ಹಂಪಿ ಎಕ್ಸ್’ಪ್ರೆಸ್
1336hampiexpress1509@gmail.com
ರಾಜ್ಯ ಬಿಜೆಪಿಯವರಿಗೆ ಸ್ವಚ್ಛ -ಸತ್ಯ ರಾಜಕಾರಣದ ಬಗೆಗಿನ ದೃಷ್ಟಿಕೋನ, ಸಂಘಪರಿವಾರದ ರಾಷ್ಟ್ರೀಯತೆಯ ಸಿದ್ಧಾಂತ ಮೇಲೆ ಗೌರವವಿದ್ದರೆ ಇರುವ ಇಂದಿನ ರಾಜಕಾರಣದ ದುರಂಹಕಾರಿಗಳನ್ನು, ನೀಚರನ್ನು, ಕೆಟ್ಟ ಹಿನ್ನೆಲೆ ಇರುವವರನ್ನು, ಭ್ರಷ್ಟರನ್ನು ತಿಪ್ಪೆಗೆಸೆದು ‘ಸ್ವಚ್ಛ ಬಿಜೆಪಿ’ ಅಭಿಯಾನ ಆರಂಭಿಸಲಿ.
ದಶಕದ ಹಿಂದೆ ಕನ್ನಡದ ಖ್ಯಾತ ಕವಿಯೊಬ್ಬರು ಬೆಂಗಳೂರಿನ ಬಡಾವಣೆ ಯೊಂದರಲ್ಲಿ ನಿವೇಶನ ಖರೀದಿಸಿದರು. ಗೂಂಡಾ ಗಳ ಒಂದು ತಂಡ ರಾತ್ರೋರಾತ್ರಿ ಆ ನಿವೇಶನಕ್ಕೆ ಕಾಂಪೌಂಡ್ ಕಟ್ಟಿ ಶೆಡ್ ನಿರ್ಮಿಸಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಕಬ್ಜ ಮಾಡಿಕೊಂಡುಬಿಟ್ಟರು. ಇದರಿಂದ ಆಘಾತ ಗೊಂಡ ಕವಿಗಳು, ಸ್ಥಳೀಯ ಶಾಸಕನಿಗೆ ವಿಷಯ ತಿಳಿಸಿ ಜಾಗ ಉಳಿಸಿ ಕೊಡಲು ಮೊರೆ ಇಟ್ಟರು. ಆ ಶಾಸಕ ಅದೆಷ್ಟು ವ್ಯವಸ್ಥಿತವಾಗಿ ನಾಟಕ ಮಾಡಿದನೆಂದರೆ, ಕೊನೆಗೆ ಅನಿವಾರ್ಯವಾಗಿ ಕವಿಗಳ ಕುಟುಂಬ ಕಾನೂನಾ ತ್ಮಕ ಹೋರಾಟಕ್ಕೆ ತೊಡಗಿತು.
ಕವಿಗಳ ಒಬ್ಬ ಮಗ ವಿದೇಶದಿಂದ ಕರೆ ಮಾಡಿ ‘ಅಪ್ಪಾಜೀ ಅದರ ಆಸೆ ಬಿಟ್ಟುಬಿಡಿ, ದುಷ್ಟರ ತಂಟೆಗೆ ಹೋಗುವುದು ಬೇಡ’ ಎಂದರು. ಮತ್ತೊಬ್ಬ ಮಗನೂ ಇಂಥ ದುಷ್ಟರ ಸಹವಾಸ ಬೇಡ ಎಂದು ತಂದೆಗೆ ಹೇಳಿ, ಒಟ್ಟಾರೆ ಮನೆಯ ಎಲ್ಲರೂ ಆ ಜಾಗದ ಆಸೆಯನ್ನೇ ಬಿಟ್ಟುಬಿಟ್ಟರು. ಕೊನೆಗೆ ತಿಳಿದ ವಿಚಾರವೆಂದರೆ ಆ ಖ್ಯಾತ ಕವಿಯ ಜಾತಿಯವರೇ ಆದ ಆ ಶಾಸಕ ನರಿಬುದ್ಧಿ ತೋರಿಸಿದ್ದ, ಜಾಗವನ್ನು ಆಕ್ರಮಿಸಿಕೊಂಡಿದ್ದ ಗೂಂಡಾಗಳಲ್ಲಿ ಮುಸಲ್ಮಾನರೇ ಪ್ರಮುಖರಾಗಿದ್ದರು. ಮತ್ತು ಅವರಿಗೆ ಈ ಶಾಸಕ ಪರೋಕ್ಷವಾಗಿ ಬೆಂಬಲವಾಗಿ ನಿಂತಿದ್ದ. ಜಾಗ ಕಳೆದುಕೊಂಡ ಕವಿಗಳ ಮನೆಯ ನೆಮ್ಮದಿ ಹಾಳಾಗಿ ಕೊರಗು ವಂತಾಗುತ್ತದೆ.
