Thursday, 12th December 2024

ತಿಳಿಮುಗಿಲ ತೊಟ್ಟಿಲಲಿ ಚಂದಿರನನ್ನಿಟ್ಟ ಕವಿಯ ಬದುಕು – ಬವಣೆ

ತಿಳಿರು ತೋರಣ

srivathsajoshi@yahoo.com

ಎಸ್.ವಿ.ಪರಮೇಶ್ವರ ಭಟ್ಟರೆಂದರೆ ಬಹುಶಃ ಕವನ-ಕಥೆ ಅಂತೆಲ್ಲ ಬರೆದುಕೊಂಡು ಆರಾಮಾಗಿದ್ದವರು, ಜುಬ್ಬಾಧಾರಿಯಾಗಿ ಹೆಗಲಿಗೊಂದು ಚೀಲ ಜೋತಾಡಿಸಿಕೊಂಡು ಅಡ್ಡಾಡುತ್ತಿದ್ದವರು, ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನೂ ಬಾಚಿಕೊಂಡವರು, ಅಕ್ಷರಶಃ ತಿಳಿಮುಗಿಲ ತೊಟ್ಟಿಲಲ್ಲಿ ಮಲಗಿದ್ದ ಚಂದಿರನಂತೆ ನವಮೇಘಗಳ (‘ಕ್ಲೌಡ್ ನೈನ್’) ಮೇಲೆ ತೇಲುತ್ತಿದ್ದವರಿರ ಬಹುದು…’ ಎಂದು ಯಾರಾದರೂ ಅಂದುಕೊಂಡಾರು.

‘ಅನುಭವದ ಶಾಲೆಯಲಿ ಹಾಜರಾತಿಯ ಹಾಕಿಲ್ಲದೆ ಬುದ್ಧಿ ಬಾರದಯ್ಯ, ತರಗತಿಯ ಕಲಿಕೆಯ ಕನಕಕ್ಕೆ ಅನುಭವವೇ ಒರೆಗಲ್ಲು ಕಾಣಿರಯ್ಯ, ಹೊತ್ತಿಗೆಯ ಓದಿನ ವಜ್ರಕೆ ಪ್ರಯೋಗವೇ ಸಾಣೆ ಕಾಣಿರಯ್ಯ, ಓಜರ ಬೋಧನೆಯ ಮುತ್ತಿಗೆ ಸ್ವವಿಚಾರ ಪರಾಮರ್ಶನೆ ಕುಂದಣ ಕಾಣಿರಯ್ಯ, ಇಂತಲ್ಲದೆ ಬರಿಯ ಓದು ಸರ್ಕಸ್ಸಿನ ಆಟವಯ್ಯ ಸದಾಶಿವಗುರು.’ – ಹೀಗೆಂದವರು ಡಾ. ಎಸ್.ವಿ.ಪರಮೇಶ್ವರ ಭಟ್ಟ.

‘ಸದಾಶಿವಗುರು’ ಅಂಕಿತದಿಂದ ಅವರು ರಚಿಸಿದ ನೂರಾರು ಮುಕ್ತಕಗಳಲ್ಲಿ ಇದೂ ಒಂದು. ಅನುಭವದ ಶಾಲೆ ಎಂದು ಅವರೆಂದದ್ದು ಯಾವುದನ್ನು, ಮತ್ತು ಅವರಿಗೆ ಆ ಅನುಭವ ಎಷ್ಟು ಗಾಢವಾಗಿ ಇತ್ತು ಎಂದು ಆಮೇಲೆ ನೋಡೋಣ. ಎಸ್.ವಿ.ಪರಮೇಶ್ವರ ಭಟ್ಟ ಎಂದೊಡನೆ ನಮಗೆ ಥಟ್ಟನೆ ನೆನಪಾಗುವುದು ‘ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ ಗಾಳಿ ಜೋಗುಳ ಹಾಡಿ ತೂಗುತ್ತಿತ್ತು…’ ಭಾವಗೀತೆ ಮತ್ತು ಇನ್ನೊಂದು ಅಷ್ಟೇ ಜನಪ್ರಿಯವಾದ ಗೀತೆ ‘ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ ನೀ ಬಂದು ನಿಂದಿಲ್ಲಿ ದೀಪ ಹಚ್ಚ…’ ಇವೆರಡರ ಜನಪ್ರಿಯತೆಗೇನೋ ಕನ್ನಡದ ಸುಗಮಸಂಗೀತಗಾರರೇ ಕಾರಣ ನಿಜ; ಆದರೆ, ಎಸ್.ವಿ.ಪರಮೇಶ್ವರ ಭಟ್ಟರೆಂದರೆ ಈ ಎರಡು ಭಾವಗೀತೆಗಳು ಎಂದಷ್ಟೇ ಯಾರಾದರೂ ಅಂದು ಕೊಂಡರೆ ಅಂಥವರು ಕನ್ನಡ ಸಾಹಿತ್ಯ ಸಾಗರದಲ್ಲೊಂದು ಹಿಮಬಂಡೆಯ ತುದಿಯನ್ನು (ಟಿಪ್ ಆಫ್ ದಿ ಐಸ್‌ಬರ್ಗ್) ಒಂದರ್ಧ ಇಂಚನ್ನಷ್ಟೇ ನೋಡಿದ್ದಾರೆಂದು ಅರ್ಥ.

