Thursday, 21st November 2024

ಮನುಕುಲದ ಮಹಾಮಾರಿ ಪ್ಲೇಗ್ !

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಅನುಮಾನಿತ ವ್ಯಕ್ತಿಯ ಗಡ್ಡೆಗಳ ರಸ, ಕಫ, ರಕ್ತ ಪರೀಕ್ಷೆ ಮಾಡಿ, ಯೆರ್ಸೀನಿಯ ಬ್ಯಾಕ್ಟೀರಿಯ ಪತ್ತೆಹಚ್ಚುವುದರ ಮೂಲಕ ಸೋಂಕನ್ನು ಖಚಿತಪಡಿಸಬಹುದು. ಕೂಡಲೇ ಆ ವ್ಯಕ್ತಿಗೆ ಪ್ರತಿಜೈವಿಕ ಔಷಧಗಳನ್ನು ಹಾಗೂ ಇತರ ಸಹಾಯಕ ಚಿಕಿತ್ಸೆಯನ್ನು ಒದಗಿಸಬೇಕಾಗುತ್ತದೆ.

ನಮ್ಮ ಮನುಕುಲವು ಕಂಡಂತಹ ಪಿಡುಗುಗಳಲ್ಲಿ ಪ್ಲೇಗ್ ಮಹಾಮಾರಿಯು ಮುಖ್ಯವಾದದ್ದು. ಪ್ಲೇಗ್ ಒಂದು ಸೋಂಕು ರೋಗ. ಇದಕ್ಕೆ ಕಾರಣ ಎರ್ಸೀನಿಯ ಪೆಸ್ಟಿಸ್ ಎನ್ನುವ ಬ್ಯಾಕ್ಟೀರಿಯ. (ಫ್ರೆಂಚ್ ಬ್ಯಾಕ್ಟೀರಿಯ ತಜ್ಞ ಅಲೆಗ್ಸಾಂಡರ್ ಎರ್ಸಿನ್ ಗೌರವಾರ್ಥ, 1898) ಇದು ಮೂಲತಃ ಇಲಿ ಮುಂತಾದ ದಂಶಕ ಪ್ರಾಣಿ ಗಳಿಗೆ ಸಂಬಂಧಿಸಿದ ಪ್ರಾಣಿಜನ್ಯ ರೋಗ. ಕಾಡಿನಲ್ಲಿ ಹಾಗೂ ಮನುಷ್ಯರ ನಡುವೆ ಜೀವಿಸುವ ಪ್ರಾಣಿಗಳಲ್ಲಿ ಇಲಿಗಳು ಮುಖ್ಯವಾದವು. ಇಲಿಗಳ ಮೈಮೇಲೆ ಚಿಗಟವೆಂಬ ಕೀಟವಿರುತ್ತದೆ. ಇದು ಇಲಿಗಳ ರಕ್ತವನ್ನು ಹೀರಿ ಬದುಕುತ್ತದೆ.

ಪ್ಲೇಗ್ ಕಾರಣ ಇಲಿಯು ಸಾಯುತ್ತದೆ. ಆಗ ಅದರ ಮೈಮೇಲೆ ಜೀವಿಸುತ್ತಿರುವ ಚಿಗಟಕ್ಕೆ ಬೆಚ್ಚನೆಯ ಆಶ್ರಯವು ತಪ್ಪಿ ಹೋಗುತ್ತದೆ. ಹಾಗಾಗಿ ಚಿಗಟವು ಮೃತ ಇಲಿಯನ್ನು ಬಿಟ್ಟು ಮತ್ತೊಂದು ಇಲಿಯನ್ನು ಹುಡುಕಿಕೊಂಡು ಹೋಗಿ ಅದರ ಮೈಮೇಲೆ ಬೀಡು ಬಿಡುತ್ತದೆ. ಆ ಹೊಸ ಇಲಿಯ ರಕ್ತವನ್ನು ಹೀರುವಾಗ, ತನ್ನಲ್ಲಿರುವ ಯೆರ್ಸೀನಿಯ ದಾಸ್ತಾನನ್ನು ಹೊಸ ಇಲಿಯ ಒಡಲಿಗೆ ಸೇರಿಸುತ್ತದೆ. ಆಗ ಹೊಸ ಇಲಿಗೆ ಪ್ಲೇಗ್ ಕಾಯಿಲೆಯು ಬರುತ್ತದೆ. ಹೀಗೆ ಯೆರ್ಸೀನಿಯ ಬ್ಯಾಕ್ಟೀರಿಯದ ಜೀವನ ಚರಿತ್ರೆಯು ಮುಂದುವರಿಯುತ್ತದೆ.

