Sunday, 15th December 2024

ಅಪರೂಪದ ಈ ಕಾಡನ್ನು ದಯವಿಟ್ಟು ನಾಶ ಮಾಡಬೇಡಿ

ಶಶಾಂಕಣ

ಶಶಿಧರ ಹಾಲಾಡಿ

ನಮ್ಮ ನಾಡಿನ ಪ್ರಜಾಪ್ರಭುತ್ವದ ಕುರಿತು ಅಪಾರ ಗೌರವ ಇಟ್ಟುಕೊಂಡೇ ಹೇಳುತ್ತಿದ್ದೇನೆ, ಈ ಪ್ರಜಾಪ್ರಭುತ್ವವು ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸುತ್ತದೆ!

ಕೆಲವು ಸೌಲಭ್ಯಗಳನ್ನು ಜನರು ಒತ್ತಾಯ ಮಾಡಿ ಕೇಳಿರುವುದಿಲ್ಲ, ಜನಪ್ರತಿನಿಧಿಗಳ ಬಳಿ ಅದಕ್ಕಾಗಿ ಮನವಿ ಸಲ್ಲಿಸಿರುವುದಿಲ್ಲ, ಇನ್ನೂ ಹೇಳಬೇಕೆಂದರೆ, ಇಂತಹ ಕೆಲವು ಸೌಲಭ್ಯಗಳನ್ನು ಕಲ್ಪಿಸಿದರೆ ಲಾಭಕ್ಕಿಂತ ಹಾನಿಯೇ ಜಾಸ್ತಿ ಎಂದು ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಆದರೆ, ಜನರ ಮಾತನ್ನು ಕೇಳಿಸಿಕೊಳ್ಳದೇ, ಅಂತಹ ಯೋಜನೆಗಳನ್ನು ಜಾರಿಗೆ ತರುವುದಾಗಿ ಜನಪ್ರತಿನಿಧಿಗಳು ಪದೇ ಪದೆ ಹೇಳುತ್ತಿರುತ್ತಾರೆ, ಅದರ ಕುರಿತು ತಮ್ಮ ಪಾಡಿಗೆ ತಾವು ಕೆಲಸವನ್ನೂ ಆರಂಭಿಸಿರುತ್ತಾರೆ!

ಜನಸಾಮಾನ್ಯರಿಗೆ, ಸ್ಥಳೀಯರಿಗೆ ಮತ್ತು ನಮ್ಮ ನಾಡಿಗೆ ಅನುಕೂಲಕ್ಕಿಂತ ಹೆಚ್ಚು ಅನಾನುಕೂಲವನ್ನೇ ಮಾಡುವಂಥ ಯೋಜನೆ
ಗಳು ಯಾವ ಉದ್ದೇಶದಿಂದ ಹೀಗೆ ಜಾರಿಗೆ ಬರುತ್ತವೆ? ಆ ಕೊಲ್ಲೂರು ಮೂಕಾಂಬಿಕೆಗೇ ಗೊತ್ತು! ಇಂತಹ ಒಂದು ವಿಚಿತ್ರ ಯೋಜನೆ ಎಂದರೆ, ಕೊಡಚಾದ್ರಿ ಪರ್ವತಕ್ಕೆ ರೋಪ್‌ವೇ ನಿರ್ಮಾಣದ ಪ್ರಸ್ತಾಪ. ಈ ಒಂದು ಯೋಜನೆಯಿಂದ ಅಪಾರ
ಪ್ರಮಾಣದ ಪರಿಸರ ಹಾನಿಯಾಗುತ್ತದೆ ಮತ್ತು ಅಲ್ಲಿನ ಪರಿಸರ ಸೂಕ್ಷ್ಮ ವಲಯದ ಕಾಡು ನಾಶವಾಗುತ್ತದೆಂದು ಗೊತ್ತಿದ್ದರೂ, ಸಾಕಷ್ಟು ದುಬಾರಿ ಎನಿಸುವ ಅದನ್ನು ಕಾರ್ಯಗತಗೊಳಿಸಲು ಜನಪ್ರತಿನಿಧಿಗಳು ಉತ್ಸುಕರಾಗಿದ್ದಾರೆ.

ಸ್ಥಳೀಯ ಜನರು, ಪರಿಸರ ಮತ್ತು ಹವಾಮಾನ ತಜ್ಞರು, ಪರಿಸರ ಪ್ರೇಮಿಗಳು ಮತ್ತು ಜನಸಾಮಾನ್ಯರು ಈ ರೋಪ್‌ವೇ ಯೋಜನೆ ಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಆದರೂ, ಕೊಡಚಾದ್ರಿಗೆ ರೋಪ್‌ವೇ ನಿರ್ಮಿಸುವ ಕುರಿತು ಕಾಮಗಾರಿಗೆ, ಪ್ರಾಥಮಿಕ ಸರ್ವೇಗೆ ಚಾಲನೆ ನೀಡಲಾಗಿದೆ!

