Sunday, 15th December 2024

ಪೇಜಾವರ ಶ್ರೀಗಳ ಟೀಕೆ: ಹಂಸಲೇಖರ ಎಲುಬಿಲ್ಲದ ನಾಲಗೆಯ ವಿಕೃತ ಪ್ರಾಸ

ಅಭಿಮತ

ಎಸ್.ಸುರೇಶ್ ಕುಮಾರ್‌,

ಮಾಜಿ ಸಚಿವರು, ರಾಜಾಜಿನಗರದ ಶಾಸಕರು

ಸಿನಿಮಾ ಹಾಡಿನಲ್ಲಿ ಸ್ವರಪೋಣಿಸಿ ಪ್ರಾಸ ಹಾಕಿದರೆ ಮಾತ್ರ ಸಮಾಜದಲ್ಲಿ ಪರಿವರ್ತನೆಯಾಗಿಬಿಡುತ್ತದೆ, ನಾವು ಹೇಗೆ ಬೇಕಾದರೂ ಬದುಕಬಹುದು
ಎಂದುಕೊಂಡು ಬಿಟ್ಟರೆ ಭರವಸೆ, ವಿಶ್ವಾಸಗಳಿಗೆ ಬೆಲೆ ಎಲ್ಲಿ? ಇನ್ನು ಅಂತರಂಗದ ಶುದ್ಧಿ, ಬಹಿರಂಗದ ಶುದ್ಧಿಗಳು ದುಬಾರಿಯೇ ಸರಿ.

ಯತಿಗಳ ಆಹಾರ ಕ್ರಮವನ್ನು (ಅಪ) ಹಾಸ್ಯಮಯವಾಗಿ ಉದಾಹರಿಸಿ, ಅಧ್ಯಾತ್ಮಕ್ರಮವನ್ನು ಹಂಗಿಸಿದ ಹಂಸಲೇಖ ಅವರ ಚುಚ್ಚು ಮಾತುಗಳಲ್ಲಿ ನನಗೆ ನಗು ಕಾಣಲಿಲ್ಲ. ಬದಲಿಗೆ ಅಲ್ಲಿ ಒಂದು ಹತಾಶೆಯಿತ್ತು. ಆದರೆ ಅದು ಸಮಾಜಮುಖಿಯಾದ ಹತಾಶೆ ಆಗಿರಲಿಲ್ಲ.

ಎದುರಿರುವ ಜನ ಚಪ್ಪಾಳೆ ತಟ್ಟುತ್ತಾರೆ, ಶಿಳ್ಳೆ ಹಾಕುತ್ತಾರೆ, ನಗಿಸಬೇಕು, ಹಾಗೆ ನಗಿಸಲು ಎಷ್ಟು ವಿಕೃತಿ ತೋರಿದರೂ ಪರವಾಗಿಲ್ಲ ಎಂಬ ಮನಸ್ಥಿತಿ ಅಲ್ಲಿ ಎದ್ದು ಕಂಡಿತು. ಅವರ ನಗುವಿನಲ್ಲಿ ಕಂಡುಬಂದ ಅವರ ಮನಸ್ಸಿನ ಕಹಿ, ಅವರ ಸಾಹಿತ್ಯ ಕೃಷಿಯೆಲ್ಲವನ್ನೂ ಸಂಶಯಿಸುವ ಹಾಗೆ ಮಾಡಿತು. ಎಲ್ಲವನ್ನೂ ಕಕ್ಕಿದ ಮೇಲೆ ಕೆಲವೊಂದು ಮಾತು ವೇದಿಕೆಗಲ್ಲ ಎಂದು ಹೇಳುತ್ತಲೂ ಕ್ಷಮೆ ಕೇಳಬಹುದು ಎಂಬ ಅವರ ಮಾತು, ನಂತರ ‘ನನ್ನ ಹೆಂಡತಿಗೂ ಬೇಜರಾಗಿದೆ ಹಾಗಾಗಿ ಕ್ಷಮೆ’ಯೆನ್ನುವ ಅವರ ಅಪಸ್ವರ, ಇಷ್ಟು ವರ್ಷಗಳ ಅವರ ಸಾಧನೆಯೆಲ್ಲವೂ ಯಾವ ಸಂಪಾದನೆಗಾಗಿ ಎನ್ನುವ ಸಂದೇಹವನ್ನು ಸಹ ಸೃಷ್ಟಿಸಿತು.

