Thursday, 12th December 2024

ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆ ಅರಳಿದ ಸ್ನೇಹ ಸಂಬಂಧ

ಇದೇ ಅಂತರಂಗ ಸುದ್ದಿ

vbhat@me.com

ಸಾಮಾನ್ಯವಾಗಿ ಪ್ರಧಾನಿಯಾದವರು ತಮ್ಮ ಸಂಪುಟದ ಸಹೋದ್ಯೋಗಿಗಳ ಬಗ್ಗೆ ಸಾರ್ವಜನಿಕವಾಗಿ ಪ್ರಶಂಸಿಸುವುದು ವಿರಳ. ತಮ್ಮ ಸಚಿವ
ಸಂಪುಟದ ಸಹೋದ್ಯೋಗಿಯೊಬ್ಬ ನಿಧನರಾದರೆ, ಇನ್ನು ಮುಂದೆ ಅವರಿಂದ ಯಾವ ಅಪಾಯ ಇಲ್ಲವೆಂದು ಹೊಗಳಬಹುದಷ್ಟೆ. ಆದರೂ ಆ ಪ್ರಶಂಸೆಯ ಮಾತುಗಳು ದಾಖಲೆಯಾಗಿ ಉಳಿದು ಬಿಡಬಹುದು ಎಂಬ ದೂರಾಲೋಚನೆಯಿಂದ ಪ್ರಶಂಸಿಸಬೇಕೆಂದಿದ್ದರೂ, ಅದನ್ನು ಮೊಟಕು ಗೊಳಿಸುವುದು ರಾಜಕೀಯವಾಗಿ ವಿಹಿತವೆಂದು ಅಲ್ಲಿಗೆ ನಿಲ್ಲಿಸುವುದುಂಟು. ತಮ್ಮ ನಂತರದ ತಕ್ಷಣದ ಸಹೋದ್ಯೋಗಿ ಜತೆ ಸುರಕ್ಷಿತ ಅಂತರ ಕಾಪಾಡಿ ಕೊಳ್ಳುವುದು ಸಹಜ. ನೀವು ಯಾವ ದೇಶದ ಪ್ರಧಾನಿಯನ್ನೇ ತೆಗೆದುಕೊಳ್ಳಿ, ಅವರು ತಮ್ಮ ಸಂಪುಟದ ಸಹೋದ್ಯೋಗಿಯನ್ನು ಬಹಿರಂಗವಾಗಿ
ಹೊಗಳಿದ ನಿದರ್ಶನಗಳಿಲ್ಲ.

ಆದರೆ, ಸಿಂಗಾಪುರದ ಮೊದಲ ಪ್ರಧಾನಿ ಲೀ ಕುಆನ್ ಯು ಹೀಗೆ ಇರಲಿಲ್ಲ. ತಮ್ಮ ಸರಕಾರದಲ್ಲಿ ಉಪಪ್ರಧಾನಿಯಾಗಿದ್ದ ಗೊಹ್ ಕೆಂಗ್ ಸ್ವೀ ಅವರನ್ನು ಹಲವಾರು ಸಂದರ್ಭಗಳಲ್ಲಿ ಮುಕ್ತ ಕಂಠದಿಂದ ಪ್ರಶಂಸಿಸಿದ್ದು ರಾಜಕಾರಣಿಗಳಿಗೆ ಒಂದು ನಿದರ್ಶನವಾಗಬಹುದು. ಸಿಂಗಾಪುರದ ಮೊದಲ ಪೀಳಿಗೆಯ ರಾಜಕಾರಣಿಗಳಲ್ಲಿ ಪ್ರಮುಖರೆನಿಸಿದ್ದ ಸ್ವೀ ಅವರು, ೧೯೬೫ರಿಂದ ೧೯೬೭ರವರೆಗೆ, ಲೀ ಕುಆನ್ ಯು ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು.

ಸಿಂಗಾಪುರಕ್ಕೆ ಸ್ವಾತಂತ್ರ್ಯ ಲಭಿಸಿದಾಗಿನಿಂದ ಅಧಿಕಾರದಲ್ಲಿ ರುವ ಪೀಪಲ್ಸ ಆಕ್ಷನ್ ಪಾರ್ಟಿಯ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಸ್ವೀ, ೧೯೭೦ರಿಂದ ಒಂಬತ್ತು ವರ್ಷಗಳ ಕಾಲ ರಕ್ಷಣಾ ಸಚಿವ ರಾಗಿದ್ದರು. ಅನಂತರ ೧೯೭೯ ರಿಂದ ೧೯೮೫ ರವರೆಗೆ ಶಿಕ್ಷಣ ಸಚಿವರಾಗಿದ್ದರು. ಆಂತರಿಕ ಆಡಳಿತ ಮತ್ತು ರಕ್ಷಣಾ ಸಚಿವರಾಗಿ ಸ್ವೀ ಕೈಗೊಂಡ ಕ್ರಮಗಳನ್ನು ಕೇವಲ ಸಿಂಗಾಪುರಿಗರಷ್ಟೇ ಅಲ್ಲ, ಸರ್ವತ್ರ ಪ್ರಶಂಸೆಗೆ ಪಾತ್ರವಾಗಿದೆ. ಮೂಲತಃ ಅರ್ಥಶಾಸ್ತ್ರಜ್ಞರಾಗಿದ್ದ ಸ್ವೀ, ಎರಡನೆಯ ಉಪ ಪ್ರಧಾನಿಯಾಗಿ ಸಾಕಷ್ಟು ಆರ್ಥಿಕ ಮತ್ತು ಆಡಳಿತ ಸುಧಾರಣಾ ಕ್ರಮಗಳನ್ನು ಕೈಗೊಂಡರು. ಹೀಗಾಗಿ ಸಿಂಗಾಪುರ ವನ್ನು ಕಟ್ಟುವಲ್ಲಿ ಅವರ ಯೋಗದಾನವೂ ಇದೆ.

