Thursday, 12th December 2024

ಈಗೇಕೆ ಫೋನ್ ಟ್ಯಾಪಿಂಗ್ ಪ್ರಸ್ತಾಪ ?

ವರ್ತಮಾನ

maapala@gmail.com

ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ಫೋನ್ ಕದ್ದಾಲಿಕೆ ಮಾಡಲಾಗಿತ್ತು, ಮಠಕ್ಕೆ ಪರ್ಯಾಯ ಪೀಠ ಸ್ಥಾಪಿಸುವ ಯತ್ನ ನಡೆದಿತ್ತು ಎಂಬ ವಿವಾದ ಲೋಕಸಮರದ ವೇಳೆ ಮತ್ತೆ ಮುನ್ನೆಲೆಗೆ ಬಂದಿದೆ. ಇದರ ಹಿಂದಿರುವ ಮಸಲತ್ತೇನು?

ಒಕ್ಕಲಿಗರು ರಾಜಕೀಯವಾಗಿ ಪ್ರಬಲರಾಗಿರುವ ಹಳೇ ಮೈಸೂರು ಭಾಗದಲ್ಲಿ ಈ ಸಮುದಾಯವನ್ನು ಒಲಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಮೊದಲಿನಿಂದಲೂ ಜಟಾಪಟಿ ನಡೆಯುತ್ತಿದೆ. ಎಚ್.ಡಿ. ದೇವೇಗೌಡ ಮತ್ತು ಎಸ್.ಎಂ.ಕೃಷ್ಣ ಅವರು
ಅಧಿಕಾರದಲ್ಲಿದ್ದಾಗ ಶುರುವಾದ ಈ ಪೈಪೋಟಿ ಸಾಕಷ್ಟು ವಿವಾದ, ತಿಕ್ಕಾಟಗಳಿಗೆ ಕಾರಣವಾಗಿತ್ತು. ಅದು ಎಲ್ಲಿಯವರೆಗೆ ಹೋಗಿತ್ತು ಎಂದರೆ, ಒಕ್ಕಲಿಗರ ಮಹಾಸಂಸ್ಥಾನವಾಗಿದ್ದ ಆದಿಚುಂಚನಗಿರಿ ಪೀಠಕ್ಕೆ ಪರ್ಯಾಯವಾಗಿ ಮತ್ತೊಂದು ಪೀಠವನ್ನು
ಸೃಷ್ಟಿಸುವ ಮಟ್ಟಕ್ಕೆ ಹೋಗಿತ್ತು.

ಆದಿಚುಂಚನಗಿರಿ ಮಠದ ಹಿಂದಿನ ಪೀಠಾಧ್ಯಕ್ಷರಾಗಿದ್ದ ಜಗದ್ಗುರು ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರು ಒಂದು ಪಕ್ಷದ ಪರ ಇದ್ದಾರೆ ಎಂಬ ಆರೋಪ ಕೇಳಿ ಬಂದು, ಆ ಮಠಕ್ಕೆ ಪರ್ಯಾಯವಾಗಿ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ನೇತೃತ್ವ ದಲ್ಲಿ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನವನ್ನು ಬೆಳೆಸುವ ಪ್ರಯತ್ನ ನಡೆಯಿತು. ಅದಕ್ಕಾಗಿ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಆದರೆ, ಅಷ್ಟರಲ್ಲಿ ಸಮಸ್ಯೆ ಬಗೆಹರಿದಿದ್ದರಿಂದ ಪರ್ಯಾಯ ಮಠವನ್ನು ಬೆಳೆಸುವ ಪ್ರಕ್ರಿಯೆ ನನೆಗುದಿಗೆ ಬಿತ್ತು.

