Monday, 16th September 2024

ಪಿಓಕೆ ವಿವಾದ ಸಂಪೂರ್ಣ ಇತ್ಯರ್ಥಕ್ಕೆ ಇದು ಒಳ್ಳೆ ಸಮಯ !

ಸಂಗತ

ಡಾ.ವಿಜಯ್ ದರಡಾ

ಈ ಸಲದ ಅಂಕಣದಲ್ಲಿ ನಾನು ನಾಲ್ಕು ರಾಜ್ಯಗಳಿಗೆ ಹೊಸತಾಗಿ ನೇಮಕಗೊಂಡ ಮುಖ್ಯಮಂತ್ರಿಗಳ ಬಗ್ಗೆ ಬರೆಯಬೇಕು ಅಂದುಕೊಂಡಿದ್ದೆ. ಹಾಗೆಯೇ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ವಿಶಿಷ್ಟ ರಾಜಕೀಯ ರಣತಂತ್ರಗಳು ಮತ್ತು ಯಾವಾಗಲೂ ಅಚ್ಚರಿಗಳನ್ನು ನೀಡುವ ಅವರ ಕಾರ್ಯಶೈಲಿಯ ಬಗ್ಗೆಯೂ ಬರೆಯಬೇಕು ಅಂದುಕೊಂಡಿದ್ದೆ.

ಮಧ್ಯಪ್ರದೇಶಕ್ಕೆ ಮೋಹನ್ ಯಾದವ್, ಛತ್ತೀಸ್‌ಗಡಕ್ಕೆ ವಿಷ್ಣುದೇವ್ ಸಾಯಿ ಅಥವಾ ರಾಜಸ್ಥಾನಕ್ಕೆ ಮೊದಲ ಸಲದ ಯುವ ಶಾಸಕ ಭಜನ್ ಲಾಲ್ ಮುಖ್ಯ ಮಂತ್ರಿಯಾಗುತ್ತಾರೆಂದು ಯಾರೂ ಊಹೆ ಕೂಡ ಮಾಡಿರಲಿಲ್ಲ. ಬಹುಶಃ ಈ ಮೂವರು ಕೂಡ ಸ್ವತಃ ತಾವು ರಾಜ್ಯದ ಅತ್ಯುನ್ನತ ಹುದ್ದೆಗೆ ನೇಮಕಗೊಳ್ಳಬಹುದು ಎಂದು ಕನಸು ಕಂಡಿರಲಿಕ್ಕಿಲ್ಲ!

ಈ ಮೂರೂ ರಾಜ್ಯಗಳಲ್ಲಿ ತಲಾ ಇಬ್ಬರು ಉಪಮುಖ್ಯಮಂತ್ರಿಗಳು ನೇಮಕಗೊಂಡಿದ್ದಾರೆ. ಇದು ೨೦೨೪ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡು ನಾನಾ ಸಮೀಕರಣಗಳನ್ನು ಸರಿದೂಗಿಸುವ ಸಲುವಾಗಿ ಮಾಡಿರುವ ನೇಮಕಾತಿ. ಭಾರತದ ರಾಜಕಾರಣದಲ್ಲಿ ಹೊಚ್ಚಹೊಸ ವ್ಯಕ್ತಿಯೊಬ್ಬನನ್ನು ಧುತ್ತನೆ ಮುಖ್ಯಮಂತ್ರಿಯಾಗಿ ನೇಮಕ ಮಾಡಿರುವುದು ಇದೇ ಮೊದಲೇನೂ ಅಲ್ಲ. ಸ್ವತಃ ನರೇಂದ್ರ ಮೋದಿ ೨೦೦೧ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿ ಕುರ್ಚಿ ಏರಿದಾಗ ಅವರು ಶಾಸಕ ಕೂಡ ಆಗಿರಲಿಲ್ಲ. ಇಂಥ ಇನ್ನೂ ಸಾಕಷ್ಟು ಉದಾಹರಣೆಗಳಿವೆ.

ಆದರೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಕಾರ್ಯಶೈಲಿಯಲ್ಲಿರುವ ವಿಶೇಷತೆ ಮತ್ತು ಅಚ್ಚರಿಯ ಅಂಶವೆಂದರೆ ಅವರು ಅಸಾಧ್ಯಗಳನ್ನೂ ಸಾಽಸಿಬಿಡುತ್ತಾರೆ. ನಂಬಲು ಸಾಧ್ಯವಿಲ್ಲದ್ದನ್ನೂ ಮಾಡಿ ತೋರಿಸುತ್ತಾರೆ. ಹಾಗಂತ ಪ್ರತಿ ಹೆಜ್ಜೆಯನ್ನೂ ಬಹಳ ಎಚ್ಚರಿಕೆಯಿಂದ ಇರಿಸುತ್ತಾರೆ. ಬಹುಶಃ ಆ ಕಾರಣಕ್ಕಾಗಿಯೇ ‘ಮೋದಿ ಹೈ ತೋ ಮುಮ್ಕಿನ್ ಹೈ’ (ಮೋದಿಯಿದ್ದರೆ ಎಲ್ಲವೂ ಸಾಧ್ಯ) ಎಂಬ ಮಾತು ಬಂದಿರುವುದು! ಮೋದಿ ಮತ್ತು ಅಮಿತ್ ಶಾ ಅವರ ರಣತಂತ್ರದ ಬಗ್ಗೆ ನಾನು ಚರ್ಚಿಸುತ್ತಿರುವಾಗಲೇ ಸಂಸತ್ತಿನಲ್ಲಿ ಬಹಳ ದೊಡ್ಡ ಘಟನೆಯೊಂದು ನಡೆಯಿತು. ಅದು ತುಂಬಾ ಗಂಭೀರವಾದ ಇನ್ನೊಂದು ಭದ್ರತಾ ಲೋಪವಾಗಿತ್ತು. ನನ್ನ ದೃಷ್ಟಿಯಲ್ಲಿ ಇದು ದೇಶಕ್ಕೆ ಬಹಳ ಅಪಾಯಕಾರಿಯಾದ, ವಿಚಿತ್ರವಾದ ಮತ್ತು ತೀರಾ ಸೂಕ್ಷ್ಮವಾದ ಘಟನೆ.

೨೦೦೧ರ ಡಿಸೆಂಬರ್ ೧೩ರಂದು ಕೂಡ ಪಾಕಿಸ್ತಾನದ ಭಯೋತ್ಪಾದಕರು ಸುಧಾರಿತ ಶಸ್ತ್ರಾಸ್ತ್ರ ಹಾಗೂ ಬಾಂಬ್‌ಗಳನ್ನು ಹಿಡಿದು ಪಾರ್ಲಿಮೆಂಟ್ ಮೇಲೆ
ದಾಳಿ ನಡೆಸಿದ್ದರು. ಆ ದಾಳಿಯಲ್ಲಿ ಐವರು ಭದ್ರತಾ ಸಿಬ್ಬಂದಿಯೂ ಸೇರಿದಂತೆ ೯ ಮಂದಿ ಜೀವ ತೆತ್ತಿದ್ದರು. ೧೬ ಯೋಧರಿಗೆ ಗಾಯಗಳಾಗಿದ್ದವು. ನಾನಾಗ ಸಂಸತ್ತಿನ ಸದಸ್ಯನಾಗಿದ್ದೆ. ನೆನೆಸಿಕೊಂಡರೆ ಆ ಭಯಾನಕ ಘಟನೆ ಇವತ್ತಿಗೂ ನನ್ನನ್ನು ನಡುಗುವಂತೆ ಮಾಡುತ್ತದೆ. ಈ ದಿನದವರೆಗೂ ಅದು ನನ್ನನ್ನು ಕಾಡುತ್ತಿದೆ. ಆ ದಾಳಿ ನಡೆದಾಗ ಆವತ್ತಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ವಿರೋಧ ಪಕ್ಷದ ನಾಯಕಿ ಸೋನಿಯಾ ಗಾಂಧಿ ಸಂಸತ್ತಿನಿಂದ
ನಿರ್ಗಮಿಸಿದ್ದರು.

