ಗಂಟಾಘೋಷ
ಗುರುರಾಜದ ಗಂಟಿಹೊಳೆ
೧೦೮ ಅಡಿ ಉದ್ದ ೩.೫ ಅಡಿಗಳಷ್ಟು ಅಗಲ ಮತ್ತು ೩,೫೦೦ ಕೆ.ಜಿ. ತೂಕದ ಬಹುದೊಡ್ಡ ಅಗರಬತ್ತಿಯೊಂದು ಗುಜರಾತಿನ ವಡೋದರದಿಂದ ಉದ್ದನೆಯ ಟ್ರಕ್ ಏರಿ ಅಯೋಧ್ಯೆಯ ಕಡೆಗೆ ಸಂಭ್ರಮದಿಂದ ಸಾಗುತ್ತಿದ್ದರೆ, ಅದರ ಪರಿಮಳವು ಸುಮಾರು ಕಿ.ಮೀ.ವರೆಗೆ ಘಮಿಸುವುದು ಎಂಬುದನ್ನು ಕೇಳಿ ತಿಳಿದಾಗ ಆಗುವ ಆನಂದ ಸಹಜವಾದುದೇ. ಪಕ್ಕದ ನೇಪಾಳ ದೇಶದಿಂದ ಅಲ್ಲಿನ ಆಡಳಿತ ಮತ್ತು ಸಮಸ್ತ ನಾಗರಿಕರ ಸಹಕಾರದೊಂದಿಗೆ ಅಳಿಯ ಶ್ರೀರಾಮನಿಗೆ, ಮನೆಮಗಳು ಜಾನಕಿಗೆ ಇಷ್ಟವಾದ ತಿನಿಸು, ಆಭರಣಗಳ ಉಡುಗೊರೆಯ ದೊಡ್ಡ ಪೆಟ್ಟಿಗೆಗಳನ್ನು ಅತ್ಯಂತ ಸಂಭ್ರಮದಿಂದ ಅಯೋಧ್ಯೆಯ ಕಡೆಗೆ ಕಳುಹಿಸುವ ಉತ್ಸವ ಆಚರಿಸುತ್ತಿದ್ದಾರೆ.
ನಮ್ಮವರೇ ಆದ ಮೈಸೂರಿನ ಅರುಣ ಯೋಗಿರಾಜ್ ಅವರು ಶ್ರೀರಾಮರ ಗರ್ಭಗುಡಿಯ ಮೂರ್ತಿಯನ್ನು ಕೆತ್ತನೆ ಮಾಡಲು ಇಡೀ ದೇಶದಲ್ಲಿಯೇ ಆಯ್ಕೆಯಾದ ಮೂವರು ಶಿಲ್ಪಿಗಳಲ್ಲಿ ಒಬ್ಬರಾಗಿರುವುದು ಒಂದು ಹೆಮ್ಮೆ. ಆದರೆ ದೇಶಾದ್ಯಂತ ಕರ್ನಾಟಕವು ಕುಖ್ಯಾತಿ ಗಳಿಸಿದ್ದು ಮಾತ್ರ ಬಹು ಖೇದಕರ. ಇಡೀ ದೇಶವೇ ಒಂದು ಸಂಭ್ರಮದ ಸಮ್ಮೋಹನ ಸ್ಥಿತಿಯಲ್ಲಿರುವಾಗ ಅದನ್ನು ಭಂಗಪಡಿಸಲೆಂದೇ ಕಾಂಗ್ರೆಸ್ ಸರಕಾರವು ೩೧ ವರ್ಷಗಳಷ್ಟು ಹಳೆಯ, ಅದೂ ರಾಜಕೀಯ ಪ್ರೇರಿತವಾದ ಕೇಸ್ ಅನ್ನು ಸುಖಾಸುಮ್ಮನೆ ಹುಡುಕಿ-ತಡಕಾಡಿ ಹೊರತೆಗೆದು, ಹುಬ್ಬಳ್ಳಿಯ ಜನತೆಗೇ ಗೊತ್ತಿರದ ಪೂಜಾರಿ ಎಂಬ ಕರಸೇವಕರನ್ನು ಬಂಽಸಿ ತನ್ನ ಅಽಕಾರ ದರ್ಪ ಮೆರೆಯಿತು.
