ಪ್ರಸ್ತುತ
ಪ್ರೊ.ಆರ್.ಜಿ.ಹೆಗಡೆ
ramhegde62@gmail.com
ರಾಜ್ಯ ವಿಧಾನಸಭೆಯ ಸ್ಪೀಕರ್ ಕಾಗೇರಿ ವಿಶ್ವೇಶ್ವರ ಹೆಗಡೆ ಸುಸಂಸ್ಕೃತ ರಾಜಕಾರಣಿ. ಗೌಜು, ಗಲೀಜು, ವಿವಾದಗಳಿಂದ ದೂರ. ಘನತೆ ಕಾಯ್ದುಕೊಂಡ ವರು. ಕಲಾಪಗಳಿಗೆ ಶಿಸ್ತು ತರಲು ಅವರು ಮಾಡುತ್ತಿರುವ ಪ್ರಯತ್ನಗಳೇ ಇದಕ್ಕೆ ಸಾಕ್ಷಿ. ಕಾಗೇರಿ ಕಳೆದ ಕಾಲು ಶತಮಾನದ ರಾಜಕೀಯವನ್ನು ಹತ್ತಿರದಿಂದ ಕಂಡವರು.
ಅವರು ಸಾರ್ವಜನಿಕವಾಗಿ ಮಾತನಾಡುವುದೂ ಕಡಿಮೆ. ಅಂತಹ ಕಾಗೇರಿ ಇನ್ನು ಮೌನವಾಗಿರುವುದು ಸಾಧ್ಯವೇ ಇಲ್ಲ ಎನ್ನುವಂತೆ ಮಾತಾಡಿದ್ದಾರೆ; ಅದೂ ಕಣ್ಣೀರಿನೊಂದಿಗೆ. ಮಾತ್ರವಲ್ಲ ತಾವು ಮಾತಾಡಿದ ವಿಷಯಗಳ ಕುರಿತು ಚರ್ಚೆ ನಡೆಯಬೇಕೆಂದು ಹೇಳಿದ್ದಾರೆ.(ಪತ್ರಿಕಾ ವರದಿ) ಖಂಡಿತಕ್ಕೂ ಪ್ರತಿಯೊಬ್ಬ ನಾಗರಿ ಕನೂ ಈ ಚರ್ಚೆಯಲ್ಲಿ ಭಾಗವಹಿಸಲೇಬೇಕಿದೆ.
ಕಾಗೇರಿ ಹೇಳಿದ್ದೇನೆಂದರೆ, ನಮ್ಮ ಪ್ರಜಾಪ್ರಭುತ್ವ ಕುಸಿದು ಹೋಗಿದೆ. ಲೋಕಸಭೆ, ವಿಧಾನಸಭೆ ಅಷ್ಟೇ ಅಲ್ಲ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳೂ ಕುಲಗೆಟ್ಟು ಹೋಗಿವೆ. ಹಣವಿಲ್ಲದವರು ಸ್ಪರ್ಧಿಸಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಇದೆ. ಪಕ್ಷಗಳ ನಡುವೆಯೂ ಬಹುಶಃ ಬಹಳ ವ್ಯತ್ಯಾಸವೇನೂ ಇಲ್ಲ. ಹಾಗಾಗಿ ಪಕ್ಷಗಳನ್ನು ಬಿಟ್ಟು ವ್ಯಕ್ತಿಯ ಅರ್ಹತೆಯನ್ನನುಸರಿಸಿ ಆಯ್ಕೆಯಾಗಬಲ್ಲ ಮಾನದಂಡಗಳನ್ನು ಹುಡುಕಬೇಕಿದೆ. ಹಣ, ತೋಳ್ಬಲ, ವಿಭಜಿಸಿ ಆಳುವ ತಂತ್ರ, ಆಮಿಷ ಮತ್ತು ಮತೀಯತೆ ಪ್ರಜಾಪ್ರಭುತ್ವವನ್ನು ಹಾಳುಗೆಡವಿವೆ. ಮಾತುಗಳು ಸೂಚಿ ಸಿರುವುದೆಂದರೆ ರಾಜಕೀಯ ಸಂಕಟದಲ್ಲಿದೆ. ದುಷ್ಟ ಶಕ್ತಿಗಳು ರಾಜಕೀಯವನ್ನು ಗುತ್ತಿಗೆ ಹಿಡಿಯುವ ಹಂತದಲ್ಲಿವೆ.
