Thursday, 12th December 2024

ಪ್ಲೇಗ್‌ ಮರಣಕಥನದ ಶಿಶು ಗೀತೆ !

ಹಿಂದಿರುಗಿ ನೋಡಿದಾಗ

ಜನರು ಪ್ಲೇಗ್ ಕಾರಣ ಮೃತರಾದವರ ಶವಸಂಸ್ಕಾರವನ್ನು ತಮ್ಮತಮ್ಮ ಮನೆಗಳಲ್ಲಿಯೇ ಮಾಡಲಾರಂಭಿಸಿದರು. ಚರ್ಚುಗಳಲ್ಲಿ ಹೂಳುವುದಕ್ಕೆ ಅವಕಾಶವಿಲ್ಲದೆ, ತಮ್ಮತಮ್ಮ ಮನೆಯ ಹೊಗೆ ಗೂಡುಗಳಲ್ಲಿಯೇ ಸುಡಲಾರಂಭಿಸಿದರು.

ರಿಂಗಾರಿಂಗೊಂರೋಸಸ್/ ಪಾಕೆಟ್ ಫುಲ್ ಆಫ್ ಪಾಯ್ಸಸ್/ ಅಟ್ಚೂಅಟ್ಚೂ / ಆಲ್ ಫುಲ್‌ಡೌನ್! ಕೇಟ್‌ಗ್ರೀನ್‌ವೇ (ಮದರ್‌ ಗೂಸ್, 1881) ನನ್ನ ಬಾಲ್ಯದಲ್ಲಿ ಹಾಡುತ್ತಿದ್ದ ಹಾಡುಗಳಲ್ಲಿ ಮೇಲೆ ಕಾಣುವ ನರ್ಸರಿ ಹಾಡೂ ಒಂದಾಗಿತ್ತು. ಮಕ್ಕಳು ಒಬ್ಬರ ಕೈಯನ್ನು ಒಬ್ಬರು ಹಿಡಿದುಕೊಂಡು, ವೃತ್ತಾಕಾರವಾಗಿ ಸುತ್ತುತ್ತ ಈ ಹಾಡನ್ನು ಹಾಡುತ್ತಿದ್ದರು.

ಕೊನೆಯ ಸಾಲು, ‘ಆಲ್ ಫುಲ್‌ಡೌನ್’ ಬರುವ ಹೊತ್ತಿಗೆ ಎಲ್ಲರೂ ನಮ್ಮ ನಮ್ಮ ಕೈಗಳನ್ನು ಬಿಟ್ಟು, ನೆಲಕ್ಕೆ ಕುಸಿದು ಕುಳಿತು ನಗುತ್ತಿ ದ್ದೆವು. ಹೀಗೆ ಜಗತ್ತಿನಾದ್ಯಂತ ಅದೆಷ್ಟು ಮಕ್ಕಳು, ಅದೆಷ್ಟು ವರ್ಷಗಳ ಕಾಲ,ಅದೆಷ್ಟು ಸಲ ಈ ಹಾಡನ್ನು ಹಾಡುತ್ತಾ ಕುಣಿದಿದ್ದಾರೋ! ಗೊತ್ತಿಲ್ಲ. ಆದರೆ ಈ ಹಾಡು ಪ್ಲೇಗ್ ಕಾಯಿಲೆಯಿಂದ ಪೀಡಿತರಾದ ಜನರು ಸಾಯುತ್ತಿದ್ದ ಕಥೆಯ ವ್ಯಥೆಯನ್ನು ಹೇಳುತ್ತಿದೆ ಎನ್ನುವುದು ಹೆಚ್ಚಿನ ಜನರಿಗೆ ಗೊತ್ತಿರಲಿಲ್ಲ.