ಆದರೆ, ‘ನೀನೊಲಿದರೆ ಕೊರಡು ಕೊನರುವುದಯ್ಯ…’ ಎಂಬಂತೆ ಮುಂದೆ ನಡೆದದ್ದೇ ಬೇರೆ. ಕವಿಗಳು ತಮ್ಮ ಮನೆಯಲ್ಲಿ ಉನ್ನತ ಮಟ್ಟದ ಶಿಕ್ಷಣದ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದರು. ಅಂಥ ವಿದ್ಯಾರ್ಥಿಗಳ ಪೈಕಿ ಒಬ್ಬ ವಿದ್ಯಾರ್ಥಿನಿ ಅಂದಿನ ಬೆಂಗಳೂರು ಪೊಲೀಸ್ ಕಮೀಷನರ್ ಅವರ ಪುತ್ರಿ. ಅದೊಂದು ದಿನ ಕಮೀಷನರ್ ಪತ್ನಿಯ ಬಳಿ ಆ ಕವಿಯ ಶ್ರೀಮತಿ ಯವರು ಇಂಥ ದುಃಸ್ಥಿತಿಯನ್ನು ಹೇಳಿಕೊಂಡು ಕಣ್ಣೀರಿಟ್ಟರು. ಮಾರನೇ ದಿನ ರಾಜಕೀಯ ಗೂಂಡಾಗಳು ಆಕ್ರಮಿಸಿಕೊಂಡಿದ್ದ ಕವಿಗಳ ಜಾಗದ ಮುಂದೆ ಪೊಲೀಸ್ ಬೆಟಾಲಿಯನ್ ಬಂದು ನಿಂತಿತ್ತು.
ಅಷ್ಟೇ, ಗೂಂಡಾಗಳಿಗೆ ಲಾಟಿ ರುಚಿ ತೋರಿಸಿ, ಜಾಗವನ್ನು ಕವಿಗಳ ಸುಪರ್ದಿಗೆ ಕೊಡಿಸಲಾಯಿತು. ಕವಿಗಳ ಶ್ರೀಮತಿ ಇಂದಿಗೂ ‘ನಮ್ಮದೇ ಜಾತಿಯವನಾಗಿ ನಮಗೇ ದ್ರೋಹ ಬಗೆದ ಪಾಪಿ, ಅವನ ಇನ್ನೊಂದು ಮುಖ ನೋಡಿದೆವು, ದೊಡ್ಡ
ಗೂಂಡಾ ಅವನು’ ಎಂದು ಶಾಸಕನಿಗೆ ಶಪಿಸಿಸುತ್ತಾರೆ. ಈಗ ಹೇಳಿ ಇಂಥ ನೀಚ ಶಾಸಕ ಅಥವಾ ರಾಜಕಾರಣಿ ಯಾವ ರೌಡಿಶೀಟರ್‌ಗೆ ಕಡಿಮೆ? ಬೆಂಗಳೂರು ನಗರದ ಪ್ರಥಮ ಪ್ರಜೆ ಎಂಬ ಅತ್ಯುನ್ನತ ಪದವಿಯನ್ನು ಅಲಂಕರಿಸಿದ್ದ ಗೂಂಡಾ ನೊಬ್ಬ ದಲಿತ ಶಾಸಕನ ಮನೆಗೆ ಮತ್ತು ಪೊಲೀಸ್ ಠಾಣೆಗೆ ಬೆಂಕಿಯಿಟ್ಟು ಗಲಭೆಗೆ ಕಾರಣ ನಾದ ಆರೋಪದ ಮೇಲೆ ಜೈಲುಸೇರಿದ್ದಾನೆ.
