Sunday, 13th October 2024

ಪೀಪಿಯೂದುವ ಪೀಟರನ ಪಚ್ಚಡಿ ಪೀಕಲಾಟದ ಪದವಿನೋದ

ತಿಳಿರುತೋರಣ

srivathsajoshi@yahoo.com

ಎಲ್ಲಿಟರೇಷನ್ ಅಥವಾ ಅನುಪ್ರಾಸ ಕನ್ನಡದಲ್ಲಿಯೂ ಬೇಕಾದಷ್ಟು ಇದೆ. ಇಂಗ್ಲಿಷ್‌ನ ಪೀಟರ್ ಪೈಪರ್ ಪದ್ಯ ದಂತೆಯೇ, ಒಂದು ಪದ್ಯದಲ್ಲೋ, ವಾಕ್ಯದಲ್ಲೋ, ಅಥವಾ ಎರಡೇ ಎರಡು ಪದಗಳಿಂದಾದ ಪದಪುಂಜದಲ್ಲೋ ಎಲ್ಲ ಪದಗಳೂ ಒಂದೇ ವ್ಯಂಜನದಿಂದ ಆರಂಭ ಆಗಿರುವ ರಚನೆಗಳು ಕನ್ನಡದಲ್ಲಿ ನಮಗೆ ದಂಡಿಯಾಗಿ ಸಿಗುತ್ತವೆ. ಸ್ವಲ್ಪ ಸೂಕ್ಷ್ಮವಾಗಿ ಗಮನಿಸುವ ಕಲೆ (ಮತ್ತು ತಲೆ) ಬೇಕು ಅಷ್ಟೇ.

ಅನುಪ್ರಾಸ ಅಥವಾ ಇಂಗ್ಲಿಷ್‌ನಲ್ಲಾದರೆ ಎಲ್ಲಿಟರೇಷನ್ ಎಂದಾಗ ತತ್‌ಕ್ಷಣ ನೆನಪಾ ಗುವುದು ಅತಿಪ್ರಸಿದ್ಧ ನರ್ಸರಿ ರೈಮ್ Peter Piper Picked a Peck of Pickled Peppers… ಇದು ಪದ್ಯದ ಮೊದಲ ಸಾಲು.

ಇವೇ ಪದಗಳನ್ನು ಆಚೀಚೆ ಮಾಡಿ ಉಳಿದ ಮೂರು ಸಾಲುಗಳು. ಇದರಲ್ಲಿ ಪ್ರತಿ ಯೊಂದು ಪದವೂ ಒಂದೇ ವ್ಯಂಜನದಿಂದ (ಪಿ ಅಕ್ಷರದಿಂದ) ಆರಂಭವಾಗುತ್ತದೆ. ಓದುವಾಗಷ್ಟೇ ಅಲ್ಲ, ಉಚ್ಚರಿಸುವಾಗಲೂ ಮನಸ್ಸಿಗೆ ಒಂದು ಥರದ ಮುದ ಕೊಡುತ್ತದೆ. ಇಂಥ ಪದ್ಯಗಳನ್ನು ಒಂದೆರಡು ಸಲ ಓದಿದರೆ/ಹೇಳಿಕೊಂಡರೆ ಸಾಕು ಸ್ಮೃತಿಕೋಶದಲ್ಲಿ ಗಟ್ಟಿಯಾಗಿ ತಳವೂರುತ್ತವೆ.

ಬೇಕೆಂದಾಗ ನೆನಪೆಂಬ ತಿಜೋರಿಯಿಂದ ಸುಲಭವಾಗಿ ಹೊರಬರುತ್ತವೆ. ನಿಜವಾಗಿ ಯಾದರೆ ಪದ್ಯಗಳಲ್ಲಿ ಪ್ರಾಸದ ಉದ್ದೇಶ ಅದೇ ತಾನೆ? ಬರೆದಿದ್ದನ್ನು ಸುಂದರವಾಗಿ ಸುವುದರ ಜೊತೆಜೊತೆಗೇ ನೆನಪಿಟ್ಟುಕೊಳ್ಳಲಿಕ್ಕೆ ಸುಲಭವಾಗಿಸುವುದು; ಇನ್ನೂ ಮುಂದು ವರಿದು ಮಿದುಳಿಗೆ ಕಸರತ್ತು ನೀಡುವುದು.

ಪೀಟರ್ ಪೈಪರ್ ಶಿಶುಗೀತೆಯ ಬಗ್ಗೆ ಬೇರೆ ವಿವರಗಳು ನನಗೆ ಈ ಮೊದಲು ಹೆಚ್ಚೇನೂ ಗೊತ್ತಿರಲಿಲ್ಲ, ಎಲ್ಲಿಟರೇಷನ್‌ಗೆ
ಅದೊಂದು ಒಳ್ಳೆಯ ಉದಾಹರಣೆ ಮತ್ತು ಅದೊಂದು ಟಂಗ್ ಟ್ವಿಸ್ಟರ್ ಕೂಡ ಎನ್ನುವುದನ್ನು ಬಿಟ್ಟರೆ. ದಶಕಗಳ ಹಿಂದೆ ನಮ್ಮನೆಗೆ ಮೊತ್ತಮೊದಲ ಸಲ ಟೇಪ್ ರೆಕಾರ್ಡರ್ ತಂದಿದ್ದಾಗ ಇದೇ ಪೀಟರ್ ಪೈಪರ್ ಶಿಶುಗೀತೆಯ ನಾಲ್ಕೂ ಸಾಲುಗಳನ್ನು ತಪ್ಪಿಲ್ಲದೆ ಎಷ್ಟು ವೇಗವಾಗಿ ಹೇಳಲಿಕ್ಕಾಗುತ್ತದೆಯೆಂದು ನನ್ನ ಅಣ್ಣ ಹೇಳಿ ರೆಕಾರ್ಡ್ ಮಾಡಿದ್ದರು. ಆ ಕ್ಯಾಸೆಟ್ ಈಗಲೂ ನಮ್ಮಲ್ಲಿದೆ.

