Saturday, 14th December 2024

ಇದು ಪೆಟ್ರೋಲ್ ಕಳ್ಳರ ಕಥೆ

ಶಿಶಿರಕಾಲ

ಶಿಶಿರ್‌ ಹೆಗಡೆ, ನ್ಯೂಜೆರ್ಸಿ

ನೀವು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಈ ಕರಾವಳಿ ಜಿಲ್ಲೆಗಳಲ್ಲಿ ಹುಟ್ಟಿ ಬೆಳೆದವರಾದರೆ ಮೇಳದ ಯಕ್ಷಗಾನವನ್ನು ಬೃಹತ್ ಟೆಂಟ್‌ನಲ್ಲಿ ರಾತ್ರಿ ಇಡೀ ಕೂತು ನೋಡುವ ಒಂದು ಅದ್ಭುತ ಅನುಭವವನ್ನು ಅನುಭವಿಸಿಯೇ ಇರುತ್ತೀರಿ.

ಯಕ್ಷಗಾನದಷ್ಟು ಅಚ್ಚ ಕನ್ನಡ ಬಳಕೆಯ ಕಲೆ ಇನ್ನೊಂದು ಇಲ್ಲವೇ ಇಲ್ಲ. ಆದರೆ ನಮ್ಮ ಹಣೆಬರಹಕ್ಕೆ ಯಕ್ಷಗಾನದಂಥ ಕಲೆ
ಕರ್ನಾಟಕದಲ್ಲಿದೆ ಎನ್ನುವುದೇ ಹಲವು ಜಿಯ ಜನರಿಗೆ ಗೊತ್ತಿಲ್ಲ. ಈಗ ಕಳೆದ ಒಂದು ದಶಕದಲ್ಲಿ ಯಕ್ಷಗಾನಗಳನ್ನು ಬೆಂಗಳೂರು
ಮಹಾನಗರದಲ್ಲಿ ಪ್ರದರ್ಶಿಸಲಾಗುತ್ತದೆ. ಈ ಕಾರಣದಿಂದ ಕ್ರಮೇಣ ಕರಾವಳಿಯೇತರ ಜನರು ಕೂಡ ಯಕ್ಷಗಾನದತ್ತ ತಿರುಗಿ ನೋಡುವ, ಅದನ್ನು ಸವಿಯುವ ಅವಕಾಶ ನಿರ್ಮಾಣವಾಗಿದೆ. ಆದರೆ ನೀವು ಆ ಯಕ್ಷಗಾನ ಮೆಚ್ಚುವ ಜನರ ಸರ್ಕಲ್‌ನಲ್ಲಿದ್ದರೆ ಮಾತ್ರ ಅದು ಸಾಧ್ಯ.

ಅದಿಲ್ಲದಿದ್ದರೆ ಈ ಕಲೆಯ ಪರಿಚಯವೇ ಆಗದೆ ಅದೊಂದು ಸಮಾನಾಂತರ ಜಗತ್ತಿನಲ್ಲಿ ಇದ್ದುಬಿಡುತ್ತೀರಿ. ಈಗ ಎರಡು ದಶಕದ
ಹಿಂದೆ ಯಕ್ಷಗಾನ ಎಂದರೆ ಡೊಳ್ಳು ಕುಣಿತ, ಕಂಸಾಳೆ, ಕರಗ ಹೀಗೆ ಆಚರಣಾ ಕಲೆಗಳ ಸಾಲಿನಲ್ಲಿ ಸೇರಿಸಿ ಒಂದೇ ವಾಕ್ಯದಲ್ಲಿ ಹೇಳಿಬಿಡುವ ಬೃಹಸ್ಪತಿಗಳೇ ನಮ್ಮಲ್ಲಿ ಜಾಸ್ತಿ ಇದ್ದರು. ಯಕ್ಷಗಾನವನ್ನು ಒಮ್ಮೆಯೂ ನೋಡದೇ ಅದು ಹೀಗೆಯೇ ಎಂದು ಅಂದುಕೊಂಡುಬಿಟ್ಟವರೇ ಜಾಸ್ತಿ.

ಅದೇಕೋ ಯಕ್ಷಗಾನದಂಥ ಒಂದು ಶ್ರೀಮಂತ ಕಲೆ ಕರಾವಳಿಯಾಚೆ ಮೈಮುರಿದು ಚಾಚಿಕೊಳ್ಳಲು ಇನ್ನೂ ಕೂಡ
ಸಾಧ್ಯವಾಗಿಲ್ಲ. ಯಕ್ಷಗಾನ ಎಂದರೆ ಭರತನಾಟ್ಯ, ಕೂಚುಪುಡಿ ಹೀಗೆ ನೃತ್ಯ ಕಲೆ ಎನ್ನುವ ಭಾವನೆಯುಳ್ಳ ಅದೊಂದು ದೊಡ್ಡ ವರ್ಗವೇ ಇನ್ನೂ ಕರ್ನಾಟಕದಲ್ಲಿದೆ.

ನಮಗೆಲ್ಲ ರಾಮಾಯಣ, ಮಹಾಭಾರತ, ಪುರಾಣ ಕಥೆಗಳನ್ನು ಹೇಳಿದ್ದೇ ಯಕ್ಷಗಾನ. ನಮ್ಮಲ್ಲಿನ ಜಾತ್ಯತೀತತೆ – ಧರ್ಮಾತೀತತೆ ಯ ಮಸೂರದಲ್ಲಿಯೇ ಎಲ್ಲವನ್ನು ನೋಡುವ ಮೂರ್ಖತನದ ಕಾರಣದಿಂದ ಪುರಾಣ ಮತ್ತು ಐತಿಹಾಸಿಕ ಕಥೆಗಳ ಮೂಲಕ ಪಡೆಯಬಹುದಾದ ಮೌಲ್ಯಕ್ಕೆ ಬ್ರಿಟೀಷರು ಬಿಟ್ಟು ಹೋದ ಎಂಜಲು ಬಾಳೆಯಂತಿರುವ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಜಾಗವಿಲ್ಲ.

ಕೃಷ್ಣನ ವ್ಯಕ್ತಿತ್ವ ಎಂಥದ್ದು, ರಾಮನ ಮೌಲ್ಯಗಳೇನು, ದುಷ್ಟಬುದ್ಧಿ ಯಾರು, ಕೀಚಕ ಎಂಥವನು, ಮಂಥರೆ ಹೃದಯ ಎಂಥದ್ದು, ನಾರದರ ಪುರಾಣದ ಹಾಸ್ಯ ಪಾತ್ರದ ಆಚೆಯ ನೈಜತೆ ಏನು ಎಂಬೆಲ್ಲ ವಿಚಾರಗಳು ಪಠ್ಯೇತರವಾಗಿಯೇ ತಿಳಿಯ ಬೇಕು. ಶಿಕ್ಷಣದಿಂದ ಆಚೆ ಕಲಿಯಬಹುದಾದ ಮೌಲ್ಯಗಳು ಎಲ್ಲರಿಗೂ ಲಭ್ಯವಾಗದ ಹಣೆಬರಹ ನಮ್ಮದು. ಇದೊಂದು ದೊಡ್ಡ ನಷ್ಟ. ಇನ್ನು ಮಹಾಭಾರತ ರಾಮಾಯಣಗಳ ಉಪಕಥೆಗಳನ್ನು ಮೂಲ ರೂಪದಲ್ಲಿ ತಿಳಿಯಲು ವಿಶೇಷ ಪ್ರಯತ್ನ ಮಾಡಿದರೆ ಮಾತ್ರ ಸಾಧ್ಯ. ಈ ಉಪಕಥೆಗಳನ್ನು ಈಗೀಗ ಧಾರಾವಾಹಿ ರೂಪದಲ್ಲಿ ಕೆಲ ವಾಹಿನಿಗಳು ತರುತ್ತಿದ್ದರೂ ಅಲ್ಲಿ ಮನರಂಜನೆ, ಅರಮನೆಯ ವಿಜೃಂಭಣೆ, ರಾಜನ ದೇಹದಾರ್ಢ್ಯ, ರಾಣಿಯ ಪೋಷಾಕು, ಲಿಪ್‌ಸ್ಟಿಕ್‌ಗಳಿಗೆ ಮೊದಲ ಆದ್ಯತೆ.