ಅಮೆರಿಕದ ಶಿಕ್ಷಣತಜ್ಞ ಮತ್ತು ಲೇಖಕ ತಾನು ಬರೆಯಲಿರುವ ಪುಸ್ತಕಕ್ಕಾಗಿ ಪ್ರಧಾನಿ ಲೀ ಕುಆನ್ ಯು ಅವರನ್ನು ಸಂದರ್ಶಿಸಿದ್ದ. ಆ ಸಂದರ್ಭದಲ್ಲಿ, ‘ಮಿಸ್ಟರ್ ಯು, ನಿಮಗೆ ಇಷ್ಟವಾದ, ನಿಮ್ಮ ಮೆಚ್ಚುಗೆಗೆ ಪಾತ್ರರಾದ ನಾಯಕರಾರು ಮತ್ತು ಏಕೆ?’ ಎಂಬ ಪ್ರಶ್ನೆಗೆ, ಗೊಹ್ ಕೆಂಗ್ ಸ್ವೀ ಅವರ ಹೆಸರನ್ನೂ ಪ್ರಸ್ತಾಪಿಸಿದ್ದರು. ‘ನಾನು ಪ್ರಧಾನಿಯಾದರೂ ನನ್ನ ನಿರ್ಧಾರವನ್ನು ವಿರೋಧಿಸಲು ಸ್ವೀ ಹಿಂದೆ-ಮುಂದೆ ನೋಡುತ್ತಿರಲಿಲ್ಲ. ನನ್ನ ಎಷ್ಟೋ ನಿರ್ಧಾರ ಗಳನ್ನು, ಸ್ವೀ ಅವರ ಮಾತುಗಳನ್ನು ಆಲಿಸಿದ ಬಳಿಕ ಬದಲಾಯಿಸಿದ್ದಿದೆ. ಅವರಿಗೆ ನನ್ನ ಹಾಗೆ ಸಿಂಗಾಪುರದ ಲಾಭ ಮತ್ತು ಒಳಿತು ಮಾತ್ರ ಮುಖ್ಯ ವಾಗಿತ್ತು. ಸ್ವೀ ಅವರಿಗೆ ಅಸಾಧಾರಣ ಪ್ರತಿಭೆ ಮತ್ತು ಸಮಚಿತ್ತವಿತ್ತು.

ಅವರು ಯಾವುದಾದರೂ ವಿಷಯದ ಮೇಲೆ ಮಾತಾಡಿದರೆ, ಅದನ್ನು ಒಪ್ಪದೇ ಇರಲು ಸಾಧ್ಯವೇ ಇರಲಿಲ್ಲ. ಏನೇ ತೀರ್ಮಾನ ತೆಗೆದುಕೊಂಡರೂ ಅದು
ಸರಿಯಾಗಿರುತ್ತಿತ್ತು. ಸ್ವೀ ಏನಾದರೂ ಸಲಹೆ ನೀಡಿದರೆ, ಅದನ್ನು ತಿರಸ್ಕರಿಸಲು ಸಾಧ್ಯವೇ ಇರಲಿಲ್ಲ. ವೈಯಕ್ತಿಕ ಬಲಾಬಲ, ಮೇಲಾಟಕ್ಕಾಗಿ ಅವರು ವಾದ ಮಾಡುತ್ತಿರಲಿಲ್ಲ. ಅವರ ಮಾತಿ ನಲ್ಲಿ ಎದುರಿನವರಿಗೆ ಗೌರವ, ವಿನಯಭಾವ ಎದ್ದು ಕಾಣುತ್ತಿತ್ತು’ ಎಂದು ಯು ಹೇಳಿದ್ದರು. ತಮಗಿಂತ ಕೆಳಗಿನ ವರು ತಮ್ಮ ಮೇಲೆ ಪ್ರಭಾವ ಬೀರಿದವರೆಂದು ಒಪ್ಪಿಕೊಳ್ಳುವ ಹೃದಯ ವೈಶಾಲ್ಯ ಎಷ್ಟು ಪ್ರಧಾನಿಗಳಿಗಿದೆ? ಆದರೆ ಲೀ ಕುಆನ್ ಯು ಅವರು ಸ್ವೀ ಕುರಿತು ಹಲವು ಸಂದರ್ಭಗಳಲ್ಲಿ, ‘ಅವರು ನನ್ನ ಮೇಲೆ ಪ್ರಭಾವ ಬೀರಿದ ವ್ಯಕ್ತಿ’ ಎಂದು ಹೇಳಿದ್ದಿದೆ.

‘ನಾವು ಯಾವುದಾದರೂ ಬಿಕ್ಕಟ್ಟಿಗೆ ಸಿಲುಕಿದ್ದಾಗ, ಅವರು ನೀಡುತ್ತಿದ್ದ ಸಲಹೆ-ವಿಶ್ಲೇಷಣೆ ಸಾಂದರ್ಭಿಕವಾಗಿರುತ್ತಿತ್ತು. ಅದರಲ್ಲಿ ಸ್ವೀ ಅವರ ಸ್ವಾರ್ಥ, ಹಿತಾಸಕ್ತಿಗಳೇನೂ ಇರುತ್ತಿರಲಿಲ್ಲ. ಅವರು ನನ್ನ ಟ್ರಬಲ್ ಶೂಟರ್ ಆಗಿದ್ದರು. ಅವರ ಕಠಿಣ ನಿಲುವು-ನೀತಿಗಳಿಂದಾಗಿ ನಮಗೆ ಅನೇಕ ಮಹತ್ವದ ತೀರ್ಮಾನ ಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಯಿತು. ಶಿಕ್ಷಣ, ಒಳ ಆಡಳಿತ, ರಕ್ಷಣಾ ವಿಷಯಕ್ಕೆ ಸಂಬಂಽಸಿದ ಯಾವ ಅಂಶಗಳನ್ನಾದರೂ ಕೇಳಿದರೆ ಸಮಾಧಾನಕರ ಉತ್ತರ ಸಿಗುತ್ತಿತ್ತು.

