ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
vbhat@me.com
ಪತ್ರಿಕೆಗಳು ಆಗಾಗ ಬದಲಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇನ್ನು ಕೆಲವು ಪತ್ರಿಕೆಗಳು ಏನೇ ಆದರೂ ಬದಲಾಗುವುದಿಲ್ಲ. ಅವು ಹಾಗೆ
ಬದಲಾಗದಿದ್ದರೇ ಒಳ್ಳೆಯದು. ‘ಕಸ್ತೂರಿ’ಯಂಥ ಪತ್ರಿಕೆಯನ್ನು ಏಕಾಏಕಿ ಬದಲು ಮಾಡಿಬಿಟ್ಟರೆ, ಅದನ್ನು ಓದುಗರು ಅರಗಿಸಿಕೊಳ್ಳಲಿಕ್ಕಿಲ್ಲ. ಅದು ಒಂಥರಾ ಹಳೇ ಹುಣಸೆ ಹಣ್ಣಿನಂತೆ, ಹಳೇ ವೈನಿನಂತೆ. ಹಳತಾದಷ್ಟೂ ಅದರ ಒಗರು, ಒನಪು, ರುಚಿ ಹೆಚ್ಚು.
‘ಕಸ್ತೂರಿ’ಯ ಅಂದಿನ ಸಂಪಾದಕರಾಗಿದ್ದ ರವಿ ಬೆಳಗೆರೆಯವರೊಂದಿಗೆ ಮಾತಾಡುವಾಗ, ನಾನು ತಮಾಷೆಗೆ, ಆ ಪತ್ರಿಕೆಯನ್ನು ಚಿ.ನಾ.ಮಂಗಳಾ ಅವರಿಗೆ ಹೋಲಿಸುತ್ತಿದ್ದೆ. (ಎನ್‌ಎಂಕೆಆರ್‌ವಿ ಕಾಲೇಜಿನ ಪ್ರಾಂಶುಪಾಲ ರಾಗಿದ್ದ ಮಂಗಳಾ ಮೂವತ್ತು ವರ್ಷದವರಾಗಿದ್ದಾಗ ಹೇಗಿದ್ದರೋ, ನಿವೃತ್ತರಾಗುವಾಗಲೂ ಹಾಗೇ ಕಾಣುತ್ತಿದ್ದರು. ಈ ಕಾರಣಕ್ಕೆ, ಚಿ.ನಾ.ಮಂಗಳಾ ಅವರನ್ನು ವೈಎನ್ಕೆ ‘ಪ್ರಾಚೀನ ಮಂಗಳಾ’ ಎಂದು ಕುಶಾಲು ಮಾಡುತ್ತಿದ್ದರು. ‘ಕಸ್ತೂರಿ’ಯೂ ಹಾಗೆ ಎನ್ನುವ ಅರ್ಥದಲ್ಲಿ ಆ ಮಾತು.)ಅದು ಹುಟ್ಟಿದಾಗಲೇ ಪ್ರಬುದ್ಧ ಮತ್ತು ಪ್ರಾಚೀನ. ಈ ರೀತಿಯ ಗುಣಧರ್ಮ ಬೆಳೆಸಿಕೊಳ್ಳುವುದು ಸಾಮಾನ್ಯವಲ್ಲ.
ಅಂಥ ವೈಶಿಷ್ಟ್ಯ ‘ಕಸ್ತೂರಿ’ಯದು. ಬದಲಾಗದಿರುವುದೂ ಒಂದು ತಾಕತ್ತು. 1956 ರ ಸೆಪ್ಟೆಂಬರ್ ನಲ್ಲಿ ‘ಕಸ್ತೂರಿ’ ಮೊದಲ ಸಂಚಿಕೆ ಹೊರಬಂದಾಗ ಹೇಗಿತ್ತೋ, ಈಗಲೂ ಅದು ಹಾಗೇ ಇದೆ. ಔದ್ಯೋಗೀಕರಣ, ಜಾಗತೀಕರಣ, ಗಣಕೀಕರಣ, ತಾಂತ್ರಿಕರಣ… ಹೀಗೆ ಏನೇನೆಲ್ಲ ಕರಣಗಳೆಂಬ ಕಾರಣಗಳು ಎದುರಾದರೂ ‘ಕಸ್ತೂರಿ’ ಮಾತ್ರ ಹಾಗೇ ಇದೆ. ‘ಕಸ್ತೂರಿ’ ಎಂದೆಂದೂ ಬದಲಾಗಬಾರದು. ಪ್ರಥಮ ಸಂಚಿಕೆಯಿಂದಲೇ ಅದಕ್ಕೆ ಅಂಥದೊಂದು ಭದ್ರ ಬುನಾದಿ ಹಾಕಿದವರು ಮೊದಲ ಸಂಪಾದಕ ಪಾವೆಂ ಆಚಾರ್ಯರು. ಆ ಪತ್ರಿಕೆಯ ಸ್ವರೂಪವನ್ನು ಬದಲಿಸುವಂತೆ, ಅನೇಕರು ಪ್ರಯತ್ನಿಸಿದರೂ ಆಚಾರ್ಯರು ‘ಕಸ್ತೂರಿ’ಗೆ ಕೋಟೆ ಕಟ್ಟಿ, ಪಾಳೇಗಾರರಂತೆ ಕಾವಲು ಕಾಯ್ದರು.
ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಎಷ್ಟೆಲ್ಲ ಬದಲಾವಣೆ ಯಾದರೂ, ಇಂದಿಗೂ ‘ರೀಡರ್ಸ್ ಡೈಜೆ’ನ ಹೂರಣ (content) ಮಾತ್ರ ಬದಲಾಗಿಲ್ಲ. ಅದರ ವಿನ್ಯಾಸ ಕಾಲಕ್ಕೆ ತಕ್ಕಂತೆ ಬದಲಾಗಿದೆ. ದೇಶದಿಂದ ದೇಶಕ್ಕೆ ಅದರ ವಿಷಯ-ವಿಶೇಷಗಳು ಮಾರ್ಪಾಟಾಗಿವೆ. ಕೆನಡ, ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ಆಗ್ನೇಯ ಏಷ್ಯಾಗಳಿಗೆ ಪ್ರತ್ಯೇಕ ಆವೃತ್ತಿಗಳಿವೆ. ಆದರೆ ಯಾವುದೇ ಆವೃತ್ತಿ ತೆಗೆದರೂ ಸ್ಪರ್ಶ, ಆಕಾರ ಮತ್ತು ಓದಿನ ಅನುಭವ ಮಾತ್ರ ಒಂದೇ. ಅದೇ ಎಚ್ಚರವನ್ನು ‘ಕಸ್ತೂರಿ’ಯೂ ಕಾದುಕೊಂಡಿರುವುದು ಸಮಾಧಾನಕರ ಸಂಗತಿಯೇ. ಮನಃಪೂರ್ತಿ ‘ಡೈಜೆಸ್ಟ್’ ಅನುಭವವನ್ನು ಸವಿಯಬಹುದು.
ಈ ಫೆಬ್ರವರಿ ತಿಂಗಳ ‘ಕಸ್ತೂರಿ’ಯನ್ನು ಆಸ್ಥೆಯಿಂದ ಓದುತ್ತಿದ್ದೆ. ಸುಮಾರು ಅರವತ್ತು ಪುಟಗಳಲ್ಲಿ ಭಾರತರತ್ನ ಪಂಡಿತ ಭೀಮಸೇನ ಜೋಶಿಯವರ ವ್ಯಕ್ತಿತ್ವವನ್ನು
ಕಟ್ಟಿಕೊಡಲಾಗಿದೆ. ಇದು ಭೀಮಸೇನ ಜೋಶಿಯವರ ಜನ್ಮಶತಮಾನೋತ್ಸವ ವರ್ಷ. ಆ ಪ್ರಯುಕ್ತ, ಕನ್ನಡನಾಡಿನಲ್ಲಿ ಹುಟ್ಟಿ, ಮಹಾರಾಷ್ಟ್ರದಲ್ಲಿ ನೆಲೆಸಿ, ವಿಶ್ವ ದೆಡೆ ಹಿಂದುಸ್ಥಾನಿ ಸಂಗೀತದ ಕಂಪನ್ನು ಪಸರಿಸಿದ ಒಬ್ಬ ಸಂಗೀತ ದಿಗ್ಗಜನಿಗಾಗಿ ಅರವತ್ತು ಪುಟಗಳನ್ನು ನೀಡಿದುದು ಒಂದು ಅಪರೂಪದ, ಅನುಪಮ ಅಕ್ಷರ ನುಡಿನಮನ. ಈ ನಿಟ್ಟಿನಲ್ಲಿ ಹಾಲಿ ಸಂಪಾದಕರಾದ ಶಾಂತಲಾ ಧರ್ಮರಾಜ್ ಅಭಿನಂದನಾರ್ಹರು.
ಪಾವೆಂ ಕಟ್ಟಿದಂಥ ಪತ್ರಿಕೆಯನ್ನು ನಡೆಸಿಕೊಂಡು ಹೋಗುವುದು ಸಣ್ಣ ವಿಷಯವಲ್ಲ. ಪಾವೆಂ ಅವರು ಪತ್ರಿಕೋದ್ಯಮದ ಒಂದು ಆದರ್ಶ ಪರಂಪರೆಯ ಹರಿ ಕಾರರು. ಅವರು ಪತ್ರಿಕೆಯನ್ನು ಏಕಾಂಗಿಯಾಗಿ ರೂಪಿಸುತ್ತಿದ್ದರು. ಆ ದಿನಗಳಲ್ಲಿ ಯಾರಾದರೂ ವಿದೇಶಗಳಿಂದ ಮರಳಿದ್ದು ಗೊತ್ತಾದರೆ, ಅವರಿಗೆ ಪತ್ರ ಬರೆದು, ಲೇಖನ ಬರೆದುಕೊಡುವಂತೆ ಹೇಳುತ್ತಿದ್ದರು. ವಿದೇಶಗಳ ವಿದ್ಯಮಾನಗಳ ಬಗ್ಗೆ ಯಾರೂ ಬರೆಯಲು ಸಿಗದಿದ್ದರೆ ಸ್ವತಃ ತಾವೇ ಬರೆಯುತ್ತಿದ್ದರು. ಗೂಗಲ್ ಇಲ್ಲದ ಆ ದಿನಗಳಲ್ಲಿ ಅವರು ಮಾಹಿತಿ ಕಲೆ ಹಾಕುತ್ತಿದ್ದ ಪರಿಯೇ ಆಶ್ಚರ್ಯ ಹುಟ್ಟಿಸುವಂಥದ್ದು.
ಪಾವೆಂ ಆಚಾರ್ಯರು ಮೂರು ತಿಂಗಳ ಸಂಚಿಕೆಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿ ಇಟ್ಟಿರುತ್ತಿದ್ದರು. ಬಿಡುವಿನ ವೇಳೆಯಲ್ಲಿ ಸಿದ್ಧಪಡಿಸಿದ ಸಂಚಿಕೆಗಳ ಲೇಖನಗಳನ್ನು ಪದೇ ಪದೆ ಓದಿ, ದೋಷರಹಿತವಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ಯಾವ ಲೇಖಕರೊಂದಿಗೆ ಯಾವ ಲೇಖನ ಬರೆಯಿಸಬಹುದು ಎಂಬುದು ಅವರಿಗೆ ಗೊತ್ತಿತ್ತು. ಅವರು ಒಂದಷ್ಟು ಲೇಖಕರನ್ನು ಸೇರಿಸಿ ಬಳಗ ಕಟ್ಟಲಿಲ್ಲ. ಎಲ್ಲರಿಂದಲೂ ಬರೆಯಿಸಿದರು. ಡೆಡ್ ಲೈನ್ ಮಿತಿಯಲ್ಲಿ ಯಾರೂ ಸಿಗದಿದ್ದಾಗ, ತಾವೇ ಬರೆಯುತ್ತಿದ್ದರು. ತಮ್ಮ ಆಪ್ತ ಸಹೋದ್ಯೋಗಿಯಾದ ಜಿ.ಜಿ.ಹೆಗಡೆ ತಕ್ಷಣದ ನೆರವಿಗೆ ಬರುತ್ತಿದ್ದರು.
