Sunday, 24th November 2024

ವಿಮಾನದಲ್ಲಿ ಎರಡನೇ ಪೈಲಟ್‌ಗೂ ಹಾರ್ಟ್‌ ಫೇಲ್ ಆದ್ರೆ ಏನು ಮಾಡೋದು ?

ಇದೇ ಅಂತರಂಗ ಸುದ್ದಿ

vbhat@me.com

ನನ್ನ ಸ್ನೇಹಿತರೊಬ್ಬರು ಮೊದಲ ಬಾರಿಗೆ ವಿಮಾನದಲ್ಲಿ ಹೋಗುವಾಗ, ಟೇಕಾಫ್ ಆಗುವ ಮುನ್ನ ಗಗನಸಖಿಯ ಸುರಕ್ಷತೆಯ ಸೂಚನಾ ಪ್ರದರ್ಶನ’ ಕಂಡು, ದಿಗಿಲುಗೊಂಡು ವಿಮಾನದಲ್ಲಿ ಪ್ರಯಾಣಿಸುವುದಿಲ್ಲ, ತನ್ನನ್ನು ಇಲ್ಲೇ ಇಳಿಸಿಬಿಡಿ ಎಂದು ಹಠ ಹಿಡಿದಿದ್ದರು.

ಕಾರಣ, ಗಗನಸಖಿ ಆರಂಭದಲ್ಲಿ ಸುರಕ್ಷತೆಯ ಬಗ್ಗೆ ಹೇಳುವಾಗ, ಒಂದು ವೇಳೆ ವಿಮಾನದಲ್ಲಿ ಆಮ್ಲಜನಕ ಕಡಿಮೆಯಾಗಿ ಉಸಿರಾಟಕ್ಕೆ ತೊಂದರೆ ಯಾದರೆ ಈ ಮಾಸ್ಕ ಹಾಕಿಕೊಳ್ಳಿ, ವಿಮಾನವೇನಾದರೂ ನೀರಿನಲ್ಲಿ ಇಳಿಯುವ ಪ್ರಸಂಗ ಬಂದರೆ ಜೀವರಕ್ಷಕ ಜಾಕೆಟ್ ಧರಿಸಿ’ ಎಂದು ಹೇಳಿದ್ದನ್ನು ಕೇಳಿ ಆತ ಬೆಚ್ಚಿ ಬಿದ್ದು, ವಿಮಾನ ಹಾರಾಟವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದ. ಅವನಿಗೆ ಸಮಾಧಾನ ಮಾಡುವ ಹೊತ್ತಿಗೆ ಏಳೋ ಹನ್ನೊಂದೋ ಆಗಿತ್ತು.

ಸಿನಿಮಾ ನಟ ಡಾ.ವಿಷ್ಣುವರ್ಧನ್ ಸಾಹಸಸಿಂಹ’ ಎಂದೇ ಜನಪ್ರಿಯ. ಆದರೆ ವಿಮಾನ ಪ್ರಯಾಣವೆಂದರೆ, ಅವರು ಪುಕ್ಕಲು ನರಿ! ಭಯ ಅಂದ್ರೆ ಭಯ. ಒಮ್ಮೆ ಅವರು ಬೆಂಗಳೂರಿನಿಂದ ಹೈದರಾಬಾದ್‌ಗೆ ಹೋಗಲು ವಿಮಾನ ವೇರಿದರಂತೆ. ಒಳಗೆ ಪುಕಪುಕಿ. ವಿಮಾನ ಟೇಕಾ- ಆಗಿದ್ದೇ ತಡ ಜೋರಾಗಿ ಕಿರುಚಲಾರಂಭಿಸಿದರಂತೆ. ಎಷ್ಟೇ ಸಮಾಧಾನ ಪಡಿಸಿದರೂ ಪ್ರಯೋಜನ ವಾಗಲಿಲ್ಲ. ಕೊನೆಗೆ ಪೈಲಟ್ ವಾಪಸ್ ಬೆಂಗಳೂರಿಗೆ ತಿರುಗಿಸಿ ವಿಷ್ಣು ಅವರನ್ನು ಇಳಿಸಿ ಹೋದರಂತೆ !

ಆಗಲೇ ಸಾಹಸಸಿಂಹ ಘರ್ಜಿಸುವುದನ್ನು ನಿಲ್ಲಿಸಿದ್ದು !! ಕೆಲವರು ಈ ಕಾರಣಕ್ಕೆ ವಿದೇಶಗಳಿಗೆ ಹೋಗುವುದಿಲ್ಲ. ಜೀವನದಲ್ಲಿ ಸಿಕ್ಕಾಪಟ್ಟೆ ಗಳಿಸಿರುತ್ತಾರೆ. ಆದರೆ ಒಂದೇ ಒಂದು ದೇಶವನ್ನು ನೋಡಿರುವುದಿಲ್ಲ. ಕೇಳಿದರೆ, ನನಗೆ ವಿದೇಶ ಅಂದ್ರೆ ವಾಕರಿಕೆ, ಆಗಿಬರೊಲ್ಲ ಎಂದೆ ರೀಲು ಸುತ್ತುತ್ತಾರೆ. ಆದರೆ ಅಸಲಿಗೆ ಅವರಿಗೆ ವಿಮಾನ ಪ್ರಯಾಣ ಅಂದ್ರೆ ವಿಪರೀತ ಭಯವಿರುತ್ತದೆ. ಆದರೆ ಅದನ್ನು ಹೇಳುವುದಿಲ್ಲ ಅಷ್ಟೇ.

