Friday, 13th December 2024

ನಿಮಗೆ ಗೊತ್ತೇ, ಕಿವಿಯೊಳಗಿದೆ ಎರಡು ಪಿಯಾನೊ

ಹಿಂದಿರುಗಿ ನೋಡಿದಾಗ

ಜೀವಜಗತ್ತಿನಲ್ಲಿ ಒಂದಷ್ಟು ಅಲಿಖಿತ ನಿಯಮಗಳಿವೆ. ಪ್ರತಿಯೊಂದು ಜೀವಿಯೂ ಬದುಕಲು ಹೋರಾಡಬೇಕಾಗುತ್ತದೆ. ಈ ಹೋರಾಟದಲ್ಲಿ ಬಲಶಾಲಿ ಯಾದದ್ದು ಬದುಕುಳಿಯುತ್ತದೆ, ದುರ್ಬಲವಾದದ್ದು ಅಳಿಯುತ್ತದೆ. ಕೊಂದು ತಿನ್ನುವುದೇ ಈ ಭೂಮಿಯ ನ್ಯಾಯ. ಹಾಗಾಗಿ ಪ್ರತಿ ಜೀವಿಯೂ ಆತ್ಮರಕ್ಷಣೆಗೆ ಆದ್ಯತೆ ನೀಡುತ್ತದೆ. ಆತ್ಮರಕ್ಷಣೆಯಲ್ಲಿ ೨ ವಿಧ. ಮೊದಲನೆ ಯದು ಪ್ರಕೃತಿದತ್ತವಾದದ್ದು, ಎರಡನೆಯದು ಮನುಷ್ಯ ನಿರ್ಮಿತವಾದದ್ದು.

ಪ್ರಕೃತಿದತ್ತ ರಕ್ಷಣಾ ವ್ಯವಸ್ಥೆಯಲ್ಲಿ ಮುಖ್ಯವಾದವು ನಮ್ಮ ಪಂಚೇಂದ್ರಿಗಳು. ಇವು ಹೊರಜಗತ್ತಿನ ಎಲ್ಲ ಮಾಹಿತಿಯನ್ನು ಮಿದುಳಿಗೆ ನೀಡುತ್ತದೆ. ಮಿದುಳು ಆ ಮಾಹಿತಿಯನ್ನು ವಿಶ್ಲೇಷಿಸಿ, ಸೂಕ್ತ ಪ್ರತಿಕ್ರಿಯೆಯನ್ನು ನೀಡುತ್ತದೆ. ಹಾಗೆಯೇ ಈ ಪಂಚೇಂದ್ರಿಯಗಳ ರಕ್ಷಣೆಗೆ ಕೆಲವು ವ್ಯವಸ್ಥೆಗಳೂ
ರೂಪುಗೊಂಡಿವೆ. ಕಣ್ಣಲ್ಲಿ ಕಣ್ಣೀರು, ಮೂಗಿನಲ್ಲಿ ಸಿಂಬಳ, ಕಿವಿಯಲ್ಲಿ ಗುಗ್ಗೆ, ಬಾಯಲ್ಲಿ ಜೊಲ್ಲು ಹಾಗೂ ಚರ್ಮದ ಮೇಲೆ ಬೆವರು ಇದೆ. ನಮ್ಮ ದೇಹದೊಳಗೆ ಅತಿಕ್ರಮವಾಗಿ ಪ್ರವೇಶಿಸುವ ಎಲ್ಲ ಸೂಕ್ಷ್ಮಜೀವಿಗಳನ್ನು ಗುರುತಿಸಿ ನಾಶಪಡಿಸುವ ಪ್ರಾಥಮಿಕ ವ್ಯವಸ್ಥೆಯಿದು.

ರೋಗಜನಕ ಕ್ರಿಮಿಗಳು ಈ ವ್ಯವಸ್ಥೆಯನ್ನು ಮೀರಿ ಶರೀರದೊಳಗೆ ಪ್ರವೇಶಿಸಿದರೆ, ಅವನ್ನು ನಿಗ್ರಹಿಸಲು ‘ಮಾನವ ದೇಹದ ಮಿಲಿಟರಿ ಪಡೆ’ಯಾದ ಬಿಳಿ
ರಕ್ತಕಣಗಳ ರೋಗರಕ್ಷಣಾ ವ್ಯವಸ್ಥೆಯು ನಮ್ಮ ರಕ್ತದಲ್ಲಿದೆ. ಈ ಪ್ರಕೃತಿದತ್ತ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ನಾವು ಪೌಷ್ಟಿಕ ಆಹಾರವನ್ನು ಸೇವಿಸಬೇಕು, ಸ್ವಚ್ಛತೆಯ ಮೂಲ ಮಂತ್ರಗಳನ್ನು ಪಠಿಸಬೇಕು ಹಾಗೂ ವೈದ್ಯರು ನೀಡುವ ಎಲ್ಲ ಲಸಿಕೆಗಳನ್ನು ಸಕಾಲದಲ್ಲಿ ತೆಗೆದುಕೊಳ್ಳಬೇಕು.
ನಮ್ಮ ಕಿವಿಯ ರಚನೆ ಹಾಗೂ ಕಾರ್ಯವನ್ನು ಅರ್ಥ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಕಿವಿಯನ್ನು ಹೊರಕಿವಿ, ನಡು ಕಿವಿ ಮತ್ತು ಒಳಕಿವಿ ಎಂದು ವಿಭಜಿಸಿಕೊಂಡಿದ್ದೇವೆ.

