Sunday, 15th December 2024

ಇಂದು ಅಕ್ಷರ ಅಭ್ಯಂಜನದ ಅನುಭವ !

ವಿದೇಶವಾಸಿ

dhyapaa@gmail.com

ಒಂದೇ ಹೊಡೆತಕ್ಕೆ ಹತ್ತು ತಾಸು ಕುಳಿತು ಡ್ರೈವ್ ಮಾಡು ಎಂದರೆ ಸಲೀಸಾಗಿ ಮಾಡಿಯೇನು, ರಾತ್ರಿಯಿಂದ ಬೆಳಗಿನ ವರೆಗೆ ಒಂದೇ ಕಡೆಯಲ್ಲಿ ಕುಳಿತು ಯಕ್ಷಗಾನ, ತಾಳಮದ್ದಲೆ ಕಂಡೇನು, ಕೇಳಿಯೇನು, ಒಂದು ತಾಸು ಬರೆಯುವು ದಕ್ಕಾಗಿ ಕುಳಿತುಕೊಳ್ಳ ಬೇಕು ಎಂದರೆ, ಊಹೂಂ… ಊಹಿಸಲೂ ಸಾಧ್ಯವಿರಲಿಲ್ಲ.

ಮತ್ತೊಂದು ಸಾರ್ಥಕ ಕ್ಷಣ! ಕಳೆದ ನವೆಂಬರ್ ತಿಂಗಳಿನಲ್ಲಿ ಲಂಡನ್‌ನಲ್ಲಿ ‘ವಿದೇಶವಾಸಿ’ ಯ ಮೊತ್ತಮೊದಲನೆಯ ವಿಮಾನ ಪುಸ್ತಕ ಲೋಕಕ್ಕೆ ಹಾರಿತ್ತು. ಈಗ ಎರಡನೆಯ ಪುಸ್ತಕ ವಿಮಾನ ‘ಪರದೇಶವಾಸಿ’ಯ ಸರದಿ. ಸುಮ್ಮನೆ ಕುಳಿತು ಯೋಚಿಸಿದರೆ ಒಮ್ಮೊಮ್ಮೆ ಇದು ನಿಜವೋ, ಕನಸೋ ಎಂಬ ಅನುಮಾನ ಈಗಲೂ ಮೂಡುತ್ತದೆ. ಈಗ ಪುಸ್ತಕವೇ ಪ್ರಕಟ ವಾಗಿದ್ದರಿಂದ ಇದು ಕನಸಂತೂ ಅಲ್ಲ ಎಂಬುದು ನಿರ್ಣಯವಾಯಿತು.

‘ಪರದೇಶವಾಸಿ’ ವಿದೇಶವಾಸಿಯ ಎರಡನೆಯ ಪುಸ್ತಕ ಯಾನ. ಕರೋನಾ ಕಾಲದ ಲಾಕ್‌ ಡೌನ್ ಯಾತನೆ ಮತ್ತು ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ವಿಶ್ವೇಶ್ವರ್ ಭಟ್ ಅವರ ಪ್ರೇರಣೆ, ಪ್ರೋತ್ಸಾಹ ಈ ಘಟ್ಟಕ್ಕೆ ತಂದು ನಿಲ್ಲಿಸುತ್ತದೆ ಎಂದು ಯಾವತ್ತೂ ಎಣಿಸಿರಲಿಲ್ಲ. ಕಳೆದ ಮೂರು ದಶಕಗಳಿಂದ ಬದುಕಲು ಬೇಕಾಗಿ ಸೌದಿ ಅರೇಬಿಯಾದ ಮರಳುಗಾಡಿನ ಯಾವುದೋ ಮೂಲೆಯಲ್ಲಿ ಅಲೆದಾಡಿಕೊಂಡು ಇರುತ್ತಿದ್ದವ ನಾನು.