ಯಶವಂತ ಸರದೇಶಪಾಂಡೆ ಅವರ ‘ರಾಶಿ ಚಕ್ರ’ ನಾಟಕದಲ್ಲಿ ಒಂದು ಪ್ರಸಂಗ ಬರುತ್ತದೆ. ವಿಮಾನದಲ್ಲಿ ಕುಳಿತ ಒಬ್ಬ, ತನ್ನ ಪಕ್ಕ ಕುಳಿತ ಮತ್ತೊಬ್ಬನಿಗೆ ಕೇಳುತ್ತಾನೆ – ‘ದೋಸ್ತ, ನಮ್ಮ ವಿಮಾನ ಹಾರಿಸುತ್ತಿರವ ಪೈಲಟ್ ಇದ್ದಾನಲ್ಲ, ಅವನಿಗೆ ಹಾರ್ಟ್ ಫೇಲ್ ಆದರೆ ಏನು ಗತಿ ?’ ಅದಕ್ಕೆ ಮತ್ತೊಬ್ಬ ಹೇಳುತ್ತಾನೆ – ‘ಒಬ್ಬನಿಗೆ ಹಾರ್ಟ್ ಫೇಲ್ ಆದರೆ, ಮತ್ತೊಬ್ಬ ಇರ್ತಾನಲ್ಲ’ ಅದಕ್ಕೆ ಮೊದಲನೆಯವ ಕೇಳಿದನಂತೆ – ‘ಅದ್ಸರಿ, ಅವನಿಗೂ ಹಾರ್ಟ್ ಫೇಲ್ ಆದರೆ?’ ಇಷ್ಟು ಹೇಳಿ ಆತ ಮಲಗಿಬಿಟ್ಟನಂತೆ. ಆದರೆ ಅದನ್ನು ಕೇಳಿಸಿಕೊಂಡ ಮತ್ತೊಬ್ಬ, ಹೌದಲ್ಲ, ಎರಡನೇಯವನಿಗೂ ಹಾರ್ಟ್ ಫೇಲ್ ಆದರೆ, ಗತಿಯೇನು ಎಂದು ಯೋಚಿಸಲಾರಂಭಿಸಿದಂತೆ. ಅವನಿಗೆ ನಿದ್ದೆಯೇ ಬರಲಿಲ್ಲವಂತೆ. ಆದರೆ ಪಕ್ಕದಲ್ಲಿದ್ದವ ಗೊರಕೆ ಹೊಡೆಯುತ್ತಿದ್ದನಂತೆ.

ವಿಮಾನದಲ್ಲಿ ಒಂದು ಅಘೋಷಿತ ನಿಯಮವಿದೆ, ಅದೇನೆಂದರೆ ಯಾರೂ ವಿಮಾನ ಅಪಘಾತದ ಬಗ್ಗೆ ಮಾತಾಡಬಾರದು. ಸಾಮಾನ್ಯವಾಗಿ ಯಾರೂ ಮಾತಾಡುವುದಿಲ್ಲ ಸಹ. ಹೀಗಾಗಿ ಅಂತಾರಾಷ್ಟ್ರೀಯ ವಿಮಾನದಲ್ಲಿ ನೂರಾರು ಸಿನಿಮಾಗಳನ್ನು ವೀಕ್ಷಿಸುವ ಅವಕಾಶವಿರುತ್ತದೆ, ಆದರೆ ವಿಮಾನ ದುರಂತದ ದೃಶ್ಯಗಳಿರುವ ಸಿನಿಮಾಗಳಿರುವುದಿಲ್ಲ. ಅಂಥ ದೃಶ್ಯಗಳಿದ್ದರೆ ಸಹಜವಾಗಿ ಪ್ರಯಾಣಿಕರು ಗಲಿಬಿಲಿಗೊಳ್ಳಬಹುದು ಎಂಬ ಕಾರಣದಿಂದ ಈ ಎಚ್ಚರ ವಹಿಸಲಾಗುತ್ತದೆ.

ವಿದೇಶ ಪ್ರಯಾಣ ಮತ್ತು ಲಗೇಜ್

ವಿದೇಶಗಳಿಗೆ ಹೋಗುವಾಗ ನಾವು ಪ್ರವಾಸಿಗರಾಗಿ ಹೋಗುತ್ತಿದ್ದೇವಾ, ಪಯಣಿಗರಾಗಿ ಹೋಗುತ್ತಿದ್ದೇವಾ ಅಥವಾ ಬಿಸಿನೆಸ್ ಗಾಗಿ ಹೋಗುತ್ತಿದ್ದೇವಾ ಎಂಬುದು ಬಹಳ ಮುಖ್ಯ. ಬಿಸಿನೆಸ್‌ಗಾಗಿ ಹೋಗುವಾಗ ಫಾರ್ಮಲ್ ಪ್ಯಾಂಟ್, ಶರ್ಟ್, ಟೈ, ಷೂ ಎಲ್ಲವೂ ಅಗತ್ಯ. ಒಂದು ವೇಳೆ ನೀವು ಪ್ರವಾಸಿಗರಾಗಿಯೋ, ಪಯಣಿಗರಾಗಿಯೋ ಹೋದರೆ ನಿಮ್ಮ ಡ್ರೆಸ್‌ಗೆ ಕಿಂಚಿತ್ತೂ ಬೆಲೆ ಕೊಡಬೇಕಿಲ್ಲ.