ಹೊರಕಿವಿಯಲ್ಲಿ ಪ್ರಧಾನವಾಗಿ ೨ ರಚನೆಗಳಿವೆ. ಮೊದಲನೆ ಯದು ಕಿವಿಯ ಹಾಲೆ (ಪಿನ್ನ). ಇದು ಮುಖದ ಎರಡೂ ಪಾರ್ಶ್ವಗಳಲ್ಲಿ ಚಾಚಿಕೊಂಡಿದೆ. ಈ ಹಾಲೆಯ ನಡುವೆ ಶ್ರವಣನಳಿಕೆಯಿದೆ. ಈ ನಳಿಕೆಯ ಮೂಲಕ ಶಬ್ದತರಂಗಗಳು ಕಿವಿತಮಟೆ ಯನ್ನು ತಲುಪುತ್ತವೆ. ಹೊರಕಿವಿಯ ವ್ಯಾಪ್ತಿಯು ಕಿವಿತಮಟೆ ಯವರೆಗೆ ಇರುತ್ತದೆ. ಶ್ರವಣ ನಳಿಕೆಯನ್ನು ರೂಪಿಸುವ ಶ್ರವಣಭಿತ್ತಿಯು ವಿಶೇಷ ವಾದದ್ದು. ಇಲ್ಲಿರುವ ಜೀವಕೋಶಗಳಲ್ಲಿ ಗುಗ್ಗೆಯನ್ನು ಉತ್ಪಾದಿಸುವ ಸುಮಾರು ೪೦೦೦ ವಿಶೇಷ ಗ್ರಂಥಿಗಳಿರುತ್ತವೆ.

ಹಾಗೆಯೇ ಅಸಂಖ್ಯ ಸೂಕ್ಷ್ಮ ರೋಮಗಳು, ಗದ್ದೆಯಲ್ಲಿ ಸಮೃದ್ಧವಾಗಿ ಬೆಳೆದು ನಿಂತ ಪೈರಿನಂತೆ ಇರುತ್ತವೆ. ಗುಗ್ಗೆಯು ಕಿವಿಯಲ್ಲೇಕಿದೆ ಎಂದು ಕೆಲವರು ಅಸಹ್ಯಪಟ್ಟುಕೊಳ್ಳಬಹುದು. ವಾಸ್ತವದಲ್ಲಿ ಗುಗ್ಗೆಯು ಮಾನವ ದೇಹದ ಮಿಲಿಟರಿ ಪಡೆಯ ಒಂದು ಪ್ರಮುಖ ರಕ್ಷಣಾ ವ್ಯವಸ್ಥೆ. ಗುಗ್ಗೆಯು ಜಿಡ್ಡು
ಜಿಡ್ಡಾಗಿರುವ ಕಾರಣ, ಸ್ನಾನ ಮಾಡುವಾಗ, ಈಜುವಾಗ ಹಾಗೂ ಮಳೆಯಲ್ಲಿ ನೆನೆಯುವಾಗ ನೀರು ಕಿವಿಯೊಳಗೆ ಹೋಗುವುದಿಲ್ಲ. ಒಂದೊಮ್ಮೆ ಹೋದರೂ ಜಿಡ್ಡಿನ ಕಾರಣ ಜಾರಿ ಹೊರಬರುತ್ತದೆ. ಗುಗ್ಗೆಗೆ ವಿಶಿಷ್ಟ ವಾಸನೆಯಿರುವ ಕಾರಣ, ರಾತ್ರಿ ನಾವು ಮಲಗಿರುವಾಗ ಇರುವೆ, ಜಿರಲೆ ಮರಿಯಂಥ ಕೀಟಗಳು ಕಿವಿಯೊಳಗೆ ಹೋಗುವುದಿಲ್ಲ.