ಐವತ್ತು ವರ್ಷಗಳ ಹಿಂದಿನ ಸಂಚಿಕೆ ಸಿಕ್ಕರೂ ಎದೆಗವುಚಿಕೊಂಡು ಈಗಲೂ ಓದಬಹುದು. ಅದು ನಿಜಕ್ಕೂ ಕಾಲಾತೀತ. ಪಾವೆಂ ಅವರಿಗೆ ಎಂಟು ಮಕ್ಕಳಿದ್ದರೂ, ಅವರ ನಿಜವಾದ ಸಂಸಾರ ಮಾತ್ರ ‘ಕಸ್ತೂರಿ’ಯೇ ಆಗಿತ್ತು! ತಮ್ಮ ಜೀವಿತದ ಅತ್ಯಂತ ಮಹತ್ವದ ದಿನಗಳನ್ನು ಅವರು ‘ಕಸ್ತೂರಿ’ಗಾಗಿಯೇ ಧಾರೆಯೆರೆದರು. ಅಕ್ಷರಶಃ ‘ಕಸ್ತೂರಿ’ಯ ಒಂದೊಂದು ಸಂಚಿಕೆಯನ್ನೂ ಕರುಳ ಕುಡಿಯಂತೆ ಬೆಳೆಸಿದರು.
ಐವತ್ತು ವರ್ಷಗಳ ಹಿಂದಿನ ಆ ದಿನಗಳಲ್ಲಿ ಹುಬ್ಬಳ್ಳಿಯಲ್ಲಿದ್ದರೂ ಆಚಾರ್ಯರು ಎಲ್ಲ ವಿಷಯಗಳ ಬಗ್ಗೆಯೂ ಅಪ್ಡೇಟ್ ಆಗಿರುತ್ತಿದ್ದರು. ಅವರ ಮೇಜಿನ ಮೇಲೆ
ಪ್ರಮುಖ ಪತ್ರಿಕೆ ಮತ್ತು ನಿಯತಕಾಲಿಕಗಳಿರುತ್ತಿದ್ದವು. ಧರ್ಮಯುಗ, ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯ, ನವನೀತ್, ಕಾದಂಬಿನಿ, ನ್ಯಾಷನಲ್ ಜಿಯಾಗ್ರಫಿಕ್, ಭವನ್ಸ್ ಜರ್ನಲ್ ಮುಂತಾದ ಪತ್ರಿಕೆಗಳಿರುತ್ತಿದ್ದವು. ಅವುಗಳಲ್ಲಿನ ಉತ್ತಮ ಲೇಖನಗಳನ್ನು ಓದಿ ಅವರೇ ಅನುವಾದ ಮಾಡುತ್ತಿದ್ದರು.
ಆಚಾರ್ಯರ ಜತೆ ಯಾವತ್ತೂ ಕನ್ನಡ-ಕನ್ನಡ, ಇಂಗ್ಲಿಷ್ -ಕನ್ನಡ, ಸಂಸ್ಕೃತ-ಕನ್ನಡ, ಹಿಂದಿ-ಕನ್ನಡ ಪದಕೋಶ ಇರಲೇಬೇಕಿತ್ತು. ಯಾವ ಹೊಸ ಪದವನ್ನು ಕಂಡರೂ ಅವರು ಅದನ್ನು ಅರಗಿಸಿ, ಒಲಿಸಿಕೊಳ್ಳುವ ತನಕ ಬಿಡುತ್ತಿರಲಿಲ್ಲ. ಆಚಾರ್ಯರು ಕಚೇರಿಯಲ್ಲಿದ್ದಾಗ ಸದಾ ಅಧ್ಯಯನ ಮಗ್ನರಾಗಿರುತ್ತಿದ್ದರು. ರಂಗ ನಾಥ ದಿವಾಕರರು ಆಚಾರ್ಯರಿಗೆಂದು ಸೆಕೆಂಡ್ ಹ್ಯಾಂಡ್ ‘ಎನ್ಸೈಕ್ಲೋಪಿಡಿಯಾ ಬ್ರಿಟಾನಿಕಾ’ದ ಮೂವತ್ತು ಸಂಪುಟಗಳನ್ನು ತಂದುಕೊಟ್ಟಿದ್ದರು. ಆಚಾರ್ಯರು ಆ ಮೂವತ್ತು ಪುಸ್ತಕಗಳನ್ನು ಅದೆಷ್ಟು ಬಾರಿ ರೆಫರ್ ಮಾಡಿದ್ದರೆಂದರೆ, ಅದರ ರಟ್ಟು ಸವೆದು, ಕೆಲವು ಹಾಳೆಗಳ ತುದಿ ಸುಕ್ಕುಗಟ್ಟುವಷ್ಟು.