ಈತ ರಾಜಕಾರಣಿಯಾಗಿ ಜನರಿಂದ ಚುನಾಯಿತನಾಗಿದ್ದಲ್ಲದೇ ಈಗ ಶಾಸಕನಾಗಲೂ ತಯಾರಿ ನಡೆಸಿದ್ದಾನೆ. ಈಗ ಹೇಳಿ ಇಂಥ ಪುಢಾರಿಗಳು ಯಾವ ರೌಡಿಶೀಟರ್‌ಗೂ ಕಡಿಮೆಯಿಲ್ಲ, ಅಲ್ಲವೇ? ಜೈಲುವಾಸ ಅನುಭವಿಸಿ ಬಂದ ನಾಯಕನಿಗೆ ಕೇವಲ ಸ್ವಜಾತಿಯ ಮಮತೆಯಿಂದಾಗಿ ಹೆಣಬಾರದ ಸೇಬಿನ ಹಾರ ಹಾಕಿ ಮೆರವಣಿಗೆ ಮಾಡಿಕೊಂಡು ಬರುವ ದುರ್ಗತಿ ಇದೆಯಲ್ಲ, ಅದು ಯಾವುದೇ ರೌಡಿಶೀಟರ್ ನನ್ನೂ ಮೀರುಸುವಂಥದ್ದು. ಇಂದಿನ ರಾಜಕಾರಣದ ಬಹುತೇಕ ಪುಢಾರಿಗಳು ಸಮಾಜ ಸೇವೆಯ ಜ್ಞಾನೋದಯವಾಗಿ ಅಥವಾ ಪಂಚಾಂಗ ಹಿಡಿದು ರಾಜಕಾರಣಕ್ಕೆ ಬಂದವರಲ್ಲ. ಮೇಲ್ನೋಟಕ್ಕೆ ಅಯ್ಯ, ಅಪ್ಪಾ, ಅಣ್ಣ ಎಂದು ಜನರನ್ನು ಮೋಡಿ ಮಾಡುತ್ತಾರೆ. ಆದರೆ ಅವರೊಳಗೆ ಖತರ್ನಾಕ್ ರೌಡಿಯೊಬ್ಬ ಇದ್ದೇ ಇರುತ್ತಾನೆ.
ಇಂಥವರ ‘ಆಫ್ ದ ರೆಕಾರ್ಡುಗಳು’ ರೌಡಿಶೀಟರ್‌ಗೂ ಅಪಾಯಕಾರಿ. ‘ನಾನೇನು ಸಂನ್ಯಾಸಿಯಾಗಿ ರಾಜಕೀಯಕ್ಕೆ ಬಂದವನಲ್ಲ, ಯಾರ್ಯಾರನ್ನ ಹೇಗೆ ಡೀಲ್ ಮಾಡ್ಬೇಕು ಅಂತ ಚೆನ್ನಾಗಿ ಗೊತ್ತಿದೆ, ಎಲ್ಲದಕ್ಕೂ ರೆಡಿಯಾಗೇ ರಾಜಕೀಯಕ್ಕೆ ಬಂದವ್ನು ನಾನು ಹುಷಾರ್!’ ಎಂಬ ಧಮಕಿ ಪ್ರತೀ ರಾಜಕಾರಣಿಯ ಅಂತರಂಗಲ್ಲಿರುತ್ತೆ. ಅಂಥ ರೌಡಿಯ ದರ್ಶನವಾಗುವುದು
ಹೆಚ್ಚಾಗಿ ಚುನಾವಣಾ ಸಮಯದಲ್ಲಿ ಅಥವಾ ತನಗೆ ಯಾರಾದರು ಬಲಿಷ್ಠ ವ್ಯಕ್ತಿ ತಿರುಗಿಬಿದ್ದಾಗ.