ಈ ಮೂಲಕ ತನ್ನ ಸಣ್ಣತನವನ್ನು ಮತ್ತು ವಿರೋಧಿಸುವವರನ್ನು ಹತ್ತಿಕ್ಕುವ ಸಂವಿಧಾನ ವಿರೋಧಿ ನಡೆಯನ್ನು ಪೊಲೀಸ್ ವ್ಯವಸ್ಥೆಯ ಮೂಲಕ ಜಾರಿಗೊಳಿಸಲು ಯತ್ನಿಸಿತು. ಆ ಕರಸೇವಕರು ಶ್ರೀರಾಮರ ದೇಗುಲ ಕಟ್ಟುವ ಅಮೃತ ಕಾಲದಲ್ಲಿ ಸಮಸ್ತ ರಾಜ್ಯ, ದೇಶದ ಮುಂದೆ ಬಂದು ತಾವು ಎಂದೋ ಮಾಡಿದ
ಧರ್ಮ ಕಾರ್ಯದ ಒಂದು ಸಣ್ಣ ಸೇವೆಗೆ ಸೂಕ್ತ ‘ಗುರುತಿಸುವಿಕೆ’ ಪಡೆದುಕೊಂಡರು. ಈ ಒಂದು ಘಟನೆಯು ರಾಜ್ಯದ ವಿಪಕ್ಷ ನಾಯಕರು ಕೆರಳುವಂತೆ ಮಾಡಿತಲ್ಲದೇ, ಈ ಮೂಲಕ ಸಮಸ್ತ ಶ್ರೀರಾಮ ಸೇವಕರನ್ನು ಮತ್ತೆ ಸಾರ್ವಜನಿಕವಾಗಿ ನೆನೆದು ಅವರನ್ನು ಬೆಂಬಲಿಸುವಂತೆ, ಸನ್ಮಾನಿಸುವಂತೆಯೂ ಪ್ರೇರೇಪಿಸಿತು.
ಈ ಹಂತದಲ್ಲಿ ಹಲವಾರು ಘಟನೆಗಳಾದವು. ಸರಕಾರ ತಾನೇ ಹಗ್ಗ ಕೊಟ್ಟು ತನ್ನ ಕೈಯನ್ನು ಕಟ್ಟಿಸಿಕೊಳ್ಳಲು ಯತ್ನಿಸಿತೆಂದೇ ಹೇಳಬಹುದು. ಈ ಒಂದು ವ್ಯತ್ಯಯವನ್ನು ರಾಜ್ಯ ಬಿಜೆಪಿಯು ಅಸವಾಗಿಸಿಕೊಂಡು ಮುಂದಿನ ದಿನಗಳಲ್ಲಿ ಹೋರಾಟಕ್ಕಿಳಿಯುತ್ತದೆ. ಇದರ ನಡುವೆಯೇ ನಾವು ಮುಜರಾಯಿ ಇಲಾಖೆ ಮತ್ತು ಸರಕಾರಕ್ಕೆ ಪತ್ರ ಬರೆದು, ಶ್ರೀರಾಮರ ಪ್ರಾಣ ಪ್ರತಿಷ್ಠಾಪನೆಯ ಗಳಿಗೆಯಲ್ಲಿ ರಾಜ್ಯಾದ್ಯಂತದ ಸಮಸ್ತ ದೇಗುಲಗಳಲ್ಲಿ ಪೂಜೆ, ಪ್ರಾರ್ಥನೆ, ಮಂಗಳಾರತಿ ಸೇವೆಗಳನ್ನು ಕೈಗೊಳ್ಳುವಂತೆ ಇಲಾಖೆ ಮೂಲಕ ಆದೇಶಿಸಬೇಕೆಂದು ಆಗ್ರಹಿಸಿದ್ದೆವು. ಇದಕ್ಕೆ ಕಾಂಗ್ರೆಸ್ ಸರಕಾರ ಕೊನೆಗೂ ಮಣಿದು, ಹುಬ್ಬಳ್ಳಿಯ ಘಟನೆಯಲ್ಲಾದ ಮುಖಭಂಗಕ್ಕೆ ಪರ್ಯಾಯವಾಗಿ ಈ ಆದೇಶವನ್ನು ಹೊರಡಿಸಿತೆಂದು ಜನರೂ ಮಾತಾಡಿಕೊಳ್ಳುತ್ತಿದ್ದಾರೆ. ಅದೇನೇ ಇರಲಿ, ‘ಶ್ರೀರಾಮರು ಕಲ್ಪನೆಯ ವ್ಯಕ್ತಿ, ರಾಮಸೇತು ಎಂಬುದು ಇರಲೇ ಇಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅಫಿಡವಿಟ್ಟು ಸಲ್ಲಿಸಿದ್ದ ಕಾಂಗ್ರೆಸ್‌ನವರು ಇಂದು, ‘ಶ್ರೀರಾಮರ ಜನ್ಮಸ್ಥಳ ಅಯೋಧ್ಯೆಯಲ್ಲಿ ನಡೆಯುತ್ತಿರುವ…’ ಎಂದು ಪತ್ರ ಹೊರಡಿಸುವ ಮೂಲಕ ಶಾಶ್ವತ ಸತ್ಯವನ್ನು ಅಧಿಕೃತವಾಗಿ ವಿಧಿಯಿಲ್ಲದೇ ಒಪ್ಪಿಕೊಂಡಿದ್ದಾರೆ.
