Wednesday, 18th September 2024

ಹೈಕಮಾಂಡ್ ಹಿಡಿತ ಸಡಿಲವಾಗುತ್ತಿದೆಯೇ ?

ವಿಶ್ಲೇಷಣೆ

ರಮಾನಂದ ಶರ್ಮಾ

ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಹೈಕಮಾಂಡ್‌ನ ಉಕ್ಕಿನ ಹಿಡಿತ ಸಡಿಲವಾಗುತ್ತಿದೆಯೇ? ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ಪರಿಸ್ಥಿತಿ ಬದಲಾದಂತೆ, ಹೈಕಮಾಂಡ್ ಬಗೆಗಿನ ಭಯ-ಭಕ್ತಿ ಕಡಿಮೆಯಾದಂತೆ ಕಾಣುತ್ತಿದೆ. ಬಿಜೆಪಿಯಲ್ಲಿ ರಾಜ್ಯ ಘಟಕದ ನೂತನ ಅಧ್ಯಕ್ಷರ ನೇಮಕ ಹಾಗೂ ವಿಪಕ್ಷ ನಾಯಕನ ಆಯ್ಕೆಯ ನಂತರ ಇದು ನಿಚ್ಚಳವಾಗಿ ತೋರುತ್ತಿದೆ.

ರಾಷ್ಟ್ರೀಯ ಪಕ್ಷಗಳು ಹೈಕಮಾಂಡ್, ವರಿಷ್ಠರು ಮತ್ತು ಪಾಲಿಟ್ ಬ್ಯೂರೋ ಹೆಸರಿನಲ್ಲಿ ತಮ್ಮ ರಾಜ್ಯ ಘಟಕಗಳ ಮತ್ತು ಸದಸ್ಯರ ಮೇಲೆ ಹೊಂದಿರುವ
ಉಕ್ಕಿನ ಹಿಡಿತಕ್ಕೆ ಸುದೀರ್ಘ ಇತಿಹಾಸವಿದೆ. ಈ ಪಕ್ಷಗಳಲ್ಲಿ ಇವರ ಅನುಮತಿಯಿಲ್ಲದೆ ಕಡ್ಡಿಯೂ ಅಲುಗಾಡದು ಎನ್ನುವುದು ಬಲ್ಲವರ ಮಾತು.
ಇತ್ತೀಚೆಗೆ ರಾಷ್ಟ್ರೀಯ ಪಕ್ಷವೊಂದನ್ನು ಸೇರಿಕೊಂಡ ಯುವಕನೊಬ್ಬನನ್ನು, ‘ಪ್ರಾದೇಶಿಕ ಪಕ್ಷ ಸೇರದೆ ರಾಷ್ಟ್ರೀಯ ಪಕ್ಷದತ್ತ ಒಲವು ತೋರಿಸಲು ಕಾರಣ
ವೇನು?’ ಎಂದು ಕೇಳಿದ್ದಕ್ಕೆ ಆತ, ‘ಈ ಪಕ್ಷದಲ್ಲಿದ್ದು ನಾವೇನೂ ಮಾಡಬೇಕಾಗಿಲ್ಲ, ಎಲ್ಲವನ್ನೂ ಹೈಕಮಾಂಡ್ ನಿಭಾಯಿಸುತ್ತದೆ.