ಹೇಗಿದ್ದರೂ ಆ ಊರಿನಲ್ಲಿ ನಿಮಗೆ ಯಾರ ಪರಿಚಯವೇ ಇಲ್ಲ. ನೀವು ಎಷ್ಟು ಒಳ್ಳೆಯ ಬಟ್ಟೆ ಧರಿಸಿದರೇನು, ಸುಕ್ಕಾದ ಬಟ್ಟೆ ತೊಟ್ಟರೇನು, ವ್ಯತ್ಯಾಸವೇ ಇಲ್ಲ. ಅಷ್ಟಕ್ಕೂ ವಿದೇಶಗಳಲ್ಲಿ ಉಡುಪಿಗೆ ಅಷ್ಟು ಮಹತ್ವ ಕೊಡುವುದಿಲ್ಲ. ಅದರಲ್ಲೂ ಅಮೆರಿಕದಲ್ಲಿ ಒಂದು ಜೀನ್ಸ್ ಪ್ಯಾಂಟ್ ಇಟ್ಟುಕೊಂಡರೆ ಒಂದು ತಿಂಗಳು ಕಳೆಯಬಹುದು. ಆಗಾಗ ಶರ್ಟ್ ಅಥವಾ ಟಿ-ಶರ್ಟ್ ಬದಲಿಸಿದರೆ ಸಾಕು. ನಾಲ್ಕು ಶರ್ಟ್ ಹಾಗೂ ಒಂದು ಪ್ಯಾಂಟ್‌ನಿಂದ ಆರಾಮಾಗಿ ತಿಂಗಳು ಕಳೆಯುವುದು ಕಷ್ಟವಲ್ಲ. ಸ್ವಲ್ಪ ಚಳಿಯಿzಗ ಮೇಲೊಂದು ಬೆಚ್ಚಗಿನ ಸ್ವೇಟರೋ, ಜರ್ಕಿನೋ ಇದ್ದರೆ ಸಾಕೋ ಸಾಕು.

ಜಾಗಿಂಗ್ ಅಥವಾ ಸ್ಪೋರ್ಟ್ಸ್ ಷೂ ಇದ್ದರೆ ಸಾಕು. ಕೆಲವರು ವಿದೇಶಗಳಿಗೆ ಹೋದಾಗ ದಿನಕ್ಕೆ ಒಂದೊಂದು ಪ್ಯಾಂಟ್ ಮತ್ತು ಶರ್ಟ್ ಧರಿಸಲು ಸೂಟ್ ಕೇಸ್ ತುಂಬಾ ಬಟ್ಟೆಗಳನ್ನು ಒಯ್ಯುತ್ತಾರೆ. ಅಲ್ಲಿಗೆ ಹೋದ ನಂತರ ಇಷ್ಟೆ ಬಟ್ಟೆಗಳ ಅಗತ್ಯವಿಲ್ಲ ಎಂಬುದು ಗೊತ್ತಾಗುತ್ತದೆ. ಹಾಗಂತ ಅವನ್ನೆಲ್ಲ ಬಿಸಾಡಲಾಗುವುದಿಲ್ಲ. ಅವರಿಗೆ ಅಲ್ಲಿ ಹೊಸ ಬಟ್ಟೆಗಳು ಕಂಡರೆ ಖರೀದಿಸಲಾಗುವುದಿಲ್ಲ ಅಥವಾ ಎಕ್ಸ್‌ಟ್ರಾ ಗೇಜ್‌ಗೆ ಜಾಸ್ತಿ ಹಣ ಕೊಟ್ಟು ಅವನ್ನೆಲ್ಲ ತರಬೇಕಾಗುತ್ತದೆ.

ಅದರ ಬದಲು ಇಲ್ಲಿಂದ ಹೋಗುವಾಗಲೇ ಕನಿಷ್ಠ ಅಗತ್ಯಕ್ಕೆ ಬೇಕಾದಷ್ಟು ಬಟ್ಟೆಗಳನ್ನು ಒಯ್ದರೆ ಅಲ್ಲಿ ಖರೀದಿಸಲು, ಶಾಪಿಂಗ್ ಮಾಡಲು ಅನುಕೂಲವಾಗುತ್ತದೆ. ಹೀಗಾಗಿ ಇಲ್ಲಿಂದ ಹೋಗುವಾಗ ಸಾಧ್ಯವಾದಷ್ಟು ಖಾಲಿ ಸೂಟ್ ಕೇಸ್ ಅನ್ನು ಒಯ್ಯಬೇಕು. ಬರುವಾಗ ಅದನ್ನು ತುಂಬಿಸಿಕೊಂಡು ಬರಬೇಕು. ಅಲ್ಲಿನ ಕೆಲವು ಸಾಮಾನುಗಳು ಗುಣಮಟ್ಟದಲ್ಲಿ ಉತ್ಕೃಷ್ಟವಾಗಿರುತ್ತವೆ ಮತ್ತು ಕೆಲವೊಮ್ಮೆ ಕಡಿಮೆ ಬೆಲೆಗೂ ದೊರಕುತ್ತವೆ.

ಭಾರತಕ್ಕೆ ಬರುವ ವಿದೇಶಿಯರನ್ನೂ ನೋಡಿ, ಅವರು ಹೆಗಲ ಮೇಲೆ ಏರಿಸಿಕೊಳ್ಳುವ ಬ್ಯಾಗ್ ಹಿಡಿದುಕೊಂಡು, ಇಡೀ
ದೇಶ ಸುತ್ತಿ ವಾಪಸ್ ತಮ್ಮ ತಾಯ್ನಾಡಿಗೆ ಹೋಗುತ್ತಾರೆ. ಬಟ್ಟೆಬರೆ ಬಿಟ್ಟರೆ ಅವರ ಬಳಿ ಏನೂ ಇರುವುದಿಲ್ಲ. ಅಷ್ಟಕ್ಕೂ
ಅವರು ಇಲ್ಲಿಗೆ ಬರುವುದು ದೇಶ ನೋಡಲು ಹೊರತು ಖರೀದಿಗಲ್ಲ. ಕಂಡ ಕಂಡಿದ್ದನ್ನೆಲ್ಲ ಖರೀದಿಸಿದರೆ ಭಾರ ಜಾಸ್ತಿ
ಆಗುತ್ತಲೇ ಹೋಗುತ್ತದೆ.

