Thursday, 12th December 2024

ಹಳಕಟ್ಟಿಯವರನ್ನೇ ದೂರವಿಡುವ ಕಾಲ ಬಂದೀತು !

ಅವಲೋಕನ

ಜನಮೇಜಯ ಉಮರ್ಜಿ

ವಚನಶಾಸ್ತ್ರಸಾರ ಭಾಗ-೧ ಪೂರ್ವಾರ್ಧ ೨ನೇ ಆವೃತ್ತಿ ೧೯೩೧ರ ಸಂಪಾದಕರಾದ ಫ.ಗು.ಹಳಕಟ್ಟಿ ಯವರು ತಮ್ಮ ಪ್ರಸ್ತಾವನೆಯಲ್ಲಿ ಹೀಗೆ ಹೇಳುತ್ತಾರೆ: ಬಹುಜನರು ಲಿಂಗಾಯತ ಧರ್ಮವು ಬ್ರಾಹ್ಮಣ- ವಿರೋಧಿ ಧರ್ಮ ಎಂದು ತಿಳಿಯುವುದುಂಟು. ಇದು ತೀರಾ ತಪ್ಪಾದದ್ದೆಂದು ನನಗೆ ತೋರುತ್ತದೆ. ಲಿಂಗಾಯತ ಮತತತ್ವಗಳನ್ನು ಅರಿಯದ ಪಾಶ್ಚಿಮಾತ್ಯ ಪಂಡಿತರು ಈ ತಪ್ಪು ತಿಳಿವಳಿಕೆಯನ್ನು ಹುಟ್ಟಿಸಿದರು. ಅದರಂತೆಯೇ ಲಿಂಗಾಯತ ಧರ್ಮ ವನ್ನರಿಯದ ಬ್ರಾಹ್ಮಣರೂ!

ಲಿಂಗಾಯತರೂ ಹಾಗೆಯೇ ತಿಳಿಯುತ್ತ ಬಂದರು. ಆದರೆ ಈಗ್ರಂಥದಲ್ಲಿ ನಾನು ಲಿಂಗಾಯತ ಮತ ತತ್ವಗಳನ್ನು ಸವಿಸ್ತಾರವಾಗಿ ನಿರೂಪಿಸಿದ್ದು, ಅವು ಗಳಲ್ಲಿ ಎಲ್ಲಿಯೂ ಬ್ರಾಹ್ಮಣ ದ್ವೇಷವು ಕಂಡುಬರುವುದಿಲ್ಲ. ಅದರಂತೆಯೇ ಜೈನ ಮೊದಲಾದ ಬೇರೆ ಯಾವ ಧರ್ಮದವರ ದ್ವೇಷವೂ ಇಲ್ಲ. ವಚನ ಕಾರರು ವೇದ, ಶಾಸ್ತ್ರ, ಆಗಮ, ಪುರಾಣಗಳ ವಿಷಯವಾಗಿ ಆಗಿಂದಾಗ್ಗೆ ಕಟುವಾದ ಟೀಕೆಗಳನ್ನು ಮಾಡುವುದುಂಟು. ಪುಟ ೩೫೬ರಿಂದ ೩೬೨ರವರೆಗಿನ ವಚನಗಳನ್ನು ನೋಡಿರಿ.