ಕೊಡಚಾದ್ರಿ ಪರ್ವತ ಏಕೆ ಅಷ್ಟು ಸೂಕ್ಷ್ಮ? ಆ ವಲಯದ ಪ್ರಾಮುಖ್ಯತೆ ಏನು? ಯಾತ್ರಾ ಸ್ಥಳವಾಗಿ ಪರಿಚಿತವಾಗಿರುವುದರ ಜತೆಯಲ್ಲೇ, ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿರುವ ಕೊಡಚಾದ್ರಿಯು, ಕರ್ನಾಟಕದ ಅತಿ ಸುಂದರ ಸ್ಥಳಗಳಲ್ಲಿ ಒಂದು.
ಇಪ್ಪತ್ತನೆಯ ಶತಮಾನದಲ್ಲಿ ಪಶ್ಚಿಮ ಘಟ್ಟಗಳಲ್ಲಿ ಸಾಕಷ್ಟು ಸುತ್ತಾಟ ಮತ್ತು ಚಾರಣ ನಡಸಿರುವ ಸಾಹಿತಿ, ಸಾಹಸಿ ಶಿವರಾಮ ಕಾರಂತರು ಒಂದೆಡೆ ಹೇಳಿದ್ದಾರೆ – ಕುದುರೆ ಮುಖ, ಕುಮಾರ ಪರ್ವತ ಮತ್ತು ಕೊಡಚಾದ್ರಿ ಶಿಖರಗಳನ್ನು ಗಣನೆಗೆ ತೆಗೆದು ಕೊಂಡರೆ, ಕುದುರೆ ಮುಖ ಚಾರಣವು ಅತಿ ಕಠಿಣ, ಕುಮಾರ ಪರ್ವತ ಚಾರಣವು ಅತಿ ದೀರ್ಘ ಮತ್ತು ಕೊಡಚಾದ್ರಿ ಚಾರಣವು
ಅತಿ ಸುಂದರ ಎಂದು.

ನಿಜ, ಕೊಡಚಾದ್ರಿಯ ಚಾರಣ ಎಂದರೆ ಅದೊಂದು ಅನನ್ಯ ಅನುಭೂತಿ. ಕೊಡಚಾದ್ರಿ ಯ ಶಿಖರದಲ್ಲಿರುವ ಸರ್ವಜ್ಞ ಪೀಠದಲ್ಲಿ
ನಿಂತಾಗ ಕಾಣಿಸುವ, ಸಾವಿರಾರು ಅಡಿ ಆಳದ ಪ್ರಪಾದದಲ್ಲಿ ಹರಡಿರುವ ದಟ್ಟ ಹಸಿರಿನ ಕಾಡಿನ ಸ್ನಿಗ್ಧತೆಯನ್ನು ವರ್ಣಿಸಲು ಪದಗಳು ಸಾಲವು. ಅತ್ತ ತೀರಾ ಕಠಿಣವೂ ಅಲ್ಲದ, ಇತ್ತ ತೀರಾ ಸುಲಭವೂ ಅಲ್ಲದ ಚಾರಣ ಅದು. ಕರಾವಳಿಗೆ ಸಾಕಷ್ಟು ಸನಿಹ ದಲ್ಲಿರುವುದರಿಂದ, ಆ ಶಿಖರದ ತುದಿಯಲ್ಲಿ ನಿಂತಾಗ ಕಾಣುವ ಸಮುದ್ರದ ನೋಟ ಎಂತಹವರನ್ನೂ ನಿಬ್ಬೆರಗಾಗಿಸುತ್ತದೆ.

