ಸಂಗತ
ಡಾ.ವಿಜಯ್ ದರಡಾ
ಅವರು ‘ಉಫ್’ ಎಂದರೂ ಸಾಕು ದೊಡ್ಡ ಗದ್ದಲ ಎದ್ದುಬಿಡುತ್ತದೆ, ಆದರೆ ಇವರ ಜೀವ ಹೋದರೂ ಯಾವ ವ್ಯತ್ಯಾಸವೂ ಆಗುವುದಿಲ್ಲ! ಮಹಾ ರಾಷ್ಟ್ರದ ಸರಕಾರಿ ಆಸ್ಪತ್ರೆಗಳಲ್ಲಿ ಇತ್ತೀಚೆಗೆ ಸಂಭವಿಸಿದ ಜನ ಸಾಮಾನ್ಯರ ಸಾವಿನ ಪ್ರಕರಣಗಳನ್ನು ನೆನೆದಾಗ ನನಗೆ ಈ ಸಾಲು ನೆನಪಾಗುತ್ತದೆ. ಯಾರಾದರೊಬ್ಬ ಪ್ರಸಿದ್ಧ ವ್ಯಕ್ತಿ ಅಥವಾ ಪ್ರಭಾವಿ ರಾಜಕಾರಣಿಗೆ ಅನಾರೋಗ್ಯವಾದರೆ ದೇಶದ ತುಂಬಾ ಸುದ್ದಿಯಾಗುತ್ತದೆ. ಅವರು ಯಾವ ಆಸ್ಪತ್ರೆಗೆ ಹೋದರು, ಅಲ್ಲಿ ಎಂತೆಂಥಾ ಸೌಕರ್ಯಗಳಿವೆ ಎಂಬ ಬಗ್ಗೆಯೆಲ್ಲಾ ಚರ್ಚೆಗಳು ನಡೆಯುತ್ತವೆ!
ಆದರೆ ಶ್ರೀಸಾಮಾನ್ಯನೊಬ್ಬ ಯಾವುದೋ ಆಸ್ಪತ್ರೆಯಲ್ಲಿ ಅಬ್ಬೇಪಾರಿಯಂತೆ ಸತ್ತರೆ ಯಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದು ಇನ್ನೊಂದು ಮೃತದೇಹವಷ್ಟೆ. ಇತ್ತೀಚೆಗೆ, ಮಹಾರಾಷ್ಟ್ರದ ಸರಕಾರಿ ಆಸ್ಪತ್ರೆಯಲ್ಲಿ ಸಾವಿನ ಸರಣಿ ಮೊದಲು ವರದಿಯಾಗಿದ್ದು ನಾಂದೇಡ್‌ನ ಶಂಕರ
ರಾವ್ ಚವಾಣ್ ಆಸ್ಪತ್ರೆಯಲ್ಲಿ. ಶಂಕರರಾವ್ ದೇಶದ ಮಾಜಿ ಗೃಹಮಂತ್ರಿ, ಮಹಾರಾಷ್ಟ್ರದ ಮಾಜಿ ವಿತ್ತ ಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿದ್ದವರು. ಅವರ ಹೆಸರಿನ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಾವಿನ ರುದ್ರನರ್ತನದ ಬಳಿಕ ಔರಂಗಾಬಾದ್ (ಛತ್ರಪತಿ ಸಂಭಾಜಿನಗರ) ಸರಕಾರಿ ಆಸ್ಪತ್ರೆಯಲ್ಲಿ ಇನ್ನಷ್ಟು ಸಾವಾದವು. ನಂತರ ನಾಗ್ಪುರದಲ್ಲಿ.