ಒಂದು ದಿನಕ್ಕೆ ಸರಾಸರಿ ಐದು ನೂರು ಕಿಲೋಮೀಟರ್ ವಾಹನ ನಡೆಸಿ, ಅದನ್ನೇ ಪ್ರೀತಿಸಿ, ಸುತ್ತಾಡಿಕೊಂಡಿದ್ದವ. ವಾರಕ್ಕೊಮ್ಮೆ ಸಮಯ ಸಿಕ್ಕರೆ ಬ್ಯಾಡ್ಮಿಂಟನ್, ಕ್ರಿಕೆಟ್ ಆಡಿಕೊಂಡು, ಯಕ್ಷಗಾನ ನೋಡಿಕೊಂಡು ‘ಮರು ಭೂಮಿಯೇ ನನ್ನ ಬದುಕು, ನನಗೆ ಮರಳೇ ಸಾಕು’ ಎಂದುಕೊಂಡು ಸುಖವಾಗಿದ್ದವ. ಮುಂದೊಂದು ದಿನ ಕನ್ನಡದ ಪ್ರತಿಷ್ಠಿತ ಪತ್ರಿಕೆಯೊಂದಕ್ಕೆ ಬರೆಯುತ್ತೇನೆ ಎಂದು ಯಾವತ್ತೂ ಯೋಚಿಸಿದವನಲ್ಲ.

ಏಳನೆಯ ತರಗತಿಯಲ್ಲಿರುವಾಗ ಒಂದು ನಿಬಂಧ ಸರ್ಧೆಯಲ್ಲಿ ಭಾಗವಹಿಸಿ, ಬಹುಮಾನ ಪಡೆದ ನಂತರವೂ ನಾನು ಬರೆಯಬ,
ಮುಂದೆ ಬರೆಯಬೇಕು ಎಂದು ಯೋಚಿಸಿದವನಲ್ಲ. ಪರೀಕ್ಷೆಯ ಉತ್ತರ ಪತ್ರಿಕೆಯ ಹೊರತಾಗಿ ಎಲ್ಲೂ ಏನೂ ಬರೆದವನಲ್ಲ.
ಇನ್ನು ಓದುವುದೂ ಅಷ್ಟಕ್ಕಷ್ಟೇ. ಪುರುಸೊತ್ತು ಸಿಕ್ಕಾಗ ಭೈರಪ್ಪ, ಯಂಡಮೂರಿ, ವಿಶ್ವೇಶ್ವರ ಭಟ್, ಪ್ರತಾಪ್ ಸಿಂಹ, ರವಿ
ಬೆಳಗೆರೆ, ಜೋಗಿ ಹೀಗೆ ಸಮಕಾಲೀನರ ಬರಹ, ಪುಸ್ತಕಗಳನ್ನೇ ಹೆಚ್ಚು ಓದಿದ್ದು ಬಿಟ್ಟರೆ, ಉಳಿದವರನ್ನು ಓದಿಕೊಂಡಿದ್ದು ಕಮ್ಮಿ. ಕಾರಣ ಮತ್ತೇನಲ್ಲ, ನಾನಿದ್ದಲ್ಲಿ ಇವರ ಪುಸ್ತಕಗಳು ಸಿಗುತ್ತಿರಲಿಲ್ಲ.

ಆ ಕಾಲದಲ್ಲಿ ಅಮೆಝಾನ್ ನಂತಹ ಸಂಸ್ಥೆಗಳು ಇರಲಿಲ್ಲವಲ್ಲ! ರಜೆಗೆ ಎಂದು ಊರಿಗೆ ಬಂದು ಹಿಂತಿರುಗಿ ಹೋಗುವಾಗಲೂ ಸೂಟ್ಕೇಸ್ ತುಂಬೆಲ್ಲ ಬಟ್ಟೆ-ಬರೆ, ತುಪ್ಪ, ಕೊಬ್ಬರಿ ಎಣ್ಣೆ, ಮಿಠಾಯಿ ಇತ್ಯಾದಿಗಳೇ ತುಂಬಿಕೊಳ್ಳುತ್ತಿದ್ದವು. ಔಷಧ, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಪುಸ್ತಕದ ಸ್ಥಳವನ್ನು ಆವರಿಸಿಕೊಳ್ಳುತ್ತಿದ್ದವು. ಅಲ್ಲಿಗೆ ಅಕ್ಷರ ಮತ್ತು ನನ್ನ ನಂಟು ಏನು ಎಷ್ಟು ಎಂದು
ತಿಳಿದೀತು. ಆಗೊಮ್ಮೆ ಈಗೊಮ್ಮೆ ಓದಿಕೊಂಡಿರುತ್ತಿದ್ದ ನನ್ನನ್ನು ಬರೆಯಲು ಕಟ್ಟಿಹಾಕಿ ಕೂರಿಸಿದ್ದು ವಿಶ್ವೇಶ್ವರ ಭಟ್ಟರು.