ಆಗಮ ಗ್ರಂಥಗಳಿಗೂ ವಚನಕಾರರ ತತ್ವಗಳಿಗೂ ಪ್ರತ್ಯಕ್ಷ ಸಂಬಂಧವುಂಟು. ಆಗಮ ಗ್ರಂಥಗಳಲ್ಲಿಯೇ ಷಟ್ ಸ್ಥಲದ ವಿವರಣೆ ಇರುತ್ತದೆ. ಹೀಗಿದ್ದರೂ ಆಗಮ ಗ್ರಂಥಗಳ ಮೇಲೆ ಸಹ ಅವರು ಟೀಕೆಗಳನ್ನು ಮಾಡದೆ ಬಿಟ್ಟಿಲ್ಲ. ಇದು ಪುರಾಣ ಮತವಾದಿಗಳಿಗೆ ಬಹು ಅಸಹ್ಯಕರವಾಗಿ ತೋರುತ್ತದೆ. ಆದರೆ ವಚನಗ್ರಂಥಗಳನ್ನು ನಾವು ಒಟ್ಟಿನಿಂದ ನೋಡಿದಾಗ, ಹೇಗೆ ಜೈನ, ಬೌದ್ಧರು ವೇದ ಮತವನ್ನು ತಿರಸ್ಕರಿಸಿ ಬಿಟ್ಟರೋ, ಹಾಗೇ ವಚನಕಾರರು ಅದನ್ನು ಬಿಟ್ಟು ಕೊಟ್ಟರೆಂದುಹೇಳಲಿಕ್ಕೆ ಬರಲಾರದು. ಅವರ ತತ್ವಗಳೆಲ್ಲ ವೇದ-ಆಗಮ -ಉಪನಿಷತ್ತುಗಳ ಒಳಗಿನಿಂದಲೇ ತೆಗೆದುಕೊಂಡವಿರುತ್ತವೆ ಮತ್ತು ಅವರ ವಚನಗಳಲ್ಲಿ ಅವುಗಳಲ್ಲಿಯ ಅವತರಣಗಳು ತುಂಬಿಹೋಗಿರುತ್ತವೆ.

ಒಂದು ವೇಳೆ ಅವರು ಈ ಗ್ರಂಥಗಳನ್ನು ಅವಿಶ್ವಾಸಿಸುತ್ತಿದ್ದರೆ, ಅವುಗಳಲ್ಲಿಯ ಉಕ್ತಿಗಳನ್ನು ಹೀಗೆ ತಮಗೆ ಆಧಾರ ವಾಗಿಟ್ಟುಕೊಂಡು, ಎಂದೂ ಅವು ಗಳನ್ನು ಉದಾಹರಿಸುತ್ತಿದ್ದಿಲ್ಲ. ಪ್ರತಿಯೊಂದು ಧರ್ಮದಲ್ಲಿ ಅದಕ್ಕೆ ಒಲ್ಲದ ರೂಢಿಗಳು ಕಾಲಾನುಸಾರ ಸೇರಿಕೊಳ್ಳುತ್ತ ಬರುತ್ತವೆ. ಕೆಲವು ಕಾಲದ ಮೇಲೆ ಈ ರೂಢಿಗಳಿಗೆ ಧರ್ಮದ ಸ್ವರೂಪವೂ ಬರಹತ್ತುತ್ತದೆ. ಈ ಥರದ ರೂಢಿಗಳು ನಮ್ಮ ಹಿಂದೂ ಧರ್ಮದಲ್ಲಿ ಈಗಲೂ ಬಹಳ ಸೇರಿ ಕೊಂಡಿರುವುವು. ವಚನ ಕಾರರು ಇಂಥವುಗಳನ್ನು ಧೈರ್ಯದಿಂದ ಕಿತ್ತುಹಾಕಿರುವರು. ಪುಟ ೩೩೪ರಿಂದ ೩೮೧ರವರೆಗಿನ ವಚನಗಳಲ್ಲಿಯ ವಿಷಯಗಳು ಈ ಮಾದರಿಯ ವಿರುತ್ತವೆ. ವಚನಕಾರರು ಹಿಂದೂ ಧರ್ಮದಲ್ಲಿನ ಒಂದು ಬಗೆಯ ವಿಚಾರವಾದಿಗಳು ಎಂದು ನಾವು ಕರೆಯಬಹುದು.