ಪ್ರಚಂಡ ಭ್ರಷ್ಟತೆ ಹಾಗೂ ಹಣದ ಮುಂದೆ ಬಹುಶಃ ನಾವು ಅಸಹಾಯಕರಾಗುತ್ತ ಹೋಗುತ್ತಿದ್ದೇವೆ ಎನ್ನುವು ದನ್ನು ಅವರ ಕಣ್ಣೀರು ಸಂಕೇತಿಸಿದೆ. ಪ್ರಶ್ನೆ ಎಂದರೆ ನಾವು ಇಲ್ಲಿಗೆ ಹೇಗೆ ಬಂದು ಮುಟ್ಟಿದೆವು? ಮತ್ತು ಇಲ್ಲಿಂದ ಹೊರಬರುವುದು ಹೇಗೆ? ಹಿಂದೆ ಸಾಮಾನ್ಯವಾಗಿ ನಾವು ಭಾವಿಸಿಕೊಂಡಿದ್ದೆಂದರೆ ಚುನಾವಣೆಗಳು ಕೆಟ್ಟಿವೆ. ಹಾಗಾಗಿ ತಪ್ಪು ಜನ ಆಯ್ಕೆಯಾಗುತ್ತಿದ್ದಾರೆ.
ಅವನ್ನು ಸರಿ ಮಾಡಿದರೆ ಎಲ್ಲವೂ ಸರಿಯಾಗುತ್ತದೆ ಎಂಬ ಆಶಾಭಾವ ಇತ್ತು. ಆ ಗ್ರಹಿಕೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹಲವು ಒಳ್ಳೆಯ ಕ್ರಮಗಳನ್ನು ತೆಗೆದುಕೊಂಡಿದೆ. ಮತ್ತು ಚುನಾವಣಾ ಪ್ರಕ್ರಿಯೆಯನ್ನು ಅದ್ಭುತವಾಗಿ ಸ್ಟ್ರೀಮ್‌ಲೈನ್ ಗೊಳಿಸಿದೆ. ಆದರೂ ಸಮಸ್ಯೆ ಪರಿಹಾರವಾಗಿಲ್ಲ.
ಅಂದರೆ ಕಾರಣಗಳು ಬೇರೆಯೇ ಇವೆ. ಬಹುಶಃ ಇಂತಹ ಮೂರು ಕಾರಣಗಳಿವೆ. ಮೊದಲನೆಯದು ಬದಲಾಗಿ ಹೋಗಿರುವ ಜನರು ಮತ್ತು ಅಭ್ಯರ್ಥಿಗಳ
ನಡುವಿನ ಸಂಬಂಧ, ಚುನಾವಣೆಗಳ ಕುರಿತಾದ ಗ್ರಹಿಕೆ ಮತ್ತು ಚುನಾವಣಾ ತಂತ್ರಗಳು.