ನಿಮ್ಮ ಲಗೇಜ್ ಎಷ್ಟು ಕಮ್ಮಿ ಇದೆಯೋ ನೀವು ಅಷ್ಟು ಒಳ್ಳೆಯ ಪ್ರವಾಸಿಗರು ಅಥವಾ ಪಯಣಿಗರು. ನಿಮ್ಮ ಅಲೆದಾಟಕ್ಕೆ ನಿಮ್ಮ ಮಣಭಾರದ ಸೂಟ್ ಕೇಸ್ ತೊಡಕು ಅಥವಾ ವೈರಿ. ಬ್ಯಾಕ್ ಪ್ಯಾಕ್ ಒಂದೇ ಇದ್ದರೆ ನೀವು ನಿಜವಾದ ಪಯಣಿಗ.
ಅಷ್ಟಕ್ಕೂ ನೀವು ವಿದೇಶಗಳಿಗೆ ಹೋಗುವುದು ಅಲ್ಲಿ ಸೆಟ್ಲ್ ಆಗಬೇಕು ಎಂದಲ್ಲ. ನೀವು ಹೋಗುವುದು ಅಲ್ಲಿನ ಊರುಗಳನ್ನು ನೋಡಲು. ಅಷ್ಟೇ. ಅಗತ್ಯಕ್ಕಿಂತ ಯಾವುದೇ ಒಂದು ವಸ್ತುವಿದ್ದರೂ ಅದು ಭಾರವೇ. ಇನ್ನೊಂದು ಸಂಗತಿ ಗೊತ್ತಿರಲಿ, ಖಾಲಿ ಪರ್ಸ್‌ನಂಥ ಭಾರದ ವಸ್ತು ಮತ್ತೊಂದಿಲ್ಲ !

ಕಳೆದುಕೊಂಡಿದ್ದನ್ನು ಗಳಿಸುವುದು!
‘ನಾನು ನನ್ನ ಫೋನಿನಿಂದ ಫೇಸ್‌ಬುಕ್, ಟ್ವಿಟರ್, ವಾಟ್ಸಪ್, ಟಂಬ್ಲರ್, ಸ್ನ್ಯಾಪ್‌ಚಾಟ್, ಇನ್‌ಸ್ಟಾಗ್ರಾಮ್, ಪಿಂಟರೆಸ್ಟ್,
ಟೆಲಿಗ್ರಾಮ್, ವೈನ್, ಕ್ಯಾಂಡಿಕ್ರಷ್, ಮೆಸೆಂಜರ್, ಫ್ಲಿಪ್ ಬೋರ್ಡ್… ಆಪ್‌ಗಳನ್ನು ಡಿಲೀಟ್ ಮಾಡಿದ್ದೇನೆ. ಜೀವನ ನಿಧಾನ ವಾದರೂ ಸಮಾಧಾನ ಎಂದು ಅನಿಸಿದೆ. ರಾತ್ರಿ ಐದು ನಿಮಿಷ ಟಿವಿಯಲ್ಲಿ ಹೆಡ್‌ಲೈನ್ಸ್ ನೋಡುತ್ತೇನೆ. ಬೆಳಗ್ಗೆ ಒಂದು
ಗಂಟೆ ಪತ್ರಿಕೆ ಓದುತ್ತೇನೆ. ಕಳೆದುಹೋದ ನನ್ನ ಸಮಯ, ನೆಮ್ಮದಿ, ಸಂತಸ, ಬಿಡುವು ಹೀಗೆ ಎಲ್ಲವೂ ಮರಳಿ ಬಂದಿದೆ ಯೆಂದು ನನಗೆ ಮನವರಿಕೆಯಾಗಿದೆ.

ಇವುಗಳನ್ನು ಡಿಲೀಟ್ ಮಾಡಿದ್ದರಿಂದ ನಾನು ಏನೋ ಕಳೆದುಕೊಂಡೆ ಎಂದು ನನಗೆ ಅನಿಸುತ್ತಿಲ್ಲ. ಈ ಕೆಲಸ ಎಂದೋ ಮಾಡಬೇಕಿತ್ತು. ಹಾಗೆ ಮಾಡದೇ ನನ್ನ ಬದುಕಿನ ಎಷ್ಟೋ ಅಮೂಲ್ಯ ಸಮಯ, ಆನಂದ, ಏಕಾಂತ, ಮೌನವನ್ನೆಲ್ಲ ಕಳೆದುಕೊಂಡು ಬರಿದಾದೆ, ಬರಡಾದೆ. ಈ ಆಪ್‌ಗಳಿಗೆಲ್ಲ ನನ್ನ ಧಿಕ್ಕಾರವಿರಲಿ.’ ಹೀಗೆಂದು ಯೋಗಿ ನಿಶ್ಚಿಂತಜೀ ಬಹಳ ದಿನಗಳ ನಂತರ ಪತ್ರ ಬರೆದಿದ್ದರು. ಕಳೆದ ಎರಡು ವರ್ಷಗಳಿಂದ ಅವರು ವಿಪರೀತ ಮೊಬೈಲ್‌ದಾಸರಾಗಿದ್ದರೆಂಬುದು ಗೊತ್ತಿತ್ತು. ಅವರ ವಾಟ್ಸಪ್ ಸ್ಟೇಟಸ್ ಸದಾ ‘ಆನ್‌ಲೈನ್’ ಎಂದು ತೋರಿಸುತ್ತಿತ್ತು. ಅವರಿಗೆ ಯಾವುದೇ ಮೆಸೇಜ್ ಹಾಕಿದರೆ, ಇಮೇಲ್ ಬರೆದರೆ, ಕ್ಷಣಾರ್ಧದಲ್ಲಿ ಉತ್ತರ ಬರುತ್ತಿತ್ತು.

