Thursday, 12th December 2024

ಸ್ವರಾಜ್ಯಕ್ಕೆ ಮುಕ್ಕಾಲ್ನೂರು, ಕರಾಳ ಇತಿಹಾಸಕ್ಕೆ ಸಾಕ್ಷಿಯಾದ ಸಂಸತ್‌ ದಾಂಧಲೆ !

ವೀಕೆಂಡ್‌ ವಿಥ್‌ ಮೋಹನ್‌

ಮೋಹನ್ ವಿಶ್ವ

ಭಾರತೀಯ ಸ್ವರಾಜ್ಯಕ್ಕೆ ಮುಕ್ಕಾಲ್ನೂರು ಕಳೆಯಿತು. ಇಡೀ ದೇಶ 75ನೆಯ ಸ್ವಾತಂತ್ರ‍್ಯ ಆಚರಣೆಯ ಸಂದರ್ಭದಲ್ಲಿ ಮಿಂದೇಳಲು ಸನ್ನದ್ಧವಾಗುತ್ತಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಹೃದಯಭಾಗವಾದ ಸಂಸತ್ ಭವನದಲ್ಲಿ ಸತತವಾಗಿ ಪ್ರತಿಪಕ್ಷಗಳು ಗದ್ದಲ, ಗಲಾಟೆಗಳನ್ನು ಮಾಡುವ ಮೂಲಕ ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿದ್ದು ಮಾತ್ರ ದುರದೃಷ್ಟಕರ.

ಸಂಸತ್ತಿನ ಒಟ್ಟಾರೆ 96 ಘಂಟೆಗಳ ಅವಧಿಯಲ್ಲಿ ಕೇವಲ 28 ಘಂಟೆ ಮಾತ್ರ ಚರ್ಚೆಗೆ ಸೀಮಿತವಾಗಿತ್ತು. ಒಂದು ನಿಮಿಷದ ಸಂಸತ್ ಕಲಾಪದ ಖರ್ಚು ಸುಮಾರು ಎರಡೂವರೆ ಲಕ್ಷ ರು., ಒಂದು ದಿನಕ್ಕೆ ಹತ್ತೂವರೆ ಕೋಟಿ, 17 ದಿನಕ್ಕೆ 178.5 ಕೋಟಿಯಷ್ಟು ಹಣವನ್ನು ಸರಕಾರವು ವ್ಯಯಿಸುತ್ತದೆ. ಈ ಹಣವೆಲ್ಲವೂ ನಮ್ಮ ತೆರಿಗೆಯಿಂದ ಸಂದಾಯವಾದದ್ದು, ನಾವು ಕಷ್ಟ ಪಟ್ಟು ಕಟ್ಟುವ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುವವರಿಗೆ ಸಾಮಾನ್ಯ ಭಾರತೀಯನ ಕಷ್ಟದ ಅರಿವಿಲ್ಲ.

ಪ್ರಜಾಪ್ರಭುತ್ವದ ಮೆದುಳೆಂದೇ ಕರೆಯಲ್ಪಡುವ ರಾಜ್ಯ ಸಭೆಯಲ್ಲಿ ಚರ್ಚಿಸಬೇಕಾದಂತಹ ವಿಷಯಗಳ ಚರ್ಚೆಗೆ ಅವಕಾಶವನ್ನೇ ನೀಡದೆ ರಾಜ್ಯಸಭೆಯ ಅಧ್ಯಕ್ಷರ ಮೇಜಿನ ಮೇಲೆ ಪತ್ರಗಳನ್ನು ಎಸೆಯುವ ಬೇಜವಾಬ್ದಾರಿತನ ವನ್ನು ಪ್ರತಿಪಕ್ಷಗಳು ತೋರಿದ್ಧಾವೆ. ಮೋದಿಯನ್ನು ವಿರೋಧಿಸುವ ಒಂದೇ ಒಂದು ಉದ್ದೇಶದಿಂದ ಸಂಸತ್ತನ್ನು ತಮ್ಮ ಗೂಂಡಾಗಿರಿಯ ಅಡ್ಡವನ್ನಾಗಿ ವಿರೋಧ ಪಕ್ಷಗಳು ಮಾಡಿಕೊಂಡಿವೆ. ಕೈಲಾಗದವನು ಮೈ ಪರಚಿ ಕೊಂಡನೆಂಬಂತೆ ಸಂಸತ್ತಿನಲ್ಲಿ ಪ್ರತಿನಿತ್ಯ ಗಲಾಟೆಗಳನ್ನು ಮಾಡುವ ಮೂಲಕ ಕಲಾಪಕ್ಕೆ ಎಳ್ಳು ನೀರು ಬಿಡುವ ಕೆಲಸವನ್ನು ಮಾಡಿವೆ.

