Tuesday, 10th December 2024

ಬೆತ್ತಲಾದ ಬಿಜೆಪಿ-ಜೆಡಿಎಸ್‌ ಮುಖಂಡರ ಷಡ್ಯಂತ್ರ

ಒಡಲಾಳ

ಬಿ.ಎಸ್.ಶಿವಣ್ಣ

ಇಡೀ ದೇಶದಲ್ಲಿ ಮೌಲ್ಯಾಧಾರಿತ ರಾಜಕಾರಣ ಕುಸಿಯುತ್ತಿರುವ ಹೊತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದಕ್ಕೆ ಅಪವಾದದಂತಿದ್ದಾರೆ. ಹೋರಾಟದ ಹಾದಿಯಲ್ಲಿ ಬಂದ ಸಿದ್ದರಾಮಯ್ಯ ಅವರು ಹಲವು ದಶಕಗಳಿಂದ ಮೌಲ್ಯಗಳನ್ನೇ ಪ್ರತಿಪಾದಿಸುತ್ತಾ ಬಂದಿದ್ದಾರೆ. ಪ್ರಸಕ್ತ ಕಲುಷಿತ ವಾತಾವರಣದಲ್ಲೂ ರಾಜಕಾರಣಕ್ಕೆ ಘನತೆಯನ್ನು ತಂದುಕೊಟ್ಟಿದ್ದಾರೆ. ಬಡತನದ ಹಾದಿಯಲ್ಲಿ ಬೆಳೆದುಬಂದ ಅವರು ಎಲ್ಲಾ ವರ್ಗದ ಬಡವರ
ಕಣ್ಣೀರು ಒರೆಸುತ್ತಾ ಬಂದಿದ್ದಾರೆ.

ತಮ್ಮ ಆಡಳಿತದ ಅವಧಿಯಲ್ಲಿ ಎಲ್ಲಾ ಸಮುದಾಯಗಳ ಬಡವರಿಗೂ ಒಂದಲ್ಲಾ ಒಂದು ಯೋಜನೆಗಳನ್ನು ರೂಪಿಸುತ್ತಾ ಅಭಿವೃದ್ಧಿ ರಾಜಕಾರಣಕ್ಕೆ ಬಲುದೊಡ್ಡ ಕೊಡುಗೆ ನೀಡಿದ್ದಾರೆ. ರಾಮಕೃಷ್ಣ ಹೆಗಡೆ, ದೇವರಾಜ ಅರಸು ಅವರಂತೆ ರಾಜ್ಯದಲ್ಲಿ ‘ಮುತ್ಸದ್ದಿ ರಾಜಕಾರಣ’ ಮಾಡುತ್ತಿರುವ ಸಿದ್ದರಾಮಯ್ಯ ಅವರು ಇಂದಿನ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದ್ದಾರೆ. ಪಕ್ಷ ರಾಜಕಾರಣದ ಹೊರತಾಗಿಯೂ ಸಿದ್ದರಾಮಯ್ಯ ಅವರ ಅನುಭವಗಳು ರಾಜ್ಯಕ್ಕೆ, ದೇಶಕ್ಕೆ ಅವಶ್ಯಕವಾಗಿವೆ.

ಆದರೆ ಸಿದ್ದರಾಮಯ್ಯರ ವಿರುದ್ಧ ದೊಡ್ಡ ಷಡ್ಯಂತ್ರ ರೂಪುಗೊಂಡಿರುವುದು ಏಕೆ? ಮಾಡದ ತಪ್ಪನ್ನು ಅವರ ಮೇಲೆ ಹಾಕಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ಕೊಟ್ಟಿರುವುದು ಯಾವ ಪುರುಷಾರ್ಥಕ್ಕಾಗಿ? ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ ಮುಡಾ ಗೊಂದಲಗಳಿಗೆ
ಸಿದ್ದರಾಮಯ್ಯರನ್ನು ಹೊಣೆಗಾರರನ್ನಾಗಿ ಮಾಡುತ್ತಿರುವುದು ಏಕೆ? ಈ ಪಶ್ನೆಗಳಿಗೆ ಉತ್ತರ ಹುಡುಕುತ್ತಾ ಹೊರಟರೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಷಡ್ಯಂತ್ರ ತೆರೆದುಕೊಳ್ಳುತ್ತದೆ.