ಎಲ್ಲರೂ ರಾಹುಲ್ ಗಾಂಧಿಯವರ ‘ಭಾರತ್ ಜೋಡೋ’ ಯಾತ್ರೆಯ ಕುರಿತಂತೆ ಚರ್ಚಿಸಲು ಆರಂಭಿಸಿದರು.
ವಿಷಯವೇನೆಂದು ಗಮನಿಸಿದಾಗ, ಸುಮಾರು ಕಿ.ಮೀ. ಗಳನ್ನು ಅರ್ಧ ಓಡುತ್ತ ಇನ್ನರ್ಧ ನಡೆಯುತ್ತ ಮುಗಿಸಿದ ಅರೆಬರೆ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಆಯಾ ರಾಜ್ಯದ ಕೆಲ ನಾಯಕರು ಭಾಗಿಯಾಗಿದ್ದರು. ಆದರೆ, ಈ ವಿಷಯ ಮುನ್ನೆಲೆಗೆ ಬರಲು ಮುಖ್ಯ ಕಾರಣ ಪ್ರಧಾನಿ ಮೋದಿ ಯವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿ ಕೆಲ ಅಪರೂಪದ ಫೋಟೋಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದು. ಅವು ಬಹಳ ಕ್ಲೀನ್ ಆಗಿ, ಕೂಲ್ ಆಗಿಯೇ ಇದ್ದವು. ಆದರೆ ಬೆಂಕಿ ಬಿದ್ದದ್ದು ಮಾತ್ರ ಪಕ್ಕದ ಮಾಲ್ಡೀವ್ಸ್ ಮತ್ತು ಚೀನಾ ದೇಶಕ್ಕೆ. ಈ ಮಾಲ್ಡೀವ್ಸ್, ಸಾರ್ಕ್ ಕೂಟದ ಸದಸ್ಯನಾಗಿರುವಂತೆಯೇ ಇಸ್ಲಾಮಿಕ್ ಸಹಕಾರಿ ಕೂಟದ ಸದಸ್ಯನೂ ಹೌದು, ಷಾಂಘೈ ಕೋ ಆಪರೇಷನ್‌ನ ಸಹಭಾಗಿಯೂ ಹೌದು. ಮೇಲಾಗಿ ಅದು ಇಸ್ಲಾಮಿಕ್ ರಾಷ್ಟ್ರ.