ಗುಗ್ಗೆಯ ವಾಸನೆಯು ಅವನ್ನು ತಡೆಗಟ್ಟುತ್ತದೆ. ಗುಗ್ಗೆಯು ಬ್ಯಾಕ್ಟೀರಿಯ ಮತ್ತು ಶಿಲೀಂಧ್ರಗಳನ್ನೂ ನಾಶಪಡಿಸುತ್ತದೆ. ಶ್ರವಣ ಭಿತ್ತಿಯಲ್ಲಿರುವ ಜೀವಕೋಶಗಳ ರೋಮ ವ್ಯವಸ್ಥೆಯು ಮೃತಜೀವ ಕೋಶಗಳನ್ನು ಹಾಗೂ ಹೆಚ್ಚುವರಿ ಗುಗ್ಗೆಯನ್ನು ಕಿವಿಯಿಂದ ಹೊರಗೆ ನೂಕಲು ಯತ್ನಿಸುತ್ತದೆ. ಹಾಗೆಯೇ ಗಾಳಿಯ ಮೂಲಕ ಬರುವ ಧೂಳು, ಪರಾಗಕಣ, ರೋಗಜನಕಾದಿ ಗಳನ್ನು ಅಂಟಿನಲ್ಲಿ ಬಂಧಿಸಿ ಹೊರದೂಡುತ್ತದೆ. ನಾವು ಮಾತನಾಡು ವಾಗ, ಉಣ್ಣುವಾಗ ಕೆಳದವಡೆ ಚಲಿಸುತ್ತದೆ. ಈ ಚಲನೆಯು ಪರೋಕ್ಷವಾಗಿ ಶ್ರವಣ ನಳಿಕೆಗೆ ರವಾನೆಯಾಗಿ ಗುಗ್ಗೆ ಹೊರಬರಲು ನೆರವಾಗುತ್ತದೆ. ನಮ್ಮ ಶ್ರವಣ ನಳಿಕೆಗೆ ಹೆಚ್ಚುವರಿ ಗುಗ್ಗೆಯನ್ನು ಸ್ವಯಂ ಸ್ವಚ್ಛಗೊಳಿಸುವ ಸಾಮರ್ಥ್ಯ ವಿದೆಯೆಂದಾಯಿತು.

ಗುಗ್ಗೆಯಲ್ಲಿ ೨ ನಮೂನೆಗಳಿವೆ. ಮೊದಲನೆಯದು ಏಷ್ಯನ್ನರು ಹಾಗೂ ಅಮೆರಿಕನ್ ಇಂಡಿಯನ್ನರ ಕಿವಿಯಲ್ಲಿರುವ ಒಣಗುಗ್ಗೆ (ಡ್ರೈ ವ್ಯಾಕ್ಸ್). ಇದು ಪುಡಿ ಪುಡಿಯಾಗಿ ಉದುರಿ ಸುಲಭವಾಗಿ ಹೊರಬರುತ್ತದೆ. ಎರಡನೆಯದು ಆಫ್ರಿಕನ್ ಮತ್ತು ಕಕೇಶಿಯನ್ನರಲ್ಲಿ ಇರುವ ತೇವಗುಗ್ಗೆ (ವೆಟ್ ವ್ಯಾಕ್ಸ್).
ಇದು ಸುಲಭವಾಗಿ ಹೊರಬರುವುದಿಲ್ಲ. ಶ್ರವಣನಾಳದಲ್ಲಿ ಗುಗ್ಗೆಯ ಪ್ರಮಾಣ ಹೆಚ್ಚಾದಾಗ, ಅದು ಶ್ರವಣ ನಳಿಕೆಯನ್ನು ಅಡಚಿ, ಶಬ್ದದ ಅಲೆಗಳು ಸರಾಗವಾಗಿ ಕಿವಿತಮಟೆಯನ್ನು ತಲುಪದಂತೆ ಮಾಡುತ್ತದೆ. ಹಾಗಾಗಿ ಆಗಾಗ್ಗೆ ತೇವಗುಗ್ಗೆ ಯನ್ನು ನಾವೇ ಹೊರತೆಗೆಯಬೇಕಾಗುತ್ತದೆ. ಈ ಹೆಚ್ಚುವರಿ
ಗುಗ್ಗೆಯನ್ನು ಹೊರತೆಗೆಯಲು, ಕಿವಿಯೊಳಗೆ ಕಾಟನ್ ಬಡ್ಸ್, ಸೇಫ್ಟಿ ಪಿನ್, ಹೇರ್ ಪಿನ್, ಪೆನ್ಸಿಲ್, ಸ್ಕ್ರೂ ಡ್ರೈವರ್ ಇತ್ಯಾದಿಗಳನ್ನು ತೂರಿಸಿ ಕಿವಿಯನ್ನು ಸ್ವಚ್ಛಗೊಳಿಸಲು ಯತ್ನಿಸುವವರು ಸಾಕಷ್ಟಿದ್ದಾರೆ.