ಯೋಚಿಸಿನೋಡಿ, ಇಂದು ಅನೇಕ ಪೊಲೀಸ್ ಅಽಕಾರಿಗಳೇ ಒಬ್ಬ ರಾಜಕಾರಣಿಯನ್ನು ಎದುರುಹಾಕಿಕೊಳ್ಳಲು ಹಿಂಜರಿ ಯತ್ತಾರೆಂದರೆ ಆ ಪುಢಾರಿಗಳೊಳಗಿರುವ ರೌಡಿತನ ದಿಂದಾಗಿ. ಪೊಲೀಸ್ ಅಧಿಕಾರಿಯಾದ ಗಣಪತಿ, ಡಿ.ಕೆ.ರವಿಯಂಥ ದಕ್ಷ ಐಎಎಸ್ ಅಧಿಕಾರಿಗಳು ಅಸಹಜವಾಗಿ ಅಕಾಲಿಕವಾಗಿ ಸಾವು ಕಾಣುತ್ತಾರೆಂದರೆ ಅದಕ್ಕಿರುವ ಕಾರಣಗಳಲ್ಲಿ ಪರೋಕ್ಷವಾಗಿ ‘ರೌಡಿತನದ’ ಕಾರಣವೂ ಇರುತ್ತದೆಂಬು ದನ್ನು ಕವಡೆ ಹಾಕಿನೋಡಬೇಕಿಲ್ಲ.
ಹಾಗೆಯೇ ಕೆಲ ಪತ್ರಿಕೆಗಳು, ಸುದ್ದಿ ವಾಹಿನಿಗಳು ಕೆಲ ರಾಜಕಾರಣಿಗಳ ತಂಟೆಗೆ ಹೋಗುವುದಿಲ್ಲವೆಂದರೆ ಅದಕ್ಕೆ ಹೆಚ್ಚಾಗಿ ಆ
ರಾಜಕಾರಣಿಯೊಳಗಿರುವ ಕಿರಾತಕತನವೆಂದರೆ ಸುಳ್ಳಲ್ಲ. ಸಬ್ಯಸ್ಥರು, ಸಂಭಾವಿತರು, ಸುಶಿಕ್ಷಿತರ ಬಾಯಲ್ಲಿ ‘ಅಯ್ಯೋ ಆ ದೊಡ್ಡ ಮನುಷ್ಯನ ತಂಟೆಗೆ ಹೋಗುವುದಿಲ್ಲಪ್ಪ, ಆತ ಸರಿ ಇಲ್ಲ, ಆಮೇಲೆ ಅಷ್ಟೇ! ನಮ್ಮ ಗತಿ’ ಎಂಬ ಅಭಿಪ್ರಾಯ ಹೊರ ಬರುತ್ತದೆಂದರೆ ಅದಕ್ಕೆ ಕಾರಣ ಆ ರಾಜಕಾರಣಿಯ ಒಳಗಿರುವ ಅಘೋಷಿತ ‘ರೌಡಿಶೀಟರ್’. ನಮ್ಮ ಮನೆಯ ಬಾಗಿಲಿಗೆ ಬಂದು ಮತಭಿಕ್ಷೆ ಬೇಡಿದ್ದ ರಾಜಕಾರಣಿಯನ್ನು ಮತದಾರರು ಧೈರ್ಯವಾಗಿ ಪ್ರಶ್ನಿಸುವುದಕ್ಕೆ ಹೆದರುತ್ತಾರೆಂದರೆ, ಅದಕ್ಕೂ ಕಾರಣ ಅದೇ ರೌಡಿಯಿಸಂನ ಮತ್ತೊಂದು ಮುಖ.