ಕೆಲವೆಡೆ ಅದರ ಬಗ್ಗೆ ಚರ್ಚೆ ನಡೆದರೂ ಈ ಘಟನೆಗಳು ಅಷ್ಟು ದೊಡ್ಡ ಆಕ್ರೋಶವನ್ನು ಹುಟ್ಟುಹಾಕಲಿಲ್ಲ. ಪ್ರತಿವರ್ಷ ದೇಶದ ಸರಕಾರಿ ಆಸ್ಪತ್ರೆಗಳಲ್ಲಿ ಸರಾಸರಿಗಿಂತ ಹೆಚ್ಚು ಸಾವು ಸಂಭವಿಸುತ್ತವೆ. ಕೆಲವೊಮ್ಮೆ ಗಂಭೀರ ಸಾವುಗಳೂ ವರದಿಯಾಗುತ್ತವೆ. ೨೦೨೧ರ ಜನವರಿಯಲ್ಲಿ ಭಂಡಾರಾದ ಸರಕಾರಿ ಆಸ್ಪತ್ರೆಯಲ್ಲಿ ಹತ್ತು ಮಕ್ಕಳು ಬೆಂಕಿ ಆಕಸ್ಮಿಕದಲ್ಲಿ ಸುಟ್ಟು ಕರಕಲಾಗಿದ್ದರು. ಅಂಥ ಘಟನೆ ನಡೆದಾಗಲೆಲ್ಲ ಜನಸಾಮಾನ್ಯರಿಗೆ ನ್ಯಾಯ ದೊರಕಿಸ ಲೆಂದು ‘ಲೋಕಮತ್’ ಪತ್ರಿಕೆ ಆಳವಾದ ತನಿಖಾ ವರದಿಗಳನ್ನು ಪ್ರಕಟಿಸುತ್ತದೆ.
ಆದರೆ, ಇಂಥ ಗಂಭೀರವಾದ ವೈದ್ಯಕೀಯ ನಿರ್ಲಕ್ಷ್ಯ ಹೇಗೆ ಮತ್ತು ಏಕೆ ಸಂಭವಿಸುತ್ತದೆ? ಎಂಬುದಿಲ್ಲಿ ಪ್ರಶ್ನೆ. ಜನರ ಆರೋಗ್ಯದ ವಿಷಯದಲ್ಲಿ ಜನಪ್ರತಿನಿಧಿಗಳು ಸಂವೇದನಾಶೀಲರಾಗಿಲ್ಲ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ಮಹಾರಾಷ್ಟ್ರದ ಸಿಎಂ ಏಕನಾಥ ಶಿಂದೆ, ಡಿಸಿಎಂ ದೇವೇಂದ್ರ ಫಡ್ನವೀಸ್ ಸೂಕ್ಷ್ಮ ಸಂವೇದನೆಯ ರಾಜಕಾರಣಿಗಳು. ಅವರು ಸರಕಾರಿ ಆಸ್ಪತ್ರೆಗಳಲ್ಲಿ ಬಡವರು, ದುರ್ಬಲ ವರ್ಗದವರ ಚಿಕಿತ್ಸೆಗೆಂದೇ ಪ್ರತ್ಯೇಕ ಘಟಕಗಳನ್ನು ಸ್ಥಾಪಿಸಿದ್ದಾರೆ. ಶಿಂದೆಯವರು ಕಳೆದ ಆಗಸ್ಟ್‌ನಿಂದ ೨೪೧೮ ಆಸ್ಪತ್ರೆಗಳು ಹಾಗೂ ಮೆಡಿಕಲ್ ಸೆಂಟರ್‌ಗಳಲ್ಲಿ ಉಚಿತ ಚಿಕಿತ್ಸೆಯ ವ್ಯವಸ್ಥೆ ಮಾಡಿದ್ದಾರೆ.
ಇಂಥ ಕಾಳಜಿ, ಸಂವೇದನಾಶೀಲತೆಯ ಹೊರತಾಗಿಯೂ ಸರಕಾರಿ ಆಸ್ಪತ್ರೆಗಳಲ್ಲಿ ಇಂಥ ಘಟನೆಗಳು ನಡೆಯುತ್ತಿರುವುದೇಕೆ, ಸರಾಸರಿಗಿಂತ
ಹೆಚ್ಚು ಸಾವಾಗುತ್ತಿರುವುದೇಕೆ? ನಮ್ಮಲ್ಲಿ ಜನಸಂಖ್ಯೆ ಹಾಗೂ ಸರಕಾರಿ ಆಸ್ಪತ್ರೆಗಳ ಅನುಪಾತ ಸರಿಯಿಲ್ಲ. ಮೇಲಾಗಿ, ಬಹುತೇಕ ಸರಕಾರಿ ಆಸ್ಪತ್ರೆಗಳೇ ಅನಾರೋಗ್ಯಪೀಡಿತವಾಗಿವೆ! ಅಲ್ಲಿ ಸಾಕಷ್ಟು ಹಾಸಿಗೆ, ವೈದ್ಯರು, ದಾದಿಯರು ಇಲ್ಲ. ವಿಪರ್ಯಾಸವೆಂದರೆ ಖಾಸಗಿ ಆಸ್ಪತ್ರೆಗಳು ಬೆಳೆಯುತ್ತಲೇ ಇದ್ದು ದೊಡ್ಡ ಉದ್ದಿಮೆಯಾಗಿ ಅಭಿವೃದ್ಧಿ ಹೊಂದಿವೆ. ಹಿಂದೆಲ್ಲಾ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾದಂಥ ಮಹಾನಗರಗಳಲ್ಲಿ ಉದ್ಯಮಿಗಳು ಶ್ರೀಸಾಮಾನ್ಯರಿಗಾಗಿ ಧರ್ಮಾರ್ಥ ಉಚಿತ ಆಸ್ಪತ್ರೆಗಳನ್ನು ಕಟ್ಟಿಸುತ್ತಿದ್ದರು.