ಅಲ್ಲದೇ ಅವರು ಫೇಸ್ ಬುಕ್ ಪೋಸ್ಟಿಂಗ್‌ಗಳಿಗೆಲ್ಲ ಉತ್ತರ ಬರೆಯುತ್ತಿದ್ದರು. ಲೈಕ್ಸ್ ಒತ್ತುತ್ತಿದ್ದರು. ವಾಟ್ಸಪ್ ಮೂಲಕ ದಿನಕ್ಕೆ ೨೫-೩೦ ಫಾರ್ವರ್ಡ್ ಮೆಸೇಜ್‌ಗಳನ್ನು ಎರಚುತ್ತಿದ್ದರು. ರಾತ್ರಿ ಹನ್ನೆರಡು, ಒಂದು ಗಂಟೆಗೆ ಅವರು ಜಗತ್ತಿನ ವಿದ್ಯಮಾನಗಳ ಬಗ್ಗೆ ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯ ಬರೆಯುತ್ತಿದ್ದರು. ಎಲ್ಲವುಗಳಿಗೂ ಪ್ರತಿಕ್ರಿಯಿಸುತ್ತಿದ್ದರು. ಅವರಲ್ಲಾದ ಈ ಬದಲಾವಣೆ ನನ್ನಲ್ಲಿ ಅಚ್ಚರಿ ಮೂಡಿಸಿತ್ತು.

ಈಗ ಅವರು ಇವೆಲ್ಲವುಗಳಿಂದ ಮುಕ್ತರಾಗಿ ಅಕ್ಷರಶಃ, ನಿಜವಾದ ಅರ್ಥದಲ್ಲಿ ‘ನಿಶ್ಚಿಂತಜೀ’ ಆಗಿದ್ದಾರೆ. ಇದರಿಂದ ಅವರು ಕಳೆದುಕೊಂಡಿದ್ದೇನು? ಗಳಿಸಿಕೊಂಡಿದ್ದೇನು? ಅವರೇ ಹೇಳುವಂತೆ ಕಳೆದುಕೊಂಡಿದ್ದು ಏನೂ ಇಲ್ಲ. ಗಳಿಸಿದ್ದು ಸಮಯ, ಸಮಾಧಾನ, ನೆಮ್ಮದಿ, ಮೌನ, ಏಕಾಂತ ಹಾಗೂ ಇನ್ನೂ ಅನೇಕ. ಅವರಿಗೆ ಎಲ್ಲಾ ಸುದ್ದಿ, ಮಾಹಿತಿ ಬಂದೇ ಬರುತ್ತದೆ. ಸ್ವಲ್ಪ ತಡವಾಗಬಹುದು. ಪರವಾಗಿಲ್ಲ. ಎಲ್ಲರಿಗಿಂತ ಮೊದಲೇ ತಿಳಿದುಕೊಂಡು ಆಗಬೇಕಾದುದೇನೂ ಇಲ್ಲ.

ತಡವಾಗಿ ಗೊತ್ತಾಗುವುದರಿಂದ ನಷ್ಟವೂ ಇಲ್ಲ. ಅವರಿಗೆ ಸಂಬಂಧಿಸಿದ ವಿಚಾರಗಳು ಅವರಿಗೆ ಯಾವಾಗ ಗೊತ್ತಾಗಬೇಕೋ ಆಗ ಗೊತ್ತಾಗುತ್ತದೆ. ಇನ್ನೇಕೆ ತಲೆಕೆಡಿಸಿಕೊಳ್ಳಬೇಕು ? ಇಡೀ ದೇಶಕ್ಕೆ ದೇಶ, ವಿಶ್ವಕ್ಕೆ ವಿಶ್ವ ಈ ಆಪ್‌ಗಳಲ್ಲಿ, ಮೊಬೈಲ್
ಗಳಲ್ಲಿ ಮುಳುಗಿಹೋದರೆ ಏನಾದೀತು ? ಒಮ್ಮೆ ಯೋಚಿಸಿ. ಯೋಗಿ ನಿಶ್ಚಿಂತಜೀ ಹೇಳಿದ್ದು ಎಷ್ಟು ನಿಜ ಅಲ್ಲವಾ ?

ಚುನಾವಣೆಯಲ್ಲಿ ಗೆಲ್ಲುವುದು
ನೀವು ಮಾಣಿಕರಾವ್ ಹೊದಲ್ಯಾ ಗಾವಿತ್ ಎಂಬುವವರ ಹೆಸರನ್ನು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಇವರು ಡಾ.
ಮನಮೋಹನ ಸಿಂಗ್ ಅವರ ಸರಕಾರದಲ್ಲಿ ಗೃಹ ಖಾತೆ ರಾಜ್ಯ ಸಚಿವರಾಗಿದ್ದರು. ಇವರು ಮಂತ್ರಿಯಾಗಿದ್ದುದು ಯಾರಿಗೂ
ಗೊತ್ತಿರಲಿಲ್ಲ. ಇವರು ೧೯೮೧ ರಿಂದ ೨೦೧೪ ರವರೆಗೆ ಮಹಾರಾಷ್ಟ್ರದ ನಂದೂರ್ಬಾರ್ ಲೋಕಸಭಾ ಕ್ಷೇತ್ರದಿಂದ ಸತತ
ಒಂಬತ್ತು ಬಾರಿ ಆಯ್ಕೆಯಾಗಿದ್ದರು. ಆ ರಾಜ್ಯದಿಂದ ಲೋಕ ಸಭೆಗೆ ಅತಿ ಹೆಚ್ಚು ಸಲ ಆಯ್ಕೆಯಾದ ದಾಖಲೆ ಇನ್ನೂ ಅವರ
ಹೆಸರಿನಲ್ಲಿಯೇ ಇದೆ.