ಗುಗ್ಗೆಯನ್ನು ಹೊರತೆಗೆಯಲು ಇವ್ಯಾವುದನ್ನೂ ಕಿವಿಯೊಳಗೆ ಹಾಕಬಾರದು. ಹೀಗೆ ಹಾಕುವಾಗ, ಕೆಲವು ಸಲ ಕಿವಿತಮಟೆಗೆ ಹಾನಿಯಾಗಿ ಕಿವುಡುತನ ತಲೆದೋರ ಬಹುದು. ಕಿವಿಯಲ್ಲಿ ಗುಗ್ಗೆ ಹೆಚ್ಚಾಗಿದ್ದರೆ ಕಿವಿ-ಮೂಗು- ಗಂಟಲ ವೈದ್ಯರನ್ನು ಭೇಟಿಯಾಗಬೇಕು. ಅವರು ಗುಗ್ಗೆ ಯನ್ನು ಕರಗಿಸಬಲ್ಲ ದ್ರಾವಣವನ್ನು ಬರೆದು ಕೊಡುತ್ತಾರೆ. ಅದನ್ನು ಕಿವಿಯೊಳಗೆ ಹಾಕಿದರೆ, ಹೆಚ್ಚುವರಿ ಗುಗ್ಗೆ ಕರಗುತ್ತದೆ. ವೈದ್ಯರು ಬಿಸಿನೀರನ್ನು ಶ್ರವಣನಾಳದೊಳಗೆ ಚಿಮ್ಮಿ ಹೆಚ್ಚುವರಿ ಗುಗ್ಗೆಯನ್ನು ಹೊರತೆಗೆಯುವರು. ಕೆಲವರು ಸ್ನಾನವಾದ ಕೂಡಲೇ ಟವಲಿನ ತುದಿಯನ್ನು ದುಂಡಗೆ ಮಾಡಿ ಕಿವಿಯೊಳಗೆ ಹಾಕಿ ಚೆನ್ನಾಗಿ ತಿರುವುತ್ತಾರೆ. ಇದು ದುರಭ್ಯಾಸ. ಹೀಗೆ ಮಾಡುವುದರಿಂದ ಶ್ರವಣನಾಳದಲ್ಲಿರುವ ಜಿಡ್ಡು ಲೇಪನ ನಾಶವಾಗುತ್ತದೆ. ಆಗ ಸೋಂಕು ಬಹಳ ಸುಲಭವಾಗಿ ಕಿವಿಯೊಳಗೆ ತಳವೂರುತ್ತದೆ. ಹಾಗಾಗಿ ಕಿವಿಯೊಳಗೆ ಯಾವುದೇ ಪರವಸ್ತುಗಳನ್ನು ಹಾಕಲೇಬಾರದು. ಈ ಪಾಠವನ್ನು ಮಕ್ಕಳಿಗೆ ಬಾಲ್ಯದಿಂದಲೇ ಕಲಿಸಬೇಕು.

ನಮ್ಮ ಕಿವಿಯ ರಚನೆ ಹಾಗೂ ಕಾರ್ಯವನ್ನು ಅರಿಯಲು ನೆರವಾದ ಪ್ರಾಚೀನ ವಿಜ್ಞಾನಿಗಳನ್ನು ನೆನೆಯಬೇಕು. ಕಿವಿಯ ಶ್ರವಣ ಸಾಮರ್ಥ್ಯದ ಬಗ್ಗೆ ಮೊದಲು ಪ್ರಸ್ತಾಪಿಸಿದವನು ಅರಿಸ್ಟಾಟಲ್. ಅದರ ರಚನೆಯ ಬಗ್ಗೆ ಮೊದಲು ವಿವರಿಸಿದ ವನು ಆಂಡ್ರಿಯಸ್ ವೆಸಾಲಿಯಸ್. ನಡುಕಿವಿಯಲ್ಲಿರುವ
ಮೂರು ಮೂಳೆಗಳ ಬಗ್ಗೆ ಶಬ್ದ ರವಾನೆಯ ಬಗ್ಗೆ ವಿವರಿಸಿದ ವನು ಇಟಾಲಿಯನ್ ವೈದ್ಯ ಗೇಬ್ರಿಯಲ್ ಫೆಲೋಪಿಯೋ ದಿ ಮೊಡೇನ.