ತಿಳಿಯಾದ ವಾತಾವರಣ ಇರುವ ಸಂಜೆಗಳಲ್ಲಿ, ಅಲ್ಲಿಂದ ಕಾಣಸಿಗುವ ಸೂರ್ಯಾಸ್ತದ ನೋಟಕ್ಕೆ, ಆ ಸೌಂದರ್ಯಕ್ಕೆ, ಆ ವಿಸ್ಮಯಕ್ಕೆ ಹೋಲಿಕೆಯಾಗುವಂಥ ಇನ್ನೊಂದು ದೃಶ್ಯ ಸಿಗುವುದು ಕಠಿಣ. ಕೊಡಚಾದ್ರಿ ಶಿಖರದ ಸುತ್ತಲೂ ಇರುವ ಕಾಡಿನ
ಕುರಿತು ವಿಶೇಷವಾಗಿ ಹೇಳಬೇಕು. ಇಪ್ಪತ್ತನೆಯ ಶತಮಾನದ ತನಕವೂ, ಅದರ ತಪ್ಪಲಿನ ಕಾಡಿನ ಕೆಲವು ಭಾಗಗಳು ಬಹು ಮಟ್ಟಿಗೆ ವರ್ಜಿನ್ ಕಾಡುಗಳಾಗಿದ್ದವು. ಅಂತಹ ಕಾಡಿನ ಫಾಸಲೆಯಲ್ಲಿ ಚಾರಣ ಮಾಡುತ್ತಾ ಶಿಖರದತ್ತ ಸಾಗುವ ಅನುಭವ ವಿಶಿಷ್ಟ. ನಾನು ಆ ಶಿಖರವನ್ನು ಹತ್ತು ಬಾರಿ ತಲುಪಿದ್ದೇನೆ.

ಒಂದು ಬಾರಿ ಯಾರೂ ಹೋಗದ ದಾರಿಯಲ್ಲಿ, ಕಾಡಿನ ನಡುವೆ ಚಾರಣ ಮಾಡಿದ್ದೇನೆ. ಒಂಬತ್ತು ಬಾರಿ ನಡೆದು ಸಾಗಿದ
ಅನುಭವ. ಒಮ್ಮೆ, ಇತ್ತೀಚೆಗೆ ಜೀಪಿನಲ್ಲಿ ಪಯಣ. ಕೊಡಚಾದ್ರಿ ಶಿಖರದ ಹತ್ತಿರವೇ, ತಳದಲ್ಲಿ ಚಿತ್ರಮೂಲ ಎಂಬ ಚಿಕ್ಕ ಕಲ್ಲುಗುಹೆಯಿದೆ; ಅಲ್ಲಿ ಸದಾ ಒಸರುವ ನೀರಿನ ಝರಿ. ಸಂನ್ಯಾಸಿಗಳು ಧ್ಯಾನಮಾಡುವ, ತಂಗುವ ತಾಣ ಅದು. ಅಲ್ಲಿಂದ ಕೆಳಗಿರುವ ದಟ್ಟ, ವಿಶಾಲ ಕಾಡನ್ನು ಅಂಬಾವನ ಎಂದು ಕರೆಯಲಾಗಿದೆ.

ಬಹು ಹಿಂದಿನಿಂದಲೂ ಆ ಕಾಡು ಪವಿತ್ರ ಸ್ಥಳ. ಜನಸಾಮಾನ್ಯರು ಪ್ರವೇಶಿಸಲಾಗದ, ಮನುಷ್ಯನ ಹಸ್ತಕ್ಷೇಪ ಇಲ್ಲದ ಕಾಡು ಅದು ಎಂಬ ನಂಬಿಕೆ. ಆದರೆ, ಇಪ್ಪತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಆ ಜಾಗಕ್ಕೆ ಲಗ್ಗೆಯಿಟ್ಟ ಕಾಡುಗಳ್ಳರು ಸಣ್ಣಮಟ್ಟಿಗಿನ
ಕಿತಾಪತಿ ಮಾಡಿದ್ದುಂಟು. ಈಗ ಆ ಕಾಡನ್ನು ಸಂಪೂರ್ಣ ವರ್ಜಿನ್ ಕಾಡು ಎನ್ನುವುದಕ್ಕಿಂತಲೂ, ಸಾಕಷ್ಟು ಮೂಲ
ರೂಪ ದಲ್ಲೇ ಉಳಿದುಕೊಂಡಿರುವ ಪುರಾತನ ಕಾಡು ಎನ್ನಬಹುದು.