ಕಾಂಗ್ರೆಸ್ಸಿನ ನಿಷ್ಠಾವಂತ ಸದಸ್ಯರಾಗಿದ್ದ ಗಾವಿತ್ ಅವರ ವಿರುದ್ಧ ಎಂಥ ಘಟಾನುಘಟಿ ಅಭ್ಯರ್ಥಿ ನಿಲ್ಲಿಸಿದರೂ ಅವರು
ಸೋತು ಹೋಗುತ್ತಿದ್ದರು. ಪ್ರಾಥಮಿಕ ತರಗತಿ ತನಕ ಓದಿದ್ದ ಗಾವಿತ್ ಆರಿಸಿ ಬರುತ್ತಿದ್ದುದೇ ಅನೇಕರಿಗೆ ವಿಸ್ಮಯವಾಗಿತ್ತು.
ನಾನು ಅವರನ್ನು ಪ್ರಧಾನ ಮಂತ್ರಿ ಅವರ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಭೇಟಿಯಾಗಿದ್ದೆ. ಅದು ಅವರ ಮೊದಲ ವಿದೇಶ
ಪ್ರವಾಸವಾಗಿತ್ತು. ಪಾಪ, ಅವರಿಗೆ ಏನೇನೂ ಗೊತ್ತಿರಲಿಲ್ಲ.

ನಿರುಪದ್ರವಿ ಎಂಬ ಪದಕ್ಕೆ ಜೀವಂತ ನಿದರ್ಶನದಂತಿದ್ದ ಗಾವಿತ್, ಹಣವನ್ನು ಖರ್ಚು ಮಾಡದೇ ಆರಿಸಿ ಬರುತ್ತಿದ್ದರು.
ಅವರಲ್ಲಿ ಯಾವ ಗುಣಗಳನ್ನು ನೋಡಿ ಅವರ ಕ್ಷೇತ್ರದ ಮತದಾರರು ಆರಿಸಿ ತರುತ್ತಿದ್ದರೋ ಆ ಬಲ್ಲ ! ನಂದನ್ ನಿಲೇಕಣಿ ಅವರಿಗಿಂತ ಯೋಗ್ಯ ಅಭ್ಯರ್ಥಿ ಬೇಕಾ? ಭಾರತದ ಐಟಿ ಕ್ಷೇತ್ರದ ಪಿತಾಮಹರಲ್ಲಿ ಅವರೂ ಒಬ್ಬರು. ಅವರು ಲೋಕಸಭೆ ಯಲ್ಲಿರಬೇಕಿತ್ತು. ಅವರಿಗೆ ಎಲ್ಲಾ ಅರ್ಹತೆಗಳಿದ್ದವು. ಅವರು ಆರಿಸಿ ಹೋಗಿದ್ದರೆ, ನಿಶ್ಚಿತವಾಗಿಯೂ ಅವರಿಂದ ಗಣನೀಯ ಯೋಗದಾನವನ್ನು ನಿರೀಕ್ಷಿಸಬಹುದಾಗಿತ್ತು.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅವರು ಅನಂತಕುಮಾರ ವಿರುದ್ಧ ನಿಲ್ಲದೇ ಬೇರೆ ಕ್ಷೇತ್ರ ಆಯ್ದುಕೊಳ್ಳಬೇಕಿತ್ತು. ಅವರು ಎಡವಿದ್ದು ಅಲ್ಲಿಯೇ. ಅವರು ತಮ್ಮ ಜೀವನದಲ್ಲಿ ಸಾಧಿಸಿದ ಅನುಭವ, ಸಾಧನೆ ಅವರಿಗೆ ಗೆಲ್ಲಲು ಸಹಕಾರಿಯಾಗಲಿಲ್ಲ. ಅವರು ಅನಂತಕುಮಾರ ಅವರ ವಿರುದ್ಧ ಸೋತು ಹೋದರು. ಅಲ್ಲಿಗೆ ಅವರ ರಾಜಕೀಯ ವಾಂಛೆಯೂ ಮುಗಿದು ಹೋಯಿತು.

ಚುನಾವಣೆಯಲ್ಲಿ ಗೆಲ್ಲುವುದು ಅಂದರೆ ಅಷ್ಟು ಸುಲಭವಾ ? ನಮ್ಮ ಯೋಗ್ಯತೆ, ಶೈಕ್ಷಣಿಕ ಅರ್ಹತೆ, ಪ್ರಾಮಾಣಿಕತೆಯೇ
ಬೇರೆ, ಚುನಾವಣಾ ರಂಗದಲ್ಲಿ ಪರಿಗಣಿತವಾಗುವ ಸಂಗತಿಗಳೇ ಬೇರೆ. ಅಂರ್ಪೈ ಹೇಗೆ ಉತ್ತಮ ಕ್ರೀಡಾಪಟು ಆಗಲು
ಸಾಧ್ಯವಿಲ್ಲವೋ, ರಾಜಕೀಯ ಪಂಡಿತನಾದವನು ಚುನಾವಣೆಯನ್ನು ಗೆಲ್ಲುವುದೂ ಸಾಧ್ಯವಿಲ್ಲ. ಅದೇ ಬೇರೆ ಇದೆ
ಬೇರೆ. ರಾಜಕೀಯ ಪಂಡಿತನಿಗೆ ರಾಜಕೀಯ ಕ್ಷೇತ್ರದ ಬಗ್ಗೆ ಆಳವಾದ ಜ್ನಾನವಿರಬಹುದು. ಚುನಾವಣಾ ಗೆಲ್ಲಲು ಅದು ನದಂಡವಲ್ಲ. ರಾಜಕೀಯದ ಬಗ್ಗೆ ಗೊತ್ತಿರುವುದಕ್ಕೂ, ಆರಿಸಿ ಬರುವುದಕ್ಕೂ ಏನೂ ಸಂಬಂಧವಿಲ್ಲ.