ಆದರೆ ಎಲ್.ಕೆ.ಆಡ್ವಾಣಿ ಸೇರಿದಂತೆ ಇನ್ನೂ ಸಾಕಷ್ಟು ಘಟಾನುಘಟಿ ನಾಯಕರು ಸಂಸತ್ ಭವನದಲ್ಲೇ ಇದ್ದರು. ಅವರನ್ನೆಲ್ಲ ಭಯೋತ್ಪಾದಕರಿಂದ ರಕ್ಷಿಸಲು ಸಂಸತ್ತಿನ ನೆಲಮಾಳಿಗೆಗೆ ಕರೆದುಕೊಂಡು ಹೋಗಿ ಬಚ್ಚಿಡಲಾಗಿತ್ತು. ಆದರೆ ಈಗ ನಮ್ಮ ಕಣ್ಣೆದುರು ಇರುವುದು ಹೊಸ ಸಂಸತ್ ಭವನ. ಈ ಭವ್ಯವಾದ ಕಟ್ಟಡವನ್ನು ಕಟ್ಟಿದಾಗ, ಇದರಲ್ಲಿ ಯಾವುದೇ ಕಾರಣಕ್ಕೂ ಭದ್ರತಾ ಲೋಪಗಳು ಘಟಿಸುವುದಕ್ಕೆ ಅವಕಾಶವಿಲ್ಲ ಎಂದು ನಾನು ಅಂದುಕೊಂಡಿದ್ದೆ. ಆದರೆ ಇಷ್ಟು
ಬೇಗ ಇಂಥ ಗಂಭೀರವಾದ ಭದ್ರತಾ ಲೋಪವೊಂದು ಘಟಿಸಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದೇನೆ.

ಹಾಗಿದ್ದರೆ ನಾವು ಹಿಂದೆ ನಡೆದ ಘಟನೆಯಿಂದ ಪಾಠವನ್ನೇ ಕಲಿತಿಲ್ಲವೇ? ಒಂದು ಸಲ ಸಂಸತ್ತಿನ ಮೇಲೆ ಭೀಕರ ಭಯೋತ್ಪಾದಕ ದಾಳಿ ನಡೆದ ಮೇಲೆ ಇನ್ನೆಂದೂ ಸಂಸತ್ತಿನ ಭದ್ರತೆಯಲ್ಲಿ ಲವಲೇಶ ಕೂಡ ಏರುಪೇರಾಗದಂತೆ, ನಮ್ಮ ಪ್ರಜಾಪ್ರಭುತ್ವದ ದೇಗುಲಕ್ಕೆ ಭಯೋತ್ಪಾದಕರ ನೆರಳು ಕೂಡ ಪ್ರವೇಶ ಮಾಡದಂತೆ ಅತ್ಯಂತ ಬಿಗಿಯಾದ ಭದ್ರತಾ ಕ್ರಮಗಳು ಜಾರಿಯಲ್ಲಿರಬೇಕಾಗಿತ್ತಲ್ಲವೇ? ಸಂಸದರೊಬ್ಬರಿಗೆ ಸರಿಯಾದ ಮಾಹಿತಿಯಿಲ್ಲದೆ ಅವರ ಹೆಸರಿನಲ್ಲಿ ಕಿಡಿಗೇಡಿಗಳಿಗೆ ಪಾಸ್ ನೀಡಲಾಗಿದ್ದರೂ, ನಂತರ ಅವರನ್ನು ಸಂಸತ್ತಿನೊಳಗೆ ಬಿಟ್ಟುಕೊಳ್ಳುವಾಗ ನಡೆಸುವ ಭದ್ರತಾ ತಪಾಸಣೆಯಲ್ಲೇಕೆ ಬಿಸುಪು ಇರಲಿಲ್ಲ? ಹೇಗೆ ಅವರನ್ನು ಒಳಗೆ ಬಿಟ್ಟರು? ಅದು ಭದ್ರತಾ ಸಿಬ್ಬಂದಿಯ ಬೇಜವಾಬ್ದಾರಿಯಲ್ಲವೇ? ಸಂಸತ್ತಿನ ಭದ್ರತಾ ವ್ಯವಸ್ಥೆಯಲ್ಲಿ ಲೋಪಗಳಿದ್ದವು ಎಂಬುದನ್ನು ನಾವು
ಒಪ್ಪಿಕೊಳ್ಳಲೇಬೇಕು. ಆದರೆ ಅದಕ್ಕೆ ತೆರಬೇಕಾಗಿ ಬಂದ ಬೆಲೆ ಇನ್ನೂ ಹೆಚ್ಚು ಗಂಭೀರವಾದದ್ದು ಕೂಡ ಆಗಿರಬಹುದಿತ್ತು!