ಇಲ್ಲಿ ಪಾತ್ರ – ವ್ಯಕ್ತಿತ್ವಗಳ ಮೂಲ ಆಶಯ, ಗುಣ ಇವೆಲ್ಲ ಅಪಭ್ರಂಷ ವಾಗುವುದೇ ಹೆಚ್ಚು. ಇಂದು ಪೌರಾಣಿಕ ಧಾರಾವಾಹಿ ಗಳಲ್ಲಿ ಹೆಚ್ಚಿನವು ಒಂದು ಸಾಲಿನ ಕಥೆಯನ್ನು ಅರ್ಧಂಬರ್ಧ ತಿಳಿದು ಹಿಗ್ಗಿಸುವ ಕಚಡಾ ಕೆಲಸಗಳು. ಇದರಿಂದ ಕಥೆಯೇ ಗೊತ್ತಿಲ್ಲದವರಿಗೆ ತಪ್ಪು ಕಥೆ ಮತ್ತು ಪಾತ್ರ ಪರಿಚಯವಾಗಿಬಿಡುತ್ತದೆ. ಇಂಥ ಅಪದ್ಧ ರೀತಿಯಲ್ಲಿ ನಮ್ಮ ಪುರಾಣ ಕಥೆಗಳನ್ನು ತಿಳಿದು – ಆಮೇಲೆ ರಾಮ ಜನರ ಮಾತನ್ನು ಕೇಳಿ ಸೀತೆಯನ್ನು ಅಗ್ನಿಪರೀಕ್ಷೆಗೆ ಒಡ್ಡಿದ, ಹಾಗಾಗಿ ಆತ ಪರಿಪೂರ್ಣನಾಗುವುದು ಹೇಗೆ?’ ಎಂಬೆಲ್ಲ ಬಾಲಿಶ ಪ್ರಶ್ನೆಗಳನ್ನು ಕೇಳುವ ತಳಿಯನ್ನು ಹುಟ್ಟಿ ಹಾಕುತ್ತಿದ್ದೇವೆ.

ಆದರೆ ಯಕ್ಷಗಾನದಲ್ಲಿ ಮೂಲ ಪರಿಕಲ್ಪನೆ, ಧಾತುವಿಗೆ ಹಾನಿಯಾಗುವ, ಹಾನಿಮಾಡುವ ಅವಕಾಶ ಕಡಿಮೆ. ಅಲ್ಲಿ ಯಕ್ಷಗಾನದ ಪದ್ಯದಂತೆ ಪಾತ್ರ ವ್ಯವಹರಿಸಬೇಕು – ಅದನ್ನು ನಿಯಂತ್ರಿಸುವ ಕೆಲಸ ಭಾಗವತರದು. ಹಾಗಂತ ಅಲ್ಲಿ ಕೂಡ ನಾನ್ಸೆನ್ಸ್ ಗಳಿಲ್ಲ ಎಂದಲ್ಲ. ಆದರೆ ಪಾತ್ರದ ನೈಜತೆಯಿಂದ ತೀರಾ ಆಚೀಚೆಯಾಗಲು ಅವಕಾಶ ಕಡಿಮೆ. ಯಕ್ಷಗಾನಕ್ಕೆ ಶಾಸವಿದೆ, ನೀತಿ ನಿಯಮ ಗಳಿವೆ. ಯಕ್ಷಗಾನ ಕೇವಲ ಮನೋರಂಜನೆಯಷ್ಟೇ ಆಗಿರದೆ ಅದರಾಚೆ ಅದೆಷ್ಟೋ ಚರ್ಚೆ- ಜಿಜ್ಞಾಸೆಗಳನ್ನು ಹುಟ್ಟುಹಾಕುವ ಕಲೆ.

ಯಕ್ಷಗಾನ ಕುಟುಂಬದಲ್ಲಿ ಹುಟ್ಟಿ ಬೆಳೆದದ್ದರಿಂದಲೋ ಏನೋ, ಮೊದಲಿನಿಂದಲೂ ಯಕ್ಷಗಾನದಲ್ಲಿ ಕ್ಲಾಸ್ಸಿಕ್ ಪುರಾಣ ಕಥೆಗಳನ್ನು ನೋಡುವುದೆಂದರೆ ಅದೊಂದು ವಿಶೇಷ ಅನುಭವ. ಕಥೆ ಗೊತ್ತಿದ್ದರೂ ಪುನಃ ಪುನಃ ಅದನ್ನು ನೋಡುವುದಕ್ಕೆ ಮುಂದಾಗುವುದು ಅಲ್ಲಿರುವ ಮೌಲ್ಯದ ಕಾರಣದಿಂದ. ಕಲೆಯೊಂದನ್ನು ಶಾಸ್ತ್ರೀಯವಾಗಿ ಕಲಿತು ಇನ್ನೊಬ್ಬರನ್ನು ನೋಡು ವಾಗ ಇನ್ನೊಂದಿಷ್ಟು ಆಯಾಮಗಳು ನಮ್ಮೆದುರಿಗೆ ತೆರೆದುಕೊಳ್ಳುತ್ತವೆ.

ಈ ರಾತ್ರಿಯಿಡೀ ಇರುತ್ತಿದ್ದ ಯಕ್ಷಗಾನ ನೋಡಲು ಸಂಜೆ ಬೇಗ ಮನೆಯಲ್ಲಿ ಊಟ ಮಾಡಿ ಬೈಕ್ ಹತ್ತಿ ಯಕ್ಷಗಾನ ಟೆಂಟ್ ಹಾಕಿರುವ ಮೈದಾನಕ್ಕೆ ಹೋಗುವುದು ಒಂದು ಸಂಭ್ರಮ.