ಇಲಿಯು ಮನುಷ್ಯರ ನಡುವೆ ಜೀವಿಸುವ ಸರ್ವ ಸಾಮಾನ್ಯ ಪ್ರಾಣಿ. ಹಾಗಾಗಿ ಪ್ಲೇಗ್ ಪೀಡಿತ ಇಲಿಯು ಮನುಷ್ಯರ ನಡುವೆ ಸತ್ತಿತು ಎಂದು ಭಾವಿಸೋಣ. ಅದರ ಮೈಮೇಲಿದ್ದ ಚಿಗಟಕ್ಕೆ ತಕ್ಷಣ ಮತ್ತೊಂದು ಇಲಿಯು ಸಿಗಲಿಲ್ಲವೆಂದು ಊಹಿಸೋಣ. ಆಗ ಆ ಚಿಗಟವು ಸತ್ತ ಇಲಿಯ ಸಮೀಪದಲ್ಲಿ ನಡೆದಾಡುವ ಮನುಷ್ಯನ ಒಡಲಿಗೆ ಚಿಮ್ಮುತ್ತದೆ. ಹುಲಿಗೆ ತನ್ನ ಕಾಡಾದರೇನು, ಪರರ ಕಾಡಾದರೇನು? ಅದಕ್ಕೆ ಬೇಟೆ ದೊರೆಯುವು ದಷ್ಟೇ ಮುಖ್ಯವಲ್ಲವೆ! ಹಾಗೆಯೇ ಚಿಗಟಕ್ಕೆ ಇಲಿಯ ರಕ್ತವಾದರೇನು, ಮನುಷ್ಯರ ರಕ್ತವಾದರೇನು! ಹಾಗಾಗಿ ಮನುಷ್ಯನನ್ನು ಕಚ್ಚಿ ರಕ್ತವನ್ನು ಹೀರುತ್ತದೆ.

ಹೀಗೆ ರಕ್ತವನ್ನು ಹೀರುವಾಗ, ಅದರ ಒಡಲಿನಲ್ಲಿದ್ದ ಯೆರ್ಸೀನಿಯ ಪೆಸ್ಟಿಸ್ ಮನುಷ್ಯರ ಒಡಲನ್ನು ಸೇರುತ್ತದೆ. ಮನುಷ್ಯರಲ್ಲಿ ಪ್ಲೇಗ್ ಕಾಯಿಲೆಯನ್ನುಂಟು ಮಾಡುತ್ತದೆ. ಹೀಗೆ ಮೂಲತಃ ಪ್ರಾಣಿಗಳ ಕಾಯಿಲೆಯಾಗಿದ್ದ ಪ್ಲೇಗ್, ಮನುಷ್ಯರಿಗೆ ವರ್ಗಾವಣೆಯಾಯಿತು. ಯೆರ್ಸೀನಿಯ ಮನುಷ್ಯರ ಒಡಲನ್ನು ಪ್ರವೇಶಿಸಿದ
ಮೇಲೆ, ಪ್ರವೇಶಿಸಿದ ದಿನದಿಂದ ಹಿಡಿದು ಒಂದು ವಾರದ ಒಳಗೆ ಜ್ವರವನ್ನು ಉಂಟು ಮಾಡುತ್ತದೆ. ಜ್ವರ ಲಕ್ಷಣವು ಕಂಡು ಬರಲು ಇಷ್ಟು ಅಂತರವೇಕೆ ಎಂಬ ಪ್ರಶ್ನೆಗೆ ಕಾರಣ, ಆಯಾ ವ್ಯಕ್ತಿಯ ರೋಗ ನಿರೋಧಕ ಶಕ್ತಿಯ ಸಾಮರ್ಥ್ಯ!