ಎರಡನೆಯದು, ವ್ಯವಸ್ಥೆಯೊಳಗೆ ಹುಟ್ಟಿಕೊಂಡ ಕೆಲವು ಸಮಸ್ಯೆಗಳಿಂದಾಗಿ ಬಹುಶಃ ಕೆಲವು ಜನಪ್ರತಿನಿಧಿಗಳಿಗೆ ದೊರೆಯುತ್ತಿರುವ ‘ಒಳ ಅವಕಾಶ ಗಳು’. ಮೂರನೆಯದು ಬಹುಶಃ ದೇಶದಲ್ಲಿ ಹರಿಯುತ್ತಿರುವ ವಿಪರೀತ ಭ್ರಷ್ಟ ಹಣ. ಒಂದನೆಯ ವಿಷಯ. ಬಹುಶಃ ಹಿಂದೆ ಇಂದಿರಾ, ವಾಜಪೇಯಿ, ರಾಮಕೃಷ್ಣ ಹೆಗಡೆ, ಎಂಜಿಆರ್ ಅವರಂಥ ನಾಯರು (ಅಂತವರು ಹಲವರಿದ್ದರು) ಮತ್ತು ಜನರ ನಡುವೆ ಒಂದು ಭಾವನಾತ್ಮಕ ಸಂಬಂಧವಿತ್ತು. ಈಗಲೂ ಪ್ರಧಾನಿ ಮೋದಿ ಮತ್ತು ಜನರ ನಡುವೆ ಅಂತಹ ಸಂಬಂಧವಿದೆ. ಹೀಗೆ ಸಂಬಂಧವಿರುವಲ್ಲಿ ಜನ ರಾಜಕಾರಣಿಗಳನ್ನು ದೇವರಂತೆ ಕಾಣುತ್ತಾರೆ ಮತ್ತು ಪ್ರೀತಿಸುತ್ತಾರೆ. ಹಣದ ಪ್ರಶ್ನೆ ಇರಲಿಲ್ಲ. ಇರುವುದೂ ಇಲ್ಲ.
ಹಾಗಿದ್ದಾಗ ವೋಟ್ ಮಾಡುವುದು ಒಂದು ಧಾರ್ಮಿಕ ಕ್ರಿಯೆಯಂತಹ ಸಂಗತಿ. ಜನ ತಮ್ಮ ದೇವರನ್ನು ಬಿಟ್ಟು ಬೇರೆಯವರಿಗೆ ವೋಟ್ ಹಾಕುವುದಿಲ್ಲ. ದುಡ್ಡಿನ ಪ್ರಶ್ನೆಯೇ ಇಲ್ಲ. ಇಂದು ಅಂತಹ ಸಂಬಂಧ ಸಾಮಾನ್ಯವಾಗಿ ಇಲ್ಲ. (ನಾಯಕ ಮತ್ತು ಜನ ಎರಡೂ ಕಡೆಯಿಂದ). ಸಂಬಂಧ ಮುರಿದು ಹೋಗಿ ಹೆಚ್ಚೂ ಕಡಿಮೆ ಚುನಾವಣೆ ಒಂದು ಅಪ್ಪಟ ಲೆಕ್ಕಾಚಾರದ, ಸ್ವಾರ್ಥದ ವಿಷಯವಾಗಿದೆ. ಜನ ಸ್ಪರ್ಧಿಸುವುದು ತಮ್ಮ ವೈಯಕ್ತಿಕ ವ್ಯವಹಾರದ ಅಭಿವೃದ್ಧಿಯ ಆಸಕ್ತಿಯಿಂದಾಗಿಯೇ, ದುಡ್ಡಿಗಾಗಿಯೇ ಎಂಬ ಭಾವನೆ ಜನರಲ್ಲಿ ಮೂಡಿದಂತಿದೆ.
ಅವರಿಗೆ ಗೆಲ್ಲುವುದು ಮುಖ್ಯ. ಎಷ್ಟು ಬೇಕಾದರೂ ಖರ್ಚು ಮಾಡುತ್ತಾರೆ ಎಂಬ ಭಾವನೆಯೂ ಮೂಡಿದೆ. ಹೀಗಾಗಿ ಅಭ್ಯರ್ಥಿಗಳ ಕುರಿತು ಜನರಲ್ಲಿ ಪ್ರೀತಿ ಇಲ್ಲ. ಹೇಗಿದ್ದರೂ ಚುನಾವಣೆ ರಾಜಕಾರಣಿಗಳಿಗೂ ವ್ಯವಹಾರ. ತಾವೂ ವ್ಯವಹಾರಕ್ಕೆ ಇಳಿದರೆ ತಪ್ಪೇನು ಎಂಬ ಭಾವನೆ ಬಂದಂತಿದೆ. ಆ ಸಂದ
ರ್ಭದಲ್ಲಿ ತಾವೂ ಬಂದಷ್ಟು ಬಡಿದುಕೊಂಡರೆ ತಪ್ಪೇನು ಎಂಬ ಭಾವನೆ ಬಂದಂತಿದೆ. ಇದೇ ನಿಲುವನ್ನು ಜನ ಬಹುತೇಕ ರಾಜಕಾರಣಿಗಳ ಕುರಿತು ತೆಗೆದುಕೊಂಡಂತಿದೆ.