೧೫ ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ದೇಶದಲ್ಲಿ ಹೊಸದೊಂದು ದಾಖಲೆ ನಿರ್ಮಾಣದತ್ತ ಹೆಜ್ಜೆ ಇಡುತ್ತಿದ್ದಾರೆ. ತತ್ವಾದರ್ಶಗಳ ಪಾಲನೆ ವಿಷಯದಲ್ಲಿ ಈಗಿನ ರಾಜಕಾರಣಿಗಳೂ ಅವರ ಮುಂದೆ ನಿಲ್ಲಲಾರರು, ಪ್ರಧಾನಿ ನರೇಂದ್ರ ಮೋದಿ ಕೂಡ. ಹಿಂದುಳಿದ ವರ್ಗಗಳ ನಾಯಕನೊಬ್ಬ ಇಂಥದೊಂದು ಮುತ್ಸದ್ದಿತನ ಮೆರೆಯುತ್ತಿರುವುದು ಬಿಜೆಪಿ-ಜೆಡಿಎಸ್ ಮುಖಂಡರಲ್ಲಿ ಹೊಟ್ಟೆಕಿಚ್ಚು ಉಂಟುಮಾಡಿದೆ. ಹೊಟ್ಟೆಕಿಚ್ಚಿಗೆ ಔಷಧವಿಲ್ಲ.

ತಮ್ಮ ಹೊಟ್ಟೆಯನ್ನು ತಣ್ಣಗೆ ಮಾಡುವುದಕ್ಕಾಗಿ ಯಃಕಶ್ಚಿತ್ ವಿಚಾರವನ್ನು ಮುನ್ನೆಲೆಗೆ ತಂದು ಒಬ್ಬ ಮೌಲ್ಯವಂತ ರಾಜಕಾರಣಿ ನಡೆದು ಬಂದ ಹಾದಿಯನ್ನೇ ಬಲಿಕೊಡಲು ಅವರು ಹೊರಟಂತೆ ಕಾಣುತ್ತಿದೆ. ಆದರೆ ಬಿಜೆಪಿ-ಜೆಡಿಎಸ್ ಮುಖಂಡರಿಗೆ ಅದು ಅಷ್ಟು ಸುಲಭಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. ಈ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ದೇಶದ ಮುಂದೆ ಖಂಡಿತಾ ಬೆತ್ತಲಾಗುತ್ತಾರೆ. ರಾಜ್ಯಪಾಲರನ್ನು ಬಳಸಿಕೊಂಡು ಬಿಜೆಪಿಯು ಕರ್ನಾಟಕ ರಾಜ್ಯ ಸರಕಾರ ವನ್ನಷ್ಟೇ ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿಲ್ಲ, ಮೌಲ್ಯಾಧಾರಿತ ರಾಜಕಾರಣಿಯೊಬ್ಬರ ಭಾವನೆಗಳನ್ನು ಕೆಣಕಿದೆ, ಸ್ವಾಭಿಮಾನಕ್ಕೆ ಧಕ್ಕೆ ತರಲು ಹೊರಟಿದೆ.

ಇಂಥ ಪ್ರಯತ್ನಕ್ಕೆ ಸಿದ್ದರಾಮಯ್ಯರು ವಿಚಲಿತರಾಗಿಲ್ಲ. ತಾವು ನಡೆದುಬಂದ ಹಾದಿಯಲ್ಲಿದ್ದ ಇಂಥ ಹಲವು ಸವಾಲುಗಳನ್ನು ಅವರು ಮೆಟ್ಟಿ ನಿಂತು ಮುಂದೆ ಬಂದಿದ್ದಾರೆ. ಈಗಲೂ ಅವರು ಬಿಜೆಪಿ, ಜೆಡಿಎಸ್‌ನ ಕುಕೃತ್ಯವನ್ನು ಮೆಟ್ಟಿಯೇ ಮುಂದೆ ಹೆಜ್ಜೆ ಇಡುತ್ತಾರೆ. ಇಷ್ಟು ವರ್ಷ ಅವರು ಕಾಪಾಡಿ ಕೊಂಡು ಬಂದಿರುವ ಆದರ್ಶಗಳ ಸೌಧವನ್ನು ಒಂದೇ ಏಟಿನಲ್ಲಿ ಧ್ವಂಸಗೊಳಿಸಿ ವಿಕೃತ ಸಂತೋಷ ಅನುಭವಿಸುವ ಕನಸಿನಲ್ಲಿರುವ ಬಿಜೆಪಿ ವರಿಷ್ಠರಿಗೆ ನಿರಾಸೆ ಕಾದಿದೆ. ಇಡೀ ಸಮಾಜ ಸಿದ್ದರಾಮಯ್ಯರ ಪರವಾಗಿ ನಿಲ್ಲುತ್ತದೆ.