ಅವರು ಹೇಳಿದಾಗೆಲ್ಲಾ ಕೈಎತ್ತಿದರೆ, ತಲೆ ಅಲ್ಲಾಡಿಸಿದರೆ ಆಯಿತು; ಹೈಕಮಾಂಡ್ ಅಥವಾ ವರಿಷ್ಠರು ಆಗೊಮ್ಮೆ- ಈಗೊಮ್ಮೆ ಕೈಗೊಳ್ಳುವ ನಿಲುವನ್ನು, ಅದು ನಮ್ಮ ಹಿತಾಸಕ್ತಿಗೆ ವಿರುದ್ಧವಾಗಿದ್ದರೂ ಪರವಾಗಿಲ್ಲ, ದೇಶದ ಹಿತದೃಷ್ಟಿಯಲ್ಲಿ ಉಚ್ಚ ಸ್ಥಾಯಿಯಲ್ಲಿ ಹಾಡಿ ಹೊಗಳಿದರೆ ಆಯಿತು. ಏನಾದರೂ ಸಮಸ್ಯೆಗಳಿದ್ದರೆ ಅವರಿಗೆ ಅಹವಾಲು ಸಲ್ಲಿಸಿ, ಕಂಬಳಿ ಹೊದ್ದು ಬೆಚ್ಚಗೆ ಮಲಗಿದರೆ ನಮ್ಮ ಕೆಲಸ ಮುಗಿಯಿತು’ ಎನ್ನಬೇಕೇ?! ಅವನ ಈ ಮಾತನ್ನು ಸೂಕ್ಷ್ಮವಾಗಿ ನೋಡಿದರೆ ಈ ದೇಶದ ರಾಷ್ಟ್ರೀಯ ಪಕ್ಷಗಳಲ್ಲಿ ಬೇರು ಬಿಟ್ಟಿರುವ ಹೈಕಮಾಂಡ್ ಸಂಸ್ಕೃತಿಯ ಹೂರಣ ಅನಾವರಣಗೊಳ್ಳುತ್ತದೆ.

ಹೈಕಮಾಂಡ್ ಮತ್ತು ವರಿಷ್ಠರು ಎನ್ನುವ ಪದಬಳಕೆಯು ಜನಸಾಮಾನ್ಯರಲ್ಲಿ ಅದೆಷ್ಟರ ಮಟ್ಟಿಗೆ ಅಚ್ಚೊತ್ತಿದೆ ಮತ್ತು ಸಲೀಸಾಗಿ ಕಾಣಬರುತ್ತಿದೆ ಎಂದರೆ, ಚಿಕ್ಕ ಮಕ್ಕಳು ಕೂಡ ಆಟಕ್ಕೆ ಕರೆದಾಗ ಸ್ನೇಹಿತರು ಬರದಿದ್ದರೆ ‘ಏನ್ ಗುರೂ, ಹೈಕಮಾಂಡ್ ಕಳಿಸಲಿಲ್ಲವೇನೋ?’ ಎಂದು ಅವನ ತಂದೆ-ತಾಯಿಯರನ್ನು ಗೇಲಿಮಾಡುವ ಪರಿಸ್ಥಿತಿಯಿದೆ. ದಾಂಪತ್ಯ ಜೀವನದಲ್ಲಿ ಹೆಂಡತಿಯದು ಮೇಲುಗೈ ಆದರೆ, ‘ನಮ್ಮ ಹೈಕಮಾಂಡ್ ಹೇಳಿದ ಹಾಗೆ’ ಎಂದು ಹಲಬುವ ಅಥವಾ ತಮಾಷೆ ಮಾಡಿಕೊಳ್ಳುವ ಪರಿಪಾಠ ಕಂಡುಬರುತ್ತದೆ.

ರಾಷ್ಟ್ರೀಯ ಪಕ್ಷಗಳ ಸದಸ್ಯರು, ‘ನಾವು ಪಕ್ಷದ ಶಿಸ್ತಿನ ಸಿಪಾಯಿಗಳು. ಹೈಕಮಾಂಡ್‌ನ ಆಣತಿಯಂತೆ ಕೆಲಸ ಮಾಡುತ್ತೇವೆ. ಅವರು ನೀಡಿದ ಯಾವ ಜವಾಬ್ದಾರಿಯನ್ನೂ ನಿಭಾಯಿಸುತ್ತೇವೆ. ಅವರು ಹೇಳಿದರೆ ಪಕ್ಷದ ಕಚೇರಿಯ ಕಸವನ್ನೂ ಗುಡಿಸುತ್ತೇವೆ’ ಎಂದು ಆಗಾಗ ಹೇಳುವುದಿದೆ. ಇವರುಗಳು ಬಾಯಿ ತೆರೆದರೆ, ಮಾತಿನ ಮೊದಲಲ್ಲೋ ಅಥವಾ ಕೊನೆಯಲ್ಲೋ ‘ವರಿಷ್ಠರು/ ಹೈಕಮಾಂಡ್ ಹೇಳಿದಂತೆ’ ಎನ್ನುವ ಉಲ್ಲೇಖ ಕೇಳಿಬರುವಷ್ಟರ ಮಟ್ಟಿಗೆ ಆ ಚಿತ್ತಸ್ಥಿತಿ ಅವರನ್ನು ಆವರಿಸಿದೆ. ಪಕ್ಷದ ಶಿಸ್ತು ಅಥವಾ ಸಂಹಿತೆಯ ಹೆಸರಿನಲ್ಲಿ ಸದಸ್ಯರನ್ನು ಕಟ್ಟಿಹಾಕಲಾಗುತ್ತಿದೆ. ಈ ಸಂಸ್ಕೃತಿಗೆ ಸುದೀರ್ಘ ಇತಿಹಾಸವಿದೆಯಾದರೂ ಅದು ಉತ್ತುಂಗಕ್ಕೇರಿದ್ದು ಇಂದಿರಾ ಗಾಂಧಿಯವರಕಾಲದಲ್ಲಿ.