ಕೊಡಚಾದ್ರಿ ಶಿಖರದ ತುದಿಯಲ್ಲಿ ನಿಂತರೆ, ಪಶ್ಚಿಮ ದಿಕ್ಕಿನಲ್ಲಿ ಕರಾವಳಿ, ಸಮುದ್ರ ಮತ್ತು ಕೊಲ್ಲೂರಿನ ಮೂಕಾಂಬಿಕಾ ದೇವಾಲಯ ಕಾಣಿಸುತ್ತದೆ. ಕೊಡಚಾದ್ರಿಗೂ, ಕೊಲ್ಲೂರಿಗೂ ನಡುವಿನ ಜಾಗದಲ್ಲಿ ಕಣಿವೆ, ಶೋಲಾ ಕಾಡು ಮತ್ತು ಅಂಬಾವನದ ಅರಣ್ಯ ಇದೆ. ಶಿಖರದಿಂದ ದಕ್ಷಿಣ ದಿಕ್ಕಿಗೆ ಸಾವಿರಾರು ಅಡಿ ಆಳದ ಪ್ರಪಾತ ಮತ್ತು ಕಾಡು ತುಂಬಿದ ಕಣಿವೆ. ಪೂರ್ವ ದಿಕ್ಕಿಗೆ ಶರಾವತಿ ಅಣೆಕಟ್ಟಿನ ಹಿನ್ನೀರಿನ ನೋಟ. ಉತ್ತರ ದಿಕ್ಕಿಗೆ ಅರಣ್ಯ, ಶೋಲಾ ತುಂಬಿದ ಸಹ್ಯಾದ್ರಿಯ ಸಾಲು.

ಅದೊಂದು ಅಪರೂಪದ ಹಸಿರು ಸಿರಿ. ಈ ಸುಂದರ ಪರಿಸರವನ್ನು ಹೀಗೆಯೇ ಉಳಿಸಿಕೊಳ್ಳಬೇಕು, ಅಲ್ಲಿನ ಪರಿಸರವನ್ನು ಇನ್ನಷ್ಟು ನಾಶವಾಗಲು ಬಿಡಬಾರದು ಎಂಬುದೇ ಸ್ಥಳೀಯರ, ಪರಿಸರ ಪ್ರೇಮಿಗಳ ಒಕ್ಕೊರಲ ಅಭಿಲಾಷೆ. ಹಾಗೆ ನೋಡ ಹೋದರೆ, ಕೊಡಚಾದ್ರಿ ಶಿಖರವು ಈಗಿನ ರೀತಿಯಲ್ಲಿ ಉಳಿದುಕೊಂಡಿರುವುದೇ ಒಂದು ಸಣ್ಣ ಪವಾಡ ಎನ್ನಬಹುದು. 19ನೆಯ ಶತಮಾನದಲ್ಲಿ ಮತ್ತು 20ನೆಯ ಶತಮಾನದ ಮೊದಲ ಭಾಗದಲ್ಲಿ, ಇಲ್ಲಿನ ನೆಲದಲ್ಲಿರುವ ಖನಿಜವನ್ನು ಗಣಿಗಾರಿಕೆ
ಮಾಡಲು ಬ್ರಿಟಿಷರು ಯೋಜಿಸಿದ್ದರು. ಕೆಮ್ಮಣ್ಣುಗುಂಡಿ ಯ ಬೆಟ್ಟಗಳಲ್ಲಿ ನಡೆಸಿದ ರೀತಿಯಲ್ಲೇ ತೆರೆದ ಗಣಿಗಾರಿಕೆ ಮಾಡಿ, ಅದಿರನ್ನು ಸಾಗಿಸುವ ಅವರ ಯೋಜನೆ

ಅದೇಕೋ ಕಾರ್ಯರೂಪಕ್ಕೆ ಬರಲಿಲ್ಲ. ಕೊಡಚಾದ್ರಿ ಶಿಖರದ ತನಕ ರಸ್ತೆ ಮಾಡಿಸಿ, ಅಲ್ಲಿನ ಅದಿರಿನ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಕೊಡಚಾದ್ರಿ ಶಿಖರದ ಹತ್ತಿರವಿರುವ ವೆಂಕಟರಾಯನದುರ್ಗ ಮತ್ತು ಸರ್ವಜ್ಞ ಪೀಠಕ್ಕೆ ಸಾಗುವ ದಾರಿಯ ಪಕ್ಕದಲ್ಲಿ ಅದಿರು ಸಂಗ್ರಹಕ್ಕಾಗಿ ಮಾಡಿದ ಗುಂಡಿಗಳನ್ನು ಮತ್ತು ಸಾಲಾಗಿ ಪೇರಿಸಿಟ್ಟ ಅದಿರನ್ನು ಇಂದಿಗೂ ಕಾಣಬಹುದು.
ನಮ್ಮನ್ನು ಆಳಿದ ಬ್ರಿಟಿಷರ ಯೋಜನೆಯು ಅಕಸ್ಮಾತ್ ಅಂದೇ ಕಾರ್ಯರೂಪಕ್ಕೆ ಬಂದಿದ್ದರೆ, ನಾವಿಂದು ಕಾಣುತ್ತಿರುವ ‘ಕಾಡಿನ ನಡುವಿನ ಕೊಡಚಾದ್ರಿ’ ಉಳಿದಿರುತ್ತಿರಲಿಲ್ಲ.