ರೋಗ ನಿರೋಧಕ ಶಕ್ತಿಯು ದುರ್ಬಲವಾಗಿದ್ದರೆ ಜ್ವರವು ಬೇಗ ಕಂಡು ಬರುತ್ತದೆ. ಬಲವಾಗಿದ್ದರೆ ಒಂದು ವಾರದ ಕಾಲವನ್ನು ತೆಗೆದುಕೊಳ್ಳಬಹುದು. ಹೀಗೆ ಮನುಷ್ಯರ ಒಡಲಿನಲ್ಲಿ ಬೀಡು ಬಿಡುವ ಯೆರ್ಸೀನಿಯ ಮೂರು ಭಿನ್ನ ಲಕ್ಷಣಗಳ ಪ್ಲೇಗ್ ಕಾಯಿಲೆಯನ್ನು ಮನುಷ್ಯರಲ್ಲಿ ಉಂಟು ಮಾಡುತ್ತದೆ. ಮೊದಲನೆಯದು ಶ್ವಾಸಕೋಶಗಳ ಪ್ಲೇಗ್. ಯೆರ್ಸೀನಿಯವು ಪ್ರಧಾನವಾಗಿ ವ್ಯಕ್ತಿಯ ಶ್ವಾಸಕೋಶಗಳಲ್ಲಿ ಬೀಡುಬಿಟ್ಟಿರುತ್ತದೆ. ಹಾಗಾಗಿ ಇವರಲ್ಲಿ ಶ್ವಾಸಕೋಶ ಅನಾರೋಗ್ಯ ಲಕ್ಷಣಗಳು ಪ್ರಧಾನವಾಗಿ ಕಾಣುತ್ತವೆ. ಜ್ವರದ ನಂತರ ಕೆಮ್ಮು ಕಾಣಿಸಿಕೊಳ್ಳುತ್ತದೆ. ಕೆಮ್ಮು ತೀವ್ರವಾಗಿ ಉಸಿರಾಟವು ಕಷ್ಟವಾಗುತ್ತಾ ಹೋಗುತ್ತದೆ. ಕೊನೆಗೆ ಉಸಿರನ್ನೂ ತೆಗೆದುಕೊಳ್ಳಲಾಗದಷ್ಟು ತೀವ್ರವಾಗಿ ಎದೆಗೂಡು ನೋಯುತ್ತದೆ.

ಎರಡನೆಯದು ಗಡ್ಡೆ ಪ್ಲೇಗ್. ರಕ್ತಪ್ರವಾಹದಲ್ಲಿ ಹರಿಯುತ್ತಿರುವ ಯೆರ್ಸೀನಿಯ ಬ್ಯಾಕ್ಟೀರಿಯವನ್ನು ನಮ್ಮ ಶರೀರದಲ್ಲಿರುವ ಹಾಲ್ರಸ ಗ್ರಂಥಿಗಳು (ಲಿಂಫ್ ನೋಡ್ಸ್)
ಶೋಧಿಸಿ, ಅವುಗಳ ಪ್ರಯಾಣಕ್ಕೆ ತಡೆಯನ್ನು ಹಾಕುತ್ತವೆ. ಆಗ ಯೆರ್ಸೀನಿಯವು ಹಾಲ್ರಸಗ್ರಂಥಿಗಳನ್ನೇ ತಮ್ಮ ಮನೆಯನ್ನಾಗಿ ಮಾಡಿಕೊಂಡು ಅಲ್ಲಿ ತಮ್ಮ ಸಂತಾನವನ್ನು ಹೆಚ್ಚಿಸಿಕೊಳ್ಳುತ್ತವೆ. ಹಾಗಾಗಿ ಹಾಲ್ರಸ ಗಂಥಿಗಳು ದೊಡ್ದದಾಗಿ ಊದಿಕೊಂಡು (ನಿಂಬೆಹಣ್ಣಿನಿಂದ ಹಿಡಿದು ಮೊಟ್ಟೆಯ ಗಾತ್ರದವರೆಗೆ) ಗಡ್ಡೆಗಳ ಹಾಗೆ ಕಾಣುತ್ತವೆ. ಇಂತಹ ಗಡ್ಡೆಗಳು ಪ್ರಧಾನವಾಗಿ ತೊಡೆಸಂದಿಯಲ್ಲಿ ಕಾಣಿಸಿಕೊಳ್ಳುತ್ತವೆ.

