Friday, 20th September 2024

ಶ್ರೀಕೃಷ್ಣ ಪೂಜಾ ಪರ್ಯಾಯ: ವಿಪರ್ಯಾಸಗಳ ಸರಣಿ

ಧರ್ಮಸೂಕ್ಷ್ಮ

ವಿಶ್ವ ವಿಜಯ ಸ್ವಾಮೀಜಿ

ಜಗದ್ಗುರು ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಶ್ರೀ ಕೃಷ್ಣನ ಪೂಜಾ ಪರ್ಯಾಯೋತ್ಸವಗಳು ಈ ಬಾರಿ ಹಲವು ವಿಪರ್ಯಾಸಗಳ ನಡುವೆ ನೆರವೇರಲಿರು ವುದು ಖೇದವೇ ಸರಿ. ಈ ಪರ್ಯಾಯ ಪೀಠವನ್ನು ಅಲಂಕರಿ ಸುವ ಸರದಿ ಪಡೆದ ಪುತ್ತಿಗೆ ಶ್ರೀಪಾದರು ಇದನ್ನು ‘ವಿಶ್ವ ಪರ್ಯಾಯ’ ಎಂದು ಕರೆದು ಕೊಂಡಿದ್ದರೂ, ಈ ‘ವಿಶ್ವ’ ಎನ್ನುವ ಪದ ವಿಪರ್ಯಾಸಗಳ ಆಗರವಾಗಿದೆ; ನಮ್ಮ ಭವ್ಯ ಭಾರತ ಮತ್ತು ‘ವಿದೇಶ’ಗಳನ್ನು ಕಲೆಹಾಕಿದ ಗೊಂದಲಗಳ ಗೂಡಾಗಿದೆ.

ವಿದೇಶಗಳಲ್ಲಿ ಸಂಚರಿಸಿ ಧರ್ಮಪ್ರಚಾರ ಮಾಡಿದ ಹೆಗ್ಗಳಿಕೆಯ ಉಡುಪಿಯ ಅಷ್ಟ ಮಠಾಧಿಪತಿಯೊಬ್ಬರು ಪ್ರಸ್ತುತ ಪರ್ಯಾಯ ಪೂಜಾಧಿಕಾರವನ್ನು ಜನವರಿ ೧೮ರಂದು ವಹಿಸಿಕೊಳ್ಳಲಿದ್ದಾರೆ ಎಂಬುದೇ ಈ ವಿಪರ್ಯಾಸದ ಆರಂಭಿಕ ಮಜಲು. ಶ್ರೀ ವಾದಿರಾಜ ತೀರ್ಥರು ಈ ದ್ವೈವಾರ್ಷಿಕ ಪರ್ಯಾಯ ಪೂಜಾ ಪದ್ಧತಿಯನ್ನು ಮೊದಲಿಗೆ ಜಾರಿಗೆ ತಂದವರು. ಅವರು ಹಾಕಿಕೊಟ್ಟ ಈ ಪದ್ಧತಿಯ ನಡಾವಳಿಯು ೨೦೨೪ರಲ್ಲಿ ಮುರಿದು ಬಿದ್ದುದು ಮೊದಲ ವಿಪರ್ಯಾಸ. ೨೦೦೮ರಲ್ಲೂ ಹೀಗೆ ಸಂಪ್ರದಾಯ ಮುರಿದಿದ್ದನ್ನು ಆಸ್ತಿಕರು ಮರೆತಿಲ್ಲ!

ಆಗಿನ ಪರ್ಯಾಯ ಪೀಠಸ್ಥ ಶ್ರೀ ಕೃಷ್ಣಾಪುರ ಮಠಾಧಿಪತಿಗಳು, ಮುಂದಿನ ಪರ್ಯಾಯವನ್ನೇರಬೇಕಿದ್ದ ಶ್ರೀ ಪುತ್ತಿಗೆ ಮಠಾಧಿಪತಿಯವರಿಗೆ ಸರ್ವಜ್ಞ ಪೀಠವನ್ನು ವಹಿಸುವ ಮೊದಲು ಅಕ್ಷಯಪಾತ್ರೆ, ಸಟ್ಟುಗ, ಬೀಗದ ಕೈಗಳನ್ನು ಸ್ವತಃ ವಿಧ್ಯುಕ್ತವಾಗಿ ವಹಿಸಿಕೊಡುವ ಬದಲು ಅಲ್ಲೇ ಬಿಟ್ಟು ನಿರ್ಗಮಿಸಿದ್ದರು. ಇದು ಅವರು ವಿರೋಧ ವ್ಯಕ್ತಪಡಿಸಿದ ರೀತಿಯಾಗಿತ್ತು! ಇದು ೨ನೇ ವಿಪರ್ಯಾಸ! ಶ್ರೀ ಸರ್ವಜ್ಞ ಪೀಠಾರೋಹಣವೂ ಸಂಪ್ರದಾಯ ವಿರುದ್ಧವಾಗಿಯೇ ನಡೆಯಿತು. ಪರ್ಯಾಯದ ಅವಧಿಯಲ್ಲಿ ನಡೆವ ವಿಶೇಷ ‘ದರ್ಬಾರ್’ ಕಾರ್ಯಕ್ರಮದಲ್ಲಿ ೮ ಮಠಗಳ ಪೀಠಾಧಿಪತಿಗಳೂ ಹಾಜರಿರ
ಬೇಕು.