ಆದರೂ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಮತ್ತು ಆದಿಚುಂಚನಗಿರಿ ಮಠದ ಮಧ್ಯೆ ಎಲ್ಲವೂ ಮೊದಲಿನಂತಾಗಲೇ ಇಲ್ಲ. ಮೇಲ್ನೋಟಕ್ಕೆ ಆ ರೀತಿಯ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಲಾಗುತ್ತಿತ್ತಾದರೂ ಸಮಸ್ಯೆ ಸಂಪೂರ್ಣ ಸರಿಯಾಗಿರಲಿಲ್ಲ. ನಾವು ಇನ್ನೊಂದು ಮಠಕ್ಕೆ ಸಹಕಾರ ನೀಡಿದ್ದೇವೆಯೇ ಹೊರತು ಆದಿಚುಂಚನಗಿರಿ ಮಠಕ್ಕೆ ಪರ್ಯಾಯ ಮಠ ಕಟ್ಟಿಲ್ಲ ಎಂದು ಅಂದಿನಿಂದಲೂ ಜೆಡಿಎಸ್ ನಾಯಕರು ಹೇಳಿಕೊಂಡೇ ಬಂದಿದ್ದಾರೆ.

ಈ ಮಧ್ಯೆ ೨೦೧೮ರ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಾಗಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ೧೪ ತಿಂಗಳಲ್ಲೇ ಈ ಸರಕಾರ
ಉರುಳಿತು. ಆದರೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ದೂರವಾಣಿ ಕದ್ದಾಲಿಕೆ ಆರೋಪ ಕೇಳಿಬಂದಿತ್ತು. ಈ ಕದ್ದಾಲಿಕೆ ಕುರಿತಂತೆ ತನಿಖೆ
ನಡೆಸುತ್ತಿದ್ದ ಸಿಬಿಐ ಅಧಿಕಾರಿಗಳು ಕದ್ದಾಲಿಕೆಯಾಗಿದ್ದ ದೂರವಾಣಿ ಸಂಖ್ಯೆಗಳನ್ನು ಪರಿಶೀಲಿಸಿದಾಗ ಅದರಲ್ಲಿ ಆದಿಚುಂಚನ ಗಿರಿ ಶ್ರೀಗಳ ದೂರವಾಣಿ ಸಂಖ್ಯೆಯೂ ಇದ್ದಿದ್ದು ಈ ವಿವಾದಕ್ಕೆ ಕಾರಣವಾಯಿತು.

ಈ ಪ್ರಕರಣ ಆಗ ಭಾರಿ ವಿವಾದ, ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು. ಕುಮಾರಸ್ವಾಮಿ ತಮ್ಮ ಮುಖ್ಯಮಂತ್ರಿ ಸ್ಥಾನ ಉಳಿಸಿ
ಕೊಳ್ಳಲು ಶ್ರೀಗಳ ದೂರವಾಣಿ ಕದ್ದಾಲಿಕೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರೆ, ದೂರವಾಣಿ ಕದ್ದಾಲಿಕೆ ಮಾಡಿಸು ತ್ತಿದ್ದರೆ ಸರಕಾರ ಉಳಿಸಿಕೊಳ್ಳುತ್ತಿದ್ದೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದರು. ಕೆಲ ದಿನಗಳ ಬಳಿಕ ಈ ವಿವಾದ ತಣ್ಣಗಾಗಿತ್ತು. ಆ ಕುರಿತ ಸಿಬಿಐ ತನಿಖೆ ಏನಾಯಿತು ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ.

ಆದರೆ, ಲೋಕಸಭೆ ಚುನಾವಣೆ ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆ ಆದಿಚುಂಚನಗಿರಿ ಶ್ರೀಗಳ ದೂರವಾಣಿ ಕದ್ದಾಲಿಕೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಹಳೇ ಮೈಸೂರು ಭಾಗದ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳು ಒಟ್ಟಾಗಿ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿರುವ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಬೆನ್ನಲ್ಲೇ ಸಚಿವ ಎನ್.ಚಲುವರಾಯಸ್ವಾಮಿ ಈ ವಿಚಾರವನ್ನು ಮತ್ತೆ ಪ್ರಸ್ತಾಪಿಸುವ ಮೂಲಕ ಮಿತ್ರಪಕ್ಷಗಳಿಗೆ ಮುಜುಗರ ಉಂಟು ಮಾಡಲು ಪ್ರಯತ್ನಿಸಿದ್ದಾರೆ.

