ವೈದ್ಯ ವೈವಿಧ್ಯ
ಡಾ.ಎಚ್.ಎಸ್.ಮೋಹನ್
drhsmohan@gmail.com
ಜನವರಿ 7 ರ ಈ ಹಂದಿಯ ಹೃದಯ ಮಾನವನಲ್ಲಿ ಶಸಕ್ರಿಯೆಯು ಮುಂದಿನ ಹಲವು ರೀತಿಯ ಕಸಿ ಶಸಕ್ರಿಯೆಗಳಿಗೆ ನಾಂದಿಯಾಗಬಲ್ಲದು ಎಂದು ವಿಜ್ಞಾನಿ ಗಳು ಮತ್ತು ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಕ್ಷೀನೋ ಟ್ರಾನ್ಸ್ಪ್ಲಾಂಟೇಷನ್ಗೆ ಇದರಿಂದ ಹೊಸ ಬಾಗಿಲು ತೆರೆದಂತಾಗಿದೆ.
ಕಳೆದ ವಾರ ಇದೇ ಅಂಕಣದಲ್ಲಿ ಪ್ರಕಟವಾದ ಮಾನವನಿಗೆ ಹಂದಿಯ ಹೃದಯ ಕಸಿ – ಈ ವಿಷಯದ ಬಗ್ಗೆ ಜಗತ್ತಿನಾದ್ಯಂತ ಹಲವು ರೀತಿಯ ಅಭಿಪ್ರಾಯಗಳು ವಿಭಿನ್ನ ವಲಯದಿಂದ ಬರುತ್ತಿವೆ. ವೈದ್ಯಕೀಯ ರಂಗದಲ್ಲಿ ಇದೊಂದು ಅಪರೂಪದ ದೊಡ್ಡ ಕ್ರಾಂತಿಗೆ ಕಾರಣವಾದ ಶಸ್ತ್ರಕ್ರಿಯೆ ಎಂಬ ಹೊಗಳಿಕೆ ಒಂದೆಡೆ
ಯಾದರೆ, ಹಲವರು ಈ ಶಸ್ತ್ರಕ್ರಿಯೆಯ ನೈತಿಕತೆಯನ್ನು ಪ್ರಶ್ನಿಸುತ್ತಿದ್ದಾರೆ. ಈ ಅಭಿಪ್ರಾಯಗಳನ್ನು ನಾವು ಮುಖ್ಯವಾಗಿ ಮೂರು ವಿಧಗಳಲ್ಲಿ ಗಮನಿಸಬಹುದು. ಶಸ್ತ್ರಕ್ರಿಯೆ ಮಾಡಿಸಿಕೊಂಡ ರೋಗಿಯ ಸುರಕ್ಷತೆ, ಪ್ರಾಣಿಯ ಹಕ್ಕುಗಳು ಹಾಗೂ ಧಾರ್ಮಿಕ ನಂಬಿಕೆಗಳ ಬಗೆಗಿನ ವಿಚಾರ.
