Thursday, 12th December 2024

ಸುಗಂಧ ಬೀರುವ ಪುಷ್ಪದ ವಿಷಯ ಗೊತ್ತಾ ?

ವಿದೇಶವಾಸಿ

ಕಿರಣ್ ಉಪಾಧ್ಯಾಯ, ಬಹ್ರೈನ್

dhyapaa@gmail.com

ಇದುವರೆಗೆ ಹನ್ನೊಂದು ಸಾವಿರ ಟನ್‌ಗಿಂತಲೂ ಹೆಚ್ಚು ಹೂವನ್ನು ಸಂಸ್ಕರಿಸಿ, ಮರುಬಳಕೆ ಮಾಡಿದೆ. ಕೇವಲ ಉತ್ತರ ಪ್ರದೇಶದ ದೇವಾಲಯಗಳಿಂದಲೇ ಪ್ರತಿನಿತ್ಯ ಎಂಟೂವರೆ ಟನ್‌ಗಳಷ್ಟು ದೇವರ ಮುಡಿ ಏರಿ ಇಳಿದ ಪುಷ್ಪವನ್ನು ಬಳಸಿಕೊಳ್ಳುತ್ತಿದೆ. ಇದುವರೆಗೆ ಸುಮಾರು ಹತ್ತು ಟನ್ ಕ್ರಿಮಿ ನಾಶಕಗಳನ್ನು ಬೇರ್ಪಡಿಸಿದೆ.

ಇತ್ತೀಚಿನ ದಿನಗಳಲ್ಲಿ ಬಹಳ ಸುದ್ದಿ ಮಾಡಿದ ಚಿತ್ರ ಪುಷ್ಪ. ಅಲ್ಲು ಅರ್ಜುನ್ ಮತ್ತು ರಷ್ಮಿಕಾ ಮಂದಣ್ಣ ಅಭಿನಯಿಸಿದ, ಸುಮಾರು ಇನ್ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಚಿತ್ರ ಮುನ್ನೂರ ಐವತ್ತು ಕೋಟಿಗಿಂತಲೂ ಹೆಚ್ಚು ಸಂಪಾದಿಸಿ, ಗಲ್ಲಾಪೆಟ್ಟಿಗೆಯಲ್ಲೂ ಗೌಜು ಮಾಡಿತು. ಮೊದಲೇ ಹೇಳಿಬಿಡುತ್ತೇನೆ, ಪುಷ್ಪ ಚಿತ್ರಕ್ಕೂ, ಈಗ ನಾನು ಹೇಳಲು ಹೊರಟಿರುವ ಪುಷ್ಪಕ್ಕೂ ದೂರ ದೂರದ ಯಾವ ಸಂಬಂಧವೂ ಇಲ್ಲ.

ಆದರೆ, ನೂರಾರು ಕೋಟಿ ಗಳಿಸದಿದ್ದರೂ, ಈ ‘ಪುಷ್ಪ’ದ ಸಾಧನೆಯನ್ನು ಯಾವ ಕಾರಣಕ್ಕೂ ಸಾರಾಸಗಟಾಗಿ ತೆಗೆದು ಹಾಕುವಂತಿಲ್ಲ. ‘ಫಲ’ ಅಗರಬತ್ತಿಯ ಕುರಿತು ಎಷ್ಟು ಜನರಿಗೆ ಅರಿವಿದೆಯೋ ಗೊತ್ತಿಲ್ಲ. ಹಿಂದಿ ಭಾಷೆಯಲ್ಲಿ ಫುಲ್ ಎಂದರೆ ಪುಷ್ಪ, ಹೂವು ಎಂಬ ಅರ್ಥ. ಈ ಹೆಸರಿನಲ್ಲಿ ಅಗರಬತ್ತಿ ಅಥವಾ ಊದಿನ ಕಡ್ಡಿ ತಯಾರಿಸುವ ಒಂದು ಸಂಸ್ಥೆ ಇದೆ. ಆ ಸಂಸ್ಥೆ ಹುಟ್ಟಿಕೊಂಡದ್ದು, ಅದರ ಹಿಂದಿನ ಶ್ರಮ, ನಡೆಯುತ್ತಿ ರುವ ದಾರಿ, ಎಲ್ಲವನ್ನೂ ಅವಲೋಕಿಸಿದರೆ, ಅದೊಂದು ಸಾಹಸ ಮತ್ತು ಸಂಕಲ್ಪದ ಸಮ್ಮಿಲನ.