ಕೆಮ್ಮಣ್ಣು ಗುಂಡಿಯನ್ನು ಅಥವಾ ಜೋಗ ಕಾಲೊನಿಯನ್ನು ಹೋಲುವ, ಬರಡು ಪರ್ವತ ಭಿತ್ತಿಗಳನ್ನು ಅಲ್ಲಿ ಕಾಣಬಹುದಿತ್ತು. ಆದರೆ ಅದೃಷ್ಟವಶಾತ್ ಅಲ್ಲಿ ಗಣಿಗಾರಿಕೆ ಕೈಗೂಡದಿರುವುದರಿಂದಾಗಿ, ಕಾಡು, ಬೆಟ್ಟ, ಶೋಲಾ, ತೊರೆ, ಹಕ್ಕಿ, ಪ್ರಾಣಿಗಳು, ಹಸಿರು ಉಳಿದುಕೊಂಡಿದೆ. ಮಲಬಾರ್ ಟ್ರೋಜನ್, ಪೈಡ್ ಹಾರ್ನ್‌ಬಿಲ್, ಸಿಂಗಳೀಕ ಮೊದಲಾದ ಅಳಿನಂಚಿನ ಜೀವಸಂಕುಲ ವಾಸಿ ಸುವ ಕಾಡು ಇದು. ಇಂತಹ ಅಪರೂಪದ ತಾಣವನ್ನು ಹೀಗೆಯೇ ಮುಂದಿನ ತಲೆಮಾರಿಗೆ ಉಳಿಸಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ ಎಂದೇ ನಾವು ಭಾವಿಸಬೇಕು.

ಅಷ್ಟಕ್ಕೂ, ಯಾರೂ ಬೇಡಿಕೆ ಸಲ್ಲಿಸದೇ ಇರುವ ಕೊಲ್ಲೂರು – ಕೊಡಚಾದ್ರಿ ರೂಪ್‌ವೇ ಯೋಜನೆಯನ್ನು ಜಾರಿಗೊಳಿಸಲು ನಮ್ಮ ಜನಪ್ರತಿನಿಧಿಗಳಿಗೆ ಅದೇಕೆ ಅಷ್ಟೊಂದು ಆಸಕ್ತಿ? 18.1.2020ನೇ ಒಂದು ಪತ್ರಿಕಾ ವರದಿಯಲ್ಲಿ ಕೊಡಚಾದ್ರಿಗೆ ರೋಪ್‌ವೇ
ನಿರ್ಮಿಸುವ ಯೋಜನೆಯ ಆರಂಭಿಕ ವಿವರಗಳಿದ್ದು, ಅದಕ್ಕಾಗಿ ಬ್ಲೂಪ್ರಿಂಟ್ ತಯಾರಿಸಿ ಕೇಂದ್ರದ ನೆರವನ್ನು ಕೇಳಲಾಗುವುದು ಎಂಬ ವಿವರಗಳಿವೆ. ಆ ವರದಿಯ ಪ್ರಕಾರ, ಖಾಸಗಿ ಕಾಮಗಾರಿ ಸಂಸ್ಥೆಯೊಂದು ಈ ರೋಪ್‌ವೇ ಯೋಜನೆಗೆ ರು.1200 ಕೋಟಿ
ಯೋಜನಾ ವೆಚ್ಚವಾಗುವುದೆಂದು ಹೇಳಿದೆ!

ಕೊಡಚಾದ್ರಿಯ ಸುತ್ತಲೂ ಯಾವುದೇ ದಿಕ್ಕಿಗೆ ಹೋದರೂ, ದಟ್ಟ ಅರಣ್ಯ. ಅಂತಹ ಸೂಕ್ಷ್ಮ ಅರಣ್ಯದ ಭಾಗಗಳನ್ನು ನಾಶಮಾಡಿ, ರೋಪ್ ವೇ ನಿರ್ಮಿಸಲು ರು.1200 ಕೋಟಿ ಹಣವನ್ನು ವೆಚ್ಚ ಮಾಡಲಾಗುವುದು ಎಂಬ ವಿಚಾರವೇ ಪರಿಸರ ಪ್ರೇಮಿಗಳಲ್ಲಿ ಸಣ್ಣಗೆ ದಿಗಿಲು ಹುಟ್ಟಿಸುತ್ತದೆ. ಭಾರೀ ವೆಚ್ಚದ ಕಾಮಗಾರಿ ಎಂದಾಕ್ಷಣ ಹೆಚ್ಚಿನ ಪರಿಸರ ನಾಶ ಎಂಬುದಕ್ಕೆ ನಮ್ಮ ದೇಶದಲ್ಲಿ
ಸಾಕಷ್ಟು ಅನುಭವಗಳಾಗಿವೆ. ಜನವರಿ 2020ರ ಈ ಪತ್ರಿಕಾ ಹೇಳಿಕೆಯ ನಂತರ, ಕೋವಿಡ್-19 ವಿಧಿಸಿದ ಲಾಕ್‌ಡೌನ್ ‌ನಿಂದಾಗಿ, ತೆರೆಯ ಮರೆಯಲ್ಲಿದ್ದ ಈ ಯೋಜನೆಗೆ ಸೆಪ್ಟೆಂಬರ್‌ನಲ್ಲಿ ಸರ್ವೇ ಕಾರ್ಯದ ಮೂಲಕ ಮತ್ತೆ ಚಾಲನೆ ದೊರೆತಿದೆ.