ಜನಪ್ರತಿನಿಧಿಯಾದ ವ್ಯಕ್ತಿ, ಇದ್ದಕ್ಕಿದ್ದ ಹಾಗೇ ಶ್ರೀಮಂತನಾಗುವಂತೆ (ಸಾಧಾರಣವಾಗಿ)ಕಾಣುವುದು ಜನ ಇಂತಹ ಮನಃಸ್ಥಿತಿಗೆ ಬರಲು ಕಾರಣವಿರ ಬಹುದು. ಹಾಗೆಂದು ಜನ ಸುಬಗರೆಂದೇನೂ ಅಲ್ಲ. ಅವರ ನೈತಿಕತೆಯ ಮಟ್ಟ ಇಳಿದಿರುವುದೂ ಇದಕ್ಕೆ ಕಾರಣವೇ. ಒಟ್ಟಾರೆ ಹೆಚ್ಚಾಗಿ ಇಂದು ಚುನಾವಣೆಯೆಂದರೆ ಬಹುತೇಕ ದುಡ್ಡಿನ ವ್ಯವಹಾರ. ಎಷ್ಟರ ಮಟ್ಟಿಗೆ ಎಂದರೆ ಪ್ರಣಾಳಿಕೆ, ಪ್ರಚಾರ ಇತ್ಯಾದಿಗಳಿಗೆ ಈಗ ಕಿಮ್ಮತ್ತಿಲ್ಲ. ಹೀಗೆ ಆಗಿರುವು ದಿಂದಲೇ ಇಂದಿನ ಚುನಾವಣೆಗಳು ಹಣ ಕೇಂದ್ರಿತವಾಗಿ ಹೋಗಿದ್ದು. ಹಣವಂತರೇ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಆಗಿಹೋಗಿದ್ದು.
ಎರಡನೆಯ ವಿಷಯ: ಹಣವಂತರನ್ನು ಬಿಟ್ಟು ಬೇರೆಯವರು ಚುನಾವಣೆಗೆ ಸ್ಪರ್ಧಿಸಲಾಗದ ಪರಿಸ್ಥಿತಿ ನಿರ್ಮಾಣವಾಗುವುದಕ್ಕೆ ಇನ್ನೂ ಒಂದು
ಕಾರಣವಿದೆ. ಇತ್ತೀಚಿನ ವರ್ಷಗಳಲ್ಲಿ ಒಮ್ಮೆಲೇ ಶ್ರೀಮಂತರಿಗೆ ರಾಜಕೀಯ ವಿಶೇಷ, ವಿಪರೀತ ಆಕರ್ಷಣೆಯ ಕ್ಷೇತ್ರವಾಗಿ ಹೋಗಿದೆ. ಕೆಲವು ವರ್ಷಗಳ ಹಿಂದೆ ಹಾಗೆ ಇರಲಿಲ್ಲ. ಏಕೆಂದರೆ ಶ್ರೀಮಂತರಿಗೆ ಜನ ಮತ ಹಾಕುತ್ತಿರಲಿಲ್ಲ. ಅವರಿಂದ ಗೆಲ್ಲಲಾಗುತ್ತಿರಲಿಲ್ಲ. ಆದರೆ ಇಂದು ಅದೆಲ್ಲ ಬದಲಾಗಿದೆ. ಮೇಲೆ
ಹೇಳಿದ ಹಾಗೆ ದುಡ್ಡು ಇಂದು ಒಂದು ಮಾನದಂಡ. ಅಷ್ಟೇ ಅಲ್ಲ. ರಾಜಕೀಯ ಎಂತಹ ಶಕ್ತಿಯನ್ನು ತಂದುಕೊಡುತ್ತದೆ ಎಂಬುದರ ರುಚಿ ಶ್ರೀಮಂತರಿಗೆ ಗೊತ್ತಾಗಿ ಹೋಗಿದೆ.