ತಂತ್ರಗಾರಿಕೆ (ಸ್ಟ್ರೆಟಜಿ)ಗೆ ಸಂಬಂಧಿಸಿದ ಸನ್ ತ್ಸು, ಕ್ಲಾಕ್ಸ್ವಿಟ್ಜ್ ಮತ್ತು ಲಿಡ್ಡೆಲ್ ಹಾರ್ಟ್ ಬರೆದ ಕ್ಲಾಸಿಕ್ ಕೃತಿಗಳನ್ನೆಲ್ಲ ಅವರು ಓದಿಕೊಂಡಿದ್ದರು, ಜಗತ್ತಿನ ಯಾವ ಮೂಲೆಯ ಆಗಲಿ, ಮಿಲಿಟರಿ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದ ಬೆಳವಣಿಗೆಗಳಾದರೆ ಅವರಿಗೆ ಗೊತ್ತಾಗುತ್ತಿತ್ತು. ಯಾವತ್ತೂ ಅವರ ಟೇಬಲ್ ಮೇಲೆ ಮಿಲಿಟರಿ ಜರ್ನಲ್‌ಗಳು ಇರುತ್ತಿದ್ದವು. ಆಗಾಗ ತಾವು ಓದಿದ ಪುಸ್ತಕ, ಲೇಖನಗಳನ್ನೂ ಕಳಿಸಿಕೊಡುತ್ತಿದ್ದರು. ಭೇಟಿಯಾದಾಗ, ಅವನ್ನು ಓದಿದ್ದೀರಾ, ಇಲ್ಲವಾ ಎಂಬುದನ್ನು ಕೇಳುತ್ತಿದ್ದರು. ನಾನು ತಿಳಿದುಕೊಂಡು ಇರಲೇಬೇಕಾದ ಸಂಗತಿಗಳನ್ನು ಅಂಡರ್‌ಲೈನ್ ಮಾಡಿ ಕಳಿಸಿ ಕೊಡು ತ್ತಿದ್ದರು ಎಂದು ಯು ಅಭಿಮಾನ ದಿಂದ ಹೇಳಿದ್ದರು.

‘ಸ್ವೀ ಅವರ ಜತೆ ಯಾವ ವಿಷಯದ ಕುರಿತಾದರೂ ಚರ್ಚಿಸ ಬಹುದಾಗಿತ್ತು. ಯಾವ ವಿಷಯವನ್ನಾದರೂ ಅವರು ತಲಸ್ಪರ್ಶಿ ಯಾಗಿ ವಿವರಿಸುತ್ತಿದ್ದರು.
ಅವರಿಗೆ ಅದ್ಭುತವಾದ ನೆನಪಿನಶಕ್ತಿಯಿತ್ತು. ಜಾಗತಿಕ ಇತಿಹಾಸ, ಅರ್ಥ ವ್ಯವಸ್ಥೆ ಬಗ್ಗೆ ವಿಶೇಷ ಒಲವಿತ್ತು. ಇಂಥ ಸಹೋದ್ಯೋಗಿ ಸಚಿವರಾಗಿ ಸಿಕ್ಕರೆ ಪ್ರಧಾನಿಯಾ ದವರಿಗೆ ಬಹಳ ಉಪಯುಕ್ತ. ನಾನು ಬಿಕ್ಕಟ್ಟಿನ ಸನ್ನಿವೇಶ ಎದುರಿಸಿದಾಗಲೆಲ್ಲ ಸ್ವೀ ಅವರತ್ತ ನೋಡುತ್ತಿದ್ದೆ.’ ಎಂದು ತಮ್ಮ ಸಂಪುಟದ
ಸಹೋದ್ಯೋಗಿ ಬಗ್ಗೆಯು ಮೆಚ್ಚುಗೆ ಸೂಚಿಸಿದ್ದರು.

ಯು ಮತ್ತು ಸ್ವೀ ನಡುವೆ ಇಂಥದ್ದೊಂದು ಅಪರೂಪದ ಸಂಬಂಧವಿತ್ತು. ಹಾಗೆಂದು ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಗಳಿರಲಿಲ್ಲವೆಂದಲ್ಲ. ಹಲವು ವಿಷಯಗಳ ಬಗ್ಗೆ ಅವರಿಬ್ಬರ ನಡುವೆ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದವು. ಅವನ್ನು ಅವರಿಬ್ಬರೂ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿ ಕೊಳ್ಳುತ್ತಿದ್ದರು. ಸಂಪುಟ ಸಭೆಯಲ್ಲಿ ಸ್ವೀ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದರು. ಆದರೆ ಅವರ ನಿಲುವಿನಲ್ಲಿ ಯಾವ ವೈಯಕ್ತಿಕ ದ್ವೇಷ, ಅಸೂಯೆ, ಸಣ್ಣತನ ಎಂದೂ ಪ್ರಕಟವಾಗುತ್ತಿರಲಿಲ್ಲ. ದೇಶದ ಹಿತಾಸಕ್ತಿ ಅವರಿಬ್ಬಬ್ಬರ ನಡುವೆ ಅಂಥ ಸಂಘರ್ಷ ವನ್ನು ಹುಟ್ಟುಹಾಕುತ್ತಿತ್ತು. ಆದರೆ ಅವರಿಬ್ಬರೂ ಜಿಗ್ರಿ ದೋಸ್ತ್ ಥರ ಇದ್ದರು. ಈ ದಿನಗಳಲ್ಲಿ ಯಾವ ದೇಶದ ಪ್ರಧಾನಿ ತಮ್ಮ ಸಂಪುಟ ಸಹೋದ್ಯೋಗಿ ಬಗ್ಗೆ ಮೆಚ್ಚುಗೆ ಮಾತುಗಳನ್ನು ಹೇಳಿ
ದ್ದನ್ನು ನೀವು ಕೇಳಿದ್ದೀರಿ? ನೆನಪಿಸಿಕೊಳ್ಳಿ.