ವಚನ ದರ್ಶನ ಪುಸ್ತಕದ ಕುರಿತು ಸಾಕಷ್ಟು ಅಭಿಪ್ರಾಯಗಳು ಸಾರ್ವಜನಿಕವಾಗಿ ಚರ್ಚೆಯಾಗುತ್ತಿವೆ. ಈ ಪುಸ್ತಕಕ್ಕೆ ಅಲ್ಲಲ್ಲಿ ವಿರೋಧಗಳು ಕಾಣಿಸುತ್ತಿವೆ. ಇದು ಜನಸಾಮಾನ್ಯರಿಗೆ ಒಂದು ಉತ್ತಮ ಪ್ರವೇಶಿಕೆ ರೀತಿಯ ಪುಸ್ತಕ ಎನ್ನಬಹುದು. ಯಾರೇ ಇಡೀ ಪುಸ್ತಕವನ್ನು ತಡಕಾಡಿದರೂ, ಶರಣರ ಆಶಯಗಳಿಗೆ ವಿರುದ್ಧ ಎನಿಸುವ ಒಂದು ಸಾಲೂ ಇಲ್ಲ. ಆದರೂ ವಿರೋಧ ಏಕೆ ಎಂಬುದು ಅರ್ಥವಾಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ವಚನ ಸಾಹಿತ್ಯದ ಅರ್ಥೈಸು ವಿಕೆಗಳು ಹೇಗೆಲ್ಲಾ ನಡೆದಿವೆ, ಅವು ಮೂಲ ಆಶಯಕ್ಕೆ ಹೇಗೆ ವ್ಯತಿರಿಕ್ತ, ಹೇಗೆ ತಿಳಿದುಕೊಳ್ಳಬೇಕು ಎಂಬುದರ ಕುರಿತು ಈ ಪುಸ್ತಕ ಒಂದಿಷ್ಟು ಬೆಳಕು ಚೆಲ್ಲುತ್ತದೆ. ಪುಸ್ತಕದ ಉದ್ದೇಶ ವಚನ ಸಾಹಿತ್ಯವನ್ನು ಪ್ರಚಾರ ಮಾಡುವುದೇ ಆಗಿದೆಯೇ ವಿನಾ ಬೇರೇನೂ ಅಲ್ಲ.

ವಚನಗಳಿಗಾಗಿ ಇಲ್ಲಿಯವರೆಗೆ ಯಾರ‍್ಯಾರು ಕೆಲಸ ಮಾಡಿದ್ದಾರೆಯೋ ಅವರ ಬಗ್ಗೆ ಈ ಪುಸ್ತಕದಲ್ಲಿ ಪ್ರಾಮಾಣಿಕವಾಗಿ ಬರೆಯಲಾಗಿದೆ. ಅದರಲ್ಲಿ ಫ.ಗು.
ಹಳಕಟ್ಟಿ ಅವ ರಿಂದ ಮೊದಲ್ಗೊಂಡು ಡಾ.ಕಲಬುರ್ಗಿ, ಡಾ.ರಾಜೂರರ ಬಗ್ಗೆಯೂ ಸಾಲುಗಳಿವೆ. ವೀರಶೈವ- ಲಿಂಗಾಯತದ ಪ್ರಮುಖ ತತ್ವಗಳಾದ ಪಂಚಾಚಾರ, ಷಟ್ ಸ್ಥಲ, ಸಪ್ತಶೀಲ, ಅಷ್ಟಾವರಣಗಳ ಕುರಿತು ವಿವರಣೆಗಳಿವೆ. ಭಕ್ತಿ, ಕಾಯಕ, ದಾಸೋಹಗಳ ಮಹತ್ವವನ್ನು ತಿಳಿಸಲಾಗಿದೆ. ಆದರೂ ವಿರೋಧ ಎದುರಾಗಿರುವುದು ವಿಚಿತ್ರ. ಈ ಪುಸ್ತಕವನ್ನು ವಿರೋಧಿಸುತ್ತಿರುವವರಲ್ಲಿ ಮೂರು ವರ್ಗವಿದೆ ಅನಿಸುತ್ತದೆ. ಮೊದಲನೆಯ ವರ್ಗದವರು, ‘ಈ
ವಿಷಯಗಳನ್ನು ನಾವು ಮಾತ್ರ ಹೇಳಬೇಕು, ನಾವು ಹೇಳಿದ್ದನ್ನೇ ಇನ್ನೊಬ್ಬರು ಹೇಳಿದರೆ ಒಪ್ಪಲು ತಯಾರಾಗಿಲ್ಲ’ ಎನ್ನುವವರು.