ಆಚಾರ್ಯರಿಗೆ ಪದಗಳ ವ್ಯುತ್ಪತ್ತಿಯಲ್ಲಿ ವಿಶೇಷವಾದ ಕಾಳಜಿ. ಅವರ ‘ಪದಾರ್ಥ ಚಿಂತಾಮಣಿ’ಯೇ ಇದಕ್ಕೆ ಸಾಕ್ಷಿ. ಒಮ್ಮೆ ಆಚಾರ್ಯರಿಗೆ ಉರ್ದು-ಮರಾಠಿ ಪದಕೋಶ ಪ್ರಕಟವಾಗಿದೆಯೆಂದು ತಿಳಿಯಿತು. ಅದನ್ನು ಅವರು ತಮ್ಮ ಮರಾಠಿ ಸ್ನೇಹಿತರಿಂದ ತರಿಸಿಕೊಂಡರು. ಆಚಾರ್ಯರ ಹತ್ತಿರ ಒಂದು ಮರಾಠಿ-ಕನ್ನಡ ಪದಕೋಶವಿತ್ತು. ಅವರಿಗೆ ಉರ್ದುವಿನ ಒಂದು ಪದದ ಅರ್ಥವನ್ನು ಕನ್ನಡದಲ್ಲಿ ತಿಳಿಯಬೇಕೆಂದರೆ, ಆ ಎರಡೂ ಪದಕೋಶಗಳನ್ನು ರೆಫರ್ ಮಾಡುತ್ತಿದ್ದರು.
ಅಷ್ಟಾಗಿಯೂ ಸಮಾಧಾನವಾಗದಿದ್ದರೆ, ತಮಗೆ ಪರಿಚಿತ ಭಾಷಾ ವಿದ್ವಾಂಸರ ಬಳಿ ಕೇಳುತ್ತಿದ್ದರು.
ಆಚಾರ್ಯರ ಈ ಪದ ಗೀಳಿನ ಬಗ್ಗೆ ಹುಬ್ಬಳ್ಳಿ ‘ಸಂಯುಕ್ತ ಕರ್ನಾಟಕ’ ಕಚೇರಿಯಲ್ಲಿ ಕೆಲವರು ತಮಾಷೆ ಮಾಡುತ್ತಿದ್ದರು. ‘ಆಚಾರ್ಯರ ತಲೆಯಲ್ಲಿ ಯಾವುದೋ ಪದ ಸಿಕ್ಕಿಹಾಕಿಕೊಂಡಿರಬೇಕು. ಅದರ ಅರ್ಥವನ್ನು ಹೊರತೆಗೆಯಲು ದಿನವಿಡೀ ಪ್ರಯಾಸ ಪಡುತ್ತಿದ್ದಾರೆ’ ಎಂದು ಆಡಿಕೊಳ್ಳುತ್ತಿದ್ದರು. ಆ ಮಾತಿನಲ್ಲಿ ಅಭಿಮಾನ ಮತ್ತು ಮೆಚ್ಚುಗೆಯೂ ಇರುತ್ತಿತ್ತು. ಹಾಗೆ ಅವರನ್ನು ‘ಸರ್ವಜ್ಞ’ ಎಂದೂ ಅಲ್ಲಿನ ಸುದ್ದಿಮನೆಯಲ್ಲಿ ಕರೆಯುತ್ತಿದ್ದರು. ಆ ಮಾತಿನಲ್ಲೂ ಕುಹಕ, ಹೊಟ್ಟೆಕಿಚ್ಚು ಮತ್ತು
ಪ್ರಶಂಸೆ ಎಲ್ಲವೂ ಅಡಕವಾಗಿರುತ್ತಿತ್ತು. ಆಚಾರ್ಯರಿಗೆ ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲಿಷ್, ಉರ್ದು, ಮರಾಠಿ ಭಾಷೆಗಳು ಗೊತ್ತಿದ್ದವು.
ಹಿಂದಿಯಲ್ಲಿ ಲೇಖನ ಬರೆಯುವಷ್ಟು ಮತ್ತು ಕವನ ರಚಿಸುವಷ್ಟು ಅವರಿಗೆ ಆ ಭಾಷೆಯ ಮೇಲೆ ಹಿಡಿತವಿತ್ತು. ಅರವತ್ತಾರು ವರ್ಷಗಳ ಹಿಂದೆ, ಇಂಗ್ಲಿಷಿನ ‘ರೀಡರ್ಸ್
ಡೈಜೆಸ್ಟ್’ಗೆ ಪ್ರತಿರೂಪವಾಗಿ ಕನ್ನಡದಲ್ಲಿ ‘ಕಸ್ತೂರಿ’ಯಂಥ ಪತ್ರಿಕೆಯನ್ನು ರೂಪಿಸಿದ ಪಾವೆಂ ಆಚಾರ್ಯರ ಪ್ರಯೋಗ ವಿನೂತನವಾದುದು. ಅವರು ಅಂದು ಆರಂಭಿಸಿದ ‘ಕಸ್ತೂರಿ’, ಇಂದಿಗೂ ಜನಮಾನಸದ ಪ್ರೀತಿಗೆ ಪಾತ್ರವಾಗಿದೆ ಮತ್ತು ತನ್ನ ಘನತೆ-ಗೌರವವನ್ನು ಉಳಿಸಿಕೊಂಡಿದೆ.
ನಾನು ಇದನ್ನು ಬರೆದು ಮುಗಿಸಿದಾಗ, ಪಾವೆಂ ಆಚಾರ್ಯರ ಮೊಮ್ಮಗಳಾದ ಛಾಯ ಕೆ.ಉಪಾಧ್ಯ ಅವರ ನೆನಪಾಯಿತು. ಅವರನ್ನು ಸಂಪರ್ಕಿಸಿದೆ. ಅವರ ಜತೆ ಮಾತಾಡದೇ ಬಹಳ ದಿನಗಳೇ ಆಗಿದ್ದವು. ಅವರ ಬಾಯಲ್ಲಿ ಪಾವೆಂ ಬಗ್ಗೆ ಕೇಳುವುದು ಯಾವತ್ತೂ ಖುಷಿ ಕೊಡುವ ಸಂಗತಿ. ಪಾವೆಂ ಕೃತಿಗಳನ್ನು ಮತ್ತು
‘ಕಸ್ತೂರಿ’ ಪತ್ರಿಕೆಯನ್ನು ಸಂಗ್ರಹಿಸುವ, ಸಂಸ್ಕರಿಸುವ ಮತ್ತು ಅವುಗಳನ್ನು ಮುಂದಿನ ಜನಾಂಗಕ್ಕೆ ಕೊಡುವ ಪವಿತ್ರ ಕಾರ್ಯದಲ್ಲಿ ಅವರು ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಅವರು ಅಜ್ಜನ ಬಗ್ಗೆ ತಮ್ಮ ನೆನಪಿನ ಬುತ್ತಿ ಬಿಚ್ಚಿ ಮಾತಾಡಿದರು.