ಅದರ ಹಿಂದಿರುವ ಉದ್ದೇಶ, ಮುಂದಿನ ಗುರಿಯನ್ನು ತಿಳಿದರೆ, ಅದೊಂದು ಸೋಜಿಗದ, ಸಂತಸದ ಸಮ್ಮಿಳಿತ ಭಾವ. ಸುಮಾರು ಏಳು ವರ್ಷಗಳ ಹಿಂದಿನ ಮಾತು. 2015ರ ಸಂಕ್ರಾಂತಿ ಹಬ್ಬದ ಸಂದರ್ಭ. ಆಗಿನ್ನೂ ಅಟೋಮೇಷನ್ ವಿeನಿಯಾಗಿ ಕೆಲಸ ಮಾಡುತ್ತಿದ್ದ, ಕಾನ್ಪುರ್ ಮೂಲದ ಅಂಕಿತ್ ಅಗ್ರವಾಲ್ ತಮ್ಮ ವಿದೇಶಿ ಒಡನಾಡಿಯೊಂದಿಗೆ ಗಂಗಾ ನದಿಯ ತೀರದಲ್ಲಿ ಕುಳಿತಿದ್ದರು. ಗಂಗೆಯಲ್ಲಿ ಶೌಚದ ನೀರು, ಕಾರ್ಖಾನೆಯ ತ್ಯಾಜ್ಯ, ಇತರ ಕೊಳಕು, ಕಂತೆ ಕಂತೆಯಾಗಿ ಬೆರೆತು ಹರಿಯುತ್ತಿರುವುದನ್ನು ಇಬ್ಬರೂ ನೋಡುತ್ತಿದ್ದರು. ‘ನಿಮ್ಮ ಪವಿತ್ರ ಗಂಗಾ ನದಿ ಇಷ್ಟೊಂದು ಮಲಿನವಾಗಿದೆಯಲ್ಲ, ಇದನ್ನು ಶುದ್ಧಗೊಳಿಸಲು ಯಾಕೆ ಯಾರೂ ಏನನ್ನೂ ಮಾಡುವುದಿಲ್ಲ?’ ಎಂದು ವಿದೇಶಿ ಮಿತ್ರ ಅಂಕಿತ್ ಅವರನ್ನು ಕೇಳಿದರು.

ಅದಕ್ಕೆ ಅಂಕಿತ್, ಭಾರತದಲ್ಲಿಯ ಜನಸಂಖ್ಯೆ, ಪ್ರತಿನಿತ್ಯ ಬರುವ ಯಾತ್ರಾರ್ಥಿಗಳು, ಸರಕಾರ, ಅಽಕಾರಿಗಳು ಇತ್ಯಾದಿ ನೆಪ ಹೇಳಿ
ಹಾರಿಕೆಯ ಉತ್ತರ ಕೊಟ್ಟಿದ್ದರು. ಆ ಸಂದರ್ಭದಲ್ಲಿ ದು ಒಡನಾಡಿಯನ್ನು ಸಮಾಧಾನ ಪಡಿಸಿರಲಿಕ್ಕೂ ಸಾಕು. ಆದರೆ, ಉತ್ತರ ಕೊಡುವುದಕ್ಕಿಂದ ಬಹಳ ಮೊದಲಿನಿಂದ ಅಂಕಿತ್ ಮನಸ್ಸಿನಲ್ಲಿಯೂ ಈ ವಿಚಾರದ ಕುರಿತು ಅಸಮಾಧಾನವಿತ್ತು. ಇನ್ನೂ ಎಷ್ಟು ದಿನ
ಇದೇ ರೀತಿಯ ಸಬೂಬು ಹೇಳಿಕೊಂಡಿರುವುದು? ಇನ್ನೆಷ್ಟು ದಿನ ಸರಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಯಾತ್ರಿಗಳು ಕ್ಷೇತ್ರವನ್ನು ಶುಚಿಯಾಗಿ ಇಡುವುದಿಲ್ಲ ಎಂದು ದೂರುತ್ತ ಕುಳಿತುಕೊಳ್ಳುವುದು? ಇದಕ್ಕೆ ನಾವೇ ಏನಾದರೂ ಪರಿಹಾರ ಕಂಡುಕೊಳ್ಳಬಹುದೇ? ನನ್ನಿಂದ ಏನು ಮಾಡಲು ಸಾಧ್ಯ ಎಂದು ಯೋಚಿಸುತ್ತಿರುವಾಗಲೇ, ಬಳಸಿದ ಹೂವು ಗಳನ್ನು ತುಂಬಿಕೊಂಡು ಬಂದ ವಾಹನವೊಂದು ದೇವಸ್ಥಾನದಿಂದ ತಂದಿದ್ದ ಎಲ್ಲಾ ಹೂವುಗಳನ್ನೂ ಗಂಗೆಯ ಮಡಿಲಿಗೆ ಸುರಿಯಿತು.