ಪಶ್ಚಿಮ ಬಂಗಾಳವನ್ನು ಗೆದ್ದಾಕ್ಷಣ ಇಡೀ ಭಾರತವನ್ನೇ ಗೆದ್ದಂತೆ ಅತಿಯಾದ ಆತ್ಮ ವಿಶ್ವಾಸದಲ್ಲಿ ಬೀಗುತ್ತಿರುವ ‘ದೀದಿ’ಯ ಪಟಾಲಂ ಸಂಸತ್ತಿನಲ್ಲಿ ದೊಂಬಿ ಎಬ್ಬಿಸುತ್ತಿದ್ಧಾರೆ. ಉತ್ತರ ಪ್ರದೇಶದ ಚುನಾವಣಾ -ಫಲಿತಾಂಶ ಬಂದ ಮೇಲೆ ಇವರೆಲ್ಲರ ನವರಂಧ್ರಗಳು ಬಂದಾಗು ವುದು ಗ್ಯಾರಂಟಿ. ಪಶ್ಚಿಮ ಬಂಗಾಳದಲ್ಲಿ ಹಿಂದೆಂದೂ ಕಂಡರಿಯದ ಹಿಂಸಾಚಾರಕ್ಕೆ ಕಾರಣವಾದಂತಹ ಮಮತಾ ಬಾನೆರ್ಜಿಯನ್ನು ಅಂಟೋನಿಯೋ ಮೈನೋ ತವರು ಮನೆಯಾದ ಇಟಲಿಯ `ರೋಮ್’ನಲ್ಲಿ ನಡೆಯುವ ಶಾಂತಿಸಭೆಗೆ ಆಹ್ವಾನಿಸಲಾಗಿದೆಯಂತೆ !

ಪೆಗಾಸಿಸ್ ಫೋನ್ ಕದ್ಧಾಲಿಕೆ ಪ್ರಕರಣವನ್ನು ಮುಂದಿಟ್ಟುಕೊಂಡು ಇಡೀ ಸದನದ ಸಮಯವನ್ನು ಮನಸೋ ಇಚ್ಛೆ ವ್ಯರ್ಥ ಮಾಡುವ ಪ್ರತಿಪಕ್ಷಗಳಿಗೆ, ಸಾಮಾನ್ಯ
ಜನರಿಗೆ ಇದು ಬೇಕಿಲ್ಲದ ವಿಷಯವೆಂಬ ಕನಿಷ್ಠ ಜ್ಞಾನ ಇಲ್ಲ. ಜನ ಸಾಮಾನ್ಯನಿಗೆ ಬೇಕಿರುವುದು ದಿನನಿತ್ಯದ ಅವಶ್ಯಕತೆಗಳಾದ ಪೆಟ್ರೋಲ್, ಡೀಸೆಲ್, ಅಕ್ಕಿ, ಬೇಳೆ, ತರಕಾರಿಯ ವಿಷಯಗಳು. ಟೆಲಿಫೋನ್ ಕದ್ಧಾಲಿಕೆ ವಿಷಯದ ಬಗ್ಗೆ ಅಪ್ಪಿ ತಪ್ಪಿಯೂ ಜನ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ, ಇಷ್ಟೆಲ್ಲಾ ಗದ್ದಲ ನಡೆಸಿ ಸಾಧಿಸಿದ್ದು ಏನು ಇಲ್ಲ.

ರೈತ ಮಸೂದೆ ತಿದ್ದುಪಡಿ ವಿಚಾರದಲ್ಲಿ ಕಳೆದ ಮೂರು ವರ್ಷಗಳಿಂದ ಆಗಬೇಕಾದಂತಹ ಚರ್ಚೆಗಳೆಲ್ಲವೂ ಸಂಸತ್ತಿನಲ್ಲೂ ಆಗಿದೆ, ಭಾರತದ ಎಲ್ಲ ಭಾಷೆಯ
ಮಾಧ್ಯಮಗಳಲ್ಲೂ ಇದರ ಬಗ್ಗೆ ಚರ್ಚೆ ಆಗಿದೆ, ಪ್ರತಿಯೊಂದು ಪತ್ರಿಕೆಯಲ್ಲಿಯೂ ತಿದ್ದುಪಡಿಯ ಬಗ್ಗೆ ವಿಷಯಗಳು ಮುದ್ರಿತವಾಗಿವೆ. ಕಾಂಗ್ರೆಸ್ ಪಕ್ಷವಂತೂ ತನ್ನ
ಆಡಳಿತಾವಧಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ನಿಷೇದಿಸುವುದಾಗಿ ಹೇಳಿತ್ತು, ಈಗ ಅದೇ ತಿದ್ದುಪಡಿಯನ್ನು ವಿರೋಧಿಸುವ ಸಲುವಾಗಿ ತನ್ನ ನಿಲುವಿನ ವಿರುದ್ಧ ನಿಂತಿದೆ.