ಮೂರನೆಯದು ರಕ್ತನಂಜಿನ ಪ್ಲೇಗ್. ಶ್ವಾಸಕೋಶ ಹಾಗೂ ಹಾಲ್ರಸ ಗ್ರಂಥಿಗಳಿಂದ ತಪ್ಪಿಸಿಕೊಂಡ ಯೆರ್ಸೀನಿಯವು ರೋಗಿಯ ರಕ್ತಪ್ರವಾಹದಲ್ಲಿ ಮುಕ್ತವಾಗಿ ಸಂಚರಿಸುತ್ತ ರಕ್ತನಂಜನ್ನುಂಟು ಮಾಡುತ್ತವೆ. ಒಂದು ಘಟ್ಟದಲ್ಲಿ ರಕ್ತನಂಜು ತೀವ್ರವಾಗಿ, ಇಡೀ ದೇಹವು ನೀಲಿ ಬಣ್ಣಕ್ಕೆ ತಿರುಗಿ ಕೊನೆಗೆ ಕಪ್ಪಾಗುತ್ತದೆ. ಆಗ ಸಾವು ಸಂಭವಿಸಿರುತ್ತದೆ. ಯುರೋಪಿನ್ನರು ತಮ್ಮ ಬೆಳ್ಳಗಿರುವ ದೇಹವನ್ನು ಕಪ್ಪಾಗಿಸಿ ಕೊಲ್ಲುವ ಈ ಸೋಂಕನ್ನು ಕಾಳಮೃತ್ಯು (ಬ್ಲಾಕ್ ಡೆತ್) ಎಂದು ಕರೆದರು. ಮಾನವನ ಇತಿಹಾಸದಲ್ಲಿ ಪ್ಲೇಗ್ ಸೋಂಕು ಬ್ಲಾಕ್ ಡೆತ್ ಎಂಬ ಹೆಸರಿನಲ್ಲಿ ಕುಖ್ಯಾತವಾಗಿದೆ.