ಸ್ಮೋಕ್ ಕ್ಯಾನ್‌ಗಳನ್ನು ದಾಳಿಕೋರರು ಸಂಸತ್ತಿನ ಒಳಗೆ ತೆಗೆದುಕೊಂಡು ಹೋಗಿದ್ದಾದರೂ ಹೇಗೆ? ಹಾಗಿದ್ದರೆ ಸಂಸತ್ ಭವನದ ಬಾಗಿಲಿನಲ್ಲಿ ಅಷ್ಟೊಂದು ಸುಧಾರಿತ ತಂತ್ರಜ್ಞಾನದ, ಅಷ್ಟೊಂದು ದುಬಾರಿಯಾದ ಭದ್ರತಾ ಸಲಕರಣೆಗಳ ಜತೆಗೆ ಅಷ್ಟೊಂದು ಮಂದಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದು ಯಾವ ಪುರುಷಾರ್ಥಕ್ಕೆ? ಇನ್ನೊಂದು ಬದಿಯಿಂದ ಇದನ್ನು ಯೋಚಿಸಿ ನೋಡಿ. ಅವರ ಬೂಟುಗಳ ಒಳಗೆ ಸ್ಮೋಕ್ ಕ್ಯಾನಿಸ್ಟರ್‌ಗಳ ಬದಲು ಜೀವಂತವಾದ ಬಾಂಬ್‌ಗಳಿದ್ದಿದ್ದರೆ? ಸಂಸತ್ತೆಂಬುದು ಸಾಮಾನ್ಯವಾದ ಜಾಗವಲ್ಲ.

ಅದು ೧೪೦ ಕೋಟಿ ಭಾರತೀಯರ ಪ್ರತಿನಿಽಗಳು ಕೆಲಸ ಮಾಡುವ ಜಾಗ. ಸಂಸತ್ತೆಂಬುದು ಈ ದೇಶದ ಹೆಮ್ಮೆ. ಅದು ಈ ದೇಶದ ಘನತೆ ಮತ್ತು ಭವ್ಯತೆಯ
ಸಂಕೇತ. ಅದಕ್ಕೆ ಯಾವ ರೀತಿಯಲ್ಲಿ ಕಪ್ಪುಚುಕ್ಕೆ ಬಳಿದರೂ ಅಥವಾ ಅದರ ಮೇಲೆ ಯಾವುದೇ ರೀತಿಯ ದಾಳಿ ನಡೆದರೂ, ಅದು ಇಡೀ ದೇಶದ ಮೇಲೆ ನಡೆದ ದಾಳಿಯೆಂದೇ ಪರಿಗಣಿಸಬೇಕಾಗುತ್ತದೆ. ಪ್ರಧಾನ ಮಂತ್ರಿ, ಗೃಹ ಸಚಿವ, ರಕ್ಷಣಾ ಸಚಿವ, ವಿದೇಶಾಂಗ ಸಚಿವ ಹಾಗೂ ಇನ್ನೂ ಸಾಕಷ್ಟು ಗಣ್ಯ ವ್ಯಕ್ತಿಗಳು ಮತ್ತು ದೇಶಕ್ಕೆ ಬೇಕಾದ ಅತ್ಯಮೂಲ್ಯ ವ್ಯಕ್ತಿಗಳು ಅಲ್ಲಿ ಕೆಲಸ ಮಾಡುತ್ತಾರೆ. ಅಂಥ ಸೂಕ್ಷ್ಮ ಸ್ಥಳದಲ್ಲಿ ಉಂಟಾಗುವ ಯಾವುದೇ ಭದ್ರತಾ ಲೋಪವನ್ನು ನಿರ್ದಾಕ್ಷಿಣ್ಯ ವಾಗಿ ಪರಿಗಣಿಸಿ ತನಿಖೆ ಮಾಡಿ ತಪ್ಪಿತಸ್ಥರಿಗೆ ಕಠಿಣಾತಿಕಠಿಣ ಶಿಕ್ಷೆ ನೀಡಬೇಕು. ಅದರಲ್ಲಿ ಕ್ಷಮೆಯ ಮಾತಿಗೆ ಜಾಗವೇ ಇಲ್ಲ. ಇಬ್ಬರು ದುಷ್ಕರ್ಮಿಗಳು ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಸಂಸದರು ಕುಳಿತುಕೊಳ್ಳುವ ಜಾಗಕ್ಕೆ ಜಿಗಿದು ಮೇಜುಗಳನ್ನು ಹತ್ತಿ ಕುಣಿದಾಡಿದ ದೃಶ್ಯಗಳು ನಿಜಕ್ಕೂ ಆಘಾತ ಉಂಟುಮಾಡುವಂತಿವೆ.