ಕರ್ನಾಟಕದಲ್ಲಿ ಇಂಥ ‘ಕಂತ್ರಿ’ ರಾಜಕಾರಣಿಗಳ ಮುಖವಾಡಕ್ಕೆ ಆಗಾಗ ಬೆಂಕಿ ತಾಕಿಸುತ್ತಿದ್ದವರೆಂದರೆ ರಾಜಕೀಯ ವಿಡಂಬನೆಯ ಮಾಸ್ಟರ್ ಹಿರಣ್ಣಯ್ಯ ನವರು. ಇವರು ತಮ್ಮ ನಾಟಕ ವೃತ್ತಿಯಲ್ಲಿ ಪ್ರಸಿದ್ಧಿ ಪಡೆದಿದ್ದೇ ರಾಜಕಾರಣಿಗಳಿಗೆ ಉಗಿದೇ. ಇಂಥ ಮಹಾಕಲಾವಿದರು ಒಬ್ಬ ರಾಜಕಾರಣಿಯ ವಿರುದ್ಧ ಮಾತನಾಡಿದ್ದಕ್ಕೆ ಆತನ ಜಾತಿಭಂಟರು ಹಿರಣ್ಣಯ್ಯ ನವರನ್ನು ಬೆದರಿಸಿ ಕೊನೆಗೆ ಕ್ಷಮೆ ಕೇಳುವಂತೆ ಮಾಡುವಷ್ಟು ಇಂದಿನ ಪುಢಾರಿಗಳು ರೌಡಿತನ ಪ್ರಭಾವಳಿಯನ್ನು ಕಟ್ಟಿಕೊಂಡಿದ್ದಾರೆ.
ಇತ್ತೀಚೆಗೆ ಇಂಥ ಪುಢಾರಿಗಳಿಗೆ ಸ್ವಜಾತಿಪೀಡಿತರ ‘ನೈತಿಕ’ ಬೆಂಬಲವೂ ಸಿಕ್ಕುಬಿಡುತ್ತಿದೆ. ಇಂದಿನ ಯಾವುದೇ ರಾಜಕಾರಣಿಯ ನೀಚತನದ ವಿರುದ್ಧ ಮಾತನಾಡಿದರೆ ಆ ನಾಯಕನಿಗಿಂತ ಮೊದಲು ಪ್ರತಿಕ್ರಿಯಿಸುವುದು ಆತನ ಚೇಲಾಗಳು. ಹೀಗಾಗಿ ಇಂದು ಯಾವುದೇ ರಾಜಕೀಯ ನಾಯಕನ ವಿರುದ್ಧ ಮಾತನಾಡಿದರೆ ಅವರ ‘ದುಷ್ಟರೂಪ’
ಅನುಭೂತಿಯಾಗುವುದೇ ಹೆಚ್ಚು. ಮಾಸ್ಟರ್ ಹಿರಣ್ಣಯ್ಯನವರನ್ನು ಅನುಸರಿಸಿದ ಉಪೇಂದ್ರ, ‘ಆಪರೇಷನ್ ಅಂತ’ ಚಿತ್ರ ಮಾಡಿ ಅದರಲ್ಲಿ ರಾಜ್ಯದ ಮತ್ತು ರಾಷ್ಟ್ರದ ರಾಜಕಾರಣಿಗಳ ಪಾತ್ರಗಳನ್ನು ಸೃಷ್ಟಿಸಿ ಅವರಂತೆಯೇ ಕಾಣುವಂಥ ಡ್ಯೂಪ್ ಕಲಾವಿದರನ್ನು ಬಳಸಿದ್ದಲ್ಲದೇ ಮಠಾಧೀಶರ ನಿಲುವಂಗಿಯೊಳಗೆ ಹಣದ ಸೂಟ್ ಕೇಸನ್ನು ಮುಚ್ಚಿಡುವುದರಿಂದ ಹಿಡಿದು ಖಾಕಿ, ಖಾದಿ, ಕಾವಿಗಳ ಭ್ರಷ್ಟತನವನ್ನೂ ತೋರಿಸಿ ಸತ್ಯಕ್ಕೆ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿದ್ದರು.