ಶ್ವಾಸಕೋಶ ಪ್ಲೇಗ್ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯು ಕೆಮ್ಮಿದಾಗ. ಅವನ ಕೆಮ್ಮಿನ ಮೂಲಕ ಕೋಟ್ಯಂತರ ಯೆರ್ಸೀನಿಯವು ಅವನ ಸುತ್ತಮುತ್ತಲಿನ ಮೂರು ಅಡಿ ಪ್ರದೇಶದಲ್ಲಿ ವ್ಯಾಪಿಸುತ್ತದೆ. ಈ ಅಂತರದಲ್ಲಿ ಯಾರಾದರೂ ಇದ್ದು, ಅವರು ಯೆರ್ಸೀನಿಯ ಭರಿತ ಗಾಳಿಯನ್ನು ಉಸಿರಾಡಿದರೆ, ಸುಲಭವಾಗಿ ಪ್ಲೇಗ್ ಕಾಯಿಲೆಯು ಹೊಸ ವ್ಯಕ್ತಿಯ ಒಡಲನ್ನು ಸೇರುತ್ತದೆ. ಗಡ್ಡೆಪ್ಲೇಗ್ ಮತ್ತು ರಕ್ತನಂಜು ಪ್ಲೇಗ್ ಇರುವವರ ಮೈಮೇಲೆ ರಕ್ತಕುಡಿಯುತ್ತ ಬದುಕನ್ನು
ಕಳೆಯುವ ಚಿಗಟವು, ಅವರ ಮೈಮೇಲಿಂದ ಜಿಗಿದು, ಇನ್ನೊಬ್ಬರ ಮೈಮೇಲೆ ಬೀಡು ಬಿಟ್ಟು, ಅವರ ರಕ್ತವನ್ನು ಕುಡಿಯಲಾರಂಭಿಸಿದರೆ, ಯೆರ್ಸೀನಿಯವು ಸುಲಭವಾಗಿ ಅವರ ಒಡಲನ್ನು ಸೇರಿ ಒಂದು ವಾರದಲ್ಲಿ ಪ್ಲೇಗ್ ಲಕ್ಷಣಗಳನ್ನು ತೋರಲಾರಂಭಿಸುತ್ತದೆ.

ಇಂದು ಪ್ಲೇಗ್ ಪಿಡುಗಾಗಿ ಉಳಿದಿಲ್ಲ. ಸ್ಥಳೀಯ ಸೋಂಕಾಗಿ ಉಳಿದುಕೊಂಡಿದೆ. ಆಧುನಿಕ ವೈದ್ಯಕೀಯವು ಪ್ರಗತಿಯನ್ನು ಕಂಡಿರುವ ಇಂದಿನ ದಿನಗಳಲ್ಲೂ, ಪ್ರತಿವರ್ಷ ಸುಮಾರು 600ಜನರು ಪ್ಲೇಗ್ ಕಾರಣದಿಂದ ಮೃತರಾಗುತ್ತಿರುವುದು ಒಂದು ವಿಪರ್ಯಾಸ. 2017ರಲ್ಲಿ ಪ್ಲೇಗ್ ಕಾಯಿಲೆಯು ಪ್ರಧಾನವಾಗಿ ಕಾಂಗೋ, ಮಡಗಾಸ್ಕರ್ ಮತ್ತು ಪೆರು ದೇಶಗಳಲ್ಲಿ ಕಂಡು ಬಂದಿತು. ಅನುಮಾನಿತ ವ್ಯಕ್ತಿಯ ಗಡ್ಡೆಗಳ ರಸ, ಕಫ ಹಾಗೂ ರಕ್ತವನ್ನು ಪರೀಕ್ಷೆ ಮಾಡಿ, ಅದರಲ್ಲಿ ಯೆರ್ಸೀನಿಯ ಬ್ಯಾಕ್ಟೀರಿಯವನ್ನು ಪತ್ತೆಹಚ್ಚುವುದರ ಮೂಲಕ ಸೋಂಕನ್ನು ಖಚಿತಪಡಿಸಬಹುದು.

ಕೂಡಲೇ ಆ ವ್ಯಕ್ತಿಗೆ ಪ್ರತಿಜೈವಿಕ ಔಷಧಗಳನ್ನು ಹಾಗೂ ಇತರ ಸಹಾಯಕ ಚಿಕಿತ್ಸೆಯನ್ನು ಒದಗಿಸಬೇಕಾಗುತ್ತದೆ. ಸಾಮಾನ್ಯವಾಗಿ ಜೆಂಟಮೈಸಿನ್ ಮತ್ತು -ರೋಕ್ವಿ ನೋಲಿನ್ ಔಷಧಗಳನ್ನು ಕೊಡುವುದುಂಟು. ಈ ಪ್ರತಿಜೈವಿಕಗಳನ್ನು ತೆಗೆದುಕೊಂಡ ಮೇಲೂ 10% ರೋಗಿಗಳು ಸಾಯುವ ಸಾಧ್ಯತೆಯಿರುತ್ತದೆ.