ಮುದ ಭಾವ
ಕೆಲವು ದಿನಗಳ ಹಿಂದೆ, ನಾನು ಕೇರಳಕ್ಕೆ ಹೋದಾಗ, ಅಲ್ಲಿನ ಸೀರೆ ಅಂಗಡಿಗೆ ಹೋಗಿದ್ದೆ. ಅಂಗಡಿಯ ಸೇಲ್ಸ ಮನ್ ಸುಮಾರು ಇಪ್ಪತ್ತಕ್ಕೂ ಹೆಚ್ಚು ಸೀರೆಗಳನ್ನು ತೋರಿಸಿದ. ನಂತರ ನನಗೆ ಅಲ್ಲಿಯೇ ಒಂದು ಬೋರ್ಡ್ ಕಾಣಿಸಿತು. ‘ಹನ್ನೆರಡು ಸಾವಿರ ರುಪಾಯಿ ಸೀರೆ ಕೇವಲ ಮೂರು ಸಾವಿರಕ್ಕೆ ಲಭ್ಯ’ ಎಂದು ಬರೆದಿತ್ತು. ಎಂದೂ ಸೀರೆಯನ್ನು ಖರೀದಿಸದ ಗಂಡಂದಿರು ಮಾಡುವ ತಪ್ಪನ್ನು ನಾನೂ ಮಾಡಿದೆ. ಆ ಬೋರ್ಡ್ ನೋಡಿ, ನಾನು ಆರು ಸಾವಿರ ರುಪಾಯಿ ತೆತ್ತು ಎರಡು ಸೀರೆಗಳನ್ನು ಖರೀದಿಸಿದೆ. ಮನೆಗೆ ಬಂದು ಹೆಂಡತಿ ಮುಂದೆ ಆ ಸೀರೆಗಳನ್ನು ಇಟ್ಟು, ‘ಒಂದು ಆಫರ್ ಇತ್ತು, ಈ ಎರಡು ಸೀರೆ ಗಳಿಗೆ ಆರು ಸಾವಿರ ರುಪಾಯಿ ಕೊಟ್ಟೆ’ ಎಂದೆ.

ಅದರಿಂದ ಪತ್ನಿಗೆ ಖುಷಿಯಾಗಬಹುದು ಎಂದು ಭಾವಿಸಿದ್ದ ನನ್ನ ನಿರೀಕ್ಷೆ ಹುಸಿಯಾಯಿತು. ಅವಳ ಮುಖದಲ್ಲಿ ಸಂತೋಷದ ಸ್ನಾಯುಗಳ ಚಲನೆಯೇ ಕಾಣಲಿಲ್ಲ. ಅವಳು ನಿರ್ಭಾವುಕಳಾಗಿ, ‘ಆ ಸೀರೆಯ ಬೆಲೆಯೇ ಅಷ್ಟು. ಹನ್ನೆರಡು ಸಾವಿರ ರುಪಾಯಿ ಎಂದು ಹೇಳಿ, ನಿಮಗೆ ಮೂರು ಸಾವಿರ ರುಪಾಯಿ ಬೆಲೆಯ ಸೀರೆ ಕೊಟ್ಟಿದ್ದಾರೆ’ ಎಂದಳು.

ಸೀರೆ ವಿಷಯದಲ್ಲಿ ಹೆಂಗಸರ ಎಣಿಕೆ, ಲೆಕ್ಕಾಚಾರ ಯಾವತ್ತೂ ಸರಿಯಾಗಿರುತ್ತದೆ. ಒಂದು ವೇಳೆ ಆ ಸೀರೆಯ ಬೆಲೆ ಮೂರು ಸಾವಿರ ರೂಪಾಯಿ ಎಂದಿ ದ್ದರೆ ನಾನು ಖರೀದಿಸುತ್ತಿರಲಿಲ್ಲ. ಆದರೆ ಹನ್ನೆರಡು ಸಾವಿರ ರುಪಾಯಿ ಬೆಲೆಯ ಸೀರೆ ಮೂರು ಸಾವಿರ ರುಪಾಯಿಗೆ ಲಭ್ಯ ಅಂದರೆ ಖರೀದಿಸಬೇಕು ಎಂದು ಯಾರಿಗಾದರೂ ಅನಿಸುತ್ತದೆ. ಎಲ್ಲರೂ ಇದೇ ತಪ್ಪು ಮಾಡುತ್ತಾರೆ ಎನ್ನುವುದು ಅಂಗಡಿಯವನಿಗೆ ಗೊತ್ತಿರುತ್ತದೆ. ಅದರ ಬೆಲೆಯೇ ಅಷ್ಟು.
ಗ್ರಾಹಕರ ಸೈಕಾಲಜಿ ಹೇಗೆ ವರ್ಕ್ ಆಗುತ್ತದೆ ಎಂಬುದನ್ನು ಸೀರೆ ಅಂಗಡಿಯವರಿಗೆ ಹೇಳಿಕೊಡಬೇಕಿಲ್ಲ. ಆಗ ನನಗೆ ಮ್ಯಾನೇಜ್ಮೆಂಟ್ ಗುರು ಪ್ರಕಾಶ ಅಯ್ಯರ್ ಹೇಳಿದ ಒಂದು ಪ್ರಸಂಗ ನೆನಪಾಯಿತು.

ಮುಂಬೈ ವಿಮಾನ ನಿಲ್ದಾಣದ ಸನಿಹವಿರುವ ಜೆಡಬ್ಲ್ಯೂ ಮೇರಿಯಟ್ ಹೋಟೆಲ್‌ನಲ್ಲಿ ಅವರು ಉಳಿದುಕೊಂಡಿದ್ದರಂತೆ. ಅವರ ರೂಮ್ ಹತ್ತನೇ ಮಹಡಿಯಲ್ಲಿತ್ತು. ಅವರು ಹೋಟೆಲ್ ರಿಸೆಪ್ಷನ್ ನಲ್ಲಿ ಕೀ ಪಡೆದು, ಲಿಫ್ಟ್ ಒಳಗೆ ಕಾಲಿಟ್ಟು, ಹತ್ತನೇ ಮಹಡಿಯ ಬಟನ್ ಅಮುಕಿದ ನಾಲ್ಕು ಸೆಕೆಂಡು ಗಳಲ್ಲಿ ಹತ್ತನೇ ಮಹಡಿ ಬಂದಿತು. ಆಗ ಅವರಿಗೆ, ‘ಹೋಟೆಲಿನ ಲಿಫ್ಟ್ ಎಷ್ಟು ಚೆನ್ನಾಗಿದೆ, ಹತ್ತನೇ ಮಹಡಿಗೆ ಕೇವಲ ನಾಲ್ಕು ಸೆಕೆಂಡುಗಳಲ್ಲಿ
ಬಂದಿತಲ್ಲ, ಲಿಫ್ಟ್ ಎಲ್ಲೂ ಜರ್ಕ್ ಹೊಡೆಯಲಿಲ್ಲ, ಕೆಲವು ಹೋಟೆಲುಗಳ ಲಿಫ್ಟ್ ಸದ್ದು ಮಾಡುತ್ತವೆ, ತಿಕ್ಕಿದ ಸೌಂಡ್ ಬರುತ್ತದೆ, ಆದರೆ ಈ ಲಿಫ್ಟ್ ಹಾಗಲ್ಲ, ಬಹಳ ಸ್ಮೂತ್ ಆಗಿದೆ…’ ಹೀಗೆಲ್ಲ ಯೋಚನೆಗಳು ಹಾದುಹೋಯಿತು.  ರೂಮು ಸೇರಿಕೊಂಡ ಬಳಿಕ ಕರ್ಟನ್ ಸರಿಸಿದಾಗ ಗೊತ್ತಾಗಿದ್ದೇ ನೆಂದರೆ, ಅದು ಹತ್ತನೇ ಮಹಡಿ ಅಲ್ಲ, ಒಂದನೇ ಮಹಡಿ ಎಂಬುದು!