ವಾಹನವೇನೋ ಖಾಲಿಯಾಯಿತು, ಅಂಕಿತ್ ಅಗ್ರವಾಲ್ ಅವರ ಮನಸ್ಸಿನಲ್ಲಿ ಒಂದು ವಿಚಾರ ತುಂಬಿಕೊಂಡಿತು.ಅಂಕಿತ್ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸಂಶೋಧನೆ ಆರಂಭಿಸಿದರು. ಸಂಶೋಧನೆಯ ಪ್ರಕಾರ, ಭಾರತದಲ್ಲಿ ಪ್ರತಿನಿತ್ಯ ಹತ್ತು ಸಾವಿರ
ಕೋಟಿ ರುಪಾಯಿ ಮೌಲ್ಯದ ಹೂವಿನ ವ್ಯಾಪಾರವಾಗುತ್ತದೆ. ಮುಂದಿನ ಎಂಟು ಹತ್ತು ವರ್ಷದಲ್ಲಿ ಇದು ಐದು ಪಟ್ಟು ಹೆಚ್ಚಲಿದೆ. ಅದೆಷ್ಟೋ ಟನ್ ಹೂವು ದೇವರ ಮುಡಿ ಏರಿ, ಕೊನೆಗೆ ತ್ಯಾಜ್ಯವಾಗಿ ಅಂತ್ಯಗೊಳ್ಳುತ್ತದೆ. ಗಂಗಾ ನದಿಯ ಪ್ರತಿನಿತ್ಯ ಒಂದು ಸಾವಿರ ಟನ್ ಹೂವಿನ ತ್ಯಾಜ್ಯ ಎಸೆಯಲ್ಪಡುತ್ತದೆ.

ನೀರನ್ನು ಶುದ್ಧೀಕರಿಸಲು ಸರಕಾರವೂ ಕೋಟಿಗಟ್ಟಲೆ ಹಣವನ್ನು ಗಂಗಾ ನದಿಗೆ ಸುರಿಯುತ್ತಿದೆ. ಕೊನೆ ಪಕ್ಷ ಈ ಹೂವುಗಳ ಮರುಬಳಕೆ ಯಿಂದ ಏನನ್ನಾದರೂ ಮಾಡಲು ಸಾಧ್ಯವೇ ಎಂದು ಅಂಕಿತ್ ಯೋಚಿಸಲು ಆರಂಭಿಸಿದರು. ಅಂಕಿತ್ ತಮ್ಮ ಕಾರ್ಯ ಆರಂಭಿಸಿದರು.
ಮೊದಲು ಊದಿನ ಕಡ್ಡಿ ತಯಾರಿಸುವುದು ಎಂದು ನಿರ್ಧರಿಸಿದರು. ಅವರಲ್ಲಿರುವ ಹಣದಿಂದ ದೊಡ್ಡ ಪ್ರಮಾಣದಲ್ಲಿ ಕೆಲಸ ಆರಂಭಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಮೊದಲು ತಂದದ್ದು ಎರಡು ಕಿಲೋ ಆಗುವಷ್ಟು ಹೂವು ಮತ್ತು ಎಪ್ಪತ್ತು ಸಾವಿರ ರೂಪಾಯಿ ಖರ್ಚು ಮಾಡಿ ತಂದ ಯಂತ್ರಗಳು.