ಪ್ರಕೃತಿಯ ಮಡಿಲಲ್ಲಿರುವ ಕೊಲ್ಲೂರು ದೇವಾಲಯದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ, ಈ ಪ್ರಕೃತಿ
ವಿರೋಧಿ ಯೋಜನೆಯ ಸರ್ವೇಗೆ ಚಾಲನೆ ನೀಡಲಾಯಿತು! ಯೋಜನೆಯ ಪರವಾಗಿರುವವರು ಹೇಳುವ ಕೆಲವು ವಿಚಾರ ಗಳೆಂದರೆ – 6.3 ಕಿಮೀ ಉದ್ದನೆ ಈ ಉದ್ದೇಶಿತ ಯೋಜನೆಯು ಭಾರತದಲ್ಲೇ ಅತಿ ಉದ್ದನೆಯ ರೋಪ್ ವೇ ಆಗಿ ಮೂಡಿ ಬರಲಿದ್ದು, ಇಲ್ಲಿನ ಪ್ರವಾಸೋದ್ಯಮಕ್ಕೆ ಇಂಬು ಕೊಡಲಿದೆ. ಯುರೋಪಿಯನ್ ಮಾದರಿಯಲ್ಲಿ ರೋಪ್ ವೇ ಮಾಡಲಾಗುವುದು. (ಯುರೋಪಿಯನ್ ಮಾದರಿ ಎಂದರೇನು?) ಕೊಲ್ಲೂರಿನ ಹತ್ತಿರದಿಂದ ಆರಂಭವಾಗುವ ರೋಪ್‌ವೇ, ಕೊಡಚಾದ್ರಿ ಶಿಖರದಲ್ಲಿ
ಕೊನೆಯಾಗಲಿದ್ದು, ಇದರಲ್ಲಿ ಪಯಣಿಸುವವರು ಸುಂದರ ಕಾಡಿನ ದೃಶ್ಯ ನೋಡಬಹುದು.

ಇಂದು ಕೊಲ್ಲೂರಿನಿಂದ ಕೊಡಚಾದ್ರಿಗೆ ಜೀಪ್ ಮೂಲಕ ತಲುಪಲು ಒಂದರಿಂದ ಒಂದೂವರೆ ಗಂಟೆ ಬೇಕಾಗುತ್ತಿದ್ದು, ರೋಪ್‌ವೇ ಮೂಲಕ ಸಾಗಿದರೆ 15 ನಿಮಿಷಗಳಲ್ಲಿ ಶಿಖರ ತಲುಪಬಹುದು. ಪರಿಸರ ನಾಶ ಮಾಡದೇ ರೋಪ್ ವೇ ನಿರ್ಮಾಣ ಮಾಡಲಾಗುವುದು. ಜೀಪ್ ಡ್ರೈವರ್‌ಗಳು ರೋಪ್‌ವೇ ಆರಂಭದ ಜಾಗದ ತನಕ ಜನರನ್ನು ಕರೆದೊಯ್ಯಲು ಅವಕಾಶವಿದ್ದು, ಕೆಲಸ ಕಳೆದುಕೊಳ್ಳುವ ಭಯವಿಲ್ಲ..ಇತ್ಯಾದಿ ಇತ್ಯಾದಿ.

