ಪ್ರಸ್ತುತಿ
ರಾಜದೀಪ್ ಸರ್ದೇಸಾಯಿ
ವಿಜ್ಞಾನ ಭವನದ ಸಮಾರಂಭದಲ್ಲಿದ್ದ ಪ್ರಧಾನಮಂತ್ರಿಗಳು ಮಿಕ್ಕುಳಿದವರಿಗೆ ಒಂದು ಪಥವನ್ನು ತೋರಬೇಕಿತ್ತು. ಕೇಂದ್ರ ತನಿಖಾ ಸಂಸ್ಥೆಗಳನ್ನು ಅಧಿಕಾರಸ್ಥ ಸರಕಾರ ವಿರೋಧ ಪಕ್ಷದವರ ದಮನಕ್ಕೆ ನಿರಂತರವಾಗಿ ಬಳಸುತ್ತಲೇ ಬಂದಿದೆ ಎನ್ನುವ ಆರೋಪಕ್ಕೆ ಮೋದಿ ನೇರವಾಗಿ ಉತ್ತರಿಸಬಲ್ಲರೇ
ಪ್ರಭುತ್ವದ ಪ್ರತಿಯೊಂದು ಮಗ್ಗುಲಲ್ಲೂ ಅಧಿಕಾರಿ ವರ್ಗದವರ ಅತಿಕ್ರಮಗಳು ಮತ್ತು ಅಧಿಕಾರಸ್ಥರ ಪರ ಪೊಲೀಸ್ ಪಕ್ಷಪಾತ ನಿಚ್ಚಳವಾಗಿದೆ.
ಕಾನೂನುಬದ್ಧ ಪ್ರಕ್ರಿಯೆಗಳತ್ತ ಗೌರವ ಕಡಿಮೆಯಾಗುತ್ತಿದೆ. ಈ ಕೊಂಡಿಯನ್ನು ಈಗಲೇ ಮುರಿಯಬೇಕಿದೆ. ಕಷ್ಟಪಟ್ಟು ಗಳಿಸಿರುವ ಪ್ರಜಾಪ್ರಭುತ್ವ ವನ್ನು ಪೊಲೀಸ್ ರಾಜ್ ವ್ಯವಸ್ಥೆಗೆ ಪರಿವರ್ತಿಸುವುದು ಯೋಚನೆ ಕೂಡ ಮಾಡಲಾಗದ ಸಂಗತಿ.
ಅಸ್ಸಾಮಿನ ಪೊಲೀಸರು ಇದನ್ನೇ ಯೋಚಿಸುತ್ತಾರೆಂದರೆ, ಅದೊಂದು ವಿಕೃತ ಚಿಂತನೆ. ಗುಜರಾತಿನ ಶಾಸಕ ಜಿಗ್ನೇಶ್ ಮೆವಾನಿಗೆ ಜಾಮೀನು ಮಂಜೂರು ಮಾಡುವ ವೇಳೆ ಬರ್ಪೇಟಾ ಸೆಶನ್ಸ್ ಕೋರ್ಟಿನ ನ್ಯಾಯಾಧೀಶ ಜಸ್ಟಿಸ್ ಅಪರೇಶ್ ಚಕ್ರವರ್ತಿ ಈ ಮಾತನ್ನು ಹೇಳಿದ್ದಾರೆ.
ಸುಳ್ಳು ಎಫ್.ಐ.ಆರ್. ದಾಖಲಿಸಿರುವ ರಾಜ್ಯ ಪೊಲೀಸರ ನಡೆಯನ್ನು ಖಂಡಿಸಿರುವ ಅವರು, ಇದು ನ್ಯಾಯಾ ಲಯ ಮತ್ತು ಕಾನೂನಿನ ಪ್ರಕ್ರಿಯೆಯ ನಿಂದನೆ ಎಂದಿದ್ದಾರೆ. ಒಂದು ಪುಟ್ಟ ಪಟ್ಟಣದ ನ್ಯಾಯಾಲಯದ ನ್ಯಾಯಾಧೀಶರು ರಾಜ್ಯದ ಪೊಲೀಸರಿಗೆ ಸಾಂವಿಧಾನಿಕ ಕರ್ತವ್ಯ ಮತ್ತು ಕಾನೂನು ಪಾಲನೆಯ ಪಾಠ ಮಾಡಿರುವುದು ಅವರ ಧೈರ್ಯಶಾಲಿತ್ವವನ್ನು ತೋರುತ್ತದೆ. ಈ ನ್ಯಾಯಿಕ ಉದ್ಘೋಷಣೆಯ ಒಂದು ದಿನದ ನಂತರದಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಮುಖ್ಯ ನ್ಯಾಯಾಧೀಶರುಗಳ ಉನ್ನತ ಮಟ್ಟದ ಸಮಾವೇಶವೊಂದು ದೆಹಲಿಯ ವಿಜ್ಞಾನ ಭವನದಲ್ಲಿ, ಅದೂ ಆರು ವರ್ಷಗಳ ಬಳಿಕ ಸೇರಿದ್ದು ಗಮನಾರ್ಹ ವೆನಿಸಿತ್ತು.