ಟೆಂಟ್ ಯಕ್ಷಗಾನ ಪರಿಚಯವಿಲ್ಲದವರಿಗೆ: ಯಕ್ಷಗಾನದ ಟೆಂಟ್ ಎಂದರೆ ಟೆಂಟ್ ಸಿನೆಮಾ ಪ್ರಮಾಣದ್ದಲ್ಲ. ನಾಲ್ಕೆ ದು ನೂರು ಮಂದಿ ಕೂರುವಷ್ಟು ದೊಡ್ಡ ಮೈದಾನದಲ್ಲಿ ಹಾಕಿದ ಟೆಂಟ್‌ಗಳು. ಅಲ್ಲಿ ಬೈಕ್ ಪಾರ್ಕ್ ಮಾಡಿ, ಸೀಟ್ ಹಿಡಿದು ಕುಳಿತುಕೊಳ್ಳುವುದು, ಮಧ್ಯೆ ಬೋರ್ ಎನಿಸುವ ಕಥೆಯ ಘಟ್ಟದಲ್ಲಿ ಹೊರಗಡೆ ಬಂದು ನಡು ರಾತ್ರಿ ಬಜ್ಜಿ, ಬೋಂಡಾ ತಿನ್ನುತ್ತ, ರಾತ್ರಿ ಚಳಿಯ ನಡುವೆ ಚಹಾ ಹೀರುವುದು ಇವೆಲ್ಲ ಯಕ್ಷಗಾನದ ಪ್ಯಾಕೇಜಿನ ಜೊತೆ ಬರುವ ಮೋಜುಗಳು.

ಹೀಗೆ ಯಕ್ಷಗಾನ ನೋಡುವಾಗ ದೇವಸ್ಥಾನದಲ್ಲಿ ದೇವರಿಗೆ ಕೈ ಮುಗಿಯುವಾಗ ಹೇಗೆ ಒಮ್ಮೊಮ್ಮೆ ಚಪ್ಪಲಿ ಯಾರಾದರೂ
ಕದ್ದರೇನೋ ಎಂದು ಮನಸ್ಸು ಹೊರಳುವಂತೆ ಹೊರಳುತ್ತಿದ್ದುದು ನಾವು ತಂದ, ಹೊರಗೆ ಗುಂಪಿನಲ್ಲಿ ನಿಲ್ಲಿಸಿಟ್ಟ ಬೈಕ್‌ನತ್ತ.
ಬೈಕ್ ಕಳ್ಳತನವಾಗುವ ಸೀನ್ ಇರಲಿಲ್ಲ. ಬದಲಿಗೆ ಶೀರ್ಷಿಕೆ ಓದಿದ ಹಿನ್ನೆಲೆಯಲ್ಲಿ ನೀವು ಗ್ರಹಿಸಿದಂತೆ ಪೆಟ್ರೋಲ್ ಕಳ್ಳತನ ವಾಗುವ ಹೆದರಿಕೆಯಿಂದ. ಆಗ ನನ್ನ ಹತ್ತಿರವಿದ್ದದ್ದು 2 ಸ್ಟ್ರೋಕ್ ಸುಜುಕಿ ಬೈಕ್.

ಬಕಾಸುರ ಸಾದೃಶ ಪೆಟ್ರೋಲ್ ಕುಡಿಯುತ್ತಿದ್ದ ಬೈಕ್‌ಗೆ ಎಷ್ಟು ಇಂಧನವಿದ್ದರೂ ಕಡಿಮೆಯೇ. ಚಿಕ್ಕ ತಿರುಗಣೆ / ರೆಸರ್ವ್ ನೋಬ್‌ನ ಮೇಲಿರುವ ಚಿಕ್ಕ ಪೈಪ್ ಅನ್ನು ಎಳೆದು ಬಾಟಲಿಗೆ ಬಿಟ್ಟರೆ ಟ್ಯಾಂಕಿನಲ್ಲಿರುತ್ತಿದ್ದ ಅರ್ಧ ಚಂಬಿನಷ್ಟು ಪೆಟ್ರೋಲ್ ಸರಾಗವಾಗಿ ಕಡಿಯಬಹುದಿತ್ತು. ಯಕ್ಷಗಾನಕ್ಕೆ ಹೋದಾಗ ಇದೊಂದು ದೊಡ್ಡ ರಗಳೆ. ಬೈಕ್‌ನಲ್ಲಿನ ಪೆಟ್ರೋಲ್ ಕಳ್ಳತನ ವಾಯಿತು ಎಂದರೆ ಬೆಳಗಿನ ಜಾವ ಮನೆಗೆ ಹತ್ತೆಂಟು ಮೈಲಿ ತಳ್ಳಿಕೊಂಡೇ ಹೋಗಬೇಕು.

ಇಲ್ಲದಿದ್ದರೆ ಅಷ್ಟು ಬೆಳಗ್ಗೆ ಪೆಟ್ರೋಲ್ ಬಂಕ್ ತೆರೆಯುತ್ತಿರಲಿಲ್ಲ. ಹಾಗಾಗಿ ಬಂಕ್ ತೆರೆಯುವವರೆಗೆ ಅಲ್ಲಿಯೇ ಕೂತು ಪೆಟ್ರೋಲ್
ತುಂಬಿಸಿಕೊಂಡು ಮನೆ ಮುಟ್ಟಬೇಕು. ಲೀಟರಿಗೆ ನಲವತ್ತು ರುಪಾಯಿಯ ಕಾಲದಲ್ಲಿ ಕಾಲು ಲೀಟರ್ ಕದಿಯುತ್ತಿದ್ದ ಕಳ್ಳ
ಅದೇನು ಸಾಧಿಸುತ್ತಿದ್ದನೋ ಗೊತ್ತಿಲ್ಲ. ಈ ಪೆಟ್ರೋಲ್ ಕಡಿಯುವ ದರಿದ್ರ ಹಿಡಿದ ಕಳ್ಳ ಯಾರು, ಅವನೇಕೆ ಬೇರೆ ಮೇಲ್ದರ್ಜೆಯ ಕಳ್ಳತನ ಮಾಡಬಾರದು ಎಂದು ಹಲವು ಬಾರಿ ಪ್ರಶ್ನಿಸಿಕೊಂಡದ್ದಿದೆ.

ನನಗಂತೂ ಹೀಗೆ ಪೆಟ್ರೋಲ್ ಕಳ್ಳತನದ ಸಣ್ಣ ಪರಿಚಯವಾದದ್ದು ಹೀಗೆ. ನಿಮಗೂ ಕೂಡ ಪೆಟ್ರೋಲ್ ಕಳ್ಳತನ ಜಾತ್ರೆಯ ಅಥವಾ ಇನ್ನೆ ಅನುಭವಕ್ಕೆ ಬಂದಿರಬಹುದು. ಪೆಟ್ರೋಲ್ ಅನ್ನು ದ್ರವ ಚಿನ್ನ ಅಂತ ಕರೆಯೋದು. ಈಗೀಗ ತುಂಬಾ ತುಟ್ಟಿಯ ವಸ್ತುವಾಗಿದ್ದರೂ ಕದಿಯುವಷ್ಟು ಬೆಲೆಯುಳ್ಳದ್ದಲ್ಲ ಎನ್ನುವ ಅನಿಸಿಕೆ. ಅಲ್ಲದೇ ಹೀಗೆ ಪೆಟ್ರೋಲ್ ಕದ್ದದ್ದನ್ನು ಹೆಚ್ಚೆಂದರೆ
ಅವರ ಬೈಕ್‌ಗೆ ಹಾಕಿ ಓಡಿಸಬಹುದು ಅಷ್ಟೇ. ಬೈಕ್ ಇಟ್ಟುಕೊಂಡವ ಇಂತಹ ಚಿಲ್ಲರೆ ಕೆಲಸಕ್ಕೆ ಕೈ ಹಾಕುವ ಪ್ರಮಾಣ ಕಡಿಮೆ. ಅದನ್ನು ಅಷ್ಟು ಸುಲಭದಲ್ಲಿ ಶೇಖರಿಸಿ ಇನ್ನೊಬ್ಬರಿಗೆ ಮಾರುವುದು ಕಷ್ಟ.