‘ಇಂದಿರಾ ಅಥವಾ ಹೈಕಮಾಂಡ್ ಹೇಳಿದ ವ್ಯಕ್ತಿಯನ್ನು ನಾವು ಸರ್ವಾನುಮತದಿಂದ ನಮ್ಮ ಅಧ್ಯಕ್ಷರನ್ನಾಗಿ ಆಯ್ಕೆಮಾಡುತ್ತೇವೆ ಎಂದು ಬೂತ್ ಮಟ್ಟದಿಂದ ಸಂಸತ್ತಿನವರೆಗಿನ ರಾಜಕಾರಣಿಗಳು ಹೇಳುವಾಗ, ತಮ್ಮತನ ಮತ್ತು ಆತ್ಮಾಭಿಮಾನವನ್ನು ಬದಿಗೊತ್ತಿ ಅಂಥ ನಿರ್ಣಯವನ್ನು ಅಂಗೀಕರಿ
ಸುವಾಗ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಗಹಗಹಿಸಿ ನಗುತ್ತದೆ’ ಎಂದು ಪ್ರಸಿದ್ಧ ನ್ಯಾಯವಾದಿ ನಾನಿ ಪಾಲ್ಕಿವಾಲಾ ಅವರು ಹಿಂದೊಮ್ಮೆ ಲೇವಡಿ ಮಾಡಿ
ದ್ದರು. ಹಿರಿಯ ಪತ್ರಕರ್ತರೊಬ್ಬರು, ಹೈಕಮಾಂಡ್ ನೊಂದಿಗೆ ಸಮಾಲೋಚಿಸಲು ರಾಜಕೀಯ ಪಕ್ಷದ ಧುರೀಣರು ಮತ್ತು ಕಾರ್ಯಕರ್ತರು ನಿರಂತರವಾಗಿ ದೆಹಲಿಗೆ ದೌಡಾಯಿಸುವುದನ್ನು ಉಲ್ಲೇಖಿಸಿ, ‘ಈ ಸಂಬಂಧದ ಖರ್ಚುವೆಚ್ಚಗಳು ಯಾರ ಲೆಕ್ಕಕ್ಕೆ ಹೋಗುತ್ತವೆ?’ ಎಂದು ಮಾರ್ಮಿಕವಾಗಿ
ಕೇಳಿದ್ದರು.

ಇಂಥ ಉಕ್ಕಿನ ಅಥವಾ ಉಡದ ಹಿಡಿತ ಇತ್ತೀಚೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಈ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಸಡಿಲವಾಗುತ್ತಿದೆಯೇ ಎಂಬ ಸಂದೇಹ
ಕಾಡುತ್ತಿದೆ. ಎಡಪಕ್ಷಗಳು ಕೇವಲ ಒಂದೇ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಈ ನಿಟ್ಟಿನಲ್ಲಿ ಅವು ಅಪ್ರಸ್ತುತವಾಗಿವೆ. ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ಪರಿಸ್ಥಿತಿ ಬದಲಾದಂತೆ ಮತ್ತು ಹೈಕಮಾಂಡ್ ಬಗೆಗಿನ ಭಯ-ಭಕ್ತಿ, ನಿಷ್ಠೆ ಕಡಿಮೆಯಾದಂತೆ ಕಾಣುತ್ತಿದೆ. ಬಿಜೆಪಿಯಲ್ಲಿ ರಾಜ್ಯ
ಘಟಕದ ನೂತನ ಅಧ್ಯಕ್ಷರ ನೇಮಕ ಹಾಗೂ ವಿಪಕ್ಷ ನಾಯಕನ ಆಯ್ಕೆಯ ನಂತರ ಇದು ನಿಚ್ಚಳವಾಗಿ ಕಾಣುತ್ತಿದೆ.