ಇದೇನೂ ಹೊಸತಲ್ಲ. ಕೆಲವೊಮ್ಮೆ ಇಂಥ ವ್ಯಕ್ತಿಗಳು ಪ್ರಧಾನ ಮಂತ್ರಿಗಳ ಬೆಂಗಾವಲು ಪಡೆಯ ನಡುವೆ ನುಸುಳಿದ್ದಿದೆ. ಮತ್ತೆ ಕೆಲವೊಮ್ಮೆ ಗಣ್ಯಾತಿಗಣ್ಯರ ಭದ್ರತೆಯಲ್ಲೇ ಇಂಥ ಲೋಪಗಳಾಗಿದ್ದಿದೆ! ಅಂದರೆ ಎಲ್ಲರ ಸುರಕ್ಷತೆಯನ್ನೂ ನಾವು ಹಣೆಬರಹದ ಕೈಗೆ ಒಪ್ಪಿಸಿ ಕುಳಿತಿದ್ದೇವೆಯೇ? ನಮ್ಮ ನಾಯಕರು ಅವರ ಪೂರ್ವಜನ್ಮದ ಪುಣ್ಯದಿಂದಾಗಿ ಈವರೆಗೆ ಸುರಕ್ಷಿತವಾಗಿದ್ದಾರೆಯೇ? ಈ ಬಾರಿ ಸಂಸತ್ತಿನೊಳಗೆ ನುಗ್ಗಿ ಹಳದಿ ಹೊಗೆ ಚಿಮ್ಮಿಸಿದವರು ಸಾಮಾನ್ಯ ಕಿಡಿಗೇಡಿಗಳ ಬದಲಾಗಿ ಭಯೋತ್ಪಾದಕರಾಗಿದ್ದಿದ್ದರೆ ಏನಾಗಿರುತ್ತಿತ್ತು? ಪಾಕಿಸ್ತಾನದ ನೆಲದಲ್ಲಿ, ಆ ದೇಶದ ಗುಪ್ತಚರ ದಳ ‘ಐಎಸ್‌ಐ’ ಮತ್ತು ಸೇನಾಪಡೆಯ ಕೃಪಾಪೋಷಣೆ ಯಿಂದ ಬೆಳೆಯುತ್ತಿರುವ ಭಯೋತ್ಪಾದಕ ಸಂಘಟನೆಗಳ ಉದ್ದೇಶವೇ ಭಾರತವನ್ನು ನಾಶಪಡಿಸುವುದು. ಆ ಭಯೋತ್ಪಾದನೆಯ ಬಿಸಿಯನ್ನು ಹಲವಾರು ವರ್ಷಗಳಿಂದ ನಾವು ಅನುಭವಿಸುತ್ತಾ ಬಂದಿದ್ದೇವೆ.