೨೦೦೯ ರ ಡಿಸೆಂಬರ್‌ನಲ್ಲಿ ಭಟ್ಟರು ಬಹ್ರೈನ್ ಗೆ ಬಂದಾಗ ನನ್ನನ್ನು ಬರೆಯುವಂತೆ ಪ್ರೋತ್ಸಾಹಿಸಿದ್ದರು. ಆಗ ಅವರು ಕನ್ನಡ ಪ್ರಭದ ಪ್ರಧಾನ ಸಂಪಾದಕರಾಗಿದ್ದರು. ‘ನೀವು ಮುಂದಿನ ಸಲ ಬೆಂಗಳೂರಿಗೆ ಬರುವಾಗ ಏನನ್ನಾದರೂ ಬರೆದು ತರಬೇಕು’ ಎನ್ನುವ ಅವರ ಪ್ರೀತಿಯ ಆಗ್ರಹಕ್ಕೆ ನಾನು ಓದಿದ ಇಂಗ್ಲೀಷ್ ಪುಸ್ತಕದ ಕನ್ನಡ ಭಾವಾನುವಾದವನ್ನು ನಾಲ್ಕು ಪುಟ ಬರೆದು ಕೊಂಡು ಹೋಗಿದ್ದೆ. ಅದನ್ನು ಓದಿದ ಅವರು ‘ಇದನ್ನೇ ಇನ್ನಷ್ಟು ವಿಸ್ತರಿಸಿ ಬರೆಯಿರಿ’ ಎಂದರು.

ಆಯಿತು ಎಂದು ಅವರ ಸಮಾಧಾನಕ್ಕೆ ಹೇಳಿ ಬಂದಿದ್ದೆ. ಸಮಯ ಸಿಕ್ಕಾಗ ವಿಸ್ತರಿಸಿ, ಅದಕ್ಕೆ ಇನ್ನಷ್ಟು ಜೋಡಿಸಿ ಬರೆದು ಕಳುಹಿಸಿದೆ. ಅಷ್ಟೇ! ಕನ್ನಡಪ್ರಭದಲ್ಲಿ ನನ್ನ ಬರಹ ಅಂಕಣ ರೂಪದಲ್ಲಿ ಪ್ರಕಟಗೊಂಡಿತ್ತು. ಅದೆಷ್ಟೋ ಜನ ತಮ್ಮ ಒಂದು ಬರಹವೋ, ಕವನವೋ ಪತ್ರಿಕೆಯಲ್ಲಿ ಪ್ರಕಟವಾಗಲಿ ಎಂದು ಹಪಹಪಿಸುವ ಕಾಲದಲ್ಲಿ ನನಗೆ ಅಂಕಣ ಬರಹದ ಭ್ಯಾಗ್ಯ! ಆ ಅಂಕಣ ಪಯಣ ನಲವತ್ಮೂರು ಕಂತು ಮುಂದುವರಿಯಿತು.

ನಂತರ ೨೦೧೩ ರಲ್ಲಿ ‘ಆಸ್ತಿಕತೆ’ ಪುಸ್ತಕ ರೂಪದಲ್ಲಿಯೂ ಪ್ರಕಟವಾಯಿತು. ಅದರ ನಂತರ ಒಂದು ವಿರಾಮ. ಅಂತಿಂಥ ವಿರಾಮ ವಲ್ಲ, ಏಳು ವರ್ಷಗಳ ಸುದೀರ್ಘ ವಿರಾಮ. ಆದರೆ ಆ ಏಳು ವರ್ಷದಲ್ಲಿ ನಾನು ಪುನಃ ಬರೆಯಲು ಆರಂಭಿಸಬೇಕು ಎಂದು ಆಗಾಗ ನೆನಪಿಸುತ್ತಿದ್ದ ಏಕಮಾತ್ರ ವ್ಯಕ್ತಿ ವಿಶ್ವೇಶ್ವರ ಭಟ್ಟರು. ಪ್ರತಿ ಸಲ ಅವರು ಬರೆಯುವಂತೆ ಹೇಳಿದಾಗಲೂ, ಬೇಕು-ಬೇಡದ ಎಲ್ಲ ಸಬೂಬು ಹೇಳಿಕೊಂಡು ಜಾರಿಕೊಳ್ಳುತ್ತಿದ್ದೆ.