ಆದರೆ, ಈ ಮೊದಲು ನಡೆದ ಪುತ್ತಿಗೆ ಶ್ರೀ ಪರ್ಯಾಯದಲ್ಲಿ ಅವರು ಹಾಜರಿರಲಿಲ್ಲ. ಮತ್ತೆ ನಡೆದ ಸಾರ್ವಜನಿಕ ಸಭೆಯಲ್ಲಿ ಶ್ರೀ ಕೃಷ್ಣ ಮಠದ ಘನತೆ ಕಾಪಾಡಲು ಅವರು ಹಾಜರಿದ್ದರು. ಅವರ ಪ್ರತಿಭಟನೆ ಸಂಪ್ರದಾಯ ಮೀರಿದ್ದಕ್ಕೆ ಮಾತ್ರವಾಗಿತ್ತು ಎಂಬುದು ಸ್ಪಷ್ಟವಾಗಿತ್ತು. ಶ್ರೀಕೃಷ್ಣನ ದೈನಂದಿನ ಪೂಜೆಗಳಲ್ಲಿ ಮಧ್ಯಾಹ್ನದ ಮಹಾಪೂಜೆ, ರಾತ್ರಿಯ ಚಾಮರಸೇವೆ ಈ ಎರಡನ್ನೂ ನೆರವೇರಿಸುವ ಅಧಿಕಾರವಿರುವುದು ಪರ್ಯಾಯ ಪೀಠಾಧಿಪತಿಗಳಿಗೆ ಮಾತ್ರ.

ಇತರ ಪೂಜಾ ಕೈಂಕರ್ಯಗಳನ್ನು ಅಷ್ಟ ಮಠಗಳ ಯಾವುದೇ ಯತಿಗಳೂ ನಡೆಸಬಹುದು. ಹೀಗಾಗಿ ಮುಂದಿನ ಪರ್ಯಾಯಾಕಾಂಕ್ಷಿಗಳಾದ ‘ವಿಶ್ವ’ ಪರ್ಯಾಯ ಪೀಠಸ್ಥರು, ಈ ಮೊದಲು ತಾವು ಆಚಾರ್ಯ ಸಂಪ್ರದಾಯಕ್ಕೆ ವಿರುದ್ಧವಾಗಿ ವಿದೇಶಯಾತ್ರೆ ಮಾಡಿದ ಕಾರಣ ಎಲ್ಲ ಪೂಜಾ ಕೈಂಕರ್ಯ ಗಳಲ್ಲಿ ಭಾಗವಹಿಸದೆ, ಶ್ರೀಕೃಷ್ಣನ ದರ್ಶನ ಮಾತ್ರ ಸೇವೆ ನಡೆಸಿದೆ ಎಂದು ಘೋಷಿಸಿದ್ದು, ತಮ್ಮ ಮೊದಲ ‘ವಿಶ್ವ’ ಪರ್ಯಾಯದ ವೇಳೆ ಇತರೆ ಪೀಠಸ್ಥರ ಪಂಕ್ತಿಯಲ್ಲಿ ಶ್ರೀಕೃಷ್ಣನ ತೀರ್ಥ- ಪ್ರಸಾದಗಳನ್ನು ಸ್ವೀಕರಿಸದಿದ್ದುದು ವಿಪರ್ಯಾಸಗಳೇ.