ಈಗ ಪುಟ್ಟಪರ್ತಿಯ ಸತ್ಯ ಸಾಯಿಬಾಬಾ ಟ್ರಸ್ಟ್‌ನಂಥ ಕೆಲ ಸಂಸ್ಥೆಗಳಷ್ಟೇ ಇಂಥವನ್ನು ನಡೆಸುತ್ತಿವೆ. ನಾಗ್ಪುರದಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವ
ದಲ್ಲಿ ಕ್ಯಾನ್ಸರ್ ಆಸ್ಪತ್ರೆ ರೂಪುಗೊಂಡಿದೆ. ಈ ‘ಪಂಚತಾರಾ’ ಆಸ್ಪತ್ರೆಯಲ್ಲಿ ಜನರಿಗೆ ಅನುಕೂಲವಾಗಲೆಂದು ವಿಶ್ವ ದರ್ಜೆಯ ಆಧುನಿಕ ಸೌಕರ್ಯ ಗಳನ್ನು ಒದಗಿಸಲಾಗಿದೆ. ಅದೇ ರೀತಿ, ಛತ್ರಪತಿ ಸಂಭಾಜಿನಗರದಲ್ಲಿ ಹೆಡಗೇವಾರ್ ಆಸ್ಪತ್ರೆಯಿದೆ. ಆದರೆ ಎಲ್ಲೆಡೆಯೂ ಇಂಥ ಉತ್ತಮ ಆಸ್ಪತ್ರೆ ಗಳಿಲ್ಲದ್ದಕ್ಕೆ ಜನಸಾಮಾನ್ಯರು ಖಾಸಗಿ ಆಸ್ಪತ್ರೆಗಳಿಗೆ ಹೋಗುವುದು ಅನಿವಾರ್ಯವಾಗಿದೆ. ಅಲ್ಲಿ ವೈದ್ಯರು ಮೊದಲು ರೋಗಿಯನ್ನಾಗಲೀ ಅವನ ಅನಾರೋಗ್ಯ ವನ್ನಾಗಲೀ ನೋಡುವುದಿಲ್ಲ. ಬದಲಿಗೆ ಅವನಲ್ಲಿ ಹಣ ವಿದೆಯೇ, ಆರೋಗ್ಯ ವಿಮೆಯಿದೆಯೇ ಎಂಬುದನ್ನು ನೋಡುತ್ತಾರೆ. ಈ ಆಸ್ಪತ್ರೆಗಳು ರೋಗಿಗಳನ್ನು ದಾಖಲಿಸಿಕೊಳ್ಳುವುದೇನೋ ಸರಿ, ಆದರೆ ಅವರ ಪರಿಸ್ಥಿತಿ ಬಿಗಡಾಯಿಸಿದರೆ ಸರಕಾರಿ ಆಸ್ಪತ್ರೆಗಳಿಗೆ ಕಳುಹಿಸಿಬಿಡುತ್ತವೆ.