ರೈತ ಮಸೂದೆಯಲ್ಲಿನ ನಕಾರತ್ಮಕ ಅಂಶಗಳ ಬಗ್ಗೆ ಚರ್ಚೆ ಮಾಡಲು ಯಾರು ಸಹ ತಯಾರಿಲ್ಲ, ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟವಾದರೆ ಎಲ್ಲಿ ತನ್ನ ಕಮಿಷನ್‌ಗೆ ಕತ್ತರಿ ಬೀಳುತ್ತದೆಯೆಂಬ ಭಯದಿಂದ ‘ಶರತ್ ಪವಾರ್’ನಂತವರು ಮಸೂದೆಯನ್ನು ವಿರೋಧಿಸುತ್ತಿದ್ಧಾರೆ. ದೆಹಲಿಯ ‘ಸಿಂಘು’ ಗಡಿಯಲ್ಲಿ ಪಂಜಾಬಿನಿಂದ ರೈತರೆಂದು ಹೇಳಿಕೊಂಡು ಬಂದಂತಹ ಒಂದಷ್ಟು ಬಾಡಿಗೆ ಪ್ರತಿಭಟನಾಕಾರರು ಹವಾನಿಯಂತ್ರಿತ ಕೋಣೆಗಳಲ್ಲಿ ಮಲಗಿರುವ ದೃಶ್ಯಗಳು
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು, ಇತ್ತ ನಿಜವಾದ ರೈತ ತಾನು ಬೆಳೆದ ಬೆಳೆಗೆ ಬಂದಂತಹ ಉತ್ತಮ ಬೆಲೆಯಲ್ಲಿ ಜೀವನ ಸಾಗಿಸುತ್ತಿದ್ದ. ಬೆಂಗಳೂರಿನಲ್ಲಿ ರೈತರ ಪ್ರತಿಭಟನೆಯ ಸಾರಥ್ಯ ವಹಿಸಿಕೊಂಡಂತಹ ಕೋಡಿಹಳ್ಳಿ ಚಂದ್ರಶೇಖರ್ ಇದ್ದಕ್ಕಿದಂತೆ ಬಿಎಂಟಿಸಿ ನೌಕರರ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ.

ಇವರ ಬಳಿ ಮಸೂದೆಯ ವಿಚಾರವಾಗಿ ಪ್ರಶ್ನೆಗಳನ್ನು ಕೇಳಿದರೆ ಉತ್ತರವಿರುವುದಿಲ್ಲ. ರೈತ ಮಸೂದೆಯನ್ನು ವಿರೋಧಿಸುವ ಮೂಲಕ ದಲ್ಲಾಳಿಗಳ ಪರವಾಗಿ ನಿಂತ ಪ್ರತಿಭಟನಾಕಾರರಿಗೆ ರೈತರ ಮೇಲೆ ಕಿಂಚಿತ್ತೂ ಕರುಣೆಯಿರದಿಲ್ಲದಿರುವುದನ್ನು ಇಡೀ ದೇಶವೇ ತಿಂಗಳುಗಟ್ಟಲೆ ನೋಡಿತ್ತು. ಮಸೂದೆಯಲ್ಲಿನ ಲೋಪ ದೋಷಗಳ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು, ಸುಮ್ಮ ಸುಮ್ಮನೆ ಮಸೂದೆಯನ್ನು ಸಂಪೂರ್ಣವಾಗಿ ಹಿಂಪಡೆಯುವಂತೆ ಪ್ರತಿಭಟನೆ ಮಾಡಿ ಬೆತ್ತಲಾಗಿದ್ದೂ ಆಯಿತು.

ಪ್ರತಿಪಕ್ಷಗಳು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳಿಗೆ ಅಷ್ಟೆಲ್ಲಾ ಉತ್ತರಿಸಿದ್ದರೂ ಸಹ ತಮ್ಮ ಭಂಡವಾದವನ್ನು ಮುಂದಿಟ್ಟುಕೊಂಡು ಕಲಾಪವನ್ನು ಹಾಳು ಮಾಡು ತ್ತಿದ್ಧಾರೆ. ವಿಮೆಯ ವಿಚಾರದಲ್ಲಿ ವಿದೇಶಿ ನೇರ ಬಂಡವಾಳವನ್ನು ಶೇ.49 ರಿಂದ 74ಕ್ಕೆ ಏರಿಸುವ ತಿದ್ದುಪಡಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಇದನ್ನು ವಿರೋದಿಸಿ ವಿರೋಧ ಪಕ್ಷಗಳು ಸರಕಾರವು ದೇಶದ ಆಸ್ತಿಗಳನ್ನು ಮಾರಲು ಹೊರಟಿವೆ ಎಂದು ಗದ್ದಲ ಮಾಡಿದ್ಧಾರೆ.