ಅಷ್ಟು ಆಳವೂ ಅಗಲವೂ ಇದೆ ಪರಮೇಶ್ವರ ಭಟ್ಟರೆಂಬ ಅಕ್ಷರಸಾಗರ. ಜನ್ಮವೆಲ್ಲ ಕಳೆದರೂ ಹೀರಿ ಮುಗಿಸಲಾರೆವು ಅದರ ಸಂಪೂರ್ಣ ಸಾರ. ಸಾಹಿತಿಗಳ ಪರಿಚಯದ ಟಿಪಿಕಲ್ ರೀತಿಯಲ್ಲಷ್ಟೇ ಇವರನ್ನು ಪರಿಚಯಿಸುವುದಾದರೆ: ‘೧೯೧೪ರ ಫೆಬ್ರವರಿ ೮ರಂದು ತೀರ್ಥಹಳ್ಳಿ ತಾಲೂಕಿನ ಮಾಳೂರಿನಲ್ಲಿ ಜನನ. ತಂದೆ ಸದಾಶಿವರಾಯರು, ತಾಯಿ ಲಕ್ಷ್ಮಮ್ಮ.  ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ತೂದೂರುಕಟ್ಟೆ ಎಂಬ ಹಳ್ಳಿಯಲ್ಲಿ.

ಬಾಲ್ಯದಲ್ಲಿ ಕೃಷ್ಣನ ವೇಷ ಹಾಕಿ ಯಕ್ಷಗಾನದಲ್ಲಿ ಅಭಿನಯಿಸಿದ್ದರು. ತೀರ್ಥಹಳ್ಳಿಯಲ್ಲಿ ಪ್ರೌಢಶಾಲೆಯ ಓದು. ಕಮಕೋಡು ನರಸಿಂಹ ಶಾಸ್ತ್ರಿಗಳು ಇವರ ಗುರುಗಳು. ಇಂಟರ್‌ಮೀಡಿಯೆಟ್ ಓದಿದ್ದು ಬೆಂಗಳೂರಿನಲ್ಲಿ. ಕಾಲೇಜು ವಿದ್ಯಾಭ್ಯಾಸ (ಬಿ.ಎ. ಆನರ್ಸ್) ಮೈಸೂರಿನಲ್ಲಿ, ಆಗ ಜಿ. ವೆಂಕಟಸುಬ್ಬಯ್ಯನವರು ಸಹಪಾಠಿ. ಬಿಎಂಶ್ರೀ ಮತ್ತು ಟಿ. ಎಸ್. ವೆಂಕಣ್ಣಯ್ಯ ಹಿರಿಯ ಪ್ರಾಧ್ಯಾಪಕರು. ಸ್ನಾತಕೋತ್ತರ ಶಿಕ್ಷಣಕ್ಕೆ ತೀನಂಶ್ರೀ ಮತ್ತು ಡಿ.ಎಲ್.ನರಸಿಂಹಾಚಾರ್ಯರು ಗುರುಗಳು. ಪರೀಕ್ಷೆಯಲ್ಲಿ ಚಿನ್ನದ ಪದಕ.

ಮೈಸೂರು ಯುವರಾಜ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ. ಶಿವಮೊಗ್ಗ, ತುಮಕೂರು ಕಾಲೇಜುಗಳಲ್ಲೂ ದುಡಿದು ಮತ್ತೆ
ಮೈಸೂರಿಗೆ, ತದನಂತರ ಮಂಗಳೂರಿಗೆ ವರ್ಗಾವಣೆ. ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕತ್ವ. ಮಂಗಳಗಂಗೋತ್ರಿ ಎಂದು
ನಾಮಕರಣ ಮಾಡಿ, ಅದೇ ವಿಶ್ವವಿದ್ಯಾಲಯವಾಗಿ ಅದರ ಸಮಗ್ರ ವಿಕಾಸದ ಶಿಲ್ಪಿಯೆನಿಸಿಕೊಂಡರು. ನಿವೃತ್ತಿಯ ಬಳಿಕವೂ
ಯುಜಿಸಿ ಸಂಶೋಧನಾ ಪ್ರಾಧ್ಯಾಪಕರಾಗಿ ಕೆಲಸ. ಇಂಟರ್ ಮೀಡಿಯೆಟ್‌ನಲ್ಲಿದ್ದಾಗಲೇ ಕವನ ಬರೆಯುವ ಹುಚ್ಚು. ಅಂದಿನ
ಸುಬೋಧ, ಕಲಾ, ಸರಸ್ವತಿ, ವಿಶ್ವವಾಣಿ ಪತ್ರಿಕೆಗಳಲ್ಲಿ ಪ್ರಕಟ.

ವಿ.ಸೀತಾರಾಮಯ್ಯ, ಎ.ಆರ್. ಕೃಷ್ಣಶಾಸ್ತ್ರೀ ಮುಂತಾದವರಿಂದ ಪ್ರೋತ್ಸಾಹ. ೧೯೪೦ರಲ್ಲಿ ಬೆಳಕುಕಂಡ ಕವನಸಂಕಲನ ‘ರಾಗಿಣಿ’ ಮೊತ್ತಮೊದಲ ಕಾವ್ಯಕೃತಿ. ಗಗನಚುಕ್ಕಿ, ಸಂಜೆಮಲ್ಲಿಗೆ, ಸುರಗಿ ಮುಂತಾದ ೧೧ ಕವನ ಸಂಕಲನಗಳು; ಇಂದ್ರಚಾಪ, ಚಿತ್ರಕಥೆ, ತುಂಬೆಹೂ ಮುಕ್ತಕ ಸಂಗ್ರಹಗಳು; ಉಪ್ಪುಕಡಲು, ಪಾಮರ, ಉಂಬರ ವಚನಸಂಕಲನಗಳು; ಸೀಳುನೋಟ, ಅಕ್ಕಮಹಾದೇವಿ, ಭಾವಗೀತೆ ಮುಂತಾದ ವಿಮರ್ಶಾ ಗ್ರಂಥಗಳು. ಹಾಸ್ಯ ಮುಕ್ತಕಗಳ ಮೂಲಕ ಕಾವ್ಯದಲ್ಲಿ ಹಾಸ್ಯದ ಹೊನಲು.