ಕುಟುಂಬ ಮತ್ತು ಹಸುರುಮನೆ

ಇಸ್ರೇಲಿಗಳು ನೀರಿನ ಗರಿಷ್ಠ ಬಳಕೆ ಮಾಡುವುದರಲ್ಲಿ ನಿಸ್ಸೀಮರು. ನೀರಿಲ್ಲದ ನಾಡಿನಲ್ಲಿ ಕೃಷಿ ಮಾಡಬೇಕಾದ್ದರಿಂದ
ಇದು ಅನಿವಾರ್ಯವೂ ಹೌದು. ಇಸ್ರೇಲ್ ಮೂಲದ ನೆಟಾಫಿಮ್ ಎಂಬ ಸಂಸ್ಥೆ ಒಂದು ಕುಟಂಬಕ್ಕೆ ಮಾತ್ರ ಸಾಕಾಗುವಂಥ ಹಸುರು ಮನೆಯನ್ನು ಅಭಿವೃದ್ಧಿಪಡಿಸಿದೆ. ಗಂಡ- ಹೆಂಡತಿ ಮತ್ತು ಇಬ್ಬರು ಮಕ್ಕಳು ಇರುವ ಕುಟುಂಬ ತಮಗೆ ಬೇಕಾದ ಹಣ್ಣು, ತರಕಾರಿಗಳನ್ನು ತಾವೇ ಬೆಳೆದುಕೊಳ್ಳಲು ಅನುಕೂಲವಾಗುವಂಥ ಹಸುರು ಮನೆ ರೂಪಿಸಿದೆ. ಈ ವಿಧಾನದ ಮೂಲಕ ಯಾರು ಬೇಕಾದರೂ ಅಂಥ ಹಸುರುಮನೆಗಳನ್ನು ಸ್ಥಾಪಿಸಿಕೊಳ್ಳಬಹುದು.

ಈ ಹಸುರು ಮನೆಗಳಿಗೆ ಮುಖ್ಯವಾಗಿ ಭೂಮಿ ಬೇಕು. ಮನೆಯ ಹಿತ್ತಲಿನಲ್ಲಿ ಇದನ್ನು ಸ್ಥಾಪಿಸಬಹುದು. ಈ ಮನೆಗೆ ಪೈಪುಗಳ ಮೂಲಕ ಹೇಗೆ ನೀರನ್ನು ಹರಿಸಬೇಕು ಎಂಬುದನ್ನು ನೆಟಾಫಿಮ್ ವೈeನಿಕವಾಗಿ ನೀಲನಕ್ಷೆ ಹಾಕಿಕೊಟ್ಟಿದೆ. ಈ ಹಸುರು ಮನೆಯ ವೈಶಿಷ್ಟ್ಯವೇನೆಂದರೆ ಅದಕ್ಕೆ ಯಾವ ರೀತಿಯ ಪೈಪುಗಳನ್ನು ಬಳಸಬೇಕು ಮತ್ತು ಅವುಗಳನ್ನು ಯಾವ ವಿಧಾನದಲ್ಲಿ ಅಳವಡಿಸಬೇಕೆಂಬುದು.

ಪ್ರತಿ ದಿನ ಒಂದು ಬಕೆಟ್ ನೀರಿದ್ದರೆ ಸಾಕು. ಇಪ್ಪತ್ತು ಅಡಿ ಅಗಲ ಇಪ್ಪತ್ತು ನೀರಿದ್ದರೆ ಸಾಕು. ಇಪ್ಪತ್ತು ಅಡಿ ಅಗಲ ಇಪ್ಪತ್ತು
ಅಡಿ ಉದ್ದ ಭೂಮಿಯಿದ್ದರೆ ಹಣ್ಣು ಮತ್ತು ತರಕಾರಿಗೆ ಯಾರನ್ನೂ ಅವಲಂಬಿಸಬೇಕಿಲ್ಲ.

ಅರ್ಧವಿರಾಮ: ಬೇಕೋ, ಬೇಡವೋ
ಕನ್ನಡದಲ್ಲಿ ಬಹಳ ಲೇಖಕರಿಗೆ ಅಲ್ಪವಿರಾಮ (Comma) ಮತ್ತು ಅರ್ಧವಿರಾಮ (ಸೆಮಿಕೊಲನ್)ದ ವ್ಯತ್ಯಾಸವೇ
ಗೊತ್ತಿಲ್ಲ. ಇದೇ ಕಾರಣಕ್ಕೆ ಅವರು ಸೆಮಿಕೊಲನ್ ಬಳಸುವುದೇ ಇಲ್ಲ. ಬಳಸದೇ ಇರಲು ವ್ಯತ್ಯಾಸ ಗೊತ್ತಿಲ್ಲದಿರುವುದೂ ಒಂದು ಕಾರಣ. ಈ ಗೊಂದಲಗಳ ನಡುವೆಯೇ ಈಗ ಅರ್ಧವಿರಾಮವನ್ನು ಕೈಬಿಡಬೇಕು, ಅದನ್ನು ನಿಷೇಧಿಸಬೇಕು
ಎಂಬ ಚಳವಳಿಯೂ ಇಂಗ್ಲೆಂಡಿನಲ್ಲಿ ಆರಂಭವಾಗಿದೆ.