ಈ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಮುಖರಲ್ಲಿ ಅಸ್ಸಾಮಿನ ಮುಖ್ಯಮಂತ್ರಿ ಮತ್ತು ಗೃಹಸಚಿವರೂ ಆಗಿರುವ ಹಿಮಂತ ಬಿಸ್ವಾ ಶರ್ಮ ಕೂಡ ಇದ್ದರು. ಶಾಸಕ ಮೆವಾನಿಯನ್ನು ರಾತ್ರೋರಾತ್ರಿ ಗುಜರಾತಿನಿಂದ ಅಸ್ಸಾಮ್ ಪೊಲೀಸರು ದೂರದ ಕೊಕ್ರಾಝರ್‌ಗೆ ಎತ್ತಿಹಾಕಿಕೊಂಡು ಬಂದಿರುವುದು ಮುಖ್ಯಮಂತ್ರಿಗಾಗಲೀ, ಗುಜರಾತಿನ ಕಾನೂನು ಪರಿಪಾಲನಾ ವ್ಯವಸ್ಥೆಗಾಗಲೀ ತಿಳಿಯದೇ ಹೋಯಿತೇ? ಪ್ರಧಾನಮಂತ್ರಿಯನ್ನೇ ಗುರಿಯಾಗಿಸಿಕೊಂಡು ಟ್ವೀಟ್‌ಗಳ ಮೂಲಕ ಬೆಂಕಿಯುಗುಳುತ್ತಿದ್ದ ಈ ಶಾಸಕನಿಗೆ ಪಾಠ ಕಲಿಸಲೆಂದು ಬಿಜೆಪಿ ಅಧಿಕಾರದಲ್ಲಿರುವ ಎರಡು ರಾಜ್ಯಗಳು ಹೂಡಿದ್ದ ತಂತ್ರ ಇದೆಂದು ಹೇಳಲಾಗುತ್ತಿತ್ತು.
ರಾಜಕೀಯ ಮೇಲಾಟವನ್ನು ಪ್ರದರ್ಶಿಸುವುದಕ್ಕೆ ರಾಜ್ಯ ಸರಕಾರ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಸಿಕ್ಕೀತೇ? ಇದೊಂದೇ ಪ್ರಕರಣವಲ್ಲ. ಪಂಜಾಬ್‌ನಲ್ಲಿ ಅಧಿಕಾರಗ್ರಹಣ ಮಾಡಿದ ನೂತನ ಆಮ್ ಆದ್ಮಿ ಪಾರ್ಟಿಯ ಸರಕಾರ ಬಂದ ಕೆಲದಿನಗಳ ಪಂಜಾಬ್ ಪೋಲೀಸರು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ವಿರುದ್ಧ ಟೀಕೆ ಮಾಡುತ್ತಿದ್ದವರ ವಿರುದ್ಧ ಸರಣಿ ಎಫ್.ಐ.ಆರ್. ದಾಖಲಿಸಿದರು.
ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತನ್ನ ಎದುರಾಳಿಗಳನ್ನು ಮಟ್ಟಹಾಕಲು ಪೊಲೀಸರನ್ನೇ ಅಸವಾಗಿ ಬಳಸುತ್ತಿದ್ದಾರೆಂಬ ಆರೋಪ ಬಲವಾಗಿದೆ.
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥರ ಸರಕಾರ ಕೂಡ ರಾಜಕೀಯ ವಿಮರ್ಶೆ ಮಾಡುವ ಪತ್ರಕರ್ತರ ವಿರುದ್ಧ ದೇಶದ್ರೋಹದ ಪ್ರಕರಣವೆಂದು ಕ್ರಿಮಿನಲ್ ಕೇಸುಗಳನ್ನು ದಾಖಲಿಸಿದೆ. ಮಹಾರಾಷ್ಟದಲ್ಲಿ ಉದ್ಧವ ಠಾಕ್ರೆಯವರ ಸರಕಾರವೂ ವಿರೋಧಿಗಳ ಮೇಲೆ ದುರುದ್ದೇಶಪೂರಿತ ಪೊಲೀಸ್ ಕೇಸುಗಳಿಂದ ಹೆದರಿಸುತ್ತಲೇ ಬಂದಿದೆ. ಈ ರೀತಿಯ ಪ್ರತೀಕಾರದ ರಾಜಕೀಯ ಮಾಡದ ಮುಖ್ಯಮಂತ್ರಿ ಯಾರಾದರೂ ಇದ್ದಾರೆಯೇ ಎಂಬುದು ಇಲ್ಲಿ
ಉದ್ಭವಿಸುವ ಪ್ರಶ್ನೆ.