ಕಾಳಿದಾಸ, ಹರ್ಷ, ಭಾಸ, ಭರ್ತೃಹರಿ, ಅಮರು, ಅಶ್ವಘೋಷ, ಜಯದೇವ ಮೊದಲಾದ ಸಂಸ್ಕೃತ ಕವಿವರೇಣ್ಯರ ಸಮಗ್ರ ಕೃತಿಗಳ ಕನ್ನಡ ಅನುವಾದ. ೮೬ ವರ್ಷಗಳ ತುಂಬು ಜೀವನದಲ್ಲಿ ಕನ್ನಡ ಸಾಹಿತ್ಯಕ್ಕೆ ೬೦ಕ್ಕೂ ಹೆಚ್ಚು ಮೌಲ್ಯಯುತ ಕೃತಿಗಳ ಕೊಡುಗೆ ನೀಡಿದ ಭಟ್ಟರು ಬಹುಶ್ರುತ ವಿದ್ವಾಂಸರು. ನಾಡು-ನುಡಿಯ ಹಿರಿತನವನ್ನು ಸಹಸ್ರಾರು ಶಿಷ್ಯರಲ್ಲಿ ಬಿತ್ತಿದ ಶ್ರೇಷ್ಠ ಪ್ರಾಧ್ಯಾಪಕ.

ಶೃಂಗೇರಿ ವಿದ್ಯಾರಣ್ಯಪುರ ಎಂದು ಹೆಸರಿನಲ್ಲಿರುವ ಇನಿಷಿಯಲ್ಸ್‌ಗೆ ಸರಿಯಾಗಿ ಸರಸ್ವತೀಪುತ್ರ. ಬಂದ ಪ್ರಶಸ್ತಿಗಳು ಹಲವಾರು: ‘ಚಂದ್ರವೀಥಿ’ಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ‘ಕನ್ನಡ ಕಾಳಿದಾಸ ಮಹಾ ಸಂಪುಟ’ಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ಚಾವುಂಡರಾಯ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ.

ಮೈಸೂರು ಮತ್ತು ಕುವೆಂಪು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್. ‘ಪೂರ್ಣಕುಂಭ’ ಅಭಿನಂದನ ಗ್ರಂಥ. ೨೦೦೦ ಅಕ್ಟೋಬರ್ ೨೭ರಂದು ಪರಮೇಶ್ವರ ಭಟ್ಟರು ಪರಮೇಶ್ವರನ ಪಾದ ಸೇರಿದರು.’ ಮೇಲಿನ ಪರಿಚಯವನ್ನಷ್ಟೇ ಓದಿದರೆ ‘ಓಹೋ! ಹಾಗಿದ್ದರೆ ಎಸ್.ವಿ.ಪರಮೇಶ್ವರ ಭಟ್ಟರೆಂದರೆ ಬಹುಶಃ ಕವನ-ಕಥೆ ಅಂತೆಲ್ಲ ಬರೆದುಕೊಂಡು ಆರಾಮಾಗಿದ್ದವರು, ಜುಬ್ಬಾಧಾರಿಯಾಗಿ ಹೆಗಲಿಗೊಂದು ಚೀಲ ಜೋತಾಡಿಸಿಕೊಂಡು ಅಡ್ಡಾಡುತ್ತಿದ್ದವರು, ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನೂ ಬಾಚಿಕೊಂಡವರು, ಅಕ್ಷರಶಃ ತಿಳಿಮುಗಿಲ ತೊಟ್ಟಿಲಲ್ಲಿ ಮಲಗಿದ್ದ ಚಂದಿರನಂತೆ ನವಮೇಘಗಳ (‘ಕ್ಲೌಡ್ ನೈನ್’) ಮೇಲೆ ತೇಲುತ್ತಿದ್ದವರಿರಬಹುದು…’ ಎಂದು ಯಾರಾದರೂ ಅಂದುಕೊಂಡಾರು.

ಅವರಿಗೇನು ಗೊತ್ತು ಆ ಚಂದಿರನಿಗಿದ್ದ ಇನ್ನೊಂದು ಕಡೆಯ ಗಾಢಾಂಧಕಾರದ ಮುಖ! ಪರಮೇಶ್ವರ ಭಟ್ಟರು ತಮ್ಮ ಬವಣೆಗಳನ್ನು ಯಾರೊಂದಿಗೂ ಹೇಳಿಕೊಂಡವರಲ್ಲ. ತನ್ನ ಸ್ಥಿತಿಗೆ ಯಾರುಯಾರನ್ನೋ ದೂರುತ್ತ ಗೊಣಗಿದವರಲ್ಲ. ಸ್ತಿಮಿತ ಕಳೆದುಕೊಂಡು ಇನ್ನೊಬ್ಬರ ಮೇಲೆ ಹರಿಹಾಯ್ದವರಲ್ಲ. ಹಾಗಾಗಿ ಅವರ ಬಗೆಗಿನ ಕವಿ-ಕೃತಿ ಪರಿಚಯದಲ್ಲಿ, ಲೇಖನಗಳಲ್ಲಿ ಬಹುಮಟ್ಟಿಗೆ ಸಾಹಿತ್ಯಿಕ ಸಾಧನೆಗಳ ಉಲ್ಲೇಖವಷ್ಟೇ ಇರುತ್ತದೆ. ಹೆಚ್ಚೆಂದರೆ ‘ಅವರ ಜೀವನವೆಂಬುದು ಸುದೀರ್ಘ ನಿಟ್ಟುಸಿರಾಗಿತ್ತಾದರೂ ಅವರು ಆತ್ಮಾನುಕಂಪದಿಂದ ಖಿನ್ನತೆಯ ಆಳಕ್ಕಿಳಿಯದೇ ಬೇಂದ್ರೆಯವರಂತೆ ತಮ್ಮ ಪಾಡೆಲ್ಲವನ್ನೂ ಹಾಡಾಗಿಸಿಕೊಂಡರು’ ರೀತಿಯ ಒಂದೆರಡು ವಾಕ್ಯ.