೧೮೮೧ರಲ್ಲಿ ಪ್ರಕಟವಾದ ‘ಮದರ್ ಗೂಸ್’ ಎಂಬ ನರ್ಸರಿ ಮಕ್ಕಳ ಹಾಡಿನ ಪುಸ್ತಕದಲ್ಲಿ ಈ ಹಾಡು ಮೊದಲು ಪ್ರಕಟವಾಯಿತು. ಬ್ರಿಟಿಷರ ಕಾನ್ವೆಂಟ್ ಇಂಗ್ಲಿಷ್ ಶಿಕ್ಷಣದ ಮೂಲಕ ಜಗತ್ತಿನಾದ್ಯಂತ ಹರಡಿತು. ಈ ಹಾಡಿನಲ್ಲಿ ಬರುವ ಕೆಲವು ಶಬ್ದಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ‘ರೋಸಸ್’ಎಂದರೆ ಪ್ಲೇಗ್ ಪೀಡಿತರ ಚರ್ಮದ ಮೇಲೆ ಏಳುತ್ತಿದ್ದ ಗುಲಾಬಿ ಬಣ್ಣದ ಬೊಬ್ಬೆಯಂತಹ ರಚನೆಗಳು. ಇವು ಇಡೀ ಶರೀರದ ಮೇಲೆ ಕಾಣಿಸುತ್ತಿದ್ದವು.

‘ಪಾಯ್ಸಸ್’ಎಂದರೆ ಜೇಬಿನಲ್ಲಿರುತ್ತಿದ್ದ ಸುಗಂಧ ದ್ರವ್ಯಗಳ ದಾಸ್ತಾನು. ಇದು ಪ್ಲೇಗನ್ನು ದೂರಡುತ್ತದೆ ಎನ್ನುವ ನಂಬಿಕೆ ಅಂದು ಇತ್ತು. ‘ಅಟ್ಚೂಅಟ್ಚೂ’ಎನ್ನುವುದು ಸೋಂಕು ತಗುಲಿದ ವ್ಯಕ್ತಿಯು ಸೀನುವುದನ್ನು ಹಾಗೂ ಕೆಮ್ಮುವುದನ್ನು ಸೂಚಿಸುತ್ತಿತ್ತು. ಕೊನೆಯ ಸಾಲು ‘ಆಲ್ ಫುಲ್‌ಡೌನ್ ’ಎನ್ನುವುದು ಪ್ಲೇಗ್ ಬಂದು ತರಗೆಲೆಗಳು ಉದುರಿ ಬೀಳುವ ರೀತಿಯಲ್ಲಿ ಜನರು ಸಾಯು ತ್ತಿದ್ದುದನ್ನು ಸೂಚಿಸುತ್ತಿತ್ತು.

ಪ್ಲೇಗಿನ ಭೀಕರ ಇತಿಹಾಸದ ಬಗ್ಗೆ ಲವಲೇಶ ಪರಿಯೂ ಇಲ್ಲದೇ ಮಕ್ಕಳು ಈ ಹಾಡನ್ನು ಹಾಡಿ ಕುಣಿಯುತ್ತಿದ್ದವು. ಪ್ಲೇಗ್ ಸಾವನ್ನು ಹೀಗೆ ಮಕ್ಕಳ ಹಾಡನ್ನಾಗಿ ಪರಿವರ್ತಿಸಲು ಬರೆದವರಿಗೆ ಅದು ಹೇಗೆ ತಾನೆ ಮನಸ್ಸು ಬಂದಿತೋ! ಮಧ್ಯಯುಗದ ಯೋರೋಪಿ ನಲ್ಲಿ ಪ್ಲೇಗ್ ತಾಂಡವವಾಡುತ್ತಿರುವಾಗ ‘ಪ್ಲೇಗ್ ವೈದ್ಯರು’ ಅಸ್ತಿತ್ವಕ್ಕೆ ಬಂದರು. ಹೆಸರೇ ಸೂಚಿಸುವ ಹಾಗೆ ಪ್ಲೇಗ್ ಸೋಂಕಿಗೆ ಸಂಬಂಧ ಪಟ್ಟವರು. ಇವರು ಅಧಿಕೃತ ಹಾಗೂ ಅನುಭವೀ ವೈದ್ಯರಾಗಲಿ ಅಥವ ಶಸವೈದ್ಯರಾಗಲಿ ಆಗಿರುತ್ತಿರಲಿಲ್ಲ.