1991ರಲ್ಲಿ ಜಾಗತೀಕರಣದ ಹೆಸರಿನಲ್ಲಿ ಭಾರತಕ್ಕೆ ವಿದೇಶಿ ನೇರ ಬಂಡವಾಳವನ್ನು ತಂದಿದ್ದೇ ಕಾಂಗ್ರೆಸ್ ಪಕ್ಷ. ಅಂದಿನ ವಿತ್ತ ಸಚಿವ ಮನಮೋಹನ್ ಸಿಂಗ್ ಭಾರತದ ಆರ್ಥಿಕತೆಯನ್ನು ಜಗತ್ತಿಗೆ ವಿಸ್ತರಿಸಲು ಅನುಸರಿಸಿದ ನೀತಿಯಿದು. ಭಾರತದ ಆರ್ಥಿಕತೆ ಅಂದು ಜಗತ್ತಿಗೆ ತೆರೆಯದಿದ್ದರೆ ಇಂದು ನಾವು ಕೇವಲ ಚಂದನ ವಾಹಿಯನ್ನು ಮಾತ್ರ ನೋಡಬೇಕಿತ್ತು. ಒಂದು ದೇಶಕ್ಕೆ ಅತಿಮುಖ್ಯವಾಗಿ ಬೇಕಿರುವುದು ಅರೋಗ್ಯ ವ್ಯವಸ್ಥೆ, ಸಾಮಾನ್ಯ ನಾಗರಿಕನಿಗೆ ಉತ್ತಮ ಆರೋಗ್ಯದ ಭರವಸೆಯನ್ನು ನೀಡಿದರೆ ಅದಕ್ಕಿಂತಲೂ ಬಹುದೊಡ್ಡ ಜನಸೇವೆ ಮತ್ತೊಂದಿಲ್ಲ.

ಕಳೆದ ಒಂದು ದಶಕದಲ್ಲಿ ವಿಮೆ ವಲಯದಲ್ಲಾಗಿರುವ ಸುಧಾರಣೆಗಳನ್ನು ನೋಡಿದರೆ ಅರೋಗ್ಯ ವ್ಯವಸ್ಥೆ ಅದೆಷ್ಟು ಸುಧಾರಿಸಿದೆಯೆಂಬ ಅಂಶ ಕಣ್ಣಮುಂದೆ ಬರುತ್ತದೆ. ಹತ್ತರಿಂದ ಹನ್ನೆರಡು ಸಾವಿರ ಪ್ರೀಮಿಯಂನಲ್ಲಿ 5 ಲಕ್ಷದ ಅರೋಗ್ಯ ವಿಮೆ ಸಿಗುತ್ತಿದೆ, ಹತ್ತು ಸಾವಿರ ಪ್ರೀಮಿಯಂ ಕಟ್ಟಿದರೆ ಸಾಕು 50 ಲಕ್ಷದ ಜೀವ ವಿಮೆ ನೀಡುವಂತಹ ವಿಮೆ ಕಂಪನಿಗಳಿವೆ. ಒಂದು ಕಾಲದಲ್ಲಿ ಕೇವಲ ‘ಔಐಇ’ಯನ್ನು ನಂಬಿಕೊಂಡಿದ್ದಂತಹ ಭಾರತೀಯನಿಗೆ ಇಂದು ನೂರಾರು ಕಂಪನಿಗಳ ಆಯ್ಕೆಯಿದೆ.

ಕರೋನಾ ಸಂದರ್ಭದಲ್ಲಿ ಸುಮಾರು 14000 ಕೋಟಿಯಷ್ಟು ಕ್ಲೆಮ್ಸ್ ಹಣವನ್ನು ವಿಮೆ ಕಂಪನಿಗಳು ನೀಡಿವೆ. ವಿದೇಶಿ ನೇರ ಬಂಡವಾಳವನ್ನು ಹೆಚ್ಚಿಸದೆ ಕೇವಲ ಒಂದೇ ಒಂದು ಕಂಪನಿಯನ್ನು ನಂಬಿಕೊಂಡಿದ್ದರೆ ಕರೋನಾ ಸಮಯದಲ್ಲಿ ಸಾಮಾನ್ಯ ನಾಗರಿಕನ ಪಾಡು ಅಧೋಗತಿಯಾಗುತ್ತಿತ್ತು. ವಿಮೆ ಕ್ಷೇತ್ರವನ್ನು ಮತ್ತಷ್ಟು ವಿಸ್ತಾರಗೊಳಿಸಿ ಭಾರತೀಯರೆಲ್ಲರನ್ನೂ ‘ವಿಮೆ’ ಅಡಿಯಲ್ಲಿ ತಂದರೆ ಅರೋಗ್ಯ ಕ್ಷೇತ್ರದ ಬಹುದೊಡ್ಡ ಸಮಸ್ಯೆಯೇ ಬಗೆಹರಿದಂತಾಯಿತಲ್ಲವೇ? ಮುಂದುವರೆದ ದೇಶಗಳಾದಂತಹ ಅಮೆರಿಕ ಹಾಗೂ ಯುರೋಪ್ ಸಹ ಇದನ್ನೇ ಮಾಡಿದ್ದು, ವೈದ್ಯರನ್ನು ಅಂಗಲಾಚಿಬೇಡಿಕೊಳ್ಳಲಾಗುವುದಿಲ್ಲ, ಅವರು ಹೇಳಿದಂತೆಯೇ ಎಲ್ಲರು  ನಡೆಯಬೇಕಾದಂತಹ ಪರಿಸ್ಥಿತಿ ಎದುರಾಗಿರುವಾಗ ವೈದ್ಯಕೀಯ ಸಮಸ್ಯೆಗಳಿಗೆ `ವಿಮೆ’ಯೊಂದೇ ಪರಿಹಾರವೆಂಬ ಕನಿಷ್ಠ ಜ್ಞಾನ ವಿರೋಧ ಪಕ್ಷ ಗಳಿಗಿಲ್ಲ.