‘ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಆದಿಚುಂಚನ ಗಿರಿ ಪೀಠಾಧ್ಯಕ್ಷರಾಗಿರುವ ಡಾ.ನಿರ್ಮಲಾನಂದನಾಥರ ದೂರವಾಣಿ ಕದ್ದಾಲಿಕೆ ಮಾಡಲಾಗಿತ್ತು. ಒಂದು ಧರ್ಮಪೀಠಕ್ಕೆ ಅವಮಾನ ಮಾಡಿದ್ದನ್ನು ಯಾರೂ ಮರೆಯುವುದಿಲ್ಲ. ಈಗ ಚುನಾವಣೆ ಸಂದರ್ಭದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮಠದ ಬಾಗಿಲು ತಟ್ಟುತ್ತಿದ್ದಾರೆ. ವಿರೋಧಿಗಳನ್ನೂ ಭೇಟಿಯಾಗುತ್ತಿದ್ದಾರೆ. ಆದಿಚುಂಚನಗಿರಿ ಮಠಕ್ಕೆ ಪ್ರತಿ ಯಾಗಿ ಮತ್ತೊಂದು ಮಠ, ಬಾಲಗಂಗಾಧರನಾಥ ಸ್ವಾಮೀಜಿಗೆ ವಿರುದ್ಧವಾಗಿ ಮತ್ತೊಬ್ಬರು ಸ್ವಾಮೀಜಿಯನ್ನು ಹುಟ್ಟುಹಾಕಿದ್ದು ಯಾರು?’ ಎಂದು ಪ್ರಶ್ನಿಸುವ ಮೂಲಕ ಚಲುವರಾಯಸ್ವಾಮಿ ಅವರು ನೇರವಾಗಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.

ಇದಕ್ಕೆ ಬೆಂಬಲವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ಸ್ವಾಮೀಜಿಯವರ ಫೋನ್ ಕದ್ದಾಲಿಕೆ ಕುರಿತು ದಾಖಲೆಗಳಿವೆ ಎನ್ನುವ ಮೂಲಕ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕುಮಾರಸ್ವಾಮಿ,
ದೂರವಾಣಿ ಕದ್ದಾಲಿಕೆ ಮಾಡಿಸುತ್ತಿದ್ದರೆ ನನ್ನ ಸರಕಾರ ಏಕೆ ಬೀಳಲು ಬಿಡುತ್ತಿದ್ದೆ ಎಂದು ಪ್ರಶ್ನಿಸಿದ್ದಾರಲ್ಲದೆ, ಈ ಸಂಬಂಧ ತನಿಖೆ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ. ಅಲ್ಲದೆ, ಪರ್ಯಾಯ ಪೀಠದ ಆರೋಪಕ್ಕೂ
ಪ್ರತಿಕ್ರಿಯಿಸಿ, ಬೇರೆ ಸಮುದಾಯದಲ್ಲೂ ಅನೇಕ ಮಠಗಳಿವೆ.

ನಮ್ಮ ಸಮುದಾಯದಲ್ಲೂ ಆ ರೀತಿಯ ಬೆಳವಣಿಗೆಗಳಾಗಲಿ ಎಂಬ ಕಾರಣಕ್ಕೆ ಇನ್ನೊಬ್ಬರಿಗೆ ಸಹಾಯ ಮಾಡಿದ್ದೇವೆ ಎಂದಿದ್ದಾರೆ. ಈ ವಿವಾದ ಏನೇ ಇರಲಿ, ಅದಕ್ಕೆ ಕಾರಣ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟ ಎಂಬುದಂತೂ ಸ್ಪಷ್ಟ. ಏಕೆಂದರೆ, ಒಕ್ಕಲಿಗ ಸಮಾಜ ರಾಜಕೀಯವಾಗಿ ಪ್ರಬಲವಾಗಿರುವ ಹಳೇ ಮೈಸೂರು ಭಾಗದಲ್ಲಿ ಆದಿಚುಂಚನಗಿರಿ ಮಠ ಈ ಸಮುದಾಯಕ್ಕೆ ಪ್ರಮುಖವಾಗಿದೆ.