ಅದೊಂದು ಬರದಿದ್ದರೆ ಇಂದಿಗೂ ಬರೆಯುತ್ತಿರಲಿಲ್ಲವೇನೋ! ವುಹಾನ್‌ನಲ್ಲಿ ಹುಟ್ಟಿದ ವೈರಸ್ ವಿಶ್ವದಾದ್ಯಂತ ತಾಂಡವ ವಾಡುತ್ತಿದ್ದ ಕಾಲ ಅದು. ಲೋಕವೇ ಸ್ತಬ್ಧವಾಗಿರುವಾಗ ನಾನೊಬ್ಬ ಹೊರಗೆ ಉಳಿಯಲು ಸಾಧ್ಯವೇ? ಪ್ರತಿನಿತ್ಯ ಭಟ್ಟರಿಗೆ ದೂರವಾಣಿ ಕರೆಯ ಸಂಪರ್ಕದಲ್ಲಿದ್ದೆ. ಆಗಲೂ ಅಷ್ಟೇ, ‘ಬರೆಯಲು ಆರಂಭಿಸಿ, ಯಾವಾಗ ಬರೆಯುತ್ತೀರಿ?’ ಎಂಬ ಅವರ ಪ್ರೋತ್ಸಾಹಕ ನುಡಿಗಳು. ಒಂದಷ್ಟು ದಿನ ಯಕ್ಷಗಾನ, ಸಿನಿಮಾ ನೋಡಿ ಯೂಟ್ಯೂಬ್ ಹಳಸಿತ್ತು.

ಮೊಬೈಲ್ ಫೋನ್ ಸವೆದಿತ್ತು. ಭಟ್ಟರ ಸಮಾಧಾನಕ್ಕೆ ಬರೆಯಲು ಆರಂಭಿಸೋಣ, ಕರೋನಾ ಮುಗಿದ ತಕ್ಷಣ ನಿಲ್ಲಿಸಿದರಾಯಿತು
ಎಂದು ಒಪ್ಪಿಕೊಂಡೆ. ದುರಾದೃಷ್ಟವೋ, ಅದೃಷ್ಟವೋ, ಕರೋನಾದಿಂದಾಗಿ ಬಹ್ರೈನ್ ನಿಂದ ಸೌದಿ ಅರೇಬಿಯಾಕ್ಕೆ ಹೋಗುವ
ಮಾರ್ಗವನ್ನು ಸುಮಾರು ಎಂಟು ತಿಂಗಳು ಮುಚ್ಚಲಾಗಿತ್ತು. ವಾರಕ್ಕೊಂದು ಅಂಕಣ ಬರೆಯುತ್ತಾ, ನನಗೆ ಅರಿವಿಲ್ಲದಂತೆಯೇ
ಅಕ್ಷರ ಕೂಪದೊಳಕ್ಕೆ ಇಳಿಯುತ್ತಾ ಹೋದೆ. ಸೋಮವಾರ ‘ವಿದೇಶವಾಸಿ’ ಅಂಕಣ ನಿಗದಿಯಾಗಿತು. ಮೊದಮೊದಲು ಬಹಳ ಕಷ್ಟ ಎಂದೆನಿಸುತ್ತಿತ್ತು. ಸೋಮವಾರದ ಅಂಕಣಕ್ಕೆ ಭಾನುವಾರ ಬರಹ ಕಳಿಸಿದ ಕ್ಷಣದಿಂದಲೇ ಮುಂದೇನು ಎಂಬ ಯೋಚನೆ.