ನಿಮಗೆ ತಿಳಿದಿರಲಿ, ಸುಮಾರು ಇಪ್ಪತ್ತೈದು ಸಾವಿರ ದಿಂದ ನಲವತ್ತು ಸಾವಿರ ರುಪಾಯಿಗೆ ಹಸ್ತಚಾಲಿತ ಊದಿನ ಕಡ್ಡಿ ತಯಾರಿಸುವ ಯಂತ್ರಗಳು ಇಂದಿಗೂ ಲಭ್ಯ. ಸ್ವಯಂಚಾಲಿತ ಯಂತ್ರಗಳ ಬೆಲೆ ಸುಮಾರು ಅರವತ್ತು ಸಾವಿರದಿಂದ ಒಂದು ಲಕ್ಷ ರೂಪಾಯಿ. ಅಂಕಿತ್‌ಗೆ ಹೂವಿನಿಂದ ಅಗರಬತ್ತಿ ತಯಾರಿಸಬಹುದೆಂದು ಮನವರಿಕೆಯಾಗಿತ್ತು. ಹಲವಾರು ಕಡೆಗಳಲ್ಲಿ ತಮ್ಮ ಪ್ರಯೋಗದ ಕುರಿತು ತಿಳಿಸುತ್ತಿದ್ದರು, ಕೆಲವು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಮುಂಬೈ ನ ಐಐಟಿ ಮತ್ತು ಅಹಮದಾಬಾದ್‌ನ ಐಐಎಮ್ ಸಂಸ್ಥೆಗಳು ನಡೆಸಿದ ಸ್ಟಾರ್ಟ್ ಅಪ್ ಸ್ಫರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದರು. ಆ ಎರಡೇ ಸಂಸ್ಥೆಗಳಿಂದ ಸುಮಾರು ಇಪ್ಪತ್ತು ಲಕ್ಷ ರುಪಾಯಿ ಬಹುಮಾನ ಪಡೆದಿದ್ದರು ಅಂಕಿತ್.

ಜತೆಗೆ, ಐಐಟಿ ಕಾನ್ಪುರ್ ಮತ್ತು ಇತರ ಸಂಸ್ಥೆಗಳಿಂದ ಸುಮಾರು ಮೂರು ಕೋಟಿ ರುಪಾಯಿಯಷ್ಟು ಧನ ಸಹಾಯ ದೊರಕಿತು. ಅವರಲ್ಲಿ ರುವ ಉತ್ಸಾಹಕ್ಕೆ ಇನ್ನಷ್ಟು ಪ್ರೋತ್ಸಾಹದ ಧಾರೆ ಎರೆದಂತಾಗಿತ್ತು. ತಮ್ಮ ಮಿತ್ರ ಅಪೂರ್ವ ಅವರನ್ನು ತಮ್ಮೊಂದಿಗೆ ಸೇರಿಸಿಕೊಂಡರು. ಆ ಕ್ಷಣದಲ್ಲಿ ಅವರ ಎದುರಿಗಿದ್ದ ದೊಡ್ಡ ಸವಾಲೆಂದರೆ ಹೂವನ್ನು ಸಂಗ್ರಹಿಸುವುದು. ತಾಜಾ ಹೂವಾದರೆ ರೈತರಿಂದಲೋ, ಮಾರುಕಟ್ಟೆ ಯಿಂದಲೋ ಕೊಂಡುಕೊಳ್ಳಬಹುದಾಗಿತ್ತು. ಅವರ ಉದ್ದೇಶ ಅದಾಗಿರಲಿಲ್ಲ. ದೇವಸ್ಥಾನದಿಂದ ಆಚೆ ಬರುವ ಹೂವನ್ನು ತಮ್ಮ ಕೆಲಸಕ್ಕೆ ಬಳಸಿಕೊಳ್ಳಬೇಕು ಎನ್ನುವುದು ಅವರ ಮೂಲ ಮಂತ್ರವಾಗಿತ್ತು. ಅದಕ್ಕಾಗಿ ದೇವಸ್ಥಾನಗಳನ್ನು ಸಂಪರ್ಕಿಸಿದಾಗ ಬಂದ ಪ್ರತಿಕ್ರಿಯೆ ಅಂಕಿತ್‌ಗೆ ಉತ್ತೇಜನಕಾರಿಯಾಗಿರಲಿಲ್ಲ.