ಆದ್ದರಿಂದ ಒಟ್ಟಾರೆಯಾಗಿ ಅವರ ಆಪ್ತಶಿಷ್ಯರಲ್ಲಿ ಕೆಲವರಿಗೆ, ಮತ್ತೊಂದಿಷ್ಟು ಆತ್ಮೀಯ ಬಂಧುಮಿತ್ರರಿಗೆ, ‘ಇಂದ್ರಚಾಪ’ದ
ಮುಕ್ತಕಗಳಲ್ಲಿ ‘ನನ್ನ ಬಾಳಿನ ಗಾಡಿಗೆ ಅಪಘಾತವೆಂಬುದು ನಿತ್ಯದ ಮಾತಾಯ್ತು’ ಎಂಬಂಥ ನುಡಿಗಳಲ್ಲಿ ವ್ಯಕ್ತವಾಗಿರುವುದು
ಕವಿಯ ಕೌಟುಂಬಿಕ ಜೀವನದ ತಲ್ಲಣಗಳೇ ಎಂದು ಅರ್ಥಮಾಡಿಕೊಂಡ ಕೆಲವೇಕೆಲವು ಓದುಗರಿಗೆ ಮಾತ್ರ ಪರಮೇಶ್ವರ
ಭಟ್ಟರ ನೋವುಗಳು ಗೊತ್ತು. ಉಳಿದಂತೆ ಪ್ರಪಂಚಕ್ಕೆಲ್ಲ ಅವರು ಹಂಚಿದ್ದು ನಲಿವನ್ನು, ನಗುವನ್ನು, ಮತ್ತು ಆಸಕ್ತರಿಗೆ ಜ್ಞಾನವನ್ನು.

ಅಷ್ಟೇ. ಚಾರ್ಲಿ ಚಾಪ್ಲಿನ್ನನ ಹಾಗೆ. ನನಗಾದರೂ ಅಷ್ಟೇ- ಎಸ್.ವಿ.ಪರಮೇಶ್ವರ ಭಟ್ಟರ ಕಷ್ಟಕಾರ್ಪಣ್ಯಗಳ ಬಗ್ಗೆ ಗೊತ್ತಾದದ್ದು ಅವರ ಒಬ್ಬ ಆಪ್ತಶಿಷ್ಯರಿಂದಲೇ. ನನ್ನ ಓದುಗಮಿತ್ರರೂ ಹಿರಿಯ ಹಿತೈಷಿಯೂ ಆಗಿರುವ ಮೈಸೂರಿನ ರಾಘವೇಂದ್ರ ಭಟ್ಟರು ಆಗೊಮ್ಮೆ ಈಗೊಮ್ಮೆ ಸಾಂದರ್ಭಿಕವಾಗಿ ತನ್ನ ಗುರುಗಳ ಬಗ್ಗೆ ಉಲ್ಲೇಖಿಸುವುದುಂಟು. ಅವರಂತೂ ಪರಮೇಶ್ವರ ಭಟ್ಟರನ್ನು ಪುಣ್ಯಜೀವಿ ಎಂದು ಅನುದಿನವೂ ನೆನೆಯುವವರು.

‘ಮಾನಸ ಗಂಗೋತ್ರಿಯಲ್ಲಿ ನಮಗೆ ಪಾಠ ಮಾಡುವಾಗ ಪರಮೇಶ್ವರ ಭಟ್ಟರು ತನ್ನ ಕಿರಿಯ ಮಗ- ಸುಮಾರು ನಾಲ್ಕೈದು ವರ್ಷದ- ಪ್ರಕಾಶನನ್ನು ಜೊತೆಯಲ್ಲಿ ಕರೆತಂದು ತಾವು ಪಾಠ ಮಾಡುವ ಪ್ಲಾಟ್ ಫಾರಮ್ಮಿನ ಒಂದು ತುದಿಯಲ್ಲಿ ಕೂರಿಸಿಡುತ್ತಿದ್ದರು. ಅವನು ಪಿಳಿಪಿಳಿ ಕಣ್ಣುಬಿಟ್ಟು ಅಪ್ಪನನ್ನೂ ನಮ್ಮನ್ನೂ ನೋಡುತ್ತ ಸುಮ್ಮನಿರುತ್ತಿದ್ದನು. ಭಟ್ಟರು ವಿದ್ಯಾರ್ಥಿಗಳನ್ನುದ್ದೇಶಿಸಿ ನೋಡಿರೋ, ನೀವೆಲ್ಲಾ ಎಷ್ಟೆಷ್ಟೋ ವರ್ಷ ಓದಿ ಏನೆಲ್ಲಾ ಖರ್ಚುಮಾಡಿ ಇಲ್ಲಿ ಬಂದಿದ್ದೀರಿ; ಇವನು ನೋಡಿ ಈ ವಯಸ್ಸಿಗೇ ಇಲ್ಲಿದ್ದಾನೆ!

ಎನ್ನುವರು. ನೋವನ್ನು ನುಂಗಿಕೊಂಡು ನಗುವುದೆಂದರೆ ಇದೇ ಅಲ್ಲವೇ?’ ಎಂದು ರಾಘವೇಂದ್ರ ಭಟ್ಟರು ಒಮ್ಮೆ ಬರೆದಿದ್ದರು.
ಪುಟ್ಟ ಮಗುವನ್ನೇಕೆ ಪರಮೇಶ್ವರ ಭಟ್ಟರು ಕ್ಲಾಸಿಗೆ ಕರೆದುಕೊಂಡು ಬರುತ್ತಿದ್ದರು? ‘ಬೇರೆ ಉಪಾಯವಿಲ್ಲ. ಭಟ್ಟರ ಹಿರಿಯ ಮೂವರು ಮಕ್ಕಳೇನೋ ಶಾಲೆಗೆ ಹೋಗಿದ್ದರು. ಕಿರಿಯ ಮಗುವನ್ನು ಮನೆಯಲ್ಲಿ ಒಬ್ಬನನ್ನೇ ಬಿಟ್ಟು ಬರುವಂತಿಲ್ಲ. ಮಡದಿ ಅಣ್ಣನ ಮನೆಗೆ ಹೋಗಿದ್ದರು.’ ಇದೇ ಚಿತ್ರಣವನ್ನು ಪರಮೇಶ್ವರ ಭಟ್ಟರ ಇನ್ನೊಬ್ಬ ಶಿಷ್ಯ ಗಣೇಶ ರಾವ್ ಕುತ್ಯಾಡಿ (ನನಗವರ ಪರಿಚಯವಿಲ್ಲ, ಯುಟ್ಯೂಬ್‌ನಲ್ಲಿ ನೋಡಿದ್ದು) ನೆನಪಿಸಿಕೊಳ್ಳುತ್ತಾರೆ.