ಆಯ್ಕೆಯ ನಂತರ ಅಂಥ ಸಂಭ್ರಮ ವೇನೂ ಕಾಣಲಿಲ್ಲ, ವರಿಷ್ಠರನ್ನು ಅಭಿನಂದಿಸಿ ಸಂದೇಶಗಳ ಸುರಿಮಳೆಯಾಗಲಿಲ್ಲ. ವರಿಷ್ಠರು ಸರಿಯಾದ ಸಮಯದಲ್ಲಿ ಸರಿಯಾದ ಆಯ್ಕೆಯನ್ನೇ ಮಾಡಿದ್ದಾರೆ ಎನ್ನುವ ಹೇಳಿಕೆ ಕೇಳಿಬರಲಿಲ್ಲ, ಪತ್ರಿಕೆಗಳಲ್ಲಿ ಜಾಹೀರಾತು ಕಾಣಲಿಲ್ಲ. ಕೆಲವರು ಟ್ವೀಟ್ ಮಾಡಿದರೆ, ಮತ್ತೆ ಕೆಲವರು ಅದನ್ನೂ ಮಾಡಲಿಲ್ಲ. ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರಸಮಾರಂಭಕ್ಕೆ ಕೆಲವು ದಿಗ್ಗಜರು ಗೈರಾಗಿದ್ದರು. ಬಿಜೆಪಿಯ ಸಭೆ-ಸಮಾರಂಭ-ರ‍್ಯಾಲಿಗಳಲ್ಲಿ ಸಾಮಾನ್ಯವಾಗಿ ಕಾಣಬರುವ ಉತ್ಸಾಹ ಹಾಗೂ ಆಸಕ್ತಿಗಳು ಮೇಲ್ಮೈಯಲ್ಲಿ ಕಾಣಲಿಲ್ಲ.

ಬಹಿರಂಗ ಬಂಡಾಯ ಕಾಣದಿದ್ದರೂ, ಭಿನ್ನಮತದ ದನಿ ಒಳಗೊಳಗೇ ಧ್ವನಿಸುತ್ತಿದೆ. ಯಾರೂ ಜೋರಾಗಿ ದನಿಯೆತ್ತದಿದ್ದರೂ, ಏನೋ ನಡೆಯುತ್ತಿದೆ ಎಂಬ ಸಂದೇಶ ಮತ್ತು ಗುಮಾನಿ ಹೊರಹೊಮ್ಮುತ್ತಿದೆ. ವರಿಷ್ಠರು ಯಾರನ್ನೇ ಸೂಚಿಸಿದರೂ ಅವರನ್ನು ತಮ್ಮ ನಾಯಕರನ್ನಾಗಿ ಸ್ವೀಕರಿಸಲು ಸದಾ ಸಿದ್ಧರಿರುವ ಪಕ್ಷದಲ್ಲಿಂದು, ‘ವರಿಷ್ಠರು ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷರನ್ನು ಆಯ್ಕೆಮಾಡುವಾಗ ಎಲ್ಲರೊಂದಿಗೆ ಸಮಾಲೋಚಿಸಿಲ್ಲ’ ಎಂಬ ತಕರಾರು ಕೆಲವು ನಾಯಕರಿಂದ ಕೇಳಿಬರುತ್ತಿದೆ. ವರಿಷ್ಠರು ನೀಡಿದ್ದೇ ಪಂಚಾಮೃತವೆಂದು ಏಕರಾಗವನ್ನು ಹಾಡುತ್ತಿದ್ದ ಪಕ್ಷಸ್ಥರಲ್ಲಿ ಇಂಥ ಅಪಸ್ವರ ಕೇಳಿ ಬರುತ್ತಿರುವುದನ್ನು ನೋಡಿ, ‘ಪಕ್ಷದಲ್ಲಿ ಹೈಕಮಾಂಡ್ ಮತ್ತು ವರಿಷ್ಠರ ಉಕ್ಕಿನ ಹಿಡಿತ ಸಡಿಲವಾಗುತ್ತಿದೆ’ ಎಂಬುದಾಗಿ ರಾಜಕೀಯ ವೀಕ್ಷಕರು
ಷರಾ ಬರೆಯುವಂತಾಗಿದೆ.