ಪರ್ಯಾಯೋತ್ಸವದ ವೇಳೆ ಇತರೆ ಮಠಾಧಿಪತಿಗಳೂ ಉಡುಪಿಯ ಜೋಡುಕಟ್ಟೆಯಲ್ಲಿ ಸಮಾವೇಶಗೊಂಡು, ಪರ್ಯಾಯ ಪೀಠವನ್ನು ಏರಲಿರುವ ಶ್ರೀಪಾದರನ್ನು ಮಂಗಳವಾದ್ಯ, ವೇದಘೋಷಗಳ ನಡುವೆ ಸ್ವಾಗತಿಸುವ, ಅಲ್ಲಿಂದ ಅಷ್ಟ ಮಠಾಧಿಪತಿಗಳು ಪ್ರತ್ಯೇಕ ಪಾಲಕಿಯಲ್ಲಿ ರಥಬೀದಿಯ
ಪ್ರದಕ್ಷಿಣೆ ಮಾಡಿ ಆ ಮೂಲಕ ಶ್ರೀಕೃಷ್ಣ ಮಠಕ್ಕೆ ಪ್ರವೇಶಿಸುವ ಕಾರ್ಯಕ್ರಮ ಈ ‘ವಿಶ್ವ ಪರ್ಯಾಯ’ದಲ್ಲಿ ನಾಪತ್ತೆಯಾಗಿತ್ತು. ಈಗಲೂ ಹಾಗೆಯೇ ಇದ್ದೀತು!

ವಿದೇಶಯಾತ್ರೆ ಮಾಡಿರುವ ಮಾಧ್ವ ಪೀಠಾಧಿಪತಿಗಳ ಬಗ್ಗೆ ಮತ್ತು ಹಲವು ವಿಪರ್ಯಾಸಗಳ ಬಗ್ಗೆ ಈಗ ನೋಡೋಣ: ೧. ಈ ಮೊದಲು ಅಷ್ಟ ಮಠಗಳಲ್ಲೊಂದಾದ ಮಠದ ಉತ್ತರಾಧಿಕಾರಿಯಾದ ನಾನು, ಆಶ್ರಮ ಗುರುಗಳ ಲಿಖಿತ ಅನುಮತಿ, ಆಶೀರ್ವಾದದಿಂದಲೇ ಶ್ರೀ ಮಧ್ವಾಚಾರ್ಯರ
ತತ್ವವಾದದ ಪ್ರಚಾರದ ಸದುದ್ದೇಶದಿಂದ ತೆರಳಿ ಯಶಸ್ವಿಯಾಗಿ ಮರಳಿದ ನಂತರ, ನನಗೆ ದೊರೆತದ್ದು ತೀವ್ರ ವಿರೋಧ- ಬೆದರಿಕೆಗಳು! ಆದರೆ, ಮುಂಬರಲಿರುವ ಮಠದ ಪೀಠದಲ್ಲಿದ್ದು, ಯಾರನ್ನೂ ಲೆಕ್ಕಿಸದೆ, ೨೦೦೮, ೨೦೧೪ ಮತ್ತು ಇತ್ತೀಚೆಗೆ ಹಲವು ಬಾರಿ (ಆರ್ಯ ವಿರೋಧಿ, ಅನೇಕ ಮತಾಚರಣೆಗಳ) ವಿದೇಶಯಾತ್ರೆ ಮಾಡಿದ್ದರೂ, ಗುರುಗಳ ಆದೇಶ ಉಲ್ಲಂಘಿಸಿ, ಇದು ಸಿವಿಲ್ ಕಾಯ್ದೆ ಎನ್ನುವಂತೆ ಉದ್ಧಟತನದಿಂದ ಪರ್ಯಾಯ ಪೀಠ ಏರಲು ಹವಣಿಸುತ್ತಿದ್ದಾರೆ.

೨. ಇವರ ವಿದ್ಯಾಗುರುಗಳಾದ ಶ್ರೀ ವಿದ್ಯಾಮಾನ್ಯ ತೀರ್ಥರು, ‘ವಿದೇಶಯಾತ್ರೆ ಬೇಡ’ ಎಂದು ಇವರಿಗೆ ಖಚಿತವಾಗಿ ತಿಳಿಸಿ, ಅನುಮತಿಸದಿದ್ದರೂ, ಅದನ್ನು ಉಲ್ಲಂಘಿಸಿ ವಿದೇಶಯಾತ್ರೆ ಮಾಡಿದ ನಂತರ ಸರ್ವಜ್ಞಪೀಠ ಏರಿದ್ದು ಗುರುದ್ರೋಹವಲ್ಲದೆ ಮತ್ತೇನು?