ಇಲ್ಲಿ ದುಡ್ಡು ಹಾಕಿ ದುಡ್ಡು ತೆಗೆಯಬಹುದು ಎಂಬುದು ಅವರ ಭಾವನೆ. ಮತ್ತು ದೊಡ್ಡ ಪ್ರಮಾಣದ, ಅಂದರೆ ನೂರಾರು, ಸಾವಿರಾರು ಕೋಟಿಯಲ್ಲಿ ಹಣ ಬರು ವುದು ಅಧಿಕಾರವಿದ್ದರೆ ಮಾತ್ರ ಎಂದಾಗಿದೆ. ಹಿಂದೆ ಪರೋಕ್ಷವಾಗಿ ಅವರೇ ಹಣ ನೀಡುತ್ತಿದ್ದರು. ಈಗ ತಾವೇ ಸ್ಪರ್ಧಿಸುವುದು ಹೆಚ್ಚು ಪ್ರಯೋಜನಕಾರಿ ಎಂಬ ಭಾವನೆ ಬಂದಿದೆ. ಹೇಗೂ ಹಣ ಖರ್ಚು ಮಾಡಿದರೆ ಗೆಲ್ಲಲಾಗುತ್ತದೆ. ಸರಿಯಾಗಿ ಬಳಸಿಕೊಂಡರೆ ಜನ ಪ್ರತಿನಿ ಹುದ್ದೆ ಹಲವು ರೀತಿಯಲ್ಲಿ ಕಾನೂನಾತ್ಮಕ ರಕ್ಷಣೆ ನೀಡುತ್ತದೆ. ಒಂದೊಮ್ಮೆ ಅಧಿಕಾರವಿರದಿದ್ದರೆ ಹಣ ಬರುವುದೂ ಇಲ್ಲ. ಬಂದರೂ ಅದನ್ನು ಇಟ್ಟುಕೊಳ್ಳಲಾಗು ವುದಿಲ್ಲ.
ಇನ್ನು ಕೆಲವರಿಗೆ ಬೇರೆ ಬೇರೆ ರೀತಿಯ ‘ಬಯಕೆಗಳೂ’ ಇರಬಹುದು. ಕೆಲ ಶ್ರೀಮಂತರು ಗೆಲ್ಲಲು ಏನು ಬೇಕಾದರೂ ಮಾಡುವುದು ಇದೇ ಕಾರಣಕ್ಕಿರ ಬಹುದು ಎಂಬ ಗುಮಾನಿಗಳಿವೆ. ಇವೆಲ್ಲವನ್ನೂ ಈ ಗನಿಸಿದಾಗ ದೋಷಪೂರಿತವಾಗಿರುವುದು ಕೇವಲ ನಮ್ಮ ಚುನಾವಣಾ ವ್ಯವಸ್ಥೆಯಲ್ಲ; ಅಽಕಾರ
ವ್ಯವಸ್ಥೆ. ಬೇರೆ ಬೇರೆ ಒಳಕಾರಣಗಳಿಂದಾಗಿ ದೊರೆಯುತ್ತಿರುವ ಯದ್ವಾತದ್ವಾ ಶಕ್ತಿ ಮತ್ತು ಅಧಿಕಾರ. ಏನು ಬೇಕಾದರೂ ಮಾಡುವ ಶಕ್ತಿ. ಹಣಬಲ ಇರುವವರು, ತೋಳ್ಬಲ ಇರುವವರು ಹೆಚ್ಚು ಹೆಚ್ಚಾಗಿ ಚುನಾವಣೆಗಳಿಗೆ ನಿಲ್ಲುವ ಕಾರಣ ಇದೇ. ಇದೇ ಕಾರಣಕ್ಕೆ ಜನಪ್ರತಿನಿಽ ಹುದ್ದೆ ಸ್ವರ್ಗದ ಸುಪ್ಪತ್ತಿಗೆಯನ್ನು ಖಾತ್ರಿಪಡಿಸುತ್ತದೆ.