ವೈದ್ಯಕೀಯ ವಿಚಾರ ಗಮನಿಸುವುದಾದರೆ ಇದು ಒಂದು ಪ್ರಾಯೋಗಿಕ ಶಸ್ತ್ರಕ್ರಿಯೆಯಾದ್ದರಿಂದ ಹಂದಿಯ ಹೃದಯ ಕಸಿ ಮಾಡಿಸಿಕೊಂಡ ರೋಗಿಗೆ, ಅಂದರೆ ಇಲ್ಲಿ ಡೇವ್ ಬೆನೆಟ್ನ ಜೀವಕ್ಕೆ ಬಹಳ ಅಪಾಯವಿದೆ. ಮನುಷ್ಯರದ್ದೇ ಹೃದಯ ಸರಿ ಹೊಂದುತ್ತದೆಯೇ ಇಲ್ಲವೇ ಎಂದು ಎಲ್ಲ ರೀತಿಯಲ್ಲಿ ಪರೀಕ್ಷಿಸಿ ಕಸಿ ಮಾಡಿ ದಾಗಲೂ ಕೆಲವು ದಿನ, ವಾರ, ತಿಂಗಳುಗಳ ನಂತರ ಕಸಿ ಮಾಡಲ್ಪಟ್ಟ ಅಂಗವು ಅಂದರೆ ಇಲ್ಲಿ ಹೃದಯ ಹೊರದೂಡಲ್ಪಡುವ ಸಾಧ್ಯತೆ ಇದ್ದೇ ಇದೆ. ಹಾಗಿದ್ದಾಗ ಬೇರೆ ಪ್ರಾಣಿಯ ಹೃದಯವನ್ನು ಮಾನವ ದೇಹದ ಪ್ರತಿರೋಧ ವ್ಯವಸ್ಥೆ ಒಪ್ಪಿ ಸುಮ್ಮನೆ ಇರುತ್ತದೆಯೇ? ಅದನ್ನೂ ಹೊರ ದೂಡುವ ಸಾಧ್ಯತೆ ಇದ್ದೇ ಇದೆ. ಹಲವಾರು ವರ್ಷಗಳಿಂದ ಬೇರೆ ಪ್ರಾಣಿಗಳ ಅಂಗಾಂಗಗಳನ್ನು ಮನುಷ್ಯರಿಗೆ ಜೋಡಿಸಿದ ಬೇಕಷ್ಟು ನಿದರ್ಶನ ಗಳಿವೆ.
1984ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಚಿಕ್ಕ ಮಗುವಿನ ಜೀವ ಉಳಿಸಲು ದೊಡ್ಡ ಕೋತಿಯ ಹೃದಯ ವನ್ನು ಕಸಿ ಮಾಡಲಾಗಿತು. ಆದರೆ, ೨೧ ದಿನಗಳ ನಂತರ ಆ ಮಗು ಅಸುನೀಗಿತು. ಈ ತರಹದ ಶಸ್ತ್ರಕ್ರಿಯೆ ಮತ್ತು ಚಿಕಿತ್ಸೆಗಳು ಬಹಳ ಅಪಾಯಕಾರಿಯಾದರೂ, ಹೆಚ್ಚಿನ ರಿಸ್ಕ್ ಇದ್ದರೂ ಕೆಲ ತಜ್ಞರ ಪ್ರಕಾರ ರೋಗಿ ಮತ್ತು ಆತನ ಮನೆಯವರಿಗೆ ಇಂಥ ಪ್ರಾಯೋಗಿಕ ಚಿಕಿತ್ಸೆಯ ಬಗ್ಗೆ ವಿವರವಾಗಿ ವಿವರಿಸಿ, ಅವರನ್ನು ಒಪ್ಪಿಗೆ ಶಸ್ತ್ರಚಿಕಿತ್ಸೆಗೆ ಮುಂದಾದರೆ ಅನಿವಾರ್ಯ ಸಂದರ್ಭದಲ್ಲಿ ಬೇರೆ ಕಡಿಮೆ ಅಪಾಯದ ಚಿಕಿತ್ಸೆ ಲಭ್ಯವಿಲ್ಲದಿದ್ದಾಗ ಖಂಡಿತಾ ಇದನ್ನು ಮಾಡುವ ರಿಸ್ಕ್ ತೆಗೆದುಕೊಳ್ಳಬಹುದು. ಹಾಗೆಂದು ಆಕ್ಸರ್ಡ್ ವಿಶ್ವ ವಿದ್ಯಾಲಯದ ಪ್ರಾಕ್ಟಿಕಲ್ ಎಥಿಕ್ಸ್ನ ಅಧ್ಯಕ್ಷ ಪ್ರೊ. ಜೂಲಿಯನ್ ಸವುಲೆಸ್ಕು ಅವರು ಅಭಿಪ್ರಾಯ ಪಡುತ್ತಾರೆ.