೩. ಅಷ್ಟ ಮಠಾಧಿಪತಿಗಳು ಶ್ರೀ ಮಧ್ವ-ವಾದಿರಾಜರ ಸಂಪ್ರದಾಯ ರಕ್ಷಣೆಯಲ್ಲಿ ಸಮಾನ ಹಕ್ಕುದಾರರು. ಇವರು ತಂತಮ್ಮ ಪರ್ಯಾಯಗಳ ಅವಽಯಲ್ಲಿ ಬದ್ಧರಾಗಿದ್ದು, ಇತರೆ ಮಠಾಧಿಪತಿಗಳ ಜತೆಗೂಡಿ ಪಾಲಿಸಲೇಬೇಕಾದ ಸಂಪ್ರದಾಯಗಳನ್ನು ಉಳಿಸಿಕೊಂಡು ಮುಂದುವರಿಸಿಕೊಂಡು ಹೋಗಬೇಕು (ಪ್ರಸ್ತುತ ಪೀಠಾಧಿಪತಿಯು ಅವರು ವಿದೇಶಯಾತ್ರೆಗೆ ತೆರಳಿದ ದಿನಾರಭ್ಯ ನಡೆಸಿಕೊಂಡು ಬಂದ ವಿಚಾರಗಳು ಅಧಿಕೃತ ದಾಖಲೆಯಾಗಿ, ನ್ಯಾಯಾಲಯದ ಅವಗಾಹನೆಗೆ ತರಲಾಗಿದೆ). ಆದರೆ ಇವರು ಮಾತ್ರ ಇದು ತಮಗೆ ತಿಳಿದಿಲ್ಲದಂತೆ ವರ್ತಿಸುತ್ತಿದ್ದಾರೆ.

ಇವರ ಜತೆ ಉಳಿದವರೂ ಪಂಕ್ತಿಭೋಜನ ಸ್ವೀಕರಿಸುತ್ತಿಲ್ಲ; ಕೇವಲ ಸಾರ್ವಜನಿಕ ಸಮಾರಂಭಗಳಲ್ಲಿ ಇತರೆ ಗಣ್ಯರ ಜತೆ ಹೇಗೋ ಹಾಗೆ ಭಾಗವಹಿಸು ತ್ತಿದ್ದಾರೆ. ಇದು ಅವರ ಅಸಮಾಧಾನದ ಸ್ಪಷ್ಟ ಸೂಚನೆ.

೪. ಇತರ ೭ ಪೀಠಾಧಿಪತಿಗಳ ಪರ್ಯಾಯದಲ್ಲೂ ಇವರಿಗೆ ಶ್ರೀಕೃಷ್ಣ ಪೂಜಾವಕಾಶ ಪಡೆಯಲಾಗಲಿಲ್ಲ; ತಮ್ಮ ವಿದೇಶ ಯಾತ್ರೆ ಆರಂಭವಾದ ದಿನದಿಂದಲೇ ಈ ಅವಕಾಶವನ್ನು ಕಳೆದು ಕೊಂಡಿದ್ದಾರೆ.

೫. ಅಷ್ಟಮಠಗಳ ಸ್ಥಾಯಿ ನಿಯಮದಂತೆ, ಯಾವುದೇ ಮಠಕ್ಕೆ ಉತ್ತರಾಽಕಾರಿಯ ನೇಮಕವಾದರೆ, ಆ ಯತಿಯನ್ನು ಹಾಲಿ ಪರ್ಯಾಯಸ್ಥ ಶ್ರೀಪಾದರು ಶ್ರೀ ಕೃಷ್ಣ ಮಠಕ್ಕೆ ಸಕಲ ಗೌರವಗಳೊಂದಿಗೆ ಸ್ವಾಗತಿಸಬೇಕಾದ್ದು ಸಂಪ್ರದಾಯ. ವಿಷಾದ ವೆಂದರೆ, ಪುತ್ತಿಗೆ ಮಠದ ಉತ್ತರಾಧಿಕಾರಿ ಎನ್ನಲಾಗಿರುವ ಈ
ಶಿಷ್ಯಯತಿಗೆ ಈ ಸ್ವಾಗತ ಇನ್ನೂ ನಡೆದೇ ಇಲ್ಲ.