ಮೂರನೆಯ ಕಾರಣ ವಿಪರೀತವಾಗಿರುವ ಅಕ್ರಮ ಹಣದ ಚಲಾವಣೆ. ಇಂದು ದೇಶದಲ್ಲಿ ದೊಡ್ಡ ಪ್ರಮಾಣದ ಹಣವಿದೆ. ಅಂತಹ ಹಣ ಎಲ್ಲಿಂದ ಬರುತ್ತದೆ ಎನ್ನುವುದನ್ನು ಕೂಡ ಅರಿಯಬೇಕು. ನೈಸರ್ಗಿಕ ಸಂಪನ್ಮೂಲಗಳ ಅಕ್ರಮ ಬಳಕೆ, ಕೋಟಿಗಳ ಟರ್ನ್‌ಓವರ್ ಇರುವ, ‘ನಷ್ಟದಲ್ಲಿ ನಡೆಯುವ’
ಸಾರ್ವಜನಿಕ ಕ್ಷೇತ್ರದ ಕೈಗಾರಿಕೆಗಳು, ಕೃಷಿ ಮಂಡಿಗಳು, ಡ್ರಗ್ ಮಾಫಿಯಾಗಳು, ಹವಾಲಾ ಹಣ, ವಿದೇಶೀ ಹಣ(?) ಎಲ್ಲವೂ ಇವುಗಳ ಮೂಲವೇ. ರಾಜಕೀಯದಲ್ಲಿ ಚಲಾವಣೆಗೊಳ್ಳುವುದೂ ಇಂತಹ ಹಣವೇ. ಸಾಧಾರಣ ಮೂಲಗಳಿಂದ ಬಂದ ಹಣ ಚುನಾವಣಾ ಖರ್ಚಿಗೆ ಸಾಲುವುದಿಲ್ಲ.
ಗಮನಿಸಬೇಕು.ಇಂತಹ ಪರಿಸ್ಥಿತಿ ಹುಟ್ಟಿಕೊಂಡಿರುವುದು ಒಂದು ವ್ಯವಸ್ಥೆಯಿಂದಾಗಿ. ಆ ವ್ಯವಸ್ಥೆ ಬದಲಿಸಲು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬಹುದೇನೋ!
೧ ರಾಜಕೀಯ ಪಕ್ಷಗಳ ಹಣಕಾಸು ವ್ಯವಹಾರವನ್ನುಸರಕಾರೀ ಆಡಿಟ್ ಕೆಳಗಡೆ ಮತ್ತು ಮಾಹಿತಿ ಹಕ್ಕಿನ ಕೆಳಗೆ ತರಬಹುದು.
೨ ಅತಿ ಮಹತ್ವದ ಶಾಸನಬದ್ಧ ಹುದ್ದೆಗಳಿಗೆ ಕನಿಷ್ಠ ಅವಧಿಯನ್ನು ನಿಗದಿ ಪಡಿಸಬಹುದು. ಅಂದರೆ ಮುಖ್ಯವಾಗಿ ಪ್ರಧಾನಿ ಮತ್ತು ಮುಖ್ಯಮಂತ್ರಿ ಯಂಥ ಹುದ್ದೆಗೆ ಒಮ್ಮೆ ಆಯ್ಕೆ ಯಾದರೆ ಕನಿಷ್ಠ ಮೂರು ವರ್ಷಗಳ ಅವಧಿ ನಿಗದಿಪಡಿಸುವುದು. ಹಾಗಾದಲ್ಲಿ ತಮ್ಮ ಹುದ್ದೆ ಭದ್ರತೆಗೆ ‘ಹಣ’ಗಾಡುವ
ಅಥವಾ ಇದಕ್ಕಾ ಖರ್ಚು ಮಾಡುವ ಅಗತ್ಯವಿರುವುದಿಲ್ಲ.