ನಂತರ ಆ ರೋಗಿ ಸತ್ತರೆ ಸರಕಾರಿ ಆಸ್ಪತ್ರೆಗೆ ತಾನೇ ಕೆಟ್ಟ ಹೆಸರು ಬರುವುದು? ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಎಷ್ಟೋ ವೈದ್ಯರು ಜತೆಜತೆಗೆ
ಖಾಸಗಿ ಕ್ಲಿನಿಕ್/ಆಸ್ಪತ್ರೆಗಳನ್ನೂ ಹೊಂದಿರುತ್ತಾರೆ. ಅವರು ಸರಕಾರಿ ಆಸ್ಪತ್ರೆಯಲ್ಲಿ ತಮ್ಮಲ್ಲಿಗೆ ಬರುವ ರೋಗಿಗಳಿಗೆ ಒಂದಲ್ಲಾ ಒಂದು ನೆಪ ಹೇಳಿ ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಾರೆ. ಇಲ್ಲಿ ಆ ಮಷಿನ್ ಸರಿಯಿಲ್ಲ, ಈ ಟೆಸ್ಟ್ ಮಾಡಲು ಆಗೋದಿಲ್ಲ, ಇನ್ಯಾರೋ ಸ್ಪೆಷಲಿಸ್ಟ್ ಇಲ್ಲಿಲ್ಲ ಹೀಗೆ ಏನಾದ ರೊಂದು ನೆಪ ಹೇಳುತ್ತಾರೆ. ಇದನ್ನು ತಡೆಯುವವರು ಯಾರೂ ಇಲ್ಲ. ಒಳ್ಳೆಯ ಸರಕಾರಿ ಆಸ್ಪತ್ರೆಗಳೇ ಇಲ್ಲ, ಅಲ್ಲಿ ಒಳ್ಳೆಯ ವೈದ್ಯರೇ ಇಲ್ಲ ಎಂದು
ನಾನು ಹೇಳುತ್ತಿಲ್ಲ. ಆದರೆ ದೇಶದಲ್ಲಿನ ಸದ್ಯದ ಒಟ್ಟಾರೆ ಸಾಮಾನ್ಯ ಪರಿಸ್ಥಿತಿಯ ಬಗ್ಗೆ ಹೇಳುತ್ತಿದ್ದೇನೆ.
ಇದಕ್ಕೆ ಯಾರೊಬ್ಬರನ್ನೂ ದೂರಿ ಪ್ರಯೋಜನವಿಲ್ಲ. ನಮ್ಮ ವ್ಯವಸ್ಥೆಯನ್ನು ದೂರಬೇಕಷ್ಟೆ. ನಾನೂ ಆ ವ್ಯವಸ್ಥೆಯ ಭಾಗವಾಗಿದ್ದೆ. ನನ್ನ ತಂದೆ, ಹಿರಿಯ ಸ್ವಾತಂತ್ರ್ಯ ಹೋರಾಟ ಗಾರ ಜವಾಹರಲಾಲ್ ದರಡಾ ಅವರೂ ಮಹಾರಾಷ್ಟ್ರದಲ್ಲಿ ಹಿಂದೆ ಮಂತ್ರಿಯಾಗಿದ್ದರು. ಅವರ ಅವಧಿಯಲ್ಲಿ ಅನೇಕ
ವೈದ್ಯಕೀಯ ಕಾಲೇಜುಗಳು, ಸಾಕಷ್ಟು ಹಳ್ಳಿಗಳಲ್ಲಿ ಸರಕಾರಿ ಆಸ್ಪತ್ರೆಗಳು ಆರಂಭವಾಗಿದ್ದವು. ಹಾಗಂತ ಅವರೇ ಈ ಸಮಸ್ಯೆಗೆ ಕಾರಣ ಎಂದು ದೂರಲಾದೀತೇ? ಈ ತಪ್ಪಾಗಿರುವುದು ಯಾರೋ ಒಬ್ಬ ವ್ಯಕ್ತಿಯಿಂದಲ್ಲ, ಇಡೀ ವ್ಯವಸ್ಥೆಯಿಂದ. ನಮ್ಮಲ್ಲಿ ಸಾಕಷ್ಟು ಮೆಡಿಕಲ್ ಸೀಟುಗಳು ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿಲ್ಲದಿರುವುದರಿಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಭಾರಿ ಹಣ ತೆತ್ತು ಖಾಸಗಿ ಕಾಲೇಜುಗಳಿಗೆ ಹೋಗಬೇಕಾಗಿದೆ.