ಲಕ್ಷಣಗಳು: ಯೆರ್ಸೀನಿಯ ಶರೀರ ಪ್ರವೇಶಿಸಿದ ದಿನದಿಂದ ಹಿಡಿದು ಒಂದು ವಾರದ ಒಳಗೆ ಜ್ವರವನ್ನುಂಟು ಮಾಡುತ್ತದೆ. ನಂತರ ತಲೆನೋವು, ಮೈ ನಡುಗ ಲಾರಂಭಿಸುತ್ತದೆ. ವಾಕರಿಕೆ ತಲೆದೋರುತ್ತದೆ. ತೊಡೆಸಂದುಗಳಲ್ಲಿ ಗಡ್ಡೆ ಕಾಣಿಸಿಕೊಳ್ಳಬಹುದು. ಕೆಮ್ಮು ವಿಪರೀತವಾಗಬಹುದು. ಕೆಮ್ಮಿನಲ್ಲಿ ರಕ್ತವು ಕಾಣಿಸಿ ಕೊಳ್ಳಬಹುದು. ಯೆರ್ಸೀನಿಯವು ರಕ್ತ ಪ್ರವಾಹದ ಮೂಲಕ ಮಿದುಳನ್ನು ತಲುಪಿ, ಪ್ಲೇಗ್ ಉರಿಯೂತವನ್ನು ಉಂಟು ಮಾಡಬಹುದು. ಗಂಟಲು ಪ್ರದೇಶದಲ್ಲಿ ಬೀಡು ಬಿಟ್ಟು ಪ್ಲೇಗ್ ಗಂಟಲುರಿಯೂತಕ್ಕೆ ಕಾರಣವಾಗಬಹುದು ಅಥವಾ ಕಣ್ಣುಗಳಲ್ಲಿ ಬೀಡುಬಿಟ್ಟು ಕಣ್ಣಿನ ಪ್ಲೇಗಿಗೆ (ಆಕ್ಯುಲಾರ್ ಪ್ಲೇಗ್) ಎಡೆಮಾಡಿ ಕೊಡ ಬಹುದು.

ಗಡ್ಡೇ ಪ್ಲೇಗ್: ಯೆರ್ಸೀನಿಯ ಭರಿತ ಚಿಗಟವು ಆರೋಗ್ಯವಂತ ಮನುಷ್ಯನನ್ನು ಕಚ್ಚಿ ಅವನ ರಕ್ತವನ್ನು ಹೀರುವಾಗ, ರಕ್ತವಾಂತಿಯನ್ನು ಮಾಡುತ್ತದೆ. ಈ ವಾಂತಿ ಯೊಡನೆ, ಚಿಗಟದ ಗಂಟಲಲ್ಲಿರುವ ಯೆರ್ಸೀನಿಯವು, ಚಿಗಟವು ಕಚ್ಚಿದ ಗಾಯದ ಮೂಲಕ ವ್ಯಕ್ತಿಯ ಶರೀರದೊಳಗೆ ಬಂದು, ಸುತ್ತಮುತ್ತಲಿನ ಜೀವ ಕೋಶ ಗಳನ್ನು ಪ್ರವೇಶಿಸುತ್ತದೆ. ಅಲ್ಲಿ ತನ್ನ ಸಂತಾನವರ್ಧನೆಯನ್ನು ಮಾಡುತ್ತದೆ. ಮಾನವ ದೇಹದ ಮಿಲಿಟರಿ ಪಡೆಗೆ ಸೇರಿದ ಬೃಹತ್ ಭಕ್ಷಕವು (ಮ್ಯಾಕ್ರೋ ಫೇಜ್) ಯೆರ್ಸೀನಿಯವನ್ನು ನುಂಗುತ್ತದೆ. ಆದರೆ ಅದನ್ನು ಜೀರ್ಣಿಸಿಕೊಳ್ಳಲು ವಿಫಲವಾಗುತ್ತದೆ.