ವಿಮೆ ವಲಯದಲ್ಲಿ ಅದ್ಯಾವ ಸರಕಾರಿ ಆಸ್ತಿಯನ್ನು ಮಾರಾಟ ಮಾಡಲಾಗುತ್ತದೆಯೋ ಭಗವಂತನೇ ಬಲ್ಲ. ಸದನದಲ್ಲಿ ತಮಗಿಷ್ಟ ಬಂದಂತೆ ವರ್ತಿಸುವ ಪ್ರತಿಪಕ್ಷ ಗಳ ನಡೆಯನ್ನು ಸಾಮಾನ್ಯ ಜನ ಸೂಕ್ಷ್ಮವಾಗಿ ನೋಡುತ್ತಿದನೆಂಬ ಕನಿಷ್ಠ ಜ್ಞಾನವೂ ಇಲ್ಲ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕಣ್ಣೀರಿಟ್ಟು ಕೇಳಿ ಕೊಂಡರೂ ಪ್ರತಿಪಕ್ಷದ ಸಂಸದರು  ದನವನ್ನು ರಣರಂಗವನ್ನಾಗಿಸಿಬಿಟ್ಟರು. ಕೈಗೆ ಸಿಕ್ಕಂತಹ ಕಡತಗಳನ್ನು ಸದನದಲ್ಲಿ ತೂರಿ, ಜಗತ್ತಿನ ಮುಂದೆ ಭಾರತದ ಮಾನವನ್ನು ಹರಾಜು ಹಾಕಿದರು. ಮಹಿಳಾ ಮಾರ್ಷಲ್ ಒಬ್ಬರನ್ನು ಮನಬಂದಂತೆ ಎಳೆದಾಡಿ ಅವಮಾನ ಮಾಡಿದರು.

ಆಗಲೇ ಹೇಳಿದ ಹಾಗೆ ಪಶ್ಚಿಮ ಬಂಗಾಳದ ಚುನಾವಣೆಯ ಗೆಲುವಿನ ಅಮಲಿನಲ್ಲಿ ತೇಲುತ್ತಿರುವ ಮಮತಾ ಬ್ಯಾನರ್ಜಿ ಪಟಾಲಂ ಬೀದಿ ರೌಡಿಗಳಿಗಿಂತಲೂ
ಹೇಯವಾಗಿ ನಡೆದುಕೊಂಡರು. ಬಂಗಾಳದಲ್ಲಾದಂತೆಯೇ 2024ರಲ್ಲಿಯೂ ರಾಕ್ಷಸಿಯೊಬ್ಬಳನ್ನು ಪ್ರಧಾನಮಂತ್ರಿ ಮಾಡಬೇಕೆಂಬ ಧಾವಂತ ಇವರಲ್ಲಿ ಎದ್ದು ಕಾಣುತ್ತಿದೆ, ಇವರ ಆರ್ಭಟವೆಲ್ಲವೂ ಉತ್ತರ ಪ್ರದೇಶದ ಚುನಾವಣಾ -ಫಲಿತಾಂಶ ಬರುವವರೆಗಷ್ಟೇ, ನಂತರ ಇಲಿಯು ಬಿಲ ಸೇರಿಕೊಂಡಂತೆ ತಮ್ಮ ತಮ್ಮ ಬಿಲಗಳಿಗೆ ಸೇರಿಕೊಳ್ಳುವುದು ನಿಶ್ಚಿತ. ಸದನದ ಒಳಗೆ ಗಲಾಟೆ ಮಾಡುವುದರಿಂದ ನರೇಂದ್ರ ಮೋದಿ ಹಾಗು ಅಮಿತ್ ಶಾರನ್ನು ಕಟ್ಟಿಹಾಕಿಬಿಡಬಹುದೆಂಬ ಹುಂಬತನ ಇವರಲ್ಲಿ ಕಾಣುತ್ತಿದೆ.