ವಿಜ್ಞಾನ ಭವನದ ಸಮಾರಂಭದಲ್ಲಿ ವೇದಿಕೆಯ ಮೇಲೆ ಆಸೀನರಾಗಿದ್ದ ಪ್ರಧಾನಮಂತ್ರಿಗಳು ತಮ್ಮ ಭಾಷಣದ ಮೂಲಕ ಮಿಕ್ಕುಳಿದವರಿಗೆ ಒಂದು ಪಥವನ್ನು ತೋರಬೇಕಿತ್ತು. ಕೇಂದ್ರ ತನಿಖಾ ಸಂಸ್ಥೆಗಳನ್ನು ಅಧಿಕಾರಸ್ಥ ಸರಕಾರ ವಿರೋಧ ಪಕ್ಷದವರ ದಮನಕ್ಕೆ ನಿರಂತರವಾಗಿ ಬಳಸುತ್ತಲೇ
ಬಂದಿದೆ ಎನ್ನುವ ವಿರೋಧ ಪಕ್ಷಗಳ ನಾಯಕರ ಆರೋಪಕ್ಕೆ ನರೇಂದ್ರ ಮೋದಿ ನೇರವಾಗಿ ಉತ್ತರಿಸಬಲ್ಲರೇ? ೨೦೦೧ರಲ್ಲಿ ತಮಿಳುನಾಡಿನಲ್ಲಿ ನಡೆದ ಜಯಲಲಿತಾ-ಕರುಣಾನಿಧಿ ನಡುವಣ ಯುದ್ಧವನ್ನು ನೆನಪಿಸಿಕೊಳ್ಳಿ. ರಾತ್ರಿ ಎರಡು ಗಂಟೆಗೆ ಡಿ.ಎಂ.ಕೆ. ಮುಖ್ಯಸ್ಥನ ಮನೆಯ ಕದತಟ್ಟಿ ಎಬ್ಬಿಸಿ,
ಉಟ್ಟಬಟ್ಟೆಯಲ್ಲಿ ಜೀಪಿಗೆ ತುಂಬಿ, ಕ್ರಿಮಿನಲ್ ಅಪರಾಧಿಯನ್ನು ನಡೆಸಿಕೊಳ್ಳುವ ರೀತಿ ವರ್ತಿಸಿದ್ದು ನಮ್ಮೆಲ್ಲರಿಗೆ ಗೊತ್ತೇ ಇದೆ.
ತಮಿಳುನಾಡಿನಲ್ಲಂತೂ ವ್ಯಕ್ತಿಗತ ದ್ವೇಷದ ರಾಜಕೀಯ ಪರಾಕಾಷ್ಠೆಯನ್ನು ತಲುಪಿದ್ದು ಅದು ಲಜ್ಜೆಗೆಟ್ಟ ಪ್ರತೀಕಾರ ಸಂಸ್ಕೃತಿಯಾಗಿ ಬಿಂಬಿತವಾಗಿದೆ.