‘ಕನ್ನಡ ಮೇಜರ್ ತಗೊಂಡವರಿಗೆ ಭಟ್ಟರು ಭರ್ತೃಹರಿಯ ವೈರಾಗ್ಯಶತಕ ಪದ್ಯಗಳನ್ನು ಕಲಿಸುತ್ತಿದ್ದರು. ಭಟ್ಟರ ಮಗು ಯಥಾಪ್ರಕಾರ ಅಪ್ಪನನ್ನೇ ನೋಡುತ್ತ ಕುಳಿತಿತ್ತು. ಸ್ವಲ್ಪ ತಾಳು ಮಗೂ, ಇನ್ನೂ ಒಳ್ಳೊಳ್ಳೇ ತಮಾಷೆಯ ಪದ್ಯಗಳು ಬರಲಿಕ್ಕಿವೆ ಎಂದು ಭಟ್ಟರು ಮಗುವನ್ನು ಸಮಾಧಾನಿಸುವರು. ಒಂದುದಿನ ದುಃಖದ ಕಟ್ಟೆಯೊಡೆದು, ಅಯ್ಯೋ ಈ ಚಿಕ್ಕ
ವಯಸ್ಸಿನಲ್ಲಿ ನೀನು ವೈರಾಗ್ಯಶತಕ ಕೇಳುತ್ತ ಕೂರಬೇಕಾಯ್ತಲ್ಲ ಎಂದು ಭಟ್ಟರು ಕಣ್ಣೀರುಗರೆದರು.

ಸದಾ ನಗು- ವಿನೋದಗಳಿರುತ್ತಿದ್ದ ತರಗತಿಯಲ್ಲಿ ಆಗ ನೀರವ ಮೌನ. ಎಲ್ಲರೂ ಗುರುಗಳಿಗೆ ಕೈಮುಗಿದು ಕುಳಿತಿದ್ದೆವು.’
ಪರಮೇಶ್ವರ ಭಟ್ಟರ ಮತ್ತೊಬ್ಬ ಶಿಷ್ಯ ಪ್ರೊ.ಅ.ರಾ.ಮಿತ್ರ ಇದರ ಹಿನ್ನೆಲೆಯನ್ನು ಹೃದಯಸ್ಪರ್ಶಿಯಾಗಿ ವಿವರಿಸಿದ್ದಾರೆ:
‘ಭಟ್ಟರಿಗೆ ಒಂದು ದೊಡ್ಡ ಯಾತನೆ ಏನಿತ್ತೆಂದರೆ ಅವರ ಹೆಂಡತಿ ರಾಜಲಕ್ಷ್ಮಿಯವರಿಗೆ ಬಂದೆರಗಿದ್ದ ಮನೋವೈಕಲ್ಯ. ಪಾಪ ಆಕೆ ತುಂಬ ಒಳ್ಳೆಯ ಹೆಂಗಸು. ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದ ಎಚ್.ಕೆ.ರಂಗನಾಥರ ಸ್ವಂತ ತಂಗಿ.

ವಿದ್ಯಾವಂತೆ, ಬುದ್ಧಿವಂತೆ. ಮನೆಗೆ ಬಂದವರಿಗೆ ಉಪಚಾರ ಮಾಡೋದ್ರಲ್ಲೆಲ್ಲ ಪ್ರಸಿದ್ಧ. ಅದೇನಾಯ್ತೋ, ಬಾಣಂತನದ ಬಳಿಕ ಬರುವ ಹಿಸ್ಟೀರಿಯಾ ಅಂತ ಕಾಣುತ್ತೆ, ಒಮ್ಮಿಂದೊಮ್ಮೆಗೇ ಮಂಕಾಗಿ ಬಿಟ್ಟರು. ಒಬ್ಬರೇ ಕುಳಿತುಕೊಂಡು ತುಂಬ ಯೋಚ್ನೆ
ಮಾಡೋರು. ಮಕ್ಕಳನ್ನು ನೋಡ್ಕೊಳ್ತಿರಲಿಲ್ಲ, ಮನೆಕೆಲಸ ಮಾಡ್ತಿರಲಿಲ್ಲ. ಆಮೇಲೆ ರಂಗನಾಥ್ ಬಂದು ತಂಗಿಯನ್ನು ಕರೆದುಕೊಂಡು ಹೋದರು, ಮನೆಗೆ ಹೋಗೋಣ ಎಂದು ಪುಸಲಾಯಿಸಿ ಮನೋವೈದ್ಯರಲ್ಲಿಗೆ ಒಯ್ದರು.

ಸ್ವಲ್ಪ ಕಾಲ ಅಲ್ಲೇ ಇರಬೇಕಾಯ್ತು. ಅಣ್ಣ ಅಂದ್ರೆ ತುಂಬ ಪ್ರೀತಿಗೌರವ ಇದ್ದ ರಾಜಲಕ್ಷ್ಮಿ, ಅಣ್ಣ ನನಗೆ ಮೋಸ ಮಾಡಿದ ಎಂದು ಹೇಳ್ತಿದ್ದರಂತೆ. ಅಂತೂ ಸ್ವಲ್ಪ ಚೇತರಿಸಿ ಗಂಡನ ಮನೆಗೆ ಮರಳಿದಮೇಲೆ ಮತ್ತೊಮ್ಮೆ ರಂಗನಾಥ್ ತಂಗಿಯನ್ನು ನೋಡೋಕೆ ಹೋಗಿದ್ದರು. ಅವರ ವ್ಯಾನ್ ನೋಡಿ ಹಿಂದಿನ ಸಲದ ಘಟನೆ ನೆನಪಾಗಿ ರಾಜಲಕ್ಷ್ಮಿ ಜೋರಾಗಿ ಚೀರಿದರಂತೆ. ಮತ್ತೆ ಆಘಾತ, ಮತ್ತೆ ಚಿಕಿತ್ಸೆ. ಇತ್ತ ಮನೆಗೆಲಸ, ಅಡುಗೆ-ಊಟ, ಮಕ್ಕಳ ಪೋಷಣೆ ಎಲ್ಲ ಜವಾಬ್ದಾರಿ ಭಟ್ಟರ ಹೆಗಲಿಗೇ ಬಿತ್ತು.