ಗ್ರಾಹಕರಿಗೆ ಈ ಅಚ್ಚರಿಯನ್ನು ಕೊಡಲೆಂದೇ ಒಂದನೇ ಮಹಡಿಯನ್ನು ಹತ್ತನೆಯದೆಂದು ಹೇಳಲಾಗಿತ್ತು. ಎರಡನೇ ಮಹಡಿ ಇಪ್ಪತ್ತನೇ ಮಹಡಿ ಯಾಗಿತ್ತು. ಉದಾಹರಣೆಗೆ, ಎರಡನೇ ಮಹಡಿಯಲ್ಲಿರುವ ಹದಿಮೂರನೇ ನಂಬರಿನ ರೂಮಿಗೆ ೨೦೧೩ ಸಂಖ್ಯೆ ನೀಡಲಾಗಿತ್ತು. ಇದರಿಂದ ಗ್ರಾಹಕರಿಗೆ ತಕ್ಷಣ ತಾನು ಅತಿ ಹೆಚ್ಚು ಮಹಡಿಗಳಿರುವ ದೊಡ್ಡ ಹೋಟೆಲಿನಲ್ಲಿ ಉಳಿದಿದ್ದೇನೆ ಎಂಬ ಭಾವ ಸಹಜವಾಗಿ ಮೂಡುತ್ತದೆ. ಪ್ರತಿ ಬಾರಿ ಲಿಫ್ಟಿನಲ್ಲಿ ಹೋಗು ವಾಗ ಬಹುಬೇಗ ಆಗಮಿಸಿದೆ ಎಂಬ ಒಳ್ಳೆಯ ಭಾವನೆ ಮೂಡುತ್ತದೆ.

ಈ ಮೆಂಟಾಲಿಟಿ ಕೇವಲ ಹೋಟೆಲಿನ ಮಹಡಿ ಅಥವಾ ಲಿಫ್ಟಿಗೆ ಸೀಮಿತವಲ್ಲ. ನೀವು ಕೆಲಸ ಮಾಡುವ ಆಫೀಸುಗಳಲ್ಲಿ ಸಹ ಕಾಣಬಹುದು. ಇಪ್ಪತ್ತು-ಮೂವತ್ತು ವರ್ಷಗಳ ಹಿಂದೆ, ಒಂದು ಸಂಸ್ಥೆಯಲ್ಲಿ ಜನರಲ್ ಮ್ಯಾನೇರ್ಜ ಆಗಲು ಕನಿಷ್ಠ ಹತ್ತು-ಹದಿನೈದು ವರ್ಷಗಳು ಬೇಕಾಗಿದ್ದವು. ಆದರೆ ಈಗ ಹಾಗಲ್ಲ. ಒಂದು ಸಂಸ್ಥೆಯನ್ನು ಸೇರಿ ಉತ್ತಮ ಕೆಲಸ ಮಾಡಿ, ಎರಡು-ಮೂರು ವರ್ಷ ಗಳಲ್ಲಿ ಜನರಲ್ ಮ್ಯಾನೇರ್ಜ ಆಗಿ ಪ್ರಮೋಷನ್ ಪಡೆಯುತ್ತಾರೆ.
ಮೂವತ್ತು-ಮೂವತತೈದು ವರ್ಷದವರು ವಿಪಿ (ವೈಸ್ ಪ್ರೆಸಿಡೆಂಟ್) ಆಗಿ ಬಡ್ತಿ ಪಡೆಯುವುದು ಸಾಮಾನ್ಯ. ಇಲ್ಲೂ ಸಹ ಹತ್ತನೇ ಮಹಡಿ ಮೆಂಟಾಲಿಟಿ ಅನ್ವಯಿಸಿರುವುದನ್ನು ಕಾಣ ಬಹುದು.

ವೈಸ್ ಪ್ರೆಸಿಡೆಂಟುಗಳಲ್ಲಿ ಸೀನಿಯರ್ ವಿಪಿ, ಎಕ್ಸಿಕ್ಯೂಟಿವ್ ವಿಪಿ ಎಂದೆಲ್ಲ ಬೇರೆ ಬೇರೆ ಹುzಗಳನ್ನು ಸೃಷ್ಟಿಸುವುದು ಸಹ ಸಾಮಾನ್ಯ. ಕೆಲವು ನಂಬಿಕೆ ಗಳು ವಾಸ್ತವವನ್ನು ಹೆಚ್ಚು ಚೆನ್ನಾಗಿ ವಿವರಿಸುತ್ತದೆ ಎಂಬ ಮಾತಿದೆ. ಈ ಮಾತು ಇಲ್ಲೂ ಕೆಲಸ ಮಾಡುತ್ತದೆ. ಹತ್ತನೇ ಮಹಡಿಯಲ್ಲಿದ್ದೇನೆ ಎಂದು ಯೋಚಿಸುವಾಗ, ಹೋಟೆಲಿನ ಹೊರ ನೋಟ, ತಂಗಾಳಿ, ಕಡಿಮೆ ಧೂಳು, ಮತ್ತು ಲಿಪ್ಟ್ ವೇಗ ನಮ್ಮ ಮನಸ್ಸಿನಲ್ಲಿ ಒಂದು ಮುದ ಭಾವ ನೀಡುತ್ತದೆ. æ. Faith is believing in something, even when common sense tells you not to ಎಂಬ ಮಾತಿದೆ. ಈ ಮನೋಭಾವ ಸೀರೆ ಅಂಗಡಿಯಲ್ಲಿ, ಲಿಫ್ಟಿನಲ್ಲಿ ಮತ್ತು ಸಂಸ್ಥೆಯ ಬಡ್ತಿಯಲ್ಲಿ ಅಡಕವಾಗಿರುತ್ತವೆ. ಆ ಕ್ಷಣಕ್ಕೆ ಮುದ ನೀಡುವುದು ಬಹಳ ಮುಖ್ಯ.