ಅರೆಬರೆ ವೈದ್ಯಕೀಯವನ್ನು ತಿಳಿದ ನಕಲಿ ವೈದ್ಯರು, ಕ್ಷೌರಿಕ ಶಸ್ತ್ರವೈದ್ಯರು, ಆಗಷ್ಟೇ ವೈದ್ಯಕೀಯ ವಿದ್ಯಾಲಯದಿಂದ ಹೊರ ಬಂದವರು, ಸ್ವಯಂಸೇವಕರು ಆಗಿರುತ್ತಿದ್ದರು. ಇವರನ್ನು ಆಯಾ ನಗರದ ನಗರಸಭೆಯವರು ಗುತ್ತಿಗೆಯ ಮೇಲೆ ನೇಮಿಸಿ ಕೊಳ್ಳುತ್ತಿದ್ದರು. ಇವರು ಪ್ಲೇಗ್ ಪೀಡಿತರಿಗೆ ‘ಚಿಕಿತ್ಸೆ’ಯನ್ನು ನೀಡುವುದರ ಜತೆಯಲ್ಲಿ, ಪ್ಲೇಗಿನಿಂದ ಸತ್ತವರ ಅಂಕೆಸಂಖ್ಯೆ ಯನ್ನು ದಾಖಲಿಸಬೇಕಾಗಿತ್ತು. ಇವರನ್ನು‘ಎಂಪೆರಿಕ್ಸ್’ ಅಂದರೆ ‘ಸಮುದಾಯ ವೈದ್ಯ’ರೆನ್ನುತ್ತಿದ್ದರು.

ಮೈಕೇಲ್ ಟೈಬೆರಿಂಕ್ ಬರೆದ ಸೋಂಕು ರೋಗಗಳ ವಿಶ್ವಕೋಶ(ಎನ್‌ಸೈಕ್ಲೋಪೀಡಿಯ ಆಫ್ ಇನ್-ಕ್ಷಿಯಸ್ ಡಿಸೀಸಸ್) ಎನ್ನುವ ಪುಸ್ತಕದಲ್ಲಿ, ೧೬೧೯ರಂದು ಪ್ಯಾರಿಸ್ ನಗರದಲ್ಲಿ ಕಂಡುಬಂದ ಪ್ಲೇಗ್ ನಿಯಂತ್ರಣದಲ್ಲಿ ಪ್ಲೇಗ್ ವೈದ್ಯರ ಪ್ರಸ್ತಾಪವು ಮೊದಲ
ಬಾರಿಗೆ ದಾಖಲಾಗಿದೆ. ಪ್ಲೇಗ್ ವೈದ್ಯರು ಪ್ಲೇಗ್ ಪೀಡಿತರ ರಕ್ತಮೋಚನೆಯನ್ನು (ಬ್ಲಡ್ ಲೆಟಿಂಗ್) ಮಾಡುತ್ತಿದ್ದರು. ಗಡ್ಡೆಗಳ ಮೇಲೆ ಜಿಗಣೆಗಳನ್ನು ಅಂಟಿಸಿ, ರಕ್ತವನ್ನು ಹೀರಿಸುತ್ತಿದ್ದರು. ಕೆಲವು ಸಲ ಪ್ಲೇಗ್ ಮೃತರ ಶವಪರೀಕ್ಷೆಯನ್ನು (ಅಟಾಪ್ಸಿ) ಮಾಡಿ ಪ್ಲೇಗ್ ಸೋಂಕು ಹೇಗೆ ಮನುಷ್ಯರ ಸಾವಿಗೆ ಕಾರಣವಾಗುತ್ತದೆ ಎನ್ನುವುದನ್ನುಅರಿಯಲು ನೆರವಾಗುತ್ತಿದ್ದರು.