ಶುಕ್ರವಾರ- ಶನಿವಾರ ಬಂದರಂತೂ ಕೇಳುವುದೇ ಬೇಡ. ಬರೆಯುವುದು ಎಂದರೆ ಗಣಿಕಾರಿಕೆ ಮಾಡಬೇಕು. ಅಕ್ಷರ ಅಗೆಯಬೇಕು, ವಿಷಯ ಬಗೆಯಬೇಕು. ಅಂಕಣಕ್ಕಾಗಿ ವಿಷಯದ ಹುಡುಕಾಟ, ವಿಷಯ ನಿರ್ಧಾರವಾದರೆ ಅದಕ್ಕೆ ಪೂರಕವಾಗಿ ಮಾಹಿತಿ ಸಂಗ್ರಹಣೆ, ಲೆಕ್ಕಾಚಾರ, ವಿಶ್ಲೇಷಣೆ ಮಾಡಬೇಕು. ಅದಕ್ಕಾಗಿಯೇ ಸಮಯ ಮೀಸಲಿಡಬೇಕು. ಅಂದರೆ ಸಮಯ ಪಾಲನೆಯ ಶಿಸ್ತನ್ನು ಅಳವಡಿಸಿಕೊಳ್ಳಬೇಕು.

ಒಂದೇ ಹೊಡೆತಕ್ಕೆ ಹತ್ತು ತಾಸು ಕುಳಿತು ಡ್ರೈವ್ ಮಾಡು ಎಂದರೆ ಸಲೀಸಾಗಿ ಮಾಡಿಯೇನು, ರಾತ್ರಿಯಿಂದ ಬೆಳಗಿನವರೆಗೆ ಒಂದೇ ಕಡೆಯಲ್ಲಿ ಕುಳಿತು ಯಕ್ಷಗಾನ, ತಾಳಮದ್ದಲೆ ಕಂಡೇನು, ಕೇಳಿಯೇನು, ಒಂದು ತಾಸು ಬರೆಯುವುದಕ್ಕಾಗಿ ಕುಳಿತು ಕೊಳ್ಳಬೇಕು ಎಂದರೆ, ಊಹೂಂ… ಊಹಿಸಲೂ ಸಾಧ್ಯವಿರಲಿಲ್ಲ. ಆರಂಭದಲ್ಲಿ ಕಷ್ಟ ಎನಿಸಿದರೂ ಕ್ರಮೇಣ ರೂಢಿಯಾಯಿತು. ಪ್ರತಿನಿತ್ಯ ಅಕ್ಷರದ ಅಭ್ಯಂಜನ, ಶಬ್ದಗಳ ಸ್ನಾನ, ಪದಗಳೊಂದಿಗೆ ಪ್ರವಾಸ ಅನಿವಾರ್ಯವಾಯಿತು.

ಕ್ರಮೇಣ ಅದೇ ಆಪ್ತವೂ ಆಯಿತು. ಓದುಗ ದೊರೆಗಳಾದ ನೀವೂ ಪ್ರೋತ್ಸಾಹಿಸಿದಾಗ ಬರವಣಿಗೆ ಕರ್ತವ್ಯದ ಒಂದು ಭಾಗವಾ ಯಿತು. ಪರಿಣಾಮವಾಗಿ ಪುಸ್ತಕದ ಪ್ರಸವವಾಯಿತು. ಇದರೊಂದಿಗೆ ‘ಗೌರವಧನ’ ಬೇರೆ! ಯಾರಿಗುಂಟು, ಯಾರಿಗಿಲ್ಲ! ಬರವಣಿಗೆ ನನಗೆ ಇಷ್ಟೆಲ್ಲ ಭಾಗ್ಯವನ್ನು ತಂದುಕೊಡುತ್ತದೆ ಎಂದು ಯಾವತ್ತೂ ಎಣಿಸಿರಲಿಲ್ಲ. ಊಟ ಕೊಡುವವರು ಸಾಕಷ್ಟು ಜನರಿದ್ದಾರೆ.