‘ವಿಷಯಗಳೇನೋ ಸರಿ, ಆದರೆ ಇಂಥವರು ಹೇಳಿದರೆ ತಪ್ಪು’ ಎನ್ನುವವರು. ಎರಡನೆಯವರು, ‘ವಚನಗಳನ್ನು ಭಕ್ತಿ ಪರಂಪರೆ, ಶಾಸ್ತ್ರ ಉಪನಿಷತ್ತು ಎನ್ನುವುದಕ್ಕೆ, ವಚನ ಸಾಹಿತ್ಯವೂ ಹಿಂದೂ ಧರ್ಮದ ಭಾಗ ಹೀಗೆಲ್ಲ ಹೇಳುವುದಕ್ಕೆ ನಮ್ಮ ವಿರೋಧವಿದೆ’ ಎನ್ನುವವರು. ಮೂರನೆಯವರು, ‘ಅಧ್ಯಾತ್ಮ ನಮ್ಮ ವಿಷಯವೇ ಅಲ್ಲ, ಆದಾಗ್ಯೂ ಪುಸ್ತಕ ಪ್ರಕಟಿಸಿದವರನ್ನು ನಾವು ವಿರೋಧಿಸುತ್ತೇವೆ’ ಎನ್ನುವವರು. ಮೊದಲನೇ ವರ್ಗದವರು ಜನರ ದಿಕ್ಕು ತಪ್ಪಿಸುತ್ತಾ, ಎತ್ತಿಕಟ್ಟುತ್ತಾ, ತಮ್ಮ ಸ್ವಯಂಲಾಭದಲ್ಲಿ ಸಂತೋಷ ಪಡುತ್ತಿದ್ದಾರೆ.

ವಚನಗಳು ವೈಶ್ವಿಕವೆಂದಾದರೆ, ವಿಶ್ವದ ಯಾವ ಮೂಲೆಯ ಜನರೂ ಅದನ್ನು ವ್ಯಾಖ್ಯಾನಿಸಬಹುದು. ಆದರೆ ಇವರು ಅದನ್ನು ಕೆಲವೇ ಜನರ ಗುತ್ತಿಗೆ ಅಥವಾ ಸ್ವತ್ತು ಎಂದು ಭಾವಿಸಿ, ವ್ಯಾಪಕತೆಯನ್ನು ಸಂಕುಚಿತಗೊಳಿಸುತ್ತಿದ್ದಾರೆ. ವಚನಗಳಿಗೆ ಭಾಷೆಯ, ಪ್ರಾದೇಶಿಕತೆಯ, ಜಾತಿಯ ಹಂಗಿಲ್ಲ. ಅವು ವಿಶ್ವತೋಮುಖ ಮತ್ತು ಸಾರ್ವಕಾಲಿಕ. ಬಚ್ಚಿಟ್ಟ ಜ್ಞಾನ ಕೊಳೆಯುತ್ತದೆ, ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ. ಇನ್ನು ಎರಡನೇ ವರ್ಗದವರು ‘ಶಾಸ್ತ್ರ’ ಎಂದು ಕರೆದಿದ್ದಕ್ಕೆ ವಿರೋಧಿಸುವವರು. ವಚನ ಪಿತಾಮಹ ಫ.ಗು. ಹಳಕಟ್ಟಿಯವರೇ ತಮ್ಮ ವಚನ ಸಂಪುಟಗಳಿಗೆ ‘ವಚನಶಾಸ್ತ್ರ ಸಾರ’ ಎಂದು ಹೆಸರಿಟ್ಟಿದ್ದಾರೆ. ಹಳಕಟ್ಟಿಯವರು ಕಳಿಸಿದ ಸಂಪುಟಗಳನ್ನು ಓದಿ ರೋಮಾಂಚನಗೊಂಡ ಸ್ವಾತಂತ್ರ್ಯ ಹೋರಾಟಗಾರ ರಂಗನಾಥ ದಿವಾಕರರು ಹಿಂಡಲಗಾ ಜೈಲಿನಿಂದಲೇ ‘ವಚನಶಾಸ ರಹಸ್ಯ’ ಎಂಬ ಗ್ರಂಥ ಬರೆದರು.