ಈ ಚಿಹ್ನೆಯಿಲ್ಲದೇ ಇಂಗ್ಲಿಷ್ ಭಾಷೆಯೇ ಇಲ್ಲ ಎಂದು ಕೆಲವು ವ್ಯಾಕರಣ ಪಂಡಿತರು ವಾದ ಮಾಡುತ್ತಿದ್ದಾರೆ. ಈ
ವಾದ-ಪ್ರತಿವಾದಗಳಿಂದ ಏನೂ ಆಗುವುದಿಲ್ಲ. ಕಾರಣ ಈ ರೀತಿಯ ಚಳವಳಿ ಕಾವು ಪಡೆಯುವುದು ಇದೇ ಮೊದಲಲ್ಲ. ಹಿಂದೆಯೂ ನೂರಾರು ಬಾರಿ ಈ ವಿವಾದವೆದ್ದಿತ್ತು. ಕೆಲ ದಿನ ಚರ್ಚೆಗಳು ನಡೆದು ಅಲ್ಲಿಗೆ ಸ್ತಬ್ದವಾಗಿತ್ತು. ಈ ಸಲವೂ ಅದೇ ರೀತಿ ಆಗುವುದು ನಿಶ್ಚಿತ. ಸೆಮಿಕೊಲನ್ ಬಳಸಬಾರದು ಎಂದು ತೀರ್ಮಾನ ಕೊಡಲು ಯಾವ ನ್ಯಾಯಾಧೀಶರಿಗೆ ಅಽಕಾರವಿದೆ. ಅಷ್ಟಕ್ಕೂ ಇದು ಕೋರ್ಟಿನ ಪರಿಧಿಗೆ ಬರುವ ವಿಷಯವಲ್ಲ. ಒಂದು ವೇಳೆ ನಿಮಗೆ ಅರ್ಧವಿರಾಮ ಕಂಡರೆ ಆಗದಿದ್ದರೆ ಅದನ್ನು ಬಳಸಬೇಡಿ.

ಬೇರೆಯವರಿಗೂ ಬಳಸಬೇಡಿ ಎಂದು ಹೇಳಲು ನಾವ್ಯಾರು ? ಹೀಗಾಗಿ ಅರ್ಧವಿರಾಮಕ್ಕೆ ಪೂರ್ಣವಿರಾಮ ಹಾಕುವುದು
ಸಾಧ್ಯವಿಲ್ಲ ; ಚರ್ಚೆ ಮುಂದುವರಿಯಲಿ.

ಸಣ್ಣ ಕತೆ
ನನ್ನ ದೃಷ್ಟಿಯಲ್ಲಿ ಜಗತ್ತಿನ ಅತಿ ಸಣ್ಣ ಕತೆ ಅಂದರೆ – ಕೊನೆಯಲ್ಲಿ ಎಲ್ಲರೂ ಕತೆಗಳೇ ! ಹಾಗೆ ಇನ್ನೊಂದು – ಕನಸಿನಲಿ ಡೈನೋಸಾರಸ್ ಕಂಡೆ. ಕಣ್ಣು ಬಿಟ್ಟಾಗ ಎದುರಿಗಿತ್ತು! ಸಣ್ಣ ಕತೆಗಳ ವೈಶಿಷ್ಟ್ಯವಿರುವುದು ಅವು ಮುಗಿಯದಿರುವುದರಲ್ಲಿ. ಕೊನೆಯಾದರೂ ಅಂತ್ಯವಾಗುವುದಿಲ್ಲ. ಇದು ಕತೆಯ ಕ್ರಿಯಾಶೀಲತೆಯನ್ನು ತೋರಿಸುತ್ತದೆ.

ಸಣ್ಣ ಕತೆಯ ಇನ್ನೊಂದು ವೈಶಿಷ್ಟ್ಯವೆಂದರೆ, ಅದಕ್ಕೆ ಪಾತ್ರಧಾರಿಗಳೇ ಬೇಕಿಲ್ಲ. ಅಮೂರ್ತತೆಯೂ ಅದರ ಮುಖ್ಯ
ಧಾತುವೇ. ಈ ಸಾಧ್ಯತೆಯೇ ಅದರ ಹಂದರವನ್ನು ವಿಸ್ತರಿಸುತ್ತದೆ. ಸಣ್ಣ ಕತೆ ಒಂಥರಾ ನಿಂತು ನಿಂತು ಹೊರಡುವ ಬಸ್
ಇದ್ದಂತೆ. ಆದರೂ ಪಯಣ ಮಾತ್ರ ವೇಗ ಮತ್ತು ಸರಾಗ.

ಟ್ಯಾಕ್ಸಿಯಲ್ಲಿ ನನ್ನ ಪಕ್ಕ ಕುಳಿತ ಅಪರಿಚಿತ ತನ್ನಷ್ಟಕ್ಕೆ ಬಿಕ್ಕುತ್ತಿದ್ದ. ನಾನು ಒಂಟಿ ಅಲ್ಲ ಎನಿಸಿತು. ಈ ಸಣ್ಣಕತೆ ಭಾವದಲ್ಲಿ ಹದವಾಗಿ ಅದ್ದಿದ ಮೊಸರನ್ನ. ವಿಷಾದ, ಹತಾಶೆ, ಸಂತಸ, ವ್ಯಂಗ್ಯ, ಹುಯ್ದಾಟ, ತೀವ್ರತೆ.. ಮುಂತಾದ ಮಾನವ ಸಹಜ ಒಗ್ಗರಣೆ ಇದ್ದರೆ ಅದರ ಮಜಾವೇ ಬೇರೆ.