ಕೆಲವರು ದೊರೆಯ ತನಕ ದೂರುನೀಡಲು ದೆಹಲಿಗೆ ಹೋಗುವವರಿದ್ದಾರೆ. ದೆಹಲಿ ಮಟ್ಟದಲ್ಲಿ ಬಿಜೆಪಿ ಮತ್ತು ಜಾತ್ಯತೀತ ಜನತಾದಳದ ನಡುವೆ ಮೈತ್ರಿ ಏರ್ಪಟ್ಟಿದೆ ಎಂದು ಹೇಳಲ್ಪಟ್ಟರೂ, ಯಾರೂ ಈ ನಿಟ್ಟಿನಲ್ಲಿ ತುಟಿಪಿಟಿಕ್ ಎನ್ನುತ್ತಿಲ್ಲ. ವರಿಷ್ಠರ ಕ್ರಮವನ್ನು ಯಾರೂ ಹಾಡಿ ಹೊಗಳಲಿಲ್ಲ. ಈ ಹೊಂದಾಣಿಕೆಯು ಒಂದು ರೀತಿಯಲ್ಲಿ ಒಲ್ಲದ ಮದುವೆಯಂತೆ ಇದೆ. ಹಿರಿಯ ಧುರೀಣರಾದ ಸಿ.ಟಿ.ರವಿ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ ಹಾಗೂ ಸೋಮಣ್ಣ ಅಸಮಾಧಾನಗೊಂಡಿದ್ದು ಅವರ ಮುಂದಿನ ನಡೆಯನ್ನು ಕುತೂಹಲದಿಂದ ನೋಡಲಾಗುತ್ತಿದೆ. ಯಡಿಯೂರಪ್ಪನವರ ಮೇಲಿನ ತಮ್ಮ ಟೀಕೆಯನ್ನು ಯತ್ನಾಳ್ ಮುಂದುವರಿಸಿದ್ದಾರೆ. ಅವರನ್ನು ಸಮಾಧಾನಗೊಳಿಸಲು ಹಿರಿಯ ಉಪಾಧ್ಯಕ್ಷ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮುಖ್ಯ ಸಚೇತಕ, ಪರಿಷತ್ತಿನ ವಿಪಕ್ಷ ನಾಯಕ ಇತ್ಯಾದಿ ಹುದ್ದೆಗಳ ಆಮಿಷ ಒಡ್ಡಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದ್ದರೂ, ಭಿನ್ನಮತದ ಶಮನ ಕಷ್ಟ ಎನ್ನಲಾಗುತ್ತಿದೆ.

ಸುಮಾರು ೧೨ ಜನ ಸಂಸದರಿಗೆ ಆರೋಗ್ಯ, ವಯಸ್ಸು, ಸುದೀರ್ಘ ಸದಸ್ಯತ್ವ ಮತ್ತು ಕಾರ್ಯಕ್ಷಮತೆಯ ಆಧಾರದ ಮೇಲೆ ಟಿಕೆಟ್ ನಿರಾಕರಿಸಲಾ
ಗುವುದು ಎನ್ನುವ ವದಂತಿ ಹರಡಿದ್ದು, ಅವರಲ್ಲಿ ಕೆಲವರು ಭಿನ್ನಮತದ ಬಾವುಟ ಹಾರಿಸುವ ಸಾಧ್ಯತೆ ಕಾಣುತ್ತಿದೆ. ತಮಿಳುನಾಡು ಮೂಲದ ಮತ್ತು
ಕರ್ನಾಟಕದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈಯವರನ್ನು ಕರ್ನಾಟಕದಲ್ಲಿ ಬಿಜೆಪಿಯ ಚುನಾವಣಾ ಉಸ್ತುವಾರಿಯಾಗಿ
ನೇಮಿಸಿದಾಗ, ‘ಈವರೆಗೆ ನಮಗೆ ಸೆಲ್ಯೂಟ್ ಹೊಡೆಯುತ್ತಿದ್ದವರಿಗೆ ಈಗ ನಾವು ಸೆಲ್ಯೂಟ್ ಹೊಡೆಯಬೇಕೇ?’ ಎಂದು ಕೆಲವರು ಕೇಳಿದ್ದರಂತೆ.