ಅವರ ಪ್ರಕಾರ, ರೋಗಿಗೆ ಈ ತರಹದ ಪ್ರಾಯೋಗಿಕ ಚಿಕಿತ್ಸೆಗಳ ಮಿತಿ ಮತ್ತು ರಿಸ್ಕನ್ನು ಸರಿಯಾಗಿ ವಿವರಿಸಿ ಅವರ ಒಪ್ಪಿಗೆ ಪಡೆದಿರಬೇಕು ಅಷ್ಟೇ. ಇಂತಹವರಿಗೆ ಮೆಕ್ಯಾನಿಕಲ್ ಹೃದಯ ಸಪೋರ್ಟ್ ಮತ್ತು ಮನುಷ್ಯರ ಹೃದಯದ ಕಸಿ – ಹೀಗೆ ಎಲ್ಲ ಪರ್ಯಾಯಗಳನ್ನು ಸೂಚಿಸಿ ಒಪ್ಪಿಗೆ ಪಡೆಯಬೇಕು. ಬೆನೆಟ್ನ ವಿಚಾರದಲ್ಲಿ ಈ ಎಲ್ಲವೂ ಸಾಧ್ಯವಿಲ್ಲ ಎಂಬ ಕಾರಣಕ್ಕೇ ಹಂದಿಯ ಹೃದಯ ಕಸಿಗೆ ವೈದ್ಯರು ಮುಂದಾದದ್ದು. ಡೇವ್ ಬೆನೆಟ್ನ ಹೃದಯ ಕಸಿ ಚಿಕಿತ್ಸೆಗೂ ಮೊದಲು ಅತೀ ಕಠಿಣ ಅಂಗಾಂಶ ಪರೀಕ್ಷೆಗಳು ಮತ್ತು ಪ್ರಾಣಿಗಳ ಅಂಗಗಳ ಕೂಲಂಕಷ ಪರೀಕ್ಷೆ ನಡೆದಿರುತ್ತದೆ. ಡೇವ್ ಬೆನೆಟ್ನ ಶಸ್ತ್ರಕ್ರಿಯೆ ಕ್ಲಿನಿಕಲ್ ಟ್ರಯಲ್ನ ನಂತರ ನಡೆಸಿದ ಶಸ್ತ್ರಕ್ರಿಯೆ ಅಲ್ಲ. ಈ ತರಹದ ಶಸ್ತ್ರಕ್ರಿಯೆಗಳನ್ನು ಹೀಗೆಯೇ ಮಾಡಬೇಕಿತ್ತು ಎಂಬುದಕ್ಕೆ ಆಧಾರಗಳಿಲ್ಲ. ಹಾಗೂ ಆತನಲ್ಲಿ ಉಪಯೋಗಿಸಿದ ಔಷಧಗಳು ಬೇರೆ
ಪ್ರಾಣಿಗಳಲ್ಲಿ ಪರೀಕ್ಷಿಸಿ ಒಪ್ಪಿತವಾದ ಔಷಧಗಳಲ್ಲ.
ಇದರ ಹಿಂದೆ ನಡೆಯಬೇಕಾದ ಎಲ್ಲ ಪ್ರೊಟೊಕಾಲ್ ಮತ್ತು ಪ್ರೊಸೀಜರ್ಗಳನ್ನು ಲ್ಯಾಬೋರೇಟರಿಯಲ್ಲಿ ನಾನಾ ಪ್ರಾಣಿಗಳಲ್ಲಿ ಪರೀಕ್ಷಿಸಿಯೇ ನಂತರ ಮಾನವ ದೇಹದ ಅಂಗದ ಶಸ್ತ್ರಕ್ರಿಯೆಗೆ ತಯಾರಾದದ್ದು ಎಂದು ಆತನಿಗೆ ಶಸ್ತ್ರಕ್ರಿಯೆ ನಡೆಸಿದ ತಂಡದ ಡಾ ಕ್ರಿಸ್ಟಿನ್ ಲಾವು ಅವರ ಅಭಿಮತ.