ಅಲ್ಲದೇ ಕದ್ದು ಕದ್ದು ಎಷ್ಟು ಕದಿಯಬಹುದು? ನಾನೇನಾದರೂ ಕಳ್ಳನಾಗಿದ್ದರೆ ಪೆಟ್ರೋಲ್ ಅನ್ನು ಕದಿಯಲು ಪರಿಗಣಿಸುತ್ತಿರ
ಲಿಲ್ಲವೇನೋ. ಕಳ್ಳತನಕ್ಕೆ ಪೆಟ್ರೋಲ್ ಪೂರೈಸುವ ಮಾಲಲ್ಲ. ಲೀಟರಿಗೆ ನೂರು ರುಪಾಯಿ ಬೆಲೆಯಿದ್ದರೂ ಲಾಜಿಸ್ಟಿಕ್ ಕಾರಣ ದಿಂದ ಪೆಟ್ರೋಲ್ ಒಂದು ಪೂರ್ಣ ಪ್ರಮಾಣದ ಕಳ್ಳನಿಗೆ ಕದಿಯುವ ಅಥವಾ ಬದುಕು ಕಟ್ಟಿಕೊಡುವ ಪ್ರಮಾಣದ ವಸ್ತುವಾಗ ಲಾರದು ಅಲ್ಲವೇ? ಅದಲ್ಲದೆ ಇಂದಿನ ಹೊಸ ಬೈಕ್‌ಗಳಲ್ಲಿ ಪೆಟ್ರೋಲ್ ಕದಿಯುವುದು ಕೂಡ ಕಷ್ಟವಂತೆ ಅಥವಾ ಸಾಧ್ಯವೇ ಇಲ್ಲವಂತೆ. ಪೆಟ್ರೋಲ್ ಬಂಕ್ ದರೋಡೆ ಮಾಡುವ ಕಳ್ಳರಿದ್ದಾರೆ, ಅವರದ್ದು ಓಕೆ – ಆದರೆ ಪೆಟ್ರೋಲ್ ಒಂದು ಪೂರ್ಣ ಕಳ್ಳತನದ ಕಸುಬಿಗೆ ಪರಿಗಣಿಸುವುದು ಕಷ್ಟ ಬಿಡಿ. ಪೆಟ್ರೋಲ್ ಏನಿದ್ದರೂ ತಮಾಷೆಗೆ ಕದಿಯಬಹುದಪ್ಪಾ !!

ನಾನು ಇವತ್ತು ಹೇಳಲು ಹೊರಟಿರುವುದು ಈ ಚಿಂದಿ ಪೆಟ್ರೋಲ್ ಕಳ್ಳರ ಕಥೆಯಲ್ಲ. ಈ ಪೆಟ್ರೋಲ್ ಸುತ್ತಲಿನ ಹಣದ ಕಳ್ಳತನದ
ಕಥೆಯೂ ಇದಲ್ಲ. ಇದು ಪೆಟ್ರೋಲ್ ಅನ್ನು ಕದಿಯುವ ಪೂರ್ಣ ಪ್ರಮಾಣದ ಕಳ್ಳರ ಕಥೆ. ಯಾವುದೇ ದೇಶದಲ್ಲಿ ಪೆಟ್ರೋಲಿಯಂ
ಉತ್ಪಾದನೆ, ಶುದ್ಧೀಕರಣ, ಸಾಗಣೆ ಸಾಮಾನ್ಯವಾಗಿ ಒಂದೋ ಸರಕಾರೀ ಸ್ವಾಮ್ಯದಲ್ಲಿರುತ್ತದೆ. ಇಲ್ಲವೇ ಖಾಸಗಿ ಸಂಸ್ಥೆಗಳ
ಕೈಯಲ್ಲಿದ್ದರೂ ಅದು ಪರೋಕ್ಷವಾಗಿ ಸರಕಾರಿ ಹಿಡಿತದಲ್ಲಿರುತ್ತದೆ.

ಪೆಟ್ರೋಲ್ ಉತ್ಪಾದಿಸುವ ಬಹುತೇಕ ರಾಷ್ಟ್ರಗಳಲ್ಲಿ ಈ ನೈಸರ್ಗಿಕ ಸಂಪತ್ತು ಸರಕಾರಿ ಸ್ವತ್ತು. ಇಲ್ಲವೇ ಅಲ್ಲಿನ ಸರಕಾರ ತೈಲ ಬಾವಿಗಳನ್ನು ಕಂಪನಿಗಳಿಗೆ ಲೀಸ್‌ನಲ್ಲಿ ಯಥೇಚ್ಛ ಹಣ ಪಡೆದು ನೀಡಿರುತ್ತದೆ. ತೈಲೋತ್ಪಾದನೆಯ ಮುಂಚೂಣಿಯಲ್ಲಿರುವ ಸೌದಿ ಮೊದಲಾದ ರಾಷ್ಟ್ರಗಳಲ್ಲಿ ತೈಲ ಕಂಪನಿಗಳನ್ನು ಸರಕಾರವೇ ನಡೆಸುತ್ತಿರುತ್ತದೆ. ಸೌದಿ Aramco ಆದಾಯದ ಲೆಕ್ಕದಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಕಂಪನಿ. ಈ ಕಂಪನಿಯ ಹಿಂದಿನ ವರ್ಷದ ಆದಾಯ 230 ಬಿಲಿಯನ್ ಡಾಲರ್.

ಇದನ್ನು ರುಪಾಯಿಯಲ್ಲಿ ಇಂದಿನ ಲೆಕ್ಕದಲ್ಲಿ ಹೇಳುವುದಾದರೆ 1.6 ಕೋಟಿ ಕೋಟಿ ರುಪಾಯಿ (16,825,650,000,000). ಸೌದಿ, ರಷ್ಯಾ, ಇರಾಕ್, ಕೆನಡಾ, ಅಮೆರಿಕಾ ಮೊದಲಾದ ಘಟಾನುಘಟಿ ದೇಶದಲ್ಲಿ ತೈಲೋತ್ಪಾದನೆ ಯನ್ನು ಸರಕಾರ ತೀರಾ ಹತೋಟಿಯಲ್ಲಿಟ್ಟು ನೋಡಿಕೊಳ್ಳುತ್ತದೆ. ಉಳಿದ ತೈಲ ಉತ್ಪಾದನೆ ಮಾಡದ ದೇಶಗಳು ಸರಬರಾಜು, ಶುದ್ಧೀಕರಣ ಮತ್ತು ಬೆಲೆ ನಿಗದಿಪಡಿಸುವುದು ಮೊದಲಾದವುಗಳನ್ನು ತನ್ನ ಅಂಕೆಯಲ್ಲಿಟ್ಟುಕೊಂಡಿರುತ್ತದೆ. ಯಾವುದೇ ದೇಶದಲ್ಲಿ ತೈಲ ಎಂದರೆ ಅದು ಬಿಲಿಯನ್ ಗಟ್ಟಲೆ ಮೊತ್ತದ ವ್ಯವಹಾರ ಮತ್ತು ಆದಾಯದ ಮೂಲ. ಹಾಗಾಗಿ ಈ ತೈಲ ವ್ಯವಸ್ಥೆಯನ್ನು ತನ್ನ ಅಂಕೆಯಲ್ಲಿಟ್ಟು ಕೊಳ್ಳುವುದು ಎಲ್ಲ ದೇಶಗಳಿಗೂ ತೀರಾ ಅಗತ್ಯ.