ಇದು ರೋಪ್‌ವೇ ಕಾಮಗಾರಿಗೆ ಚಾಲನೆ ನೀಡಿದವರ ಸಮರ್ಥನೆ. ಆದರೆ, ರೋಪ್‌ವೇ ನಿರ್ಮಾಣದ ವೇಳೆಯಲ್ಲಿ ಮರಗಿಡಗಳನ್ನು ನಾಶಮಾಡದೇ ಇರುವುದು ಸಾಧ್ಯವೇ ಇಲ್ಲ! ಉಪಕರಣಗಳನ್ನು ಸಾಗಿಸಲು ಕಾಡಿನ ನಡುವೆ ರಸ್ತೆ ನಿರ್ಮಾಣ, ಹಲವು ಕೆಲಸಗಾರರು ರೋಪ್‌ವೇ ದಾರಿಯುದ್ದಕ್ಕೂ ಓಡಾಡುತ್ತಾ ಅಲ್ಲಿನ ಪರಿಸರಕ್ಕೆ ತೊಂದರೆ ನೀಡುವುದು ಇವೆಲ್ಲಾ ಕಾಮಗಾರಿಯ ವೇಳೆ ನಡೆಯುತ್ತವೆ. ಈ ಯೋಜನೆಯು ತರುವ ಲಾಭಕ್ಕಿಂತ ಹಾನಿಯೇ ಜಾಸ್ತಿ. 6.8ಕಿಮೀ ಉದ್ದದ ರೋಪ್ ವೇ ನಿರ್ಮಿಸುವಾಗ,
ಸಹಜವಾಗಿ ಆ ದಾರಿಯುದ್ದಕ್ಕೂ ಕಾಡು, ಮರ, ಗಿಡ ನಾಶವಾಗುತ್ತದೆ. ಮಾತ್ರವಲ್ಲ ಆ ದಟ್ಟಕಾಡಿನಲ್ಲಿ ಸಾಗುವ ರೋಪ್‌ವೇ ಮಾರ್ಗದ ಭವಿಷ್ಯದ ನಿರಂತರ ಉಸ್ತುವಾರಿಗಾಗಿ, ಕಾಡಿನ ನಡುವೆ ರಸ್ತೆ ನಿರ್ಮಾಣವಾಗಲಿದ್ದು, ಆ ರಸ್ತೆಯ ಮೂಲಕ ಕಾಡುಗಳ್ಳರು, ಕಳ್ಳಬೇಟೆಗಾರರು ದಟ್ಟ ಅರಣ್ಯವನ್ನು ಪ್ರವೇಶಿಸಿ, ಅಲ್ಲಿನ ಅಪರೂಪದ ಪರಿಸರಕ್ಕೆ ಲಗ್ಗೆ ಇಡಲು ಅವಕಾಶ
ಮಾಡಿಕೊಟ್ಟಂತಾಗುತ್ತದೆ.

ಕೊಡಚಾದ್ರಿ ತಪ್ಪಲಿನ ಅಪರೂಪದ ವನ್ಯ ಸಂಪತ್ತಿನ ನಷ್ಟಕ್ಕೆ ದಾರಿ ಮಾಡಿಕೊಡುವ ಈ ರೋಪ್‌ವೇಯನ್ನು ಕೈಬಿಡಬೇಕು
ಎಂದು ಸ್ಥಳೀಯರು, ಪರಿಸರ ತಜ್ಞರು, ಪರಿಸರ ಪ್ರೇಮಿಗಳು ಕಳೆದ ಒಂದು ವರ್ಷದಿಂದ ಒತ್ತಾಯಿಸುತ್ತಲೇ ಬರುತ್ತಿದ್ದಾರೆ.
ಕೊಡಚಾದ್ರಿ ಶಿಖರ ತಲುಪಲು ಈಗ ಎರಡು ವಿಧಾನಗಳಿವೆ. ನಾಗೋಡಿ ಎಂಬ ಹಳ್ಳಿಯಿಂದ ಸುಮಾರು 2 ರಿಂದ 3 ಗಂಟೆ ಚಾರಣ ನಡೆಸಿ ಶಿಖರ ತಲುಪಬಹುದು.

ಪರ್ಯಾಯವಾಗಿ, ಕೊಲ್ಲೂರಿನಿಂದ ಅಥವಾ ಸಂಪೆಕಟ್ಟೆಯಿಂದ ಬಾಡಿಗೆ ಜೀಪಿನಲ್ಲಿ ಶಿಖರ ತಲುಪಬಹುದು. ಕಡಿದಾದ, ಸುಮಾರು ೧೦೦ ವರ್ಷಗಳ ಹಿಂದೆ ನಿರ್ಮಾಣಗೊಂಡ, ಅಗಲ ಕಿರಿದಾದ ಕಚ್ಚಾ ರಸ್ತೆಯಲ್ಲಿ ಸಾಗುವ ಜೀಪ್ ಪಯಣವು ನಿಜಕ್ಕೂ
ರೋಮಾಂಚಕಾರಿ ಮತ್ತು ತುಸು ಅಪಾಯಕಾರಿ ಎನ್ನಬಹುದು. ನುರಿತ ಚಾಲಕರು ಆ ಕಠಿಣ ರಸ್ತೆಯಲ್ಲಿ ಜೀಪ್ ನಡೆಸುವುದನ್ನು ನೋಡಿ, ಅನುಭವಿಸುವುದೇ ವಿಭಿನ್ನ ಅನುಭವ.