ವಿರೋಧಿಗಳ ಲೆಕ್ಕಾಚಾರವನ್ನೂ ಮೀರಿದ ರೀತಿಯಲ್ಲಿ ಸಿದ್ದರಾಮಯ್ಯ ಗೆದ್ದು ಬರುತ್ತಾರೆ ಎಂಬುದು ನನ್ನ ಬಲವಾದ ನಂಬಿಕೆ. ನಾವೆಲ್ಲರೂ ಹೆಗಡೆ ಅವರ ಆಡಳಿತವನ್ನು ಹತ್ತಿರದಿಂದ ಕಂಡವರು. ಅದೇ ರೀತಿ, ಹಿಂದುಳಿದ ವರ್ಗದ ಹರಿಕಾರ ದೇವರಾಜ ಅರಸರ ಬಗ್ಗೆಯೂ ಅರಿತುಕೊಂಡಿದ್ದೇವೆ. ಈಗಿನ
ಕಲುಷಿತ ವಾತಾವರಣದಲ್ಲಿ ಸಿದ್ದರಾಮಯ್ಯ ಅವರು ಮೌಲ್ಯ ಗಳೊಂದಿಗೆ ಮುನ್ನಡೆಯುತ್ತಾ ಜನೋಪಯೋಗಿ ಆಡಳಿತ ನೀಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್‌ನವರ ತೆವಲು, ಸಿದ್ದರಾಮಯ್ಯರ ಸರಕಾರವನ್ನು ಸುಲಭವಾಗಿ ಅಸ್ಥಿರಗೊಳಿಸಲಾಗದು.

ಇದೊಂದು ರಾಜಕೀಯ ಪಿತೂರಿ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದ್ದು ನ್ಯಾಯಾಲಯಗಳು ಅದನ್ನು ಪ್ರಮುಖವಾಗಿ ಪರಿಗಣಿಸುತ್ತವೆ. ಈ ನೆಲದ ನ್ಯಾಯಶಾಸ್ತ್ರ ಕೂಡ ಇದನ್ನೇ ಹೇಳುತ್ತದೆ. ಪಿತೂರಿಗಳನ್ನು ನ್ಯಾಯಾಂಗ ಬುಡಮೇಲು ಮಾಡುತ್ತದೆ. ಹೀಗಾಗಿ ಕಾನೂನು ಹೋರಾಟದಲ್ಲಿ ಸಿದ್ದರಾಮ ಯ್ಯರಿಗೆ ಗೆಲುವು ನಿಶ್ಚಿತ. ಮೌಲ್ಯಾಧಾರಿತ ರಾಜಕಾರಣ ಮರೀಚಿಕೆಯೇ ಎನ್ನುವ ಪ್ರಶ್ನೆಗೆ ಸಿದ್ದರಾಮಯ್ಯರು ಸಮರ್ಥ ಉತ್ತರವಾಗಿ ನಿಂತಿದ್ದರು. ಅವರು ಮುಂದಿನ ಹಲವು ಪೀಳಿಗೆಗಳವರೆಗೂ ಮೌಲ್ಯಕ್ಕೆ ಇನ್ನೊಂದು ಹೆಸರಾಗಿ ಉಳಿಯಲಿದ್ದಾರೆ. ಅಂಥ ರಾಜಕಾರಣಿಯೊಬ್ಬರ ಸೇವೆಯನ್ನು ಸಮಾಜ ನಿರಂತರವಾಗಿ ಪಡೆಯಬೇಕು.