ಬಾರ್ಥಲೋಮಿಯೋ ಯುಸ್ಟಾಷಿಯೋ ಕರ್ಣ-ಕಂಠ ನಳಿಕೆಯ ಬಗ್ಗೆ ನಮ್ಮ ಗಮನ ಸೆಳೆದ ಮೊದಲ ವಿಜ್ಞಾನಿ. ನಮ್ಮ ಗಂಟಲು ಹಲವು ‘ಹೈವೇ’ಗಳ ಸಂಗಮತಾಣ. ಬಾಯಿಯ ಮೂಲಕ ಆಹಾರ, ಪಾನೀಯ, ಗಾಳಿಯು ಗಂಟಲ ಸರ್ಕಲ್ಲಿನ ಮೂಲಕವೇ ಮುಂದಕ್ಕೆ ಹೋಗಬೇಕಾಗುತ್ತದೆ. ಪ್ರತಿ ಕಿವಿ
ಯಿಂದ ಒಂದೊಂದು ಕರ್ಣ-ಕಂಠನಳಿಕೆಯು (ಯುಸ್ಟೇಷಿ ಯನ್ ಕೆನಾಲ್) ಗಂಟಲನ್ನು ಪ್ರವೇಶಿಸುತ್ತದೆ. ಹಾಗೆಯೇ ಕಣ್ಣುಗಳೂ ತಮ್ಮ ಹೆಚ್ಚುವರಿ ಸ್ರಾವವನ್ನು ಮೂಗಿನೊಳಗೆ ಹಾಯಿಸಿ, ಮೂಗಿನ ಮೂಲಕ ಹೆಚ್ಚುವರಿ ಕಣ್ಣೀರು (ತೀವ್ರ ದುಃಖದಿಂದ ವಿಲಪಿಸುವಾಗ) ಗಂಟಲಿನೊಳಗೆ ಪ್ರವಹಿಸು
ತ್ತದೆ. ಹಾಗೆಯೇ ಅನ್ನನಾಳ, ವಾಯುನಾಳಗಳೂ ಗಂಟಲಿ ನಿಂದಲೇ ಆರಂಭವಾಗುತ್ತವೆ. ಹಾಗಾಗಿ ಗಂಟಲ ಸರ್ಕಲ್ ಸಮರ್ಪಕವಾಗಿ ಕೆಲಸ ಮಾಡಬೇಕಾ ದರೆ ವಾತಾವರಣ ಹಾಗೂ ಗಂಟಲ ನಡುವಿನ ಒತ್ತಡವು ಸಮಸ್ಥಿತಿಯಲ್ಲಿರಬೇಕು.

ಈ ಒತ್ತಡ ನಿಯಂತ್ರಣವನ್ನು ಕರ್ಣ-ಕಂಠ ನಳಿಕೆ ಸಮರ್ಥವಾಗಿ ನಿಯಂತ್ರಿಸುತ್ತದೆ. ನಾವು ಮಸಾಲೆ ದೋಸೆಯನ್ನು ಆಸ್ವಾದಿಸಬೇಕಾದರೆ ನಾಲಗೆಯ ಜತೆ ಮೂಗೂ ಕೆಲಸ ಮಾಡಬೇಕಾಗುತ್ತದೆ. ನೆಗಡಿ ಬಂದು ಮೂಗು ಕಟ್ಟಿಕೊಂಡು ವಾಸನೆಯನ್ನು ತಿಳಿಯುವುದು ಅಸಾಧ್ಯವೆನಿಸಿದಾಗ, ಗರಿಗರಿ
ಮಸಾಲೆ ದೋಸೆಯು ರಟ್ಟಿನ ಹಾಗೆ ಅನಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಮಸಾಲೆದೋಸೆಯ ವಾಸನೆಯು ಹಸಿವನ್ನು ಹೆಚ್ಚಿಸುವುದರ ಜತೆಯಲ್ಲಿ ರುಚಿಯನ್ನು ಆಸ್ವಾದಿಸಲು ನೆರವಾಗುತ್ತದೆ. ಆದರೆ ಮಸಾಲೆ ದೋಸೆಯ ರುಚಿಯನ್ನು ಆಸ್ವಾದಿಸಲು ಕಿವಿಯೂ ನೆರವಾಗುತ್ತದೆ ಎನ್ನುವ ಮಾಹಿತಿ
ಆಶ್ಚರ್ಯವನ್ನುಂಟುಮಾಡಬಹುದು. ‘ಕಾರ್ಡ ಟಿಂಪಾನಿ’ ಎನ್ನುವ ನರವೊಂದಿದೆ. ಇದು ನಮ್ಮ ನಾಲಿಗೆಯಲ್ಲಿರುವ ರುಚಿಮೊಗ್ಗುಗಳಿಂದ ಹಾಯುವ ನರತಂತುಗಳನ್ನು ಮಿದುಳಿಗೆ ಕೊಂಡೊಯ್ಯುತ್ತದೆ. ಮಿದುಳಿಗೆ ಹೋಗುವ ಹಾದಿಯಲ್ಲಿ ನಡುಕಿವಿಯ ಮೂಲಕ ಹಾದುಹೋಗುತ್ತದೆ. ಹಾಗಾಗಿ
ನಡುಕಿವಿಯು ಆರೋಗ್ಯವಾಗಿದ್ದರೆ ಮಾತ್ರ ಈ ಕಾರ್ಡ ಟಿಂಪಾನಿ ನರವು ರುಚಿಯ ಅನುಭವವನ್ನು ಮಿದುಳಿಗೆ ಕರಾರುವಾಕ್ಕಾಗಿ ರವಾನಿಸಬಲ್ಲದು.