ಬ್ಯಾಂಕುಗಳಲ್ಲಿ ಜನಸಾಮಾನ್ಯರು ಇಟ್ಟಿದಂತಹ ಠೇವಣಿಗಳನ್ನು ರಕ್ಷಿಸುವ ಸಲುವಾಗಿ ತಂದಂತಹ ತಿದ್ದುಪಡಿಯ ಬಗ್ಗೆ ಒಂದು ಮಾತನ್ನೂ ಪ್ರತಿಪಕ್ಷಗಳು
ಆಡಲಿಲ್ಲ. ಒಂದು ಲಕ್ಷವಿದ್ದಂತಹ ಠೇವಣಿ ವಿಮೆಯನ್ನು ಐದು ಲಕ್ಷಕ್ಕೆ ಏರಿಸಿದಂತಹ ತಿದ್ದುಪಡಿ ಇದಾಗಿತ್ತು, ಇದರ ಬಗ್ಗೆ ಒಂದು ಪ್ರಶಂಸೆಯನ್ನೂ ಪ್ರತಿಪಕ್ಷಗಳಲ್ಲಿ ಕಾಣಲಿಲ್ಲ. ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನ ಠೇವಣಿದಾರರಿಗೆ ಇದರಿಂದಾಗುವ ಅನುಕೂಲಗಳ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮಾತನಾಡಲಿಲ್ಲ. ತಾವು ಇಟ್ಟಿರುವ ಷ್ಟೂ ಹಣವು ಸಿಗದಿದ್ದರೂ ಸಹ 5 ಲಕ್ಷ ವಾದರೂ ಸಿಗುವಂತೆ ಮಾಡಿದ ಸರಕಾರಕ್ಕೆ ಒಂದು ಧನ್ಯವಾದ ಹೇಳಲಿಲ್ಲ. ಆರ್ಥಿಕ
ಹಾಗೂ ಸಾಮಾಜಿಕ ಹಿಂದುಳಿದ ವರ್ಗಗಳ ಮೀಸಲಾತಿ ತಿದ್ದುಪಡಿಯನ್ನು ಮಾತ್ರ ಗದ್ದಲವಿಲ್ಲದೆ ಬೆಂಬಲಿಸಿದರು, ಕಾರಣ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರಕಾರಗಳಿಗೆ ವಾಪಾಸ್ ಬಂದಂತಹ ಹಕ್ಕು. ಇದನ್ನೂ ವಿರೋಧಿಸಿದರೆ ಎಲ್ಲಿ ತಮ್ಮ ಮತಬ್ಯಾಂಕಿಗೆ ದೊಡ್ಡ ಪೆಟ್ಟು ಬೀಳುತ್ತದೆಯೆಂಬ ಭಯದಿಂದ ವಿರೋಧಿಸ ಲಿಲ್ಲ.

ನೇರ ತೆರಿಗೆಯ ತಿದ್ದುಪಡಿಯ ವಿಷಯದಲ್ಲಿ ಕಾಂಗ್ರೆಸ್ ಮಾಡುತ್ತಿದಂತಹ ಪೂರ್ವಾನ್ವಯ ತಿದ್ದುಪಡಿಯನ್ನು ತೆಗೆದು ಹಾಕಿರುವ ಮಸೂದೆಯ ಬಗ್ಗೆ ವಿರೋಧಿಗಳು
ಮಾತನಾಡುವುದಿಲ್ಲ, ನೂರಾರು ಕಂಪನಿಗಳು ಈ ಕಾಯಿದೆ ಭಯದಿಂದ ಭಾರತಕ್ಕೆ ಬಂಡವಾಳ ಹೂಡಲು ಬರುತ್ತಲೇ ಇರಲಿಲ್ಲ. ಈಗ ಈ ಮಸೂದೆಯಿಂದ ಭಾರತದ ಮೇಲಿನ ನಂಬಿಕೆ ಹೆಚ್ಚಾಗಿ ಬಂಡವಾಳ ಹರಿದು ಬರುವುದರ ಬಗ್ಗೆ ಯಾರೊಬ್ಬರೂ ಸಹ ಮಾತನಾಡುವುದಿಲ್ಲ. ಕರೋನಾದಿಂದ ಕೆಂಗೆಟ್ಟಿದ್ದಂತಹ ಭಾರತದ ಜನರ ಭಾವನೆಗಳ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕಿತ್ತು.

ಮಹಾಮಾರಿಯನ್ನು ಹತ್ತಿಕ್ಕುವಲ್ಲಿ ತೆಗೆದುಕೊಂಡಂತಹ ನಿರ್ಧಾರಗಳ ಬಗ್ಗೆ ಪ್ರತಿಪಕ್ಷಗಳು ಚರ್ಚೆ ಮಾಡಬೇಕಿತ್ತು, ಸಾಮಾಜಿಕ ಜಾಲತಾಣಗಳಲ್ಲಿ ‘ಟ್ವೀಟ್‌’
ಮೂಲಕ ಸರಕಾರವನ್ನು ಪ್ರಶ್ನಿಸುವ ರಾಹುಲ್ ಗಾಂಧಿಗೆ ಸದನದಲ್ಲಿ ಪ್ರಶ್ನೆ ಕೇಳಲು ಧೈರ್ಯವಿಲ್ಲ, ಆರ್ಥಿಕತೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರ್ಮಲ ಸೀತಾರಾಮನ್ ಪ್ರಶ್ನಿಸುವ ಪ್ರತಿಪಕ್ಷದವರು ಸದನದಲ್ಲಿ ಬಂದು ಪ್ರಶ್ನೆ ಮಾಡಬೇಕು, ಅವರು ಮಾಡುವುದಿಲ್ಲ ಏಕೆಂದರೆ ಅಲ್ಲಿ ಸಿಗುವ ಉತ್ತರಕ್ಕೆ ಮರು ಪ್ರಶ್ನೆ ಕೇಳುವ ಬುದ್ದಿವಂತಿಕೆ ಅವರಿಗಿಲ್ಲ.