ಪಕ್ಷಗಳನ್ನು ಮೀರಿದ ರಾಜಕಾರಣಿಯಾಗಿರುವ ಅವರು ಪ್ರಸ್ತುತ ಸಮಾಜಕ್ಕೆ ಅನಿವಾರ್ಯವಾಗಿದ್ದಾರೆ. ಈ ಸತ್ಯವನ್ನು ಬಿಜೆಪಿ, ಜೆಡಿಎಸ್ ಮುಖಂಡರಿಗೆ ಜನರೇ ತಿಳಿಸಿಕೊಡಲಿದ್ದಾರೆ. ಮೌಲ್ಯಾಧಾರಿತ ರಾಜಕಾರಣದ ವಿಷಯ ಬಂದಾಗ ಜನರ ಮನಸ್ಸಿಗೆ ಮೊದಲು ಬರುವುದು ಅವರ ಭ್ರಷ್ಟಾಚಾರ-ರಹಿತ
ಆಡಳಿತ. ಸಿದ್ದರಾಮಯ್ಯರ ವಿಷಯದಲ್ಲಿ ಇದು ಸತ್ಯ. ೨೦೧೩ರಿಂದ ಅವರು ೫ ವರ್ಷಗಳವರೆಗೆ ರಾಜ್ಯಕ್ಕೆ ನೀಡಿದ ಆಡಳಿತ ಇಡೀ ದೇಶಕ್ಕೆ ಮಾದರಿ ಯಾಗಿದೆ. ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಮುಂತಾದ ಯೋಜನೆಗಳ ಹಿಂದೆ ಅವರ ಮುನ್ನೋಟವಿತ್ತು. ೨ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಪಂಚಗ್ಯಾರಂಟಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ರಾಜ್ಯ ದಿವಾಳಿಯಾಗುತ್ತದೆ ಎನ್ನುವ ವಿಪಕ್ಷಗಳ ಆರೋಪದ ನಡುವೆಯೂ ರಾಜ್ಯದ ಆರ್ಥಿಕ ವ್ಯವಸ್ಥೆ ಮೇಲೆ ಎಳ್ಳಷ್ಟೂ ವ್ಯತಿರಿಕ್ತ ಪರಿಣಾಮ ಬೀರದ ರೀತಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಗೊಳಿಸುತ್ತಿದ್ದಾರೆ. ಇದು ಬಿಜೆಪಿ ಮುಖಂಡರಿಗೆ ಚೆನ್ನಾಗಿ ಗೊತ್ತಿದೆ. ಸಿದ್ದರಾಮಯ್ಯರ ಆಡಳಿತ ವೈಖರಿ ಬಿಜೆಪಿಯ ರಾಷ್ಟ್ರೀಯ ಮುಖಂಡರಿಗೆ ನುಂಗಲಾಗದ ತುತ್ತಾಗಿದೆ. ದಕ್ಷಿಣ ರಾಜ್ಯವೊಂದರ ಮುಖ್ಯಮಂತ್ರಿ ಕೇಂದ್ರ ಸರಕಾರವನ್ನೇ ಮೀರಿಸುವ ರೀತಿಯಲ್ಲಿ ಆಡಳಿತ ನಡೆಸುತ್ತಾರೆ ಎಂಬುದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಅವಮಾನ ಎಂಬಂತೆ ಭಾವಿಸಿದ್ದಾರೆ.

ಇಂಥ ಪರಿಸ್ಥಿತಿಯಲ್ಲಿ ರಾಜ್ಯದ ಬಿಜೆಪಿ, ಜೆಡಿಎಸ್ ಮುಖಂಡರ ಜತೆ ಸೇರಿ ಹೆಣೆದ ಕತೆಯೇ ಮುಖ್ಯಮಂತ್ರಿ ವಿರುದ್ಧದ ಪ್ರಾಸಿಕ್ಯೂಷನ್‌ಗೆ ಅನುಮತಿ. ಇದು ಬಿಜೆಪಿಯಲ್ಲೇ ಹಲವರಿಗೆ ಇಷ್ಟವಿಲ್ಲದ ನಡೆಯಾಗಿದೆ. ಮುತ್ಸದ್ದಿ ರಾಜಕಾರಣಿಯೊಬ್ಬರು ಅಧಿಕಾರದ ಕೇಂದ್ರಸ್ಥಾನ ದಲ್ಲಿ ಅದ್ಭುತಗಳನ್ನು ಸಾಧಿಸು ತ್ತಿದ್ದಂತೆ ಅವರ ಕಾಲು ಎಳೆಯುವರು, ಅಪಚಾರ ಮಾಡುವರು, ಕೆಸರು ಎರಚು ವವರು ಹುಟ್ಟಿಕೊಳ್ಳುತ್ತಾರೆ. ಜನರ ದಿಕ್ಕು ತಪ್ಪಿಸುವುದಕ್ಕಾಗಿ ಒಂದು ವರ್ಗ ಕಾತರಿಸುತ್ತಿರುತ್ತದೆ ಎನ್ನುವುದಕ್ಕೆ ಇಂದಿನ ಪರಿಸ್ಥಿತಿಯೇ ಸಾಕ್ಷಿ. ಕೆಲವರು ಸಾಮಾಜಿಕ ಜಾಲತಾಣ ಗಳಲ್ಲೂ ಸಿದ್ದರಾಮಯ್ಯರ ಹೆಸರಿಗೆ ಮಸಿ ಬಳಿಯುವ ಯತ್ನ ಮಾಡುತ್ತಿದ್ದಾರೆ. ಆದರೆ ಅದು ಅಸಾಧ್ಯ ಎನ್ನುವುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಇಂಥ ಪ್ರಯತ್ನಗಳನ್ನು ಇತಿಹಾಸ ಕ್ಷಮಿಸುವುದಿಲ್ಲ.