ಪ್ರಾಣಿಗಳ ಹಕ್ಕುಗಳು: ಹಂದಿಯ ಅಂಗವನ್ನು ಮಾನವ ಅಂಗದ ಬದಲಿಗೆ ಉಪಯೋಗಿಸುವುದು ಸರಿಯಲ್ಲ ಎಂದು ಹಲವು ಪ್ರಾಣಿ ದಯಾ ಸಂಘದ ಸದಸ್ಯರು ಖಂಡತುಂಡವಾಗಿ ವಿರೋಧಿಸಿದರು. ಪ್ರಾಣಿಯ ಜೀನ್ಗಳನ್ನು ಮಾರ್ಪಾಡು ಮಾಡಿ ಮನುಷ್ಯನಲ್ಲಿ ಉಪಯೋಗಿಸುವುದು ಸರಿಯಲ್ಲ ಎಂಬುದು ಅವರ ವಾದ. ಇದಕ್ಕೆ ಪ್ರತಿಯಾಗಿ ಜಗತ್ತಿನಾದ್ಯಂತ ಮಾನವ ತನ್ನ ಆಹಾರಕ್ಕಾಗಿ ಹಂದಿಗಳನ್ನೂ ಸೇರಿ ಹಲವಾರು ಪ್ರಾಣಿಗಳನ್ನು ಕೊಲ್ಲುತ್ತಿಲ್ಲವೇ, ಪಶುಹತ್ಯೆ ಮಾಡುತ್ತಿಲ್ಲವೇ-ಇದು ಸರಿಯೇ ? – ಎಂಬುದು ಮೇಲಿನದರ ವಿರುದ್ಧದ ವಾದ.
ಧರ್ಮದ ವಿಚಾರ: ಹಂದಿಗಳ ಅಂಗಗಳು ಮಾನವನ ಅಂಗಗಳಿಗೆ ಸರಿಹೊಂದುತ್ತವೆ ಎಂಬ ಕಾರಣಗಳಿಂದ ಅದನ್ನು ಉಪಯೋಗಿಸಲಾಗಿದೆ. ಇದರ ಬಗ್ಗೆ ಯಹೂದಿ ಮತ್ತು ಇಸ್ಲಾಂ ಧರ್ಮದ ಅಭಿಪ್ರಾಯ ಏನು? ಏಕೆಂದರೆ ಕ್ರಿಶ್ಚಿಯನ್ ಮತ್ತು ಹಿಂದೂ ಧರ್ಮದವರು ಇದಕ್ಕೆ ಹೆಚ್ಚು ವಿರೋಧ ವ್ಯಕ್ತಪಡಿಸುವುದಿಲ್ಲ. ಯಹೂದಿ ಧರ್ಮದಲ್ಲಿ ಹಂದಿಯ ಮಾಂಸ ತಿನ್ನುವುದನ್ನು ನಿಷೇಧಿಸುತ್ತಾರೆಯೇ ಹೊರತು ಹಂದಿಯ ಅಂಗದಿಂದ ಒಂದು ಮನುಷ್ಯ ಜೀವ ಉಳಿಸುವುದಾದರೆ
ಯಹೂದಿ ಧರ್ಮ ವಿರೋಧಿಸುವುದಿಲ್ಲ – ಎಂದು ಯು ಕೆಯ ಆರೋಗ್ಯ ಇಲಾಖೆಯ ಮಾರಲ್ ಅಂಡ್ ಎಥಿಕಲ್ ಅಡ್ವೈಸರಿ ಗುಂಪಿನ ಡಾ ಮೋಷಿ ಫ್ರೀಡ್ ಮನ್ ಅಭಿಪ್ರಾಯ ಪಡುತ್ತಾರೆ.