ಎಂ.ಆರ್. ಶ್ರೀನಿವಾಸಮೂರ್ತಿಯವರು ‘ವಚನ ಧರ್ಮಸಾರ’ ಪುಸ್ತಕ ಬರೆದರು. ಈ ಹಿಂದೆ ವಚನಗಳನ್ನು ಶಾಸ್ತ್ರಗಳೆಂದು, ಉಪನಿಷತ್ತುಗಳೆಂದು ಕರೆದಾಗ ಯಾವ ವಿರೋಧವೂ ಬಂದಿರಲಿಲ್ಲ. ಆದರೆ ಈಗೇಕೆ? ‘ವಚನಶಾಸ್ತ್ರ ಸಾರ’ ಬರೆದ ಫ.ಗು.ಹಳಕಟ್ಟಿಯವರನ್ನು ಇವರು ಇಂದಲ್ಲ ನಾಳೆ ದೂರ ಸರಿಸಿದರೆ ಆಶ್ಚರ್ಯವೇನಿಲ್ಲ. ಪುಸ್ತಕದಲ್ಲಿ ನೀಡಿರುವ ವಚನಗಳು ಬಹುತೇಕ ಜನಪ್ರಿಯವೇ ಆಗಿವೆ. ಕರ್ನಾಟಕ ಸರಕಾರ ಪ್ರಕಟಿಸಿದ ಡಾ.ಕಲಬುರ್ಗಿ
ಯವರ ಸಂಪಾದನೆಯ ಸಂಪುಟಗಳಲ್ಲಿಯ ವಚನ ಸಂಖ್ಯೆಗಳನ್ನೇ ಪುಸ್ತಕದಲ್ಲಿ ನಮೂದಿಸಲಾಗಿದೆ. ಈ ವಚನಗಳನ್ನು ‘ಪ್ರಕ್ಷಿಪ್ತ’ ಎಂದು ಸಾಬೀತು ಪಡಿಸಲು ನಾಳೆ ಡಾ.ಕಲಬುರ್ಗಿ ಯವರನ್ನು ಈ ಜನ ನಿರಾಕರಿಸಬಹುದು.

ಬಹುಶಃ ಕಲಬುರ್ಗಿಯವರೇ ಹೇಳಿದ ಮಾತು ಎನಿಸುತ್ತೆ. ಪ್ರಕ್ಷಿಪ್ತ ಎಂದು ನಿರಾಕರಿಸುತ್ತಾ ಹೋದರೆ ೧೦ ಪ್ರತಿಶತ ವಚನಗಳು ಮಾತ್ರ ಉಳಿಯಬಹು ದೇನೋ. ಇನ್ನು ಮೂರನೆಯ ವರ್ಗದವರು. ಇವರು ಧರ್ಮವನ್ನೇ ಅಫೀಮು ಎಂದವರು. ಅಧ್ಯಾತ್ಮದ ಗಂಧ-ಗಾಳಿಯೇ ಗೊತ್ತಿಲ್ಲದವರು. ಪುಸ್ತಕ ಪ್ರಕಾಶನ ಮಾಡಿದವರ ವಿಚಾರಧಾರೆಯನ್ನು ದ್ವೇಷಿಸಬೇಕು ಎಂಬ ಕಾರಣ ಕ್ಕಾಗಿ ಈ ಪುಸ್ತಕವನ್ನು ವಿರೋಽಸುತ್ತಾರೆ. ಈ ರೀತಿಯ ಸಂಘಟನೆಗಳ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳೇ ನೇರವಾಗಿ ಅಖಾಡಕ್ಕಿಳಿದಿದ್ದು ಪತ್ರಿಕೆಗಳಲ್ಲಿ ಬಂದಿದೆ.