ಸಾಯುತ್ತಿರುವವರ ಉಯಿಲನ್ನು ಬರೆಯಲು ನೆರವಾಗುವುದರ ಜತೆಯಲ್ಲಿ, ಅಂತಿಮ ಕ್ಷಣದ ಸಾಂತ್ವನ ಮತ್ತು ಧೈರ್ಯವನ್ನು ನೀಡುತ್ತಿದ್ದರು. ಪ್ಲೇಗ್ ವೈದ್ಯರಿಗೆ ಪ್ಲೇಗ್‌ ಅಂಟುವ ಭೀತಿಯಿರಲಿಲ್ಲವೆ ಎನ್ನುವ ಅನುಮಾನವು ನಮಗೆ ಬರುವುದು ಸಹಜ. ಪ್ಲೇಗ್
ವೈದ್ಯರಿಗೂ ಪ್ಲೇಗ್‌ತಗುಲಿ ಸತ್ತಿರುವ ಉದಾಹರಣೆಗಳಿವೆ. ಅದಕ್ಕಾಗಿ ಪ್ಲೇಗ್ ವೈದ್ಯರು ಒಂದು ವಿಶಿಷ್ಟವಾದ ಉಡುಪನ್ನು ಧರಿಸು ತ್ತಿದ್ದರು. ಪಾದಗಳವರೆಗೆ ಮುಚ್ಚುವಂತಹ ಕಪ್ಪನೆಯ ನಿಲುವಂಗಿ. ದೊಡ್ಡ ಕೊಕ್ಕು ಇರುವ ಹಕ್ಕಿಯನ್ನು ಹೋಲುವ ಮುಖ ಕವಚ ಅಥವ ಮಾಸ್ಕ್, ಕೈಗಳಿಗೆ ಗವಸು, ಕಾಲುಗಳಿಗೆ ಬೂಟು, ಹಕ್ಕಿಯ ಮುಖದಲ್ಲಿ ಕಣ್ಣುಗಳಿರುವ ಕಡೆ ಎರಡು ಗಾಜುಗಳು. ಅದರ ಮೂಲಕ ನೋಡಬೇಕಾಗಿತ್ತು.

ಮೂಗಿನ ಮೂಲಕ ಉಸಿರಾಡಲು ಎರಡು ಹೊರಳೆಗಳು, ಅಗಲ ಅಂಚಿರುವ ಹ್ಯಾಟು -ಇದು ಪ್ಲೇಗ್ ವೈದ್ಯರ ಉಡುಪಾಗಿತ್ತು. -ಇವರನ್ನು ನೋಡಿದರೆ ರಸ್ತೆಯಲ್ಲಿ ಬೃಹತ್ ಕಾಗೆಯೊಂದು ನಡೆದುಕೊಂಡು ಬರುತ್ತಿರುವಂತೆ ಭಾಸವಾಗುತ್ತಿತ್ತು. ದೊಡ್ಡ ಕೊಕ್ಕು ಇರುವ ಸ್ಥಳದಲ್ಲಿ ಗುಲಾಬಿ ಹೂವು, ಕಾರ್ನೇಶನ್ ಹೂವು, ಲ್ಯಾವೆಂಡರ್, ಪೆಪ್ಪರ್‌ಮೆಂಟ್, ಕರ್ಪೂರ, ನಿಗರ್, ಜೂನಿ ಪರ್ ಹಣ್ಣು, ಆಂಬೆರ್ಗ್ರಿಸ್, ಲವಂಗ, ಲ್ಯಾಬ್ಡನಮ್, ಮಿರ್ರಾ, ಸ್ಟೋರೆಕ್ಸ್ ಮುಂತಾದ ವಸ್ತುಗಳಿಂದ ಮಾಡಿದ ಸುಗಂಧದ್ರವ್ಯ ದಲ್ಲಿ ಅದ್ದಿರುತ್ತಿದ್ದ ಸ್ಪಂಜುಇರುತ್ತಿತ್ತು. ಈ ಸುಗಂಧದ್ರವ್ಯವು ಪ್ಲೇಗ್ ಕಾಯಿಲೆಗೆ ಕಾರಣವಾಗುವ ಮಿಯಾಸ್ಮವನ್ನು ನಿಗ್ರಸುತ್ತದೆ ಎಂದು ಅವರ ನಂಬಿಕೆಯಾಗಿತ್ತು. ವಿಶ್ವಖ್ಯಾತ ಭವಿಷ್ಯಕಾರ ನಾಸ್ಟ್ರಡಾಮಸ್ (1503-1566) ಪ್ಲೇಗ್ ಮುನ್‌ರಕ್ಷಣಾ ಕ್ರಮಗಳನ್ನು ಸೂಚಿಸಿದ್ದ.