ಈ ಶಸ್ತ್ರಕ್ರಿಯೆ ತಂಡದಲ್ಲಿರುವ ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಮೊಹಮ್ಮದ್ ಮೊಹಿಯುದ್ದೀನ್ ಈ ಶಸ್ತ್ರಕ್ರಿಯೆ ಒಂದು ಪವಾಡದ ಶಸ್ತ್ರಕ್ರಿಯೆ. ಹಾಗೆಯೇ ಇಸ್ಲಾಂ ಧರ್ಮದಲ್ಲಿಯೂ ಒಬ್ಬ ಮನುಷ್ಯನ ಜೀವ ಉಳಿಸಲು ಪ್ರಾಣಿಯ ದೇಹದ ಭಾಗವನ್ನು ಉಪಯೋಗಿಸಲು ಏನೂ ತಕರಾರಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ. ಪ್ರಾಣಿಗಳ ಅಂಗಗಳನ್ನು ಮನುಷ್ಯರ ದೇಹದಲ್ಲಿ ಉಪಯೋಗಿಸುವ ಈ ಕ್ರಿಯೆಗಳಿಗೆ ಹಲವು ಶತಮಾನಗಳ ಹಿಂದಿನ ಇತಿಹಾಸವಿದೆ. 1167ರಷ್ಟು ಹಿಂದೆಯೇ ಫ್ರೆಂಚ್ ದೊರೆ ಕಿಂಗ್ ಲೂಯಿಸ್ XI ಈತನ ವೈದ್ಯ ಜೀನ್ ಬ್ಯಾಪ್ಟಿಸ್ಟ್ ಡೆನ್ನಿಸ್ ಕುರಿಮರಿಯ ರಕ್ತವನ್ನು ಮನುಷ್ಯರಿಗೆ ಕೊಡಲು ಯತ್ನಿಸಿದ. ಕುರಿಮರಿಯ ರಕ್ತ ಕ್ರಿಸ್ತನ ರಕ್ತದ ಗುರುತು ಹಾಗೂ ಇದು ತುಂಬಾ ಶುಧ್ಧ ರಕ್ತ ಎಂದು ಆತ ತಿಳಿದು ಹೀಗೆ ಮಾಡಿದ.
1838ರಲ್ಲಿ ಹಂದಿಯಿಂದ ತೆಗೆದ ಕಣ್ಣಿನ ಪಾರದರ್ಶಕ ಪಟಲ ಕಾರ್ನಿಯಾವನ್ನು ಒಬ್ಬ ಮನುಷ್ಯನಲ್ಲಿ ಕಸಿ ಮಾಡಲಾಗಿತ್ತು. ಇದಾಗಿ 65 ವರ್ಷದ ನಂತರ
ಮನುಷ್ಯರ ಕಾರ್ನಿಯಾವನ್ನು ಮನುಷ್ಯರಲ್ಲಿ ಕಸಿ ಮಾಡಲಾಯಿತು. 17 ರಿಂದ 20 ನೇ ಶತಮಾನ ದವರೆಗೆ ಹಲವು ಪ್ರಾಣಿಗಳ ರಕ್ತವನ್ನು ಹಲವಾರು
ಕಾಯಿಲೆ ಗಳಲ್ಲಿ ಮನುಷ್ಯರಲ್ಲಿ ಹರಿಸಲಾಯಿತು.