ಊಟದೊಂದಿಗೆ ಪಾತ್ರೆಯನ್ನೂ ಉಡುಗೊರೆಯಾಗಿ ಕೊಡುವವರು ಭಟ್ಟರು! ‘ಪಕ್ಕದಲ್ಲಿ ಶವ ಬಿದ್ದಿದ್ದರೂ, ಮೊದಲು ಅಂಕಣ ಬರೆದು ನಂತರ ಶವ ಎತ್ತಬೇಕು’ ಎಂಬ ಮಾತಿದೆ. ಅದು ಅಂಕಣ ಬರಹಗಾರನಿಗೆ ಇರಬೇಕಾದ ಬದ್ಧತೆಯ ಕುರಿತು ಹೇಳಿರುವ ಮಾತು. ಬದ್ಧತೆ ಎನ್ನುವುದು ಒಂದು-ಎರಡು ದಿನಕ್ಕಾಗಲಿ, ವಿಷಯಕ್ಕಾಗಲಿ ಮಾತ್ರ ಸೀಮಿತವಾದುದ್ದಲ್ಲ; ಅದೊಂದು ವ್ರತ. ಒಮ್ಮೆ ಅದು ರಕ್ತಗತವಾದರೆ ಶಿಸ್ತು ತಾನಾಗಿಯೇ ಧಮನಿಯ ಧಾತುವಾಗುತ್ತದೆ. ಬರವಣಿಗೆ ನನ್ನಲ್ಲಿ ಆ ಬದಲಾವಣೆ ತಂದಿದೆ ಎಂದಂತೂ ಹೇಳಬ.

ಇಲ್ಲವಾದರೆ ಪುಸ್ತಕ ಲೋಕಾರ್ಪಣೆಯ ಅಮಲನ್ನೂ ಅನುಭವಿಸದೆ, ಅದೇ ದಿನ ಅಂಕಣ ಬರೆಯಲು ಕುಳಿತುಕೊಳ್ಳುವುದು
ಸಾಧ್ಯವಾಗುತ್ತಿರಲಿಲ್ಲ! ಅದು ಬರವಣಿಗೆಯಲ್ಲಿರುವ ಶಕ್ತಿ. ಅದರೊಂದಿಗೆ ಬರವಣಿಗೆ ಎಂಬ ಕಸುಬು ಜವಾಬ್ದಾರಿಯನ್ನೂ ಹೆಚ್ಚಿಸುತ್ತದೆ ಎನ್ನುವುದು ಸತ್ಯ. ಮುಂದೆ ಗುರಿ, ಹಿಂದೆ ಗುರು ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬ ಮಾತಿದೆ. ಆದರೆ
ಮುಂದೆ ಗುರಿ ಇಲ್ಲದಿದ್ದರೂ, ಹಿಂದೆ ಒಬ್ಬ ಗಟ್ಟಿ ಗುರು ಇದ್ದರೆ ಸಾಕು. ಆ ಗುರುವೇ ಗುರಿಯನ್ನು ತೋರಿಸುತ್ತಾನೆ ಎಂಬುದು
ಇನ್ನೊಂದು ಸತ್ಯ.