ಬಹುತೇಕರು ಈ ಮಠದ ಬೆಂಬಲಿಗರು ಅಥವಾ ಭಕ್ತರು. ಒಕ್ಕಲಿಗ ರಾಜಕೀಯ ನಾಯಕರು ಯಾರಾದರೂ ಆದಿಚುಂಚನಗಿರಿ ಮಠದ ವಿರೋಧಿಗಳಾಗಿದ್ದರೆ ಸಮುದಾಯ ಅವರನ್ನು ದೂರವಿಡುತ್ತದೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ಕಾರಣಕ್ಕಾಗಿಯೇ ಆದಿಚುಂಚನಗಿರಿ ಶ್ರೀಗಳ ದೂರವಾಣಿ ಕದ್ದಾಲಿಕೆ ಮತ್ತು ಪರ್ಯಾಯ ಮಠ ಸ್ಥಾಪನೆ ವಿಚಾರವನ್ನು ಕಾಂಗ್ರೆಸ್ ಮುನ್ನೆಲೆಗೆ ತಂದಿದೆ. ಆ ಮೂಲಕ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಹಳೇ ಮೈಸೂರು ಭಾಗದಲ್ಲಿ ತನ್ನ ಪ್ರಾಬಲ್ಯ
ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಜೆಡಿಎಸ್‌ಗೆ ತಡೆಯೊಡ್ಡಲು ಕಾಂಗ್ರೆಸ್ ಪ್ರಯತ್ನ ಮಾಡಿದೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕರಾಗಿದ್ದವರು. ಒಮ್ಮೆ ಎಸ್.ಎಂ.ಕೃಷ್ಣ ಮೇಲುಗೈ ಸಾಧಿಸಿದರೆ, ಇನ್ನೊಮ್ಮೆ ದೇವೇಗೌಡರು ಮುಂಚೂಣಿ ಯಲ್ಲಿರುತ್ತಿದ್ದರು. ಆದರೆ, ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ಈ ಭಾಗದಲ್ಲಿ ದೇವೇಗೌಡರ ಪ್ರಭಾವ
ಹೆಚ್ಚಾಯಿತು. ೨೦೧೮ರ ವಿಧಾನಸಭೆ ಚುನಾವಣೆ ವರೆಗೂ ದೇವೇಗೌಡರ ಪ್ರಭಾವ ಜೋರಾಗಿಯೇ ಇತ್ತು. ಆದರೆ, ನಂತರದಲ್ಲಿ ಅದು ಕ್ರಮೇಣ ಕಾಂಗ್ರೆಸ್ ಪಾಲಾಗುತ್ತಾ ಬಂತು.

೨೦೧೯ರ ಲೋಕ ಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ದೇವೇಗೌಡರು ಸೋತರು. ೨೦೨೩ರ
ವಿಧಾನಸಭೆ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ತನ್ನ ಶಕ್ತಿಯನ್ನು ಬಹುತೇಕ ಕಳೆದುಕೊಂಡಿತ್ತು. ಒಕ್ಕಲಿಗರ ಪಕ್ಷವಾಗಿರುವ ಜೆಡಿಎಸ್ ಅನ್ನು ಅದೇ ಸಮುದಾಯ ದೂರವಿಟ್ಟ ಪರಿಸ್ಥಿತಿ ನಿರ್ಮಾಣವಾಗಿ, ಕಾಂಗ್ರೆಸ್ ಆ ಜಾಗವನ್ನು
ಆಕ್ರಮಿಸಿಕೊಂಡಿತು. ಆದರೆ, ಯಾವಾಗ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿತೋ ನಿಧಾನವಾಗಿ ಹಳೇ ಮೈಸೂರು ಭಾಗದಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ತೀವ್ರಗೊಳಿಸಿತ್ತು.

ಇದಕ್ಕೆ ಬಿಜೆಪಿ ಕೂಡ ಸಾಥ್ ನೀಡಿದ್ದರಿಂದ ಸಹಜವಾಗಿಯೇ ಕಾಂಗ್ರೆಸ್‌ಗೆ ಒಕ್ಕಲಿಗರ ಮತಬ್ಯಾಂಕ್ ಕಳೆದು ಕೊಳ್ಳುವ ಆತಂಕ ಶುರುವಾಯಿತು. ಇದಕ್ಕೆ ಇನ್ನೂ ಒಂದು ಕಾರಣ, ಆದಿಚುಂಚನಗಿರಿ ಮಠ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಇರುವ ಆತ್ಮೀಯ ಸಂಬಂಧ. ಆದಿತ್ಯನಾಥ ಅವರು ಪ್ರತಿನಿಧಿಸುವ ಉತ್ತರ ಪ್ರದೇಶದ ಗೋರಖಪುರ ಗೋರಖನಾಥ ಮಠ ಮತ್ತು ಆದಿಚುಂಚನಗಿರಿ ಮಠಗಳೆರಡೂ ನಾಥ ಪರಂಪರೆಗೆ ಸೇರಿದ ಮಠಗಳಾಗಿವೆ. ಗೋರಖನಾಥ ಶ್ರೀಗಳು ಆದಿಚುಂಚನಗಿರಿಯಲ್ಲೇ ತಪಸ್ಸು ಮಾಡಿ, ಮಠ ಸ್ಥಾಪಿಸಿ ಸಿದ್ಧಶಕ್ತಿಯನ್ನು ಕಲ್ಪಿಸಿ ಕೊಟ್ಟಿದ್ದರಿಂದ ಎರಡೂ ಮಠಗಳು ನಾಥ ಪರಂಪರೆಯಲ್ಲೇ ಮುಂದುವರಿದಿದೆ.