೬. ಹೀಗೆ ಪುತ್ತಿಗೆ ಮಠದ ಹಿರಿಯ ಶ್ರೀಪಾದರು ಈ ವಿಷಯದಲ್ಲಿ ಸಾಮರಸ್ಯ ತರಲು ಯತ್ನಿಸುತ್ತಿರುವ ಪರಿಸ್ಥಿತಿ ಮತ್ತು ಸಾಧ್ಯತೆಗಳು ಇದ್ದಾಗ್ಯೂ ಹಾಗೆ ಮಾಡದೆ, ಕೇವಲ ತಮ್ಮ ಹಠದಿಂದ ಹಿಂದಿನ ಸಂಪ್ರದಾಯಗಳನ್ನು ಗಾಳಿಗೆ ತೂರಿ, ಅನಗತ್ಯವಾಗಿ ಗೊಂದಲ ಹುಟ್ಟುಹಾಕಿದ್ದಾರೆ. ಅವರ ವಿಚಿತ್ರ
ವರ್ತನೆಯಿಂದಾಗಿ ಮುಂದಿನ ವರ್ಷಗಳಲ್ಲಿ ಮತ್ತಷ್ಟು ವಿಪರ್ಯಾಸ ಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.

೭. ಯತಿಧರ್ಮಕ್ಕೆ ವಿದೇಶ ಯಾತ್ರೆಯು ಸಮ್ಮತವೇ ಅಥವಾ ಅದರ ಉಲ್ಲಂಘನೆಯೇ ಎನ್ನುವ ಬಗ್ಗೆ ಶಾಸವಿಹಿತ ಚರ್ಚೆ ನಡೆಸದೆ, ಸುಶಿಕ್ಷಿತರೇ ದ್ವಂದ್ವನೀತಿ ಅನುಸರಿಸುತ್ತಿರುವುದು ಮಾಧ್ವಸಮಾಜದ ಕಳಂಕ.

ಶ್ರೀ ಮಧ್ವಾಚಾರ್ಯರ ಸಂಪ್ರದಾಯಗಳನ್ನು ಪಾಲಿಸುವ, ಅದೇ ಶಿಷ್ಯ ಪರಂಪರೆಯ ೨೫ ಮಠಗಳಲ್ಲಿ ಇದುವರೆಗೂ ಯಾವ ಯತಿಯಾಗಲಿ ವಿದೇಶಯಾತ್ರೆ ಮಾಡಿದರೆ, ಅವರು ಪೀಠಾಧಿಕಾರ, ಸಂಸ್ಥಾನ ಪ್ರತಿಮಾ ಪೂಜಾಧಿಕಾರಗಳನ್ನು ಅನರ್ಹತೆಯ ಕಾರಣ ಕಳೆದುಕೊಳ್ಳುತ್ತಾರೆ. ಈ ಬಗ್ಗೆ ಎಲ್ಲಿಯೂ ಉಲ್ಲಂಸಿದ ಉದಾಹರಣೆಗಳಿಲ್ಲ.

ಪುತ್ತಿಗೆ ಶ್ರೀಪಾದರು ತಾವು ವಿದೇಶಯಾನ ಮಾಡಿದ ನಂತರವೇ ಯಾರಿಗೂ ಆಹ್ವಾನ ನೀಡದೆ (ದ್ವಂದ್ವ ಮಠವೂ ಸೇರಿದಂತೆ) ತಮ್ಮ  ಉತ್ತರಾಧಿಕಾರಿ ಯನ್ನು ನೇಮಿಸಿದ್ದು, ಇವರನ್ನು ಇತರೆ ಶ್ರೀಪಾದರು ಮಾನ್ಯಮಾಡಿಲ್ಲ. ತಾವು ವಿದೇಶಕ್ಕೆ ತೆರಳುವಾಗ ತಮ್ಮ ಸಂಸ್ಥಾನ ಪ್ರತಿಮೆಗಳನ್ನು ಶ್ರೀ ಭೀಮನಕಟ್ಟೆ ಶ್ರೀಪಾದರ ವಶಕ್ಕೆ ಕೊಟ್ಟು ಹೋಗುತ್ತಿದ್ದರು. ಆಗ ಕೃಷ್ಣಾಪುರ ಮಠದ ಶ್ರೀಪಾದರು ಮೌನ ವಹಿಸಿದ್ದು ಆಶ್ಚರ್ಯವೇ ಸರಿ. ಒಮ್ಮೆ ಅವರು ಪುತ್ತಿಗೆ ಶ್ರೀಪಾದರಿಗೆ, ‘ನಿಮ್ಮ ಉತ್ತರಾಧಿಕಾರಿ ವಟುವನ್ನು ಆಯ್ಕೆ ಮಾಡಿ, ನಮ್ಮ ಮೂಲಕವೇ ಮಂತ್ರೋಪದೇಶ, ಸನ್ಯಾಸ ವಿಧಿಗಳನ್ನು ನಡೆಸತಕ್ಕದ್ದು; ಹಾಗಾದರೆ ಮಾತ್ರ ನಾವು ಅವರನ್ನು ಅಧಿಕೃತವಾಗಿ ಮಾನ್ಯ ಮಾಡುತ್ತೇವೆಯೇ ಹೊರತು ಅನ್ಯಥಾ ಇಲ್ಲ’ ಎಂದು ಆದೇಶವಿತ್ತಿದ್ದರು.