ಪತ್ರಿಕೋದ್ಯಮ ಎಲ್ಲಿಗೆ ಬಂತು?

ನಾನು ಫಿಲಂಫೇರ್, ಫೆಮಿನಾ, ಕಾಸ್ಮೋಪಾಲಿಟನ್, ವೆನಿಟಿ ಫಾರ್, ಫ್ಯಾಷನ್, ಜಿಕ್ಯು ಮುಂತಾದ -ಸಿಯೋನ್ ಮ್ಯಾಗಜಿನ್ ಗಳನ್ನು ಆಗಾಗ ತಿರುವಿ ಹಾಕುತ್ತೇನೆ. ಇಂಥ ಮ್ಯಾಗಜಿನ್‌ಗಳ ಪುಟ ತಿರುವುದೆಂದರೆ, ಟಿವಿ ನೋಡಿದ ಹಾಗೆ. ಆ ಪತ್ರಿಕೆಗಳಲ್ಲಿ ಓದಲೇ ಬೇಕಾದಂಥ ಯಾವುದೇ ಗಂಭೀರ ಲೇಖನಗಳಿರುವುದಿಲ್ಲ. ಚಿತ್ರ ತಾರೆಯರ, ರೂಪದರ್ಶಿಗಳ ಫೋಟೋಗಳನ್ನು ನೋಡಬಹುದಷ್ಟೆ. ಅವರು ಯಾವ ಚಪ್ಪಲಿ, ಕನ್ನಡಕ ಧರಿಸುತ್ತಾರೆ, ಬಟ್ಟೆ ತೊಡುತ್ತಾರೆ, ಅವುಗಳನ್ನು ಹೊಲಿದವರು ಯಾರು, ಅವರ ಬ್ಯಾಗಿನ ಬ್ರಾಂಡ್ ಯಾವುದು, ಅವರಿಗೆ ಯಾವ ಬ್ರಾಂಡಿನ ವಾಚ್ ಇಷ್ಟ… ಈ ಮಾದರಿಯ ಲೇಖನಗಳಿರು ತ್ತವೆ.

ಇತ್ತೀಚೆಗೆ ನಾನು ಇಂಥ ಮ್ಯಾಗಜಿನ್‌ನಲ್ಲಿ ಪ್ರಕಟವಾದ ಭಾರತದ ಟಾಪ್ ಮಾಡೆಲ್‌ಗಳ ಪೈಕಿ ಒಬ್ಬಳಾದ ನೋಯೋನಿಕಾ ಚಟರ್ಜಿ ಸಂದರ್ಶನವನ್ನು ಓದುತ್ತಿದ್ದೆ. ಬಿಡುವಿನ ಸಮಯದಲ್ಲಿ ಅಥವಾ ಮಾಡಲು ಬೇರೆ ಯಾವುದೇ ಉಪಯುಕ್ತ ಕೆಲಸ ಇಲ್ಲದಾಗ ಇಂಥ ಸಂದರ್ಶನವನ್ನು ಓದಬಹುದು.
ನನಗೆ ನೋಯೋನಿಕಾ ಯಾವ ಉತ್ತರ ಕೊಟ್ಟಳು ಎಂಬುದಕ್ಕಿಂತ, ಆಕೆಯನ್ನು ಸಂದರ್ಶಿಸಿದ ಪತ್ರಕರ್ತೆ ಯಾವ ಪ್ರಶ್ನೆಗಳನ್ನು ಕೇಳಿದಳು ಎಂಬ ಬಗ್ಗೆ ಅಷ್ಟೇ ಆಸಕ್ತಿಯಿತ್ತು. ಹೀಗಾಗಿ ಆಕೆಯ ಪ್ರಶ್ನೆಗಳನ್ನು ಗಮನಿಸಿದೆ. ಕೆಲವು ಪ್ರಶ್ನೆಗಳನ್ನು ಗಮನಿಸಿ.