ದೇವರಿಗೆ ಏರಿಸಿದ ಹೂವನ್ನು ನೀರಿನಲ್ಲಿ ಬಿಡಬೇಕು ಎಂದು ನಂಬಿದ್ದವರಿಗೆ ಅಂಕಿತ್ ಮೇಲೆ ಭರವಸೆ ಇರಲಿಲ್ಲ. ದೇವಸ್ಥಾನದಿಂದ ಪಡೆದ ಹೂವನ್ನು ಎಲ್ಲಿಯೋ ಎಸೆದರೆ? ಇನ್ಯಾವುದೋ ವಸ್ತು ತಯಾರಿಸಲು ಬಳಸಿಕೊಂಡರೆ? ಇತ್ಯಾದಿ ಸಂಶಯಗಳಿದ್ದವು. ಅಂಥವರನ್ನು ಒಪ್ಪಿಸುವುದಕ್ಕೆ ಅಂಕಿತ್ ಪುರಾಣಾದ ಉದಾಹರಣೆಯನ್ನೇ ಕೊಟ್ಟರು. ‘ನಿನ್ನದನ್ನು ನಿನಗೇ ಸಮರ್ಪಿಸುತ್ತೇನೆ’ ಎಂದು ಧರ್ಮ ಗ್ರಂಥ ಗಳಲ್ಲಿ ಹೇಳಿದೆ, ದೇವರೇ ಸೃಷ್ಟಿಸಿದ ಹೂವನ್ನು ದೇವರಿಗೆ ಏರಿಸಿದ ನಂತರವೂ ಅದನ್ನು ಎಸೆಯುವ ಬದಲು, ಮತ್ತೊಂದು ರೂಪದಲ್ಲಿ ಅದನ್ನು ಪುನಃ ಸಮರ್ಪಿಸಬಹುದಲ್ಲ ಎಂದು ತಿಳಿಸಿ, ಒಪ್ಪಿಸಿದರು.

ಹೂವು ಸಿಗುತ್ತಿದ್ದಂತೆ, ಅವರ ಮುಂದಿದ್ದ ಇನ್ನೊಂದು ಪ್ರಶ್ನೆಯೆಂದರೆ, ಹೂವಿಗೆ ಸಿಂಪಡಿಸಿದ ಕೀಟನಾಶಕ, ಕ್ರಿಮಿನಾಶಕಗಳನ್ನು ಅದರಿಂದ ಬೇರ್ಪಡಿಸುವುದು. ಹೂವನ್ನು ಹಾಗೆಯೇ ಬಳಸಿದರೆ, ಅಗರಬತ್ತಿಯೊಂದಿಗೆ ಅವೂ ಕೂಡ ವಾತಾವರಣದಲ್ಲಿ ಸೇರಿಕೊಳ್ಳುತ್ತವೆ, ಕೀಟ ನಾಶಕ ಮಿಶ್ರಿತ ಹೊಗೆ ಮನುಷ್ಯನ ಹೃದಯ, ನರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಅವರಿಗೆ ಅರಿವಿತ್ತು. ಆ ನಿಟ್ಟಿನಲ್ಲಿ ಅಂಕಿತ್ ಸಾಕಷ್ಟು ಶ್ರಮವಹಿಸಿದರು.

ಫೂಲ್ ಸಂಸ್ಥೆ ಊದಿನ ಕಡ್ಡಿ ತಯಾರಿಸುವ ವಿಧಾನದಲ್ಲಿ ಮೊದಲು ಹೂವುಗಳನ್ನು ವರ್ಗೀಕರಿಸಲಾಗುತ್ತದೆ. ಅದರಿಂದ ಕ್ರಿಮಿನಾಶಕ ಗಳನ್ನು ಬೇರ್ಪಡಿಸಿ, ಪುನಃ ಅದನ್ನು ತೊಳೆದು ಒಣಗಿಸಲಾಗುತ್ತದೆ. ನಂತರ ಅದನ್ನು ಪುಡಿ ಮಾಡಿ, ಅದಕ್ಕೆ ಬೇಕಾದ ಪ್ರಮಾಣದಲ್ಲಿ ಎಣ್ಣೆ, ನೀರು ಸೇರಿಸಿ, ಚಪಾತಿ ಹಿಟ್ಟಿನಂತೆ ಕಲಸಿ, ಬಿದಿರಿನ ಕಡ್ಡಿಗೆ ಅದನ್ನು ಲೇಪಿಸಿ, ಏಳು-ಎಂಟು ದಿನ ಅದನ್ನು ಒಣಗಿಸಿ, ಊದಿನ ಕಡ್ಡಿ ತಯಾರಿಸು ತ್ತಾರೆ. ಅಂದರೆ ಬಹುತೇಕ ಎಲ್ಲ ಕೆಲಸಗಳೂ ಕೈಯಿಂದಲೇ ಆಗುತ್ತದೆ. ಯಂತ್ರಗಳ ಬಳಕೆ ತೀರಾ ಕಡಿಮೆ. ಇಂದು ಸಂಸ್ಥೆ ಸುಮಾರು ಎಪ್ಪತ್ತು ಜನರಿಗೆ ಉದ್ಯೋಗ ಒದಗಿಸಿಕೊಟ್ಟಿದೆ.

ಭಾರತದಲ್ಲಿ ಒಟ್ಟೂ ಎಂಬತ್ತು ಲಕ್ಷ ಜನ ಊದಿನ ಕಡ್ಡಿ ತಯಾರಿಸುವ ಉದ್ಯಮದಲ್ಲಿದ್ದಾರೆ. ಆ ಸಂಖ್ಯೆಯ ನಡುವೆ ಕೇವಲ ಎಪ್ಪತ್ತು ಸಣ್ಣ ಸಂಖ್ಯೆ ಎಂದು ಕಾಣಬಹುದು. ಆದರೆ ಅವರೆಲ್ಲ ಹಿಂದುಳಿದ, ಅಸ್ಪೃಷ್ಯ ವರ್ಗಕ್ಕೆ ಸೇರಿದ ಮಹಿಳೆಯರು ಎಂಬುದು ಉಲ್ಲೇಖನೀಯ.
ಆದರೆ, ಕರೋನಾ ಕಾಲದಲ್ಲಿ ಸಂಸ್ಥೆಗೆ ಹಣ, ಹೂವಿನ ಕೊರತೆ ಎದುರಾಗಿ, ಸಂಕಷ್ಟಕ್ಕೆ ಒಳಗಾಗಿತ್ತು. ನೌಕರರು ಎರಡು ತಿಂಗಳು ಸಂಬಳ ಪಡೆಯದೇ ಕೆಲಸಮಾಡಿದರು. ನಂತರ ಕೆಲವು ಸಂಸ್ಥೆಗಳಿಂದ ಧನ ಸಹಾಯ ಸಿಕ್ಕಿತಾದರೂ, ದೇವಸ್ಥಾನದ ಬಾಗಿಲೇ
ತೆರೆಯದಿದ್ದಾಗ ಹೂವುಗಳೂ ಸಿಗುತ್ತಿರಲಿಲ್ಲ, ಕೆಲವೊಮ್ಮೆ ರೈತರಿಗೆ ಸಹಕರಿಸಲೆಂದು ಹೂವು ಖರೀದಿಸಿದರೂ, ಅಗರಬತ್ತಿ ಮಾರಾಟ ವಾಗುತ್ತಿರಲಿಲ್ಲ.

ಅಂಕಿತ್ ಹೂವಿನಿಂದ ಇತರ ಉತ್ಪನ್ನಗಳನ್ನು ತಯಾರಿಸಲು ಯೋಚಿಸಿದರು. ಅದರ ಫಲವಾಗಿ ಸಂಸ್ಥೆ ಇಂದು ಸಾವಯವ ಬಣ್ಣ, ಸಾಬೂನು, ಪರಿಸರ ಸ್ನೇಹಿ ಬೆಂಡು (ಥರ್ಮಾಕೋಲ) ಇತ್ಯಾದಿಗಳನ್ನು ತಯಾರಿಸುತ್ತಿದೆ. ಸಶಕ್ತವಾಗಿ ತನ್ನ ಕಾಲ ಮೇಲೆ ನಿಂತಿದೆ.
ಇನ್ನೂ ಒಂದು ವಿಷಯ ಏನೆಂದರೆ, ಸಂಸ್ಥೆ ಯಂತೂ ಸಧೃಢವಾಗಿದೆ, ಅದರಲ್ಲಿ ಕೆಲಸ ಮಾಡುವ ಮಹಿಳೆಯರ ಮಕ್ಕಳು ಶಾಲೆಯ ಮೆಟ್ಟಿಲು ಹತ್ತಿದ್ದಾರೆ. ಅಲ್ಲದೆ, ಇಪ್ಪತ್ತು ಮಹಿಳೆಯರು ಸೇರಿ ಒಂದು ಕೆರೆಯನ್ನು ದತ್ತಕ್ಕೆ ಪಡೆದು ಅದರಲ್ಲಿ ಮೀನು ಸಾಕಣೆ ಮಾಡುತ್ತಿದ್ದಾರೆ. ಅಂಕಿತ್ ಕೂಡ ಅವರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಏನು ಗೊತ್ತಾ? ಸಂಸ್ಥೆ ಇದುವರೆಗೆ ಹನ್ನೊಂದು ಸಾವಿರ ಟನ್‌ಗಿಂತಲೂ ಹೆಚ್ಚು ಹೂವನ್ನು ಸಂಸ್ಕರಿಸಿ, ಮರುಬಳಕೆ ಮಾಡಿದೆ. ಕೇವಲ ಉತ್ತರ ಪ್ರದೇಶದ ದೇವಾಲಯಗಳಿಂದಲೇ ಪ್ರತಿನಿತ್ಯ ಎಂಟೂವರೆ ಟನ್‌ಗಳಷ್ಟು ದೇವರ ಮುಡಿ ಏರಿ ಇಳಿದ ಪುಷ್ಪವನ್ನು ಬಳಸಿ ಕೊಳ್ಳುತ್ತಿದೆ. ಇದುವರೆಗೆ ಸುಮಾರು ಹತ್ತು ಟನ್ ಕ್ರಿಮಿ ನಾಶಕ, ಕೀಟನಾಶಕಗಳನ್ನು ಬೇರ್ಪಡಿಸಿ, ಅದರಿಂದ ಪರಿಸರಕ್ಕೆ ಆಗುವ ಹಾನಿಯನ್ನು ತಪ್ಪಿಸಿದೆ. ಸಂಸ್ಥೆಯ ಅಂಕಿ ಅಂಶದ ಪ್ರಕಾರ, ಒಂದು ಪ್ಯಾಕೆಟ್ ಊದಿನ ಕಡ್ಡಿ ತಯಾರಿಸಲು ಒಂದೂ ಕಾಲು ಕಿಲೋ
ಹೂವು ಬೇಕಾಗುತ್ತದೆಯಂತೆ. ಸಂಸ್ಥೆ ಪ್ರತಿನಿತ್ಯ ಇಂತಹ ಒಂದು ಸಾವಿರ ಪ್ಯಾಕೆಟ್ ಮಾರಾಟಮಾಡುತ್ತಿದೆ ಎಂದರೆ ಪ್ರತಿನಿತ್ಯ ಒಂದೂ ಕಾಲು ಟನ್ ಹೂವು ಮರು ಬಳಕೆಯಾಗುತ್ತಿದೆ.

ಶ್ರದ್ಧೆ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡಿದರೆ ಮಣ್ಣೂ ಕೂಡ ಚಿನ್ನವನ್ನು ಕೊಡುತ್ತದೆ ಎಂಬ ಮಾತಿದೆ. ಅದನ್ನು, ಹಳೆಯ ಹೂವೂ ಕೂಡ ಹಣವನ್ನು ಕೊಡುತ್ತದೆ ಎಂದು ಬದಲಾಯಿಸಿಕೊಳ್ಳಬಹುದೇ? ನನಗೆ ಅನಿಸುವುದು, ಸಂಸ್ಥೆ ಎಷ್ಟು ಊದಿನ ಕಡ್ಡಿ ತಯಾರಿಸುತ್ತದೆ, ಬೇರೆ ಏನೇನು ತಯಾರಿಸುತ್ತಿದೆ, ಎಷ್ಟು ವ್ಯಾಪಾರ ಮಾಡುತ್ತಿದೆ, ಎಷ್ಟು ಲಾಭ ಮಾಡುತ್ತಿದೆ ಎನ್ನುವುವುದು ನಗಣ್ಯ.
ಸಂಸ್ಥೆ ಒಂದಷ್ಟು ಜನರಿಗೆ ಉದ್ಯೋಗ, ಒಂದಷ್ಟು ಜನರಿಗೆ ಪ್ರೇರಣೆ ಒದಗಿಸಿಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಪ್ರತಿನಿತ್ಯ ಒಂದಷ್ಟು ಪುಷ್ಪ ತ್ಯಾಜ್ಯವಾಗಿ ಪರಿಸರದೊಂದಿಗೆ ಸೇರುವುದನ್ನು ‘ಫಲ’ (ಪುಷ್ಪ) ತಪ್ಪಿಸಿದೆ.