ಆದರೆ ಎಲ್ಲಿ ಅರಾಜಕತೆ ಇದೆಯೋ ಅಲ್ಲ ಹೀಗಿಲ್ಲ. ಉದಾಹರಣೆಗೆ ಮೆಕ್ಸಿಕೋ. ಮೆಕ್ಸಿಕೋ ದೇಶದ ಪೆಟ್ರೋಲಿಯಂ ಕಂಪನಿ ಪೆಟ್ರೋಲಿಯಸ್ ಮೆಹಿಕಾನೋ ಜಗತ್ತಿನ ಅತಿ ದೊಡ್ಡ ಪೆಟ್ರೋಲಿಯಂ ಕಂಪನಿಗಳಲ್ಲಿ ಒಂದು. ಇದು ಸರಕಾರಿ ಸ್ವಾಮ್ಯದ
ಕಂಪನಿ. ಮೆಕ್ಸಿಕೋ ದೇಶದಲ್ಲಿ ಪೆಟ್ರೋಲ್ ಅತೀ ತುಟ್ಟಿಯ ವಸ್ತು. ಎಷ್ಟು ತುಟ್ಟಿಯೆಂದರೆ ಒಂದು ಗ್ಯಾಲನ್ (3.78 ಲೀಟರ್)
ಖರೀದಿಸಬೇಕೆಂದರೆ ಅಲ್ಲಿನ ಕನಿಷ್ಠ ದಿನಗೂಲಿ ಭತ್ಯೆ ಪಡೆಯುವ ವ್ಯಕ್ತಿ ಒಂದಿಡೀ ದಿನ ಕೆಲಸಮಾಡಬೇಕಾಗುತ್ತದೆ.

ಇದರರ್ಥ ಜನಸಾಮಾನ್ಯನಿಗೆ, ಮಧ್ಯಮ ವರ್ಗದವರಿಗೆ ಪೆಟ್ರೋಲ್ ಗಗನ ಕುಸುಮ. ಈ ಕಾರಣಕ್ಕೆ ಪೆಟ್ರೋಲ್ ಕದಿಯುವ ಕೆಲಸ
ಮೆಕ್ಸಿಕೋದಲ್ಲಿ ಜಾಸ್ತಿ. ಅಲ್ಲಿ ಈ ಕದ್ದ ತೈಲವನ್ನು ಖರೀದಿಸುವವರಿದ್ದಾರೆ. ಏಕೆಂದರೆ ಹೀಗೆ ಕದ್ದ ತೈಲ ಅಲ್ಲಿನ ಸರಕಾರ
ಮಾರಾಟ ಮಾಡುವ ತೈಲಕ್ಕಿಂತ ನಾಲ್ಕು ಪಟ್ಟು ಅಗ್ಗ – ಎಷ್ಟೆಂದರೂ ಕದ್ದ ಮಾಲು. ಈ ಕದ್ದ ಪೆಟ್ರೋಲ್‌ಗೆ ಅಂದು ವಿಶೇಷ ಹೆಸರಿದೆ – ವಾಚಿಕೊ (ಬಾಚಿಕೊ ತದ್ಭವ ರೂಪವಲ್ಲ). ಮೆಕ್ಸಿಕೋದಲ್ಲಿ ಈ ಪೆಟ್ರೋಲ್ ಕದಿಯುವ ಮತ್ತು ಮಾರಾಟ ಮಾಡುವ ಜಾಲ ಬಹಳ ಕಾಲದಿಂದಿದ್ದರೂ ಬಹಳಷ್ಟು ವರ್ಷ ಈ ಸಮಸ್ಯೆ ನಿಯಂತ್ರಣದಲ್ಲಿತ್ತು.

ಇದೊಂದು ನಮ್ಮಲ್ಲಿನಂತೆ ಪಿಟಿ ಕ್ರೈಮ್ ಆಗಿತ್ತು. ಆದರೆ ಈಗ ಒಂದು ದಶಕದಿಂದೀಚೆ ಪೆಟ್ರೋಲ್ ಬೆಲೆ ಇನ್ನಷ್ಟು ಏರಿದ
ಕಾರಣದಿಂದ, ನಿಧಾನವಾಗಿ ಅಲ್ಲಿನ ಡ್ರಗ್ ಮಾಫಿಯಾ ಈ ಪೆಟ್ರೋಲ್ ಕದ್ದು ಮಾರಾಟಮಾಡುವ ದಂಧೆಗೆ ಇಳಿದವು. ಸಣ್ಣಗಿದ್ದ
ಜನಸಾಮಾನ್ಯರ ಗಾಡಿಗಳಿಂದ ಕದ್ದು ಅದನ್ನು ಬಜಾರಿನಲ್ಲಿ ಮಾರುತ್ತಿದ್ದ ವಾಚಿಕೊ ದಂಧೆ ಹೊಸ ರೂಪ ಪಡೆದುಕೊಂಡಿತು.
ಕ್ರಮೇಣ ಡ್ರಗ್ ಕಾರ್ಟೆಲ್‌ಗಳು ದೇಶದ ಉದ್ದಗಲ ಚಾಚಿಕೊಂಡಿದ್ದ ಪೆಟ್ರೋಲಿಯಂ ಸರಬರಾಜು ಪೈಪ್‌ಗಳಿಗೆ ರಂಧ್ರ ಮಾಡಿ ಪೆಟ್ರೋಲ್ ಕದಿಯಲು ಶುರುಮಾಡಿದವು.

ಹೀಗೆ ಕಡಿಯುವುದು, ಮಾರಾಟ ಮಾಡುವುದು ಎಲ್ಲ ತೀರಾ ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳುವ ಖದೀಮರ ವ್ಯವಸ್ಥೆ ನಿರ್ಮಾಣವಾಯಿತು. ಮೆಕ್ಸಿಕೋದಲ್ಲಿ ಡ್ರಗ್ ಮಾಫಿಯಾ ಅತ್ಯಂತ, ಅಂದಾಜಿಸಲಾಗದಷ್ಟು ಬಲಿಷ್ಠ. ಅಲ್ಲಿನ ಭ್ರಷ್ಟ ವ್ಯವಸ್ಥೆಯಿಂದಾಗಿ ಈ ಹಗಲು ದರೋಡೆ ಅವ್ಯಾಹತವಾಗಿ ನಡೆಯಿತು – ಇಂದಿಗೂ ನಡೆಯುತ್ತಲೇ ಇದೆ. ಇದರಿಂದ ಅಲ್ಲಿನ ವ್ಯವಸ್ಥೆ ಅದೆಷ್ಟು ಬಿಗಡಾಯಿಸಿತು ಎಂದರೆ ಅಲ್ಲಿನ ಕಾನೂನಾತ್ಮಕ ಪೆಟ್ರೋಲ್ ಮಾರುವ ಬಂಕ್‌ಗಳು ಖಾಲಿ ಬಿದ್ದವು. ಜನರೆಲ್ಲ ವಾಚಿಕೊ – ಕದ್ದ ಪೆಟ್ರೋಲ್ ಅನ್ನು ಖರೀದಿಸಲು ಶುರುಮಾಡಿದರು.