ಫ್ರೆಂಚ್ ಅಂಗರಚನ ವಿಜ್ಞಾನಿ ಜೋಸೆ- ಗೀಷರ್ಡ್ ಡುವರ್ನೇ ನಮ್ಮ ಶ್ರವಣ ಸಾಮರ್ಥ್ಯದ ವಿಧಿ-ವಿಧಾನಗಳ ಬಗ್ಗೆ ಗಮನ ಸೆಳೆದ. ಒಳಕಿವಿಯಲ್ಲಿರುವ ಕಾಕ್ಲಿಯ, ಅರೆ ಚಂದ್ರನಳಿಕೆ ಹಾಗೂ ಕಾಕ್ಲಿಯದ ಒಳಗಿರುವ ಸ್ಪೈರಲ್ ಲಮೈನಗಳು ನಿಜವಾದ ಆಲಿಸುವ ಸಾಮರ್ಥ್ಯವನ್ನು ಒದಗಿ ಸುವ ಅಂಗಗಳು ಎಂದ. ಪರಿಸರದಲ್ಲಿ ಉತ್ಪಾದನೆಯಾಗುವ ನಾನಾ ಶಬ್ದದ ಅಲೆಗಳು ಮೊದಲು ಶ್ರವಣ ನಾಳದಲ್ಲಿ ವರ್ಧನೆಯಾಗುತ್ತವೆ. ೩ ಕಿಲೋಹರ್ಟ್ಜ್ ಶಬ್ದವು ೧೫ ಕಿಲೋ ಹರ್ಟ್ಜ್ ಆಗಿ ಪರಿವರ್ತನೆಯಾಗಬಲ್ಲದು. ಇದು ಕಿವಿತಮಟೆ ಮತ್ತು ನಡುಕಿವಿಯಲ್ಲಿರುವ ೩ ಮೂಳೆಗಳ ಮೂಲಕ ಹಾದುಹೋಗುವಾಗ ಸುಮಾರು ೨೨ ಪಟ್ಟು ವಧಿಸಬಲ್ಲದು.

ಹೀಗೆ ವರ್ಧನೆಯಾದ ಶಬ್ದವು ರಿಕಾಪು ಮೂಳೆಯ ಪಾದದಿಂದ ಅಂಡಾಕೃತಿಯ ಗವಾಕ್ಷಿಯೊಳಗೆ ಸಾಗುತ್ತದೆ. ನಿಜವಾಗಿಯು ಶಬ್ದದ ಅಲೆಗಳನ್ನು ವಿದ್ಯುದಾವೇಗಗಳನ್ನಾಗಿ ಪರಿವರ್ತಿಸಿ ಮಿದುಳಿಗೆ ರವಾನಿಸುವ ಅಂಗವೇ ಕಾಕ್ಲಿಯ. ಒಳಕಿವಿಯು ನಮ್ಮ ಶರೀರದಲ್ಲಿಯೇ ಅತ್ಯಂತ ಗಡುಸಾದ ಮೂಳೆಯಿಂದಾದ ಹಾಗೂ ದ್ರವಾವೃತ ಚಕ್ರಭೀಮನ ಕೋಟೆಯೊಳಗೆ ಸುರಕ್ಷಿತವಾಗಿದೆ. ಇದರಲ್ಲಿ ಬಸವನಹುಳುವಿನಂತೆ ಸುರುಳಿ ಸುತ್ತಿಕೊಂಡಿರುವ ಕಾಕ್ಲಿಯವಿದೆ. ಇದು ವಾಸ್ತವದಲ್ಲಿ ಶ್ರವಣಾಂಗ. ಇದರ ಜತೆ ೩ ಅರೆಚಂದ್ರನಳಿಕೆಗಳನ್ನು ಒಳಗೊಂಡ ಸಮತೋಲನಾಂಗ ವ್ಯವಸ್ಥೆಯಿದೆ.

ಇದು ನಮ್ಮ ಶರೀರದ ಸಮತೋಲನೆಯನ್ನು ಕಾಪಾಡುತ್ತದೆ. ಕಾಕ್ಲಿಯ ಬಟಾಣಿ ಗಾತ್ರದ ಅಂಗ. ಸುರುಳಿ ಸುತ್ತಿಕೊಂಡಿರುವ ಕಾಕ್ಲಿಯವನ್ನು ನೇರ ಮಾಡಿದೆವು ಎಂದು ಭಾವಿಸೋಣ. ಆಗ ಇದರ ಉದ್ದ ಸುಮಾರು ೩೩.೫ ಮಿ.ಮೀ.! ಇದರಲ್ಲಿ ಅತ್ಯಂತ ಸೂಕ್ಷ್ಮವಾದ ಆದರೆ ಅದ್ಭುತವಾದ ‘ಪಿಯಾನೊ’ ಇದೆ. ಪಿಯಾನೋ ವಾದ್ಯದಲ್ಲಿ ಕೇವಲ ೩೬ ಕಪ್ಪು ಮತ್ತು ೫೨ ಬಿಳಿ ಕೀಗಳು, ಒಟ್ಟು ೮೮ ಕೀಗಳು ಮಾತ್ರ ಇವೆ. ಇವನ್ನು ಇಂಗ್ಲಿಷ್ ವರ್ಣಮಾಲೆಯ ಎ, ಬಿ, ಸಿ, ಡಿ, ಇ, ಎಫ್, ಜಿ ಗಳಿಂದ ಸೂಚಿಸುವುದು ವಾಡಿಕೆ. ಇವುಗಳ ನೆರವಿನಿಂದ ಸಂಗೀತದ ಎಲ್ಲ ಅಷ್ಟಕಗಳನ್ನು ನುಡಿಸಬಹುದು. ನಮ್ಮ ಕಾಕ್ಲಿಯದಲ್ಲಿ ಇಂಥ ಕೀಗಳಿಲ್ಲ.