ನಗರದಿಂದ ಮೃತ ಶವಗಳನ್ನು ತೀವ್ರವಾಗಿ ವಿಲೇವಾರಿ ಮಾಡಬೇಕು, ತಾಜಾ ಗಾಳಿಯನ್ನು ಸೇವಿಸಬೇಕು, ಶುದ್ಧ ನೀರನ್ನು ಕುಡಿ
ಯಬೇಕು, ಗುಲಾಬಿದಳಗಳ ರಸವನ್ನುಕುಡಿಯಬೇಕು, ರಕ್ತಮೋಚನೆಯನ್ನು ಮಾಡಬಾರದು ಎನ್ನುವುದು ಅವನ ಸಲಹೆಯ ಸಾರ. ವಿಶ್ವಖ್ಯಾತ ಆಂಬ್ರೋಸ್ ಪ್ಯಾರೆ (1510-1590) ಮತ್ತು ಪ್ಯಾರಾಸೆಲ್ಸಸ್ (1493-1541) ಸಹ ಪ್ಲೇಗ್ ವೈದ್ಯರಾಗಿ ಕೆಲಸವನ್ನು ನಿರ್ವಹಿಸಿದ್ದರು.

1665-66ನೆಯ ವರ್ಷದಲ್ಲಿ ಪ್ಲೇಗ್ ಮಾರಿಯು ಲಂಡನ್ ನಗರವನ್ನು ಇನ್ನಿಲ್ಲದಂತೆ ಕಾಡಿತು. ಲಂಡನ್ ಮಾತ್ರವಲ್ಲ, ಇಂಗ್ಲೆಂಡ್ ಮತ್ತು ಯೂರೋಪಿನ ಎಲ್ಲ ದೇಶಗಳಲ್ಲಿ ವ್ಯಾಪಿಸಿತು. 1665ರಲ್ಲಿ ಸ್ಯಾಮ್ಯುಯಲ್ ಪೆಪೀಸ್ (1633-1703) ಹಾಗೂ 1722ರಲ್ಲಿ ಡೇನಿಯಲ್‌ಡೀ- (1660-1731) ತಮ್ಮ ಡೈರಿಗಳಲ್ಲಿ ಪ್ಲೇಗಿನ ಬಗ್ಗೆ ದಾಖಲಿಸಿದರು. ಜನರು ಪ್ಲೇಗ್ ಕಾರಣ ಮೃತರಾದವರ ಶವಸಂಸ್ಕಾರವನ್ನು ತಮ್ಮತಮ್ಮ ಮನೆಗಳಲ್ಲಿಯೇ ಮಾಡಲಾರಂಭಿಸಿದರು.

ಚರ್ಚುಗಳಲ್ಲಿ ಹೂಳುವುದಕ್ಕೆ ಅವಕಾಶವಿಲ್ಲದೆ, ತಮ್ಮತಮ್ಮ ಮನೆಯ ಹೊಗೆ ಗೂಡುಗಳಲ್ಲಿಯೇ ಸುಡಲಾರಂಭಿಸಿದರು. ತಮ್ಮ ತಮ್ಮ ಮನೆಗಳ ಬಾಗಿಲ ಮೇಲೆ ಕ್ರಾಸ್ ಚಿಹ್ನೆಯನ್ನು(ಏಸುಕ್ರಿಸ್ತನ ಶಿಲುಬೆಯ ಸಾಂಕೇತಿಕರೂಪ) ಬರೆಯುತ್ತಿದ್ದರು. (ನಮ್ಮ ದೇಶದಲ್ಲಿ ಬಾಗಿಲಿನ ಮೇಲೆ ‘ನಾಳೆ ಬಾ’ ಎಂದು ಬರೆಯುತ್ತಿದ್ದುದು ನೆನಪಿಗೆ ಬಂದಿತು) 1765 ಸೆಪ್ಟೆಂಬರ್ ತಿಂಗಳಿನಲ್ಲಿ ಲಂಡನ್ ನಗರವೊಂದರಲ್ಲಿ ವಾರಕ್ಕೆ ಸುಮಾರು 7000 ಜನರು ಸಾಯುತ್ತಿದ್ದರಂತೆ.