ಆದರೆ ಅದನ್ನು ಸಹಿಸಲಾಗದ ಅಂದಿನ ರಾಜಕಾರಣಿಗಳ ಅದೇ ‘ರೌಡಿ’ ಮನಃಸ್ಥಿತಿಯಿಂದಾಗಿ ಆ ಚಿತ್ರದ ಬಿಡುಗಡೆಗೆ ಅನೇಕ ವಿಘ್ನಗಳಾಗಿದ್ದವು. ಶ್ರೀವತ್ಸ ರಂಗನಾಥ್, ಧೀರೇಂದ್ರಗೋಪಾಲ್‌ರಂಥ ನಾಟಕಕಾರರು ಹುಟ್ಟಿಕೊಂಡದ್ದೇ ಈ ‘ರೌಡಿಶೀಟರ್ ರಾಜಕಾರಣಿಗಳ’ ವಿಡಂಬನೆಗಾಗಿ. ಪ್ರಧಾನಿ ಮೋದಿಯವರೇನೋ ತಾನೊಬ್ಬ ‘ಪ್ರಧಾನ ಸೇವಕ’ ಎಂದು ಭಾವಿಸಿ ರಾಜಕಾರಣ ವನ್ನು ಗಂಭೀರ ಹೊಣೆಗಾರಿಕೆಯೆಂದು ಪರಿಗಣಿಸಿದ್ದಾರೆ.
ಆದರೆ ನಮ್ಮ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಮತ ಭಿಕ್ಷೆಯಿಂದಲೇ ರಾಜಕಾರಣಿಯಾಗುವ ಪುಢಾರಿಗಳು ಅದೇ ಪ್ರಜೆಗಳಿಗೆ ಎಳ್ಳಷ್ಟೂ ಹೆದರದೆ, ಕಿಂಚಿತ್ತೂ ಗೌರವಿಸದೆ ತಗ್ಗಿಬಗ್ಗಿ ನಡೆಯದೆ, ಋಣಿಯಾಗದೇ ಗೂಂಡಾಗಳಂತೆ ವರ್ತಿಸುವುದನ್ನು ನೋಡುತ್ತಿದ್ದೇವೆ. ಇಂಥ ರಾಜಕಾರಣಿಯ ಮನೆಗೆ ಮತದಾರ ಅದೆಷ್ಟು ದಯನೀಯನಾಗಿ ಹೋಗಿ ನಿಲ್ಲುತ್ತಾನೆಂದರೆ ಬಿಸ್ಕೆಟ್ ತಿಂದ ನಾಯಿಯಂತೆ ಅಥವಾ ಭಿಕ್ಷೆಗೆ ಬಂದ ತಿರುಕನಂತೆ ನಡೆದುಕೊಳ್ಳುತ್ತಾನೆ. ಅದೇನೋ ಗೌರವವಾಗಿ ಕಂಡು ಬಂದರೂ ಅದರ ಹಿಂದಿನ ಎಚ್ಚರಿಕೆಯೇ ‘ಅಯ್ಯೋ ಈ ನನ್ಮಗ ಏನು ಬೇಕಾದರೂ ಮಾಡಿ ಬಿಡುತ್ತಾನೆ’ ಎಂಬ ಭಯವೇ ಮೊದಲಾಗಿರು ತ್ತದೆ.