ಮೋದಿ ಸರಕಾರವು ಸರಿಯಾದಂತಹ ಚರ್ಚೆಯಿಲ್ಲದೇ ಮಸೂದೆಗಳನ್ನು ಮಂಡಿಸುತ್ತಿದೆಯೆಂದು ಆರೋಪಿಸುವ ಪ್ರತಿಪಕ್ಷಗಳು, ಕಾಂಗ್ರೆಸ್ಸಿನ ಅಧಿಕಾರಾವಧಿ ಯಲ್ಲಿ 2010ರಲ್ಲಿ 4 ನಿಮಿಷಕ್ಕೊಂದರಂತೆ ಅನುಮೋದಿಸಿದಂತಹ 17 ಮಸೂದೆಗಳಿವೆ, ಹಾಗಾದರೆ 4 ನಿಮಿಷದಲ್ಲಿ ಹೇಗೆ ಚರ್ಚೆ ಮಾಡಿ ಅಷ್ಟೊಂದು ಮಸೂದೆ ಗಳನ್ನು ಮಂಡಿಸಲಾಯಿತು ? ಆರೋಗ್ಯಕರ ಚರ್ಚೆಯ ಮೂಲಕ ಹಲವು ವಿಷಯಗಳನ್ನು ಸದನದೊಳಗೆ ಚರ್ಚಿಸುವ ಚಿನ್ನದಂತಹ ಅವಕಾಶವನ್ನು ಪ್ರತಿಪಕ್ಷಗಳು ಕಳೆದುಕೊಂಡಿವೆ.

ಮಮತಾ ಬಾನೆರ್ಜಿ ಅಥವಾ ಪ್ರಶಾಂತ್ ಕಿಶೋರ್‌ರವರ ಮಾತುಗಳನ್ನು ಕೇಳಿಕೊಂಡು ಈ ಮಟ್ಟದ ಗಲಾಟೆಯನ್ನು ಮಾಡಿದ್ದರೆ, ಖಂಡಿತವಾಗಿಯೂ
ಇದೊಂದು ರೀತಿಯ ಅಸಯ್ಯಕರವಾದಂತಹ ಬೆಳವಣಿಗೆ. ರಾಜಕೀಯ ತಂತ್ರಗಾರಿಕೆಯ ದುರುದ್ದೇಶದಿಂದ ದೇಶದ ಮಾನ ಮರ್ಯಾದೆಯನ್ನು ಹಾಳುಮಾಡುವ ಮಟ್ಟಕ್ಕೆ ಇಳಿಸುವುದು ಸರಿಯಲ್ಲ. ಪಶ್ಚಿಮ ಬಂಗಾಳದಲ್ಲಿ ನಡೆದಿರುವ ರಾಜಕೀಯ ಹಿಂಸೆಗೆ ನೇರ ಸಾಕ್ಷಿಯಾದದ್ದು, ಸದನದಲ್ಲಿ ‘TMC’ ಸಂಸದರು ನಡೆಸಿದ ದಾಂಧಲೆ. ಪ್ರಜಾಪ್ರಭುತ್ವದ ದೇಗುಲದೊಳಗೆ ಈ ಮಟ್ಟದ ದಾಂಧಲೆಯನ್ನು ನಡೆಸುತ್ತಾರೆಂದರೆ ಬಂಗಾಳದಲ್ಲಿ ಅದ್ಯಾವ ಮಟ್ಟದ ರಾಜಕೀಯ ದಾಂಧಲೆಗಳಿಗೆ ಈ ಪಕ್ಷದ ಕಾರ್ಯಕರ್ತರು ಮುಂದಾಗಿರಬಹುದು. ಸ್ವಾತಂತ್ರ‍್ಯಾ ಪೂರ್ವದಲ್ಲಿ ಬಂಗಾಳವೆಂದರೆ ಹೋರಾಟಗಾರರ ನಾಡಾಗಿತ್ತು ಸುಭಾಷರು, ವಿವೇಕಾನಂದರು ಹುಟ್ಟಿದ ನಾಡಿನಿಂದ ಬಂದಂತಹ ಗೂಂಡಾ ಸಂಸ್ಕೃತಿಯ ಸಂಸದರು ಸದನದ ಸಮಯವನ್ನು ವ್ಯರ್ಥ ಮಾಡಿದ ರೀತಿ ಅಸಯ್ಯಕರ.