19ನೇ ಶತಮಾನದಲ್ಲಿ ಚರ್ಮದ ಕಸಿ ತುಂಬಾ ಜನಪ್ರಿಯವಾಯಿತು. ಕುರಿ, ಮೊಲ, ನಾಯಿ, ಬೆಕ್ಕು ಇಲಿ, ಕೋಳಿ, ಪಾರಿವಾಳ – ಹೀಗೆ ಹಲವು ಪ್ರಾಣಿಗಳ ಚರ್ಮವನ್ನು ಮಾನವನಲ್ಲಿ ಪ್ರಯತ್ನಿಸಲಾಯಿತು. ಆನಂತರ ಕ್ಯಾರೆಲ್ ಎಂಬ ಸರ್ಜನ್ ರಕ್ತನಾಳಗಳನ್ನು ಕತ್ತರಿಸಿ ಹೊಲಿಯುವ ತಾಂತ್ರಿಕತೆ ಬೆಳೆಸಿದ ನಂತರ ಹಲವಾರು ಪ್ರಾಣಿಗಳ ಅಂಗಗಳನ್ನು ಮನುಷ್ಯನಲ್ಲಿ ಕಸಿಮಾಡಲು ಪ್ರಯತ್ನಿಸಲಾಯಿತು. 1963-64ರಲ್ಲಿ ಮಾನವ ಅಂಗಗಳು ಸಿಗದಿದ್ದಾಗ ಡಯಾಲಿಸಿಸ್ ಚಿಕಿತ್ಸೆ ಇಲ್ಲದಿದ್ದಾಗ ರೀಮ್ ತಸ್ಮಾ ಎಂಬ ವೈದ್ಯ 13 ವ್ಯಕ್ತಿಗಳಿಗೆ ಕಿಡ್ನಿ ಕಸಿ ಚಿಕಿತ್ಸೆ ಕೈಗೊಂಡು ಅದರಲ್ಲಿ ಒಬ್ಬಾತ 9 ತಿಂಗಳು ಬದುಕಿದ್ದು ಆನಂತರ ಲವಣಾಂಶ ಏರುಪೇರು ಕಾರಣದಿಂದ ಮಡಿದ ಎನ್ನಲಾಗಿದೆ.
1964ರಲ್ಲಿ ಹಾರ್ಡಿ ಎಂಬ ಸರ್ಜನ್ ಚಿಂಪಾಂಜಿ ಹೃದಯವನ್ನು ಮನುಷ್ಯನಲ್ಲಿ ಅಳವಡಿಸಿದ. ಆ ರೋಗಿ ಆಪರೇಷನ್ ನಂತರ 2 ಗಂಟೆಯಲ್ಲಿ ಮಡಿದ. ಸ್ಟಾರ್ಜಲ್ ಎಂಬಾತ 1966ರಲ್ಲಿ ಚಿಂಪಾಂಜಿಯ ಲಿವರ್ ಅನ್ನು ಒಬ್ಬ ಮಾನವ ರೋಗಿಗೆ ಕಸಿ ಶಸ್ತ್ರಕ್ರಿಯೆ ಮಾಡಿದ. ಆತನೇ 1992 ರಲ್ಲಿ ದೊಡ್ಡ ಕೋತಿಯ ಲಿವರ್ ಕಸಿ ಚಿಕಿತ್ಸೆ ಮಾಡಿದಾಗ ಆ ರೋಗಿ 70 ದಿನಗಳ ಕಾಲ ಬದುಕಿದ್ದ. ಆದರೆ ಈಗ ಜೀನ್ ಎಡಿಟಿಂಗ್ ಮತ್ತು ಕ್ಲೋನಿಂಗ್ ತಾಂತ್ರಿಕತೆ ಎಲ್ಲ ಕಡೆ ಲಭ್ಯವಿರುವುದರಿಂದ ಹಂದಿಯ ಅಂಗಗಳನ್ನು ಉಪಯೋಗಿಸಿ ಹಲವು ರೀತಿಯ ಕಸಿ ಚಿಕಿತ್ಸೆಗಳು ಜರುಗುತ್ತಿವೆ.