ಸಂದರ್ಭ ಪ್ರಜ್ಞೆ, ಸಭಾ ಪ್ರಜ್ಞೆ ಎಲ್ಲವನ್ನೂ ಕಳೆದುಕೊಂಡು ಸೂಕ್ಷ್ಮತೆ ಮರೆತು ಮಾತನಾಡಿದ ಪ್ರಾಸಬುದ್ಧಿ ಜೀವಿ ಹಂಸಲೇಖರವರಿಗೆ ಎದುರಿಗೆ ಚಪ್ಪಾಳೆ ತಟ್ಟುವ ಜನರಿಗಿಂತ, ತನ್ನ ಚುಚ್ಚು ಮಾತುಗಳಿಂದ ಘಾಸಿಯಾಗುವ ಅಪಾರ ಸಂಖ್ಯೆಯ ಜನರ ಭಾವನೆ ಕೂಡ ಮುಖ್ಯವೆನ್ನುವುದು ಏಕೆ ಅರ್ಥವಾಗಲಿಲ್ಲವೆನ್ನುವುದು ನನ್ನನ್ನು ಕಾಡಿದ ಪ್ರಶ್ನೆ. ಪೇಜಾವರ ಮಠಾಧೀಶರಾಗಿದ್ದ ವಿಶ್ವೇಶತೀರ್ಥ ಶ್ರೀಪಾದರು 60ರ ದಶಕದಲ್ಲಿಯೇ ದಲಿತರ ಗಲ್ಲಿಗಳಲ್ಲಿ ಶೌಚವನ್ನು ಸ್ವಚ್ಛಗೊಳಿಸಿ ಒಂದು ಸಾಂಕೇತಿಕೆಯ ಪರಕಾಯ ಪ್ರವೇಶ ಮಾಡಿದ್ದರು.

ಅಸ್ಪೃಶ್ಯತೆ ಅಪರಾಧವಲ್ಲದಿದ್ದರೆ ಬೇರೆ ಯಾವುದೂ ಸಹ ಅಪರಾಧವಲ್ಲ ಎಂಬ ಘೋಷಣೆಗೆ ಸಾಕ್ಷಿಯಾಗಿದ್ದರು. ದಲಿತರಿಗೆ ದೀಕ್ಷೆ ನೀಡಿ ಒಂದು ಪರಂಪರೆಯನ್ನು ಹುಟ್ಟುಹಾಕಿದ್ದರು. ಗಾಂಧೀಜಿಯವರ ಪ್ರಭಾವದಿಂದ ಅವರು ಮಠಾಧೀಶರಾದ ಮೊದಲ ದಿನಗಳಲ್ಲಿಯೇ ಮಠದಲ್ಲಿ ಸ್ವಾಮಿಗಳಿಗೆ ತಯಾರಿಸುವ ಪ್ರತ್ಯೇಕ ಅಡುಗೆ ವ್ಯವಸ್ಥೆಯನ್ನು ರದ್ದುಗೊಳಿಸಿ, ಎಲ್ಲರಿಗೂ ಬಡಿಸುವ ಅಡುಗೆಯನ್ನೇ ಉಣ್ಣಲು ಆರಂಭಿಸಿದರು. ಜೀವನಪೂರ್ತಿ ಎರಡು ಹಿಡಿ ಆಹಾರದ ಹೊರತು ಹೊಟ್ಟೆ ತುಂಬಾ ಅವರು ಉಣ್ಣಲೇ ಇಲ್ಲ. ವೈಭವದ ಉತ್ತುಂಗದಲ್ಲಿಯೂ ಅವರು ಸರಳತೆ ಯನ್ನು ತೊರೆಯಲೇ ಇಲ್ಲ. ಬಹಳ ಮುಖ್ಯವಾಗಿ ಎಂದಿಗೂ ಯತಿಧರ್ಮದೊಂದಿಗೆ ಅವರು ರಾಜಿ ಮಾಡಿಕೊಳ್ಳಲಿಲ್ಲ.