ಒಂದು ಆಸ್ಪತ್ರೆ ಕಟ್ಟಲು ಬಹಳ ಹಣ ಬೇಕು. ಅಲ್ಲಿ ಬಳಸುವ ಯಂತ್ರಗಳು ಬಹಳ ದುಬಾರಿ. ಅಂಥ ಸಂದರ್ಭದಲ್ಲಿ ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದು ಹೊರಬಂದು ಆಸ್ಪತ್ರೆ ಕಟ್ಟುವ ವೈದ್ಯರ ಆದ್ಯತೆ ತಾವು ಓದಿಗಾಗಿ ಮಾಡಿದ ಸಾಲ ತೀರಿಸಿ ಲಾಭ ಮಾಡಿಕೊಳ್ಳುವುದಾಗಿರುತ್ತದೆ. ಹೀಗಾಗಿ
ಅವರನ್ನೂ ದೂರಲಾಗದು. ಆದರೆ ಕೆಲವು ಪವಿತ್ರ ವೃತ್ತಿಗಳಲ್ಲಿರುವವರಿಗೆ ಜನರ ಕಷ್ಟಕಾರ್ಪಣ್ಯಗಳ ಬಗ್ಗೆ ಸಂವೇದನೆ ಇರಬೇಕಾಗುತ್ತದೆ. ಅದು ವೈದ್ಯಕೀಯ ಲೋಕದಲ್ಲಿ ಕಾಣಿಸುತ್ತಿಲ್ಲ.
ಚುನಾಯಿತ ಜನಪ್ರತಿನಿಧಿಗಳು ಸರಕಾರವನ್ನು ರಚಿಸಿದಾಗ ಜನರು ಅವರಿಂದ ಏನನ್ನು ನಿರೀಕ್ಷಿಸುತ್ತಾರೆ? ದುಡಿಯಲೊಂದು ಉದ್ಯೋಗ, ತಿನ್ನಲು ಒಳ್ಳೆಯ ಆಹಾರ, ಮಕ್ಕಳಿಗೆ ಉತ್ತಮ ಶಿಕ್ಷಣ, ವಾಸಿಸಲು ಮನೆ ಮತ್ತು ಆರೋಗ್ಯ ಸೌಕರ್ಯಗಳು- ಅವರು ಬಯಸುವುದು ಇಷ್ಟೇ. ಈ ಪೈಕಿ ಆರೋಗ್ಯ ಸೌಕರ್ಯ ಮುಖ್ಯವಾದುದು. ಹೀಗಾಗಿ ಈ ವಲಯದಲ್ಲಿ ಸರಕಾರಗಳು ಸೂಕ್ತ ಯೋಜನೆಗಳನ್ನು ರೂಪಿಸಿ, ಸಾಕಷ್ಟು ಹಣ ತೆಗೆದಿರಿಸಬೇಕು. ಈ ವರ್ಷದ ಬಜೆಟ್ ಹೊರತುಪಡಿಸಿದರೆ ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರಕಾರದ ಬಜೆಟ್‌ಗಳಲ್ಲಿ ಆರೋಗ್ಯಕ್ಷೇತ್ರಕ್ಕೆ ನೀಡಿದ ಹಣ ಶೇ.೨ಕ್ಕಿಂತ ಕಡಿಮೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಆರೋಗ್ಯ ಬಜೆಟ್ಟನ್ನು ಶೇ.೧೩ರಷ್ಟು ಏರಿಸಲಾಗಿದೆ. ಇದು ಸ್ವಾಗತಾರ್ಹ.
ಆದರೆ, ಆರೋಗ್ಯ ಕ್ಷೇತ್ರಕ್ಕೆ ಒಟ್ಟಾರೆ ಬಜೆಟ್‌ನ ಶೇ.೨೦ರಷ್ಟು ಹಣ ಸಿಗಬೇಕು. ಹಾಗೆ ನಿಗದಿಪಡಿಸಿದ ಅನುದಾನ ಸರಿಯಾಗಿ ಬಳಕೆಯಾಗಬೇಕು. ಮಹಾರಾಷ್ಟ್ರದ ಆರೋಗ್ಯ ಬಜೆಟ್ ಶೇ.೪.೫ರಷ್ಟು ಇದೆ. ಅದು ಯಾತಕ್ಕೂ ಸಾಲದು. ತಜ್ಞರ ಪ್ರಕಾರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ನೀಡುವ ಹಣ ಶೇ.೨೦ರಷ್ಟಿರಬೇಕು. ರಾಜಸ್ಥಾನದಲ್ಲಿ ಜನರಿಗೆ ಕಾಯ್ದೆಬದ್ಧವಾಗಿ ಆರೋಗ್ಯದ ಹಕ್ಕನ್ನು ನೀಡಿರುವಂತೆ ಮಹಾರಾಷ್ಟ್ರದಲ್ಲೂ ನೀಡುವ ಅಗತ್ಯವಿದೆ.