ಆಮೇಲೆ ನಿಧಾನವಾಗಿ ಈ ಕದ್ದ ಪೆಟ್ರೋಲ್ ಪ್ರಮಾಣ ಹೆಚ್ಚು ಉಳಿಯಲು ಶುರುವಾಯಿತು. ಕಳ್ಳತನ ಸ್ಥಳೀಯ ಅವಶ್ಯಕತೆ ಯನ್ನು ಮೀರಿತು. ಆಗ ಈ ಮಾಫಿಯಾಗಳು ಫೇಕ್ ಎಕ್ಸ್ಪೋರ್ಟ್ ಕಂಪನಿಗಳನ್ನು ತೆರೆದವು. ಆ ಮೂಲಕ ಹೀಗೆ ಕದ್ದ ಪೆಟ್ರೋಲ್ ಅನ್ನು ಹಡಗಿನಲ್ಲಿ ತುಂಬಿಸಿಕೊಂಡು ವಿದೇಶಗಳಿಗೆ ಎಕ್ಸ್ಪೋರ್ಟ್ ಮಾಡಲು ಶುರುಮಾಡಿದವು. ಅಲ್ಲಿನ ಅರಾಜಕತೆಯ ಪ್ರಮಾಣವನ್ನು ಇದರಿಂದ ಗ್ರಹಿಸಬಹುದು. ಈ ಮೆಕ್ಸಿಕೋ ದೇಶದ ಕಾಳದಂಧೆ ಅದೆಷ್ಟು ದೊಡ್ಡದು ಎಂದರೆ ಈ ರೀತಿ ಪೆಟ್ರೋಲ್ ರಫ್ತು ಮಾಡುವ ಮಾಫಿಯಾ ಕಟ್ಟಿ ನಿಲ್ಲಿಸಿದ ಒಂದು ಕಂಪನಿ ಮೆಕ್ಸಿಕೋದ ದೊಡ್ಡ ದೊಡ್ಡ ಕಂಪನಿಗಳ ಸಾಲಿನಲ್ಲಿ ನಿಲ್ಲುತ್ತದೆ. ಈ ಮಾಫಿಯಾಗಳು ಇಂದು ಹಲವು ಕಂಪನಿಗಳನ್ನು ಹೊಂದಿವೆ, ಅವರ ಬಳಿ ಸ್ವಂತದ ಹಡಗುಗಳಿವೆ.

ಈ ಕಂಪನಿಗಳು ಜಗತ್ತಿನ ಉಳಿದ ಕೆಲವು ದೇಶಗಳ ಸರಕಾರಗಳೊಂದಿಗೆ ವ್ಯವಹಾರ ಕುದುರಿಸಿ ತೈಲವನ್ನು ರಫ್ತು ಮಾಡುತ್ತವೆ. ಇಂದು ಈ ರೀತಿ ಕದ್ದ ಮೆಕ್ಸಿಕನ್ ಪೆಟ್ರೋಲ್ ಜಗತ್ತಿನಾದ್ಯಂತ ಬೇರೆ ಬೇರೆ ರಾಷ್ಟ್ರಗಳಿಗೆ ಕಾನೂನುಬದ್ಧ ವೆನ್ನುವಂತೆ ಸರಬರಾಜು
ಮಾಡಲಾಗುತ್ತಿವೆ. ಈ ದೇಶಗಳಿಗೆ ಇದು ಕದ್ದ ಪೆಟ್ರೋಲ್ ಎನ್ನುವ ಅನುಮಾನ ಕೂಡ ಬರದಂತೆ.

ಪೆಟ್ರೋಲ್ ಬೆಲೆ ಇತೀಚೆಗೆ ಇನ್ನಷ್ಟು ಏರಿದ್ದರಿಂದ ಈ ಕಳ್ಳ ವ್ಯವಹಾರವನ್ನು ಮೆಕ್ಸಿಕನ್ ಮಾಫಿಯಾ ಇನ್ನಷ್ಟು ಇನ್ನಷ್ಟು
ಹಿಗ್ಗಿಸಿಕೊಂಡಿವೆ. ಇವು ಕದ್ದ ಪ್ರಮಾಣವನ್ನು ಗ್ರಹಿಸಲು ಒಂದು ಚಿಕ್ಕ ಲೆಕ್ಕವನ್ನು ಕೊಡುವುದಾದರೆ – 2016ರಲ್ಲಿ ಒಂದು ಲಕ್ಷ ಕೋಟಿ ರುಪಾಯಿ, 2017 ರಲ್ಲಿ 1.7 ಲಕ್ಷ ಕೋಟಿ ಮತ್ತು 2018 ರಲ್ಲಿ 2.5 ಲಕ್ಷ ಕೋಟಿ ರುಪಾಯಿ ಇದು ಈ ಮೆಕ್ಸಿಕನ್ ಮಾಫಿಯಾ ಕದ್ದ ಪೆಟ್ರೋಲ್‌ನ ಮೊತ್ತ.

2019ರಲ್ಲಿ ಮೆಕ್ಸಿಕೋದಲ್ಲಿ ಕಳ್ಳತನವಾದ ಪೆಟ್ರೋಲ್ ಸರಾಸರಿ ಪ್ರತೀ ದಿನ 65 ಕೋಟಿ ರುಪಾಯಿ. ಇಷ್ಟೊಂದು ಪ್ರಮಾಣ ದಲ್ಲಿ ಹಗಲು ದರೋಡೆಯಾಗುತ್ತಿದೆ ಎಂದಾದರೆ ಅಲ್ಲಿನ ಸರಕಾರ ಏನು ಮಾಡುತ್ತಿದೆ ಎನ್ನುವ ಪ್ರಶ್ನೆ ಸಹಜ. ಅಲ್ಲಿ ಆಗಿ ಹೋದ ಅದೆಷ್ಟೋ ಅಧ್ಯಕ್ಷರುಗಳು ಇದನ್ನು ತಡೆಯಲು ಪ್ರಯತ್ನಿಸಿದರೂ ಇದು ಸಾಧ್ಯವಾಗಲಿಲ್ಲ. ಈಗಿನ ಅಧ್ಯಕ್ಷ ಆಂಡ್ರೆಸ್ ಒಬ್ರಾರ್ದೊ 2018ರಲ್ಲಿ ಇಂಥದ್ದೇ ಸಾಹಸಕ್ಕೆ ಕೈ ಹಾಕಿದ್ದ. ಆತ ಈ ಪೈಪ್‌ಲೈನ್‌ಗಳಲ್ಲಿ ಹರಿಯುವ ಪೆಟ್ರೋಲ್ ಅನ್ನು ಒಂದು ದಿನ
ಸಂಪೂರ್ಣವಾಗಿ ನಿಲ್ಲಿಸಿಬಿಟ್ಟ. ಇನ್ನು ಮುಂದೆ ಪೆಟ್ರೋಲ್ ಪೈಪ್‌ನಲ್ಲಿ ಹರಿಯುವುದೇ ಇಲ್ಲ ಎಂದು ಘೋಷಿಸಿ ಬಿಟ್ಟ.