ಜನವರಿ 7 ರ ಈ ಹಂದಿಯ ಹೃದಯ ಮಾನವನಲ್ಲಿ ಶಸಕ್ರಿಯೆಯು ಮುಂದಿನ ಹಲವು ರೀತಿಯ ಕಸಿ ಶಸ್ತ್ರಕ್ರಿಯೆಗಳಿಗೆ ನಾಂದಿಯಾಗಬಲ್ಲದು ಎಂದು ವಿಜ್ಞಾನಿಗಳು ಮತ್ತು ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಕ್ಷೀನೋ ಟ್ರಾನ್ಸ್ ಪ್ಲಾಂಟೇಷನ್ಗೆ ಇದರಿಂದ ಹೊಸ ಬಾಗಿಲು ತೆರೆದಂತಾಗಿದೆ. ನಾಲು ರೋಗಿಗಳಿಂದ ನಾವು
ಇತ್ತೀಚೆಗೆ ಕಲಿತ ವಿಷಯಗಳು 40 ಕೋತಿಗಳಿಂದ ಕಲಿಯಲು ಸಾಧ್ಯವಿಲ್ಲ ಎಂದು ಬಾಸ್ಟನ್ ನ ಮೆಸಾಚುಸೆಟ್ಸ್ನ ಜನರಲ್ ಆಸ್ಪತ್ರೆಯ ಕಸಿ ಮಾಡುವ
ಶಸ್ತ್ರ ವೈದ್ಯ ಡಾ ಡೇವಿಡ್ ಕೂಪರ್ ಅಭಿಪ್ರಾಯ ಪಡುತ್ತಾರೆ. ಹಾಗಾಗಿ ನಾವು ಮನುಷ್ಯರಲ್ಲಿ ಈ ರೀತಿಯ ಕಸಿ ಶಸ್ತ್ರಕ್ರಿಯೆ ಮಾಡುತ್ತ ಹೋದ ಹಾಗೆ ನಮಗೆ ಹೊಸ ಹೊಳಹುಗಳು, ಹೊಸ ದಾರಿ ದೊರಕುತ್ತವೆ.
ಇತ್ತೀಚಿನ ಕ್ರಿಸ್ಪ್ ಆರ್ – ಕ್ಯಾಸ್ 9 ಜೀನ್ ಎಡಿಟಿಂಗ್ ತಾಂತ್ರಿಕತೆ ಬಂದಿದ್ದರಿಂದ ಈ ಪ್ರಾಣಿ – ಮಾನವರ ಅಂಗಗಳ ಕಸಿ ಚಿಕಿತ್ಸೆ ಪರಿಷ್ಕಾರವಾಗಿ ಮಾನವ ದೇಹದಿಂದ ಪ್ರತಿರೋಧ ಹೆಚ್ಚು ತನ್ನ ಪ್ರತಾಪ ತೋರಿಸದೆ ಹಂದಿಯ ಅಂಗಗಳನ್ನು ಮನುಷ್ಯ ದೇಹಕ್ಕೆ ಕಸಿ ಮಾಡಿದಾಗ, ಅವು ದೇಹವನ್ನು ತ್ಯಜಿಸಿ ಹೊರ ಬರದಂತೆ ಅಗತ್ಯ ಜೀನ್ ಎಡಿಟಿಂಗ್ ಮಾಡಲಾಗಿತ್ತು. ಮೊದಲು ತಿಳಿಸಿದ ಹಂದಿಯ ಹೃದಯವನ್ನು ಮಾನವನಿಗೆ ಅಳವಡಿಸಲು 10 ಕಡೆ ಜೀನ್ ಮಾರ್ಪಾಡು ಗಳನ್ನು ಮಾಡಲಾಯಿತು. ಈತನನ್ನು ಆಸ್ಪತ್ರೆಯಲ್ಲಿಟ್ಟುಕೊಂಡು ನಿಯಮಿತವಾದ ಕ್ಲಿನಿಕಲ್ ಟ್ರಯಲ್ ಮಾಡಲು ಉದ್ದೇಶಿಸಲಾಗಿದೆ.