ಯೆರ್ಸೀನಿಯ ಈ ಸೈನಿಕ ಕಣದ ಒಡಲಿನಲ್ಲಿಯೇ ತನ್ನ ಸಂತಾನ ವರ್ಧನೆಯನ್ನು ಮಾಡಿ, ಒಂದು ಘಟ್ಟದಲ್ಲಿ ಅತಿಥೇಯ ಬೃಹತ್ ಭಕ್ಷಕವನ್ನೇ ಸೋಟಿಸಿ ತನ್ನ ಸಂತಾನವನ್ನು ಮುಕ್ತವಾಗಿ ಹರಡುತ್ತದೆ. ಯೆರ್ಸೀನಿಯವು ಕ್ರಮೇಣ ರೋಗಿಯ ಹಾಲ್ರಸನಾಳಗಳನ್ನು ಪ್ರವೇಶಿಸುತ್ತದೆ. ನಾಳಗಳ ಮೂಲಕ, ಹಾಲ್ರಸ ಶೋಧನಾ ಕೇಂದ್ರಗಳಾದ ಹಾಲ್ರಸ ಗಂಟುಗಳನ್ನು (ಲಿಂಫ್ ನೋಡ್ಸ್) ಪ್ರವೇಶಿಸುತ್ತದೆ. ಹಾಲ್ರಸವು ನಮ್ಮ ದೇಹಕ್ಕೆ ಸೇರದ ಯೆರ್ಸೀನಿಯವನ್ನು ಬಂಧಿಸುತ್ತದೆ. ಯೆರ್ಸೀನಿಯವು ಬಂಧನದಲ್ಲಿಯೇ ತೀವ್ರಗತಿಯಲ್ಲಿ ತನ್ನ ಸಂತಾನವರ್ಧನೆಯನ್ನು ನಡೆಸಿ, ಹಾಲ್ರಸ ಗ್ರಂಥಿಯ ಸಾಮರ್ಥ್ಯವನ್ನು ಮೀರಿ, ಅಲ್ಲಿಂದ ಮುಂದಕ್ಕೆ
ಮತ್ತೆ ತನ್ನ ಪಯಣವನ್ನು ಶರೀರದ ಉಳಿದ ಭಾಗಗಳತ್ತ ನಡೆಸುತ್ತದೆ. ಈ ಅವಽಯಲ್ಲಿ ಹಾಲ್ರಸಗ್ರಂಥಿಗಳು ಊದಿಕೊಂಡು ದಪ್ಪಗಾಗಿ ವಿಪರೀತ ನೋಯುತ್ತವೆ. ಇದುವೇ ಗಡ್ಡೇ ಪ್ಲೇಗ್.

ರಕ್ತನಂಜು: ನಮ್ಮ ಶರೀರದ ಹಾಲ್ರಸ ವ್ಯವಸ್ಥೆಯಲ್ಲಿ, ಹಾಲ್ರಸವು ಅಂತಿಮವಾಗಿ ರಕ್ತಪ್ರವಾಹದೊಳಗೆ ಬೆರೆಯಬೇಕಾಗುತ್ತದೆ. ಆಗ ಯೆರ್ಸೀನಿಯವು ರಕ್ತದಲ್ಲಿ ಬೆರೆತು ರಕ್ತನಂಜಿಗೆ ಕಾರಣವಾಗುತ್ತದೆ. ರಕ್ತದ ಮೂಲಕ ಶರೀರದ ಎಲ್ಲ ಭಾಗಗಳಿವೆ ವ್ಯಾಪಿಸುತ್ತದೆ. ರೋಗಿಯ ರಕ್ತಪರಿಚಲನೆಯಲ್ಲಿ ಸಾಗುವ ಯೆರ್ಸೀನಿಯವು ಹಲವು ಅಂತರ್ವಿಷ ವಸ್ತುಗಳನ್ನು ಉತ್ಪಾದಿಸುತ್ತವೆ. ಇವು ಇಡೀ ರಕ್ತಪರಿಚಲನಾ ವ್ಯವಸ್ಥೆಯಲ್ಲಿ, ರಕ್ತವು ಎಲ್ಲೆಂದರಲ್ಲಿ ಉಂಡೆಗಟ್ಟುವಂತೆ ಮಾಡುತ್ತವೆ.