ಕೊನೆಯಲ್ಲಿ ಒಂದು ಮಾತನ್ನು ಹೇಳಿದರು – ‘ನೀವು ಒಳ್ಳೆಯ ದಿನ ನಮ್ಮಜ್ಜನನ್ನು ನೆನಪಿಸಿಕೊಂಡು ಫೋನ್ ಮಾಡಿದಿರಿ. ನಾಳೆ (ಫೆಬ್ರವರಿ 6) ಅವರ ಜನ್ಮದಿನ. ಅಜ್ಜ ಬದುಕಿದ್ದಿದ್ದರೆ ಅವರಿಗೆ 107 ವರ್ಷಗಳಾಗುತ್ತಿತ್ತು.’ ಪಾವೆಂ ನಮ್ಮನ್ನು ಅಗಲಿಯೇ ಮೂವತ್ತು ವರ್ಷಗಳಾದವು. ಆದರೆ ಇಂದಿಗೂ ನನ್ನಂಥವರಿಗೆ ಅವರು ಪ್ರಾತಃಸ್ಮರಣೀಯರೇ ! ಅವರು ಕನ್ನಡ ಪತ್ರಿಕೋದ್ಯಮದ ಆಚಾರ್ಯರೇ!
ಪರಿಪೂರ್ಣತೆಗೊಂದು ನೆಪ!
ನನಗೆ ಎಲ್ಲ ಬಿಳಿ ಕಾಗದದ ಮೇಲೆ ಬರೆಯಲು ಬರುವುದಿಲ್ಲ. ಬಿಳಿ ಕಾಗದದಲ್ಲೂ ಒಂದು ವರ್ಗವಿದೆ. ಕರೆನ್ಸಿ ನೋಟನ್ನು ಬೆಳಕಿಗೆ ಹಿಡಿದರೆ, ಬರಿಗಣ್ಣಿಗೆ ಅಗೋಚರವಾದ ಒಂದು ಗೆರೆ ಕಾಣುತ್ತದಲ್ಲ, ಹಾಗೆಯೇ ಪ್ರತಿ ಕಾಗದಕ್ಕೂ ಇಂಥದೇ ಕಣ್ಣಿಗೆ ಕಾಣದ ಎಳೆಗಳಿರುತ್ತವೆ. ಈ ಎಳೆಗಳು ಅಡ್ಡವಾಗಿರಬೇಕು. ಆಗ
ಬರೆಯಲು ಸುಲಭವಾಗಿರುತ್ತವೆ. ಅಕ್ಷರಗಳು ನೀವು ಹೇಳಿದಂತೆ ಸುಲಲಿತವಾಗಿ ಓಡುತ್ತ ಮೂಡುತ್ತವೆ. ಅದೇ ಈ ಎಳೆಗಳು ಹಾಳೆಗಳಿಗೆ ಉದ್ದವಾಗಿದ್ದರೆ (vertical) ಅಕ್ಷರ ನೀವು ಅಂದುಕೊಂಡ ಹಾಗೆ ಮೂಡುವುದಿಲ್ಲ.
ಕಾಗದಲ್ಲಿರುವ ಈ ಅಗೋಚರ ಎಳೆಗಳು ನಮ್ಮ ಹಸ್ತಾಕ್ಷರಗಳಿಗೆ ಒಂದು base ಕಟ್ಟಿಕೊಡುತ್ತದೆ. ಹೀಗಾಗಿ ಕಾಗದಗಳನ್ನು ಖರೀದಿಸುವಾಗ, ಈ ಎಳೆಗಳು ಉದ್ದವಾಗಿಯೋ, ಅಡ್ಡವಾಗಿವೆಯೋ ಎಂಬುದನ್ನು ಪಕ್ಕಾ ಮಾಡಿಕೊಳ್ಳಬೇಕು. ಒಮ್ಮೆ ಈ ಹದ ಸಿಕ್ಕರೆ, ನಮಗೆ ಅರಿವಿಲ್ಲದಂತೆ, ಕೈಬರಹ ಸರಾಗವಾಗುತ್ತದೆ. ಇದನ್ನು ಸೂಕ್ಷವಾಗಿ ಗಮನಿಸಿದರೆ, ನಿಮಗೆ ಗೊತ್ತಾಗುತ್ತದೆ.