ಇದನ್ನು ಚೀನಾ ತನ್ನ ತೆಕ್ಕೆಗೆ ತೆಗೆದುಕೊಂಡು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತ, ಭಾರತದ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದೆ. ಸುರಕ್ಷತೆಯ ವಿಚಾರದಲ್ಲಿ ಮಾಲ್ಡೀವ್ಸ್ ದೇಶ ಭಾರತದ ಪಾಲಿಗೆ ತಲೆನೋವಾಗಿ ಪರಿಣಮಿಸಬಹುದು ಎಂದುಕೊಳ್ಳುತ್ತಿರುವಾಗಲೇ ಮೋದಿಯವರು ಉರುಳಿಸಿದ ದಾಳ ಮಾತ್ರ ಎಂಥ ಪ್ರಕಾಂಡ ರಾಜಕೀಯ ಪಂಡಿತರಿಗೂ ನಿಲುಕದಂತಿತ್ತು. ಇದು ಜಗತ್ತಿಗೆ, ಅದರಲ್ಲೂ ಮಾಲ್ಡೀವ್ಸ್‌ಗೆ ತಿಳಿಯಲು ೧೫ ನಿಮಿಷಗಳೂ ಬೇಕಾಗಲಿಲ್ಲ ಎಂಬುದು ವಿಶ್ವ ರಾಜಕೀಯದಲ್ಲಿ ಮೋದಿಯವರ ತಾಕತ್ತೇನೆಂಬುದನ್ನು ತೋರಿಸುತ್ತದೆ. ಭಾ ತದ ಅತ್ಯಂತ ಚಿಕ್ಕರಾಜ್ಯ ಗೋವಾದ ವಿಸ್ತೀರ್ಣ ೩೨೦೭ ಚ.ಕಿ.ಮೀ. ಆದರೆ ಈ ಮಾಲ್ಡೀವ್ಸ್‌ನದ್ದು ೨೯೮ ಚ.ಕಿ.ಮೀ. ಮಾತ್ರ. ಮಾಲ್ಡೀವ್ಸ್‌ನ ಒಟ್ಟು ಜಿಡಿಪಿಯು ನಮ್ಮಲ್ಲಿನ ಸಹಜ ಶ್ರೀಮಂತರ ಆಸ್ತಿಯ ಕಾಲುಭಾಗವೂ ಇಲ್ಲ.
ಜನಸಂಖ್ಯೆ ಐದೂಕಾಲು ಲಕ್ಷದ ಆಚೀಚೆ. ಅದು ಇತ್ತೀಚೆಗೆ ಆರ್ಥಿಕ ಸಂಕಷ್ಟದಲ್ಲಿದ್ದಾಗ ನಮ್ಮ ಪ್ರಧಾನಿ ಅನಿಯಮಿತವಾಗಿ ಸಹಾಯಹಸ್ತ ಚಾಚಿದರು. ಮಾಲ್ಡೀವ್ಸ್‌ನ ಎಂಥ ಕಠಿಣ ಕಾಲದಲ್ಲೂ ಭಾರತ ಸಹಾಯ ನೀಡುತ್ತ ಮಿತ್ರನಂತೆ ಜತೆಗಿತ್ತು. ಇಂಥ ಭಾರತವನ್ನು ನೆನೆಯಬೇಕಿದ್ದ ಆ ದೇಶ ಮತ್ತು ಅಲ್ಲಿನ ಮಂತ್ರಿ
ಮಹೋದಯರು ಸುಖಾಸುಮ್ಮನೆ ಭಾರತವನ್ನು, ನಮ್ಮ ಪ್ರಧಾನಿಯನ್ನು ಮತ್ತು ಹಿಂದೂ ಧರ್ಮವನ್ನು ಅವಹೇಳನಕಾರಿಯಾಗಿ ನಿಂದಿಸಿದರು. ೨೦೨೩ರಲ್ಲಿ ಸುಮಾರು ೨.೫ ಲಕ್ಷದಷ್ಟು ಭಾರತೀಯರು ಮಾಲ್ಡೀವ್ಸ್‌ಗೆ ಭೇಟಿಯಿತ್ತು ಅಲ್ಲಿನ ಪ್ರವಾಸೋದ್ಯಮಕ್ಕೆ ಆಸರೆಯಾಗಿದ್ದರು ಮತ್ತು ಆರ್ಥಿಕತೆಗೆ ಮೂಲವಾಗಿದ್ದರು. ಭಾರತವನ್ನು ಅವಮಾನಿಸಿದ ಕೇವಲ ೧೦ ನಿಮಿಷಗಳಲ್ಲಿ ಆ ದೇಶದ ಹಣೆಬರಹವೇ ಬದಲಾಗಿ ಹೋಯಿತು.