ಯುನಿವರ್ಸಿಟಿಯಲ್ಲಿ ಪಾಠ ಮಾಡಲಿಕ್ಕೆ ಬೇರೆ ಹೋಗಬೇಕು! ಅಲ್ಲದೇ, ಆಗ ಕಾಳಿದಾಸನ ಕೃತಿಗಳನ್ನು ಕನ್ನಡಕ್ಕೆ ತರುವ ಕಾರ್ಯಕ್ಕೆ ತೊಡಗಿದ್ದರು. ಅಂಥ ಪ್ರಕ್ಷುಬ್ಧ ಮನಃಸ್ಥಿತಿಯಲ್ಲಿ ಅದು ಹೇಗೆ ಸಮಯ ಮಾಡ್ಕೊಂಡ್ರೋ, ಅದುಹೇಗೆ ಬರೆದ್ರೋ ದೇವನೇ ಬಲ್ಲ. ‘ಮಡದಿಯನಾರೈವೆ, ಮಕ್ಕಳಿಗುಣಿಸುವೆ, ಬಂದವರನು ನೋಡಿಕೊಳುವೆ, ಮನೆಯೇ ತಪೋವನ. ಪೂಜೆ ಗೃಹಕೃತ್ಯ. ದೇವರಿಗೆ ಇದೇ ನನ್ನ ಸೇವೆ’ ಎಂದು ಅವರೇ ಒಂದುಕಡೆ ಬರೆದುಕೊಂಡಿದ್ದಾರೆ.

ಪ್ರೀತಿಯ ಮಡದಿಗೆ ಬಂದೊದಗಿದ ಕಷ್ಟಗಳ ಬಗ್ಗೆಯೂ ದುಗುಡದ ಭಾಷೆಯಲ್ಲಿ ಬರೆದಿದ್ದಾರೆ. ‘ಮನೆಯಾಕೆಯಾರೋಗ್ಯ
ಇದ್ದಕಿದ್ದಂತೆಯೇ ಕೆಟ್ಟಿತು ಏತಕೋ ಅರಿಯೆ… ಅಂಜಿಕೆ ಎನಲಾರೆ ಶಂಕೆಯೆಂದೆನಲಾರೆ ತಾನಾದಳ್ ಒಮ್ಮೆಗೇ ಅಽರೆ… ಯಾರೋ ಸತ್ತವರನ್ನು ಯಾರೋ ಹೆತ್ತವರನ್ನು ಮತ್ತೆ ಕಂಡಂತಾಗಿ ಚೀರಿ… ಚಿತ್ತದುದ್ವೇಗದೊಳ್ ಅನ್ನಪಾನಂಗಳನು ಮರೆತಳು ಆಕೆ ಹೌಹಾರಿ… ನೋಟದೊಳಾವುದೊ ವೇದನೆ ತೋರಿತು ನಾನದ ಬಣ್ಣಿಸಲರಿಯೆ… ಮಾತಿನೊಳಾವುದೊ ಸಂಕಟ ಏರಿತು ನಾನದ ಅರ್ಥೈಸಲರಿಯೆ… ಬಹುಬಗೆಯಿಂದ ಉಪಚರಿಸಿದರೆಲ್ಲರು ಈಕೆಯ ಒಡಹುಟ್ಟಿದವರು… ಮಗಳ ಆರೈಕೆಯೊಳು ಅರೆಯಾಗಿ ಹೋದರು ಮುಪ್ಪಿನ ತಂದೆತಾಯಿಯರು… ತಿಳಿಗೇಡಿ ಹೇಡಿಯ ಮನದ ಪೊಟರೆಯೊಳು ಒಮ್ಮೆ ಭೀತಿಯ ಹಕ್ಕಿ… ಹೊಗಲು ನೂರಾರು ಶಂಕೆಯ ಕಸಕಡ್ಡಿಗಳನೊಡ್ಡಿ ನೆಲೆನಿಲ್ಲುವುದು ಗೂಡು ಕಟ್ಟಿ.’ ಭಟ್ಟರು ಗಂಭೀರವಾಗಿ ದುಃಖಗಳನ್ನು ತಡೆದುಕೊಂಡರು.

ಯಾರಲ್ಲೂ ಹೇಳಿಕೊಳ್ಳದೆ ಶಾಂತ ಮನಸ್ಸಿನಿಂದ ಬರವಣಿಗೆ ಮುಂದುವರಿಸಿದರು. ಅಗಮ್ಯ ಯಾತನೆಯನ್ನು ಅಂತರಂಗದಲ್ಲೇ ಸಹಿಸಿಕೊಂಡರು.’ ಅಷ್ಟಾಗಿ ಪತ್ನಿಯ ಮೇಲೆ ಒಂದಿನಿತಿದಾರೂ ಅಸಮಾಧಾನಗೊಂಡರೇ? ಇಲ್ಲ! ಮೇಘದೂತ ಕಾವ್ಯದ ಕನ್ನಡ ಅನುವಾದವನ್ನು ಭಟ್ಟರು ಅರ್ಪಣೆ ಮಾಡಿದ್ದು ಪತ್ನಿಗೇ! ‘ಚಿ.ಸೌ.ರಾಜಲಕ್ಷ್ಮಿಗೆ, ಮೇಘದೂತವನಿದನು ಮುಗಿಸಿ ತಂದಿಹೆನಿಂದು, ನನ್ನ ನೆಚ್ಚಿನ ನಲ್ಲೆ ನಿನಗೆ ಮುಡಿಪೆಂದು, ಸಂತಸದೊಳಿದ ಕೊಂಡು
ಕೃತಕೃತ್ಯಳೆಂದೆನಿಸಿ, ಅರಳಿಸೆನ್ನೆದೆ ಹೂವನಿಂತೆ ಮನವೊಲಿಸಿ’ ಎಂದು ಒಕ್ಕಣೆ.