ಬದಲಿಗೆ ಸೂಕ್ಷ್ಮಾತಿಸೂಕ್ಷ್ಮ ಕೂದಲಿನ ಹಾಗೆ ಕಾಣುವ ನೀಳ ನರಕೋಶಗಳ ಕಂತೆಗಳಿರುತ್ತವೆ. ಇವನ್ನು ಘನಚುಂಗು (ಸ್ಟೀರಿಯೋಸೀಲಿಯ) ಅಥವಾ
ಶ್ರವಣರೋಮ ಎನ್ನುವರು. ಇವು ಕಾಕ್ಲಿಯದಲ್ಲಿರುವ ದ್ರವದೊಳಗೆ ಚಾಚಿಕೊಂಡಿರುತ್ತವೆ. ಈ ಶ್ರವಣ ರೋಮಗಳು ೨ ಸಾಲುಗಳಲ್ಲಿರುತ್ತವೆ. ಶಿಶುವು ಹುಟ್ಟಿದಾಗ ಹೊರಸಾಲಿನಲ್ಲಿ ೧೨,೦೦೦ ಶ್ರವಣ ರೋಮಗಳಿದ್ದರೆ, ಒಳಸಾಲಿನಲ್ಲಿ ೩೫೦೦ ಘನಚುಂಗುಗಳಿವೆ. ಇವು ಪಿಯಾನೋದಲ್ಲಿರುವ ಕೀಗಳ
ಹಾಗೆಯೇ; ಒಂದೊಂದು ಶ್ರವಣ ರೋಮಗಳ ಕಂತೆಯು ಬೇರೆ ಬೇರೆ ತರಂಗಾಂತರಗಳನ್ನು ಗ್ರಹಿಸುತ್ತದೆ. ಈ ಶ್ರವಣ ರೋಮಗಳು ತುಂಬಾ ಸೂಕ್ಷ್ಮ. ಇವು ಒಂದು ಸಲ ನಾಶವಾದರೆ ಮತ್ತೆ ಹುಟ್ಟಲಾರವು. ಅತಿಯಾದ ಶಬ್ದ, ಕೆಲವು ಔಷಧಗಳು, ರಕ್ತ ಪೂರೈಕೆಯ ಕೊರತೆ ಹಾಗೂ ಹೆಚ್ಚುತ್ತಿರುವ ವಯಸ್ಸು ಇವನ್ನು ನಾಶಪಡಿಸಬಲ್ಲವು (ಹಕ್ಕಿಗಳಲ್ಲಿ ಈ ಸಮಸ್ಯೆ ಯಿಲ್ಲ. ಅವುಗಳ ಶ್ರವಣ ರೋಮಗಳು ಯಾವುದಾದರೂ ಕಾರಣದಿಂದ ನಾಶವಾದರೆ ಮತ್ತೆ ಬೆಳೆಯಬಲ್ಲವು).

ಹಾಗಾಗಿ ಯಾವ ಯಾವ ಘನಚುಂಗುಗಳು ನಾಶವಾಗುತ್ತವೆಯೋ, ಆಯಾ ತರಂಗಾಂತರಗಳ ಶಬ್ದವನ್ನು ನಾವು ಕೇಳಲಾರೆವು. ಪರಿಸರದಿಂದ ಬಂದ ಶಬ್ದದ ಅಲೆಗಳ ಒತ್ತಡವು ಮೊದಲು ಕಿವಿತಮಟೆಯನ್ನು ಅಪ್ಪಳಿಸುತ್ತದೆ. ಆ ಒತ್ತಡವು ೩ ಕಿವಿಮೂಳೆ ಗಳ ಮೂಲಕ ರವಾನೆಯಾಗಿ, ೩ನೇ ಮೂಳೆಯಾದ ರಿಕಾಪು ಮೂಳೆಯ ಪಾದ ಭಾಗದಿಂದ ಅಂಡಾಕೃತಿಯ ಗವಾಕ್ಷಿಗೆ ರವಾನೆಯಾಗುತ್ತದೆ. ಈ ಒತ್ತಡವು ಗವಾಕ್ಷಿಯ ಹಿಂಭಾಗದಲ್ಲಿರುವ ಒಳಕಿವಿಯ ದ್ರವಕ್ಕೆ ರವಾನೆಯಾಗುತ್ತದೆ. ನೀರಿನಲ್ಲಿ ಅಲೆ ಚಲಿಸುವಂತೆ, ಶಬ್ದದ ಅಲೆಗಳ ಒತ್ತಡವು ಈ ದ್ರವದಲ್ಲಿ ಸಾಗುತ್ತಾ ಶ್ರವಣ ರೋಮಗಳನ್ನು ಅಪ್ಪಳಿಸುತ್ತದೆ.