ವಾದ-ವಿವಾದಗಳ ಭರಾಟೆಯಲ್ಲಿ ವಚನ ಸಾಹಿತ್ಯದ ಮೂಲ ಆಶಯ ಮರೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಶರಣರ ನಡೆ-ನುಡಿ, ಸದಾಚಾರ, ಸದುವಿನಯ. ವಚನಕಾರರು ಯಾರ ಜತೆಗೂ ಎಂದಿಗೂ ಕಲಹ ಮಾಡಿಲ್ಲ. ಇಂಥ ಹೋರಾಟಗಳಿಗೆ ಅವರು ಮನಸ್ಸು ಹಾಕಿಲ್ಲ. ಅವರು ಮನುಷ್ಯನ ಧಾರ್ಮಿಕ ಮತ್ತು ಮಾನಸಿಕ ಉನ್ನತಿಗೆ ಹೆಚ್ಚಾಗಿ ಲಕ್ಷ್ಯ ಕೊಟ್ಟಿದ್ದಾರೆ. ಕರ್ಮಕಾಂಡಗಳಲ್ಲಿಯ ಕರ್ಮಠತೆಯನ್ನು ಖಂಡಿಸಿದ್ದಾರೆ, ಭಕ್ತಿ ಮಾರ್ಗಕ್ಕೆ ಒತ್ತುಕೊಟ್ಟಿದ್ದಾರೆ. ವೇದ, ಆಗಮ, ಉಪನಿಷತ್ತುಗಳಲ್ಲಿರುವ ತತ್ವಗಳನ್ನು ನಡೆಯಲ್ಲಿ ಹೇಗೆ ತರಬೇಕು ಎಂಬುದರ ಬಗ್ಗೆ ಹೆಚ್ಚಾಗಿ ಲಕ್ಷ್ಯ ಕೊಟ್ಟಿದ್ದಾರೆ. ಸಂಸ್ಕೃತ ವಾಕ್ಯಗಳಿರುವ ಸಾವಿರಾರು ವಚನಗಳು ನಮಗೆ ಲಭ್ಯವಿವೆ.

ಚನ್ನಬಸವಣ್ಣ, ಅಲ್ಲಮಪ್ರಭು, ಬಸವಣ್ಣನವರು, ಅಕ್ಕಮಹಾದೇವಿ, ಸಿದ್ಧರಾಮೇಶ್ವರ, ಉರಿಲಿಂಗಪೆದ್ದಿ ಹೀಗೆ ಹಲವರ ವಚನಗಳಲ್ಲಿ ಆಗಮ, ಉಪ ನಿಷತ್ತುಗಳ ವಾಕ್ಯಗಳನ್ನು ಕಾಣಬಹುದು. ವಚನಕಾರರ ವಿಶ್ವಬಂಧುತ್ವ ವಿಚಾರಗಳು ಬಹುಶ್ರೇಷ್ಠವಾಗಿವೆ. ಸಕಲ ಪ್ರಾಣಿಗಳಿಗೂ ದಯೆ ತೋರುವುದು, ಸಕಲರಿಗೂ ಲೇಸನ್ನೇ ಬಯಸುವುದು ಶಿವಶರಣ ತತ್ವ. ಶಿವಶರಣ ರದು ಭಕ್ತಿ ಪರಂಪರೆ ಎಂದರೆ ಹಲವರಿಗೆ ಇಷ್ಟವಾಗುತ್ತಿಲ್ಲ. ಶಿವಶರಣರು ಉಲ್ಲೇಖಿ ಸುವ ೬೩ ಪುರಾತನರು ಯಾರು? ಸಿರಿಯಾಳನ ಭಕ್ತಿ, ದಾಸಯ್ಯನ ಭಕ್ತಿ, ಬಾಣದ ಭಕ್ತಿಗೆ ಮೆಚ್ಚಿ ಶಿವನೇ ಅವನ ಬಾಗಿಲ ಕಾಯ್ದ ವಿಷಯ ವಿವರಿಸುವ ವಚನಗಳಿಲ್ಲವೇ? ಇದು ಜಾಣಕುರುಡೋ? ಜಾಣಮರೆವೋ? ಅವರೇ ಹೇಳಬೇಕು. ಆದರೆ ಸ್ವತಃ ಬಸವಣ್ಣನವರು ಭಕ್ತಿ ಭಂಡಾರಿ ಗಳು. ಒಟ್ಟಿನಲ್ಲಿ ‘ವಚನ ದರ್ಶನ’ ಪುಸ್ತಕ ಶಿವಶರಣರ ಮೂಲ ಆಶಯದಂತೆ ಇದೆ. ವ್ಯಾಖ್ಯಾನಗಳ ಕುರಿತಾಗಿರುವ ಹಲವು ಮಿಥ್ಯಾವಾದಗಳನ್ನು ತಳ್ಳಿಹಾಕುವುದ ರಲ್ಲಿ ಇದು ಮೊದಲ ಹೆಜ್ಜೆ. ಗಮನ ಇನ್ನೂ ದೀರ್ಘವಿದೆ.

(ಲೇಖಕರು ಸಾಹಿತಿ)