ಅಲ್ಲಿಗೆ ತೆರಳಲು ಕಾಯ್ದಿರಿಸಿದ್ದ ಹೋಟೆಲ್ ಕೊಠಡಿಗಳನ್ನು, ವಿಮಾನದ ಟಿಕೆಟ್‌ಗಳನ್ನೂ ಭಾರತೀಯರು ರದ್ದುಪಡಿಸತೊಡಗಿದರು. ಈ ಹಂತದಲ್ಲಿ ತೆಂಡೂಲ್ಕರ್
ಸೇರಿದಂತೆ ಕೆಲ ನಟರು ಕೂಡ ಮಾಲ್ಡೀವ್ಸ್‌ನ ವರ್ತನೆಗೆ ಕೋಪ ವ್ಯಕ್ತಪಡಿಸಿ, ಅಲ್ಲಿಗೆ ಹೋಗುವ ಬದಲಿಗೆ ನಮ್ಮದೇ ಲಕ್ಷದ್ವೀಪಕ್ಕೆ ಪ್ರವಾಸ ಕೈಗೊಳ್ಳುವಂತೆಯೂ ಸಲಹೆ ನೀಡಿದರು. ಈ ಬೆಳವಣಿ ಗೆಯಿಂದಾಗಿ, ಮೋದಿಯವರು ಯಾವ ಉದ್ದೇಶವಿಟ್ಟುಕೊಂಡು ಲಕ್ಷದ್ವೀಪಕ್ಕೆ ೨ ದಿನಗಳ ಭೇಟಿಯಿತ್ತು ಅಲ್ಲಿನ ವಿಶೇಷತೆಗಳ ಬಗ್ಗೆ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರೋ ಅದು ಹೇರಳ ಫಲಪ್ರದವಾಯಿತು.
ಒಬ್ಬ ರಾಹುಲ್ ನೂರಾರು ಕಿ.ಮೀ. ಅಡ್ಡಾದಿಡ್ಡಿಯಾಗಿ ಓಡುತ್ತ ಗಮನ ಸೆಳೆಯಲು ಯತ್ನಿಸಿ ವಿಫಲರಾದರೆ, ನಮ್ಮ ಪ್ರಧಾನಿಯು ಕೇವಲ ಹತ್ತು ಹೆಜ್ಜೆ ನಡೆದಾಡಿ, ನಮ್ಮದೇ ಲಕ್ಷದ್ವೀಪದ ಪ್ರವಾಸಕ್ಕೆ ಹೊಸಭಾಷ್ಯವನ್ನೂ ಭವಿಷ್ಯತ್ತನ್ನೂ ಬರೆದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಬರೆದುಕೊಳ್ಳುತ್ತಿದ್ದಾರೆ.
ಅಷ್ಟಕ್ಕೂ ಮಾಲ್ಡೀವ್ಸ್‌ನವರು ಈ ಲಕ್ಷದ್ವೀಪವನ್ನು ವಿರೋಧಿಸಿದ್ದೇಕೆ, ಪ್ರಧಾನಿಯ ಪ್ರವಾಸಕ್ಕೆ ಹೊಟ್ಟೆಯುರಿ ದುಕೊಂಡಿದ್ದೇಕೆ? ಎಂಬ ಪ್ರಶ್ನೆ ಮೂಡುವುದು ಸಹಜ. ೩೩ ಚ.ಕಿ.ಮೀ. ಕ್ಷೇತ್ರವ್ಯಾಪ್ತಿ ಹೊಂದಿರುವ ಈ ದ್ವೀಪಸಮೂಹದ ಜನಸಂಖ್ಯೆ ಸರಿಸುಮಾರು ೬೫,೦೦೦. ಇದು ಅತ್ಯುತ್ತಮ ಪ್ರವಾಸಿ ತಾಣಗಳಾಗಿರುವ ೩೧ ದ್ವೀಪಗಳನ್ನು ಹೊಂದಿದ್ದು ಕೇರಳದ ಹೈಕೋರ್ಟ್ ನ್ಯಾಯವ್ಯಾಪ್ತಿಗೆ ಒಳಪಟ್ಟಿದೆ.