ವಿರಾಟ್ ಕೊಹ್ಲಿ ಗೆ ಎಲ್ಲ ಬ್ಯಾಟುಗಳನ್ನು ಕೊಟ್ಟರೆ, ಆಡಲಾಗುವುದಿಲ್ಲ. ಅವರಿಗೆ ಬ್ಯಾಟಿನೊಂದಿಗೆ ಒಂದು ಹಿಡಿತ ಏರ್ಪಟ್ಟಿರುತ್ತದೆ. ಆ ಬ್ಯಾಟಿನೊಂದಿಗೆ ಮಾತ್ರ ಅವರಿಗೆ comfort ಏರ್ಪಟ್ಟಿರುತ್ತದೆ. ಹೀಗಾಗಿ ಪ್ರತಿ ಆಟಗಾರರು ತಮ್ಮ ಬ್ಯಾಟಿನೊಂದಿಗೆ ಮಾತ್ರಆಡುವುದನ್ನು ಗಮನಿಸಿರಬಹುದು. ಒಂದೇ ಇನ್ನಿಂಗ್ಸ್‌ನಲ್ಲಿ ಕೆಲವು ಸಲ ಬ್ಯಾಟ್ ಬದಲಿಸುವುದನ್ನು ನೋಡಿರಬಹುದು. ಕ್ರಿಸ್ ಗೇಯ್ಲ ಬ್ಯಾಟ್ ಹಿಡಿದು ಆಡು ಅಂದರೆ ರಿಷಬ್ ಪಂತ್‌ಗೆ ಆಗಲಿಕ್ಕಿಲ್ಲ. ತಮ್ಮ ಬ್ಯಾಟಿನೊಂದಿಗೆ
ಪ್ರತಿ ಆಟಗಾರನಿಗೂ ಒಂದು ಬಂಧ ಏರ್ಪಟ್ಟಿರುತ್ತದೆ.
ಟೇಲರ್ ವಿಷಯದಲ್ಲೂ ಅನೇಕರದು ಇದೇ ಅಭಿಪ್ರಾಯ. ನಾವು ಧರಿಸುವ ಬಟ್ಟೆಯನ್ನು ನಮಗೆ ಇಷ್ಟದ ಟೇಲರ್‌ನಿಂದ ಹೋಲಿಸಿ, ಧರಿಸಿದರೇ ಸಮಾಧಾನ. ಡಾ.ಕರಣ್ ಸಿಂಗ್ ಕಳೆದ ಐವತ್ತು ವರ್ಷಗಳಿಂದ ದಿಲ್ಲಿಯ ‘ದಿವಾನ್ ಸಾಹೇಬ’ ಎಂಬ ಟೇಲರ್ ಹೊಲಿದ ಉಡುಪುಗಳನ್ನೇ ಧರಿಸುತ್ತಾರಂತೆ. ಬೇರೆ ಯಾರೇ ಹೊಲಿದರೂ ಅವರಿಗೆ ಸಮಾಧಾನವಾಗುವುದಿಲ್ಲವಂತೆ. ಸಿನಿಮಾ ನಟ, ನಟಿಯರೂ ಈ ವಿಷಯದಲ್ಲಿ ಹೀಗೆ. ಅವರೂ ಟೇಲರ್ ಪಕ್ಷಪಾತಿ. ಕೆಲವರಂತೂ ತಮಗೆ ಬೇಕಾದ ಫ್ಯಾಷನ್ ಡಿಸೈನರ್‌ಗಳನ್ನು ಇಟ್ಟುಕೊಂಡಿರುತ್ತಾರೆ. ಕಾರಣ ಇಷ್ಟೇ, ಅವರಿಗೆ ಆ ದಿರಿಸು ಹಾಕಿದಾಗ ಕಂಫರ್ಟ್ ಅನಿಸುತ್ತದೆ.
ಕೆಲವರು ಅರವತ್ತು-ವರ್ಷಗಳಿಂದ ಒಂದೇ ಬ್ರಾಂಡಿನ ಕನ್ನಡಕ, ಬೆಲ್ಟ್, ಶೂ, ವಾಚ್, ಪೆನ್ನುಗಳನ್ನು ಬಳಸುವುದು ಈ ಕಾರಣಕ್ಕೆ. ಜಗತ್ಪ್ರಸಿದ್ಧ ಪೇಂಟರ್ (ಚಿತ್ರ ಕಲಾವಿದ) ಪ್ಯಾಬ್ಲೋ ಪಿಕಾಸೋ ಈ ವಿಷಯದಲ್ಲಿ ಮಹಾ ತಿಕ್ಕಲನಾಗಿದ್ದನಂತೆ. ಫ್ಯಾನ್ಸಿನಲ್ಲಿ ಆತನಿಗೆ ಕ್ಯಾನ್ವಾಸ್ಸುಗಳನ್ನು ಸರಬರಾಜು ಮಾಡುವ ಒಂದು
ಅಂಗಡಿಯಿತ್ತು. ಆತ ಪಿಕಾಸೋಗಾಗಿ ವಿಶೇಷ ಕ್ಯಾನ್ವಾಸುಗಳನ್ನು ಮಾಡಿ ಕಳುಹಿಸುತ್ತಿದ್ದ. ಒಮ್ಮೆ ಕ್ಯಾನ್ವಾಸ್ ಅಂಗಡಿಯವ ಕಾಯಿಲೆ ಬಿದ್ದಾಗ, ಸುಮಾರು ಆರು ತಿಂಗಳ ತನಕ ಪಿಕಾಸೋ ಚಡಪಡಿಸಿದ್ದ. ಒಂದು ವೇಳೆ ತನಗೆ ಕ್ಯಾನ್ವಾಸ್ ಪೂರೈಸುವವ ಸತ್ತೇ ಹೋದರೆ, ಮುಂದೆ ಪೇಂಟಿಂಗ್ ಮಾಡುವುದು ಹೇಗೆ ಎಂದು ಪಿಕಾಸೋ ಚಿಂತಿಸುತ್ತಿದ್ದನಂತೆ. ಅದೃಷ್ಟವಶಾತ್ ಆತ ಚೇತರಿಸಿಕೊಂಡ. ಪಿಕಾಸೋ ನಿಟ್ಟುಸಿರುಬಿಟ್ಟ.