ಬಹುಶಃ ಅದೇ ರಾಗವೇ ಈಗ ಹೊಸ ಅಧ್ಯಕ್ಷರ ಬಗೆಗೆ ಆಲಾಪ ಮಾಡುತ್ತಿರಬೇಕು ಎಂದು ಹೇಳಲಾಗುತ್ತದೆ. ಪಕ್ಷದ ವಿರುದ್ಧ ಬಹಿರಂಗ ಹೇಳಿಕೆ ಕೊಡದಿ
ದ್ದರೂ ಅದು ಪರೋಕ್ಷವಾಗಿ ಹೊರಹೊಮ್ಮುತ್ತಿದೆ. ಬಿಜೆಪಿಯ ಹಿರಿಯ ಧುರೀಣ ಪ್ರಲ್ಹಾದ್ ಜೋಷಿಯವರು, ಪಕ್ಷದ ಆಂತರಿಕ ಸಮಸ್ಯೆಗಳನ್ನು
ಬಹಿರಂಗವಾಗಿ ಚರ್ಚಿಸಬಾರದು ಎಂದು ಮನವಿ ಮಾಡಿದ್ದು, ಅಷ್ಟರ ಮಟ್ಟಿಗೆ ಹೈಕಮಾಂಡ್ ಹಿಡಿತ ಸಡಿಲವಾಗಿದೆ. ಚುನಾವಣಾ ಸೋಲಿನ ನಂತರ
ಸುಮಾರು ೬ ತಿಂಗಳ ಕಾಲ ವರಿಷ್ಠರು ಕರ್ನಾಟಕದ ಬಗ್ಗೆ ನಿರ್ಲಿಪ್ತ ಭಾವನೆ ವ್ಯಕ್ತಮಾಡಿದ್ದೇ ಇದಕ್ಕೆ ಕಾರಣ ಎನ್ನಲಾಗುತ್ತದೆ. ಶಿಸ್ತಿನ ಪಕ್ಷದಲ್ಲಿ ವರಿಷ್ಠರ
ಶಿಸ್ತಿನ ಪಾಠಕ್ಕೆ ಮೊದಲಿನಷ್ಟು ಕೇರ್ ಮಾಡುವಂತೆ ಕಾಣುತ್ತಿಲ್ಲ.

ಬಿಜೆಪಿಯಂತೆ ಕಾಂಗ್ರೆಸ್ ಪಕ್ಷವೂ ಇದೇ ಸ್ಥಿತಿಯಲ್ಲಿದೆ. ಅಧಿಕಾರ ಹಿಡಿದಾಗಿನಿಂದ ಯಾವುದಾದ ರೊಂದು ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಿದೆ. ಮುಖ್ಯ
ಮಂತ್ರಿಯ ಅಧಿಕಾರಾವಧಿ, ಮುಂದಿನ ಮುಖ್ಯಮಂತ್ರಿ ಯಾರು, ಎಷ್ಟು ಜನ ಉಪಮುಖ್ಯಮಂತ್ರಿಗಳು, ದಲಿತ/ಲಿಂಗಾಯತ ಮುಖ್ಯಮಂತ್ರಿಯ
ಮಾತುಗಳು, ಪ್ರಭಾವಿ ಶಾಸಕರ ಮೈಸೂರು-ದುಬೈ ಪ್ರವಾಸ, ಕೆಲವು ಮಂತ್ರಿಗಳು ಮತ್ತು ಪ್ರಭಾವಿ ಶಾಸಕರ ಹೇಳಿಕೆಗಳು, ನಿಗಮ-ಮಂಡಳಿಗಳಿಗೆ
ನೇಮಕ, ಮುಂದಿನ ಮುಖ್ಯಮಂತ್ರಿ ಯಾರು- ಹೀಗೆ ಹಲವಾರು ಚರ್ಚಾವಿಷಯಗಳು ಮುನ್ನೆಲೆಗೆ ಬಂದು ಸರಕಾರವು ಆಗೊಮ್ಮೆ-ಈಗೊಮ್ಮೆ ಪೇಚಿಗೆ
ಸಿಲುಕುತ್ತಿದೆ.