ಯೋಗಿ ಆದಿತ್ಯನಾಥರು ರಾಜಕಾರಣದಲ್ಲಿದ್ದರೂ ಆದಿಚುಂಚನಗಿರಿ ಮಠದೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಂಡಿ
ದ್ದಾರೆ. ‘ಆದಿತ್ಯನಾಥರ ಜತೆ ನಮ್ಮದು ಅವಿನಾಭಾವ ಸಂಬಂಧವಲ್ಲ, ಅವರು ಕೂಡ ನಮ್ಮ ಮಠದವರೇ. ನಾಥ ಪರಂಪರೆ ಯಲ್ಲಿರುವುದರಿಂದ ನಾವೂ ಅವರಿಗೆ ಸೇರಿದ್ದೇವೆ. ಆದಿತ್ಯನಾಥರ ಗುರುಗಳಾದ ಅವೈದ್ಯನಾಥರು ಹಾಗೂ ನಮ್ಮ ಗುರುದೈವರಾದ ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳು ಪರಮ ಆಪ್ತರಾಗಿದ್ದರು. ಇಬ್ಬರೂ ಒಂದೇ ದಾರಿಯಲ್ಲಿ ನಡೆದು ಗುರು ಪರಂಪರೆಗೆ ಶ್ರೇಷ್ಠತೆಯ ಮೆರುಗು ನೀಡಿದರು.

ಅದೇ ರೀತಿಯಲ್ಲಿ ಆದಿತ್ಯನಾಥರು ಮತ್ತು ನಾವು ಸಮಕಾಲೀನರು’ ಎಂದು ಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಹಿಂದೆಯೇ ಹೇಳಿದ್ದಾರೆ. ಮೇಲಾಗಿ ಯೋಗಿ ಆದಿತ್ಯನಾಥರು ಕರ್ನಾಟಕಕ್ಕೆ ಬಂದಾಗಲೆಲ್ಲಾ ಆದಿಚುಂಚನಗಿರಿ ಮಠಕ್ಕೆ ತೆರಳುತ್ತಾರೆ. ಅದೇ ರೀತಿ ಆದಿಚುಂಚನಗಿರಿ ಶ್ರೀಗಳು ಉತ್ತರ ಪ್ರದೇಶಕ್ಕೆ ಹೋದಾಗ ಗೋರಖಪುರ ಮಠಕ್ಕೆ ತೆರಳುತ್ತಾರೆ.

ಕಾಂಗ್ರೆಸ್‌ನ ಆತಂಕಕ್ಕೆ ಕಾರಣವಾಗಿರುವುದು ಇದೇ ವಿಚಾರ. ಒಂದೆಡೆ ಬಿಜೆಪಿ ಹಳೇ ಮೈಸೂರು ಭಾಗದಲ್ಲಿ ತನ್ನ ಬಲ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ತನ್ನ ತೆಕ್ಕೆಗೆ ಸೆಳೆದುಕೊಂಡಿದ್ದ ಶಕ್ತಿಯನ್ನು ಮರಳಿ ಪಡೆಯಲು ಜೆಡಿಎಸ್ ಹೋರಾಟ ನಡೆಸುತ್ತಿದೆ. ಆ ಎರಡೂ ಪಕ್ಷಗಳು ಒಂದಾಗಿ ಇದೀಗ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿದ್ದು, ಎಲ್ಲಿ ಒಕ್ಕಲಿಗರ ಮತಬ್ಯಾಂಕ್ ಅಲುಗಾಡುವುದೋ ಎಂಬ ಅನುಮಾನ ಕಾಂಗ್ರೆಸ್ ನಾಯಕರದ್ದು.