ಇವೆಲ್ಲ ಹೆಚ್ಚುಗಾರಿಕೆಯಲ್ಲ. ಇದೂ ಒಂದು ರೀತಿಯ ಮಾನಸಿಕ. ತಮ್ಮ ಕೆಲಸದಲ್ಲಿ ಪರಿಪೂರ್ಣತೆ ತಂದುಕೊಳ್ಳಲು ಬಯಸುವವರುಕೊಂಡುಕೊಳ್ಳುವ ಒಂದು ನೆಪ. ಒಂದು ವೇಳೆ ಆ ಕ್ಯಾನ್ವಾಸ್ ಬಟ್ಟೆಗಳನ್ನು ಪೂರೈಸುತ್ತಿದ್ದ ವ್ಯಾಪಾರೀ ಸತ್ತೇ ಹೋಗಿದ್ದರೆ, ಪಿಕಾಸೋ ಚಿತ್ರ ಬಿಡಿಸುವುದನ್ನು ನಿಲ್ಲಿಸಿಬಿಡುತ್ತಿದ್ದನಾ? ಸಾಧ್ಯವೇ ಇಲ್ಲ. ಇಂಥ ನೆಪಗಳು ಇರಬೇಕು. ಇದು ನಮ್ಮಂದು ಶಿಸ್ತು, ಮಾನಸಿಕ ಹದವನ್ನು ರೂಪಿಸುತ್ತವೆ.
ದುರ್ಲಭಜೀ ಸಲಹೆ-ಪರಿಣಾಮ
ಕೆಲ ದಿನಗಳ ಹಿಂದೆ, ನನಗೆ ಈ ಪ್ರಸಂಗವನ್ನು ಹೇಳಿದವರು ಯೋಗಿ ದುರ್ಲಭಜೀ. ಒಮ್ಮೆ ಅವರು ತಮ್ಮ ಸ್ನೇಹಿತನಿಗೆ, ‘ನೀನು ಕುಡಿಯುವ ಚಟವನ್ನು ಬಿಡ ಬೇಕೆಂದರೆ ಯೋಗಾಸನ ಮಾಡು. ಆರು ತಿಂಗಳಲ್ಲಿ ಆ ದುರಭ್ಯಾಸವನ್ನು ನೀನು ನಿಲ್ಲಿಸದಿದ್ದರೆ ಕೇಳು’ ಎಂದು ಹೇಳಿದರಂತೆ.
ಯೋಗಿ ಮಾತುಗಳನ್ನು ಕೇಳಿದ ಆತ, ‘ಆಯಿತು ಪ್ರಯತ್ನಿಸುತ್ತೇನೆ’ ಎಂದು ತೀರ್ಮಾನಿಸಿದನಂತೆ. ಆರು ತಿಂಗಳಾದರೂ ಆಸಾಮಿಯ ಪತ್ತೆಯೇ ಇಲ್ಲ. ನಂತರ ಒಂದು ದಿನ ಯೋಗಿಯವರಿದ್ದಲ್ಲಿ ಆತ ಬಂದನಂತೆ. ‘ಯೋಗೀಜೀ, ನಾನು ಈಗ ಯೋಗ ಪ್ರವೀಣನಾಗಿದ್ದೇನೆ. ನೀವು ಯಾವುದೇ ಕಠಿಣ ಆಸನಗಳನ್ನು ಹೇಳಿ ದರೂ ಮಾಡಬ’ ಎಂದು ಗರ್ವದಿಂದ ಹೇಳಿದನಂತೆ.
‘ಅದ್ಸರಿ, ಯೋಗ ಕಲಿತಿದ್ದರಿಂದ ಕುಡಿಯುವ ದುರಭ್ಯಾಸವನ್ನು ಬಿಟ್ಟೆಯಾ ಎಂಬುದನ್ನು ಮೊದಲು ಹೇಳು’ ಎಂದರಂತೆ ಯೋಗೀಜೀ. ಅದಕ್ಕೆ ಆತ ಬೀಗುತ್ತ ನುಡಿದನಂತೆ – ‘ಯೋಗೀಜೀ, ಯೋಗಾಸನದಿಂದ ನನಗೆ ಸಾಕಷ್ಟು ಪ್ರಯೋಜನವಾಗಿದೆ. ನಾನೂ ಈಗ ಬಹಳ ಬದಲಾಗಿದ್ದೇನೆ. ಹೊಸ ಸಾಧನೆ ಮಾಡಿದ್ದೇನೆ ಎಂಬ ಸಂತೃಪ್ತಿಯಿದೆ. ಮೊದಲಾಗಿದ್ದರೆ ಕುಳಿತು ಅಥವಾ ನಿಂತು ಕುಡಿಯುತ್ತಿz. ಈಗ ತಲೆ ಕೆಳಗಾಗಿಯೂ ಕುಡಿಯಬ.’
ಜನಪದದಲ್ಲಿ ಒಗಟು, ದ್ವಂದ್ವ
ನಮ್ಮ ಜನಪದ ಹಾಡುಗಳು ಸಾಹಿತ್ಯದ ಕಣಜ. ಅವುಗಳಲ್ಲಿ ಒಗಟುಗಳಿರುತ್ತಿದ್ದವು. ದ್ವಂದ್ವಾರ್ಥಗಳಿರುತ್ತಿದ್ದವು. ಹಾಸ್ಯವೂ ಅಡಕವಾಗಿರುತ್ತಿದ್ದವು. ನನಗೆ ಇಂದಿಗೂ ಆಶ್ಚರ್ಯವೆನಿಸುವುದೆಂದರೆ, ಅವುಗಳ ಮೂಲ ಲೇಖಕರು ಯಾರು ಎಂಬುದು ಗೊತ್ತಿಲ್ಲದಿರುವುದು. ಪತ್ರಿಕೆಗಳಲ್ಲಿ ವರದಿ ಬರೆದಾಗ, ವರದಿಗಾರರು ಬೈಲೈನ್ (ವರದಿಗಾರರ ಹೆಸರು) ಕೊಡಿ ಎಂದು ಆಗ್ರಹಿಸುತ್ತಾರೆ. ಆದರೆ ಜನಪದ ಹಾಡುಗಳನ್ನು ಬರೆದವರು ಹೆಸರಿಗಾಗಿ ಬರೆದವರಲ್ಲ. ಅವರು ತಮ್ಮ ಖುಷಿಗಾಗಿ, ಬೇರೆಯವರನ್ನು ಖುಷಿಪಡಿಸಲು ಬರೆಯುತ್ತಿದ್ದರು.