ಉಂಡೆಗಟ್ಟಿದ ರಕ್ತವು ಸಣ್ಣ ಪುಟ್ಟ ಲೋಮನಾಳಗಳಲ್ಲಿ ಅಡಚಿಕೊಂಡು ರಕ್ತಪೂರೈಕೆಯು ಹಠಾತ್ತನೇ ನಿಲ್ಲಿಸುತ್ತದೆ. ರಕ್ತದ ಮೂಲಕ ಗ್ಲೂಕೋಸ್ ಮತ್ತು ಆಕ್ಸಿಜನ್ ಎರಡನ್ನೂ ಪಡೆಯಲಾಗದ ಜೀವಕೋಶಗಳು, ಊತಕಗಳು ಹಾಗೂ ಅಂಗವು ಕ್ರಮೇಣ ಕ್ರಿಯಾವಿಹೀನವಾಗುತ್ತವೆ.

ಶ್ವಾಸಕೋಶದ ಪ್ಲೇಗ್: ರಕ್ತಪ್ರವಾದ ಮೂಲಕ ಶ್ವಾಸಕೋಶಗಳನ್ನು ಪ್ರವೇಶಿಸಿದ ಯೆರ್ಸೀನಿಯವು 2-4 ದಿನಗಳ ಒಳಗೆ ತೀವ್ರಸ್ವರೂಪದ ಸೋಂಕನ್ನು ಉಂಟು ಮಾಡುತ್ತದೆ. ಕೆಲವು ಸಲ, ದುರ್ಬಲ ರೋಗರಕ್ಷಣಾ ಸಾಮರ್ಥ್ಯವಿರುವವರ ಒಡಲಿನಲ್ಲಿ ತೀವ್ರ ಸ್ವರೂಪದ ಸೋಂಕು ಕೆಲವೇ ಗಂಟೆಗಳಲ್ಲಿ ಕಾಣಬಹುದು. ಜ್ವರ, ತಲೆನೋವು, ನಿಃಶ್ಯಕ್ತಿಯು ಕಾಣಿಸಿಕೊಂಡು ಕೆಮ್ಮಿನ ಮೂಲಕ ರಕ್ತವು ಚಿಮ್ಮುತ್ತದೆ. ಇದನ್ನು ತಕ್ಷಣವೇ ಗುರುತಿಸಿ ಗುಣಪಡಿಸಬೇಕು. ಇಲ್ಲದಿದ್ದರೇ ಕೆಲವೇ ಗಂಟೆಗಳಲ್ಲಿ ಸಾವು ಸಂಭವಿಸಬಹುದು. ರೋಗರಕ್ಷಣಾ ಸಾಮರ್ಥ್ಯವು ಬಲವಾಗಿರುವವರಲ್ಲಿ, ಸೋಂಕು 1-6 ದಿನಗಳ ಕಾಡಿಸಿ, ಕೊನೆಗೆ ಅವರ ಸಾವಿನಲ್ಲಿ ಕೊನೆಗೊಳ್ಳುತ್ತದೆ. ಶ್ವಾಸಕೋಶಗಳ ಪ್ಲೇಗಿಗೆ ತಕ್ಷಣವೇ ಸೂಕ್ತ ಚಿಕಿತ್ಸೆಯು ದೊರೆಯದಿದ್ದಲ್ಲಿ ಸಾವು 100ಕ್ಕೆ 100ರಷ್ಟು ಖಚಿತ!