? ನೀವು ಮಲಗುವಾಗ ಯಾವ ಕಾಸ್ಟ್ಯೂಮ್ ಧರಿಸುತ್ತೀರಿ

?  ಅವುಗಳನ್ನು ಡಿಸೈನ್ ಮಾಡಿದವರು ಯಾರು?
? ಮಲಗುವಾಗ ಯಾವ ವಾಚ್ ಧರಿಸುತ್ತೀರಾ?
? ಮಧ್ಯರಾತ್ರಿ ಎಚ್ಚರವಾದರೆ ಏನು ಮಾಡುತ್ತೀರಿ?
? ನೀವು ಮಲಗುವಾಗ ಯಾರಿಗೆ ಗುಡ್ ನೈಟ್ ಮೆಸೇಜನ್ನು
ಕಳಿಸುತ್ತೀರಿ?
? ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಕಣ್ಣ ಮುಂದೆ ಬಾಯ್ ಫ್ರೆಂಡ್ ಬರ್ತಾರಾ? ಇಲ್ಲ ದೇವರು ಬರ್ತಾರಾ?
? ಬೆತ್ತಲೆಯಾಗಿ ಸ್ನಾನ ಮಾಡುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
? ನೀವು ವಿದೇಶಗಳಿಗೆ ಪ್ರವಾಸ ಹೋದರೆ, ನಿಮ್ಮ ಜತೆ ಯಾರು ಇರಬೇಕೆಂದು ಅಪೇಕ್ಷಿಸುತ್ತೀರಿ?
? ಸುಂದರ ಅಪರಿಚಿತ ಯುವಕನೊಬ್ಬ ತನ್ನ ಜತೆ ರೂಮ್ ಶೇರ್ ಮಾಡಿಕೊಳ್ಳುತ್ತೀರಾ ಅಂತ ಕೇಳಿದ್ರೆ ಏನು ಹೇಳ್ತೀರಾ?
? ನಿಮಗೆ ಮೇಕಪ್ ಮಾಡಿಕೊಳ್ಳಲು ಎಷ್ಟು ಸಮಯ ಬೇಕು?
? ನೀವು ಬೆಡ್ ಶೀಟನ್ನು ಎಷ್ಟು ದಿನಕ್ಕೊಮ್ಮೆ ಬದಲಿಸುತ್ತೀರಿ?
? ನಿಮ್ಮ ದೃಷ್ಟಿಯಲ್ಲಿ ಹಾಸಿಗೆ ಅಂದರೆ ಏನು?
? ಪ್ರೀತಿ ಮತ್ತು ಸೆಕ್ಸ್ ಒಂದೇ ಅಂದ್ರೆ ನೀವು ಇಲ್ಲ ಅಂತೀರಾ?
? ನಿಮಗೆ ಇಷ್ಟವಾದ ಹುಡುಗ ನಿಮ್ಮತ್ತ ನೋಡದಿದ್ದರೆ ನಿಮಗೇನು ಅನಿಸುತ್ತದೆ?

ಇದನ್ನು ಓದಿದ ಬಳಿಕ ಈ ಪ್ರಶ್ನೆಗಳನ್ನು ಕೇಳಿದ ಆ ಪತ್ರಕರ್ತೆ ಯನ್ನು ದೂರದಿಂದ ಒಮ್ಮೆಯಾದರೂ ನೋಡಬೇಕು ಎಂದೆನಿಸಿತು. ಇವರೆಲ್ಲ ಯಾವ ಜರ್ನಲಿಸಂ ಸ್ಕೂಲಿನಿಂದ ಹೊರಬಂದಿದ್ದಾರೆ ಅಥವಾ ಭಗವಂತನೇನಾದರೂ ಮೇಲಿಂದ ತಳ್ಳಿ ಕಳಿಸಿದ್ದನಾ, ಗೊತ್ತಿಲ್ಲ. ಪತ್ರಿಕೋದ್ಯಮ ಎಲ್ಲಿಗೆ ಬಂತು?

ಕೊರಿಯನ್ ಮನೆಯಲ್ಲಿ ಕಂಡಿದ್ದು

ನಾನು ವಾಸಿಸುವ ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ದಕ್ಷಿಣ ಕೊರಿಯಾ ಮೂಲದ ದಂಪತಿ ದೊಡ್ಡ (ಬಾಡಿಗೆ) ಮನೆಯೊಂದರಲ್ಲಿ ವಾಸವಾಗಿದ್ದಾರೆ.

ಅವರು ಸಿಯೋಲ್ ಮೂಲದ ಖಾಸಗಿ ಕಂಪನಿಯೊಂದರ ಬೆಂಗಳೂರು ಶಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಇತ್ತೀಚೆಗೆ ನಾನು ಅವರ ಮನೆಗೆ ಹೋದಾಗ, ನಮ್ಮ ಮತ್ತು ಅವರ ಸಂಸ್ಕೃತಿ, ಸಂಪ್ರದಾಯಗಳಿಗೆ ಕೆಲವು ಸಾಮ್ಯವಿರುವುದು ಅರಿವಿಗೆ ಬಂತು. ಅಷ್ಟು ದೊಡ್ಡ ಮನೆಯಿದ್ದರೂ ಅವರ ಮನೆಯಲ್ಲಿ ಹೆಚ್ಚು ಫರ್ನಿಚರುಗಳು ಇರಲಿಲ್ಲ. ಅಲ್ಲಲ್ಲಿ ಚಾಪೆ, ದಿಂಬು, ಜಮಖಾನ, ಗಾಶಿಗಳನ್ನು ಹಾಸಿದ್ದರು.

‘ನಾವು ಫರ್ನಿಚರ್‌ಗಿಂತ ನೆಲದ ಮೇಲೆ ಕುಳಿತುಕೊಳ್ಳುವುದನ್ನು ಇಷ್ಟಪಡುತ್ತೇವೆ’ ಎಂದು ನನ್ನ ಪರಿಚಿತರ ಪತ್ನಿ ಹೇಳಿದಳು. ‘ನೆಲದ ಮೇಲೆ ಕುಳಿತು ಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡರೆ ಎಲ್ಲಿ ಬೇಕಾದರೂ ಕುಳಿತುಕೊಳಬಹುದು’ ಎಂದು ಹೇಳಿ ನಕ್ಕರು. ಅಲ್ಲಿದ್ದ ಮುಕ್ಕಾಲು ಗಂಟೆ ಅವಧಿಯಲ್ಲಿ ಅವರು ಹೇಳಿದ ಕೆಲವು ಸಂಗತಿಗಳನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ…

? ಮನೆಯಲ್ಲಿದ್ದಾಗ ಚಪ್ಪಲಿಯನ್ನು ಧರಿಸಬಾರದು. ಬೇರೆಯ ವರ ಮನೆಗೆ ಹೋದಾಗಲೂ ಚಪ್ಪಲಿ ಧರಿಸಿ ಒಳಗೆ ಹೋಗಬಾರದು. ನಮ್ಮ ಚಪ್ಪಲಿ ಎಷ್ಟೇ ಸ್ವಚ್ಛವಾಗಿದ್ದರೂ, ಹೊರಗಿನ ನೆಲ ಗಲೀಜಾಗಿರುತ್ತದೆ. ನಮ್ಮ ಕಾಲನ್ನು ಸ್ವಚ್ಛವಾಗಿಟ್ಟುಕೊಳ್ಳಲು, ನಮ್ಮ ಮನೆಯನ್ನು ಕೊಳೆ ಮಾಡಿಕೊಳ್ಳಬಾರದು.
? ಮನೆಯಲ್ಲಿ ಎಷ್ಟು ಕಡಿಮೆ ಸಾಮಾನು ಇರುತ್ತದೋ, ಅಷ್ಟು ಹೆಚ್ಚು ಸ್ವಾತಂತ್ರ್ಯವನ್ನು ಅನುಭವಿಸುತ್ತೀರಿ. ಮನೆಯಲ್ಲಿ ಹೆಚ್ಚು ಸಾಮಾನುಗಳು ತುಂಬಿಕೊಂಡರೆ, ಅವು ನಿಮ್ಮ ಚಲನೆಯ ಮೇಲೆ ಕಡಿವಾಣ ಹೇರುತ್ತವೆ. ಮನೆಯಲ್ಲಿ ಪೀಠೋಪಕರಣ ಗಳಿಲ್ಲದೇ ಬದುಕಬಹುದು. ನಾವು ಮನೆಗೆ ಬರುವ ಅತಿಥಿ ಗಳಿಗಾಗಿ ಫರ್ನಿಚರ್ ಇಟ್ಟಿದ್ದೇವೆ. ನಾವು ಫರ್ನಿಚರ್ ಬಳಸುವುದಿಲ್ಲ.