ಆಗ ಪಕ್ಷದ ಉಸ್ತುವಾರಿಗಳು ದೆಹಲಿಯಿಂದ ಧಾವಿಸಿ ಬರುತ್ತಾರೆ ಮತ್ತು ಬಹಿರಂಗ ಹೇಳಿಕೆ ನೀಡದಂತೆ ಎಚ್ಚರಿಸುತ್ತಾರೆ, ಶಿಸ್ತಿನ ಕ್ರಮದ ಬೆದರಿಕೆ ಹಾಕುತ್ತಾರೆ. ಆದರೂ ಕೆಲ ಪ್ರಭಾವಿ ಶಾಸಕರು ಅಪಸ್ವರ ಎತ್ತುತ್ತಲೇ ಇದ್ದಾರೆ. ದುರ್ದೈವವೆಂದರೆ ಉಸ್ತುವಾರಿಗಳು ದೆಹಲಿ ವಿಮಾನ ಹತ್ತುವ
ಮೊದಲೇ ಇಂಥ ಹೇಳಿಕೆಗಳು ಹೊರಬಿದ್ದು, ಸರಕಾರಕ್ಕೆ ಮುಜುಗರವಾಗುತ್ತಿದೆ. ಇವು ಪಕ್ಷದ ರಾಜ್ಯ ಘಟಕಗಳು ಮತ್ತು ಸದಸ್ಯರ ಮೇಲೆ ಹೈಕಮಾಂಡ್ ತನ್ನ ಹತೋಟಿಯನ್ನು ಕ್ರಮೇಣ ಕಳೆದುಕೊಳ್ಳುತ್ತಿರುವುದರ ಉದಾಹರಣೆಗಳು.

ರಾಜಕೀಯ ವಿಶ್ಲೇಷಕರ ಪ್ರಕಾರ ಇಂಥ ಮೂಗು ದಾಣಗಳು ಬಹುಕಾಲ ನಿಲ್ಲುವುದಿಲ್ಲ, ಅವು ಕಾಲ ಕ್ರಮೇಣ ತಮ್ಮ ‘ಯುಟಿಲಿಟಿ’ಯನ್ನು ಕಳೆದುಕೊಳ್ಳು
ತ್ತವೆ. ಹಾಗೆಯೇ ಯಾವುದೂ ಅತಿಯಾದರೆ ತನ್ನ ಸತ್ವವನ್ನು ಕಳೆದುಕೊಳ್ಳುತ್ತದೆ. ಇದಕ್ಕೆ ಮುಖ್ಯಕಾರಣ ಹೈಕಮಾಂಡ್, ವರಿಷ್ಠರ ಕಾರ್ಯವೈಖರಿ ಮತ್ತು
ಎಲ್ಲವನ್ನೂ ತಾವೇ ನಿಯಂತ್ರಿಸುವ ದುಸ್ಸಾಹಸ. ಎರಡೂ ರಾಜಕೀಯ ಪಕ್ಷಗಳಲ್ಲಿ ಸದ್ಯ ಈ ಕಾರ್ಯ ವಿಧಾನದ ಬಗೆಗೆ ಅಸಹನೆಯ ಮೊಳಕೆಯೊಡೆ
ಯುತ್ತಿದ್ದು ಮುಂದಿನ ದಿನಗಳಲ್ಲಿ ಅದು ವಿರಾಟ ರೂಪವನ್ನು ಪಡೆಯಬಹುದೇನೋ ಎನಿಸುತ್ತದೆ.

(ಲೇಖಕರು ಅರ್ಥಿಕ ಮತ್ತು
ರಾಜಕೀಯ ವಿಶ್ಲೇಷಕರು)

Leave a Reply

Your email address will not be published. Required fields are marked *