್ ಖರೀದಿಸುವುದಾಗಿ ಸುದ್ದಿ ಹಬ್ಬಿತ್ತು. ಆ ಸಂದರ್ಭದಲ್ಲಿ ಅನೇಕರು ಹರ್ಷ್ ಮಾರಿವಾಲಾ ಅವರನ್ನು ಸತ್ಯಾಸತ್ಯತೆ ತಿಳಿಸಲು ಹೇಳುತ್ತಿದ್ದರು. ಅವರು ಅದನ್ನು ಗಾಳಿ ಸುದ್ದಿ ಎಂದು ತಳ್ಳುತ್ತಿದ್ದು, ಕಾದು ನೋಡಿ ಎಂದಷ್ಟೇ ಹೇಳುತ್ತಿದ್ದರು. ಸರಿಯಾದ ಸಮಯ ಕಾಯುತ್ತಿದ್ದ ಹರ್ಷ್ ಕೆಲವು ತಿಂಗಳಿನ ನಂತರ ಯುನಿಲಿವರ್‌ನ ನಿಹಾರ್ ಎಣ್ಣೆಯ ಬ್ರ್ಯಾಂಡನ್ನು
ತಾವೇ ಖರೀದಿಸಿ ಆಶ್ಚರ್ಯ ಮೂಡಿಸಿದ್ದರು. ಇದರ ಜೊತೆಗೆ ಅಮೆರಿಕದ ಸೌಂದರ್ಯ (ಆಯುರ್ವೇದ) ಬ್ರ್ಯಾಂಡ್ ಕೂಡ ಖರೀದಿಸಿದರು.

ಉದ್ದಿಮೆಯಲ್ಲಿರುವವರು ಗಾಳಿಮಾತಿಗೆ ತಲೆ ಕೆಡಿಸಿಕೊಳ್ಳಬಾರದು. ವ್ಯಾಪಾರದಲ್ಲಿ ಪ್ರತಿಸ್ಪರ್ಧಿಯನ್ನು ತೆಗಳುವುದಕ್ಕಿಂತ, ಅವರೊಂದಿಗೆ ಹಠಕ್ಕೆ ಬೀಳುವು ದಕ್ಕಿಂತ, ತಾಳ್ಮೆಯಿಂದ ಸರಿಯಾದ ಸಮಯಕ್ಕೆ ಕಾಯಬೇಕು. ನಮ್ಮ ಬಲ ಪ್ರತಿಸ್ಪರ್ಧಿಗಿಂದ ಹೆಚ್ಚಾದಾಗ ಎದುರಾಳಿ ತಾನಾಗಿಯೇ ಶರಣಾಗುತ್ತಾನೆ ಎನ್ನುವುದು ಅತ್ಯಂತ ಮಹತ್ತರವಾದ ಪಾಠ.