ಹೆಗಡೆ ಅವರ ನಂತರದಲ್ಲಿ ಆಡಳಿತ ನಡೆಸಿದ ಪ್ರತಿ ಮುಖ್ಯಮಂತ್ರಿಯೂ ತಮ್ಮ ಕುಟುಂಬ ಸದಸ್ಯರು ಆಡಳಿತದಲ್ಲಿ ಮೂಗು ತೂರಿಸಲು ಅವಕಾಶ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಇಂದಿನ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ತಂದೆಯ ಸಹಿಯನ್ನು ನಕಲು ಮಾಡಿ ಕಡತಗಳಿಗೆ ಸಹಿ ಹಾಕುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಸಿದ್ದರಾಮಯ್ಯರ ಆಡಳಿತದಲ್ಲಿ ಕುಟುಂಬದವರು ಇರಲಿ, ಆಪ್ತರು, ಜಾತಿಯವರು ಯಾರೂ ಮೂಗು ತೂರಿಸದ ರೀತಿಯಲ್ಲಿ ಆಡಳಿತ ಯಂತ್ರವನ್ನು ಶುದ್ಧವಾಗಿ ಇಟ್ಟಿದ್ದಾರೆ. ತಮ್ಮ ಮಗ ಶಾಸಕನಾದರೂ
ಸಿದ್ದರಾಮಯ್ಯ ಅವರು ಆಡಳಿತದ ವಿಷಯದಲ್ಲಿ ಮಗನಿಗೆ ಎಂದೂ ಮಣೆ ಹಾಕಿಲ್ಲ.

ಸಿದ್ದರಾಮಯ್ಯ ಅವರ ಪತ್ನಿಯ ಮುಖವನ್ನು ಯಾರೂ ನೋಡಿಲ್ಲ. ಅವರು ಕುಟುಂಬಕ್ಕಷ್ಟೇ ಸೀಮಿತ. ಅಂಥ ನಿಸ್ವಾರ್ಥಿಯನ್ನು ಎಳೆತಂದು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದನ್ನು ರಾಜ್ಯದ ಮಹಿಳೆಯರು ಗಮನಿಸುತ್ತಿದ್ದಾರೆ. ಸಿದ್ದರಾಮಯ್ಯರ ಪತ್ನಿ ತವರುಮನೆಯಿಂದ ಅರಿಶಿಣ-
ಕುಂಕುಮದ ಸಂಕೇತವಾಗಿ ಬಂದ ಜಮೀನನ್ನು ಕಳೆದು ಕೊಂಡು, ನಿಯಮಾನುಸಾರ ಮುಡಾದಿಂದ ನಿವೇಶನ ಪಡೆದಿದ್ದಾರೆ. ಅವರು ಅದನ್ನು ಪುಕ್ಕಟೆ ಬಿಟ್ಟುಕೊಡಬೇಕಾಗಿತ್ತಾ? ಪ್ರತಿ ಹೆಣ್ಣು ಮಕ್ಕಳಿಗೂ ತವರುಮನೆ ಎಂದರೆ ದೇವರ ಮನೆಯೇ ಆಗಿರುತ್ತದೆ. ಅದು ಅವರವರ ವೈಯಕ್ತಿಕ ವಿಷಯ. ಕಳಂಕರಹಿತ ರಾಜಕಾರಣಿ ಸಿದ್ದರಾಮಯ್ಯ ವಿರುದ್ಧ ಏನೂ ಸಿಗದಿದ್ದಾಗ ಅವರ ಪತ್ನಿಯ ವೈಯಕ್ತಿಕ ವಿಚಾರವನ್ನು ಎಳೆದುತಂದು ಪ್ರಾಸಿಕ್ಯೂಷನ್‌ಗೆ ಅನುಮತಿಸಿರುವುದು ಕೇಂದ್ರದ ಬಿಜೆಪಿಯ ನಿರ್ಲಜ್ಜ ರಾಜಕಾರಣವನ್ನು ಪ್ರತಿಬಿಂಬಿಸುತ್ತದೆ.

(ಲೇಖಕರು ರಾಮಮನೋಹರ್ ಲೋಹಿಯಾ ವಿಚಾರ ವೇದಿಕೆಯ ಅಧ್ಯಕ್ಷರು)