ಬರೆದದ್ದು ಪುಸ್ತಕವಾಗದಿದ್ದರೆ ಹೇಗೆ? ಅಕ್ಷರ ಎಂಬ ಪದದ ಅರ್ಥವೇ ಅದಲ್ಲವೇ? ನಶಿಸಿ ಹೋಗುವುದು ಅಕ್ಷರ. ಚಿರಕಾಲ ಉಳಿಯುವುದು ಅಕ್ಷರ. ಲಂಡನ್‌ನಲ್ಲಿ ನನ್ನ ‘ವಿದೇಶ ವಾಸಿ’ ಮತ್ತು ಭಟ್ಟರ ‘ಈಜಿ ಪ್ರವಾಸದ ಕೆಲವು ಟಿಪ್ಪಣಿಗಳು’ ಪುಸ್ತಕ ಲೋಕಾರ್ಪಣೆ ಮುಗಿಸಿ ಭಟ್ಟರು ಮತ್ತು ನಾನು ಸ್ಕಾಟ್ಲೆಂಡ್, ವೇಲ್ಸ್ ಪ್ರವಾಸದಲ್ಲಿದ್ದೆವು. ಆಗಲೇ ‘ಪರದೇಶವಾಸಿ’ಯ ಭ್ರೂಣ ಕಟ್ಟಿದ್ದು. ನಂತರ ಸೌದಿ ಅರೇಬಿಯಾದ ಪ್ರವಾಸದಲ್ಲಿದ್ದಾಗ ಅದಕ್ಕೊಂದು ಆಕಾರ ಬಂತು. ಫೆಬ್ರವರಿ ಐದರ ದಿನ ನಿಗದಿಯಾ ಯಿತು. ಎಣಿಸಿದಂತೆಯೇ ಎಲ್ಲವೂ ಅಚ್ಚು ಕಟ್ಟಾಗಿ ನಡೆದು ಭಟ್ಟರ ‘ಇಂದಿನ ದಿನವೇ ಶುಭ ದಿನವು’, ರಾಧಾಕೃಷ್ಣ ಭಡ್ತಿ ಯವರ ‘ಸುಪ್ತ ಸಾಗರ’ ಮತ್ತು ನನ್ನ ‘ಪರದೇಶವಾಸಿ’ ಕೃತಿಗಳ ಬಿಂದುಗಳು ಕನ್ನಡ ಪುಸ್ತಕ ಸಮುದ್ರವನ್ನು ಸೇರಿಕೊಂಡವು.

ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾದ ಶ್ರೀ ಕೃಷ್ಣ ದೀಕ್ಷಿತ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಉತ್ತರ ವಿಶ್ವವಿದ್ಯಾ ಲಯದ ಉಪಕುಲಪತಿಗಳಾದ ಶ್ರೀ ನಿರಂಜನ ವಾನಳ್ಳಿ, ಬರಹಗಾರರೂ, ರಾಷ್ಟ್ರೀಯವಾದಿ ಚಿಂತಕರೂ ಆದ ಶ್ರೀ ಜಿ. ಬಿ.ಹರೀಶ್ ಮತ್ತು ಶ್ರೀರೋಹಿತ್ ಚಕ್ರತೀರ್ಥ ಅತಿಥಿಗಳಾಗಿ ಆಗಮಿಸಿದ್ದರು. ಶ್ರೀಮತಿ ರೂಪಾ ಗುರುರಾಜ್ ಅವರ ಚೆಂದದ ನಿರೂಪಣೆಯಿತ್ತು. ಬೆಂಗಳೂರಿನ ಚಾಮರಾಜ ಪೇಟೆಯ ಕನ್ನಡ ಸಾಹಿತ್ಯ ಪರಿಷತ್ನ ಪ್ರಾಂಗಣ ದಲ್ಲಿರುವ ಶ್ರೀಕೃಷ್ಣರಾಜ ಪರಿಷನ್ಮಂದಿರ ದಲ್ಲಿ ಮೂರೂ ಕೃತಿಗಳು ಲೋಕಾರ್ಪಣೆಗೊಂಡವು.

ಒಂದು ಅಚ್ಚುಕಟ್ಟಾದ ಕಾರ್ಯಕ್ರಮ ಸಂಪನ್ನಗೊಂಡಿತು. ನನಗಂತೂ ಇಂದು ಅಕ್ಷರ ಅಭ್ಯಂಜನದಲ್ಲಿ ಮಿಂದು ಎದ್ದ ಅನುಭವ! ಅಲ್ಲಿಗೆ ಮುಗಿಯಿತು ಅಂದುಕೊಳ್ಳಬೇಡಿ. ಭಟ್ಟರು ಸುಮ್ಮನೆ ಕುಳಿತುಕೊಳ್ಳುವವರಲ್ಲ. ಮುಂದಿನ ವಿಮಾನಕ್ಕೆ ಟಿಕೆಟ್ ಬುಕ್ ಆಗಿದೆ. ಮುಂದಿನ ವೃಕ್ಷಕ್ಕೆ ಬೀಜ ಬಿತ್ತಾಗಿದೆ. ನೀವು ಜತೆಗಿದ್ದು ಹಾರೈಸುತ್ತೀರಿ ಎಂಬ ಭರವಸೆಯಿದೆ.

 
Read E-Paper click here