ಆಮೇಲೆ ಪೀಟರ್ ಪೈಪರ್ ನನ್ನೆದುರು ಪ್ರತ್ಯಕ್ಷವಾದದ್ದು ನಾನು ಅಮೆರಿಕಕ್ಕೆ ಬಂದಮೇಲೆ ಇಲ್ಲಿನ ಒಂದು ಗ್ರಂಥಾಲಯದಲ್ಲಿ,
Peter Piper’s Practical Principles of Plain and Perfect Pronunciation ಎಂಬ ಪುಸ್ತಕದಲ್ಲಿ! ಅದರ ಹೆಸರನ್ನು ನೋಡಿದಾ ಗಲೇ ಕುತೂಹಲ ಕೆರಳಿತು. ಅದರ ಮೊದಲ ಮುದ್ರಣ ಸುಮಾರು 200 ವರ್ಷಗಳ ಹಿಂದೆ, ಕ್ರಿ.ಶ 1813ರಲ್ಲಿ ಲಂಡನ್‌ನಲ್ಲಿ ಆಗಿರುವುದು. ಬರೆದವನು ಜಾನ್ ಹ್ಯಾರಿಸ್ ಎಂಬುವವನು. ಆ ಪುಸ್ತಕದಲ್ಲಿ ನೋಡುತ್ತೇನಾದರೆ ಇಂಗ್ಲಿಷ್ ನಲ್ಲಿ ಎ ಇಂದ ಝಡ್ ವರೆಗೆ ಪ್ರತಿಯೊಂದು ಅಕ್ಷರಕ್ಕೂ ಒಂದು ಎಲ್ಲಿಟರೇಷನ್ ಪದ್ಯ ಇದೆ.

ಉದಾಹರಣೆಗೆ Andrew Airpump asked his Aunt her ailment…, Billy Button bought a buttered Biscuit…, Captain
Crackskull cracked a Catchpoll’s Cockscomb…, Davy Dolldrum dreamed he drove a Dragon… ಹೀಗೆ. ಪಿ ಅಕ್ಷರಕ್ಕೆ ಪೀಟರ್ ಪೈಪರ್… ಕೂಡ ಇದೆಯೆನ್ನಿ. ಆದರೆ ಈ ಪೀಟರ್ ಪೈಪರ್ ಶಿಶುಗೀತೆ ಅದಕ್ಕಿಂತಲೂ ನೂರಿನ್ನೂರು ವರ್ಷಗಳ ಹಿಂದಿ ನಿಂದಲೂ ಪ್ರಚಲಿತದಲ್ಲಿದೆಯಂತೆ. ಹಾಗಾಗಿ ಜಾನ್ ಹ್ಯಾರಿಸ್ ಅದರ ರಚನೆಕಾರನೇನಲ್ಲ. ಅದನ್ನು ಹೋಲುವ ಮಿಕ್ಕ 25 ಪದ್ಯಗಳನ್ನು ಸೇರಿಸಿ ಆ ಪುಸ್ತಕವನ್ನು ರಚಿಸಿದ್ದಾನೆ ಅಷ್ಟೇ.

ಪುಸ್ತಕದ ಪೀಠಿಕೆಯೂ ಭಲೇ ಸ್ವಾರಸ್ಯಕರವಾಗಿ ಇದೆ. ಅದು ಪಿ ಅಕ್ಷರದಿಂದಲೇ ಹೆಣೆದಿರುವ ಇನ್ನೂ ಉದ್ದದ ಎಲ್ಲಿಟರೇಷನ್,
ಈ ರೀತಿ: Peter Piper, without Pretension to Precocity or Profoundness, Puts Pen to Paper to Produce these Puzzling Pages, Purposely to Please the Palates of Pretty Prattling Playfellows, Proudly Presuming that with Proper Penetration it will Probably, and Perhaps Positively, Prove a Peculiarly Pleasant and Profitable Path to Proper, Plain and Precise Pronunciation. He Prays Parents to Purchase this Playful Performance, Partly to Pay him for his Patience and Pains; Partly to Provide for the Printers and Publishers; but Principally to Prevent the Pernicious Prevalence of Perverse Pronunciation. A. ಅಬ್ಬಾ!

ಸರಿಯಾದ ಉಚ್ಚಾರಕ್ಕೆ ಪ್ರಾಮುಖ್ಯ ಕೊಟ್ಟು ಮಾಡಿದ ಒಳ್ಳೆಯ ಕೆಲಸ. ನನಗಿದು ತುಂಬ ಇಷ್ಟವಾಯಿತು, ಮತ್ತು ನಮ್ಮ ಕನ್ನಡ ದಲ್ಲಿಯೂ ಇಂಥದ್ದು ಇದೆಯೇ ಎಂದು ಯೋಚಿಸುವಂತೆ ಮಾಡಿತು. ಪೀಟರ್ ಪೈಪರನನ್ನೇ ‘ಪೀಪಿಯೂದುವ ಪೀಟರನ ಪಚ್ಚಡಿ ಪೀಕಲಾಟ’ ಎಂದು ಕನ್ನಡೀಕರಿಸಲು ಪ್ರೇರಣೆ ನೀಡಿತು.

ಪುಸ್ತಕ ಇರಲಿಕ್ಕಿಲ್ಲ, ಆದರೆ ಎಲ್ಲಿಟರೇಷನ್ ಅಥವಾ ಅನುಪ್ರಾಸ ಕನ್ನಡದಲ್ಲಿಯೂ ಬೇಕಾದಷ್ಟು ಇದೆ. ಕನ್ನಡ ಕಾವ್ಯರಚನೆಯಲ್ಲಿ ಅನುಪ್ರಾಸವು ಶಬ್ದಾಲಂಕಾರದ ಒಂದು ಮುಖ್ಯ ಪ್ರಕಾರವೇ ಆಗಿದೆ. ಅದರಲ್ಲೇ ವೃತ್ತಾನುಪ್ರಾಸ, ಛೇಕಾನುಪ್ರಾಸ ಅಂತ ಎರಡು ಉಪ ವಿಧಗಳೂ ಇವೆ. ಇರಲಿ, ಇಲ್ಲಿ ನಾವೀಗ ಅಷ್ಟು ಆಳವಾದ ಸಾಹಿತ್ಯಿಕ ವಿವರಗಳನ್ನು ನೋಡುವುದು ಬೇಡ. ಆದರೆ ಇಂಗ್ಲಿಷ್‌ನ ಪೀಟರ್ ಪೈಪರ್ ಪದ್ಯದಂತೆಯೇ, ಒಂದು ಪದ್ಯದಲ್ಲೋ, ವಾಕ್ಯದಲ್ಲೋ, ಅಥವಾ ಎರಡೇ ಎರಡು ಪದಗಳಿಂದಾದ ಪದಪುಂಜದಲ್ಲೋ ಎಲ್ಲ ಪದಗಳೂ ಒಂದೇ ವ್ಯಂಜನದಿಂದ ಆರಂಭ ಆಗಿರುವ ರಚನೆಗಳು ಕನ್ನಡದಲ್ಲಿ ನಮಗೆ ದಂಡಿಯಾಗಿ ಸಿಗುತ್ತವೆ.

ಸ್ವಲ್ಪ ಸೂಕ್ಷ್ಮವಾಗಿ ಗಮನಿಸುವ ಕಲೆ (ಮತ್ತು ತಲೆ) ಬೇಕು ಅಷ್ಟೇ. ಬೇರೆಲ್ಲ ಯಾಕೆ, ಈ ತಿಳಿರುತೋರಣ ಅಂಕಣದಲ್ಲೇ ಕೆಲವು ತಲೆಬರಹಗಳು ಅನುಪ್ರಾಸದವು ಬಂದಿವೆ: ‘ಕಳಲೆಯಿಂದ ಕೊಳಲವರೆಗೆ ಕಾನನದ ಕಲ್ಪವೃಕ್ಷ’, ‘ಕೇಶವನ ಕಿವಿಗಳಲ್ಲಿನ ಕೂಗಣಿಯೇ ಕೈಟಭ’, ‘ಮೂವರೂ ಮೋಸಗಾರರೇ; ಮಹಾಜನತೆ ಮಂಗವಾಯ್ತು’, ‘ಕಾಲಂದುಗೆಯನ್ನು ಕೈಗೆತ್ತಿಕೊಂಡ ಕನ್ನಗಿಯ ಕೆಚ್ಚು’, ‘ನುಡಿಸಿರಿಯಲ್ಲಿಂದು ನಮಸ್ಕೃತರಾಗುವ ನಟರಾಜ’, ‘ಕಣ್ಮರೆಯಾಗುತ್ತಿದೆ ಕುಕ್ಕರಗಾಲಿನಲ್ಲಿ ಕೂರುವಿಕೆ’, ‘ಬಿಳಿಮನೆ ಬೆಳಗಲು ಬೈಡನ್‌ನೊಡನೆ ಬೌಬೌ ಬಂದಿವೆ!’, ‘ಕೋಣನನ್ನು ಕುರಿತು ಕಾವ್ಯ ಕಟ್ಟಿದ ಕುಟ್ಟಿ ಕವಿಯ ಕಥೆಯಿದು’, ‘ನೆನಪಿಡಲು ನೆರವಾಗುವ ನೆನೆಗುಬ್ಬಿಗಳ ನೆನಪು’ ಮುಂತಾದುವು ನಿಮ್ಮಲ್ಲಿ ಕೆಲವರಿಗಾದರೂ ನೆನಪಿರಬಹುದು.

ಈ ರೀತಿ ಎಲ್ಲಿಟರೇಷನ್ ವಾಕ್ಯಗಳನ್ನು ರಚಿಸುವುದೊಂದೇ ಅಲ್ಲ, ಸಾಹಿತ್ಯದಲ್ಲಿ, ಆಡುಮಾತಿನಲ್ಲಿ ಅಲ್ಲಲ್ಲಿ ಕಾಣಸಿಗುವ ಎಲ್ಲಿಟರೇಷನ್‌ಅನ್ನು ಗುರುತಿಸಿಸುವುದು ನನಗೆ ಅಚ್ಚುಮೆಚ್ಚು. ಈಗ ಆ ಹುಚ್ಚನ್ನು ಸ್ವಲ್ಪ ನಿಮಗೂ ಹಚ್ಚೋಣವೇ? ಎಲ್ಲಿಟ ರೇಷನ್ ಎಲ್ಲಿದೆ ಎಂಬ ಹುಡುಕಾಟವನ್ನು ನೀವು ಕನ್ನಡ ಸಿನೆಮಾ ಹೆಸರುಗಳ ಮೇಲೊಮ್ಮೆ ಕಣ್ಣಾಡಿಸಿ ಆರಂಭಿಸಬೇಕು.
ಚೂರಿ ಚಿಕ್ಕಣ್ಣ, ಬೀದಿ ಬಸವಣ್ಣ, ಸರ್ವರ್ ಸೋಮಣ್ಣ, ಬೇಡಿ ಬಂದವಳು, ಪಾಯಿಂಟ್ ಪರಿಮಳ, ಬೆಳದಿಂಗಳ ಬಾಲೆ, ಜನುಮದ ಜೋಡಿ, ಗಜಪತಿ ಗರ್ವಭಂಗ, ಪಡುವಾರಳ್ಳಿ ಪಾಂಡವರು, ದೇವರ ದುಡ್ಡು, ಸಂಪತ್ತಿಗೆ ಸವಾಲ್, ಮಲಯ ಮಾರುತ,
ಮುಂಗಾರು ಮಳೆ, ಮನೆಯೇ ಮಂತ್ರಾಲಯ… ಒಂದೇ ಎರಡೇ!

ಹೌದು ಬರೀ ಎರಡೇ ಪದಗಳಾದರೂ ಅವು ಅನು ಪ್ರಾಸಬದ್ಧ. ಮುಂದೆ ಮೂರು ಪದಗಳ ಹೆಸರುಗಳನ್ನೂ ಗಮನಿಸಬಹುದು. ಕರುಣೆಯೇ ಕುಟುಂಬದ ಕಣ್ಣು, ಪ್ರೀತಿ ಪ್ರೇಮ ಪ್ರಣಯ, ಮನ ಮೆಚ್ಚಿದ ಮಡದಿ, ಮಸ್ತ್ ಮಜಾ ಮಾಡಿ, ಸುಬ್ಬಿ ಸುಬ್ಬಕ್ಕ ಸುವ್ವಲಾಲಿ. ಸಿನೆಮಾ ಹೆಸರುಗಳನ್ನು ಮಾತ್ರವಲ್ಲ ಚಿತ್ರಗೀತೆಗಳ ಸಾಲುಗಳನ್ನೂ ಸೂಕ್ಷ್ಮವಾಗಿ ಗಮನಿಸಬಹುದು.

ಬಂಕಾಪುರದ ಬೆಂಕಿಚೆಂಡು ಬಹದ್ದೂರ್‌ಗಂಡು…, ತುಂಬುತ ತುಳುಕುತ ತೀಡುತ ತನ್ನೊಳು ತಾನೇ…, ತರವಲ್ಲ ತಗಿನಿನ್ನ
ತಂಬೂರಿ…, ಕಂಡೊಡನೆ ಕರಪಿಡಿದು ಕಲ್ಪಿಸದಾಸುಖ ಕೊಡುವ…, ನಾನಿರುವುದೇ ನಿಮಗಾಗಿ ನಾಡಿರುವುದು ನಮಗಾಗಿ, ಪಂಚರಂಗಿ ಪೊಂವ್ ಪೊಂವ್! ಒಂದೇ ಹಾಡಿನ ಎಲ್ಲಿಟರೇಷನ್ ಸಾಲದಿದ್ದರೆ ಎರಡು ಹಾಡುಗಳನ್ನು ಕಸಿ ಕಟ್ಟಿ ನೋಡಿ. ಆಗ ಡಬಲ್ ಧಮಾಕಾ- ಕನ್ನಡದ ಕುಲದೇವಿ ಕಾಪಾಡು ಬಾತಾಯೆ ಭಾರತಿಯೆ ಭಾವ ಭಾಗೀರಥಿಯೆ!

ಮತ್ತೆ, ರಂಗಿತರಂಗ ಚಿತ್ರದ ‘ಕರೆಯೋಲೆ ಕರೆವ ಓಲೆ ಕರೆ ಮಾಡಿ ಕರೆದೋಲೆ, ಕರದಲ್ಲಿ ಕಲಮ ಹಿಡಿದು ಕರಿಶಾಯಿ ಬರೆದೋಲೆ,
ಕಲ್ಲಿನ ಕೊಳಲಲಿ ಕಲರವ ನುಡಿಸಿ ಕೈಯನು ಬೀಸಿ ಕರೆದೋಳೆ, ಕಣ್ಣಿಗೆ ಕಾಣದ ಕಾಗದದಲ್ಲಿ ಕುಂಚದಿ ಕಾವ್ಯವ ಕೊರೆದೋಳೆ…’
ಹಾಡಿನ ಕ ಮ್ಯಾಜಿಕನ್ನು ಮರೆಯುವುದೆಂತು!? ಕನ್ನಡ ಸಾಹಿತ್ಯದತ್ತ ಹೊರಳಿದರೆ ಅಲ್ಲಿಯೂ ನಮಗೆ ಅನುಪ್ರಾಸದ ಸುಗ್ರಾಸ ಸಿಗುತ್ತದೆ.

ರಾಜರತ್ನಂ ತುತ್ತೂರಿ ‘ಕಾಸಿಗೆ ಕೊಂಡನು ಕಸ್ತೂರಿ’; ಸಿದ್ದಯ್ಯ ಪುರಾಣಿಕರ ಅಜ್ಜನ ಕೋಲು ‘ಕಾಥೇವಾಡದಿ ಕಾಣದ ಕುದುರೆ’, ಕಯ್ಯಾರ ಕಿಞಣ್ಣ ರೈಯವರ ‘ಕಾಮನಬಿಲ್ಲು ಕಮಾನು ಕಟ್ಟಿದೆ’. ದ. ರಾ. ಬೇಂದ್ರೆಯವರ ‘ಕರಿಮರಿನಾಯಿ ಕುಂಯಿಗುಡುತ್ತಿತ್ತು’, ‘ಕುರುಡು ಕಾಂಚಾಣ ಕುಣಿಯುತಲಿತ್ತು’. ಕರಡಿ ಕುಣಿತದಲ್ಲಂತೂ ‘ಕಬ್ಬಿಣ ಕೈಕಡಗ ಕುಣಿಗೋಲು ಕೂದಲು ಕಂಬಳಿ (ಹೊದ್ದಾಂವ ಬಂದಾನ…)’ ಸರದಿಯಲ್ಲಿ ಐದು ಪದಗಳು ಕ -ಕಾರದವು. ಕವಿಶೈಲದ ಕವಿಋಷಿ ಕುವೆಂಪು ಕೂಡ ಕಮ್ಮಿಯೇನಲ್ಲ, ‘ಮೂಡಣದಾದಿಗಂತದಿ ಮೂಡುವೆಣ್ಣಿನ ಮೈಸಿರಿ’ಯನ್ನು ಮೆರೆಸಿದವರು.

ಕನ್ನಡದ ಕಣ್ವ ಬಿಎಂಶ್ರೀಯವರು ‘ಕುರಿನೆಗೆದಾಟ ಕುರುಬರ ಕೊಳಲಿನೂದಾಟ’ದಿಂದ ವಸಂತನನ್ನು ಸ್ವಾಗತಿಸಿದವರು. ಆದರೆ ಕನ್ನಡದ ಸಂದರ್ಭದಲ್ಲಿ ಅನುಪ್ರಾಸದ ಅನಭಿಷಿಕ್ತ ಅರಸ ಎನ್ನಬೇಕಾದ್ದು ಟಿಪಿಕಲ್ ಟಿ.ಪಿ. ಕೈಲಾಸಂ ಅವರನ್ನು. ಪ್ರಹಸನ ಪ್ರಪಿತಾಮಹ ಕನ್ನಡಕ್ಕೊಬ್ಬರೇ ಕೈಲಾಸಂ ಎನಿಸಿದ ಗ್ರೇಟ್ ಮನುಷ್ಯನನ್ನು. ಅವರ ನಾಟಕಗಳ ಹೆಸರಿನಿಂದ ಹಿಡಿದು
ಪಾತ್ರಗಳು, ಡೈಲಾಗುಗಳು ಎಲ್ಲ ಎಲ್ಲಿಟರೇಷನ್‌ಮಯ.

ಬಂಡ್ವಾಳ್ವಿಲ್ಲದ್ ಬಡಾಯಿ, ಸೀಕರ್ಣೆ ಸಾವಿತ್ರಿ, ಹರಿಶ್ಚಂದ್ರನ ಹಿಂಸಾ, ಮೊಮ್ಮಗಳ ಮುಯ್ಯಿ, ವೈದ್ಯನ ವ್ಯಾಧಿ. ಟೆರ್ರಿಬಲ್
ಟಂಗು… ಮೆಟಾಲಿಕ್ ಮೌತು… ನನ್ ನಾಲ್ಗೆಗ್ ನರವೇಇಲ್ಲ… ಕಾಪಿ ಕುಡ್ಯೋದು ಕಾದಾಡೋದು… ಕಿರಾತಕಿ! ಕುಟುಂಬ
ಕುಟುಂಬಗಳ್ನೇ ಕುಲ ಕುಲಗಳ್ನೇ ಕೊಂಪೆ ಕೊಂಪೆಗಳ್ನೇ ಕಿಚ್ಚಿಗಾಕ್ ದ್ಲು! ಹದ್ದಿನ್ ಹೊಟ್ಟೇಲ್ ಹುಟ್ಸಿದ್ರಿ… ನೋಡಿವ್ರಾ ನಮ್
ನಂಜೀನವ ನಮ್‌ಗಜ ನಿಂಬೇ ನಂಜೀನವ? ಕೈಲಾಸಂ ಇಂಥವನ್ನೆಲ್ಲ ನೀರುಕುಡಿದಂತೆ ಬರೆಯಬಲ್ಲವರಾಗಿದ್ದರು. ಸ್ವಲ್ಪ
ಕಷ್ಟಪಟ್ಟರೆ ನಾವೂ ಕೆಲ ವಾಕ್ಯಗಳನ್ನು ರಚಿಸಬಹುದು.

ಉದಾಹರಣೆಗೆ ‘ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯಲ್ಲಿ ರೋಡ್ ರೋಲರ್ ರಂಪಾಟ’. ಇನ್ನೊಂದು ಹ-ಕಾರ ಬಳ್ಳಿಯದು  ಕೆಲ ವರ್ಷಗಳ ಹಿಂದೆ ಇಂಟರ್‌ನೆಟ್‌ನಲ್ಲಿ ಸುತ್ತಾಡಿತ್ತು. ‘ಹೊಸನಗರದ ಹತ್ತಿರ ಹಾಲ್ಕೊಳವೆಂಬ ಹೋಬಳಿಯ ಹಟ್ಟಿ ಹನುಮಪ್ಪನು ಹೆಂಡತಿ ಹೂವಮ್ಮನ ಹಾಳು ಹರಟೆಗೆ ಹೂಂಗುಟ್ಟುತ್ತಿದ್ದನು…’ ಎಂದು ಶುರುವಾಗಿ ಒಂದಿಡೀ ಪುಟದಷ್ಟು ಹ-ಕಾರ ಹರಿಕಥೆ. ಹಾಗೆಯೇ ‘ಕರುನಾಡಲಿ ಕಾಲಿಟ್ಟು ಕಪಟಾಟ್ಟಹಾಸದಿ ಕನ್ನಡವ ಕೊಲ್ಲುವ ಕುನ್ನಿಗಳು. ಕಸ್ತೂರಿ ಕನ್ನಡದ ಕಂಪನರಿಯದ ಕಣ್ಣಿರುವ ಕುರುಡರು. ಕನ್ನಡಾಂಬೆ ಕೇಳಲಾರೆನೀ ಕರ್ಕಷ ಕಹಳೆ ಕಾಪಾಡು ಕಾಪಾಡು!’ ಅಂತ ಇನ್ನೊಂದು.
ಇವೆಲ್ಲಕ್ಕಿಂತಲೂ ಕ್ರಮಬದ್ಧ ಅನುಪ್ರಾಸವೆಂದರೆ ಕಾಗುಣಿತ ಬಳ್ಳಿಯಂತೆ ಪದಗಳ ಜೋಡಣೆ.

ಪ್ರೊ. ಕೃಷ್ಣೇಗೌಡರದೊಂದು ಫೇಮಸ್ ಡೈಲಾಗ್ ಇದೆಯಲ್ಲ? ವೈಶಂಪಾಯನ ಸರೋವರ ದಲ್ಲಿ ಅಡಗಿದ್ದ ದುರ್ಯೋಧನ ನನ್ನು ಭೀಮಸೇನನು ಕೆಣಕುವ ಪರಿ: ‘ಕರ್ಕಶ ಕಾಗೆಯಂತೆ ಕಿರುಚಾಡಿ, ಕೀಳುಜನರ ಕುಸಂಗದಲಿ ಕೂಗಾಡಿ ಕೃತಘ್ನನಾಗಿ ಕೆಟ್ಟು ಕೇಶವನಂ ಕೈಯಾರೆ ಕೊಲ್ಲುವೆನೆಂಬ ಕೋಡಗ ಕೌರವಾಧಮನೇ, ಕಂಗಾಲಾಗಿ ಕಃಪುರುಷನಾಗುವೆ ಎಚ್ಚರ!’ ಹಳಗನ್ನಡದ ಕವಿಗಳೂ ಇಂತಹ ಪ್ರಯೋಗಗಳನ್ನು ಮಾಡಿದವರೇ. ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀಯವರ ‘ಕನ್ನಡದಲ್ಲಿ ಚಿತ್ರಕಾವ್ಯ’ ಪುಸ್ತಕದಿಂದ ನಾನು ಸಂಗ್ರಹಿಸಿಟ್ಟುಕೊಂಡದ್ದೊಂದಿದೆ, ಹರೀಶ್ವರ ಕವಿಯ ಪ್ರಭುದೇವಪುರಾಣದಲ್ಲಿ ಬರುವ ರಚನೆ: ‘ಬಲ್ಲಿದ ಬಾಣನ ಬಾಗಿಲ ಕಾಯ್ವಡೆ| ಬಿಲ್ಲಿಂ ಪೊಯ್ಯಲು ಬೀಗುವರೇ ಮಹ| ಬುಲ್ಲಣೆಯಿಂದ ಬೂದಿಯ ಪೂಸುತ ಬೇಡುವರೇ ಮಗನಂ| ನಿಲ್ಲದೆ ಬೈವರೆ ನಂಬಿಯ ವನದೊಳು| ಸಲ್ವುದೆ ಬೋಗಣ್ಣನ ಪಿಂಪೋಪುದು| ಮಲ್ಲಂ  ಬೌದ್ಧನ ಬಂನಂಬಡಿಪುದು ಕಲ್ವರೆ ಬಃಸದನಾ|’ ಈ ಪದ್ಯದ ಅರ್ಥ: ‘ಬಲಶಾಲಿ ಬಾಣಾಸುರನ ಬಾಗಿಲನ್ನು ಕಾದುಕೊಂಡಿದ್ದು, ಅರ್ಜುನನು ಬಿಲ್ಲಿನಿಂದ ಹೊಡೆಯಲು ಸಂತೋಷಪಟ್ಟು, ಅತಿಶಯ ಸಡಗರದಿಂದ ವಿಭೂತಿ ಧರಿಸುತ್ತ ಸಿರಿಯಾಳನ ಮಗನ ಪ್ರಾಣವನ್ನು ಬೇಡಿ, ವನದಲ್ಲಿ ನಂಬಿಯಣ್ಣನನ್ನು ಸಹಿಸದೆ ಬೈದು, ಕೆಂಭಾವಿ ಭೋಗಣ್ಣನ ಹಿಂದೆ ನಡೆಯುವುದು ಸಲ್ಲುತ್ತದೆಯೇ? ಕೊಬ್ಬಿದ ಬೌದ್ಧನ ಭಂಗಪಡಿಸುವುದನ್ನು ಕಲಿಯುವರೆ ಮೇರುಪರ್ವತವಾಸಿಯೇ ದೇವನೇ ನಿನಗೆ ಜಯವಾಗಲಿ.’

ಹೊಸಗನ್ನಡದಲ್ಲಿ ಶಿಶುಗೀತೆಗಳನ್ನು ಬರೆದ ಕವಿ ಮುಂಡಾಜೆ ರಾಮಚಂದ್ರ ಭಟ್ಟರ ಕೆಲವು ರಚನೆಗಳೂ ನನಗಿಲ್ಲಿ ನೆನಪಾ ಗುತ್ತವೆ. ‘ಅಪ್ಪನು ಮಾಡಿದ ಚೌತಿಯ ಪ್ರತಿಮೆಗೆ ಆನೆಯ ಸೊಂಡಿಲ ಮೊಗವಿತ್ತು…’ ಪದ್ಯ ನೀವು ಕೇಳಿದ್ದೀರಾದರೆ ಅದೂ ಇವರ
ರಚನೆಯೇ. ಕ ವ್ಯಂಜನದ ಕಾಗುಣಿತ ಬಳಸಿ ಬರೆದ ‘ಕರೆವೆನು ನಿನ್ನ ಕಣ್ಮಣಿಯನ್ನ| ಕಾಡಿಗೆ ಕಣ್ಣಿನ ಓ ನವಿಲೇ| ಕಿಟಿಕಿಯೊಳಿಂದ
ಬಾ ಮುದದಿಂದ| ಕೀಟಲೆ ಮಾಡೆನು ನಾ ನಿನಗೆ| ಕುಡಿಯಲು  ಹಾಲು ತರಲೇನ್ ಹೇಳು| ಕೂಗುತ ನಲಿಯುತ ಬಂದುಬಿಡು|
ಕೆಣಕುವುದಲ್ಲ ಮೋಸವಿದಲ್ಲ| ಕೇಕೇ ಗಾನವ ಮಾಡುತಿರು| ಕೈಗಳ ಮುಗಿವೆ ಹಣ್ಗಳನೀವೆ| ಕೊರಳನು ಬಾಗುತ ಬಾ ಬಾ ಬಾ|
ಕೋರಿಕೆಯನ್ನ ನೀ ಸಲಿಸೆನ್ನ| ಕೌತುಕ ಪಡುವೆನು ನಿನಗಾಗಿ| ಕಂದನ ಕರೆಯಿದು ಪ್ರೇಮದ ಕುರುಹಿದು| ಕಃ ಎನ್ನದೆ ಬಾ ಕುಣಿ
ಕುಣಿ’ ಎಂಬ ಅಭಿನಯಗೀತೆ, ಪುಟ್ಟ ಕಂದನೊಬ್ಬ ನವಿಲನ್ನು ಕರೆಯುತ್ತಿರುವುದು ತುಂಬ ಸೊಗಸಾಗಿದೆ.

ಇದೇ ಥರ ಮ-ಬಳ್ಳಿ ದೊಂದು, ಮಗುವಿಗೆ ಸುಪ್ರತ ಹೇಳಿ ಎಚ್ಚರಿಸುವುದಕ್ಕೆ: ‘ಮಲಗದಿರು ಓ ಮ ಗುವೆ ಬೆಳಗಾಯಿತಣ್ಣ| ಮಾಮರದಿ ಕೋಗಿಲೆಯು ಹಾಡುತಿದೆಯಣ್ಣ| ಮಿರಮಿರನೆ ಮಿರುಗುತಲಿ ಸೂರ್ಯನದು ಬಂದ| ಮೀರುತೇರುತ eನ ಕಿರಣಗಳ ತಂದ| ಮುಗುಳುನಗುತಲಿ ಹೂವು ಗಿಡದೊಳರಳುತಿದೆ| ಮೂಡ ಬಾಂದಳದಿ ಹೊಂಬಣ್ಣವೇರುತಿದೆ| ಮೆಲುಕಾಡುತಲಿ ಗೋವು
ಅಂಬೆ ಎನುತಿಹುದು| ಮೇಲೆ ಸುತ್ತಲು ಸೃಷ್ಟಿ ದೇವಿ ನಗುತಿಹಳು| ಮೈಮರೆತು ಯೋಗಿ ನೇಗಿಲೊಳುಳುತಲಿಹನು| ಮೊಸರಿಂದ
ಅಮ್ಮ ತೆಗೆಯುವಳು ಬೆಣ್ಣೆಯನು| ಮೋನದಾ ನಿಶಿಯ ಮಾಯೆಯು ಹರಿದುಹೋಯ್ತು| ಮೌಢ್ಯ ಕಳೆಯುತೆ ಸುಪ್ರ ಭಾತವದೊ ಬಂತು| ಮಂಗಳಾಂಗನ ಲೀಲೆ ನೋಡೆ ಬಲು ಚಂದ| ಮಃದೇವನಿಗೆ ನಮಿಸೋ ಬೆಳಕೆಳೆದು ತಂದ|’ ರಾಮಚಂದ್ರ ಭಟ್ಟರು ಈಗಿಲ್ಲ. ಅವರ ಅಣ್ಣನ ಮಗ, ಈಗ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಅನಂತ ತಾಮ್ಹನಕರ್ ಅವರು ಇದೇ ರೀತಿಯಲ್ಲಿ ಕಾಗುಣಿತ ಬಳ್ಳಿ ಕವಿತೆಗಳನ್ನು ರಚಿಸುತ್ತಾರೆ.

ಕನ್ನಡದ ವರ್ಗೀಯ ಅವರ್ಗೀಯ ವ್ಯಂಜನಗಳ ಬಳ್ಳಿಗಳನ್ನೆಲ್ಲ ಚಂದಚಂದದ ಪದ್ಯಗಳಾಗಿಸುತ್ತಾರೆ. ಒಂದೆರಡು ಸ್ಯಾಂಪಲ್ ನೋಡಿ: ‘ಕನ್ನಡಿ ಮುಂದೆ ನಿಂತಳು ನಾರಿ| ಕಾಣಲು ತನ್ನಯ ಮೊಗವನ್ನು| ಕಿಟಿಕಿಲಿ ಬೀಸುವ ಗಾಳಿಗೆ ಹಾರುವ| ಕೀಟಲೆಯಾ ಮುಂಗುರುಳನ್ನು| ಕುದುರೆಯ ಬಾಲದ ತೆರದಲಿ ಇರುವ| ಕೂದಲ ಬಾಚಲು ಹಣಿಗೆಯಲಿ| ಕೃತಕ ದಂತವದು ಇಲ್ಲವೆ ಇಲ್ಲ| ಕೆನ್ನೆಗೆ ಪೌಡರ್ ಡಬ್ಬಿಯಲಿ| ಕೇಶವು ಸಿಂಗರಗೊಂಡಿತು ಕ್ಷಣದಲಿ| ಕೈಬಳೆಗಳ ದನಿ ಝಣಝಣವು| ಕೊಬ್ಬರಿ ಎಣ್ಣೆಯ ಲೇಪನವಿರಲು| ಕೋಮಲ ತ್ವಚೆಯನು ರಕ್ಷಿಪುದು| ಕೌತುಕ ಇದರಲಿ ಏನೂ ಇಲ್ಲ| ಕಂಗಳ ಕಾಡಿಗೆ ಇಹುದೇ ಅಲ್ಲಾ| ಕಃಹಿ ಅನುಭವ ಬಾರದು ಎಂದೂ| ಮೇಕಪ್ಪದುವು ಮುಗಿದ್ಹೋಯ್ತಲ್ಲ!’ ಇನ್ನೊಂದು, ನಟರಾಜನಿಗೆ ನಮನ: ‘ನಟರಾಜನು ನೀ ನಾಟ್ಯದೇವತೆ| ನಾಗ ಕಂಕಣವ ಧರಿಸಿರುವೆ| ನಿದಿಶ್ವರನಿಹ ನಿನ್ನಯ ಸಖನು| ನೀಲಕಂಠ ನೀ ಎನಿಸಿರುವೆ| ನುಡಿಸುವೆ
ನೀನು ಡಮರುಗವನ್ನು| ನೂಪುರ ಕಾಲಲಿ ಧರಿಸಿರುವೆ| ನೃತ್ಯವು ನಿನ್ನದು ತಾಂಡವ ಎನಿಪುದು| ನೆನೆಸುವೆ ನಿನ್ನನು ಅಡಿಗಡಿಗೆ| ನೇತಾರನು ನೀ ಗಣಗಳ ಗುರುವೇ| ನೈವೇದ್ಯವ ನಿನಗರ್ಪಿಸುವೆ| ನೊಸಲಲಿ ಮೂರನೆ ಕಣ್ಣಿದೆ ನಿನಗೆ| ನೋಡಲಾರೆ
ನಾ ಭಯಪಡುವೆ| ನೌಕರ ನಾನು ನಿನ್ನಯ ಸೇವೆಗೆ| ನಂಜುಂಡನೆ ನಾ ಬಾಗಿರುವೆ| ನಹಿ ಎನ್ನದೆ ನೀ ಎನ್ನ ವಿನಂತಿಗೆ| ನಗುತಲಿ ಅಭಯವ ಕೊಟ್ಟಿರುವೆ|’.

ಮತ್ತೊಂದು, ಗ ಬಳ್ಳಿಯದು, ನನಗೆ ತುಂಬ ಇಷ್ಟವಾದದ್ದು. ಅಕ್ಷರಗಳೊಂದಿಗೆ ಆಟವಾಡುತ್ತಲೇ ಪುಟ್ಟ ಮಗುವಿಗೆ ನೀತಿ ಬೋಧನೆಯ ಸರಕು: ‘ಗಣಪನ ಮೊದಲಲಿ ಸ್ಮರಿಸುತ ನಾನು| ಗಾಯತ್ರಿಯನೂ ಜಪಿಸುವೆನು| ಗಿರಿಜೆ- ಶಂಕರರ ಮನದಲಿ ನಮಿಸುತ| ಗೀತಾಜನಕನ ನೆನೆಯುವೆನು| ಗುರುಗಳು ಕಲಿಸಿದ ವೇದದ ಪಾಠಕೆ| ಗೂಗಲ್ ಏನೂ ಬೇಕಿಲ್ಲಾ|ಗೃಹದಲಿ ಶಾಂತಿಯ ಬಯಸುವೆ ದಿನವೂ| ಗೆಳೆಯರ ಒಳಿತನು ಮರೆಯಲ್ಲಾ| ಗೇಯದಿ ತಾಳವ ಕೈಯಲಿ ತಟ್ಟುತ| ಗೈಯುವೆ ಅನುದಿನ ಭಜನೆಯನು| ಗೊಡ್ಡಾಚಾರದ ವಿಷಯವಿದಲ್ಲ| ಗೋವಿಗೂ ಗ್ರಾಸವ ನೀಡುವೆನು| ಗೌರಿ ಸರಸ್ವತಿ ಲಕ್ಷ್ಮಿಯ ಮೂರ್ತಿಗೆ| ಗಂಧದ ಕಡ್ಡಿಯ ಬೆಳಗುವೆನು| ಗಃ(ಹ)ನ ವಿಚಾರವು ತಲೆಯೊಳಗಿಳಿಯಲು ಅಕ್ಷರಪೂಜೆಯ ಮಾಡುವೆನು|’ನಮ್ಮ ಕನ್ನಡ ಭಾಷೆ, ಅದರ ಅಕ್ಷರಗಳೊಂದಿಗೆ ಆಟದ ಸಾಧ್ಯತೆಗಳೇನು ಕಡಿಮೆಯೇ? ಪೀಟರ್ ಪೈಪರ್‌ಗಿಂತಲೂ ಪರಿಪೂರ್ಣ ಪರಿಮಳವುಳ್ಳ ಪುಷ್ಪಗಳಿವು!