ಹಾಗಂತ ಇದು ಮಹಾರಾಷ್ಟ್ರಕ್ಕೆ ಸೀಮಿತವಾದ ಸಮಸ್ಯೆಯೇನಲ್ಲ. ಬೇರೆಡೆಯೂ ಪರಿಸ್ಥಿತಿ ಹೀಗೇ ಇದೆ.
ವ್ಯಕ್ತಿಯೊಬ್ಬ ಹೆಂಡತಿಯ ಮೃತದೇಹವನ್ನು ಸೈಕಲ್ ಮೇಲೆ ತೆಗೆದುಕೊಂಡು ಹೋದರು, ತಂದೆಯೊಬ್ಬ ಮಗಳನ್ನು ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಹೋದ ಎಂಬ ಸುದ್ದಿಗಳನ್ನು ನಾವು ಕೇಳಿಲ್ಲವೇ? ವಾಸ್ತವವಾಗಿ ನಮ್ಮಲ್ಲಿ ಈಗಿರುವ ಆರೋಗ್ಯ ವ್ಯವಸ್ಥೆಯನ್ನು ಸಂಪೂರ್ಣ ಬದಲಿಸಿ ಹೊಸದನ್ನು ಕಟ್ಟಿ ಬೆಳೆಸಬೇಕಿದೆ. ಅದು ಯಶಸ್ವಿಯಾಗಬೇಕೆಂದರೆ ಕೇಂದ್ರ ಮತ್ತು ಎಲ್ಲಾ ರಾಜ್ಯ ಸರಕಾರಗಳು ಒಟ್ಟಾಗಿ ಕೆಲಸ ಮಾಡಬೇಕು. ಯಾವುದೇ ನಗರ ಅಥವಾ ಹಳ್ಳಿಗಳಲ್ಲಿ ಸಾಕಷ್ಟು ಆಸ್ಪತ್ರೆಗಳು ಇರಬೇಕು. ಅವುಗಳಲ್ಲಿ ವೈದ್ಯರು, ಚಿಕಿತ್ಸಾ ಉಪಕರಣಗಳು, ಔಷಧಿಗಳು ಮತ್ತು ಆಂಬುಲೆನ್ಸ್‌ಗಳು ಸದಾ ಸಿಗಬೇಕು. ಇದಕ್ಕೆ ಬೇಕಿರುವುದು ಇಚ್ಛಾಶಕ್ತಿ.
ಸರಕಾರಿ ಆಸ್ಪತ್ರೆಗಳನ್ನು ಸುಧಾರಿಸಬೇಕೆಂದರೆ ಸ್ವಚ್ಛತೆಯಿಂದಲೇ ಶುರುಮಾಡಬೇಕು. ಹೇಗೆ ಜನಪ್ರತಿನಿಧಿಯೊಬ್ಬ ಸರಕಾರಕ್ಕೆ ತನ್ನ ಆದಾಯ ಮತ್ತು ಕ್ರಿಮಿನಲ್ ರೆಕಾರ್ಡ್‌ನ ವಿವರ ಸಲ್ಲಿಸುವುದು ಕಡ್ಡಾಯವೋ ಹಾಗೆಯೇ ಅವನು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದೂ ಕಡ್ಡಾಯವಾಗಬೇಕು. ಗ್ರಾಮ ಪಂಚಾಯ್ತಿ ಸದಸ್ಯರಿಂದ ಹಿಡಿದು ದೇಶದ ಉನ್ನತ ಸ್ಥಾನದವರೆಗಿನ ಚುನಾವಣೆಯಲ್ಲಿ ಆರಿಸಿ ಬರುವ ಪ್ರತಿಯೊಬ್ಬರೂ ಸರಕಾರಿ ಆಸ್ಪತ್ರೆಯಲ್ಲೇ
ಚಿಕಿತ್ಸೆ ಪಡೆಯುವುದನ್ನು ಕಡ್ಡಾಯಗೊಳಿಸಬೇಕು.
(ಲೇಖಕರು ಹಿರಿಯ ಪತ್ರಕರ್ತರು ಹಾಗೂ ರಾಜ್ಯಸಭಾ ಸದಸ್ಯರು)