ಈ ತರಹದ ಕಸಿಗೆ ಬೇಕಾಗಿ ಹಂದಿಯನ್ನು ದೊರಕಿಸಿಕೊಡುವ ಏಕೈಕ ಕಂಪನಿ ಅಮೆರಿಕದ ವರ್ಜೀನಿಯಾ ಪ್ರಾಂತ್ಯದ ಬ್ಲಾಕ್ಸ್ ಬರ್ಗ್ನಲ್ಲಿರುವ ರೆವಿವೈಕೋರ್ ಎಂಬ ಕಂಪನಿ. ಅದರ ಮುಖ್ಯಸ್ಥ ಡೇವಿಡ್ ಅಯಾರೆಸ್ ಎರಡು ದಶಕಗಳಿಂದ ಹಂದಿಗಳಲ್ಲಿ ಜೆನೆಟಿಕ್ ಎಂಜಿನಿಯರಿಂಗ್ ಮಾಡುತ್ತಿದ್ದೇವೆ. ಹಂದಿಯ ಹೃದಯ
ಮಾನವನಲ್ಲಿ ಹೊಂದಿಕೊಳ್ಳುವಂತೆ ಮಾಡಲು, ಮನುಷ್ಯರ ಪ್ರತಿರೋಧ ವ್ಯವಸ್ಥೆ ಹಂದಿಯ ಹೃದಯವನ್ನು ಹೊರದೂಡಬಾರದೆಂದು ಹಂದಿಯ ದೇಹದಿಂದ ೩ ಜೀನ್ ಗಳನ್ನು ತೆಗೆದು, ೬ ಮಾನವ ಜೀನ್ಗಳನ್ನು ಹಂದಿಗೆ ಚುಚ್ಚುಮದ್ದಿನ ರೂಪದಲ್ಲಿ ಇಂಜೆಕ್ಟ್ ಮಾಡಲಾಯಿತು.
ಹಂದಿಯ ಹೃದಯ ಮನುಷ್ಯನ ದೇಹದೊಳಗೆ ಬಂದ ಮೇಲೆ ಅದು ಹೆಚ್ಚಿನ ಪ್ರಮಾಣದಲ್ಲಿ ಬೆಳವಣಿಗೆ ಆಗದಂತೆ ಮತ್ತೊಂದು ಜೀನ್ ತೆಗೆದು ಕೊನೆಯ
ಮಾರ್ಪಾಡು ಮಾಡಲಾಯಿತು. ಎನ್ನುತ್ತಾರೆ. ಕೋತಿ ಮತ್ತು ಇತರ ಪ್ರಾಣಿಗಳಲ್ಲಿ ಪ್ರಯೋಗ ಮಾಡುವುದಕ್ಕಿಂತ ಮನುಷ್ಯನಲ್ಲಿ ಮಾಡಿದಾಗಲೇ ಇದರ ಸರಿಯಾದ ಮಾಹಿತಿ ಲಭ್ಯವಾಗುತ್ತದೆ ಎಂದು ಕೂಪರ್, ಚಾಪ್ ಮನ್ ಮತ್ತು ಇನ್ನೂ ಕೆಲವು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಬೇರೆ ಪ್ರಾಣಿಗಳಲ್ಲಿ ಮತ್ತು ಮನುಷ್ಯನಲ್ಲಿ ಇರುವ ಪ್ರತಿರೋಧ ವ್ಯವಸ್ಥೆ ತುಂಬಾ ಭಿನ್ನವಾಗಿವೆ ಎಂದು ಅವರುಗಳ ಅಭಿಮತ. ಹಾಗೆಯೇ ಹಂದಿಯ ಹೃದಯವು ಮನುಷ್ಯನ ಹೃದಯ ಹೊಡೆದುಕೊಳ್ಳುವ ಗತಿಯ (Rate)ಹೊಡೆದುಕೊಳ್ಳುತ್ತದೆಯೇ ಇದನ್ನೂ ಗಮನಿಸಬೇಕು ಎಂಬ ಅಂಶವನ್ನೂ ಅವರು ನುಡಿಯುತ್ತಾರೆ.
ಒಟ್ಟಿನಲ್ಲಿ ಇದು ಮೊದಲ ಪ್ರಯೋಗವಾದ್ದರಿಂದ ಮುಂದಿನ ದಿನಗಳಲ್ಲಿ ಬಹಳಷ್ಟು ಮಾಹಿತಿ ಲಭ್ಯವಾಗಿ ಅದಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.