1966ರಲ್ಲಿ ಲಂಡನ್ ನಗರವು ಮಹಾನ್‌ಅಗ್ನಿಅವಘಡಕ್ಕೆ ತುತ್ತಾಗಿ ಸುಟ್ಟುಹೋತು. ಆಗ ಲಂಡನ್ ನಗರದಲ್ಲಿ ಮರದಗೋಡೆ, ಹುಲ್ಲಿನಲ್ಲಿ ಮಾಡು ಇದ್ದ ಮನೆಗಳೇ ಅಧಿಕವಾಗಿದ್ದವು. ಇವೆಲ್ಲವೂ ಸುಟ್ಟುಹೋದಮೇಲೆ, ಲಂಡನ್ ನಗರದಲ್ಲಿ ಹೊಸದಾಗಿ ಇಟ್ಟಿಗೆಗಳಿಂದ ಗೋಡೆಗಳನ್ನು ಕಟ್ಟಿ,ಅದರ ಮೇಲೆ ಹೆಂಚುಗಳಿಂದ ಸೂರನ್ನು ನಿರ್ಮಿಸಿದರು. ಈ ಹೊಸ ಮನೆಗಳು ಪ್ಲೇಗ್
ಮಹಾಮಾರಿಯನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸಿತು ಎಂದರೆ ಆಶ್ಚರ್ಯವಾಗುತ್ತದೆ. ಮರ ಮತ್ತು ಹುಲ್ಲಿನ ಮನೆಗಳು ಇಲಿಗಳ ಆವಾಸಕ್ಕೆ ಹೇಳಿ ಮಾಡಿಸಿದ ಹಾಗೆ ಇದ್ದವು. ಹಾಗಾಗಿ ಇಡೀ ಲಂಡನ್ನಿನಲ್ಲಿ ಪ್ಲೇಗ್ ಹರಡುವುದು ಸುಲುಭವಾಯಿತು.

ಆದರೆ ಒಂದು ಸಲ ಇಟ್ಟಿಗೆ ಮತ್ತು ಹೆಂಚುಗಳ ಮನೆಗಳು ನಿರ್ಮಾಣವಾದ ಕೂಡಲೇ, ಇಲಿಗಳು ನೆಲೆದಪ್ಪಿದವು. ಆಗ ಸಹಜವಾಗಿ
ಪ್ಲೇಗ್ ಸೋಂಕು ನಿಯಂತ್ರಣಕ್ಕೆ ಬಂದಿತು. ಪ್ಲೇಗ್ ಮಹಾಮಾರಿಯ ಮೂರನೆಯ ಮಹಾ ಅಲೆಯು 1894ರಲ್ಲಿ ಆರಂಭ ವಾಯಿತು. ಈ ಸಲ 1855ರಲ್ಲಿ ಚೀನಾ ದೇಶದ ಯುನಾನ್ ಪ್ರಾಂತದ ದಂಶಕಗಳಲ್ಲಿದ್ದ ಯೆರ್ಸೀನಿಯ ದಾಸ್ತಾನು, ತವರ ಮತ್ತು ಅಪೀಮು ವ್ಯಾಪಾರೀ ಮಾರ್ಗಗಳ ಮೂಲಕ ಜಗತ್ತಿಗೆ ಹರಡಿತು.