೨೬/೧೧ ಮುಂಬೈ ದಾಳಿಯ ಭೀಕರತೆಯನ್ನು ಹೇಗೆ ತಾನೇ ಮರೆಯಲು ಸಾಧ್ಯ? ಅಂಥ ಭಯೋತ್ಪಾದಕ ದಾಳಿಗಳ ದೊಡ್ಡ ಪಟ್ಟಿಯೇ ನಮ್ಮಲ್ಲಿದೆ. ಭಯೋತ್ಪಾದಕರು ನಮ್ಮ ಸೇನಾಪಡೆಗಳ ಶಿಬಿರಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಕಾಶ್ಮೀರದಲ್ಲಂತೂ ಪ್ರತಿದಿನ ಏನಾದರೊಂದು ಕಿಡಿಗೇಡಿ
ಕೃತ್ಯಗಳು ನಡೆಯುತ್ತಲೇ ಇರುತ್ತವೆ. ದೇಶದ ಉದ್ದಗಲಕ್ಕೂ ಬೇರೆ ಬೇರೆ ಕಡೆಯಿಂದ ಭಯೋತ್ಪಾದಕರನ್ನು ಬಂಧಿಸಿದ ಸುದ್ದಿಗಳು ದಿನನಿತ್ಯ ಬರುತ್ತಿರುತ್ತವೆ. ಇಂಥ ಪರಿಸ್ಥಿತಿಯಲ್ಲಿ ಭದ್ರತಾ ವ್ಯವಸ್ಥೆ ಬಹಳ ಕಟ್ಟುನಿಟ್ಟಾಗಿರಬೇಕು. ಅಲ್ಲಿ ಯಾವ ಲೋಪಕ್ಕೂ ಜಾಗವಿರಬಾರದು.

ಹಾಗೆ ನೋಡಿದರೆ ಭಯೋತ್ಪಾದನೆಯೆಂಬುದು ನಮ್ಮ ದೇಶವೊಂದರ ಸಮಸ್ಯೆಯೇನೂ ಅಲ್ಲ. ಜಗತ್ತಿನಾದ್ಯಂತ ಈ ಕ್ರಿಮಿಗಳು ಕೆಲಸ ಮಾಡುತ್ತಿವೆ. ಭಯೋತ್ಪಾದಕ ಸಂಘಟನೆಗಳು ದಿನೇದಿನೆ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿ ದಾಳಿಗೆ ಹೊಸ ಹೊಸ ವಿಧಾನಗಳನ್ನು ಆವಿಷ್ಕಾರ ಮಾಡಿಕೊಳ್ಳುತ್ತಿರು ತ್ತವೆ. ಹಾಗಾಗಿ ನಾವು ಕೂಡ ನಮ್ಮ ರಕ್ಷಣಾ ತಂತ್ರಗಳನ್ನು ದಿನನಿತ್ಯ ಹರಿತಗೊಳಿಸಿಕೊಳ್ಳುತ್ತಿರಬೇಕು. ನಮ್ಮ ಭದ್ರತಾ ಕ್ರಮಗಳು ತೀಕ್ಷ್ಣವಾಗಿರಬೇಕು. ಇತ್ತೀಚೆಗೆ ಹಮಾಸ್ ಉಗ್ರರು ದಾಳಿ ನಡೆಸಿದಾಗ ಇಸ್ರೇಲ್‌ನ ಮೊಸಾದ್‌ನಂಥ ಅತ್ಯಂತ ದಕ್ಷ ಗುಪ್ತಚರ ವ್ಯವಸ್ಥೆಯೇ ಹೇಗೆ ವಿಫಲವಾಯಿತು ಎಂಬುದರ
ಉದಾಹರಣೆಯನ್ನು ನಾವೆಲ್ಲ ನೋಡಿದ್ದೇವೆ.

ಗುಪ್ತಚರ ವ್ಯವಸ್ಥೆಯಲ್ಲಿ ಉಂಟಾಗುವ ಸಣ್ಣದೊಂದು ಲೋಪ ಕೂಡ ಹೊಸ ಸಮಸ್ಯೆಯನ್ನು ಸೃಷ್ಟಿಸುತ್ತದೆ. ಅಲ್ಲಿ ಯಾರೋ ಒಬ್ಬರು ಎಸಗುವ ಸಣ್ಣದೊಂದು ನಿರ್ಲಕ್ಷ್ಯ ಕೂಡ ದೊಡ್ಡ ಅಪಾಯಕ್ಕೆ ಕಾರಣವಾಗುತ್ತದೆ. ಅದನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು. ಭಾರತವು ಇಂದು ಜಗತ್ತಿನ ದೈತ್ಯ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳುತ್ತಿದೆ. ಹೀಗಾಗಿ ದುಷ್ಕರ್ಮಿಗಳ ಹೊಟ್ಟೆ ಜಾಸ್ತಿ ಉರಿಯುತ್ತಿದೆ. ಆದ್ದರಿಂದ ಭಯೋತ್ಪಾದಕರು ಈ ಆರ್ಥಿಕ ದೈತ್ಯನನ್ನು ಗುರಿಯಾಗಿಸಿಕೊಂಡು ಇನ್ನಷ್ಟು ದಾಳಿ ನಡೆಸಲು ಹವಣಿಸಬಹುದು. ಆ ಕಾರಣಕ್ಕಾಗಿಯೇ ದೇಶದ ದೊಡ್ಡ ಉದ್ಯಮಿಗಳಾದ ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಅವರಿಗೆ ಸರಕಾರ ಬಿಗಿಯಾದ ಭದ್ರತಾ ವ್ಯವಸ್ಥೆ ಒದಗಿಸಿದೆ.