ಹಿಂದೆಲ್ಲ ಎಲ್ಲಾ ಅಮ್ಮೆ ಇಮ್ಮೆ ಕಾಣಿಸಿಕೊಳ್ಳುತ್ತಿದ್ದ ಇಂತಹ ಪ್ರಸಂಗಗಳು ಈಗ ದೇಶಾದ್ಯಂತ ವ್ಯಾಪಕವಾಗಿವೆ ಎಂದೆನಿಸುತ್ತದೆ. ಇತ್ತೀಚಿನ ಮೆವಾನಿ ಪ್ರಕರಣವಂತೂ ಅದಕ್ಕೊಂದು ಉದಾಹರಣೆ ಎಂಬಂತಿದೆ. ಅದೇ ಪ್ರಕಾರವಾಗಿ ಮುಂಬೈನಲ್ಲಿ ಮುಖ್ಯಮಂತ್ರಿ ಮನೆ ಮುಂದುಗಡೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿದ ನವನೀತ ರಾಣಾ ಮತ್ತು ಆಕೆಯ ಪತಿ ರವಿ ರಾಣಾ ಮೇಲೆ ದೇಶದ್ರೋಹದ ಆರೋಪ ಮಾಡಿ ಜೈಲು ಶಿಕ್ಷೆ ವಿಧಿಸಿದ್ದಕ್ಕೆ
ಏನಾದರೂ ಸಮರ್ಥನೆ ಇದೆಯೇ? ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ, ನ್ಯಾಯಾಲಯಗಳು ಕೂಡ, ಕೆಲವೊಮ್ಮೆ, ತ್ವರಿತ ಮತ್ತು ನ್ಯಾಯ ಯುತ ಕ್ರಮಕ್ಕೆ ಮುಂದಾಗುವ ಬದಲು ವಿಚಾರವನ್ನು ಮುಂದಕ್ಕೆ ಹಾಕುವ ಅಥವಾ ರಾಜಕೀಯವಾಗಿ ಸೂಕ್ತವೆನಿಸುವ ನಿಲುವನ್ನು ತಾಳುತ್ತಿವೆ ಎಂಬ ಆರೋಪಗಳೂ ಇವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ ೩೭೦ಯನ್ನು ವಿಧ್ಯುಕ್ತವಾಗಿ ರದ್ದು ಮಾಡಿದ ನಂತರದಲ್ಲಿ ನಡೆದ ಸಾಮೂಹಿಕ ದಸ್ತಗಿರಿಗಳ ಸಂದರ್ಭದಲ್ಲಿ ದಾಖಲಾದ ಹೇಬಿಯಸ್ ಕಾರ್ಪಸ್ ಅರ್ಜಿಗಳ ಮೇಲೆ ಕ್ರಮ ಜರುಗಿಸಲು ಕೋರ್ಟುಗಳು ಏಕೆ ಹಿಂಜರಿದವು? ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್ ಜಾಮೀನು ಅರ್ಜಿಯನ್ನು ಡೆಲ್ಲಿ ಹೈಕೋರ್ಟು ಯಾಕೆ ಅಷ್ಟೊಂದು ಎಳೆದಾಡಿತು? ಸೆಲೆಬ್ರಿಟಿ ಪತ್ರಕರ್ತ ಅರ್ನಾಬ್ ಗೋಸ್ವಾಮಿಗೆ ಜಾಮೀನು ಕೊಡಿಸುವ ವಿಚಾರದಲ್ಲಿ ಸುಪ್ರೀಮ್ ಕೋರ್ಟು ಯಾತಕ್ಕೆ ಗಮನಾರ್ಹವಾದ ಚುರುಕುತನವನ್ನು ತೋರಿತು? ಅದೇ ಕಾಲದಲ್ಲಿ, ಅಷ್ಟೇನೂ
ಜನಪ್ರಿಯನಲ್ಲದ ಪತ್ರಕರ್ತ ಸಿದ್ಧಿಕಿ ಕಪ್ಪನ್‌ಗೆ ಏಕೆ ಜಾಮೀನು ನಿರಾಕರಣೆಯಾಯಿತು? ಉತ್ತರಪ್ರದೇಶದ ಪೊಲೀಸರು ಕಪ್ಪನ್ ಮೇಲೆ ಉಗ್ರವಾದದ ಆರೋಪ ಹೊರಿಸಿ ೨೦ ತಿಂಗಳ ಕಾಲ ಜೈಲು ಶಿಕ್ಷೆಯಾಗುವಂತೆ ಮಾಡಿದರಲ್ಲ.
ವ್ಯಕ್ತಿಗತ ಬದುಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತಾಗಿ ಸಾಂವಿಧಾನಿಕ ಖಾತರಿ ಇಲ್ಲದಿರುವ ಬಗ್ಗೆ ನಾವೆಲ್ಲ ವಿಷಾದದಿಂದ ಬರೆಯಬೇಕಾಗಿದೆ.