ಅಂತರಂಗ-ಬಹಿರಂಗಕ್ಕೆ ವ್ಯತ್ಯಾಸ ಕಾಣಲಿಲ್ಲ. ಸನಿಹದ ವಿರೋಧವನ್ನೂ ಲೆಕ್ಕಿಸದೇ, ಗಾಂಧಿ ತತ್ವಗಳನ್ನು ಅಳವಡಿಸಿಕೊಂಡು ಬಾಳಿದವರು ವಿಶ್ವೇಶತೀರ್ಥ
ಶ್ರೀಪಾದರು. ಅವರು ರಂಜಾನ್ ಆಚರಣೆಯನ್ನು ಸಹ ಉಡುಪಿಯ ರಾಜಾಂಗಣದಲ್ಲಿ ನಡೆಸಿದ್ದು, ಉಖಾರ್ಹ. ಈ ಸಾಂಕೇತಿಕತೆಗಳು ಒಂದು ಪ್ರಾಮಾಣಿಕತೆ ಯಾಗಿ, ಒಂದು ನಿಷ್ಕ್ಮಲ್ಮಷತೆಯಾಗಿ ನಮ್ಮನ್ನು ಕಾಡಬೇಕಿದೆ. ಮಹಾತ್ಮ ಗಾಂಧಿ ದಲಿತರನ್ನು ಹರಿಜನರೆಂದರು. ಅಲ್ಲಿನ ಆಶಯವನ್ನು ಅದರ ಸಾಂಕೇತಿಕತೆಯ ಮೂಲಕವೇ ನಾವು ಗಮನಿಸಬೇಕು.

ಅಂಬೇಡ್ಕರ್, 1927ರಲ್ಲಿ ಕೈಗೊಂಡ ಮರ್ಹ ಸತ್ಯಾಗ್ರಹದಲ್ಲಿ ಕೊಳದ ನೀರನ್ನು ಕುಡಿದಾಗ ಹೊರಟ ಸಾಮಾಜಿಕ ಸಂದೇಶವೊಂದರ ತಾತ್ವಿಕತೆಯನ್ನು
ನಾವು ಅರ್ಥೈಸಿಕೊಳ್ಳಬೇಕು. ಆಗ ನಮಗೆ ಪೇಜಾವರರ ಉದ್ದೇಶ, ಅವರ ರಾಜಕೀಯೇತರವಾದ ಕಾಳಜಿಯ ಬಗ್ಗೆ ಅರ್ಥವಾಗುತ್ತದೆ. ಸಿನಿಮಾ ಹಾಡಿನಲ್ಲಿ ಸ್ವರಪೋಣಿಸಿ ಪ್ರಾಸ ಹಾಕಿದರೆ ಮಾತ್ರ ಸಮಾಜದಲ್ಲಿ ಪರಿವರ್ತನೆಯಾಗಿ ಬಿಡುತ್ತದೆ, ನಾವು ಹೇಗೆ ಬೇಕಾದರೂ ಬದುಕಬಹುದು ಎಂದುಕೊಂಡು ಬಿಟ್ಟರೆ ಭರವಸೆ, ವಿಶ್ವಾಸಗಳಿಗೆ ಬೆಲೆ ಎಲ್ಲಿ? ಸುಧಾರಣೆಯ ಉದ್ದೇಶದಿಂದ ಟೀಕಿಸುವಾಗ ಒಂದು ಕಾಳಜಿಯಿರುತ್ತದೆ.