1866ರ ಹೊತ್ತಿಗೆ ಯುನಾನ್ ಪ್ರಾಂತದ ರಾಜಧಾನಿಯಾಗಿದ್ದ ಕುನ್ಮಿಂಗ್ ನಗರಕ್ಕೆ ವ್ಯಾಪಿಸಿತು. 1867ರ ಹೊತ್ತಿಗೆ ಟೋನ್ಕಿನ್ ಕೊಲ್ಲಿಗೆ ಹಾಗೂ 1882ರ ಹೊತ್ತಿಗೆ ಕ್ವಾಂಗ್ತುಂಗ್ ಪ್ರಾಂತದ ಪಕೋಮಿ ಬಂದರು ನಗರಕ್ಕೆ ಹರಡಿತು. 1894ರ ವೇಳೆಗೆ ಕ್ಯಾಂಟನ್ ನಗರದ ಮೂಲಕ ಹಾಂಗ್‌ಕಾಂಗನ್ನು ಪ್ರವೇಶಿಸಿತು. ಅಲ್ಲಿಂದ ಹಡಗುಗಳ ಮೂಲಕ ಮುಂಬೈ ನಗರವನ್ನು 1896 ರಲ್ಲಿ ತಲುಪಿತು. 1900ರ ಹೊತ್ತಿಗೆ ಜಗತ್ತಿನ ಎಲ್ಲ ಖಂಡಗಳ ಬಂದರು ನಗರಗಳು ಪ್ಲೇಗಿಗೆ ತುತ್ತಾದವು. ಉಗಿ ಜಹಜುಗಳ ಮೂಲಕ ದೇಶೀಯ ಹಾಗೂ ಅಂತರ ದೇಶೀಯ ಪ್ರಯಾಣಗಳು ಸುಲುಭವಾಗಿ ನಡೆಯುತ್ತಿದ್ದ ಕಾರಣ, ಈ ಹಡಗುಗಳ ಮೂಲಕ ರೋಗಗ್ರಸ್ತ ಇಲಿಗಳು ಜಾಗತಿಕವಾಗಿ ಎಲ್ಲೆಡೆ ವ್ಯಾಪಿಸುವುದು ಸುಲಭವಾಯಿತು.

1894. ಹಾಂಗ್‌ಕಾಂಗ್ ನಗರದಲ್ಲಿ ಅಲೆಗ್ಸಾಂಡರ್ ಯೆರ್ಸಿನ್ (1863-1943) ಪ್ಲೇಗ್ ಮಹಾಮಾರಿಗೆ ಕಾರಣವಾಗಿದ್ದ ಯೆರ್ಸೀನಿಯ ಪೆಸ್ಟಿಸ್ ಬ್ಯಾಕ್ಟೀರಿಯವನ್ನು ಗುರುತಿಸಿ ಪ್ರತ್ಯೇಕಿಸಿದ. 1898ರಲ್ಲಿ ಕರಾಚಿ ನಗರದಲ್ಲಿದ್ದ ಪಾಲ್ ಲೂಯಿಸ್ ಸಿಮ್ಮಂಡ್ (1858-1947) ಯೆರ್ಸೀನಿಯವರು ಮೂಲತಃ ಕಂದು ಇಲಿಗಳಲ್ಲಿ ಪ್ಲೇಗ್‌ಕಾಯಿಲೆಯನ್ನು ಉಂಟು ಮಾಡುತ್ತದೆಯೆಂದು ಸಾರಿದ. ಹಾಗಾಗಿ ಇಲಿಗಳು (ದಂಶಕಗಳು) ಯೆರ್ಸೀನಿಯದ ಪ್ರಾಥಮಿಕ ಆತಿಥೇಯ ಜೀಯೆನ್ನುವುದು (ಪ್ರೈಮರಿ ಹೋಸ್ಟ್) ಖಚಿತವಾಯಿತು.

ಜತೆಗೆ ರೋಗಗ್ರಸ್ತ ಇಲಿಗಳ ದೇಹದಲ್ಲಿದ್ದ ಯೆರ್ಸೀನಿಯವನ್ನು ಚಿಗಟಗಳು ಮನುಷ್ಯರಿಗೆ ಹರಡುತ್ತವೆ ಎನ್ನುವ ವಿಚಾರವೂ ಬರಂಗವಾಯಿತು. ಅಂದರೆ ಚಿಗಟಗಳು ಸೋಂಕು ವಾಹಕಗಳಾಗಿ (ವೆಕ್ಟರ್) ಸೋಂಕನ್ನು ಹರಡುತ್ತವೆ ಹಾಗೂ ಮನುಷ್ಯರನ್ನು ದ್ವಿತೀಯಕ ಆತಿಥೇಯರನ್ನಾಗಿಸುತ್ತವೆ (ಸೆಕಂಡರಿ ಹೋಸ್ಟ್) ಎನ್ನುವ ವಿಚಾರವು ಸ್ಪಷ್ಟವಾಯಿತು. ಪ್ಲೇಗ್ ಕಾಯಿಲೆಯು ಮೊದಲ ಬಾರಿಗೆ ಹಡಗುಗಳ ಮೂಲಕ ಆಸ್ಟ್ರೇಲಿಯಾ ಖಂಡವನ್ನು 1900ರಲ್ಲಿ ಪ್ರವೇಶಿಸಿತು.