ಟ್ರಕ್ ಗಳಲ್ಲಿ, ರೈಲುಗಳಲ್ಲಿ ಮಾತ್ರ ಪೆಟ್ರೋಲ್ ಸರಬರಾಜಾಗುವಂತೆ ಆಜ್ಞಾಪಿಸಿದ. ಇದರಿಂದ ಮೆಕ್ಸಿಕೋದಲ್ಲಿ ಹಣದುಬ್ಬರ ರಾತ್ರಿ ಬೆಳಗಾಗುವುದರೊಳಗೆ ಏರಿತು. ಈ ರೀತಿ ಪೆಟ್ರೋಲ್ ಅನ್ನು ರಸ್ತೆಯ ಮೂಲಕ ಸರಬರಾಜು ಮಾಡುವುದು ಪೈಪ್‌ಲೈನ್ ಮೂಲಕ ಸರಬರಾಜು ಮಾಡುವುದಕ್ಕಿಂತ ಹತ್ತು ಪಟ್ಟು ತುಟ್ಟಿ. ಈ ಮಾಫಿಯಾಗಳು ಪೆಟ್ರೋಲ್ ಟ್ಯಾಂಕರ್‌ಗಳನ್ನೇ ಕದಿಯಲು
ಶುರುಮಾಡಿದವು. ಪೆಟ್ರೋಲ್ ಲಭ್ಯವಾಗದೇ ಜನರು ಐದರಿಂದ ಎಂಟು ತಾಸು ಸರತಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ನಿರ್ಮಾಣ ವಾಯಿತು.

ಜನರೇ ಪೆಟ್ರೋಲ್ ಲೂಟಿಗೆ ಇಳಿದುಬಿಟ್ಟರು. ಬಹಳಷ್ಟು ಮಂದಿ ಕೆಲಸ ಕಳೆದುಕೊಂಡರು. ಕಾರು ಬೈಕ್ ಗಳಿಗೆ ಪೆಟ್ರೋಲ್ ಸಿಗದೇ ಲಾಕ್ ಡೌನ್ ಸ್ಥಿತಿ ನಿರ್ಮಾಣವಾಯಿತು. ಸ್ಥಿತಿ ಇನ್ನಷ್ಟು ಯಡವಟ್ಟಾಯಿತು. ಇದರಿಂದ ದೇಶದುದ್ದಗಲಕ್ಕೂ ದಂಗೆಗಳಾದವು. ಈ ಪೈಪ್‌ಲೈನ್‌ಗಳನ್ನು ಮರಳಿ ತೆರೆಯುವ ಒತ್ತಾಯದ ಸ್ಥಿತಿ ನಿರ್ಮಾಣವಾಯಿತು. ಹೀಗೆ ಪೈಪ್‌ಲೈನ್‌ನಲ್ಲಿ ಪೆಟ್ರೋಲ್ ಪುನಃ ಹರಿದಾಗ ಮೊದಲೇ ಕೊರತೆಯ ಸ್ಥಿತಿಯುಂಟಾಗಿದ್ದರಿಂದ ಜನಸಾಮಾನ್ಯರೇ ಲೂಟಿಗೆ ಇಳಿದುಬಿಟ್ಟರು.

ಅಲ್ಲಲ್ಲಿ ಪೈಪ್‌ಲೈನ್ ಗಳಿಗೆ ಜನರೇ ಕನ್ನ ಹಾಕಲು ಶುರುಮಾಡಿದರು. ಈ ಪೈಪ್‌ಲೈನ್ ಗಳನ್ನು ಕನ್ನ ಹಾಕಿದಲ್ಲ ಉತ್ತಡದಿಂದಾಗಿ ಪೆಟ್ರೋಲ್ ಐವತ್ತು ಫೀಟ್ ಎತ್ತರಕ್ಕೆ ಚಿಮ್ಮುತ್ತಿತ್ತು. ಯೂಟ್ಯೂಬ್‌ನಲ್ಲಿ ಹುಡುಕಿದರೆ ಈ ವಿಡಿಯೋಗಳು ಲಭ್ಯ. ಜನರು ಈ ರೀತಿ ಪುಕ್ಸಟ್ಟೆ ಸಿಗುವ ಪೆಟ್ರೋಲ್‌ಗೆ ಮುಗಿಬಿದ್ದರು. ಇಂಥ ಒಂದು ಜಾಗದಲ್ಲಿ ಅದು ಹೇಗೋ ಬೆಂಕಿ ಹತ್ತಿಕೊಂಡಿತು. 132 ಮಂದಿ ಈ ಅವಘಡದಲ್ಲಿ ಸುಟ್ಟು ಭಸ್ಮವಾಗಿಬಿಟ್ಟರು. ಇಷ್ಟೆ ಘಟನೆ ನಡೆದ ನಂತರ – ಈ ಕಾಳದಂಧೆಯನ್ನು ನಿಲ್ಲಿಸಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ.

ಇದು ಕೇವಲ ಮೆಕ್ಸಿಕೋ ಕಥೆಯಷ್ಟೇ ಅಲ್ಲ. ಥೈಲ್ಯಾಂಡ್‌ನಲ್ಲಿ ಮಲೇಷ್ಯಾದಿಂದ ಚಿಕ್ಕ ಚಿಕ್ಕ ಹಡಗುಗಳಲ್ಲಿ ಕದ್ದು ತುಂಬಿಸಿ ಕೊಂಡು ಬಂದು ಆಮೇಲೆ ಪೆಪ್ಸಿ ಕೊಕ್ ಬಾಟಲಿಯಲ್ಲಿ ಪೆಟ್ರೋಲ್ ಅನ್ನು ಮಾರಾಟ ಮಾಡುವ ಕಾಳ ಸಂತೆಯಿದೆ. ಇದರಿಂದಾಗಿ ಖಾಲಿಯಾದ ಪೆಪ್ಸಿ ಕೊಕ್ ಬಾಟಲಿಗೆ ಮಲೇಷ್ಯಾದಲ್ಲಿ ಎಲ್ಲಿಲ್ಲದ ಬೆಲೆಯಿದೆ !! ಅಲ್ಜೆರಿಯಾ ದೇಶದಿಂದ ಮಾರಾಕ್ಕೋ ದೇಶಕ್ಕೆ ಜನರು, ವಾಹನ ಓಡಾಡುವಂತಿಲ್ಲ. ಇವೆರಡು ಭಾರತ ಪಾಕಿಸ್ತಾನದಂತೆ – ಮುಚ್ಚಿದ ಗಡಿ. ಆದರೆ ಅಲ್ಜೆರಿಯಾದಿಂದ ಮರಾಕ್ಕೋಗೆ ಪೆಟ್ರೋಲ್ ಸ್ಮಗಲ್ ಮಾತ್ರ ಆರಾಮಾಗಿ ನಡೆಯುತ್ತದೆ. ಈ ಸ್ಮಗಲ್ ಮಾಡಲು ಅಲ್ಲಿ
ಕತ್ತೆಗಳನ್ನು ಬಳಸಿಕೊಳ್ಳಲಾಗುತ್ತದೆ.