ರೋಪ್‌ವೇಗೆ ಸುರಿಯುವ ಅಪಾರ ಪ್ರಮಾಣದ ಹಣದ ಸಣ್ಣ ಭಾಗವನ್ನು ವ್ಯಯಿಸಿ, ಈ ಜೀಪ್ ರಸ್ತೆಯನ್ನು ಸುಗಮಗೊಳಿಸಿದರೆ,
ಪ್ರವಾಸೋದ್ಯಮಕ್ಕೆ ಸಾಕಷ್ಟು ಅನುಕೂಲವಾಗುತ್ತದೆ. ಕೊಡಚಾದ್ರಿಗೆ ರೋಪ್‌ವೇ ನಿರ್ಮಾಣಗೊಂಡರೆ, ಇಲ್ಲಿನ ಜೀಪ್ ಚಾಲಕರು ಕೆಲಸ ಕಳೆದುಕೊಳ್ಳುತ್ತಾರೆಂಬ ಸಣ್ಣ ಕಳವಳವೂ ಇದೆ. ಅವರೂ ಸೇರಿದಂತೆ, ಸ್ಥಳೀಯರು, ಪರಿಸರ ಪ್ರೇಮಿಗಳು ಎಲ್ಲರ ಒತ್ತಾಯ
ಒಂದೇ – ಆ ದಟ್ಟ ಕಾಡಿನ ನಡುವೆ, ಅಲ್ಲಿನ ಅಪರೂಪದ ಮತ್ತು ಸೂಕ್ಷ್ಮ ಜೈವಿಕ ವಲಯದ ನಡುವೆ, ಸಾಕಷ್ಟು ಪರಿಸರವನ್ನು ಹಾನಿಮಾಡುವ ರೋಪ್‌ವೇ ನಿರ್ಮಾಣ ಬೇಡವೇ ಬೇಡ.

ರೋಪ್‌ವೇ ನಿರ್ಮಾಣಗೊಂಡ ನಂತರ ನಿರಂತರ ಉಸ್ತುವಾರಿಗಾಗಿ ಕಾಡಿನ ನಡುವೆ ನಿರ್ಮಾಣ ವಾಗಬಹುದಾದ ಸಂಪರ್ಕ ರಸ್ತೆಯಿಂದಾಗಿ, ಆ ಸುತ್ತಲಿನ ಎಲ್ಲಾ ಕಾಡುಪ್ರದೇಶಗಳು ಕ್ರಮೇಣ ನಿರ್ನಾಮವಾಗಿ ಹೋಗುತ್ತವೆ. ಉಳಿದುಕೊಂಡಿರುವ ಈ ಕಾಡನ್ನು ಹೀಗೆಯೇ ಇರಗೊಡಬೇಕೆಂದರೆ, ಕೊಡಚಾದ್ರಿಗೆ ರೋಪ್‌ವೇ ನಿರ್ಮಾಣ ಮಾಡಲೇ ಬಾರದು ಎಂಬ ಸ್ಥಳೀಯರ ಮತ್ತು ಪರಿಸರ ಪ್ರೇಮಿಗಳ ಒಕ್ಕೊರಲ ಒತ್ತಾಯದಲ್ಲಿ, ಪ್ರಾಮಾಣಿಕ ಕಳಕಳಿ ಇದೆ.

ಇಂತಹದೇ ಕಾಮಗಾರಿಯೊಂದನ್ನು ಮಾಡಲೇ ಬೇಕೆಂದಿದ್ದರೆ, ಅದೇ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಜೋಗ ಜಲಪಾತದ ಬಳಿ ರೋಪ್‌ವೇ ನಿರ್ಮಿಸಲಿ, ಕೊಡಚಾದ್ರಿಯನ್ನು ಈಗಿರುವಂತೆಯೇ ಇರಲು ಬಿಡಿ – ಇದು ಪರಿಸರ ಪ್ರೇಮಿಗಳ ಅಭಿಲಾಷೆ, ಕಳಕಳಿ