ಸಿಡ್ನಿ ಬಂದರಿನಿಂದ ಸಿಡ್ನಿ ನಗರದೊಳಗೆ ಹರಡಿ100 ಜನರನ್ನು ಕೊಂದಿತು. ಜಾನ್ ಆಷ್‌ಬರ್ಟನ್ ಥಾಂಪ್ಸನ್  (1846- ೧೯೧೫), ಸಿಡ್ನಿ ನಗರದ ವೈದ್ಯಾಧಿಕಾರಿಯಾಗಿದ್ದ. 1900-1925ರ ನಡುವೆ 12 ಬಾರಿ ಪ್ಲೇಗ್ ಸೋಂಕು ಕಂಡುಬಂದಿತು. 1371 ಜನರಿಗೆ ಸೋಂಕು ಹರಡಿತು. ಅವರಲ್ಲಿ 535 ಜನರು ಮರಣಿಸಿದರು ಎನ್ನುವ ವಿವರವು ದೊರೆಯುತ್ತದೆ. ಬಹಳಷ್ಟು ಸಾವುಗಳು ಸಿಡ್ನಿ ನಗರದಲ್ಲಿ ಸಂಭವಿಸಿದ್ದವು. ಈ ಮೂರನೆಯ ಮಹಾ ಅಲೆಯು ಮುಂದಿನ 5 ದಶಕಗಳ ಕಾಲ ಅಲ್ಲಲ್ಲಿ ತಲೆಯೆತ್ತುತ್ತ 1959ರವರೆಗೆ ಮುಂದುವರೆಯಿತು.

ಪ್ಲೇಗ್ ಹಸಿವನ್ನು ತೀರಿಸಲು 15 ದಶಲಕ್ಷ ಜನರು ತಮ್ಮ ಜೀವವನ್ನು ಬಲಿ ನೀಡಿದರು. ಅವರಲ್ಲಿ ಹೆಚ್ಚಿನವರು ಭಾರತೀಯ ರಾಗಿದ್ದರು. 1983ರಲ್ಲಿ ಚೀನಾ ಮತ್ತು ತಾಂಜಾನಿಯದಲ್ಲಿ ಕಾಣಿಸಿಕೊಂಡಿತು. ಜ಼ೈರ್ ನಲ್ಲಿ 1992ರಲ್ಲಿ ಹಾಗೂ 1994ರಲ್ಲಿ ಭಾರತ, ಮೊಜಾಂಬಿಕ್, ಜ಼ಿಂಬಾಬ್ವೆಗಳಲ್ಲಿ ಸೋಂಕು ವ್ಯಾಪಿಸಿತು. ಭಾರತದಲ್ಲಿ ಸಂಭಸಿದ ಈ 1994ರ ಪ್ಲೇಗ್ ಸೋಂಕಿಗೆ ನಾನೂ ಸಾಕ್ಷಿ ಯಾಗಿದ್ದೆ. ಈಗಲೂ ನಮ್ಮ ಭೂಇಯು ಪ್ಲೇಗ್ ಮುಕ್ತವಾಗಿಲ್ಲ. ಆಫ್ರಿಕ, ಏಷ್ಯಾ, ದಕ್ಷಿಣ ಅಮೆರಿಕದ ದೇಶಗಳಲ್ಲಿ ಆಗಾಗ್ಗೆ ಕಾಣಿಸಿ ಕೊಳ್ಳುತ್ತಿರುತ್ತದೆ.