ಬಹುಮುಖ್ಯವಾಗಿ ನಮ್ಮ ದೇಶದಲ್ಲಿ ಸಂಘಟಿತವಾಗಿಲ್ಲದಿರುವ ನಾಗರಿಕ ಸಮಾಜ ಇದಕ್ಕೆಲ್ಲ ದಾರಿಮಾಡಿಕೊಡುತ್ತಿದೆ. ಎಲ್ಲ ನ್ಯಾಯಿಕ ಪ್ರಕ್ರಿಯೆಗಳನ್ನೂ ಬದಿಗೊತ್ತಿ, ಗಲಭೆ ಪೀಡಿತ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳ ಅದಿಕಾರಸ್ಥರು ಬುಲ್ಡೋಜರ್ ಬಳಸಿ ನಾಗರಿಕರ ಮನೆಗಳನ್ನು ನೆಲಸಮ ಮಾಡು ವಾಗಲೂ ಜನಸಮುದಾಯದಿಂದ ವಿರೋಧ ವ್ಯಕ್ತವಾಗದೇ ಇರುವುದಕ್ಕೆ ಕಾರಣವೇನು? ದುರದೃಷ್ಟವಶಾತ್, ಅತ್ಯುಗ್ರ ಪಕ್ಷಪಾತವನ್ನು ಹುರಿದುಂಬಿ ಸುವ ನಾಯಕರುಗಳು ತಮ್ಮ ವ್ಯಕ್ತಿಗತ ಪ್ರಭಾವ ಮತ್ತು ರಾಜಕೀಯ ಹಿತಾಸಕ್ತಿಯನ್ನು ಮುನ್ನೆಲೆಗೆ ತಂದು ತಮಗೆ ಬೇಕಾದಂತೆ ತೀರ್ಮಾನಗಳನ್ನು ಜಾರಿಗೊಳಿಸಿ ತಾವು ಕಾನೂನು ಪಾಲಕ ನಾಗರಿಕರು ಎಂಬಂತೆ ತಮ್ಮನ್ನು ಪ್ರತಿಬಿಂಬಿಸುತ್ತಿದ್ದಾರೆ.
ಸಾಮಾನ್ಯ ಭಾರತೀಯನಾಗಿರಲಿ, ರಾಜಕೀಯ ನಾಯಕನಾಗಿರಲಿ ಸಾರ್ವಜನಿಕ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಹೀಗಿರುವಾಗ ಕಾನೂನಿನ ಪ್ರಕ್ರಿಯೆ
ಯನ್ನು ಅಷ್ಟು ನಿರ್ಭಯವಾಗಿ ಬುಡಮೇಲು ಮಾಡಲು ಮುಂದಾಗುವುದು ಸರಿಯಾದ ನಡೆಯಲ್ಲ. ನಿಮ್ಮ ಬದ್ಧತೆ ಇರಬೇಕಾಗಿರುವುದು ನಿಮ್ಮ ರಾಜ ಕೀಯ ಗುರುವಿನ ಆಗ್ರಹದ ಮೇಲಲ್ಲ, ಪ್ರಜಾಪ್ರಭುತ್ವದ ಅಂಶಗಳ ಮೇಲೆ ಎಂಬುದನ್ನು ಖಾಕಿ ಯುನಿಫಾರ್ಮಿನಲ್ಲಿರುವವವರಿಗೆ ಮತ್ತೆ ಮತ್ತೆ ಒತ್ತಿ ಹೇಳಬೇಕಿದೆ.
ಬಾರ್ಪೆಟಾ ನ್ಯಾಯಾಧೀಶರು ಕೊಟ್ಟಿದ್ದ ಟಿಪ್ಪಣಿಯ ನಂತರದ ಕೆಲದಿನಗಳಲ್ಲಿ ಪ್ರತಿಕೂಲ ಕಾಮೆಂಟುಗಳ ಕುರಿತಂತೆ, ರಾಜ್ಯ ಪೋಲೀಸರ ಮನವಿಯ ಮೇರೆಗೆ ಅಸ್ಸಾಮ್ ಹೈಕೋರ್ಟು ತಡೆಯಾಜ್ಞೆಯೊಂದನ್ನು ಕೊಡುತ್ತದೆ. ಇದು ಇನ್ನಷ್ಟು ಕಳವಳಕ್ಕೆ ಈಡುಮಾಡುವ ಸಂಗತಿ. ಇಲ್ಲಿ ಉದ್ಭವಿಸುವ ಪ್ರಶ್ನೆಗಳು ಒಂದೆರಡಲ್ಲ. ಉನ್ನತ ಮಟ್ಟದ ಪ್ರಕರಣವೊಂದರ ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸಿದ ನ್ಯಾಯಾಧೀಶರನ್ನು ವರ್ಗಾವಣೆ ಮಾಡಬೇಕೇ? ಸುಳ್ಳುಕೇಸು ದಾಖಲಿಸುವುದಕ್ಕೆ ಸಹಕಾರ ನೀಡಿದ ಅಧಿಕಾರಿಗಳ ಮೇಲೆ ದಂಡನಾಕ್ರಮ ಜರುಗಿಸಬೇಕೇ? ಅಥವಾ ಅವರಿಗೆ ಪದೋನ್ನತಿ ಕೊಡಬೇಕೆ?