ಕೇರಳದ ಪ್ರಸಿದ್ಧ ಚೇರ ರಾಜಮನೆತನದ ಆಳ್ವಿಕೆಗೆ ಒಳಪಟ್ಟಿದ್ದ ಈ ಪ್ರದೇಶಕ್ಕೆ ಬೌದ್ಧ ಸನ್ಯಾಸಿ ಸಂಘಮಿತ್ರರೂ ಬಂದಿದ್ದರೆನ್ನಲಾಗುತ್ತದೆ. ಆದರೆ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಲಕ್ಷದ್ವೀಪ ನಿರ್ಲಕ್ಷ್ಯಕ್ಕೊಳಗಾಗಿತ್ತು. ತಾವು ಕೂಡ ಭಾರತಕ್ಕೆ ಸೇರಿದವರು ಎಂಬುದನ್ನು ಇಲ್ಲಿನ ಜನರು ಮರೆಯುವಂತೆ ಈ ಹಿಂದಿನ ಸರಕಾರಗಳು ನಡೆದುಕೊಂಡಿದ್ದವು ಕೂಡ! ಯಾವಾಗ ಮೋದಿ ಸರಕಾರವು ಪ್ರಫುಲ್ ಪಟೇಲರನ್ನು ಇಲ್ಲಿ ಆಡಳಿತಾಧಿಕಾರಿಯನ್ನಾಗಿ ನೇಮಿಸಿತೋ ಅಲ್ಲಿಂದ ಶುರುವಾಯಿತು ನೋಡಿ ‘ಕೆಲವರ’ ಕಲರವ. ಆಗ ಮೋದಿ ಸರಕಾರ, ‘ಯೇ ರೋನಾ-ಧೋನಾ ಬಂದ್ ಕೀಜಿಯೇ, ದೇಶ್ ಸರ್ವಪ್ರಥಮ್’ ಎಂದು ಗಂಭೀರವಾಗಿಯೇ ಹೇಳಿದ್ದಕ್ಕೆ ಎಲ್ಲಾ ವಸೂಲಿಬಾಜಿಗಳು ಗಪ್‌ಚುಪ್!
ಈಗ ದೇಶವೇ ಅಮೃತಕಾಲದ ಹೊಸ್ತಿಲಲ್ಲಿದೆ. ರಸ್ತೆ, ಸಾರಿಗೆ, ರೈಲು ವ್ಯವಸ್ಥೆ ಸೇರಿದಂತೆ ಹಲವು ಮೂಲಸೌಕರ್ಯ ಕಾರ್ಯಕ್ರಮಗಳನ್ನು ಮೋದಿ ಸರಕಾರ ಹಮ್ಮಿಕೊಂಡು ನಿಗದಿತ ಕಾಲಮಿತಿಯೊಳಗೇ ಮುಗಿಸುತ್ತಿದೆ. ಈ ಹಂತದಲ್ಲಿ, ಲಕ್ಷದ್ವೀಪ ಪ್ರವಾಸೋದ್ಯಮಕ್ಕೆ ಮೋದಿಯವರು ನೀಡಿದ ಸಮಯೋಚಿತ ಭೇಟಿಯೂ ಮಹತ್ವ ಪಡೆದುಕೊಂಡು ಯಶಸ್ವಿಯಾಯಿತು; ಕೋಟಿಗಟ್ಟಲೆ ಹಣ ಸುರಿದು ಕೈಗೊಳ್ಳಬೇಕಿದ್ದ ಪ್ರವಾಸೋದ್ಯಮದ ಪ್ರಚಾರಕಾರ್ಯವು ಮೋದಿಯವರ ನಾಲ್ಕು ಚಮತ್ಕಾರಿಕ ಫೋಟೋಗಳಿಂದಲೇ ಸಂಪನ್ನವಾಯಿತು ಎನ್ನಬಹುದು. ಸಾಮಾಜಿಕ ಮಾಧ್ಯಮಗಳಲ್ಲಂತೂ ‘ಮಾಲ್ಡೀವ್ಸ್ ವರ್ಸಸ್ ಲಕ್ಷದ್ವೀಪ’ ಎಂಬ ವಿಷಯ ಟ್ರೆಂಡಿಂಗ್‌ನಲ್ಲಿದೆ. ಲಕ್ಷದ್ವೀಪದ ಪ್ರವಾಸೋದ್ಯಮವು ಮತ್ತಷ್ಟು ನಳನಳಿಸಲಿ, ನಮ್ಮ ಓದುಗರೂ ಇಲ್ಲಿಗೊಮ್ಮೆ ಭೇಟಿಕೊಟ್ಟು ತಮ್ಮ ಅನುಭವಗಳನ್ನು ಹಂಚಿಕೊಳ್ಳುವಂತಾಗಲಿ.