೩ ದೊಡ್ಡ ಪ್ರಮಾಣದ ಹಣಕಾಸಿನ ಡೀಲ್‌ಗಳನ್ನು ಹೊಂದಿರುವ ಸರಕಾರಗಳ ನಿರ್ಧಾರಗಳನ್ನು ಲೋಕಪಾಲ್ ಮತ್ತು ಜುಡಿಶಿಯಲ್ ರಿವ್ಯೂ ಕೆಳಗಡೆ ತರಬಹುದು. ಅಂತಹ ಹುದ್ದೆಗಳ ನೇಮಕ ಅಧಿಕಾರವನ್ನು ಸುಪ್ರೀಮ್ ಕೋರ್ಟನ ಮುಖ್ಯ ನ್ಯಾಯಾಧೀಶರು, ಪ್ರಧಾನಿ ಮತ್ತು ವಿರೋಧಿ ನಾಯಕರನ್ನೊಳಗೊಂಡ ಸಮಿತಿ ನಿರ್ಣಯಿಸಬಹುದು.
೪ ಎಲ್ಲ ಜನಪ್ರತಿನಿಧಿ ಹುದ್ದೆಗಳನ್ನು ಸರಕಾರಿ ನೌಕರರು ಎಂದು ಪರಿಗಣಿಸಿ ಅವರನ್ನು ಸರಕಾರಿ ನೌಕರರ ನಡವಳಿಕೆಯ ಕೋಡ್ ಆಫ್ ಕಂಡಕ್ಟ್ ಕೆಳಗೆ ತರಬಹುದು.
೫ ರಾಜ್ಯಸಭೆ ಮತ್ತು ವಿಧಾನ ಪರಿಷತ್ತುಗಳನ್ನು ಸಾರಾಸಗಟಾಗಿ ರದ್ದುಪಡಿಸಬಹುದು.
೬ ಕ್ರಮೇಣ ಜನಪ್ರತಿನಿಧಿಗಳ ಕ್ಷೇತ್ರ ವ್ಯಾಪ್ತಿಗಳನ್ನು ಎರಡು ಪಟ್ಟು ದೊಡ್ಡಗೊಳಿಸಿ ಜನಪ್ರತಿನಿಧಿಗಳ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಬಹುದು. ಇದರಿಂದಾಗಿ ಶಾಸನ ಸಭೆಗಳಲ್ಲಿನ ಚರ್ಚೆ ಗದ್ದಲಗಳಲ್ಲಿ ಮುಗಿಯದೇ ಉತ್ತಮ ಗುಣಮಟ್ಟದ ಡಿಬೇಟ್ ಸಾಧ್ಯವಾಗಬಹುದು.
೭ ಚುನಾವಣೆಗಳ ಬಹಿರಂಗ ಸಭೆಗಳನ್ನು ಸಂಪೂರ್ಣ ರದ್ದುಗೊಳಿಸುವುದು. ಆನ್‌ಲೈನ್ ಪ್ರಚಾಋಗಳನ್ನು ಜಾರಿಗೊಳಿಸುವುದು.
೮.ಪ್ರಚಾರದ ಅವಧಿಯನ್ನು ಇನ್ನೂ ಕಿರಿದುಗೊಳಿಸಬಹುದು.
೯ ಪ್ರಕರಣದ ಗಂಭೀರತೆಯನ್ನು ಅವಲಂಬಿಸಿ ಸದಸ್ಯತ್ವವನ್ನು ರದ್ದು ಮಾಡುವ ವಿಧಿವಿಧಾನಗಳನ್ನೂ ಗುರುತಿಸಬೇಕು.
೮ ಆಯ್ಕೆಯಾದವರ ಸಾವಿನ ಕಾರಣವನ್ನು ಬಿಟ್ಟು ಬೇರೆ ಯಾವುದೇ ಕಾರಣಕ್ಕೂ ಮರುಚುನಾವಣೆಗಳನ್ನು ನಡೆಸಕೂಡದು.
೯ ಕೇವಲ ಎರಡು ಬಾರಿ ಮಾತ್ರ ಜನಪ್ರತಿನಿಧಿಗಳಾಗುವ ಅವಕಾಶ ನೀಡಬೇಕು.
೧೦ ಅಧಿಕಾರಿಗಳ ವರ್ಗಾವಣೆಯನ್ನು ನೇರ ಮತ್ತು ಪಾರದರ್ಶಕಗೊಳಿಸಬಹುದು. ಅದು ಕೌನ್ಸೆಲಿಂಗ್ ಆಧಾರದ ಮೇಲೆ ನಡೆಯಬಹುದು. ಮತ್ತು ಅವರಿಗೆ ನಿರ್ದಿಷ್ಟ ಅವಧಿ ನೀಡಬಹುದು.
೧೧ ವಿಪರೀತ ಹಣ ಚಲನೆ ನಡೆಯುವ ದೊಡ್ಡ ದೊಡ್ಡ ಕ್ರೀಡಾಕೂಟಗಳ ಮತ್ತು ಒಮ್ಮೆಲೇ ಹಣಬರುವ ದಂಧೆಗಳ ಮೇಲೆ ಕಣ್ಣಿಡಬೇಕು.
೧೨ ಧ್ವನಿಮತದಿಂದ ಯಾವುದೇ ವಿಧೇಯಕ ಪಾಸುಮಾಡುವಂತಿಲ್ಲ ಎಂಬ ತಿದ್ದುಪಡಿ ತರಬೇಕು. ಹಾಗೆಯೇ ಕೊನೆಯ ದಿನ ಹಲವು ವಿಧೇಯಕಗಳು ಪಾಸಾಗುವುದನ್ನು ಕೂಡ ತಡೆಹಿಡಿಯಬೇಕು.
ಒಂದು ಮಾತು. ಎಲ್ಲ ರಾಜಕಾರಣಿಗಳೂ ಭ್ರಷ್ಟರಲ್ಲ. ಹಲವರು, ಹೆಚ್ಚು ಜನ ಒಳ್ಳೆಯವರಿದ್ದಾರೆ. ಇಲ್ಲವಾದರೆ ದೇಶ ಪ್ರಗತಿ ಸಾಧಿಸುತ್ತಿರಲಿಲ್ಲ. ಹಾಗೆ ನೋಡಿದರೆ ಇಂದಿನ ಹಲವು ರಾಜಕಾರಣಿಗಳ ಜನಸಂಪರ್ಕವೂ ಹೆಚ್ಚು. ಮತ್ತು ಅವರ ಮೇಲೆಯೂ ಸಮಾಜದ ತೀವ್ರ ಒತ್ತಡವಿದೆ. ಒಳ್ಳೆಯವರ
ಕೈಯನ್ನು ಸಮಾಜ ಹಿಡಿದೇಬಿಡುತ್ತದೆ ಎಂದೂ ಕೂಡ ಇಲ್ಲ. ಆ ಸಮಸ್ಯೆಯೂ ಇದೆ. ಹಾಗಾಗಿ ನಮ್ಮ ಗುರಿ ಇರುವುದು ಕ್ರಿಮಿನಲ್‌ಗಳು ಒಳಪ್ರವೇಶ ಮಾಡದಂತೆ ತಡೆಯುವುದು ಮಾತ್ರ. ಮತ್ತೆ ರಾಜಕಾರಣಿಗಳನ್ನು ಪವರ್ ಲೆಸ್ ಮಾಡಿದರೆ ಅಧಿಕಾರಗಳನ್ನು ಹತೋಟಿಯಲ್ಲಿಡುವುದು ಕಷ್ಟವಾಗಬಹುದು ಕೂಡ. ಇವನ್ನೆಲ್ಲ ಗಮನಿಸಿ ಕ್ರಮ ತೆಗೆದುಕೊಳ್ಳಬೇಕು.