ನಿಜ, ತರಬೇತಿ ಕೊಟ್ಟ ಕತ್ತೆಯ ಬೆನ್ನಿಗೆ ಪೆಟ್ರೋಲ್ ಕ್ಯಾನ್‌ಗಳನ್ನು ಕಟ್ಟಿ ಇತ್ತಿನಿಂದ ಅತ್ತ ಅಟ್ಟಲಾಗುತ್ತದೆ. ಈ ಕತ್ತೆಗಳ ದೊಡ್ಡ ಗುಂಪು ಕಾಡಿನಲ್ಲಿ ರಾತ್ರಿ ಇಡೀ ಪ್ರಯಾಣಿಸಿ ಮಾರಕ್ಕೋಗೆ ಕದ್ದ ಪೆಟ್ರೋಲ್ ಅನ್ನು ತಲುಪಿಸುತ್ತವೆ. ಕತ್ತೆಯ ಬೆನ್ನಿನ ಮೇಲೆ ಎಷ್ಟು ಸಾಗಿಸಬಹುದು ಎಂದು ನಿಮಗನಿಸಬಹುದು – ಇದು ಹೆಚ್ಚು ಕಡಿಮೆ ಒಂದು ಬಿಲಿಯನ್ ಡಾಲರ್ (ಏಳು ಸಾವಿರ ಕೋಟಿ ರುಪಾಯಿ) ವ್ಯವಹಾರ. ಗ್ರೀಸ್ ದೇಶದಲ್ಲಿ ಮಾರಾಟವಾಗುವ ಶೇ.20 ತೈಲ ಈ ರೀತಿ ಕದ್ದ ಪೆಟ್ರೋಲ್. ಟರ್ಕಿ ಪ್ರತೀ ವರ್ಷ 2.5 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟವನ್ನು ಪೆಟ್ರೋಲ್ ಕಾಳದಂಧೆಯಿಂದಾಗಿ ಅನುಭವಿಸುತ್ತದೆ.

ಮೊಜಾಂಬಿಕ್ ನಲ್ಲಿ ಹೊಸತಾಗಿ ಇತ್ತೀಚಿಗೆ ತೈಲ ನಿಕ್ಷೇಪ ಪತ್ತೆಯಾಗಿದ್ದು ಅದರಲ್ಲಿ ಅರ್ಧದಷ್ಟು ಪೆಟ್ರೋಲ್ ಅನ್ನು ಮಾಫಿಯಾ ಲೂಟಿ ಹೊಡೆಯುತ್ತದೆ. ಅಲ್ಜೆರಿಯಾ ನಿಕ್ಷೇಪದ ಶೇ.25 ಪೆಟ್ರೋಲ್ ಅನ್ನು ಮಾಫಿಯಾ ಕದಿಯುತ್ತದೆ. ಈ ಎಲ್ಲ ಕಾಳದಂಧೆ ಇಂದು ಜಗತ್ತಿನ ನೂರು ದೇಶಗಳ ವಾರ್ಷಿಕ ಆದಾಯಕ್ಕಿಂತ ಜಾಸ್ತಿ ಮೊತ್ತದ್ದು. ಈ ರೀತಿ ಪೆಟ್ರೋಲ್ ಕಡಿಯುವ ಮತ್ತು ಕದ್ದ ಪೆಟ್ರೋಲ್ ಮಾರುವ ದಂಧೆ ಇಂದು ಜಾಗತಿಕ ಪೂರೈಕೆಯ ಸರಪಳಿಯಲ್ಲಿ ಒಂದಾಗಿಬಿಟ್ಟಿದೆ.

ಇದನ್ನು ಮೆಕ್ಸಿಕೋ ಸೇರಿದಂತೆ, ನೈಜೇರಿಯಾ, ಮಲೇಷ್ಯಾ, ಇಥಿಯೋಪಿಯಾ, ಟರ್ಕಿ, ಲಿಬಿಯಾ, ಪಾಕಿಸ್ತಾನ, ಈಜಿಪ್ತ್, ಗ್ರೀಸ್ ಹೀಗೆ ಇಪ್ಪತ್ತು ದೇಶಗಳ ಮಾಫಿಯಾಗಳು ತೀರಾ ವ್ಯವಸ್ಥಿತವಾಗಿ, ಮಲ್ಟಿನ್ಯಾಷನಲ್ ಕಂಪನಿಗಳ ತೆರನಾಗಿ ನಡೆಸುತ್ತಿವೆ. ಇಂದು ಶೆಲ್ ಕಂಪನಿಗಳ ಮೂಲಕ ನಡೆಯುವ ಈ ಎಲ್ಲ ವ್ಯವಹಾರವನ್ನು ಕಾನೂನು ಬದ್ಧ ವ್ಯವಹಾರಕ್ಕಿಂತ ಚೊಕ್ಕ – ಇದನ್ನು
ಪ್ರತ್ಯೇಕಿಸುವುದು ಕೂಡ ಅಷ್ಟೇ ಕಷ್ಟ.

ಈ ಪೆಟ್ರೋಲ್ ಕಳ್ಳತನದ ವ್ಯವಹಾರದಿಂದ ಸರಕಾರಿ ಬೊಕ್ಕಸಕ್ಕೆ ಹಾನಿ ಒಂದು ಕಡೆ. ಹೀಗೆ ಕದ್ದು ಮಾರಾಟವಾಗುವಾಗ ಶೇ.15
ಪ್ರಮಾಣದ ತೈಲ ಚೆಲ್ಲಿ ಹಾನಿಯಾಗುತ್ತದೆ – ಇದು ಪರಿಸರಕ್ಕೆ ಮಾರಕ. ಕೆಲವೊಮ್ಮೆ ಈ ಮಾಫಿಯಾಗಳು ಪರಸ್ಪರ ಹೊಡೆದಾಡಿ
ಇಡೀ ಹಡಗುಗಳೇ ಸಮುದ್ರ ಮಧ್ಯೆ ಮುಳುಗಿ ಅಪಾರ ಪ್ರಮಾಣದ ಜಲಚರ ಜೀವ ಹಾನಿಗೆ ಕೂಡ ಕಾರಣವಾದ ಘಟನೆಗಳು ನಡೆದಿವೆ. ಅಲ್ಲದೆ ಈ ರೀತಿ ಕಾಳ ವ್ಯವಹಾರದಿಂದ ಹುಟ್ಟುವ ಆದಾಯ ಕ್ರಮೇಣ ಭಯೋತ್ಪಾದನೆ, ಬಂಡುಕೋರ ಕೆಲಸಗಳಿಗೆ ಹರಿಯುತ್ತದೆ.

ಇದರಿಂದ ದೇಶಗಳ ಆಂತರಿಕ ಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಭ್ರಷ್ಟಾಚಾರ ಕ್ರಮೇಣ ಹೆಚ್ಚಿ ಮೆಕ್ಸಿಕೋದಂಥ ಸ್ಥಿತಿ ನಿರ್ಮಾಣ ವಾಗುತ್ತದೆ. ಯಾವುದೇ ವ್ಯವಹಾರವಿರಲಿ – ಅಂದು ಭ್ರಷ್ಟ ವ್ಯವಹಾರ – ಕಳ್ಳ ದಂಧೆ ಅದಕ್ಕೆ ಸಮಾನಾಂತರವಾಗಿ ಹುಟ್ಟಿ ಬೆಳೆಯುವುದು ಎಷ್ಟು ವಿಚಿತ್ರ ಅಲ್ವೇ?