? ಮನೆಯ ಕಿಟಕಿಗಳನ್ನು ಯಾವತ್ತೂ ತೆರೆದಿಡಬೇಕು. ಯಾವತ್ತೂ ತಾಜಾ ಗಾಳಿ ಮನೆಯೊಳಗೇ ಬರುತ್ತಿರಬೇಕು. ಹೊರಗಿನ ಗಾಳಿ ಮನೆಯೊಳಗೆ ಬರುವಾಗ ತಾಜಾತನವನ್ನು ತರುತ್ತದೆ.

? ಯಾವತ್ತೂ ಮನೆಯಲ್ಲಿ ಒಂದು ಪಾತ್ರೆಯಲ್ಲಿ ಹೂವಿನ ಪಕಳೆ ಗಳನ್ನು ಹಾಕಿಡಬೇಕು ಅಥವಾ ತಾಜಾ ಹೂವನ್ನು ಹೂಜಿಯಲ್ಲಿ ಇಟ್ಟಿರಬೇಕು. ಮನೆಯಲ್ಲಿಟ್ಟ ಹೂವು ಯಾವತ್ತೂ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ.

? ಪ್ರತಿ ಗೋಡೆಯನ್ನು ಬೋಳಾಗಿ ಬಿಡಬಾರದು. ಒಂದು ಗೋಡೆಗೆ ಅರ್ಥ ಬರಬೇಕೆಂದರೆ, ಅದಕ್ಕೊಂದು ಪೇಂಟಿಂಗ್ ನೇತು ಹಾಕಬೇಕು. ಸಾಧ್ಯವಾದಷ್ಟು ನಿಸರ್ಗದ ಫೋಟೋಗಳು ಮನೆಯಲ್ಲಿ ಶಾಂತತೆಯನ್ನು ತನ್ನಷ್ಟಕ್ಕೆ ಮೂಡಿಸುತ್ತದೆ.

? ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಮರದಿಂದ ಮಾಡಿದ ಸಾಮಾನುಗಳನ್ನು ಬಳಸಬೇಕು.

? ಮನೆಯಲ್ಲಿರುವ ಎಲ್ಲರಿಗೂ ಟೀ, ಕಾಫಿ ಮಾಡುವುದನ್ನು ಕಲಿಸಬೇಕು. ಮನೆಯಲ್ಲಿ ಅಮ್ಮ ಇಲ್ಲದಿದ್ದರೂ ಅಡುಗೆ ಮಾಡುವುದನ್ನು ಗಂಡಸರು ಕಲಿತಿರಬೇಕು.

? ಮನೆ ಎಷ್ಟೇ ಸ್ವಚ್ಛವಾಗಿದ್ದರೂ ಧೂಳಿನ ಕಣಗಳು ಬಂದು ಕುಳಿತು ಕೊಳ್ಳುತ್ತವೆ. ಪ್ರತಿದಿನವೂ ಮನೆಯನ್ನು ಸ್ವಚ್ಛ ಗೊಳಿಸಲೇಬೇಕು. ಹೆಚ್ಚು ಕೊಳೆಯಾಗುವುದು ಮನೆಯಲ್ಲಿರುವ ಬಾತ್ ರೂಮ. ಅದನ್ನು ನಿತ್ಯವೂ ಕ್ಲೀನ್ ಮಾಡಬೇಕು.

? ಮನೆಯಲ್ಲಿ ನಾಯಿ, ಬೆಕ್ಕು ಸಾಕುವುದು ಒಳ್ಳೆಯದೇ. ಆದರೆ ಅವುಗಳಿಗೆ ಸಮಯ ಕೊಡಬೇಕು. ಹೇಗಿದ್ದರೂ ಬಿದ್ದಿರುತ್ತವೆ ಎಂದು ಭಾವಿಸಿದರೆ ಅವುಗಳನ್ನು ಸಾಕಬಾರದು.

? ಒಮ್ಮೆ ಮನೆಯಿಂದ ಹೊರಗೆ ಹಾಕಿಕೊಂಡು ಬಂದ ಶರ್ಟು, ಪ್ಯಾಂಟನ್ನು ಮತ್ತೊಮ್ಮೆ ಧರಿಸಬಾರದು. ಹೊರಗಿನ ಧೂಳುಗಳು ನಮ್ಮ ಬಟ್ಟೆಯ ಮೇಲೆ ಬಿದ್ದಿರುತ್ತವೆ. ಮೇಲ್ನೋಟಕ್ಕೆ ಸ್ವಚ್ಛವಾಗಿದ್ದರೂ ಅವು ನಮ್ಮ ಬೆವರಿನಿಂದ ಮಲಿನವಾಗಿರುತ್ತವೆ. ನಮ್ಮ ಬೆವರೂ ಸಹ್ಯವಲ್ಲ. ನಾನು ಆ ದಂಪತಿಯ ಮಾತುಗಳನ್ನು ಧ್ಯಾನಾಸಕ್ತನಾಗಿ ಕೇಳುತ್ತಿದ್ದೆ. ಅವರ ಮಾತುಗಳು, ಮನೆಯ ವಾತಾವರಣ ಇಷ್ಟವಾದವು.