ಪತ್ನಿಯನ್ನು ಅವರು ಎಷ್ಟು ಕೋಮಲವಾಗಿ ಆರೈಕೆ ಮಾಡುತ್ತಿದ್ದರೆಂದು ರಾಘವೇಂದ್ರ ಭಟ್ಟರೂ ನೆನಪಿಸಿಕೊಳ್ಳುತ್ತಾರೆ: ‘ಒಂದು ದಿನ ಬೆಳಗ್ಗೆ ಅವರ ಮನೆಗೆ ಹೋಗಿದ್ದಾಗ ಅವರ ಮಡದಿ ಗ್ಲಾಸ್ ತುಂಬ ಹೋಟೆಲಿನ ಸುಡುಕಾಫಿ ತಂದಿತ್ತರು. ಗುರುಗಳು ತಗ್ಗಿದ ದನಿಯಲ್ಲಿ ‘ಬೇಸರಿಸದೆ ಪೂರಾ ಕುಡಿಯಿರಿ; ಆಕೆ ನೊಂದಾರು’ ಎಂದರು.’ ಗಮನಿಸಬೇಕಾದ
ಅಂಶವೆಂದರೆ ಅಂಥ ಕಷ್ಟಪರಿಸ್ಥಿತಿಯಲ್ಲೂ ಮನೆಯಲ್ಲಿ ಸಹಾಯಕ್ಕೆಂದು ಕೆಲಸದವರನ್ನು ಇಟ್ಟುಕೊಳ್ಳಲಿಲ್ಲ.

ಮಕ್ಕಳನ್ನು ತಾವೇ ಚೆನ್ನಾಗಿ ಬೆಳೆಸಿದರು. ವಿದ್ಯಾಭ್ಯಾಸ ಒದಗಿಸಿದರು. ನಾಲ್ವರೂ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಿದರು. ಅಂತಹ ಸಹನೆ ಸಹಿಷ್ಣುತೆ ಪರಮೇಶ್ವರ ಭಟ್ಟರಿಗೆ ಹೇಗೆ ಬಂದದ್ದಿರಬಹುದು? ತಿಳಿದುಕೊಳ್ಳುವುದಕ್ಕೆ ನಾವು ಅವರ ಬಾಲ್ಯದ ದಿನಗಳತ್ತ ಹೋಗಬೇಕು. ‘ನಾನು ಎರಡು ವರ್ಷದ ಮಗುವಾಗಿದ್ದಾಗ ತಾಯಿ ತೀರಿಹೋದರು. ತಾಯಿಯ
ಅಕ್ಕರೆಯನ್ನೂ ವಾತ್ಸಲ್ಯವನ್ನೂ ಕಳೆದುಕೊಂಡು, ತಂದೆಯವರ ಪ್ರೀತಿ-ವಿಶ್ವಾಸಕ್ಕೆ ಪಾತ್ರನಾಗಿ ಬೆಳೆದೆ. ಇಬ್ಬರು ಅಕ್ಕಂದಿರ ಪೈಕಿ ಒಬ್ಬರು ತೀರಿಕೊಂಡರು. ಅವರ ಗಂಡನೂ ತೀರಿಕೊಂಡರು.

ಇನ್ನೊಬ್ಬ ಅಕ್ಕನ ಗಂಡನೂ ಸಾವನ್ನಪ್ಪಿದರು. ನಮ್ಮ ದೊಡ್ಡಪ್ಪ-ಚಿಕ್ಕಪ್ಪಂದಿರ ಸಾವನ್ನೂ ಕಣ್ಣಾರೆ ಕಂಡೆ. ನನ್ನ ಮೆಟ್ರಿಕ್
ಪರೀಕ್ಷೆಯ ಫಲಿತಾಂಶವನ್ನು ತೋರಿಸಲಿಕ್ಕಾಗಿ ಓಡೋಡಿ ಮನೆಗೆ ಹೋದರೆ ತಂದೆಯವರು ಅಂದೇ ನಿಧನರಾದರು. ಇದ್ದ ಒಬ್ಬ ಅಕ್ಕ ನನ್ನನ್ನು ಬೆಳೆಸಿದಳು. ಕಾಲೇಜಿಗೆ ಹೋಗುವಾಗ ಮೈಸೂರಿನ ಅನಾಥಾಲಯದಲ್ಲಿ ಮೂರು ವಾರ ಇದ್ದೆ. ಆಮೇಲೆ ವಾರಾನ್ನದ ವ್ಯವಸ್ಥೆ. ಮದುವೆಯಾಗಿ ಮಕ್ಕಳಾದ ಮೇಲೆ ಮನೆಯವರಿಗೆ ಅನಾರೋಗ್ಯ. ಆ ಎಲ್ಲ ನೋವುಗಳನ್ನು ಹೋಗ ಲಾಡಿಸುವುದಕ್ಕೆ ಭರ್ತೃಹರಿಯ ಸುಭಾಷಿತಗಳನ್ನೋ, ಗೀತಗೋವಿಂದವನ್ನೋ, ಕಾಳಿದಾಸನ ಕಾವ್ಯವನ್ನೋ ಓದುತ್ತಿದ್ದೆ. ನನ್ನ ನೋವನ್ನು ಕಲಾತ್ಮಕವಾಗಿ ಪರಿವರ್ತಿಸಿ, ಮನಸ್ಸಿನ ಬಾನಂಗಳದಲ್ಲಿ ದುಗುಡದ ಮಳೆಮೋಡ ಸುರಿಯುವಾಗಲೇ ಬಿಸಿಲು ಮೂಡುವಂತೆ ಮಾಡುತ್ತಿದ್ದೆ.