ಇನ್ನು ಕೆಲವರಿಗೆ ಬರೆಯಲು ಬರುತ್ತಿರಲಿಲ್ಲ. ಅಂಥ ಹಾಡುಗಳೆಲ್ಲ ಬಾಯಿಂದ ಬಾಯಿಗೆ ವರ್ಗವಾಗಿ, ಇಂದಿಗೂ ಸಾಗಿ ಬಂದಿವೆ. ಅಂಥ ಒಂದು ಒಗಟಿನ, ದ್ವಂದ್ವಾರ್ಥದ ಕೆಲ ಸಾಲನ್ನು ಗಮನಿಸಿ.
ಒಬ್ಬಳು : ಒಬ್ಬನನ್ನು ಕಟ್ಟಿದ್ದೆ, ಒಬ್ಬನನ್ನು ಬಿಟ್ಟಿದ್ದೆ ಒಬ್ಬನನ್ನು ಕರಕೊಂಡು ಒಳಗೋದೆ ಮತ್ತೊಬ್ಬಳು : ಯಾರನ್ನು ಕಟ್ಟಿದ್ದೆ ? ಯಾರನ್ನು ಬಿಟ್ಟಿದ್ದೆ? ಯಾರನ್ನು ಕರಕೊಂಡು ಒಳಗೋದೆ ?
ಒಬ್ಬಳು : ದನವನ್ನು ಕಟ್ಟಿದ್ದೆ, ಕರುವನ್ನು ಬಿಟ್ಟಿದ್ದೆ ಹಾಲನ್ನು ಕರಕೊಂಡು ಒಳಗೋದೆ ಹಾಗೆ ಮತ್ತೊಂದು.
ಒಬ್ಬಳು : ಒಬ್ಬನನ್ನು ಹಾಸಿದ್ದೆ, ಒಬ್ಬನನ್ನು ಹೊದ್ದಿದ್ದೆ, ಒಬ್ಬನ ಮೇಲೆ ಮಲಗಿದ್ದೆ
ಮತ್ತೊಬ್ಬಳು : ಯಾವನನ್ನು ಹಾಸಿz ? ಯಾವನನ್ನು ಹೊದ್ದಿದ್ದೆ?
ಯಾವನ ಮೇಲೆ ಮಲಗಿದ್ದೆ?
ಒಬ್ಬಳು : ಹಾಸಿಗೆಯ ಹಾಸಿದ್ದೆ, ಕಂಬಳಿಯ ಹೊದ್ದಿದ್ದೆ, ತಲೆದಿಂಬ ಮೇಲೆ ಮಲಗಿದ್ದೆ
ಸಂಪಾದಕರ ಔದಾರ್ಯ
‘ಟೈಮ್ಸ ಆ- ಇಂಡಿಯಾ’ ಪತ್ರಿಕೆ ಸಂಪಾದಕರಾಗಿದ್ದ ಸರ್ ಫ್ರಾನ್ಸಿಸ್ ಲೋವ್ ನಿಧನರಾದಾಗ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ಸಂಪಾದಕ ಫ್ರಾಂಕ್ ಮೊರೇಸ್ ಬರೆದ ಪತ್ರವನ್ನು ‘ಟೈಮ್ಸ್ ಆಫ್ ಇಂಡಿಯಾ’ ಪ್ರಕಟಿಸಿತ್ತು.
ಸಾಮಾನ್ಯವಾಗಿ ಒಂದು ಪತ್ರಿಕೆ ಸಂಪಾದಕರಾದವರು ಮತ್ತೊಂದು ಪತ್ರಿಕೆಗೆ ಬರೆಯುವುದಿಲ್ಲ. ಅದರಲ್ಲೂ ‘ಓದುಗರ ಪತ್ರ ವಿಭಾಗ’ಕ್ಕಂತೂ ಬರೆಯುವುದಿಲ್ಲ. ಬೇರೆ ಪತ್ರಿಕೆ ಸಂಪಾದಕರ ಲೇಖನವನ್ನು ಯಾರೂ ಪ್ರಕಟಿಸುವುದೂ ಇಲ್ಲ. ಆದರೆ ಫ್ರಾಂಕ್ ಮೊರೇಸ್ ತಮ್ಮೆಲ್ಲ ಬಿಂಕ-ಬಡಿವಾರ ಬಿಟ್ಟು ಲೋವ್ ಬಗ್ಗೆ ಬರೆದಿದ್ದರು. ಮೊರೇಸ್ ತಮ್ಮ ಸ್ನೇಹಿತನ ಬಗ್ಗೆ ಬರೆದ ಲೇಖನವನ್ನು ಅಷ್ಟೇ ಮುಕ್ತ ಭಾವದಿಂದ ‘ಟೈಮ್ಸ್’ ಪ್ರಕಟಿಸಿತ್ತು. ಈ ದಿನಗಳಲ್ಲಿ ಇಂಥ ‘ದುಸ್ಸಾಹಸ’ವನ್ನು ಯಾರೂ ಮಾಡಲಾರರು. ಯಾವ ಸಂಪಾದಕನೂ ಬೇರೆ ಪತ್ರಿಕೆಗೆ ಬರೆಯುವ ಮತ್ತು ಬೇರೆ ಪತ್ರಿಕೆಯವರು ಅದನ್ನು ಪ್ರಕಟಿಸುವ ಹೃದಯ ಶ್ರೀಮಂತಿಕೆಯನ್ನು ತೋರಲಾರರು.