ಮತ್ತೊಂದೆಡೆ ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಮೇಲೆ ಆದಿಚುಂಚನಗಿರಿ ಮಠಕ್ಕೆ ಬರುವುದಕ್ಕೆ ಹೆಚ್ಚು ಪ್ರಚಾರ ಸಿಗುತ್ತಿದ್ದು, ಸಹಜವಾಗಿಯೇ ಇದರ ಲಾಭ ಬಿಜೆಪಿಗೆ ಆಗುತ್ತದೆ. ಒಕ್ಕಲಿಗರ ಬೆಲ್ಟ್‌ನಲ್ಲಿ ಬಿಜೆಪಿ ತನ್ನ ಮತಗಳನ್ನು ಹೆಚ್ಚಿಸಿಕೊಳ್ಳಲು ಎರಡು ಮಠಗಳ ಸಂಬಂಧವೂ ಒಂದು ಕಾರಣವಾಗಿದೆ. ಇದು ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲದ ಸಂಗತಿ ಏನೂ ಅಲ್ಲ. ಲೋಕಸಭೆ ಚುನಾವಣಾ ಪ್ರಚಾರಕ್ಕೆ ಬರುವ ಯೋಗಿ ಆದಿತ್ಯನಾಥ್, ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದು ಖಚಿತವಾಗಿದೆ.

ಹೀಗೆ ರಾಜ್ಯಕ್ಕೆ ಬಂದಾಗ ಅವರು ಆದಿಚುಂಚನಗಿರಿ ಮಠಕ್ಕೆ ಹೋಗಿ ಅಲ್ಲಿ ತಂಗಿದರೆ ಅಥವಾ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿದರೆ ಅದರ ಲಾಭ ಬಿಜೆಪಿ ಮತ್ತು ಜೆಡಿಎಸ್‌ಗೆ ಆಗುತ್ತದೆ. ಎರಡೂ ಮಠಗಳು ನಾಥ ಪಂಥಕ್ಕೆ ಸೇರಿದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಕೈ ಹಿಡಿದಿದ್ದ ಒಕ್ಕಲಿಗರು ಮತ್ತೆ ದೂರವಾಗುವ ಆತಂಕ ಕಾಂಗ್ರೆಸ್‌ನದ್ದು. ಅಂಥ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದಲೇ ಇದೀಗ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಾಗ ಆದಿಚುಂಚನಗಿರಿ ಶ್ರೀಗಳ ದೂರವಾಣಿ ಕದ್ದಾಲಿಕೆ ಮತ್ತು ಪರ್ಯಾಯ ಮಠ ಸ್ಥಾಪನೆ ವಿಚಾರವನ್ನು ಪ್ರಸ್ತಾಪಿಸಿ, ಜೆಡಿಎಸ್
ಮತ್ತು ಆ ಪಕ್ಷದೊಂದಿಗೆ ಕೈಜೋಡಿಸಿರುವ ಬಿಜೆಪಿ ಕೂಡ ಆದಿಚುಂಚನಗಿರಿ ಮಠದ ವಿರೋಧಿಗಳು ಎಂದು ಬಿಂಬಿಸಿ ಮಠದ ಭಕ್ತರ ಮತಗಳನ್ನು ಸೆಳೆಯುವ ಪ್ರಯತ್ನಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.

ಕಾಂಗ್ರೆಸ್‌ನ ಈ ತಂತ್ರಗಾರಿಕೆ ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಗೆ ತಲೆನೋವು ತಂದಿದೆ.

ಲಾಸ್ಟ್ ಸಿಪ್: ರಾಜಕಾರಣಿಗಳು ಹಳೆಯದನ್ನು ಮರೆಯುವುದು ಮತ್ತು ನೆನಪಿಸಿಕೊಳ್ಳುವುದು ಚುನಾವಣೆಯಲ್ಲಿ ಲಾಭ ಸಿಗಬಹುದು ಎಂದಾಗ ಮಾತ್ರ.