ರತನ್ ಟಾಟಾ ಅವರಿಗೂ ಬೆದರಿಕೆಗಳು ಬಂದಿದ್ದವು. ನಾಯಕರು ಯಾವುದೇ ಕ್ಷೇತ್ರದಿಂದ ಬಂದಿರಲಿ, ಅವರ ಭದ್ರತಾ ವ್ಯವಸ್ಥೆ ಮಾತ್ರ ಯಾರೂ ಭೇದಿಸಲು
ಅಸಾಧ್ಯವಾಗಿರಬೇಕು. ಇಲ್ಲಿ ಇನ್ನೊಂದು ಬಹಳ ಮುಖ್ಯವಾದ ವಿಚಾರವಿದೆ. ಪಾಕಿಸ್ತಾನಕ್ಕೆ ಭಯೋತ್ಪಾದನೆಯೆಂಬುದು ಚರ್ಮಕ್ಕಂಟಿದ ಹುಣ್ಣಿದ್ದಂತೆ. ಅಲ್ಲಿ ಉಗ್ರರೆಂಬ ಕ್ರಿಮಿಗಳಿಗೆ ಪೊಗದಸ್ತಾದ ಆಹಾರ ಸಿಗುತ್ತಲೇ ಇರುತ್ತದೆ. ಆ ಉಗ್ರರೆಲ್ಲ ಭಾರತಕ್ಕೆ ನುಸುಳುವುದು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ)
ಪ್ರದೇಶಗಳಿಂದ. ಪಿಒಕೆಯಲ್ಲೇ ಪಾಕಿಸ್ತಾನದ ಬಹುತೇಕ ಭಯೋತ್ಪಾದಕ ಶಿಬಿರಗಳು ನೆಲೆಯೂರಿವೆ. ಹೀಗಾಗಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕೆಂದರೆ ಈ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸಂಬಂಧಿಸಿದ ಜಗಳವನ್ನು ಮೊದಲು ಇತ್ಯರ್ಥಪಡಿಸಿ, ಅಲ್ಲಿನ ಭಯೋತ್ಪಾದಕ ನೆಲೆಗಳನ್ನು ನಾಮಾವಶೇಷ ಮಾಡಬೇಕು. ಪಿಒಕೆ ನಮಗೆ ಸೇರಿದ್ದು.

ಅದರಲ್ಲಿ ಯಾವ ಅನುಮಾನವೂ ಬೇಡ. ಈ ತಿಂಗಳು ಗೃಹ ಸಚಿವ ಅಮಿತ್ ಶಾ ಕೂಡ ಸಂಸತ್ತಿನಲ್ಲಿ ಮಾತನಾಡುವಾಗ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರಕ್ಕಾಗಿ ೨೪ ಸೀಟುಗಳನ್ನು ಕಾಯ್ದಿರಿಸಲಾಗಿದೆಯೆಂದೂ, ಪಿಒಕೆ ನಮ್ಮದೆಂದೂ ಖಡಾಖಂಡಿತವಾಗಿ ಹೇಳಿದ್ದಾರೆ.
ಹಾಗಿದ್ದರೆ ಈ ವಿವಾದವನ್ನು ಸಂಪೂರ್ಣ ಇತ್ಯರ್ಥಪಡಿಸಿ ಸಂಘರ್ಷಕ್ಕೆ ಮಂಗಳ ಹಾಡುವ ಕಾಲ ಬಂದಿದೆ.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *