ಅಶ್ವತ್ಥಕಟ್ಟೆ
ranjith.hoskere@gmail.com
ಕಳೆದ ವಾರ ಕರ್ನಾಟಕ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ನಡೆಸಿದ ಸಭೆಯ ಕೊನೆಯಲ್ಲಿ,
ಕೋಲಾರದಿಂದ ಸ್ಪರ್ಧಿಸಬೇಕು ಎಂದಿದ್ದ ಸಿದ್ದರಾಮಯ್ಯ ಯೋಚನೆಯನ್ನು ಪುನರಾಲೋಚಿಸುವಂತೆ ರಾಹುಲ್ ಗಾಂಧಿ ಮೂಲಕ ಹೇಳಿಸಲಾಯಿತು.
ರಾಜಕೀಯ ಪಕ್ಷದಲ್ಲಿ ಒಬ್ಬೊಬ್ಬರದ್ದು ಒಂದೊಂದು ಕೆಲಸ. ಒಬ್ಬರು ಮಾಸ್ ಲೀಡರ್ ಆಗಿ ಮತಗಳನ್ನು ಸೆಳೆದರೆ, ಮತ್ತೊಬ್ಬರು ತಮ್ಮ ತಮ್ಮ ಜಾತಿ ಮತಗಳನ್ನು ಹಿಡಿದಿಟ್ಟುಕೊಳ್ಳುವ ನಾಯಕನಾಗಿ ರೂಪುಗೊಂಡಿರುತ್ತಾರೆ. ಇನ್ನೂ ಕೆಲವರು, ಏನು ಮಾಡದೆಯೇ ಪಕ್ಷದಲ್ಲಿ ಸದಾ ಕಾಲ ‘ಆಯಕಟ್ಟಿ’ನ ಸ್ಥಾನದಲ್ಲಿರುತ್ತಾರೆ. ಆದರೆ ಈ ಎಲ್ಲರಿಗಿಂತ ಮುಖ್ಯವಾಗಿ, ತೆರೆಯ ಹಿಂದೆ ನಿಂತು ರಾಜಕೀಯ ಚದುರಂಗದಾಟದ ಲೆಕ್ಕಾಚಾರವನ್ನು ಕೂತಲ್ಲಿಯೇ ಲೆಕ್ಕ ಹಾಕುವವರದ್ದು ಒಂದು ಗುಂಪಿರುತ್ತದೆ. ಅವರೇನು ಮಾಧ್ಯಮಗಳಲ್ಲಿ ಸದಾ ಕಾಣಿಸಿಕೊಳ್ಳುವುದಿಲ್ಲ. ಆದರೆ ಅವರಿಲ್ಲದಿದ್ದರೆ ಅನೇಕ ನಾಯಕರ ಆಟ ನಡೆಯುವುದಿಲ್ಲ.
ಅಂತವರನ್ನೇ ‘ಪೊಲಿಟಿಕಲ್ ಮ್ಯಾಥಮ್ಯಾಟಿಶಿಯನ್ಸ್’ ಎನ್ನುತ್ತಾರೆ. ಮ್ಯಾಥಮ್ಯಾಟಿಕ್ಸ್ ಎಂದ ಕೂಡಲೇ ಬೀಜ ಗಣಿತ, ರೇಖಾ ಗಣಿತವಷ್ಟೇ ಎಲ್ಲರ ಕಣ್ಣಮುಂದೆ ಬರುತ್ತದೆ. ಆದರೆ ರಾಜಕೀಯ ದಲ್ಲಿ ಈ ಎಲ್ಲವನ್ನು ಮೀರಿದ ‘ಗಣಿತ’ವೊಂದು ಸದಾ ಸದ್ದಿಲ್ಲದೇ ಗುಪ್ತಗಾಮಿನಿಯಂತೆ ಹರಿಯು ತ್ತಿರುತ್ತದೆ. ಈ ಗುಪ್ತಗಾಮಿನಿಯನ್ನು ಅರ್ಥೈಸಿಕೊಂಡರೇ ರಾಜಕೀಯದ ‘ಲೆಕ್ಕಾಚಾರ’ ಸರಿಯಾದ ರೀತಿಯಲ್ಲಿ ಹಾಕಲು ಸಾಧ್ಯವಾಗುತ್ತದೆ. ಒಂದು ವೇಳೆ ಈ ರೀತಿಯ ಲೆಕ್ಕಾಚಾರದಲ್ಲಿ ಎಡವಿದರೆ, ರಾಜಕೀಯದಲ್ಲಿ ಬಹುದೊಡ್ಡ ಪೆಟ್ಟನ್ನು ತಿನ್ನಬೇಕಾಗುತ್ತದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಈ ರಾಜಕೀಯ ಗಣಿತವನ್ನು ಅರ್ಥೈಸಿಕೊಂಡಿರುವವರಲ್ಲಿ ಕೆಲವರು ‘ಮಾಸ್ ಲೀಡರ್’ಗಳಾಗಿ ರೂಪುಗೊಂಡಿದ್ದರೆ, ಇನ್ನು ಕೆಲವರು ತಾವು ನಾಯಕರಾ ಗದಿದ್ದರೂ, ತಮ್ಮ ನಾಯಕರನ್ನು ಬೆಳೆಸಲು ಈ ಗಣಿತವನ್ನು ಸಮಪರ್ಕವಾಗಿ ಬಳಸಿಕೊಳ್ಳುತ್ತಿದ್ದಾರೆ.
ದೊಡ್ಡ ದೊಡ್ಡ ನಾಯಕರೆನಿಸಿಕೊಂಡವರಿಗೆ ಒಂದು ಈ ವಿದ್ಯೆ ಸಿದ್ಧಿಸಿಲ್ಲವೆಂದರೆ, ತಮ್ಮೊಂದಿಗೆ ಸದಾ ಇಂತಹವರನ್ನು ಜತೆಯಲ್ಲಿಟ್ಟುಕೊಂಡಿರುತ್ತಾರೆ. ಜತೆ ಯಲ್ಲಿರಬೇಕು ಎನ್ನುವ ಕಾರಣಕ್ಕೆ, ‘ಸೂಕ್ತ’ ಸ್ಥಾನಮಾನವನ್ನು ಅವರಿಗೆ ಕೊಟ್ಟಿರುತ್ತಾರೆ. ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಈ ರೀತಿ
ರಾಜಕೀಯ ಗಣಿತಜ್ಞರು ಹತ್ತು ಹಲವರು ಬಂದು ಹೋಗಿದ್ದಾರೆ. ಅದರಲ್ಲಿ ಕೆಲವರು, ಸ್ವಂತಕ್ಕೆ ಅದನ್ನು ಬೆಳೆಸಿಕೊಂಡು ಉನ್ನತ ಮಟ್ಟಕ್ಕೆ ಹೋಗಿದ್ದಾರೆ. ಇನ್ನು ಕೆಲವರು ಪಕ್ಷದ ಸಲಹೆಗಾರರಾಗಿ ಉಳಿದಿದ್ದಾರೆ.
ದೇವರಾಜ ಅರಸು, ಜೆ.ಎಚ್. ಪಾಟೀಲ್, ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡರು ಹೊಂದಿದ್ದ ಈ ತಂತ್ರಗಾರಿಕಾ ಲೆಕ್ಕಾಚಾರವನ್ನು ಮುಂದೆ, ಸಿದ್ದರಾಮಯ್ಯ, ವೈ.ಎಸ್.ವಿ ದತ್ತಾ, ಬಿ.ಎಲ್. ಶಂಕರ್, ಚಂದ್ರೇಗೌಡ ಸೇರಿದಂತೆ ಹಲವರು ಮುಂದುವರಿಸಿಕೊಂಡು ಹೋಗಿದ್ದಾರೆ. ಇನ್ನು ಬಿಜೆಪಿ ಯಲ್ಲಿ ಇದನ್ನು ಸರಿಯಾಗಿ ನಡೆಸಿಕೊಂಡು ಬಂದವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ದಿ. ಅನಂತಕುಮಾರ್ ಅವರು. ಯಡಿಯೂರಪ್ಪ ಅವರು ಮಾಸ್ ಲೀಡರ್ ಆಗಿದ್ದರೆ, ಪಕ್ಷ ಸಂಘಟನೆಗೆ ಬೇಕಾಗಿದ್ದ ಹತ್ತು ಹಲವು ಫ್ಯಾಕ್ಟರ್ಗಳನ್ನು ಸಿದ್ಧಪಡಿಸಿದ್ದು ಅನಂತಕುಮಾರ್.
ಇದಾದ ಬಳಿಕ ಈ ಸ್ಥಾನವನ್ನು ಇದೀಗ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ತುಂಬಿದ್ದಾರೆ.
ಮೊದಲೇ ಹೇಳಿದಂತೆ ದೇವೇಗೌಡರು, ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಸ್ ಲೀಡರ್ಗಳಾಗಿ ಕಾಣಿಸಿಕೊಂಡಿದ್ದರೂ, ಅವರ ತಂಡದಲ್ಲಿ ಹತ್ತಾರು ಮಂದಿ ತಂತ್ರಗಾರಿಕೆ ಮಾಡಲೆಂದೇ ಇದ್ದರೂ, ಸ್ವತಃ ಅವರೇ ರಾಜಕೀಯದ ಗಣಿತಜ್ಞರಾಗಿದ್ದಾರೆ.
ಅವರಿಗೆ ರಾಜ್ಯ ರಾಜಕೀಯ, ಕ್ಷೇತ್ರ ರಾಜಕೀಯ ಜಾತಿ ರಾಜಕೀಯದ ಸ್ಪಷ್ಟ ಚಿತ್ರಣ ಸದಾ ತಲೆಯಲ್ಲಿ ಓಡುತ್ತಿರುತ್ತದೆ. ತಮ್ಮ ಸಮುದಾಯಗಳ ಮತಗಳಷ್ಟೇ ಅಲ್ಲದೇ, ಇತರ ಸಮುದಾಯಗಳ ಮತಗಳನ್ನು ತಮ್ಮ ಕಡೆ ಸೆಳೆಯುವುದಕ್ಕೆ ಬೇಕಿರುವ ‘ತಂತ್ರಗಾರಿಕೆ’ಯನ್ನು ಸಿದ್ಧಿಸಿಕೊಂಡಿದ್ದಾರೆ.
ಹಾಗೇ ನೋಡಿದರೆ, ಸಿದ್ದರಾಮಯ್ಯ, ಯಡಿಯೂರಪ್ಪ ಅವರಿಗಿಂತ ಮಾಜಿ ಪ್ರಧಾನಿ ದೇವೇಗೌಡರು ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಎನ್ನಬಹುದು.
ಈ ಮೂವರು ರಾಜಕೀಯದ ಪ್ರತಿಯೊಂದು ಬದಲಾವಣೆ ಸೂಕ್ಷ್ಮವಾಗಿಯೇ ಗಮನಿಸಿ, ಅದಕ್ಕೆ ಸರಿಹೊಂದುವ ರೀತಿಯಲ್ಲಿ ತಂತ್ರಗಾರಿಕೆ ಮಾಡುತ್ತಾರೆ. ಸಿದ್ದರಾಮಯ್ಯ ಅವರು ಅರಿತುಕೊಂಡಿರುವ ಗಣಿತ ಡಿ.ಕೆ.ಶಿವಕುಮಾರ್ ಅವರಿಗಾಗಿ, ಬಿ.ಕೆ.ಹರಿಪ್ರಸಾದ್ ಅವರಿಗಾಗಲಿ ಸಿದ್ಧಿಸಿಲ್ಲ.
ಇದೇ ರೀತಿ ಬಿಜೆಪಿಯಲ್ಲಿ ಸದ್ಯ ಯಡಿಯೂರಪ್ಪ ಅವರಿಗೆ ಇರುವ ತಂತ್ರಗಾರಿಕೆ ಇತರ ನಾಯಕರಿಗೆ ತಿಳಿದಿಲ್ಲ.
ಜೆಡಿಎಸ್ನಲ್ಲಿ ದೇವೇಗೌಡರನ್ನು ಬಿಟ್ಟರೆ, ಜಾತಿ ಲೆಕ್ಕಾಚಾರ, ಎಲ್ಲಿ ಯಾವ ಕಾರ್ಡನ್ನು ಪ್ಲೇ ಮಾಡಬೇಕು ಎನ್ನುವುದು ಉತ್ತಮವಾಗಿ ಅರಿತಿರುವುದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎಂದರೆ ತಪ್ಪಾಗುವುದಿಲ್ಲ. ಯಡಿಯೂರಪ್ಪ ಅವರು ರಾಜಕೀಯವಾಗಿ ಹಿಂದಕ್ಕೆ ಹೋಗುತ್ತಿದ್ದಂತೆ ಕರ್ನಾಟಕದ ಬಿಜೆಪಿಯಲ್ಲಿ ತಂತ್ರಗಾರಿಕೆ ಮಾಡುತ್ತಿರುವುದು ಬಿ.ಎಲ್. ಸಂತೋಷ್ ಅವರ ತಂಡ. ಹಾಗೇ ನೋಡಿದರೆ ಸಂತೋಷ್ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿದರೆ, ಸಾವಿರಾರು ಸಂಖ್ಯೆಯಲ್ಲಿ ಮತಗಳು ಪಕ್ಷದತ್ತ ಬರುವುದಿಲ್ಲ. ಆದರೆ ಪ್ರಚಾರಕ್ಕೆ ಏನೆಲ್ಲ ಸರಕನ್ನು ನೀಡಬೇಕು ಎನ್ನುವುದು ಸಂತೋಷ್ ಅವರಿಗೆ ತಿಳಿದಿದೆ. ಆ ಕಾರಣಕ್ಕಾಗಿಯೇ ಬಿಜೆಪಿಯ ಆಯಕಟ್ಟಿನ ಸ್ಥಾನದಲ್ಲಿ ಕೂತಿದ್ದಾರೆ.
ಇದೇ ರೀತಿ ನರೇಂದ್ರ ಮೋದಿ ಅವರು ಮತದಾರರನ್ನು ಸೆಳೆಯುವ ಸರಕಾದರೆ, ಅದನ್ನು ಯಾವ ರೀತಿ ಬ್ರ್ಯಾಂಡ್ ಮಾಡಬೇಕು ಎನ್ನುವುದನ್ನು
ಅರಿತಿರುವುದು ಅಮಿತ್ ಶಾ. ಆ ಕಾರಣಕ್ಕಾಗಿಯೇ ಆ ಇಬ್ಬರ ಜೋಡಿ ಪ್ರತಿ ಚುನಾವಣೆಯಲ್ಲಿ ಮೋಡಿ ಮಾಡುತ್ತ ಬಂದಿದೆ. ಈ ಪೊಲಿಟಿಕಲ್ ಮ್ಯಾಥಮ್ಯಾಟಿಕ್ಸ್ ಯಾವ ರೀತಿ ವರ್ಕ್ ಔಟ್ ಆಗುವುದಕ್ಕೆ ತಾಜಾ ಉದಾಹರಣೆ ನೀಡಬೇಕೆಂದರೆ, ಕಳೆದ ವಾರ ಕರ್ನಾಟಕ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ನಡೆಸಿದ ಸಭೆಯ ಕೊನೆಯಲ್ಲಿ, ಕೋಲಾರದಿಂದ ಸ್ಪರ್ಧಿಸಬೇಕು ಎಂದಿದ್ದ ಸಿದ್ದರಾಮಯ್ಯ ಯೋಚನೆಯನ್ನು ಪುನರಾಲೋಚಿಸುವಂತೆ ರಾಹುಲ್ ಗಾಂಧಿ ಮೂಲಕ ಹೇಳಿಸಲಾಯಿತು.
ಕೋಲಾರದಿಂದ ಗೆಲ್ಲುವ ವಿಶ್ವಾಸವನ್ನು ಸಿದ್ದರಾಮಯ್ಯ ಅವರು ವ್ಯಕ್ತಪಡಿಸಿದ್ದರೂ, ‘ಸೇಫ್’ ಕ್ಷೇತ್ರ ಆಯ್ದುಕೊಳ್ಳುವಂತೆ ರಾಹುಲ್ ಹೇಳಿದ್ದರಂತೆ. ಈ ಘಟನೆ ನಡೆಯುತ್ತಿದ್ದಂತೆ ಬೆಂಗಳೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರು ಮೊದಲು ಮಾಡಿದ್ದು, ತಮ್ಮ ಬೆಂಬಲಿಗರನ್ನು ಕರೆಸಿ ಈ ಬಗ್ಗೆ ಚರ್ಚೆ ನಡೆಸಿದ್ದು. ಇದಾದ ಬಳಿಕ ಇತ್ತೀಚಿಗಷ್ಟೇ ಕಾಂಗ್ರೆಸ್ ಸೇರ್ಪಡೆಗೊಂಡ ವೈಎಸ್ವಿ ದತ್ತಾ ಅವರನ್ನು ಕರೆಸಿಕೊಂಡು ಚರ್ಚಿಸಿದ್ದಾರೆ. ಸ್ವತಃ
ಸಿದ್ದರಾಮಯ್ಯ ಅವರೇ ಅತ್ಯುತ್ತಮ ತಂತ್ರಗಾರನಾದರೂ, ದತ್ತಾ ಅವರೊಂದಿಗೆ ಚರ್ಚಿಸಲು ಕಾರಣವೇ ದತ್ತಾ ಅವರಲ್ಲಿನ ‘ಲೆಕ್ಕಾಚಾರ’ದ ಗುಣ.
ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುವ ವೇಳೆ ದತ್ತಾ ಅವರು, ಜಾತಿ ಲೆಕ್ಕಾಚಾರವನ್ನು ಮುಂದಿಟ್ಟು, ಕೋಲಾರ ದಲ್ಲಿ ಆಗುವ ಸಮಸ್ಯೆಯೇನು? ವರುಣದಲ್ಲಿ ಗೆಲ್ಲುವುದಕ್ಕೆ ಸಹಾಯವಾಗುವ ಅಂಶವೇನು ಎಂದು ಹೇಳುವುದಷ್ಟೇ ಅಲ್ಲದೇ, ಕಡೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೇಳಿದ್ದಾರೆ.
ಸಿದ್ದರಾಮಯ್ಯ ಜತೆಗಿದ್ದ ಅನೇಕರು, ದತ್ತಾ ಅವರ ಪ್ರಸ್ತಾಪದಿಂದ ಅಚ್ಚರಿಗೊಂಡಿದ್ದಾರೆ. ಆದರೆ ಕಡೂರಿನಲ್ಲಿರುವ ಅಲ್ಪಸಂಖ್ಯಾತ, ಕುರುಬ, ಪರಿಶಿಷ್ಟರ ಮತಗಳ ಲೆಕ್ಕಾಚಾರವನ್ನು ಸಭೆಯ ಮುಂದಿಟ್ಟಾಗ, ದತ್ತಾ ವಾದದಲ್ಲಿ ತಿರುಳಿದೆ ಎಂದರಂತೆ. ಈ ರೀತಿಯ ಪಟ್ಟುಗಳನ್ನು ಅರಿತಿ
ರುವ ಕಾರಣಕ್ಕೆ ಅಲ್ಲವೇ, ದತ್ತಾ ಅವರನ್ನು ದೇವೇಗೌಡರ ದತ್ತುಪುತ್ರನೆಂದು ರಾಜಕೀಯ ವಲಯದಲ್ಲಿ ಮನೆಮಾತಾಗಿದ್ದು. ಬಿಜೆಪಿಯಲ್ಲಿ ಯಡಿಯೂರಪ್ಪ ಅವರಂತೆ ಈ ರೀತಿಯ ಪಟ್ಟುಗಳನ್ನು ಕರ್ನಾಟಕದ ಮಟ್ಟಿಗೆ ಹಾಕುವುದು ವಸತಿ ಸಚಿವ ವಿ. ಸೋಮಣ್ಣರಂತೆ!
ಆದರೆ ಇತ್ತೀಚಿನ ದಿನದಲ್ಲಿ ಅನೇಕ ನಾಯಕರಿಗೆ ಈ ರೀತಿಯ ತಂತ್ರಗಾರಿಕೆ, ಲೆಕ್ಕಾಚಾರವನ್ನು ಹಾಕಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕೆ ಪ್ರಶಾಂತ್ ಕಿಶೋರ್ನಂತಹ ರಾಜಕೀಯ ತಜ್ಞರನ್ನು ಜತೆಯಲ್ಲಿರಿಸಿಕೊಳ್ಳುತ್ತಿದ್ದಾರೆ. ರಾಜಕೀಯದ ಆಳ-ಅಗಲ ತಿಳಿಯದೇ ಇರುವ ನಾಯಕರು ಈ
ರೀತಿ ಸ್ಟ್ರಾಟಜಿ ತಂಡವನ್ನು ಕಟ್ಟಿಕೊಂಡು, ಅವರು ನೀಡುವ ಸಲಹೆ ರೂಪದ ಸೂಚನೆಗಳನ್ನು ಬಳಸಿಕೊಂಡು ಯಶಸ್ಸಾಗುವ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾರೆ. ಆದ್ದರಿಂದ ಯಾವುದೇ ರಾಜಕೀಯ ಪಕ್ಷ ಉತ್ತಮ ಸ್ಥಿತಿಯಲ್ಲಿರಬೇಕು ಎಂದರೆ, ಈ ರೀತಿಯ ತಂತ್ರಗಾರರು ಅತ್ಯಗತ್ಯ. ಅಂದ ಮಾತ್ರಕ್ಕೆ ಈ ಕಲೆ ರಾಜಕೀಯಕ್ಕೆ ಧುಮಿಕಿದ ಎಲ್ಲರಿಗೂ ಸಿದ್ಧಿಸುವುದಿಲ್ಲ.
ಬದಲಿಗೆ ‘ಫುಲ್ ಟೈಮ್ ರಾಜಕಾರಣಿ’ಗಳಾಗಿ ದಶಕಗಳ ಕಾಲ ಸಾರ್ವಜನಿಕರೊಂದಿಗೆ ಒಡನಾಟವಿದ್ದಾಗ ಮಾತ್ರ ಜನರ ಮನಸ್ಥಿತಿ ಅರಿಯಲು
ಸಾಧ್ಯವಾಗುತ್ತದೆ. ಚುನಾವಣಾ ರಾಜಕೀಯದಲ್ಲಿರುವ ಮತಗಳ ಅಂಕಿ-ಅಂಶಕ್ಕೂ ಮಿಗಿಲಾಗಿ, ರಾಜಕೀಯ ಗಣಿತ ವನ್ನು ಅರ್ಥೈಸಿಕೊಂಡಾಗ ಮಾತ್ರ, ಗೆಲುವು ಸೋಲಿನ ಲೆಕ್ಕಾಚಾರ ಹಾಕುವುದಕ್ಕೆ ಸಹಾಯವಾಗುತ್ತದೆ. ಇದಕ್ಕಾಗಿ ಇತ್ತೀಚಿಗೆ ಹತ್ತು ಹಲವು ‘ತಂತ್ರಗಾರಿಕಾ ತಂಡ’ಗಳೇ
ಸಜ್ಜಾದರೂ, ಮುತ್ಸದಿ ನಾಯಕರು ಈ ಎಲ್ಲವನ್ನು ಮೀರಿ ಯೋಚಿಸುತ್ತಾರೆ ಎನ್ನುವುದು ಈ ಹಿಂದಿನ ಹಲವಾರು ಘಟನೆಗಳಲ್ಲಿ ಸಾಬೀತಾಗಿದೆ. ಈ ಬಾರಿ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಹತ್ತು ಹಲವು ಲೆಕ್ಕಾಚಾಗಳು ನಡೆಯುತ್ತಿದ್ದು, ಎಷ್ಟರ ಮಟ್ಟಿಗೆ ನಾಯಕರ ಈ
‘ಲೆಕ್ಕಾಚಾರಗಳು’ ಫಲಿಸಲಿದೆಯೇ ಅಥವಾ ರಾಜಕೀಯ ಲೆಕ್ಕಾಚಾರಗಳನ್ನು ಎಲ್ಲ ಮೀರಿ ಮತದಾರ ಯೋಚಿಸಿದ್ದಾನೆಯೇ ಎನ್ನುವುದು ಮಾತ್ರ ಫಲಿತಾಂಶದ ದಿನವೇ ಸ್ಪಷ್ಟವಾಗುವುದು.