ಪ್ರತಿಯೊಬ್ಬ ಜನಪ್ರಿಯ ವ್ಯಕ್ತಿಯೂ ಈ ಕಾಳಜಿಯ ಕುರಿತಾದ ವಿಶೇಷ ಶ್ರಮವನ್ನು ವಹಿಸಲೇಬೇಕಾಗುತ್ತದೆ. ಕೇವಲ ತನ್ನ ಬುದ್ಧಿಮತ್ತೆ, ತನ್ನ ಸೃಜನಶೀಲತೆ ತನಗೆ ಸಮಾಜ ಸುಧಾರಕನ ಪಟ್ಟ ನೀಡಿದೆ ಎಂದು ಭ್ರಮೆಗೆ ಒಳಗಾಗಿ, ಎಲುಬಿಲ್ಲದ ನಾಲಗೆಯನ್ನು ಹರಿದು ಬಿಟ್ಟರೆ ಒಂದು ಭರವಸೆಯ ನಾಶ ಸಹಜ.
ಪುನೀತ್ ರಾಜಕುಮಾರ್ ನಮ್ಮನ್ನು ಅಗಲಿ ಕೆಲವು ದಿನಗಳು ಕಳೆದಿವೆ. ಅವರ ಹೃದಯ ವೈಶಾಲ್ಯದ ಹಲವು ಉದಾಹರಣೆಗಳು ಇಡೀ ಸಮಾಜವನ್ನು ಪ್ರಭಾವಿಸುತ್ತಿವೆ. ಎಷ್ಟೋ ಜನ ಅವರಲ್ಲಿದ್ದ ಭವ್ಯ ವ್ಯಕ್ತಿತ್ವಕ್ಕೆ ಸೋತು ಹೋಗಿದ್ದಾರೆ. ರಾಜಕುಮಾರ್ ಅವರಂತೆಯೇ ಪುನೀತ್ ಸಹ, ಎಂದೂ ಬೇರೆಯವರನ್ನು ಹಂಗಿಸಲಿಲ್ಲ. ಕೀಳಾಗಿ, ದ್ವೇಷದ ಮನೋಭಾವದಿಂದ ಕಾಣಲಿಲ್ಲ. ಬಸವಣ್ಣ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಎಂದದ್ದು ಅದನ್ನೇ.

ಅಲ್ಲಿ ಹುಟ್ಟಿದ್ದು, ಬೆಳೆದದ್ದು ಒಂದು ಭವ್ಯವಾದ ಪರಂಪರೆ. ಪುನೀತ್ ನಮ್ಮನ್ನಗಲಿದ ಕೆಲವೇ ದಿನಗಳಲ್ಲಿ, ಈ ಪ್ರಬುದ್ಧಿಜೀವಿಗಳು ತಮಗೂ ಜಗತ್ತಿಗೂ ಯಾವುದೇ
ಸಂಬಂಧವಿಲ್ಲದ ರೀತಿಯಲ್ಲಿ ತನ್ನನ್ನು ಬಣ್ಣಿಸಿಕೊಳ್ಳಲು, ಇದಿರ ಹಳಿಯಲು ಬೇಕೆಂಬ ಸಿದ್ಧಾಂತಕ್ಕೆ ಮಾರುಹೋಗಿದ್ದಾರೆ. ಇನ್ನು ಅಂತರಂಗದ ಶುದ್ಧಿ,
ಬಹಿರಂಗದ ಶುದ್ಧಿಗಳು ದುಬಾರಿಯೇ ಸರಿ.

ಸಂಗೀತಕ್ಕೆ ಹೃದಯಗಳನ್ನು ಬೆಸೆಯುವ ಶಕ್ತಿಯಿದೆ. ಸಂಗೀತಗಾರರು ಹಾಗೆ ಬೆಸೆಯುವ ಕೆಲಸ ಮಾಡಬೇಕೇ ಹೊರತು, ಹೃದಯಗಳನ್ನು ಒಡೆಯುವ ಕೆಲಸವಲ್ಲ.  ಹಾಗಾಗಿ, ವಿದ್ವತ್ತಿಗೂ, ಸಂಸ್ಕಾರಕ್ಕೂ ಏನೂ ಸಂಬಂಧವಿಲ್ಲವೆನ್ನುವ ರೀತಿಯಲ್ಲಿ ವರ್ತಿಸಿದ ಹಂಸಲೇಖರ ಮಾತುಗಳನ್ನು ನಾನು ನೋವಿನಿಂದ ತಿರಸ್ಕರಿಸುತ್ತೇನೆ. ಅದೇ ರೀತಿ, ಅವರನ್ನು ತಿದ್ದಿ ತೀಡಲು ಪ್ರಯತ್ನಿಸಿದ ಅವರ ಧರ್ಮಪತ್ನಿಯವರಿಗೆ ನನ್ನ ಅಭಿನಂದನೆಗಳನ್ನು ಸಹ ಸಲ್ಲಿಸುತ್ತೇನೆ.