‘ಮೂರೂ ಬಿಟ್ಟವರು ಊರಿಗೇ ದೊಡ್ಡವರು’, ‘ಒಬ್ಬ ದುಷ್ಟನ ಕೊನೆಯ ಕ್ಷೇತ್ರ ರಾಜಕೀಯ’ ಎಂಬ ಗಾದೆಮಾತು ಹುಟ್ಟಿ ಕೊಂಡಿದ್ದೇ ಹೀಗೆ !. ಮೊನ್ನೆ, ‘ಎಲ್ಲ ಬಿಟ್ಟು ಭಂಗಿ ನೆಟ್ಟ’ ಎಂಬಂತೆ ಬಿಜೆಪಿಯ ಕೆಲ ನಾಯಕರು ರೌಡಿಶೀಟರ್ ಆಯೋಜಿದ್ದ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ‘ವೃದ್ಧನಾರಿ ಪತಿವ್ರತಾ’ ಎಂಬಂತೆ ಕಾಂಗ್ರೆಸ್ ಟೀಕಿಸಿದೆ. ಇಷ್ಟಕ್ಕೂ ರೌಡಿಶೀಟರ್
ರಾಜಕಾರಣಕ್ಕೆ ಬರಬಾರದು ಎಂಬ ಮಾತನ್ನು ಬಿಜೆಪಿ ಸಕಾರಾತ್ಮಕವಾಗಿ ಚಿಂತಿಸಿ ಸವಾಲಾಗಿ ಸ್ವೀಕರಿಸಬಾರದೇಕೆ? ರೌಡಿಶೀಟರ್‌ಗಳು ಗೆದ್ದು ಬಂದರೆ ಅವನ ಬಾಯಲ್ಲೂ ನಾಳೆ ಅದೇ ಡೈಲಾಗು ‘ನಾನೇನು ಗಾಂಧಿಯಲ್ಲ, ನಾನೂ ಎಲ್ಲ
ನೋಡಿಬಂದ್ದಾವನೇ, ಮೂರೂ ಬಿಟ್ಟವನು ನಾನು.
ಹುಷಾರ್ !’ ರಾಜ್ಯದ ಬಿಜೆಪಿಯವರಿಗೆ ದೇಶದ ಭವಿಷ್ಯಕ್ಕಾಗಿ ಸ್ವಚ್ಛ -ಸತ್ಯ ರಾಜಕಾರಣದ ದೃಷ್ಟಿಕೋನ, ಸಂಘಪರಿವಾರದ ರಾಷ್ಟ್ರೀಯತೆಯ ಸಿದ್ಧಾಂತ ಮೇಲೆ ಗೌರವವಿದ್ದರೆ ಇರುವ ಇಂದಿನ ರಾಜಕಾರಣದ ದುರಂಹಕಾರಿಗಳನ್ನು, ನೀಚರನ್ನು, ಕೆಟ್ಟ ಹಿನ್ನೆಲೆ ಇರುವವರನ್ನು, ಭ್ರಷ್ಟರನ್ನು ತಿಪ್ಪೆಗೆಸೆದು ‘ಸ್ವಚ್ಚ ಬಿಜೆಪಿ’ ಅಭಿಯಾನ ಆರಂಭಿಸಲಿ. ಅದರಿಂದ ಪಕ್ಷದ ಮೌಲ್ಯ ಹೆಚ್ಚುತ್ತದೆ. ವಾಜಪೇಯಿಯವರು, ಆಡ್ವಾಣಿಯವರು ಬಿಜೆಪಿ ಯನ್ನು ಬೆಳೆಸಿದ್ದು ಇದೇ ಸಿದ್ಧಾಂತದಲ್ಲಿ. ಹೀಗಾಗಿ ಅದು ಮೋದಿಯವರವರೆಗೂ ಬೆಳೆದು ಇಂದು ಭಾರತ ವಿಶ್ವಕ್ಕೇ ಗುರುವಾಗಿ ಸಾಗುತ್ತಿದೆ.
ಕಾರ್ಯಾಂಗದ ಸೇವೆಯಲ್ಲಿ ಡಿ ದರ್ಜೆ ನೌಕರನಿಗೂ ಒಂದು ವಿದ್ಯಾರ್ಹತೆ ಯೋಗ್ಯತೆಯ ಮಾನದಂಡವಿರುವಂತೆ ರಾಜಕೀಯಕ್ಕೆ ಸೇರುವ ಅವನ್ಯಾವನೇ ಇರಲಿ, ಅನಕ್ಷರಸ್ಥನೇ ಆಗಿರಲಿಆತನಿಗಿರುವ ತಾರ್ಕಿಕ ಜ್ಞಾನ, ತಾತ್ವಿಕ ಪ್ರಜ್ಞೆ,
ದೇಶದ ಪರಂಪರೆ ಇತಿಹಾಸದ ಪರಿeನ, ಸಾಮಾಜಕ ದೃಷ್ಟಿಕೋನ, ಸಾಮಾಜಿಕ ನ್ಯಾಯ, ಸಂವಿಧಾನದ ಆಶಯ ತಿಳಿವಳಿಕೆ, ಪ್ರಜಾಪ್ರಭುತ್ವದ ಮಹತ್ವ ಅರಿವು ಇವು ಇರಲೇಬೇಕೆಂಬ ಮಾನದಂಡವನ್ನು ರೂಪಿಸಲಿ.