ಉದಾ ಹರಣೆಗೆ ಪಿಯಾನೋ ವಾದ್ಯದ ಮಧ್ಯ ‘ಸಿ’ ಕೀಯನ್ನು ಒತ್ತಿದರೆ, ಅದು ಶ್ರವಣ ರೋಮಕಂತೆಗಳ ಸಾಲಿನಲ್ಲಿ ಮಧ್ಯ ‘ಸಿ’ಗೆ ಸರಿಸಮಾನವಾದ ಕಂತೆಯನ್ನು ಪ್ರಚೋದಿಸುತ್ತದೆ. ಆ ಕಂತೆಯು ಮಧ್ಯ ಅ ಶಬ್ದದ ಅಲೆಗಳನ್ನು ವಿದ್ಯುತ್ ರಾಸಾಯನಿಕ ಅಲೆಗಳನ್ನಾಗಿ (ಎಲೆಕ್ಟ್ರೋಕೆಮಿಕಲ್) ಪರಿವರ್ತಿ ಸುತ್ತದೆ ಹಾಗೂ ಅದನ್ನು ೮ನೆಯ ನರವಾದ ಶ್ರವಣಶಂಕು ನರಕ್ಕೆ ರವಾನಿಸುತ್ತದೆ. ಈ ನರವು ನಾವು ಬರೆಯುವ ಪೆನ್ಸಿಲ್ಲಿ ನೊಳಗಿರುವ ಸೀಸದ ಕಡ್ಡಿಯ ಗಾತ್ರಕ್ಕಿರುತ್ತದೆ. ಇದರಲ್ಲಿ ಸುಮಾರು ೩೦,೦೦೦ ನರತಂತುಗಳಿರುತ್ತವೆ. ಈ ನರವು ಸುಮಾರು ಮುಕ್ಕಾಲು ಇಂಚು ದೂರದಲ್ಲಿರುವ ಮಿದುಳಿನ ಶ್ರವಣ ಕ್ಷೇತ್ರವನ್ನು ತಲುಪುತ್ತದೆ. ಈ ಕ್ಷೇತ್ರದಲ್ಲಿರುವ ನರಕೋಶಗಳು ನಮಗೆ ಆ ‘ಸಿ’ ಶಬ್ದದ ಅನುಭವವನ್ನು ಒದಗಿಸುತ್ತದೆ.

ಹಾಗಾಗಿ ನಾವು ಕಿವಿಯಿಂದ ಶಬ್ದವನ್ನು ಕೇಳುವುದಿಲ್ಲ. ಶಬ್ದವನ್ನು ಕೇಳುವುದು ಮಿದುಳು. ಆದರೆ ಕಿವಿಯು ಆ ಶಬ್ದಗಳನ್ನು ನಮ್ಮ ಮಿದುಳಿಗೆ ಕರಾರುವಾಕ್ಕಾಗಿ ತಲುಪಿಸುವ ಶ್ರವಣಾಂಗವಾಗಿದೆ. ನಮಗೆ ೨ ಕಣ್ಣುಗಳು ಇರುವ ಹಾಗೆ ೨ ಕಿವಿಗಳಿವೆ. ೨ ಕಣ್ಣುಗಳಿದ್ದರೆ ಮಾತ್ರ ನಮಗೆ ೩ ಆಯಾಮಗಳ ದರ್ಶನ ಸಾಮರ್ಥ್ಯವು ದೊರೆಯುತ್ತದೆ. ದೂರವನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಲು ಸಾಧ್ಯವಾಗುತ್ತದೆ. ಹಾಗೆಯೇ ೨ ಕಿವಿಗಳು ಇದ್ದು, ಎರಡೂ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದರೆ ಮಾತ್ರ ಶಬ್ದವು ಎಲ್ಲಿಂದ ಬರುತ್ತಿದೆ ಎನ್ನುವುದನ್ನು ನಿಖರವಾಗಿ ಗುರುತು ಹಚ್ಚಲು ಸಾಧ್ಯವಾಗುತ್ತದೆ. ಒಂದು ಕಿವಿಯು ಸ್ವಲ್ಪ ಮಂದವಾಗಿದ್ದರೂ ಶಬ್ದದ ಉಗಮವನ್ನು ಕರಾರುವಾಕ್ಕಾಗಿ ತಿಳಿಯುವುದು ಕಷ್ಟ. ಹಾಗಾಗಿ ಕಿವಿಮಂದವಿರುವವರು ಎರಡೂ ಕಿವಿಗಳಲ್ಲಿ ಶ್ರವಣಸಾಧನಗಳನ್ನು ಬಳಸುವುದು ಒಳಿತು.