ಅದಕ್ಕೋಸ್ಕರವೇ ಮುಕ್ತಕಗಳ ಸಂಕಲನಕ್ಕೆ ಇಂದ್ರಚಾಪ ಅಂತ ಹೆಸರಿಟ್ಟೆ’ ಎಂದು ಆಕಾಶವಾಣಿಯ ಸಂದರ್ಶನದಲ್ಲಿ ಪರಮೇಶ್ವರ ಭಟ್ಟರು ಹೇಳಿದ್ದಾರೆ. ಬರಹಗಳಿಗೆ ಪ್ರೇರಣೆ ಏನೆಂಬ ಪ್ರಶ್ನೆಗೆ ಬಾಳಿನಲ್ಲನುಭವಿಸಿದ ನೋವುಗಳೇ ಪ್ರೇರಣೆ ಎಂದಿದ್ದಾರೆ. ಪರಮೇಶ್ವರ ಭಟ್ಟರಂಥವರು ಇನ್ನು ಕನ್ನಡ ನೆಲದಲ್ಲಿ ಹುಟ್ಟುತ್ತಾರೋ ಇಲ್ಲವೋ. ಈಗಿನ ಕಾಲದ ಕೆಲವು ‘ಸಾಯ್ತಿ’ ಗಳೋ! ಸತ್ತ್ವಯುತವಾದದ್ದೇನನ್ನೂ ಬರೆಯದೆ, ಸಮಾಜದಲ್ಲಿ ಹುಳಿಹಿಂಡುವುದಕ್ಕಾಗಿಯೇ ಅಕ್ಷರಹಾದರ ಮಾಡುತ್ತ, ಪ್ರಶಸ್ತಿ- ಸಮ್ಮಾನ-ಸರ್ಕಾರಿಸೌಲಭ್ಯಗಳ ಕನಸುಕಾಣುತ್ತ, ಸಾಲದೆಂಬಂತೆ ತಮ್ಮ ಕೃತಿಗಳು ವಿದ್ಯಾರ್ಥಿಗಳಿಗೆ ಪಠ್ಯವಾಗಲಿಕ್ಕೆ ಅನುಮತಿ ಕೊಡಲಾರೆವು ಎಂದು ಪೋಸು ಕೊಡುವ ಸ್ವಹಿತಾಸಕ್ತಿಯ ಕ್ಷುದ್ರಜೀವಿಗಳನ್ನು ಕಂಡಾಗ ಪರಮೇಶ್ವರ ಭಟ್ಟರಂಥ ‘ಬೆಂಕಿಯಲ್ಲಿ ಅರಳಿದ ಹೂವು’ಗಳು ಮತ್ತಷ್ಟು ಎತ್ತರದವರಾಗಿ ಕಾಣುತ್ತಾರೆ.

‘೨೦೧೪ರಲ್ಲಿ ಅವರ ಜನ್ಮಶತಾಬ್ದಿ ಆಚರಿಸೋಣವೆಂದು ಹೊರಟಿದ್ದೆ. ಹಣ ಸಂಗ್ರಹಕ್ಕೆ ಹೋದರೆ ಯಾರೂ ಮುಂದೆ
ಬರಲಿಲ್ಲ. ನನ್ನ ಯೋಜನೆ ಕೈಬಿಟ್ಟೆ’ ಎಂದು ಸಾಹಿತ್ಯಪ್ರೇಮಿ ಸಹೃದಯಿ ಅಣಕು ರಾಮನಾಥ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿ ದ್ದರು. ಕಾಳಿದಾಸನ ಸಮಗ್ರ ಕೃತಿಗಳ ಅನುವಾದ ಯೋಜನೆಗೆ ಬ್ಯಾಂಕ್‌ನಿಂದ ೧೫ಸಾವಿರ ರೂಪಾಯಿ ಸಾಲವೆತ್ತಿ, ಪುಸ್ತಕ ಪ್ರೇಮಿಗಳ ನೆರವಿನಿಂದ ಬ್ಯಾಂಕ್ ಸಾಲವನ್ನೂ, ಏಳಕ್ಕೆ ಏಳೂ ಕೃತಿಗಳನ್ನು ಯಶಸ್ವಿಯಾಗಿ ಕನ್ನಡಕ್ಕೆ ತಂದು ತಾಯ್ನುಡಿಯ ಋಣವನ್ನೂ ತೀರಿಸಿದ, ಹೆಗಲಿಗೆ ಪುಸ್ತಕ ತುಂಬಿದ ಚೀಲ ಹಾಕಿಕೊಂಡು ಬಿಸಿಲ ರಸ್ತೆಗಳಲ್ಲಿ ದಣಿವಿಲ್ಲದೆ ನಗುಮೊಗದಿಂದ ಓಡಾಡಿ ಪುಸ್ತಕ ಪರಿಚಾರಿಕೆ ಮಾಡಿದ, ಪರಮೇಶ್ವರ ಭಟ್ಟರ ಸಾಹಿತ್ಯ ಸಾಧನೆ-ಸೇವೆಗಳನ್ನು ಸ್ಮರಿಸಲಿಕ್ಕೆ ಕನ್ನಡಿಗರ ಬಳಿ ದುಡ್ಡಿಲ್ಲ! ಆರ್ಥಿಕ ದಿವಾಳಿತನ ಅಲ್ಲ, ಇದು ಬೌದ್ಧಿಕ ದಿವಾಳಿತನ. ಅಸಡ್ಡೆ ಮತ್ತು ಅಭಿಮಾನಶೂನ್ಯತೆಯ ಪರಾಕಾಷ್ಠೆ.