ಕಾಂಗ್ರೆಸ್ಸಿನ ಬಗ್ಗೆ ಹೆಚ್ಚು ಹೇಳಬೇಕಿಲ್ಲ, ಮುಳುಗುತ್ತಿರುವ ವ್ಯಕ್ತಿಗೆ ಒಂದು ಹುಲ್ಲು ಕಡ್ಡಿಯೇ ಆಸರೆ ಎಂಬಂತೆ ಧಾಂದಲೆ ಮಾಡುವವರ ಪರವಾಗಿ ನಿಲ್ಲುವ ಸ್ಥಿತಿಗೆ
ಬಂದಿದೆ. ಟ್ವಿಟ್ಟರ್‌ನಲ್ಲಿ ದೊಡ್ಡ ಜ್ಞಾನಿಯಂತೆ ವಿತ್ತ ಸಚಿವರ ಕಾಲೆಳೆಯುವ ಚಿದಂಬರಂ ಸದನದಲ್ಲಿ ಬಂದು ಪ್ರಶ್ನೆ ಮಾಡುವ ಧೈರ್ಯ ಮಾಡುವುದಿಲ್ಲ. ತನ್ನ ಕಾಲದಲ್ಲಿ ಆದಂತಹ ಆರ್ಥಿಕ ಸುಧಾರಣೆಗಳ ಬಗ್ಗೆ ಬಹಿರಂಗವಾಗಿ ಸದನದಲ್ಲಿ ಚರ್ಚೆ ಮಾಡಿದುದನ್ನು ಬಿಟ್ಟು ಹಿಂಬಾಗಿಲಿನಿಂದ ಧಾಂದಲೆಗೆ ಕುಮ್ಮಕ್ಕು ನೀಡು ವುದು ಸೂಕ್ತವಲ್ಲ. ಸಾವಿರಾರು ಕೋಟಿಯ ಭ್ರಷ್ಟಾಚಾರ ಆರೋಪದಡಿಯಲ್ಲಿ ಸಿಲುಕಿರುವ ಚಿದಂಬರಂ ಮಗ ಕಾರ್ತಿ ಚಿದಂಬರಂ ರಸ್ತೆಯಲ್ಲಿ ಸೈಕಲ್
ತುಳಿದು ಪ್ರತಿಭಟಿಸುವ ಬದಲು ಸದನದಲ್ಲಿ ಪ್ರಶ್ನೆಯನ್ನೇಕೆ ಕೇಳುತ್ತಿಲ್ಲ ? ಪ್ರತಿಪಕ್ಷಗಳು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಬೀದಿಗೆ ಇಳಿದದ್ದಾಯಿತು, ರೈತರನ್ನು ಎತ್ತಿ ಕಟ್ಟಿದ್ದಾಯಿತು, ಮುಸಲ್ಮಾನರನ್ನು ಎತ್ತಿ ಕಟ್ಟಿದಾಯಿತು.

ಈಗ ಸ್ವತಃ ತಾವೇ ಸಂಸತ್ತಿನಲ್ಲಿ ಸದನ ನಡೆಯುವ ವೇಳೆ ಸಾಮಾನ್ಯ ಜನರಿಗೆ ಅವಶ್ಯವಿಲ್ಲದ ಪೆಗಾಸಿಸ್ -ಫೋನ್ ಕದ್ದಾಲಿಕೆ ಪ್ರಕರಣವನ್ನು ಮುಂದಿಟ್ಟುಕೊಂಡು ಆರೋಗ್ಯಕರ ಚರ್ಚೆಗೆ ಅವಕಾಶ ನೀಡದೆ ದಾಂಧಲೆಯಲ್ಲಿ ತೊಡಗಿರುವುದು ದುರದೃಷ್ಟಕರ. ಸ್ವಾತಂತ್ರ‍್ಯ ಭಾರತದ ಇತಿಹಾಸದಲ್ಲಿ ಈ ರೀತಿಯ ಘಟನೆಯು ದೆಹಲಿಯ ಸಂಸತ್ತಿನಲ್ಲಿ ಎಂದೂ ನಡೆದಿರಲಿಲ್ಲ. ಜಾರ್ಖಂಡ್ ಹಾಗೂ ಕರ್ನಾಟಕದಲ್ಲಿ ವಿಧಾನಪರಿಷತ್ ನಡೆದ ದಾಂಧಲೆಯನ್ನು ಬಿಟ್ಟರೆ ಈ ಮಟ್ಟದ ದಾಂಧಲೆ
ಎಲ್ಲಿಯೂ ನಡೆದಿರಲಿಲ್ಲ. ಸದನದಲ್ಲಿ ದಾಂಧಲೆ ನಡೆಸಿದ ಒಬ್ಬೊಬ್ಬ ಸಂಸದನು ಕನಿಷ್ಠವೆಂದರೂ ಹತ್ತು ಲಕ್ಷ ಜನರ ಪ್ರತಿನಿಧಿಯಾಗಿರುತ್ತಾನೆ. ಈತನನ್ನು ನಂಬಿ ಮತ ಹಾಕಿ ಕಳಿಸಿದರೆ, ಈತನು ಮಾತ್ರ ಸಾಮಾನ್ಯ ಜನರ ತೆರಿಗೆ ಹಣವನ್ನು ಪೋಲು ಮಾಡುವುದರ ಜತೆಗೆ ಪ್ರಜಾಪ್ರಭುತ್ವದ ಹೃದಯಭಾಗಕ್ಕೆ ಅವಮಾನ ಮಾಡಿದ್ದಾನೆ.