ಆದರೆ ಈ ಆದೇಶವನ್ನು ಲೆಕ್ಕಿಸದೆ ಪುತ್ತಿಗೆ ಶ್ರೀಪಾದರು ತಾವೇ ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿ, ಪ್ರಣವೋಪದೇಶ ಇತ್ಯಾದಿ ನೀಡಿದರು. ಹೀಗಾಗಿ, ಈವರೆಗೂ ಈ ‘ಉತ್ತರಾಧಿಕಾರಿ’ಗೆ ಅಷ್ಟಮಠಗಳಲ್ಲಿ ಮಾನ್ಯತೆ, ಶ್ರೀಕೃಷ್ಣ ಪ್ರತಿಮಾಸ್ಪರ್ಶ, ಚಾತುರ್ಮಾಸ್ಯ ವ್ರತ ಇತ್ಯಾದಿ ಕಾರ್ಯಕ್ರಮಗಳು ನೆರವೇರದೆ ಉಳಿದಿವೆ. ಈ ಸಂಗತಿಗಳು ಈವರೆಗೂ ಆಸ್ತಿಕ ಬಂಧುಗಳ ಗಮನಕ್ಕೆ ಬಂದಿಲ್ಲ. ಅಷ್ಟಮಠಗಳ ಇತಿಹಾಸದಲ್ಲಿ ಯಾವುದೇ ಯತಿಗಳ ಸ್ವರ್ಗ
ವಾಸ, ತೀವ್ರ ಅನಾರೋಗ್ಯ, ಅಂಗವೈಕಲ್ಯ ಉಂಟಾಗಿ ಪೂಜೆಗೆ ತಡೆಯಾದರೆ, ಆ ಮಠದ ದ್ವಂದ್ವ ಪೀಠದವರು ಇದನ್ನು ಮುಂದುವರಿಸಿಕೊಂಡು ಅವಿಚ್ಛಿನ್ನವಾಗಿ ನಡೆಸುವ ಸಂಪ್ರದಾಯವಿದೆ; ಹಲವು ಬಾರಿ ಹೀಗೆ ನಡೆದಿದೆ. ಹೀಗಿರುವಾಗ ದ್ವಂದ್ವ ಮಠದಲ್ಲಿ ಒಬ್ಬರು ತಾವೇ ನಿರ್ಧಾರ ತೆಗೆದು ಕೊಳ್ಳುವ ಕ್ರಮ ಸಂಪ್ರದಾಯಬಾಹಿರವೆನಿಸುತ್ತದೆ. ಇದು ಆಸ್ತಿಕ ಬಂಧು ಗಳಿಗೆ ತಿಳಿದಿರಲಿ ಎನ್ನುವುದೇ ನನ್ನ ಈ ಕಳಕಳಿಯಾಗಿದೆ.

ನಾನು ಗತ್ಯಂತರವಿಲ್ಲದೆ, ಹಲವು ವರ್ಷ ಕಾದು, ನನ್ನ ಸ್ಥಿತಿ ಮತ್ತು ನಿಲುವನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ದಾಖಲೆ ಸಹಿತ ಪ್ರಸ್ತಾಪಿಸಿದ್ದೇನೆ. ನನ್ನ ಈ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಸಿಕ್ಕಿ, ಈಗಿರುವ ದ್ವಂದ್ವ ವರ್ತನೆಗೆ ಶಾಶ್ವತ ವಿರಾಮ ಸಿಗಲಿದೆ ಎಂದು ಭಾವಿಸಿದ್ದೇನೆ.
|| ಶ್ರೀ ಕೃಷ್ಣಃ ಶರಣಂ ಮಮ ||

(ಲೇಖಕರು ಪೇಜಾವರ ಶ್ರೀಗಳ ಮಾಜಿ ಉತ್ತರಾಧಿಕಾರಿ)