ಟಿಕೆಟ್ ಪಡೆಯ ಬೇಕಾದರೆ ತಾನು ಓದಿದ ಶಾಲೆ, ಕಾಲೇಜು, ವಿಶ್ವವಿದ್ಯಾಲಯ ದಿಂದ ‘ಸಂಭಾವಿತ ವ್ಯಕ್ತಿ’ ಎಂಬ
ಪ್ರಮಾಣ ಪತ್ರದ ಜತೆಗೆ ತಾನು ಬೆಳೆದ ಪ್ರದೇಶದ ಪೊಲೀಸ್ ಠಾಣೆಗಳಿಂದ ‘ಶುದ್ಧ ಚಾರಿತ್ರ್ಯವಂತ’ ಎಂಬ ದೃಢೀಕರಣ ಪತ್ರವನ್ನು ಸಲ್ಲಿಸಲೇಬೇಕೆಂಬ ಕಾನೂನು ಜಾರಿಯಾಗಲಿ.
ಇದೆಲ್ಲಕ್ಕಿಂತ ಮಿಗಿಲಾಗಿ ಟಿಕೆಟ್ ಬಯಸುವ ವ್ಯಕ್ತಿಗೆ ಇಂತಿಷ್ಟು ಕೋಟಿ ಅಂದರೆ, ಗರಿಷ್ಠ ಒಂದು ಅಥವಾ ಐದು ಕೋಟಿಯೊಳಗೆ ಆಸ್ತಿ ಇದ್ದರೆ ಮಾತ್ರ ಆತ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಗುವಂತಾಗಲಿ. ಸಾವಿರಾರು ಕೋಟಿ ಆಸ್ತಿ, ಇಬ್ಬಿಬ್ಬರು ಹೆಂಡತಿ ಯರು, ಸ್ವಜಾತಿಗಳ ಪಲ್ಲಕ್ಕಿ, ದುರಂಹಕಾರದ ಪ್ರಭಾವಳಿ, ನಮ್ಮಪ್ಪ ರಾಜಕಾರಣಿ, ನಮ್ಮ ತಾತ ರಾಜಕಾರಣಿ ಎಂದೆಲ್ಲ ಅರ್ಹತೆಗಳನ್ನು ಕಟ್ಟಿಕೊಂಡು ಪ್ರಜಾಪ್ರಭುತ್ವವನ್ನು ಆಳುವ ತೆವಲು ತೀರಿಸಿಕೊಳ್ಳಲು ನಮ್ಮ ಸಮಾಜವೇನು ಅಮ್ಯೂಸ್ ಮೆಂಟ್ ಪಾರ್ಕ್‌ನ ಮೋಜುತಾಣವೇ? ಇನ್ನೇನು ಬೆಂಗಳೂರು ಪಾಲಿಕೆ ಮತ್ತು ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದೆ.
ಪುಡಿರೌಡಿಗಳು, ‘ವಿಶ್ರಾಂತ’ ರೌಡಿಶೀಟರ್‌ಗಳು, ಪುಢಾರಿಗಳ ‘ಸ್ವಜಾತಿ ಆಯುಧ’ಗಳಾಗಿ ಇದ್ದವರೆಲ್ಲ ವೈಟ್ ಅಂಡ್ ವೈಟ್ ಗೆಟಪ್‌ಗೆ ಬದಲಾಗುತ್ತಿದ್ದಾರೆ. ಮತದಾರರೇ ಎಚ್ಚರ !!